ಅವನು ಜೊತೆಯಾದ ಮೇಲೆ ನಾನು ಬದಲಾಗಿದ್ದೇನೆ...
'ಅವನ' ಮೇಲೆ ಆಸೆ ಶುರುವಾಗಿದ್ದು ಪಿಯೂಸಿಯಲ್ಲಿದ್ದಾಗ. ಅದಕ್ಕೆ ಕಾರಣಳಾದವಳು ಸೀನಿಯರ್ ಆಗಿದ್ದ ಗೆಳತಿ ವಿಜಯಲಕ್ಷ್ಮಿ. ಅದುವರೆಗೂ ಸಿಟಿ ಬಸ್ಸಿನಲ್ಲೇ ಕಾಲೇಜಿಗೆ ಬರುತ್ತಿದ್ದ ವಿಜಯಲಕ್ಷ್ಮಿ, ಬಸ್ ಬರುವುದು ಅರ್ಧ ಗಂಟೆ ತಡವಾದರೆ ಡ್ರೈವರ್, ಕಂಡಕ್ಟರ್‌ಗಳನ್ನು ಬಯ್ಯಲು ನಮಗೆ ಕಂಪನಿ ಕೊಡುತ್ತಿದ್ದ ವಿಜಯಲಕ್ಷ್ಮಿ, ಸಿಟಿ ಬಸ್‌ಗಳಲ್ಲಿ ಪ್ರಯಾಣಿಸುವಾಗ ಯಾವಾಗ್ಲೂ ಒಂದು ಪಿನ್ ಇಟ್ಕೊಂಡಿರಬೇಕು ಕಣೇ. ಪೋಕರಿಗಳು ಕೆಲವೊಮ್ಮೆ ಮೈ, ಕೈ ಸವರಲು ಟ್ರೈ ಮಾಡ್ತಾರೆ. ಅಂಥ ಸಂದರ್ಭದಲ್ಲಿ, ಸಮಯ ನೋಡಿಕೊಂಡು ಅವರಿಗೆ ಪಿನ್‌ನಿಂದ ಚುಚ್ಚಿ ಬುದ್ಧಿ ಕಲಿಸಬೇಕು ಎಂದು ಕಿವಿಮಾತು ಹೇಳಿದ್ದ ವಿಜಯಲಕ್ಷ್ಮಿ, ಲೇಡೀಸ್ ಸೀಟಿನಲ್ಲಿ ಕೂತಿರುತ್ತಿದ್ದ ಗಂಡಸರೊಂದಿಗೆ ಜಗಳಕ್ಕೆ ನಿಂತು ಸೀಟು ದಕ್ಕಿಸಿಕೊಳ್ಳುತ್ತಿದ್ದ ವಿಜಯಲಕ್ಷ್ಮಿ ಅದೊಂದು ದಿನ ಇದ್ದಕ್ಕಿದ್ದಂತೆಯೇ ಘೋಷಿಸಿದಳು: ಸಿಟಿ ಬಸ್ ಪ್ರಯಾಣ ಇವತ್ತೇ ಲಾಸ್ಟ್. ನಾಳೆಯಿಂದ ಹೊಸಾ ಬಾಯ್‌ಫ್ರೆಂಡ್ ಜೊತೆ ಕಾಲೇಜಿಗೆ ಬರ್ತೇನೆ. ಬಾಯ್‌ಫ್ರೆಂಡ್ ಜೊತೆ ತಿರುಗಾಡಲಿಕ್ಕೆ ಮನೇಲಿ ಪರ್ಮಿಷನ್ ಕೊಟ್ಟಿದ್ದಾರೆ. ಅಷ್ಟೇ ಅಲ್ಲ, ಅವನೊಂದಿಗೆ ಹೇಗೆ ಕೂತ್ಕೋಬೇಕು; ಯಾವ ಜಾಗದಲ್ಲಿ ಹೇಗೆ ಹೋಗಬೇಕು, ಅವನಿಂದ ಯಾವಾಗ ಮಾತಾಡಿಸಬೇಕು ಎಂಬುದನ್ನೆಲ್ಲಾ ಕಳೆದ ಒಂದು ತಿಂಗಳಿನಿಂದಲೂ ಹೇಳಿ ಕೊಟ್ಟಿದ್ದಾರೆ. ಅವನ ಜೊತೆ ತಿರುಗಾಡುವಾಗ ಏನಾದ್ರೂ ಎಡವಟ್ಟು ಮಾಡ್ಕೋತೀನಾ ಅಂತ ಮೇಲಿಂದ ಮೇಲೆ ಪರೀಕ್ಷಿಸಿದ್ದಾರೆ. ಅಂಥದೇನೂ ಆಗುವುದಿಲ್ಲ ಎಂಬುದು ಗ್ಯಾರಂಟಿಯಾದ ನಂತರವೇ ಅವನೊಂದಿಗೆ ಕಾಲೇಜಿಗೆ ಬರಲು ಅನುಮತಿ ನೀಡಿದ್ದಾರೆ ಎಂದಳು.
ಮರುದಿನವೇ ಬಾಯ್‌ಫ್ರೆಂಡನ್ನು ಕರೆದುಕೊಂಡು ಅವನಿಗೆ ಅಂಟಿಕೊಂಡಂತೆಯೇ ನಡೆಯುತ್ತಾ ಕಾಲೇಜಿಗೆ ಬಂದಳು ವಿಜಯಲಕ್ಷ್ಮಿ. ಆ ಕ್ಷಣದಲ್ಲೇ ಅವಳ ಮೇಲೆ ಅಸೂಯೆಯಾಯಿತು. ಸುಮ್ಮನೆ ಅವನ ಮೈ ಸವರಿದೆ. ಮೊದಲ ಭೇಟಿ, ಮೊದಲ ಸ್ಪರ್ಶ... ಹಾಗಾಗಿ ರೋಮಾಂಚನವಾಯಿತು. ಪಿಂಕ್ ಕಲರಿನ ವೇಷಭೂಷಣದಲ್ಲಿ ಅವನು ತುಂಬಾ ಅಂದ್ರೆ ತುಂಬಾ ಮುದ್ದಾಗಿದ್ದ. ಹಾಗೇ ಸುಮ್ಮನೆ ಅವನ ಕೆನ್ನೆ ಚಿವುಟುವ ಮನಸ್ಸಾಯಿತು. ವಿಜಯಲಕ್ಷ್ಮಿಯ ಒಪ್ಪಿಗೆ ಪಡೆಯದೇ ಆ ಕೆಲಸ ಮಾಡಿಯೇ ಬಿಟ್ಟೆ. ಆತ ತಕ್ಷಣವೇ 'ಪ್ರೇಂ' ಎಂಬಂಥ ವಿಚಿತ್ರ ಸದ್ದು ಹೊರಡಿಸಿದ. ಛೆ, ನೀನು ತುಂಬಾ ಜೋರಾಗಿ ಅವನನ್ನು ಪ್ರೆಸ್ ಮಾಡಿಬಿಟ್ಟೆ ಕಣೇ. ಹಾಗೆ ಮಾಡಿದ್ರೆ ನೋಡಿದವರು ತಪ್ಪು ತಿಳ್ಕೋತಾರೆ. ಮೊದಲು ಅವನ ಮೇಲಿಂದ ಕೈ ತೆಗಿ' ಎಂದುಬಿಟ್ಟಳು ವಿಜಯಲಕ್ಷ್ಮಿ. ಅವಳಿಗೆ ಸಿಕ್ಕಿರುವ, ಅದೇ ಬಣ್ಣದ, ಅದೇ ಗುಣಗಳ ಬಾಯ್‌ಫ್ರೆಂಡ್ ನನಗೂ ಬೇಕು ಅನ್ನಿಸಿದ್ದೇ ಆಗ.
ಮರುದಿನವೇ ಅಪ್ಪ-ಅಮ್ಮನ ಮುಂದೆ ಕೂತು 'ಅಮ್ಮಾ, ಹೇಗಿದ್ರೂ ನಾನೀಗ ಪಿಯೂಸಿ ಮುಗಿಸ್ತಾ ಇದೀನಿ. ಹಂಗಾಗಿ ನನಗೂ ಒಬ್ಬ ಬಾಯ್‌ಫ್ರೆಂಡ್ ಬೇಕು' ಎಂದೆ. ಮರುಗಳಿಗೆಯಲ್ಲೇ, ವಿಜಯಲಕ್ಷ್ಮಿ ಆಗಲೇ ಬಾಯ್‌ಫ್ರೆಂಡ್ ಜೊತೆ ತಿರುಗಾಡುತ್ತಿರುವ ಸಂಗತಿಯನ್ನು ಹೇಳಿದೆ. ಅಮ್ಮ ಮಧ್ಯೆ ಬಾಯಿ ಹಾಕಿ- 'ಅವಳ್ಯಾರೋ ಏನೋ ಮಾಡಿದ್ಲು ಅಂತ ನೀನೂ ಹಾಗೇ ಮಾಡ್ತೀನಿ ಅಂತ ಶುರು ಮಾಡಿದ್ದಿಯಲ್ಲ, ನಿಂಗೇನು ಬುದ್ದಿಗಿದ್ದಿ ಇದೆಯಾ? ತಿಂಗಳ ಹಿಂದೆ ಹಿಂದಿನ ಕ್ರಾಸ್‌ನ ಕುಲಕರ್ಣಿಯವರ ಮಗಳು, ಬಾಯ್‌ಫ್ರೆಂಡ್ ಜೊತೆ ಯರ್ರಾಬಿರ್ರಿ ಓಡಾಡ್ತಾ ಫುಟ್‌ಪಾತ್ ಮೇಲೇ ಜಾರಿಬಿದ್ದಳಂತೆ. ಅಂಥ ರಗಳೆಗಳು ನಮ್ಮ ಮನೇಲಿ ಆಗೋದು ನನಗೆ ಇಷ್ಟವಿಲ್ಲ. ತೆಪ್ಪಗೆ ಇದ್ದು ಬಿಡು' ಎಂದು ಬಿಟ್ಟರು. ಅವತ್ತು ಅಮ್ಮನನ್ನು ವಿಲನ್ ಥರಾ ನೋಡಿ ಮೂತಿ ತಿರುಗಿಸಿದ್ದೆ. ಈಗ ಬೆಂಗಳೂರಿನಲ್ಲಿ ಪಿಜಿ ಸೇರಿಕೊಂಡು ಕೆಲವೊಂದು ಸಂದರ್ಭದಲ್ಲಿ ದಿನಕ್ಕೆ ಆರು ಬಸ್‌ಗಳನ್ನು ಹತ್ತಿಳಿಯಬೇಕಾದ ನನ್ನ ಫಜೀತಿ ಕಂಡು ಅಮ್ಮ ಕೊನೆಗೂ ಮನಸ್ಸು ಬದಲಿಸಿದರು. 'ನೀನೀಗ ಮೆಚ್ಯೂರ್ ಆಗಿದೀಯ. ಯಾವಾಗ ಹೇಗೆ ವರ್ತಿಸಬೇಕು ಎಂಬುದನ್ನು ಚೆನ್ನಾಗಿ ತಿಳ್ಕೊಂಡಿದೀಯ. ಅವಸರದಲ್ಲಿ ದುಡುಕಿ ಅನಾಹುತ ಮಾಡಿಕೊಂಡ್ರೆ, ಆಮೇಲೆ ಆಸ್ಪತ್ರೇಲಿ ತಿಂಗಳುಗಟ್ಲೆ ಉಳಿಯಬೇಕಾಗುತ್ತೆ. ಆಗ ಎದುರು ಸಿಕ್ಕವರಿಗೆಲ್ಲ ಸ್ಪಷ್ಟನೆ ಕೊಡಬೇಕಾಗುತ್ತೆ. ಅಂಥ ಯಾವುದೇ ರಗಳೆ ಮಾಡ್ಕೋಬೇಡ. ಹುಷಾರಾಗಿರು...' ಎಂದೆಲ್ಲ ಬುದ್ಧಿ ಹೇಳಿ ಕಡೆಗೂ ನನ್ನ ಕನಸಿನ ಹುಡುಗನೊಂದಿಗೆ ಅಡ್ಡಾಡಲು ಗ್ರೀನ್ ಸಿಗ್ನಲ್ ಕೊಟ್ಟೇ ಬಿಟ್ಟರು. ಅವತ್ತು ಥೈ ಥೈ ಥೈ ಕುಣಿದಾಡಿ ಬಿಟ್ಟೆ. ಎಲ್ಲರಿಗೂ ಸ್ವೀಟ್ ಹಂಚಿದೆ.
ಈಗ, ಬಾಯ್‌ಫ್ರೆಂಡ್ ನನ್ನ ಜೊತೆಗಿದ್ದಾನೆ. ನಮ್ಮ ಪಿಜಿಯ ಕೆಳಗಿರುವ ಒಂದು ಪುಟ್ಟ ರೂಂನಲ್ಲಿ ಉಳಿದುಕೊಳ್ಳುತ್ತಾನೆ. ಅವನ ಮೇಲೆ ನನ್ನೊಂದಿಗಿರುವ ಎಲ್ಲ ಹುಡುಗಿಯರಿಗೂ ಮೋಹ. ಆಗಾಗ್ಗೆ ಬಳಿ ಬಂದು 'ಹುಡುಗ ಸ್ವೀಟ್ ಅಂಡ್ ಹ್ಯಾಂಡ್‌ಸಮ್. ಅವನ ಜೊತೆ ಸಿಟಿಗೆ ಒಂದೇ ಒಂದು ರೌಂಡ್ ಹೋಗಿ ಬರ್ತೇವೆ. ಪ್ಲೀಸ್, ಒಪ್ಪಿಗೆ ಕೊಡೇ' ಎಂದು ಗೋಗರೆಯುತ್ತಾರೆ. ಸರಿ ಹೋಗಿದ್ಬನ್ನಿ ಅನ್ನಲು ಮನಸ್ಸೇ ಬರುವುದಿಲ್ಲ. ಈ ಹುಡುಗಿಯರಿಗೋ ಹಸಿಬಿಸಿ ಹುಮ್ಮಸ್ಸು. ಅವನೊಂದಿಗೆ ಹೋದಾಗ ಏನಾದ್ರೂ ಅನಾಹುತ ಆಗಿಬಿಟ್ರೆ...
ಅವನು ಜೊತೆಯಾದ ಮೇಲೆ ನಾನು ಸಂಪೂರ್ಣ ಬದಲಾಗಿದೀನಿ. ಅವನೊಂದಿಗೆ ತಿರುಗಾಡುವುದು ಜಾಸ್ತಿ ಆಗಿರುವುದರಿಂದ ಛಾನ್ಸ್ ಸಿಕ್ಕಾಗೆಲ್ಲ ಮೇಕಪ್ ಸರಿ ಮಾಡ್ಕೋತೀನಿ. ಒಂದೊಂದು ಸಂದರ್ಭದಲ್ಲಿ ನಾನೇ ಮುಂದಾಗಿ ಅವನಿಗೆ ಮುತ್ತು ಕೊಡ್ತೀನಿ. ಆಗಿಂದ್ದಾಗ್ಗೆ ಬೆನ್ನು ತಟ್ತೀನಿ. ಸುತ್ತಮುತ್ತ ಯಾರಿದ್ದಾರೆ ಎಂಬ ಪರಿವೆಯೇ ಇಲ್ಲದೆ ಅವನ ಕಾಲ ಮೇಲೆ ಕಾಲು ಬಿಸಾಕಿ ಕೂತುಬಿಡುತ್ತೇನೆ. ಇಷ್ಟೆಲ್ಲ ಆದರೂ- ಅವನು ಮಾತಾಡುವುದಿಲ್ಲ. ಮಾತೇ ಆಡುವುದಿಲ್ಲ!
ಕೇಳಿ, ನನ್ನಂಥ ಸುಂದರಾಂಗಿ (?) ಯ ಜೊತೆ ಸಿಕ್ಕಿದ್ದರೂ ಅವನಿಗೆ ಬಹುಶಃ ಬುದ್ಧಿ ಬೆಳೆದಿಲ್ಲ. ಅವನು ಪಿಂಕ್ ಕಲರಿನ ಡ್ರೆಸ್ ಬಿಟ್ಟು ಬೇರೊಂದನ್ನು ಒಪ್ಪುವುದೇ ಇಲ್ಲ. ಮಹರಾಯ, ತಾನೇ ಮುಂದಾಗಿ ಸ್ನಾನವನ್ನೂ ಮಾಡುವುದಿಲ್ಲ. ಪ್ರತಿ ಭಾನುವಾರ ನಾನು ಮಾಡುವ ಮೊದಲ ಕೆಲಸವೆಂದರೆ ಅವನಿಗೆ ಸ್ನಾನ ಮಾಡಿಸುವುದು! ಬಯಲಲ್ಲಿ ನಿಲ್ಲಿಸಿ, ಮೈಗೆಲ್ಲಾ ಸೋಪು ಬಳಿದು, ಹಿಂದೆ -ಮುಂದೆ, ಮೇಲೆ-ಕೆಳಗೆಲ್ಲಾ ಅವನನ್ನು ಕ್ಲೀನ್ ಮಾಡುವಾಗ ನನಗೇ ಒಂಥರಾ ಆಗುತ್ತೆ. ಆಗಲೂ ಬಾಯ್‌ಫ್ರೆಂಡ್ ಎಂಬ ಈಡಿಯಟ್ ಮಾತೇ ಆಡದೇ ನಿಂತಿರುತ್ತಾನೆ! ಒಳಗೊಳಗೇ ನಗುತ್ತಿರುತ್ತಾನಾ? ಗೊತ್ತಾಗುವುದಿಲ್ಲ!
ಅಂದ ಹಾಗೆ, ನನ್ನ ಬಾಯ್‌ಫ್ರೆಂಡ್ ಹೆಸರು ಸ್ಕೂಟಿ. ಓಆ 02, ಕಿ 1433 ಅವನ ಐಡೆಂಟಿಟಿ ನಂಬರ್. ಯೆಸ್, ಅವನಿಗೆ ಅಂಟಿಕೊಂಡಂತೆಯೇ ನಾನಿರುತ್ತೇನೆ. ನಿಮಗೆಲ್ಲಾದರೂ ಕಾಣಿಸಿದರೆ ಹಾಯ್ ಎನ್ನಿ...ಬಿಡುವಿದ್ದರೆ ಮಾತಾಡೋಣ. ಸಾಧ್ಯವಾದರೆ ಕಾಫಿ ಕುಡಿಯೋಣ...
-ನಾನು ಪ್ರಣತಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

