ಡಾ. ಮನಮೋಹನ ಸಿಂಗ್ ಸಂಭಾವಿತರು ಫುಲ್‌ಸ್ಟಾಪ್.
ಸಾಧು ಸ್ವಭಾವದವ, ಸಂಭಾವಿತ, ಒಳ್ಳೆಯ ಮನುಷ್ಯ ಎಂಬ ಕಾರಣಕ್ಕೆ ಒಬ್ಬ ವ್ಯಕ್ತಿಯನ್ನು...

ಸಾಧು ಸ್ವಭಾವದವ, ಸಂಭಾವಿತ, ಒಳ್ಳೆಯ ಮನುಷ್ಯ ಎಂಬ ಕಾರಣಕ್ಕೆ ಒಬ್ಬ ವ್ಯಕ್ತಿಯನ್ನು ಎಲ್ಲ ಸಂದರ್ಭಗಳಲ್ಲೂ ಒಪ್ಪಿಕೊಳ್ಳಲು ಆಗುವುದಿಲ್ಲ. ಇವೆಲ್ಲವೂ ಶ್ರೇಷ್ಠ ಗುಣಗಳೇ. ಒಬ್ಬ ಸಮರ್ಥ, ಧೀಮಂತ ವ್ಯಕ್ತಿಯಲ್ಲಿ ಇರಬೇಕಾದ ಅಂಶಗಳೇ ಒಬ್ಬ ನಾಯಕನಲ್ಲಿ ಇರಲೇಬೇಕಾದ ಗುಣಾಂಶಗಳೂ ಹೌದು. ಆದರೆ ಸಾಮರ್ಥ್ಯ, ಧೀಮಂತಿಕೆ ಬದಲು ಈ ಉತ್ತಮ ಅಂಶಗಳಷ್ಟೇ ಇದ್ದರೆ ಅದರಿಂದ ಪ್ರಯೋಜನವಿಲ್ಲ. ಬಹಳ ದಿನಗಳ ಕಾಲ ಆ ಗುಣಗಳು ಪ್ರಯೋಜನಕ್ಕೆ ಬರಲಾರವು.
ನಮ್ಮ ಪ್ರಧಾನಿ ಡಾ. ಮನಮೋಹನ ಸಿಂಗ್ ಅದಕ್ಕೊಂದು ನಿದರ್ಶನವಾಗಿ ಕಾಣುತ್ತಾರೆ. ಉತ್ತಮ ಗುಣಗಳ ಸಾಕಾರಮೂರ್ತಿಯಾಗಿಯೂ ಇಂದು ನಮ್ಮೆದುರಿಗೆ ಒಬ್ಬ ದುರ್ಬಲ ವ್ಯಕ್ತಿಯಂತೆ, ಅಸಹಾಯಕನಂತೆ, ದುರಂತ ನಾಯಕನಂತೆ ಗೋಚರಿಸುತ್ತಿದ್ದಾರೆ. ಪ್ರಧಾನಮಂತ್ರಿಯಂಥ ಉನ್ನತ ಹುದ್ದೆಯಲ್ಲಿರುವ ವ್ಯಕ್ತಿಗೆ ಈ ರೀತಿ ಅಸಹಾಯಕತೆ ಆವರಿಸಿರುವುದು ಕ್ರೂರ ಅಣಕವೇ ಸರಿ. ಎಲ್ಲಾ ಇದ್ದೂ ಏನೂ ಇಲ್ಲದವನಂತೆ ಇರುವ ಮನಸ್ಥಿತಿಯಿದೆಯಲ್ಲ, ಅದು ವ್ಯಕ್ತಿಯ ದುರಂತ. ಡಾ. ಸಿಂಗ್ ಇಂದು ಅಂಥ ಸ್ಥಿತಿಯಲ್ಲಿದ್ದಾರೆ.
ಒಬ್ಬ ವ್ಯಕ್ತಿ ಎಷ್ಟೇ ದುರ್ಬಲನಾಗಿರಲಿ, ಅಸಮರ್ಥನಾಗಿರಲಿ, ಒಂದು ಹುದ್ದೆಗೆ ಯೋಗ್ಯನಲ್ಲದಿರಲಿ, ಆದರೆ ಆ ಹುದ್ದೆ ಸ್ವೀಕರಿಸಿದ ಬಳಿಕ, ಕುರ್ಚಿಯ ಮೇಲೆ ಕುಳಿತ ಬಳಿಕ ಪದನಿಮಿತ್ತವಾಗಿ, ಸಹಜವಾಗಿ ಪ್ರಾಮುಖ್ಯ ಪಡೆಯುತ್ತಾನೆ, ಬಲಿಷ್ಠನಾಗುತ್ತಾನೆ, ವರ್ಚಸ್ಸನ್ನು ಗಳಿಸಿಕೊಳ್ಳುತ್ತಾನೆ. ತನ್ನ ಸುತ್ತ ಪ್ರಭಾವಲಯವನ್ನು ಬೆಳೆಸಿಕೊಳ್ಳುತ್ತಾನೆ. ವಂದಿಮಾಗದರನ್ನು ಕಟ್ಟಿಕೊಳ್ಳುತ್ತಾನೆ. ಕ್ರಮೇಣ ಅದೇ ಹುದ್ದೆಯಲ್ಲಿ ತನ್ನ ಪ್ರಭುತ್ವ, ಹಿಡಿತ, ನಿಯಂತ್ರಣ ಸಾಧಿಸಿಕೊಂಡು ಮತ್ತಷ್ಟು ಗಟ್ಟಿಯಾಗುತ್ತಾನೆ. ವೈಯಕ್ತಿಕ ವರ್ಚಸ್ಸಿನಿಂದ ಅಲ್ಲದಿದ್ದರೂ, ಆ ಹುದ್ದೆಯಲ್ಲಿ ಕುಳಿತದ್ದಕ್ಕೆ ಘನತೆಯನ್ನು ತಂದು ಕೊಡುತ್ತಾನೆ. ನಾಮಬಲದಿಂದ ಅಲ್ಲದಿದ್ದರೂ, ಸ್ಥಾನಬಲದಿಂದ ಒಂದಷ್ಟು ಮರ್ಯಾದೆ ಸಂಪಾದಿಸುತ್ತಾನೆ. ಇದು ಲೋಕರೂಢಿ. ಏನಕೇನ ಪ್ರಕಾರೇಣ ಪದವಿಗೇರಿದವರು ಹೇಗೆ ಅಧಿಕಾರ ನಡೆಸಿದ್ದಾರೆಂಬುದನ್ನು ಇತಿಹಾಸದುದ್ದಕ್ಕೂ ನೋಡಬಹುದು.
ಆದರೆ ಡಾ. ಮನಮೋಹನಸಿಂಗ್ ಅವರ ವಿಷಯದಲ್ಲಿ ಏನಾಗಿದೆ ನೋಡಿ. ಭಾರತದಂಥ ಬಲಿಷ್ಠ ಪ್ರಜಾಪ್ರಭುತ್ವ ದೇಶದ ಪ್ರಧಾನಮಂತ್ರಿಯಾಗಿ ಡಾ. ಸಿಂಗ್ ಅವರು ಇಂದಿಗೆ ಒಂಬತ್ತು ವರ್ಷಗಳನ್ನು ಪೂರೈಸಿದ್ದಾರೆ. ಜವಾಹರಲಾಲ ನೆಹರು ಹಾಗೂ ಇಂದಿರಾಗಾಂಧಿ ನಂತರ ಪ್ರಧಾನಮಂತ್ರಿ ಹುದ್ದೆಯಲ್ಲಿ ಇಷ್ಟೊಂದು ದೀರ್ಘ ಅವಧಿಯಲ್ಲಿರುವವರು ಇವರೇ. ಶತಮಾನದ ಇತಿಹಾಸವಿರುವ ಕಾಂಗ್ರೆಸ್ ಪಕ್ಷದಲ್ಲಿ ನೆಹರು, ಗಾಂಧಿ ಮನೆತನದವರ ಹೊರತುಪಡಿಸಿದರೆ ಅತಿ ದೀರ್ಘ ಕಾಲ ಪ್ರಧಾನಿ ಹುದ್ದೆಯಲ್ಲಿರುವ ವ್ಯಕ್ತಿಯೆಂಬ ಅಗ್ಗಳಿಕೆಗೆ ಪಾತ್ರರಾದವರೂ ಡಾ. ಮನಮೋಹನಸಿಂಗ್ ಅವರೇ.
ವಿಚಿತ್ರ ಅಂದ್ರೆ ಇಂದು ಅವರ ಪರಿಸ್ಥಿತಿ ಏನಾಗಿದೆ?
ಅತ್ಯಂತ ದುರ್ಬಲ, ದೈನೇಸಿ ವ್ಯಕ್ತಿಯಂತೆ ಕಾಣುತ್ತಿದ್ದಾರೆ. ಯಾವಾಗ ಪ್ರಧಾನಮಂತ್ರಿ ಪಟ್ಟದಿಂದ ಇಳಿಯುತ್ತೇನೋ ಎಂದು ಹಂಬಲಿಸುವವರಂತೆ ಗೋಚರಿಸುತ್ತಿದ್ದಾರೆ. ಅದಕ್ಕಿಂತ ಮುಖ್ಯವಾಗಿ ಇಡೀ ದೇಶಕ್ಕೆ ಒಂದು ಹೊರೆ (liability)ಯಂತಾಗಿದ್ದಾರೆ. ಇಂಥವರೂ ಒಬ್ಬ ಪ್ರಧಾನಿಯಾ, ಇಂಥ ಪ್ರಧಾನಿ ನಮಗೆ ಬೇಕಾ ಎಂಬ ಪ್ರಶ್ನೆಗಳು ಸಾಮಾನ್ಯ ಪ್ರಜೆಗಳಲ್ಲಿ ಮೂಡಲಾರಂಭಿಸಿದ್ದರೆ ಅದರಲ್ಲಿ ಅಚ್ಚರಿಯೇನಿಲ್ಲ. 'ಮಿಸ್ಟರ್ ಕ್ಲೀನ್' ಎಂದು ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದ ಡಾ. ಸಿಂಗ್ ಎಲ್ಲರ ಮೂದಲಿಕೆಗೆ ತುತ್ತಾಗಿರುವುದು ಸಹ ಅವರ ಅಧಃಪತನವೇ ಸರಿ.
ಹಾಗೆ ನೋಡಿದರೆ ಡಾ. ಮನಮೋಹನಸಿಂಗ್‌ರದು ಪ್ರಾಮಾಣಿಕ ವ್ಯಕ್ತಿತ್ವವೇ. ಅವರ ನೇತೃತ್ವದ ಯುಪಿಎ ಸರ್ಕಾರ ಕಾಲಕಾಲಕ್ಕೆ ಒಂದಿಲ್ಲೊಂದು ಕರ್ಮಕಾಂಡ, ಹಗರಣಗಳಲ್ಲಿ ಮುಳುಗಿ ತೇಲುತ್ತಿದ್ದರೂ ಡಾ. ಸಿಂಗ್ ಅವುಗಳಲ್ಲಿ ಭಾಗಿಯಾಗಿದ್ದಾರೆಂದು ಯಾರೂ ಹೇಳುತ್ತಿಲ್ಲ. ಅವರ ಶುದ್ಧಹಸ್ತಕ್ಕೆ ಹೊಲಸು ಮೆತ್ತಿಕೊಂಡಿಲ್ಲ. ಇಂದಿಗೂ ಅವರದು ಸಂಶಯಾತೀತ ನಡೆಯೇ. ಯಾರ ತೋರಬೆರಳು ಕೂಡ ಅವರೆಡೆಗೆ ನೆಟ್ಟಿಲ್ಲ ನಿಜ. ಅವರು ವಿಶ್ವಮಾನ್ಯ ಆರ್ಥಿಕತಜ್ಞರು. ಎರಡು ಮಾತಿಲ್ಲ. ಹೆಂಡತಿ-ಮಕ್ಕಳನ್ನು ಅಧಿಕಾರದ ಆಸು-ಪಾಸಿನಲ್ಲಿ ಬಿಟ್ಟುಕೊಂಡವರಲ್ಲ. ಅವರ ವಿರುದ್ಧ ವೈಯಕ್ತಿಕ ಆರೋಪ ಹೊರಿಸುವ ಮುನ್ನ, ಟೀಕೆ ಮಾಡುವ ಮುನ್ನ ನಾಲ್ಕು ಸಲ ಯೋಚಿಸಬೇಕಾಗುತ್ತದೆ. ಅಂಥ ವ್ಯಕ್ತಿತ್ವ ಅವರದು. ಇಂದಿಗೂ ಅವರದು ಕಳಂಕಕರಹಿತ ವ್ಯಕ್ತಿತ್ವವೇ.
ಇಷ್ಟಾಗಿಯೂ ಅವರು ದೇಶಕ್ಕೆ ಹೊರೆಯಾಗಿರುವುದು, most unpopular ನಾಯಕ ಎಂದು ಕರೆಯಿಸಿಕೊಳ್ಳುತ್ತಿರುವುದು, ಅತ್ಯಂತ ದುರ್ಬಲ ವ್ಯಕ್ತಿಯೆಂಬ ಮೂದಲಿಕೆಗೆ ಪಾತ್ರರಾಗಿರುವುದು ಸಹ ಅಷ್ಟೇ ನಿಜ ಹಾಗೂ ವಿಪರ್ಯಾಸ! ಎಲ್ಲ ಮಣ್ಣುಗಳಿಂದ ಗಣಪತಿ ಮೂರ್ತಿಯನ್ನು ಮಾಡಲಾಗುವುದಿಲ್ಲ. ಡಾ. ಸಿಂಗ್ ಪ್ರಧಾನಿಯಾಗಿ ಈ ಮಾತನ್ನು ನಿಜಗೊಳಿಸಿದ್ದಾರೆ. ಪ್ರಧಾನಿ ಹುದ್ದೆಗೆ ಏರಿ ಆ ಪಟ್ಟದ ಘನತೆಗೆ ತಕ್ಕುದಾಗಿ ನಡೆದುಕೊಳ್ಳಲು ಸಾಧ್ಯವಾಗದೇ ಕುಬ್ಜರಾಗಿದ್ದಾರೆ. ಅತ್ತ ಆ ಹುದ್ದೆಯಿಂದ ಇಳಿಯಲೂ ಆಗದೇ, ಇತ್ತ ಆ ಹುದ್ದೆಯಲ್ಲಿ ಮುಂದುವರಿಯಲೂ ಆಗದವರಂತೆ ಹಿಂಸೆ, ಚಡಪಡಿಕೆ ಅನುಭವಿಸುತ್ತ, ತೀವ್ರ ಪೇಚಾಟಕ್ಕೊಳಗಾದವರಂತೆ ವರ್ತಿಸುತ್ತಿದ್ದಾರೆ. ಅವರ ಮುಖದ ಹುಯ್ದಾಟಗಳಲ್ಲಿ ಅಂಥ ನರಳಿಕೆ ಕಾಣುತ್ತಿದೆ.
ಈ ಒಂಬತ್ತು ವರ್ಷಗಳ ಪ್ರಧಾನಿ ಹುದ್ದೆ ಜವಾಬ್ದಾರಿ ಅವರನ್ನು ಪರಿಪಕ್ವ, ಅನುಭವಿ, ಪರಿಪೂರ್ಣ ನಾಯಕನನ್ನಾಗಿ ರೂಪಿಸಬೇಕಿತ್ತು. ಅವರಲ್ಲೊಬ್ಬ ಮುತ್ಸದ್ದಿ, ನೇತಾರನ ಖದರು ಅರಳಬೇಕಿತ್ತು. ದೇಶ ಹಾಗೂ ದೇಶವಾಸಿಗಳೊಂದಿಗೆ ಅವರು ಹೆಚ್ಚು ಹೆಚ್ಚು Connectಆಗಬೇಕಿತ್ತು. ಅವರೂ ಜನರಿಗೆ ಅರ್ಥವಾಗಬೇಕಿತ್ತು. ಜನರಿಗೂ ಅವರು ಹಾಗೇ ಆಗಬೇಕಿತ್ತು. ಅದರ ಬದಲು ಅವರೇನು ಮಾಡುತ್ತಿದ್ದಾರೆ, ಹಗರಣಗಳು ಬಯಲಾಗುತ್ತಿದ್ದಾಗ ಪ್ರಧಾನಿಗಳಾಗಿ ಇವರೇನು ಮಾಡುತ್ತಿದ್ದರು? ಸರಕಾರದ ನಾಯಕನಾಗಿ ಇವರಿಗೆ ಜವಾಬ್ದಾರಿ ಇಲ್ಲವಾ? ಈ ಹೊಣೆಗಾರಿಕೆಯಿಂದ ಪ್ರಧಾನಿ ಹೇಗೆ ಬಚಾವ್ ಆಗುತ್ತಾರೆ? ಇಷ್ಟಾಗಿಯೂ ಡಾ. ಸಿಂಗ್ ದೇಶದ ಜನರಿಗೆ ಉತ್ತರದಾಯಿ ಅಲ್ಲವಾ? ಲಕ್ಷಾಂತರ ಕೋಟಿ ರುಪಾಯಿ ಹಗರಣ ಬಹಿರಂಗವಾಗಿ ಸರಕಾರದ ಮಾನ-ಮರ್ಯಾದೆ ಮೂರಾಬಟ್ಟೆಯಾದರೂ ಸರಕಾರದ ನೇತೃತ್ವ ವಹಿಸಿದ ಪ್ರಧಾನಿ ತನಗೆ ಸಂಬಂಧವೇ ಇಲ್ಲ ಎಂಬಂತೆ ಇದ್ದು ಬಿಟ್ಟರೆ ಏನು ಕತೆ? ಎಲ್ಲ ಕರ್ಮಕಾಂಡಗಳು ಪ್ರಧಾನಿ ಮೂಗಿನ ಅಡಿಯಲ್ಲಿ ನಡೆಯುತ್ತಿದ್ದರೂ ಇವರಿಗೆ ಗೊತ್ತಾಗಿಲ್ಲ. ಅವುಗಳಲ್ಲಿ ಇವರ ಪಾತ್ರವಿಲ್ಲ ಎನ್ನುವುದಾದರೆ ಅದಕ್ಕಿಂತ ಅದಕ್ಷತೆ, ಬೇಜವಾಬ್ದಾರಿತನ ಮತ್ತೊಂದಿದೆಯಾ? ದೇಶದ ಪ್ರಧಾನಿ ಇಷ್ಟೊಂದು ಅಸಹಾಯಕ, ದುರ್ಬಲನಾದರೆ ಏನು ಗತಿ?
ಪ್ರಧಾನಿಗಳೇ, ನೀವೇನು ಮಾಡುತ್ತಿದ್ದೀರಿ, ಏನು ಹಕೀಕತು ಎಂದು ಇಂದು ಕೇಳಲೇಬೇಕಾಗಿದೆ. ಪ್ರಧಾನಿಯಾಗಿ ಒಂಬತ್ತು ವರ್ಷ ಪೂರೈಸಿದ ಸಂದರ್ಭದಲ್ಲಿ ಡಾ. ಸಿಂಗ್ ಅವರನ್ನು ಪ್ರಶ್ನಿಸಲೇಬೇಕಾಗಿದೆ. ಕಿವುಡರ, ಮೂಕರ ದೇಶದಲ್ಲಿ ಪ್ರಧಾನಿ ಮೌನವಾಗಿದ್ದರೆ ಚೆಂದ. ಆದರೆ ಎಲ್ಲಾದಕ್ಕೂ ಪ್ರಧಾನಿಯೇ ಕಿವುಡ ಅಥವ ಮೂಕರಾಗಿಬಿಟ್ಟರೆ ಜನ ಮೌನ ಮುರಿಯುವ ಪ್ರಸಂಗ ಬರುತ್ತದೆ. ಈಗ ಅಂಥ ಸ್ಥಿತಿ ಸನ್ನಿಹಿತವಾಗುತ್ತಿದೆ. ಡಾ. ಮನಮೋಹನಸಿಂಗ್ ಬಗ್ಗೆ ಮರುಕಪಡುವ, ಅನುಕಂಪಪಡುವ ಕಾಲ ಬಂದಿದೆಯೇನೋ ಎಂದು ಅನಿಸಲಾರಂಭಿಸಿದೆ.
ಡಾ. ಸಿಂಗ್ ಅವರು ಈ ದೇಶದ ಪ್ರಧಾನಿಯಾದಾಗ ಅವರನ್ನು ಸೋನಿಯಾ ಗಾಂಧಿಯವರ 'ಕೈಗೊಂಬೆ' ಎಂದೇ ಎಲ್ಲರೂ ಅಭಿಪ್ರಾಯಪಟ್ಟಿದ್ದರು. ಗಾಂಧಿ ಮನೆತನಕ್ಕೆ ನಿಷ್ಠೆ, ಹೈಕಮಾಂಡಿಗೆ ಸಂಪೂರ್ಣ ಸಮರ್ಪಣೆ, ಮೃದುಸ್ವಭಾವ, ಮುಂದೆ ಬಂದವರ ಮೇಲೆ ಹಾಯದ, ಹಿಂದೆ ಬಂದವರಿಗೆ ಒದೆಯದವರೆಂದೇ ಡಾ. ಸಿಂಗ್ ಅವರನ್ನು ಸೋನಿಯಾ ಪ್ರಧಾನಿ ಹುದ್ದೆ ಮೇಲೆ ಎತ್ತಿ ಕುಳ್ಳಿರಿಸಿದರು. 'ನೀವು ಪ್ರಧಾನಿ, ಹಾಗೆಂದು ಪ್ರಧಾನಿಯಂತೆ ವರ್ತಿಸಬೇಕಿಲ್ಲ, ನಾನು ಹೇಳಿದಷ್ಟು ಮಾಡಿಕೊಂಡಿರಬೇಕು' ಎಂದು ಹೇಳಿರಬೇಕು. ಯಾಕೆಂದರೆ ಡಾ. ಸಿಂಗ್ ಅವರ ನಡವಳಿಕೆ ಇಂದಿಗೂ ಹಾಗೆಯೇ ಇದೆ. ಹಾಗಿಲ್ಲದಿದ್ದರೆ ಅವರು ಇಷ್ಟು ವರ್ಷಗಳ ಕಾಲ ಆ ಹುದ್ದೆಯಲ್ಲಿ ಮುಂದುವರಿಯುತ್ತಿರಲಿಲ್ಲ ಎನ್ನುವುದು ಅಷ್ಟೇ ದಿಟ.
ನಮ್ಮ ದೇಶದ ಪ್ರಧಾನಿ ಇಷ್ಟೊಂದು ದುರ್ಬಲರಾಗಿದ್ದು ಇದೇ ಮೊದಲಿರಬೇಕು. ಸ್ವತಂತ್ರವಾಗಿ ಅವರು ಯಾವ ನಿರ್ಧಾರವನ್ನೂ ತೆಗೆದುಕೊಳ್ಳಲಾಗದ ಹೀನಾಯ ಸ್ಥಿತಿಯಲ್ಲಿದ್ದಾರೆ. ಅವರು ತಮ್ಮ ಪಥವನ್ನೂ ಕಂಡುಕೊಳ್ಳಲಾರರು. ದೇಶದ ಜನರ ಪಥವನ್ನೂ ನಿರ್ದೇಶಿಸಲಾರರು. ಆದರೆ 10, ಜನಪಥದ ಆಣತಿಯಂತೆ ನಡೆಯಬೇಕಾಗಿದೆ. ಅವರ ಪರಿಸ್ಥಿತಿ ಹೀಗೆ ಎಂಬುದು ಅವರಿಗೆ ಗೊತ್ತಿತ್ತೋ ಇಲ್ಲವೋ? ಆದರೆ ದೇಶದ ಜನರಿಗೆ ಇದು ಎಂದೋ ಗೊತ್ತಾಗಿ ಹೋಗಿತ್ತು. ದುರ್ದೈವ ಅಂದರೆ ಅದನ್ನು ಅವರು ಪ್ರತಿದಿನ ರಾಷ್ಟ್ರದ ಜನತೆ ಮುಂದೇ ಪದೇ ಪದೆ ಸಾಬೀತುಪಡಿಸುತ್ತಿದ್ದಾರೆ.
ತೀರಾ ಅನಿರೀಕ್ಷಿತ ಹಾಗೂ ಸಂದಿಗ್ಧ ಸಂದರ್ಭದಲ್ಲಿ ಪ್ರಧಾನಿಯಾದ ಡಾ. ಸಿಂಗ್ ಆರಂಭದಿಂದಲೂ ಒಂದು ರೀತಿಯಲ್ಲಿ ಕಾಂಗ್ರೆಸ್ ಹೈಕಮಾಂಡಿನ ಕೈಗೊಂಬೆಯೇ ಆದರು. ಆದರೆ ಅವರಿಗೆ ಬೇರೆ ಆಯ್ಕೆಗಳಿರಲಿಲ್ಲ. ಅದೇ ಪಾತ್ರದಲ್ಲಿ ಮುಂದುವರಿಯಬೇಕಾದ ವಿಚಿತ್ರ ಅನಿವಾರ್ಯತೆಯಿಂದ ಬಳಲಬೇಕಾಗಿ ಬಂದಿತು. ಅವರಿಗೆ ಪಕ್ಷದಲ್ಲಿ ಯಾವುದೇ ನಿರ್ದಿಷ್ಟ ಸ್ಥಾನಮಾನವೂ ಇರಲಿಲ್ಲ. ಅವರು ನಿರ್ವಹಿಸಬಹುದಾದ ಪಾತ್ರವೂ ಇರಲಿಲ್ಲ. ಸಾಮಾನ್ಯವಾಗಿ ಪ್ರಧಾನಮಂತ್ರಿ ಆಡಳಿತರೂಢ ಪಕ್ಷದ ಮುಖ್ಯಸ್ಥರೇ ಆಗಿರುವುದು ವಾಡಿಕೆ. ಈ ಕಾರಣದಿಂದ ಅವರಿಗೆ ರಾಜಕೀಯ ಶಕ್ತಿ, ಇಚ್ಛಾಶಕ್ತಿ, ಬಲ ಸಹಜವಾಗಿ ಪ್ರಾಪ್ತವಾಗುತ್ತದೆ. ಪ್ರಧಾನಿಯಾದವರು ಪಕ್ಷದ ಮೇಲೆ ಸಂಪೂರ್ಣ ನಿಯಂತ್ರಣ ಹೊಂದಿರುತ್ತಾರೆ. ಆದರೆ ಡಾ. ಸಿಂಗ್ ಅವರ ವಿಷಯದಲ್ಲಿ ಹಾಗೇ ಆಗಲೇ ಇಲ್ಲ. ಇಂದಿಗೂ ಕೂಡ ಪಕ್ಷದ ವಿಷಯದಲ್ಲಿ ಅವರು ಅಪರಿಚಿತರು. ಅವರಿಗೂ, ಪಕ್ಷಕ್ಕೂ ಸಂಬಂಧವೇ ಇಲ್ಲ ಎನ್ನುವ ಹಾಗೆ ಅವರು ಇದ್ದುಬಿಟ್ಟಿದ್ದಾರೆ. ಪಕ್ಷದ ಎಲ್ಲ ನಿರ್ಧಾರಗಳನ್ನು ಪ್ರಧಾನಿಯವರ ಗಮನಕ್ಕೆ ತರದೇ ತೆಗೆದುಕೊಳ್ಳದೇ ಸಂಪ್ರದಾಯವನ್ನು ಲಾಗಾಯ್ತಿನಿಂದಲೂ ರೂಢಿಸಿಕೊಂಡಿರುವುದರಿಂದ ಡಾ. ಸಿಂಗ್ ಪಕ್ಷದಲ್ಲಿ ಅಪ್ರಸ್ತುತ. ಪ್ರಾಯಶಃ ಇಂಥ ಪ್ರಸಂಗ ಹಿಂದೆಂದೂ ಬಂದಿರಲಿಲ್ಲ. ಯಾವ ಪ್ರಧಾನಿಯೂ ಇದನ್ನು ಅನುಭವಿಸಿರಲಿಲ್ಲ.
ಸಂಸತ್ತಿನಲ್ಲೂ ಪ್ರಧಾನಿಯವರ ಪಾಡು ಇದೇ. ಸಾಮಾನ್ಯವಾಗಿ ಪ್ರಧಾನಿಯಾದವರು ಜನರಿಂದ ನೇರವಾಗಿ ಆಯ್ಕೆಯಾಗಿರುತ್ತಾರೆ. ಅಂದರೆ ಲೋಕಸಭೆಯ ಸದಸ್ಯರಾಗಿರುತ್ತಾರೆ. (ರಾಜ್ಯ ಸಭೆಯ ಸದಸ್ಯನಾದರೂ ಪ್ರಧಾನಿಯಾಗಲು ಸಂವಿಧಾನದಲ್ಲಿ ಅವಕಾಶವಿದೆ.) ಆದರೆ ಡಾ. ಸಿಂಗ್ ವಿಷಯದಲ್ಲಿ ಹೇಳುವುದಾದರೆ ಅವರು ಪ್ರಧಾನಿಯಾದ ಬಳಿಕ ಜನರಿಂದ ಆಯ್ಕೆಯಾಗಲು ಬಯಸದೇ ಒಳಮಾರ್ಗದಿಂದಲೇ ಸಂಸತ್ತನ್ನು ಪ್ರವೇಶಿಸಿದ್ದಾರೆ. ಪುನಃ ಅದೇ ಮಾರ್ಗವನ್ನು ಅನುಸರಿಸುತ್ತಿದ್ದಾರೆ. ತಾಂತ್ರಿಕವಾಗಿ ಅವರದು ಸರಿಮಾರ್ಗವಾದರೂ, ನೈತಿಕವಾಗಿ ಇದು ಅಷ್ಟು ಸರಿಯಾದ ಕ್ರಮ ಅಲ್ಲ.
ಹೀಗಾಗಿ ಡಾ. ಸಿಂಗ್ ಅವರದು ಎಂಥಾ ಪರಿಸ್ಥಿತಿ?! ಅವರು ಪ್ರಧಾನಿಯಾದರೂ ಸಂಸತ್ತಿನ ಉಭಯ ಸದನಗಳ ಪೈಕಿ ಯಾವುದೇ ಒಂದು ಸದನದ ನಾಯಕನೂ ಅಲ್ಲ. ಅಂದರೆ ಸರಕಾರವನ್ನು ಸಂಸತ್ತಿನಲ್ಲಿ ಪ್ರತಿನಿಧಿಸುವವರು ಅವರಲ್ಲ.
ಡಾ. ಮನಮೋಹನಸಿಂಗ್ ಅವರು ಸದಾ ಮೌನ ವಹಿಸದೇ ಏನು ಮಾಡಿಯಾರು? ಅವರಿಗೆ ಮಾತಾಡುವ ಅವಕಾಶವಾದರೂ ಎಲ್ಲಿದೆ? ಸರಕಾರದಲ್ಲೂ ಅವರು ಹೈಕಮಾಂಡಿನ ಪ್ರತಿನಿಧಿಯೇ ಹೊರತು ಪ್ರಧಾನಿ ಅಲ್ಲವೇ ಅಲ್ಲ. ಹೀಗಾಗಿ ಅವರು ಹೇಳುವುದೆಲ್ಲ ಅವರದ್ದಲ್ಲ. ಬೇರೆಯವರು ಹೇಳಿದ್ದನ್ನು ಉಸುರುತ್ತಾರೆ ಅಷ್ಟೆ.
ಯುಪಿಎ-2 ಸರಕಾರಕ್ಕೆ ನಾಲ್ಕು ವರ್ಷ ತುಂಬಿದ ಸಂದರ್ಭದಲ್ಲಿ ಸಿಎನ್‌ಎನ್ -ಐಬಿಎನ್ ಸುದ್ದಿವಾಹಿನಿ ದೇಶದ ಹನ್ನೆರಡು ನಗರಗಳಲ್ಲಿ ನಡೆಸಿದ ಸಮೀಕ್ಷೆಯ ವಿವರಗಳು ಹೊರಬಿದ್ದಿವೆ. ಪ್ರಧಾನಿ ಸಿಂಗ್ ನೇತೃತ್ವದ ಯುಪಿಎ ಸರಕಾರ ವಿಶ್ವಾಸಾರ್ಹತೆ ಕಳೆದುಕೊಂಡಿದೆಯಾ ಎಂಬ ಪ್ರಶ್ನೆಗೆ ಶೇ. 67ರಷ್ಟು ಜನ ಹೌದು, ವಿಶ್ವಾಸ ಕಳೆದುಕೊಂಡಿದೆ ಎಂಬ ನೇರ ಉತ್ತರ ನೀಡಿದ್ದಾರೆ. ಇದಿರಲಿ, ಶೇ. 61ರಷ್ಟು ಜನ ಡಾ. ಮನಮೋಹನಸಿಂಗ್ ಅವರನ್ನು ಆದಷ್ಟು ಬೇಗ ಪ್ರಧಾನಿ ಹುದ್ದೆಯಿಂದ ಕೆಳಗಿಳಿಸಬೇಕೆಂದು ಅಭಿಪ್ರಾಯಪಟ್ಟಿದ್ದಾರೆ. ಭ್ರಷ್ಟಾಚಾರದ ಹಗರಣಗಳು ಒಂದರ ನಂತರ ಮತ್ತೊಂದರಂತೆ ಬಹಿರಂಗವಾದರೂ, ಯಾರೂ ಪ್ರಧಾನಿಯವರ ವಿರುದ್ಧ ನೇರ ಆರೋಪ ಮಾಡಿರಲಿಲ್ಲ. ಅವರನ್ನು ಕಳಂಕಿತ ಎಂದು ಬೊಟ್ಟು ಮಾಡಿರಲಿಲ್ಲ. ಡಾ. ಸಿಂಗ್ ಪ್ರಾಮಾಣಿಕರೇ ಎಂದು ಎಲ್ಲರೂ ಹೇಳುತ್ತಿದ್ದರು.
ಆದರೆ ಈ ಸಮೀಕ್ಷೆ ಮೊದಲ ಬಾರಿಗೆ ಆಘಾತಕರ ಸಂಗತಿಯನ್ನು ಹೊರಹಾಕಿದೆ. ಅದೇನೆಂದರೆ, ಶೇ. 40ರಷ್ಟು ಮಂದಿ ಮಾತ್ರ ಡಾ. ಸಿಂಗ್ ಪ್ರಾಮಾಣಿಕರೆಂದೂ, ಶೇ. 33ರಷ್ಟು ಜನ ಅವರು ಪ್ರಾಮಾಣಿಕರಲ್ಲ ಎಂದೂ ಮನಬಿಚ್ಚಿದ್ದಾರೆ. ಇನ್ನೂ ಕಳವಳಕಾರಿ ಅಂಶ ಅಂದ್ರೆ, ನೂರರಲ್ಲಿ 24 ಮಂದಿ ಕಳೆದ ಒಂದು ವರ್ಷದಿಂದ ಈಚೆಗೆ ಡಾ.ಸಿಂಗ್ ಅವರ ಪ್ರಾಮಾಣಿಕತೆಯ ಮಟ್ಟ ಗಣನೀಯವಾಗಿ ಇಳಿದಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಈ ಸಮೀಕ್ಷೆ ಸರ್ವಮಾನ್ಯತೆ ನೀಡುವ ಸರ್ಟಿಫಿಕೇಟ್ ಅಲ್ಲದಿರಬಹುದು. ಆದರೆ ಈ ದೇಶದ ಜನತೆ ಯಾವ ರೀತಿ ಯೋಚಿಸುತ್ತಿದ್ದಾರೆ ಎಂಬುದರ ಸಣ್ಣ ಸುಳಿವು ಎಂದು ಭಾವಿಸಿರಬಹುದು. ಯುಪಿಎ ಸರಕಾರ ಐದು ವರ್ಷ ಪೂರೈಸಿದಾಗ ಯಶಸ್ಸಿನಲ್ಲಿ ಪಾಲು ಹಂಚಿಕೊಂಡ ಡಾ. ಸಿಂಗ್ ಈಗ ಯಾರಿಗೂ ಬೇಡದವರಾಗಿ ಬಿಟ್ಟರಾ? ಅಸಾಮರ್ಥ್ಯವನ್ನು ಒಂದು ವ್ಯವಸ್ಥೆ ಶಾಶ್ವತವಾಗಿ ಒಪ್ಪಿಕೊಳ್ಳಲು, ಮಾನ್ಯ ಮಾಡಲು ಸಾಧ್ಯವೇ ಇಲ್ಲ. ಅದೊಂದು ತಾತ್ಕಾಲಿಕ ಅರೇಂಜ್‌ಮೆಂಟ್ ಆಗಿರಬಹುದೇ ಹೊರತು ಅದೇ ಪರಿಹಾರ ಎಂದು ಒಪ್ಪಿಕೊಳ್ಳುವುದು ದೂರದ ಮಾತೇ ಗತಿ.
ಉನ್ನತ ಹುದ್ದೆಯಲ್ಲಿರುವವರು ಅಸಹಾಯಕರಾದರೆ, ಬೇರೆಯವರ ಕೈಗೊಂಬೆಯಂತಾದರೆ ವ್ಯವಸ್ಥೆ ಎಷ್ಟು ಶಿಥಿಲವಾಗುತ್ತದೆ ಎಂಬುದನ್ನು ಡಾ. ಸಿಂಗ್ ಪರಿಣಾಮಕಾರಿಯಾಗಿ, ಮನೋಜ್ಞವಾಗಿ ತೋರಿಸಿಕೊಟ್ಟಿದ್ದಾರೆ. ಈ ಅಂಶ ಇನ್ನೂ ಅವರಿಗೆ ಅರಿವಾಗದಿದ್ದರೆ, ಅವರ ಆಡಳಿತ ಅಂತ್ಯ ಇನ್ನಷ್ಟು ದಾರುಣವಾದೀತು.
ಹೇಗೋ, ಏನೋ, ಒಂಬತ್ತು ವರ್ಷ ಪೂರೈಸಿದ್ದೇ ಸಾಧನೆ ಎನ್ನುವುದಾದರೆ, ಅವರದು ದೊಡ್ಡ ಸಾಧನೆಯೇ. ಅವರು ಅಭಿನಂದನಾರ್ಹರು!
- ವಿಶ್ವೇಶ್ವರ ಭಟ್
vbhat@me.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


