ಅಂಕಣಗಳು

ರಾಜಧಾನಿಯ ಜಲ ಜಂಜಾಟವನ್ನು ಬಗೆಹರಿಸುವಿರಾ ಸಿಎಂ?

Published On :

ಪ್ಲ್ಯಾನ್ ಬೆಂಗಳೂರು 2020. ಅಜೆಂಡಾ ಫಾರ್ ಬೆಂಗಳೂರು ಇನ್ಫ್ರಾಸ್ಟ್ರಕ್ಚರಲ್ ಡೆವಲೆಪ್‌ಮೆಂಟ್ ಟಾಸ್ಕ್ ಫೋರ್ಸ್(ಎಬಿಐಡಿಇ) ನೀರಿನ ಸಮಸ್ಯೆ ಪರಿಹರಿಸಲು ಹಲವಾರು ಶಿಫಾರಸುಗಳನ್ನು ಮಾಡಿದೆ. ಕಾಲಕಾಲಕ್ಕೆ ಈ ಶಿಫಾರಸುಗಳತ್ತ ಅಧಿಕಾರಿ ವರ್ಗದ ಗಮನ ಸೆಳೆಯಲಾಗುತ್ತಿದೆಯಾದರೂ ಪ್ರಯತ್ನಗಳು ಫಲಕೊಡುತ್ತಿಲ್ಲ

ಕರ್ನಾಟಕದ ಮತದಾರರು ಒಂದು ಪಕ್ಷವನ್ನು ಕಿತ್ತೆಸೆದು ಅದರ ಜಾಗದಲ್ಲಿ ಇನ್ನೊಂದು ಪಕ್ಷವನ್ನು ತಂದು ಕೂರಿಸಿದರೆ, ಬೆಂಗಳೂರಿಗರು ಮಾತ್ರ ತುಸು ವಿಭಿನ್ನವಾಗಿ ಮತ ಚಲಾಯಿಸಿದರು. ಅವರು ಮತ ನೀಡಿದ್ದು ಪಕ್ಷಕ್ಕಲ್ಲ, ಅರ್ಹರು ಅನ್ನಿಸಿದ ಅಭ್ಯರ್ಥಿಗಳಿಗೆ. ಅಭ್ಯರ್ಥಿಗಳು ಯಾವ ಪಕ್ಷದವರು ಅನ್ನುವುದರ ಬಗ್ಗೆ ಬೆಂಗಳೂರಿಗರು ತಲೆಕೆಡಿಸಿಕೊಳ್ಳಲಿಲ್ಲ. ಈಗ ನಗರದಲ್ಲಿ ವಿವಿಧ ಪಕ್ಷಗಳ ಸುಮಾರು 28 ಎಮ್‌ಎಲ್‌ಎಗಳಿದ್ದಾರೆ. ಪ್ರತಿಯೊಬ್ಬರೂ ತಮ್ಮ ಕ್ಷೇತ್ರದ ಕಾಳಜಿ ವಹಿಸುವ, ಜನತೆಯನ್ನೂ ನಿರ್ಧಾರ ರೂಪಣೆಯಲ್ಲಿ ಪಾಲುದಾರರನ್ನಾಗಿ ಮಾಡುವ ಮತ್ತು 'ಪಾರದರ್ಶಕ-ಉತ್ತರದಾಯಿ' ಆಡಳಿತ ನೀಡುವ ಭರವಸೆಯನ್ನು ನೀಡಿದ್ದಾರೆ. ಆಡಿದ ಮಾತಿನಂತೆಯೇ ಅವರು ನಡೆದುಕೊಳ್ಳುತ್ತಾರೆಯೇ ಎನ್ನುವುದೇ ಮುಖ್ಯ ಪ್ರಶ್ನೆ.
ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬೆಂಗಳೂರಿನ ಮಂತ್ರಿಗಳೂ ಹೌದು. ಬೆಂಗಳೂರು ನಗರಾಭಿವೃದ್ಧಿ ಖಾತೆಯನ್ನು ತಮ್ಮ ಬಳಿಯೇ ಇಟ್ಟುಕೊಳ್ಳುವ ಮೂಲಕ, ನಗರದಲ್ಲಿ ಮೂಲೆ ಸೇರಿರುವ ಮೂಲಸೌಕರ್ಯ ಮತ್ತು ನಾರುತ್ತಿರುವ ನಾಗರಿಕ ಸಂಸ್ಥೆಗಳನ್ನು ಮೇಲೆತ್ತಲು ಅವರಿಗೆ ಎಷ್ಟು ಕಾಳಜಿ ಇದೆ ಎಂಬುದನ್ನು ರುಜುವಾತು ಮಾಡಿದ್ದಾರೆ. ಮುಂಚೂಣಿಯಲ್ಲಿ ನಿಂತು ಅವರು ಬೆಂಗಳೂರನ್ನು ಸರಿದಾರಿಗೆ ತರಲಿದ್ದಾರೆಯೇ? ಎಲ್ಲಾ ಎಮ್‌ಎಲ್‌ಎಗಳು ಪಕ್ಷ ಭೇದ ಮರೆತು ಒಟ್ಟಾಗಿ ಕೆಲಸ ಮಾಡುವಂತೆ ಅವರನ್ನು ಪ್ರೇರೇಪಿಸಬಲ್ಲರೇ? ಆಡಳಿತದಲ್ಲಿ ಭಾಗವಹಿಸುವಂತಹ ಅಧಿಕಾರವನ್ನು ಅವರು ಜನತೆಗೆ ಕೊಡಲಿದ್ದಾರೆಯೇ? ಬೆಂಗಳೂರಿಗರಂತೂ ಕಣ್ಣು ಮುಚ್ಚಿ ಇದಕ್ಕಾಗಿ ಪ್ರಾರ್ಥಿಸುತ್ತಿದ್ದಾರೆ.
ಸದ್ಯಕ್ಕೆ ಬೆಂಗಳೂರಿಗರನ್ನು ಕಾಡುತ್ತಿರುವ ಕುಡಿಯುವ ನೀರಿನ ಸಮಸ್ಯೆಯನ್ನೇ ತೆಗೆದುಕೊಳ್ಳಿ. ಪ್ರತೀ ಬೇಸಿಗೆಯಲ್ಲೂ ನಗರ ಈ ಸಮಸ್ಯೆಯನ್ನು ಎದುರಿಸುತ್ತದೆ. ಪ್ರತಿ ಬಾರಿಯೂ ದೊಡ್ಡ ಭರವಸೆ ಕೊಟ್ಟು, ಮುಂಗಾರು ಸುರಿಯುವವರೆಗೂ ಮಾಯವಾಗಿ ಪರಿಸ್ಥಿತಿ ತಿಳಿಯಾದ ಮೇಲೆ ಕಾಣಿಸಿಕೊಳ್ಳುವವರ ಸಂಖ್ಯೆಯೇನೂ ಕಡಿಮೆಯಿಲ್ಲ. ವೇಗವಾಗಿ ಅಭಿವೃದ್ಧಿಯಾಗುತ್ತಿರುವ ಈ ಮೆಟ್ರೋ ಸಿಟಿಯಲ್ಲಿ ಕೇವಲ 60 ಪ್ರತಿಶತ ನಿವಾಸಿಗಳಿಗಷ್ಟೇ ಪೈಪ್ಡ್ ವಾಟರ್ ಸರಬರಾಜು ಆಗುತ್ತಿದೆ, ಅದೂ ಒಂದು ದಿನ ಬಿಟ್ಟು ಇನ್ನೊಂದು ದಿನದಂದು. ಅದೂ ಕೇವಲ ಕೆಲವೇ ಗಂಟೆಗಳು ಮಾತ್ರ! ಇನ್ನುಳಿದ 40 ಪ್ರತಿಶತ ಮಂದಿ ಬೋರ್‌ವೆಲ್ ನೀರಿನ ಮೇಲೆಯೇ ಅವಲಂಬಿತರಾಗಿದ್ದಾರೆ. ಎಂದಿನಂತೆ ಪರಿಣತರು ಸೂಕ್ತ ಪರಿಹಾರಗಳ ಬಗ್ಗೆ ವರದಿ ತಯಾರಿಸಿದರಾದರೂ, ಅವೆಲ್ಲ ಹಾಳೆಗಳ ಮೇಲಷ್ಟೇ ಉಳಿದವು. ಒಂದು ಪ್ರಬಲ ರಾಜಕೀಯ ಇಚ್ಛಾಶಕ್ತಿ ಇಂದಿಗೂ ಈ ಊರಿನಲ್ಲಿ ಎದ್ದು ಕಾಣುತ್ತಿದೆ.
ಪ್ಲ್ಯಾನ್ ಬೆಂಗಳೂರು 2020. ಅಜೆಂಡಾ ಫಾರ್ ಬೆಂಗಳೂರು ಇನ್ಫ್ರಾಸ್ಟ್ರಕ್ಚರಲ್ ಡೆವಲೆಪ್‌ಮೆಂಟ್ ಟಾಸ್ಕ್ ಫೋರ್ಸ್(ಎಬಿಐಡಿಇ) ನೀರಿನ ಸಮಸ್ಯೆ ಪರಿಹರಿಸಲು ಹಲವಾರು ಶಿಫಾರಸುಗಳನ್ನು ಮಾಡಿದೆ. ಕಾಲಕಾಲಕ್ಕೆ ಈ ಶಿಫಾರಸುಗಳತ್ತ ಅಧಿಕಾರಿ ವರ್ಗದ ಗಮನ ಸೆಳೆಯಲಾಗುತ್ತಿದೆಯಾದರೂ. ಪ್ರಯತ್ನಗಳು ಫಲಕೊಡುತ್ತಿಲ್ಲ. ಈಗ ಹೊಸ ಸರ್ಕಾರ ರಾಜ್ಯದಲ್ಲಿರುವುದರಿಂದ ಅಬೈಡ್‌ನ ವರದಿಗಳಲ್ಲಿನ ಪ್ರಮುಖ ಅಂಶಗಳತ್ತ ಬೆಳಕು ಚೆಲ್ಲುವುದು ಒಳಿತು.
-  ಉತ್ತಮ ಗುಣಮಟ್ಟದ ನೀರನ್ನು ಜನತೆಯ ದಾಹ ಇಂಗಿಸಲು ಬಳಸಬೇಕು ಮತ್ತು ಗ್ರೇ ವಾಟರ್(ಸಂಸ್ಕರಿಸಿದ ನೀರು) ಅನ್ನು ಉಳಿದ ಕೆಲಸಗಳಿಗೆ ಬಳಸಬೇಕು(ಕಾರ್ಖಾನೆಗಳನ್ನು ಒಳಗೊಂಡು). ಆದಾಯವೆಷ್ಟೇ ಇರಲಿ, ಪ್ರತಿ ಕುಟುಂಬಕ್ಕೂ ಇಂತಿಷ್ಟು ಕುಡಿಯುವ ನೀರಿನ ಸರಬರಾಜು ಆಗಬೇಕು. ಕೋಯ್ಲು, ಶೇಖರಣೆ ಹಾಗೂ ಅಂಥದ್ದೇ ಕ್ಷೇತ್ರಗಳ ನೀರಿನ ಬಳಕೆಯ ಮೇಲೆ ನಿಯಂತ್ರಣವಿರಬೇಕು.
-  ಬೆಂಗಳೂರು ಜಲ ನಿರ್ವಹಣಾ ಪ್ರಾಧಿಕಾರ(ಬಿಡಬ್ಲೂಎಮ್‌ಎ)ವನ್ನು ಸ್ಥಾಪಿಸಬೇಕು. ನೀರು ಸಂಗ್ರಹಣೆ, ಪೂರೈಕೆ, ನಿರ್ವಹಣೆ, ಹಂಚಿಕೆ ಮತ್ತು ಬೆಲೆನಿಗದಿಯಂತಹ ಎಲ್ಲಾ ವಿಷಯಗಳೂ ಅದರ ವ್ಯಾಪ್ತಿಯಲ್ಲಿ ಬರಬೇಕು.
-  ಬಿಬಿಎಂಪಿಯ ಮಳೆ ನೀರು ಸಂಗ್ರಹಣೆಯನ್ನು ಬಿಡಬ್ಲುಎಸ್‌ಎಸ್‌ಬಿಯ ಭಾಗವಾಗಿಸಬೇಕು. ನಿರ್ಧಾರ ಕೈಗೊಳ್ಳುವ ಅಧಿಕಾರ ಬಿಬಿಎಂಪಿಯ ಬಳಿಯೇ ಇರಬೇಕು ಮತ್ತು ಕೆಲಸ ನಿರ್ವಹಣೆ ಬಿಡಬ್ಲುಎಸ್‌ಎಸ್‌ಬಿಯಿಂದ ಆಗಬೇಕು.
-  ಪರ್ಯಾಯ ಜಲ ಮೂಲಗಳ ಬಳಕೆ ಶುರುವಾಗಬೇತು. ಕೆಲವು ಪ್ರದೇಶಗಳಿಗೆ ಕೆರೆ ನೀರು ಪೂರೈಕೆ ಆಗುವಂತಾಗಬೇಕು.
-  ನೀರಿನ ಸುಂಕವನ್ನು ವಾಣಿಜ್ಯ ವೆಚ್ಚ ಯೋಜನೆಯ ಆಧಾರದಲ್ಲಿ ನಿರ್ಧರಿಸಬೇಕು. ಆರ್ಥಿಕವಾಗಿ ಹಿಂದುಳಿದ ಏರಿಯಾಗಳಲ್ಲಿನ ನೀರಿನ ಸುಂಕ ಉಳಿದ ಭಾಗಗಳಲ್ಲಿಗಿಂತ ಕಡಿಮೆಯಿರಬೇಕು.
- ಪ್ರತೀ ಹೊಸ ಬಡಾವಣೆಗಳಿಗೂ ಕುಡಿಯುವ ಮತ್ತು ಬಳಕೆ ನೀರಿನ ಪ್ರತ್ಯೇಕ ಸಂಪರ್ಕಗಳಿರಬೇಕು.
- ಮಳೆ ನೀರು ಸಂಗ್ರಹಣೆಗೆ ಏರಿಯಾಗಳಲ್ಲಿ ಸೂಕ್ತ ಸ್ಥಳಗಳ ಬಗ್ಗೆ ಬಿಡಬ್ಲುಎಸ್‌ಎಸ್‌ಬಿ ಘೋಷಿಸಬೇಕು.
- ನೀರು ಸೋರಿಕೆಯನ್ನು ತಡೆಯಲು ಸೂಕ್ತ ಕ್ರಮ ಕೈಗೊಳ್ಳಬೇಕು. ಇಡೀ ಜಲ ಜಾಲವನ್ನು ಸೂಕ್ಷ್ಮವಾಗಿ ಪರಿಶೀಲಿಸಿ, ದುರ್ಬಲ ಮಾರ್ಗಗಳನ್ನು ಸರಿಪಡಿಸಬೇಕು.
- ಎಲ್ಲಾ ಬೋರ್‌ವೆಲ್‌ಗಳ ನೋಂದಣಿಯಾಗಬೇಕು. ಮತ್ತು ಇದನ್ನು ಖುದ್ದು ಮಾಲೀಕರೆ ಮುಂಚೂಣಿಯಲ್ಲಿ ನಿಂತು ಮಾಡಬೇಕು. ಒಂದೇ ಬಾರಿಗೆ ಮರುಪಾವತಿಸಬಹುದಾದ ನೀರಿನ ತೆರಿಗೆ ನಿಯಮವನ್ನು ಈ ಬೋರ್‌ವೆಲ್‌ಗಳಿಗೆ ಜಾರಿಗೊಳಿಸಬೇಕು. ಅಂತಹ ಪ್ರತೀ ಬೋರ್‌ವೆಲ್‌ಗಳಿಗೂ ವಾರ್ಷಿಕ ಶುಲ್ಕವನ್ನು ನಿಗದಿ ಮಾಡಬೇಕು.
ಈ ವರದಿಯನ್ನು ವಿವಿಧ ಕ್ಷೇತ್ರಗಳಲ್ಲಿನ ಪರಿಣತರು ಒಟ್ಟುಗೂಡಿ ತಯಾರಿಸಿದ್ದಾರೆ. ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪ್ರಪಂಚದ ಬಹಳಷ್ಟು ನಗರಗಳ ನೀರಿನ ಸಮಸ್ಯೆಯ ಮೇಲೆ ಆಳವಾಗಿ ಅಧ್ಯಯನ ಮಾಡಿ ಈ ವರದಿಯಲ್ಲಿ ಶಿಫಾರಸುಗಳನ್ನು ಮಾಡಲಾಗಿದೆ. ಬೆಂಗಳೂರನ್ನು ನಿಜಕ್ಕೂ ನೀರಿನ ಸಮಸ್ಯೆಯಿಂದ ಮುಕ್ತಗೊಳಿಸಬೇಕು ಎಂಬ ಆಸೆ ಈ ಸರ್ಕಾರಕ್ಕೆ ಇದ್ದರೆ ಅದು ಈ ಶಿಫಾರಸುಗಳನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು. ಇದು ಸಾಧ್ಯವೇ ಮುಖ್ಯಮಂತ್ರಿಗಳೇ?

ಕೊನೆಯ ಗುಟುಕು: 'ಕ್ರಿಕೆಟ್ ಜಂಟಲ್‌ಮನ್‌ಗಳ ಆಟ' ಎನ್ನುವುದಾದರೆ, 'ಜಂಟಲ್‌ಮನ್‌' ಪದದ ವ್ಯಾಖ್ಯಾನವನ್ನು ಬದಲಾಯಿಸಲಾಗಿದೆ!'

- ಎಚ್.ಎಸ್. ಬಲರಾಮ್
hsbalram@gmail.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.