ಅಂಕಣಗಳು

ಭದ್ರತೆ, ಭ್ರಷ್ಟಾಚಾರ ಮುಕ್ತ ಆಡಳಿತ, ಜನಕಲ್ಯಾಣ

Published On :

ಈಗ ರಾಜ್ಯದಲ್ಲಿ ಸ್ಥಾಪನೆಯಾಗಿರುವ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ಸಿನ ಸರ್ಕಾರದಲ್ಲಿ ಅಭದ್ರತೆಯ ಪ್ರಶ್ನೆಯೇ ಇರಲಿಕ್ಕಿಲ್ಲ. ಭ್ರಷ್ಟಾಚಾರ ರಹಿತ ಆಡಳಿತ, ಜನಕಲ್ಯಾಣ ಕಾರ್ಯಕ್ರಮಗಳು ಹಾಗೂ ಸಾಮಾಜಿಕ ನ್ಯಾಯದ ಅರ್ಥಪೂರ್ಣ ವಿತರಣೆ ಸರ್ಕಾರದ ಆದ್ಯತೆಯ ಪಟ್ಟಿಯಲ್ಲಿ ಸೇರಿಕೊಂಡಿವೆ.
ಈ ಮೂರೂ ಉದ್ದೇಶಗಳು ಸಾಧನೆಯಾಗಬೇಕಾದರೆ, ರಾಜ್ಯದ ಪ್ರಗತಿಯ ವೇಗ ಹೆಚ್ಚಿದರೆ ಮಾತ್ರ ಸಾಧ್ಯ. ಪ್ರಗತಿಯನ್ನು ಕಡೆಗಣಿಸಿದರೆ ಸಾಮಾಜಿಕ ನ್ಯಾಯವೂ ಸಿಗುವುದಿಲ್ಲ, ಜನಕಲ್ಯಾಣ ಕಾರ್ಯಕ್ರಮಗಳೂ ವಿಫಲವಾಗುತ್ತವೆ.
ಇದೇನೂ ಹೊಸ ಸಿದ್ಧಾಂತವಲ್ಲ. ಈಗಿನ ವ್ಯವಸ್ಥೆಯಲ್ಲಿ ಭ್ರಷ್ಟಾಚಾರ ರಹಿತ ಉತ್ತಮ ಆಡಳಿತವನ್ನು ಒದಗಿಸದೇ ಹೋದರೆ, ಅದಕ್ಕಾಗಿ ಸೂಕ್ತ ರೀತಿಯ ಕಾಯಿದೆಯ ಚೌಕಟ್ಟನ್ನು ರೂಪಿಸದೇ ಹೋದರೆ ಜನರಿಗೆ, ಅದರಲ್ಲೂ ಬಡಜನರಿಗೆ ಸಿಗುವ ಸೌಲಭ್ಯದ ಹತ್ತುಪಟ್ಟು - ನೂರುಪಟ್ಟು (ತಲಾ ಲೆಕ್ಕದಲ್ಲಿ) ಅಧಿಕಾರಿಗಳ, ಪ್ರತಿಷ್ಠಿತ ರಾಜಕಾರಣಿಗಳ ಪಾಲಾಗುವುದು ಖಚಿತ. ಹಿಂದಿನ ಸರ್ಕಾರದಲ್ಲಿ ಆಗಿದ್ದು ಹಾಗೇ. ನಿಜ. ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅವರನ್ನೇ ಆರಿಸಿಕೊಂಡ ಕಾಂಗ್ರೆಸ್ ಸಾಮಾಜಿಕ ನ್ಯಾಯ ವಿತರಣೆಯ ಸಿದ್ಧಾಂತದ ಜಾರಿಗೆ ಪ್ರಾಮುಖ್ಯ ನೀಡಿದೆ ಎನ್ನುವುದರಲ್ಲಿ ಅನುಮಾನ ಬೇಡ. ಅದನ್ನೇ ಇನ್ನೊಂದು ರೀತಿಯಲ್ಲಿ ಹೇಳಬೇಕಾದರೆ, ಬಡವರ, ಹಿಂದುಳಿದವರ ಹೆಸರಿನಲ್ಲಿ, ಮುಂದುವರಿದ, ಬಲಾಢ್ಯ, ಶ್ರೀಮಂತರು ತಮ್ಮ ಆರ್ಥಿಕ - ಸಾಮಾಜಿಕ ಶಕ್ತಿಯಿಂದ ಸೌಲಭ್ಯ ಪಡೆಯುವ ಪರಿಸ್ಥಿತಿಯನ್ನು ತೊಲಗಿಸುವುದು ಈಗಲಾದರೂ ಸಾದ್ಯವಾಗಬೇಕು. ಕನಿಷ್ಠ ಪಕ್ಷ ಆ ಪ್ರಯತ್ನ ಆರಂಭವಾಗಬೇಕು. ಮಂತ್ರಿಗಳನ್ನು ಆರಿಸಿಕೊಳ್ಳುವಾಗಲೂ ಸಾಮಾಜಿಕ ನ್ಯಾಯ ವಿತರಣೆಯನ್ನು ಕೈ ಬಿಡದೇ ಬಹಿರಂಗವಾಗಿಯೇ ಕಳಂಕಿತರನ್ನು ದೂರವಿಡುವುದಾಗಿ ಹೇಳಿ, ಕೆಲವರನ್ನು ಹೊರಗಿಟ್ಟಿರುವುದೂ ಸಮಾಜಕ್ಕೆ, ಜನರಿಗೆ, ನೀಡಿದ ಒಂದು ಸ್ಪಷ್ಟ ಸಂದೇಶ. ಇವೆಲ್ಲವೂ ಸಿದ್ದರಾಮಯ್ಯ ಅವರ ಸರ್ಕಾರದ ಪಾಲಿಗೆ ಅನುಕೂಲಕರ ಅಂಶಗಳೇ. ಆದ್ದರಿಂದ ಮಂತ್ರಿಮಂಡಲದಲ್ಲಿ ಆರೋಗ್ಯಕರವಾದ ಸಾಮೂಹಿಕ ಚಿಂತನೆಯ ಅಭಾವವೂ ಇರಬಾರದು.
ಆದರೆ ಇಷ್ಟರಿಂದಲೇ ಅಭಿವೃದ್ಧಿ ಸಾಧ್ಯವಿಲ್ಲ. ಭ್ರಷ್ಟಾಚಾರದ ನಿರ್ಮೂಲನ ಹಾಗೂ ಉತ್ತಮ ಆಡಳಿತ ನೀಡುವುದಕ್ಕೆ ಅಗತ್ಯವಾದ ಕಾಯಿದೆಯ ಚೌಕಟ್ಟನ್ನು ಆದಷ್ಟು ಬೇಗ ನಿರ್ಮಿಸಬೇಕು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆರಂಭದ ಹೇಳಿಕೆಗಳಲ್ಲಿ ಅವರು ಪ್ರಬಲವಾದ ಸಂದೇಶವನ್ನು ಕಳಿಸಿರುವುದು, ಬಡಜನರ ಕಲ್ಯಾಣಕ್ಕೆ. ರುಪಾಯಿಗೊಂದು ಕೇಜಿ ಅಕ್ಕಿಯ ಪೂರೈಕೆಗೇ ಮೊದಲು ಗಮನ ಹರಿಸಿದ್ದು. ನಿಜ, ಇದು ಮುಖ್ಯವಾದ ವಿಚಾರ. ಬಡವರು, ಕಡು ಬಡವರಿಗೂ ದೇವರು ಪ್ರತ್ಯಕ್ಷವಾಗಬೇಕಾದರೆ, ಅದು ಅನ್ನದ ರೂಪದಲ್ಲೇ ಆಗಬೇಕೆನ್ನುವ ಮಾತೂ ನಿಜ. ಆದರೆ ಕರ್ನಾಟಕದ ಬಹುಭಾಗದಲ್ಲಿ ಬಡವರು ಬಳಸುವುದು ಪ್ರಧಾನವಾಗಿ ಅಕ್ಕಿಯನ್ನಲ್ಲ. ಅದು ಪೇಟೆ ಪಟ್ಟಣಗಳ ಮಧ್ಯಮವರ್ಗದ ಪ್ರಮುಖ ಆಹಾರ. ಕರಾವಳಿಯಲ್ಲಿ ಮಾತ್ರ ಎಲ್ಲರೂ ಅಕ್ಕಿಯನ್ನೇ ಬಳಸುತ್ತಾರೆ.
ಉತ್ತರ ಕರ್ನಾಟಕ, ಮಧ್ಯ ಕರ್ನಾಟಕ, ದಕ್ಷಿಣ ಕರ್ನಾಟಕದ - ಹಳ್ಳಿಗಳಲ್ಲಿ ಬಡವರು ಬಳಸುವುದು ಜೋಳ ಹಾಗೂ ರಾಗಿಯನ್ನು. ಆ ಧಾನ್ಯಗಳ ಹಂಚಿಕೆ, ಬೆಲೆ, ಕುರಿತಂತೆ ಯಾವ ಪ್ರಸ್ತಾಪವೂ ಇಲ್ಲ. ಈಚೆಗೆ ಮುಖ್ಯಮಂತ್ರಿ ಮಧ್ಯಮ ವರ್ಗದ ಜನರಿಗೂ ಕೇಜಿಗೆ ಎಂಟು - ಒಂಭತ್ತು ರುಪಾಯಿಗೆ ಒಂದು ಕೇಜಿ ಅಕ್ಕಿಯನ್ನು ಪೂರೈಸುವ ಮಾತಾಡಿದ್ದಾರೆ.
ಆದರೆ ಅಷ್ಟು ದೊಡ್ಡ ಪ್ರಮಾಣದ ಅಕ್ಕಿಯನ್ನು ಎಲ್ಲಿಂದ ತರುವುದು? ಕರ್ನಾಟಕದಲ್ಲಿ ನಿಗದಿಪಡಿಸಿದಷ್ಟು ಧಾನ್ಯ ಸಂಗ್ರಹವಾಗಿಲ್ಲ. ಪಂಜಾಬ್, ಹರ್ಯಾನ, ಮಧ್ಯಪ್ರದೇಶಗಳಲ್ಲಿ ಅಕ್ಕಿಯ ವ್ಯವಹಾರದ ಕೊನೆಯ ದಿನಗಳು ಮುಗಿದು ಹೋಗಿವೆ. ಕೇಂದ್ರದಲ್ಲಿರುವ ಸಂಗ್ರಹದಿಂದ ಹೆಚ್ಚು ಅಕ್ಕಿಯನ್ನು ಪಡೆಯುವುದು ಕಷ್ಟ. ಗೋಧಿ ಸಿಕ್ಕರೂ ಸಿಕ್ಕೀತು. ಅಕ್ಕಿಯ ಮೇಲೇ ಹೆಚ್ಚು ಒತ್ತು ಬೀಳುವುದಕ್ಕೆ ಕಾರಣ, ನೀತಿಯನ್ನು  ನಿರೂಪಿಸುವ ವರ್ಗ ಅಕ್ಕಿಯನ್ನು ಬಳಸುವ ವರ್ಗಕ್ಕೇ ಸೇರಿರುವುದು.

ಜಾತಿಗಳೇ ಮುಖ್ಯ: ಸಾಮಾಜಿಕ ನ್ಯಾಯ ವಿತರಣೆಯ ಸಿದ್ಧಾಂತ, ವಾಸ್ತವದಲ್ಲಿ ಸಿಕ್ಕಿದವರಿಗೆ ಸೀರುಂಡೆ ಎಂದು ಇದ್ದಿದ್ದನ್ನು ಕಿತ್ತುಕೊಳ್ಳುವ ಅಪ್ಪಟ ಜಾತೀಯ ಕಾರ್ಯಕ್ರಮದ ಮಟ್ಟಕ್ಕೆ ಕುಸಿಯಬಾರದು. ಸಿದ್ದರಾಮಯ್ಯ ಮಂತ್ರಿಮಂಡಲದಲ್ಲಿ ಅವರನ್ನು ಬಿಟ್ಟು ಇನ್ನೊಬ್ಬ ಕುರುಬ ಪ್ರತಿನಿಧಿ ಇಲ್ಲ. ಇದೊಂದು ಒಳ್ಳೆಯ ಸಂಕೇತವೇ. ಮುಖ್ಯಮಂತ್ರಿಯೇ ಆ ಜಾತಿಯವರಾದ್ದರಿಂದ ಸಮಗ್ರ ಜನಾಂಗದ ಹಿತರಕ್ಷಣೆಗೆ ಯಾವ ಅಡ್ಡಿಯೂ ಬರುವುದಿಲ್ಲ. ಆದರೆ ದೇಶದಲ್ಲಿ, ರಾಜ್ಯದಲ್ಲಿ ನೂರಾರು ಜಾತಿಗಳು, ಒಳಜಾತಿಗಳು, ಗುಂಪುಗಳು, ಉಪಗುಂಪುಗಳಿವೆ. ಎಲ್ಲ ಬಗೆಯ ಜಾತಿ - ಉಪಜಾತಿಗಳಿಗೂ ಮಂತ್ರಿ ಮಂಡಲದಲ್ಲಿನ ಪಾಲಿನ ಮಾತು ಹಾಗಿರಲಿ, ವಿಧಾನ ಸಭೆಯಲ್ಲೂ ಪಾಲು ಕೊಡುವುದು ಸಾಧ್ಯವಿಲ್ಲ. ಆದ್ದರಿಂದಲೇ ಸಿದ್ದರಾಮಯ್ಯ ಪ್ರಾತಿನಿಧ್ಯ ಸಿಗದೇ ಇರುವ ಎಲ್ಲ ಜಾತಿಗಳಿಗೂ ತಾವೇ ಪ್ರತಿನಿಧಿ ಹಾಗೂ ವಾರಸುದಾರ ಎನ್ನುವಂತೆ ವರ್ತಿಸಬೇಕು. ಹಿಂದೆ ಕರ್ಪೂರಿ ಠಾಕೂರ್, ದೇವರಾಜ ಅರಸು ಅವರು ಇಂತಹ ಮಾತಾಡುತ್ತಿದ್ದರು. ಬಹುತೇಕ ಸಂದರ್ಭಗಳಲ್ಲಿ ಹಾಗೇ ನಡೆದುಕೊಂಡಿದ್ದರು ಕೂಡಾ.
ಇಲ್ಲಿ ಇನ್ನೂ ಒಂದು ವಿಷಯ ಗಮನಾರ್ಹ. ಜಾತಿಯ ಲೆಕ್ಕವೇ ಸಾಮಾಜಿಕ ನ್ಯಾಯ ವಿವರಣೆಯ ಸಿದ್ಧಾಂತದಲ್ಲಿ ಸರ್ವಸ್ವವಲ್ಲ, ಜಾತಿಯ ಪರಿಗಣನೆ ಒಂದು ಮುಖ್ಯವಾದ ವಿಚಾರ ಅಷ್ಟೇ. ಕೊಳಕು ಕೊಂಪೆಗಳ ನಿರ್ಮೂಲನ, ಸರ್ವರಿಗೂ ಶುದ್ಧ ನೀರಿನ ಸೌಲಭ್ಯದ ರೀತಿಯಲ್ಲೇ ಸಹಿಸಬಹುದಾದ ಶೌಚಾಲಯದ ವ್ಯವಸ್ಥೆ, ಉದ್ಯೋಗ ನಿರ್ಮಾಣ, ಬಡಜನರ ಪ್ರದೇಶಗಳಲ್ಲಿ ಉತ್ತಮ ಶಾಲೆಗಳ ನಿರ್ಮಾಣ ಹಾಗೂ ಬಡವರಿಗೆಂದು ಸರ್ಕಾರ ನೀಡಿರುವ ಎಲ್ಲ ಹಕ್ಕುಗಳ ನ್ಯಾಯವಾದ ವಿತರಣೆ ಇವೆಲ್ಲವೂ ಸಾಮಾಜಿಕ ನ್ಯಾಯ ವಿತರಣೆಯ ಸಿದ್ಧಾಂತದ ವ್ಯಾಪ್ತಿಯಲ್ಲೇ ಬರುವಂತಹದ್ದು. ಅವೆಲ್ಲವೂ ಬಡವರಿಗೆ ತಲುಪಬೇಕಾದರೆ ಶುದ್ಧ - ದಕ್ಷ ಆಡಳಿತ ವ್ಯವಸ್ಥೆ ಬೇಕು.
ಮುಖ್ಯಮಂತ್ರಿ ಅಧಿಕಾರ: ಈಚಿನ ದಿನಗಳಲ್ಲಿ ಎಲ್ಲ ಕಡೆ ಸಚಿವ ಸಂಪುಟದ ಆಡಳಿತದ ಪದ್ಧತಿ ಮುಖ್ಯಮಂತ್ರಿಯ ಆಡಳಿತ ಪದ್ಧತಿಯಾಗಿ ಪರಿವರ್ತನೆಯಾಗಿ ಬಿಟ್ಟಿದೆ. ಗ್ರೇಟ್ ಬ್ರಿಟನ್ನಿನ ಗತಿಯೂ ಅದೇ. ನಮ್ಮಲ್ಲಿ ಕೇಂದ್ರದಲ್ಲಿ ಮಾತ್ರ ಈ ವ್ಯವಸ್ಥೆ ಬೇರೆ ರೀತಿಯಲ್ಲಿದೆ ಅಷ್ಟೇ. ಅದು ನಿಯಮಕ್ಕೊಂದು ಅಪವಾದ.
ಈ ಹಿನ್ನೆಲೆಯಲ್ಲಿ ಮಂತ್ರಿ ಮಂಡಲದಲ್ಲೇ ಮುಖ್ಯಮಂತ್ರಿಯ ಕೋಟಾದಿಂದ ಬಂದವರು, ವರಿಷ್ಠರ ಆದೇಶದ ಮೇರೆಗೆ ನೇಮಕಗೊಂಡವರು, ಸಂಸ್ಥಾ ಕಾಂಗ್ರೆಸ್‌ನಿಂದ ಜನತಾ ಪರಿವಾರವನ್ನು ಹೊಕ್ಕು, ಅನಂತರ, ಕಾಂಗ್ರೆಸ್ ಗೆಲ್ಲುವ ಸೂಚನೆ ಸಿಕ್ಕಿದ ಕೂಡಲೇ ಕಾಂಗ್ರೆಸ್ಸಿಗೆ ಜಿಗಿದವರು ಎನ್ನುವ ವ್ಯತ್ಯಾಸಗಳನ್ನು ಮಂತ್ರಿಮಂಡಲದಲ್ಲೇ ಗುರ್ತಿಸಲಾಗುತ್ತಿದೆ.
ಕೆಲವರ ಪ್ರಕಾರ, ಸಿದ್ದರಾಮಯ್ಯ ಮಂತ್ರಿ ಮಂಡಲದಲ್ಲಿ ಜನತಾ ಪರಿವಾರದಿಂದ ಬಂದವರ ಸಂಖ್ಯೆ ಗಮನಾರ್ಹವಾದದ್ದು. ಜನತಾ ಪರಿವಾರ ಎಂದರೆ ಮೂಲತಃ ಸಂಸ್ಥಾ ಕಾಂಗ್ರೆಸ್ ಅಂದರೆ ಮೂಲ ಕಾಂಗ್ರೆಸ್ಸಿನ ಪರಿವಾರವೇ. ತಮಾಷೆಗೆಂದು ಈ ವ್ಯತ್ಯಾಸವನ್ನು ಕೆಲವರು ಲಘುವಾಗಿ ಗುರ್ತಿಸಿದರೂ, ಇನ್ನು ಕೆಲವರು ಈ ವ್ಯತ್ಯಾಸಕ್ಕೆ ಭೂತಗನ್ನಡಿಯನ್ನು ಹಿಡಿದು ತಮ್ಮ ಬೇಳೆಯನ್ನು ಬೇಯಿಸಿಕೊಳ್ಳುವವರೇ. ಮಂತ್ರಿ ಮಂಡಲದಲ್ಲಿ ಅವರದ್ದೇ ಒಂದು ಗುಂಪು ಎನ್ನುವ ಪರಿಸ್ಥಿತಿ ನಿರ್ಮಾಣವಾಗುವ ಅಪಾಯ ಇದ್ದೇ ಇದೆ.
ಸಿದ್ದರಾಮಯ್ಯ ಮಂತ್ರಿಮಂಡಲದಲ್ಲಿ ಕಾಂಗ್ರೆಸ್ ವರಿಷ್ಠರಿಗೆ, ಮುಖ್ಯಮಂತ್ರಿಗಿಂತ ಹತ್ತಿರವಾಗಿರುವ ಮಂತ್ರಿಗಳು ಇದ್ದಾರೇನು? ಇರಬಹುದು. ಇದ್ದಾರೆ, ವರಿಷ್ಠರ ನೇರ ಸಂಪರ್ಕವಿಲ್ಲದೇ ಹೋದರೂ ಅವರಿಗೆ ಸಕಾಲದಲ್ಲಿ ಸೂಕ್ತ ಸಂದೇಶಗಳನ್ನು ಮುಟ್ಟಿಸಬಲ್ಲವರು ಇದ್ದಾರೆ. ಆದರೆ ಅವರ ವ್ಯವಹಾರಗಳು ಈಗಲೇ ಆರಂಭವಾಗುವುದಿಲ್ಲ, ಅದಕ್ಕೆ ಇನ್ನಷ್ಟು ಕಾಲ ಬೇಕು. ಸಿದ್ದರಾಮಯ್ಯ ಅವರು ಈಗಂತೂ ಇಂತಹ ವಿಚಾರಗಳಲ್ಲಿ ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ, ಮುಂದೆ ಅಂತಹ ಪ್ರಸಂಗ ಬಂದರೆ ಅದನ್ನು ಎದುರಿಸುವ ಮಾರ್ಗಗಳು ಅವರಿಗೂ ಗೊತ್ತು, ಅವರ ಪರಿಚಯಸ್ಥರಿಗೂ ಗೊತ್ತು.

ಪ್ರಾದೇಶಿಕ ಪ್ರಾತಿನಿಧ್ಯ: ಪ್ರಾದೇಶಿಕ ಪ್ರಾತಿನಿಧ್ಯದ ಸಮಸ್ಯೆ ಈಚಿನ ದಿನಗಳಲ್ಲಿ ಹಿಂದಿಗಿಂತ ಹೆಚ್ಚು ತೀವ್ರವಾಗಿದೆ. ಸಂಖ್ಯೆಯ ದೃಷ್ಟಿಯಿಂದ ನೋಡಿದರೆ ಹದಿಮೂರು ಜಿಲ್ಲೆಗಳಿಗೆ ಮಂತ್ರಿಮಂಡಲದಲ್ಲಿ ಪ್ರಾತಿನಿಧ್ಯವಿಲ್ಲ, ಈಚೆಗೆ ನಾಲ್ಕು, ಆರು ತಾಲೂಕುಗಳಿಗೆ ಒಂದು ಜಿಲ್ಲೆ ಇರುವ ಪರಿಸ್ಥಿತಿ ಕೆಲವು ಕಡೆಗಳಲ್ಲಿ ಇದೆ. ರಾಮನಗರ - ಚಿಕ್ಕಬಳ್ಳಾಪುರದಂತಹ ಜಿಲ್ಲೆಗಳು ಬೆಂಗಳೂರಿನ ಭಾಗಗಳಾಗಿಯೇ ಕಂಡು ಬರುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಅಲ್ಲಿನ ಜನರಿಗೆ ಅಗತ್ಯ ಬಿದ್ದರೆ ಕೆಲವೇ ಗಂಟೆಗಳಲ್ಲಿ ವಿಧಾನಸೌಧದ ಮುಂದೆ ಪ್ರದರ್ಶನ ನಡೆಸುವ ಅವಕಾಶ, ಅನುಕೂಲಗಳಿವೆ. ಆದರೆ ದೂರದ ದೊಡ್ಡ ಜಿಲ್ಲೆ ಬೆಳಗಾವಿಯ ಜನರಿಗೆ ಅಂತಹ ಅನುಕೂಲವಿಲ್ಲ. ಇಂತಹ ಸಮಸ್ಯೆಗೆ ನಿಜವಾದ ಮದ್ದು ಎಂದರೆ ಜನರಿಗೆ ಅತಿ ಹತ್ತಿರವಾದ ಸಮಸ್ಯೆಗಳ ಪರಿಹಾರದ ಅಧಿಕಾರವನ್ನು ನಿಜವಾದ ಅರ್ಥದಲ್ಲಿ ಪಂಚಾಯಿತಿ ರಾಜ್ಯ ಸಂಸ್ಥೆಗಳಿಗೇ ವಹಿಸಿಕೊಟ್ಟು, ಆ ಸಂಸ್ಥೆಗಳನ್ನು ಆರ್ಥಿಕವಾಗಿ ಬಲಪಡಿಸುವುದೇ. ನಿಜ. ಇದು ಕಾಗದದ ಮೇಲೆ ಆಗಿದೆ. ಆದರೆ ಪಂಚಾಯಿತಿಗಳ ಚುನಾಯಿತ ಪದಾಧಿಕಾರಿಗಳ ಅವಧಿಯನ್ನು ಇಪ್ಪತ್ತು ತಿಂಗಳಿಗೆ (ಕೆಲವು ಕಡೆಗಳಲ್ಲಿ ಅದರಲ್ಲೂ ಅರ್ಧಕಾಲು) ಇಳಿಸಿ, ಎಲ್ಲೂ ಯಾರೂ ಕೆಲಸ ಮಾಡದಿರುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಅವ್ಯವಸ್ಥೆ ಭ್ರಷ್ಟಾಚಾರದ ತಾಂಡವಕ್ಕೇ ಆಹ್ವಾನ ನೀಡಿರುವುದೂ ನಿಜ. ಮಂತ್ರಿಮಂಡಲದಲ್ಲಿ ಸಂಘಟಿತ ನೌಕರ ಕಾರ್ಮಿಕ ವಲಯದ ಒಬ್ಬ ಪ್ರತಿನಿಧಿಯೂ ಇಲ್ಲ. ಮುಖ್ಯಮಂತ್ರಿಯೇ ಆ ಶ್ರಮಿಕ ಸಮಾಜಕ್ಕೆ ನ್ಯಾಯ ಒದಗಿಸಿ ಕೊಡಬೇಕು. ಇದುವರೆಗೆ ಸಿದ್ದರಾಮಯ್ಯ ಅವರು ಆರ್ಥಿಕ ಸುಧಾರಣೆ, ಖಾಸಗೀಕರಣ, ಇಂತಹ ವಿಚಾರಗಳಿಗೆ ಸಂಬಂಧಿಸಿದಂತೆ ತಮ್ಮ ಅಭಿಪ್ರಾಯವನ್ನು ಪ್ರಕಟಿಸಿಲ್ಲ. ಈ ವಿಚಾರದಲ್ಲಿ ನಿರ್ದಿಷ್ಟವಾದ ಹಾಗೂ ನಿಖರವಾದ ನಿರ್ಧಾರಗಳನ್ನು ಪ್ರಕಟಿಸಲೇಬೇಕಾದ ದಿನಗಳಿವು. ಸಿದ್ದರಾಮಯ್ಯ ಅವರಿಗೆ ಉದ್ಯೋಗ ನಿರ್ಮಾಣದ ವಲಯದಲ್ಲಿ ಒಳ್ಳೆಯ ಕೆಲಸ ಮಾಡುವ ಉದ್ದೇಶವಿದ್ದರೆ ಸುಧಾರಣೆ ಹಾಗೂ ಸಾಮಾಜಿಕ ನ್ಯಾಯ ವಿತರಣೆಯ ಸಿದ್ಧಾಂತಗಳ ನಡುವೆ ಅರ್ಥಪೂರ್ಣ ಸಂಬಂಧವನ್ನು ಕಲ್ಪಿಸಿ, ನಿರಂತರ ವಿಚಾರ ವಿನಿಮಯಕ್ಕೊಂದು ವೇದಿಕೆಯನ್ನು ಸೃಷ್ಟಿಸಲೇಬೇಕು.

ಕಿಡಿಗೇಡಿತನ: ಯಾರು ಎಷ್ಟೇ ಹೇಳಲಿ, ಏನನ್ನೇ ಹೇಳಲಿ, ಮಾಧ್ಯಮ ಪ್ರಪಂಚದಲ್ಲಿ ಸಿದ್ದರಾಮಯ್ಯ ಅವರಿಗೆ ಈಗ ಸಿದ್ದು ಎನ್ನುವ ಹೆಸರು ಗಂಟುಹಾಕಿಕೊಂಡು ಬಿಟ್ಟಿದೆ, ಅದನ್ನು ಜನಸ್ನೇಹಿ ಬಳಕೆ ಎಂದೇ ಭಾವಿಸಬಹುದೇ?

- ಸತ್ಯ
anisikeprabha@gmail.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.