ಅತಿಯಾದ ವೇಗ ಒಳ್ಳೇದಲ್ಲಾ ಸಿದ್ರಾಮಣ್ಣಾ....
ಮಾಜಿ ಮುಖ್ಯಮಂತ್ರಿ ದಿವಂಗತ ದೇವರಾಜ ಅರಸು ಅವರು ಶೋಷಿತ ಹಾಗೂ ಹಿಂದುಳಿದ..
ಮಾಜಿ ಮುಖ್ಯಮಂತ್ರಿ ದಿವಂಗತ ದೇವರಾಜ ಅರಸು ಅವರು ಶೋಷಿತ ಹಾಗೂ ಹಿಂದುಳಿದ ವರ್ಗಗಳ ಹರಿಕಾರ ಎಂದೇ ಹೆಸರಾದವರು. ಅವರ ಹೆಸರು ಹಾಗೂ ಅವರ ಹೆಸರಿನ ಮುಂದಿರುವ 'ಉಪಮೇಯ'ಗಳನ್ನು ಅಪಹರಿಸುವ ಭರದಲ್ಲಿ ಹಾಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಪಘಾತದ ಅವಕಾಶಗಳನ್ನು ಅನಾವರಣಗೊಳಿಸಿಕೊಳ್ಳುತ್ತಿದ್ದಾರೆ.
ಕರ್ನಾಟಕದ 22ನೇ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅವರು ಪ್ರಮಾಣ ಸ್ವೀಕಾರ ಮಾಡಿದ್ದು ಮೇ 13ರಂದು. ಸಂಪುಟ ವಿಸ್ತರಣೆಯಾದದ್ದು ಮೇ 18ರಂದು. ಈ ಎರಡರ ನಡುವಣ ಐದು ದಿನಗಳ ಅವಧಿಯಲ್ಲಿ ಸಿದ್ದರಾಮಯ್ಯನವರ ಮೈಗೆ ಎಣ್ಣೆ ಹಚ್ಚಿಕೊಂಡಂತಹ ನಡೆ, ತಾವರೆ ಎಲೆ ಮೇಲಿನ ನೀರಿನ ಹನಿಯಂತಹನಿಲುವು, ಅತಿಯಾದ ಬುದ್ಧಿವಂತಿಕೆ ಪ್ರಯೋಗ ಅಪಘಾತದ ಅವಕಾಶಗಳ ಸಾಧ್ಯತೆಗಳನ್ನು ಪುಷ್ಠೀಕರಿಸುತ್ತಿವೆ.
ಮೇ 13ರಂದು ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯನವರು ಏಕಾಂಗಿಯಾಗಿ ಪ್ರಮಾಣವಚನ ಸ್ವೀಕರಿಸಿದ ದಿನ ಬಡವರಿಗೆ ಕೆಜಿಗೆ ಒಂದು ರುಪಾಯಿ ಅಕ್ಕಿಯಂತೆ ತಿಂಗಳಿಗೆ 30 ಕೆ.ಜಿ. ಅಕ್ಕಿ ಪೂರೈಕೆ ಸೇರಿದಂತೆ ಒಟ್ಟು ಆರು ಯೋಜನೆಗಳನ್ನು ಪ್ರಕಟಿಸಿದರು. ಬಡವರು ಹಾಗೂ ಶೋಷಿತ ವರ್ಗಗಳ ಕಲ್ಯಾಣ ಉದ್ದೇಶದ ಈ ಯೋಜನೆಗಳು ಸ್ವಾಗತಾರ್ಹ ಹಾಗೂ ಬೇರೆಯವರಿಗೂ ಅನುಕರಣೀಯ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ, ರಾಜ್ಯ ಬೊಕ್ಕಸದ ಮೇಲೆ 4410 ಕೋಟಿ ಹೊರೆ ತರುವ ಈ ಯೋಜನೆಗಳನ್ನು ಪ್ರಕಟಿಸುವಾಗ ಯಾರೊಬ್ಬರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳದೆ ಏಕಾಂಗಿ ತೀರ್ಮಾನಕ್ಕೆ ಆದ್ಯತೆ ನೀಡಿದ್ದು ಗಮನಾರ್ಹ ಬೆಳವಣಿಗೆ. ಅದೇ ರೀತಿ ಸಂಪುಟದ ವಿಸ್ತರಣೆ ಹಾಗೂ ಖಾತೆ ಹಂಚಿಕೆಯಲ್ಲಿ ಪೂರ್ವಾಗ್ರಹ ಚಿಂತನೆಗಳಿಗೆ ಆಸ್ಪದ ನೀಡಿರುವುದು ಕೂಡ ಆರಂಭದಲ್ಲಿಯೇ ಅಸಮಾಧಾನದ ಹೊಗೆ ಎಬ್ಬಿಸಿದೆ.
ಪ್ರಜಾತಂತ್ರ ವ್ಯವಸ್ಥೆಯಲ್ಲಿ ಶಾಸನ ಸಭೆಗೆ ಅತ್ಯುನ್ನತ ಸ್ಥಾನಮಾನವಿದೆ. ಯಾರೇ ಮುಖ್ಯಮಂತ್ರಿಯಾದರೂ ವಿಧಾನ ಮಂಡಲದ ಉಭಯ ಸದನಗಳ ಜಂಟಿ ಅಧಿವೇಶನದಲ್ಲಿ ರಾಜ್ಯಪಾಲರ ಭಾಷಣದ ಮೂಲಕ ರಾಜ್ಯ ಸರ್ಕಾರದ ಗುರಿ ಹಾಗೂ ದ್ಯೇಯೋದ್ದೇಶಗಳನ್ನು ಜನರಿಗೆ ಮುಟ್ಟಿಸಲಾಗುತ್ತದೆ. ಸಾಮಾನ್ಯವಾಗಿ ಆ ಭಾಷಣದಲ್ಲಿ ಆಡಳಿತಾರೂಢ ಪಕ್ಷದ ಚುನಾವಣಾ ಪ್ರಣಾಳಿಕೆಯಲ್ಲಿನ ಅಂಶಗಳು ಹೆಚ್ಚಾಗಿ ಪ್ರತಿಫಲಿಸುತ್ತವೆ. ರಾಜ್ಯಪಾಲರ ಭಾಷಣದಲ್ಲಿ ಅಡಕವಾಗಬೇಕಾದ ಅಂಶಗಳ ಬಗ್ಗೆ ಮುಖ್ಯಮಂತ್ರಿಯಾದವರು ಮೊದಲು ಸಚಿವ ಸಂಪುಟ ಸಭೆಯಲ್ಲಿ ಸಹೋದ್ಯೋಗಿಗಳ ಜತೆಗೆ ಕುಳಿತು ತೀರ್ಮಾನ ತೆಗೆದುಕೊಳ್ಳುವುದು ವಾಡಿಕೆ. ಸರ್ಕಾರ ಯಾವುದೇ ಇರಲಿ, ಆಡಳಿತ ಪಕ್ಷ ಯಾವುದೇ ಆಗಿರಲಿ, ಇದು ನಡೆದು ಬಂದ ಸಂಪ್ರದಾಯ.
ಹಿಂದೆ ದೇವರಾಜ ಅರಸು ಅವರು ಹಾವನೂರು ಆಯೋಗದ ವರದಿ ಆಧರಿಸಿ ಹಿಂದುಳಿದ ವರ್ಗಗಳಿಗೆ ಮೀಸಲು ಸೌಲಭ್ಯ ಕಲ್ಪಿಸುವಾಗಲಾಗಲೀ, ಭೂ ಸುಧಾರಣೆ ಕಾಯ್ದೆಗೆ ತಿದ್ದುಪಡಿ ತಂದು ಅದರನ್ವಯ ಉಳುವವನಿಗೆ ಭೂಮಿಯ ಒಡೆತನ ಕೊಟ್ಟಾಗಲಾಗಲೀ ಏಕಾಂಗಿ ತೀರ್ಮಾನ ತೆಗೆದುಕೊಂಡವರಲ್ಲ. ಸಂಬಂಧಪಟ್ಟ ಖಾತೆಯ ಸಚಿವರನ್ನು ಪಕ್ಕದಲ್ಲಿ ಇಟ್ಟುಕೊಂಡೇ ಸಂಪುಟ ಸಭೆಯಲ್ಲಿ ಹತ್ತಾರು ಬಾರಿ ವಿಸ್ತೃತವಾಗಿ ಚರ್ಚೆ ನಡೆಸಿ, ಸಾದಕ- ಬಾಧಕಗಳನ್ನು ಕೂಲಂಕಷವಾಗಿ ಪರಾಮರ್ಶಿಸಿದ ನಂತರ ತೀರ್ಮಾನ ತೆಗೆದುಕೊಂಡಿದ್ದರು. ಆ ತೀರ್ಮಾನ ಸಹ ಸಚಿವ ಸಂಪುಟದ್ದೇ ಆಗಿತ್ತೇ ಹೊರತು ಮುಖ್ಯಮಂತ್ರಿಯಾಗಿದ್ದರೂ ತಮ್ಮ ಪರಮಾಧಿಕಾರ ಬಳಸಿ ತೆಗೆದುಕೊಂಡ ತೀರ್ಮಾನವಲ್ಲ. ಸಿದ್ದರಾಮಯ್ಯನವರು ಏಕಾಂಗಿಯಾಗಿ ಯೋಜನೆಗಳನ್ನು ಪ್ರಕಟಿಸುವ ಬದಲು ಕೊಂಚ ತಾಳ್ಮೆ ವಹಿಸಿ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ತೆಗೆದುಕೊಂಡಿದ್ದರೆ ಸಹೋದ್ಯೋಗಿಗಳ ಜತೆಗಿನ ವಿಶ್ವಾಸದ ಮಟ್ಟ ಹಾಗೂ ಘನತೆಯೂ ಹೆಚ್ಚುತ್ತಿತ್ತು. ಜತೆಗೆ ಸಿದ್ದರಾಮಯ್ಯನವರು ಈ ಯೋಜನೆಗಳ ಪ್ರಕಟಣೆಯ ಕೀರ್ತಿಯನ್ನು ತಾವೊಬ್ಬರೇ ಅಪಹರಿಸಲು ಯತ್ನಿಸಿದರು ಎಂಬ ಆಪಾದನೆಗಳಿಂದಲೂ ತಪ್ಪಿಸಿಕೊಳ್ಳಬಹುದಿತ್ತು. ಪಕ್ಷಕ್ಕಾಗಲೀ ಅಥವಾ ಸಂಪುಟದ ಸಹೋದ್ಯೋಗಿಗಳಿಗಾಗಲೀ ಈ ಕೀರ್ತಿ ಹಂಚಲು ಇಷ್ಟವಿಲ್ಲದೆ ತರಾತುರಿಯಲ್ಲಿ ಕೆಲಸ ಮಾಡಿದ್ದಾರೆ ಎಂಬ ಆರೋಪ ಇದೀಗ ಸಿದ್ದರಾಮಯ್ಯ ಅವರನ್ನು ಸುತ್ತಿಕೊಂಡಿದೆ.
ಎಲ್ಲಕ್ಕಿಂತ ಮಿಗಿಲಾಗಿ ಮೈಸೂರು ಜಿಲ್ಲೆ ಪಿರಿಯಾಪಟ್ಟಣ ವಿಧಾನಸಭೆ ಕ್ಷೇತ್ರದ ಚುನಾವಣೆ ಮೇ 28ಕ್ಕೆ ನಿಗದಿಯಾಗಿದೆ. ಬಿಜೆಪಿ ಅಭ್ಯರ್ಥಿ ಸಾವಿನಿಂದ ಮುಂದಕ್ಕೆ ಹೋದ ಈ ಚುನಾವಣೆಯ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಜಾರಿಯಲ್ಲಿದೆ. ಚುನಾವಣೆ ಪಿರಿಯಾಪಟ್ಟಣ ವಿಧಾನಸಭೆ ವ್ಯಾಪ್ತಿಗೆ ಮಾತ್ರ ಸೀಮಿತವಾದರೂ ನೀತಿ ಸಂಹಿತೆಯ ತಾಂತ್ರಿಕ ವಿಸ್ತಾರ ಸಿದ್ದರಾಮಯ್ಯನವರು ಘೋಷಿಸಿದ ಈ ಯೋಜನೆಗಳಿಗೂ ಅನ್ವಯವಾಗುತ್ತದೆ.
ಇನ್ನು ಸಂಪುಟ ವಿಸ್ತರಣೆ ಹಾಗೂ ಖಾತೆ ಹಂಚಿಕೆ ಸಂಬಂಧ ಅವರು ನಡೆದುಕೊಂಡ ರೀತಿ ಕೂಡ ಪಕ್ಷದ ಒಳಗೆ ಟೀಕೆ ಹಾಗೂ ಅಸಮಾಧಾನಕ್ಕೆ ಕಾರಣವಾಗಿದೆ. ಮೊದಲಿಗೆ ಅವರು ಕಂಠೀರವ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ಅದ್ದೂರಿ ಸಮಾರಂಭದಲ್ಲಿ ಏಕಾಂಗಿಯಾಗಿ ಪ್ರಮಾಣ ಸ್ವೀಕರಿಸಿದ್ದು ಆಪ್ತ ಬಳಗದ ಶ್ರೀನಿವಾಸ ಪ್ರಸಾದ್ ಅವರಂಥವರನ್ನೇ ಕೆರಳಿಸಿತ್ತು. ಒಂದೈದು ಮಂದಿಗಾದರೂ ಜತೆಯಲ್ಲಿ ಪ್ರಮಾಣ ಸ್ವೀಕರಿಸಲು ಆಸ್ಪದ ಮಾಡಿಕೊಡಬೇಕಿತ್ತು ಎಂಬ ಟೀಕೆ, ಐದೇ ದಿನದಲ್ಲಿ ಸಂಪುಟ ವಿಸ್ತರಣೆಯಾಗುವಂತೆ ಮಾಡಿದ್ದು ಕಾಕತಾಳೀಯವೇನಲ್ಲ. ಅದೇ ರೀತಿ ಸಂಪುಟಕ್ಕೆ ಯಾರ್ಯಾರನ್ನು ತೆಗೆದುಕೊಳ್ಳಬೇಕು ಎಂಬ ಬಗ್ಗೆ ಅವರು ಮೊದಲಿಗೆ ತಾಳಿದ ನಿರ್ವಿಕಾರ ನಿಲುವು ಸಹ ಕರ್ನಾಟಕದಲ್ಲಿ ಪಕ್ಷದ ಉಸ್ತುವಾರಿ ವಹಿಸಿದ್ದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಮಧುಸೂಧನ ಮಿಸ್ತ್ರಿ ಅವರಂಥವರನ್ನೇ ಕೆರಳಿಸಿತ್ತು. ಶ್ರೀನಿವಾಸಪ್ರಸಾದ್, ಮಹದೇವ ಪ್ರಸಾದ್ ಮತ್ತು ಮಹದೇವಪ್ಪ ಈ ಮೂವರೂ ನನ್ನ ಕೋಟಾ, ಉಳಿದ ಎಲ್ಲರನ್ನೂ ನೀವೇ ಆಯ್ಕೆ ಮಾಡಿ. ನನ್ನದೇನೂ ಅಭ್ಯಂತರವಿಲ್ಲ ಎಂದು ಸಿದ್ದರಾಮಯ್ಯ ಸಂಪುಟ ವಿಸ್ತರಣೆ ಜವಾಬ್ದಾರಿಯನ್ನು ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ ಹಾಗೂ ಮಧುಸೂಧನ್ ಮಿಸ್ತ್ರಿ ಅವರ ಹೆಗಲಿಗೆ ಹೊರಿಸಲು ನೋಡಿದರಂತೆ. ಸುಮ್ಮನೆ ಏಕೆ ವಿವಾದ ಸೃಷ್ಟಿಸಿಕೊಳ್ಳುವುದು. ಒಂದೊಮ್ಮೆ ವಿವಾದ ಹುಟ್ಟಿದರೆ ಅದನ್ನು ಪರಮೇಶ್ವರ ಹಾಗೂ ಹೈಕಮಾಂಡ್ ತಲೆಗೆ ಕಟ್ಟಬಹುದು ಎಂಬುದು ಸಿದ್ದರಾಮಯ್ಯ ಅವರ ಚಿಂತನೆಯಾಗಿತ್ತು. ಆದರೆ, ಮುಖ್ಯಮಂತ್ರಿಯನ್ನು ಹೊರಗಿಟ್ಟು ಸಂಪುಟ ವಿಸ್ತರಣೆ ಮಾಡುವುದು ಕಾಂಗ್ರೆಸ್ ಪರಂಪರೆಯಲ್ಲ. ನೀವೂ ಕೂಡ ಆ ಜವಾಬ್ದಾರಿಗೆ ಬಾದ್ಯಸ್ಥರಾಗಬೇಕು ಎಂದು ಮಿಸ್ತ್ರಿ ಕಟ್ಟುನಿಟ್ಟಾಗಿ ಹೇಳಿದ ನಂತರ ಸಿದ್ದರಾಮಯ್ಯ ಒಲ್ಲದ ಮನಸ್ಸಿನಿಂದಲೇ ಸಚಿವರ ಪಟ್ಟಿಯನ್ನು ಸಿದ್ಧಪಡಿಸಿದ್ದಾರೆ.
ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಸಿದ್ದರಾಮಯ್ಯ ಬಹಳ ಜಾಣ್ಮೆಯಿಂದ ವರ್ತಿಸಿದ್ದಾರೆ. ತಾವು ಪ್ರತಿನಿಧಿಸುವ ಕುರುಬ ಸಮುದಾಯದ ಯಾರೊಬ್ಬರನ್ನೂ ಸಂಪುಟಕ್ಕೆ ಬಿಟ್ಟುಕೊಂಡಿಲ್ಲ. ಇದರಿಂದ ಮುನಿದ ಸಮುದಾಯದ ಮುಖಂಡರನ್ನು, ಮುಖ್ಯಮಂತ್ರಿಯಾಗಿ ತಾವೇ ಇರುವಾಗ ಬೇರೆ ಸ್ಥಾನದ ಮಾತೇಕೆ ಎಂದು ಬಾಯಿ ಮುಚ್ಚಿಸಿದ್ದಾರೆ. ಆದರೆ, ಇಲ್ಲೂ ಒಂದು ಬುದ್ಧಿವಂತಿಕೆ ಇದೆ. ಬಹುತೇಕ ಸಚಿವ ಸ್ಥಾನಗಳು ತಾವು ಪ್ರತಿಪಾದಿಸುತ್ತಾ ಬಂದಿರುವ ಅಹಿಂದ (ಅಲ್ಪಸಂಖ್ಯಾತ, ಹಿಂದುಳಿದ, ದಲಿತ) ವರ್ಗಗಳಿಗೆ ಸಿಗುವಂತೆ ನೋಡಿಕೊಂಡಿದ್ದಾರೆ. ಯಾರಾದರೂ ಕೇಳಿದರೆ ತಾವೇನೂ ತಮ್ಮ ಸಮುದಾಯಕ್ಕೆ (ಕುರುಬ) ಸಚಿವ ಸ್ಥಾನ ಕೊಟ್ಟುಕೊಂಡಿಲ್ಲ ಎಂಬ ಸಬೂಬು ಇದ್ದೇ ಇದೆ.
ತಮಗೆ ಆಗದವರನ್ನು ವ್ಯವಸ್ಥಿತ ರೀತಿಯಲ್ಲಿ ಸಂಪುಟದಿಂದ ಹೊರಗಿಟ್ಟಿದ್ದಾರೆ. ಚುನಾವಣೆಯಲ್ಲಿ ಸೋತಿದ್ದರೂ ಉಪಮುಖ್ಯಮಂತ್ರಿ ಸ್ಥಾನಕ್ಕೆ ಹಪಹಪಿಸುತ್ತಿದ್ದ ಡಾ.ಜಿ. ಪರಮೇಶ್ವರ ಅವರಿಗೆ ಚಳ್ಳೇಹಣ್ಣು ತಿನ್ನಿಸಿದ್ದಾರೆ. ಉಪಮುಖ್ಯಮಂತ್ರಿ ಹುದ್ದೆಯೇ ಸೃಷ್ಟಿಯಾಗದಂತೆ ನೋಡಿಕೊಡಿದ್ದಾರೆ. ಅದೇರೀತಿ ಕಳಂಕಿತರಿಗೆ ಸ್ಥಾನ ಇಲ್ಲ ಎಂಬ ಸೂತ್ರದ ಆಧಾರದ ಮೇರೆಗೆ ಡಿ.ಕೆ. ಶಿವಕುಮಾರ್, ರಮೇಶ್‌ಕುಮಾರ್, ರೋಷನ್ ಬೇಗ್, ಡಿ.ಬಿ. ಇನಾಂದಾರ್, ಅನಿಲ್ ಲಾಡ್ ಮೊದಲಾದವರಿಗೆ ಮಂತ್ರಿ ಹುದ್ದೆ ಸಿಗದಂತೆ ನೋಡಿಕೊಂಡಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ಸಿದ್ದರಾಮಯ್ಯನವರ ವಕ್ರದೃಷ್ಟಿಗೆ ಸಿಕ್ಕಿರುವವರ ಪೈಕಿ ಬಹುತೇಕ ಮಂದಿ ಮೂಲ ಕಾಂಗ್ರೆಸಿಗರು. ಕಾಗೋಡು ತಿಮ್ಮಪ್ಪ, ಡಾ.ಎ.ಬಿ. ಮಾಲಕರೆಡ್ಡಿ, ಮಾಲಿಕಯ್ಯ ಗುತ್ತೇದಾರ್, ಎ. ಮಂಜು ಅಸಮಾಧಾನ ವ್ಯಕ್ತಪಡಿಸಿದ್ದು ವಲಸಿಗರು ಮತ್ತು ಮೂಲ ಕಾಂಗ್ರೆಸಿಗರ ನಡುವಿನ ಕಂದಕವನ್ನು ಮತ್ತಷ್ಟು ವೃದ್ಧಿಸಿದೆ.
ಇದರ ಜತೆಗೆ ಖಾತೆ ಹಂಚಿಕೆ ಸಂದರ್ಭದಲ್ಲಿ ಸಿದ್ದರಾಮಯ್ಯ ಇನ್ನೊಂದು ನಾಜೂಕಿನ ಕೆಲಸ ಮಾಡಿದ್ದಾರೆ. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವ ಪೂರ್ವದಲ್ಲಿ ಕಾಂಗ್ರೆಸ್ ಹಾಗೂ ಜನತಾ ಪರಿವಾರದವರು ಪಾಲಿಸುತ್ತಿದ್ದ ಸಂಪುಟ ದರ್ಜೆ ಹಾಗೂ ರಾಜ್ಯ ದರ್ಜೆ ಎಂಬ ಪ್ರತ್ಯೇಕ ವಿಭಾಗ ಸೃಷ್ಟಿಸಿದ್ದಾರೆ. ಹೊಸದಾಗಿ ಸಂಪುಟಕ್ಕೆ ಸೇರಿದವರಿಗೆ ಅನುಭವದ ಕೊರತೆ ಇರುತ್ತದೆ. ಹೀಗಾಗಿ ಅಂಥವರನ್ನು ರಾಜ್ಯ ಸಚಿವರಾಗಿ ಮಾಡಿ ಆಡಳಿತಾತ್ಮಕ ಅನುಭವವನ್ನು ಧಾರೆ ಎರೆಯಬಹುದು ಎಂಬ ವಾದ ಮುಂದಿಟ್ಟಿದ್ದಾರೆ. ಆದರೆ ಮೂಲ ಕಾಂಗ್ರೆಸಿನಿಂದ ಗೆದ್ದು ಬಂದವರ ಪೈಕಿ ಹೆಚ್ಚಿನವರನ್ನು ಈ ಸ್ವತಂತ್ರ ಖಾತೆ ಪಟ್ಟಿಯಲ್ಲಿ ಸೇರಿಸಿಬಿಟ್ಟಿದ್ದಾರೆ. ದಿನೇಶ್ ಗುಂಡೂರಾವ್, ಅಭಯಚಂದ್ರ ಜೈನ್, ಶರಣಪ್ರಕಾಶ್ ಪಾಟೀಲ್, ಪರಮೇಶ್ವರ ನಾಯ್ಕ್ ಅವರಿಗೆ ಸಚಿವರಾಗುವ ಅವಕಾಶ ದೊರೆತರೂ ಸಂಪುಟ ದರ್ಜೆ ಸ್ಥಾನಮಾನವಿಲ್ಲ.
ಆಡಳಿತದ ಪಾಠ ಹೇಳಿಕೊಡುತ್ತೇನೆ ಎಂದು ಮೂಗಿಗೆ ತುಪ್ಪಬಳಿದು, ಇವರು ನೀಡಿರುವ ಆಹಾರ ಮತ್ತು ನಾಗರಿಕ ಪೂರೈಕೆ, ಪ್ರಾಥಮಿಕ ಶಿಕ್ಷಣ, ವೈದ್ಯ ಶಿಕ್ಷಣದಂಥ ಖಾತೆಗಳ ಮೇಲೆ ಸಿದ್ದರಾಮಯ್ಯ ಪರೋಕ್ಷ ಹಿಡಿತ ಸಾಧಿಸಿದ್ದಾರೆ. ಜತೆಗೆ ಮೂಲ ಕಾಂಗ್ರೆಸ್‌ನ ಹಿರಿಯ ಮುಖಂಡರಾದ ಎಚ್.ಕೆ.ಪಾಟೀಲ್, ಟಿ.ಬಿ.ಜಯಚಂದ್ರ, ತಮಗಿಂತ ಮೊದಲು ಕಾಂಗ್ರೆಸ್ ಸೇರಿದ ಆರ್.ವಿ.ದೇಶಪಾಂಡೆ, ಅಂಬರೀಷ್ ಮೊದಲಾದವರಿಗೆ ಅಷ್ಟೊಂದು ಪ್ರಮುಖವಲ್ಲದ ಖಾತೆಗಳನ್ನು ಬಿಟ್ಟಿದ್ದಾರೆ. ಇಂಧನ, ಹಣಕಾಸು, ಗಣಿಗಾರಿಕೆ, ಬೆಂಗಳೂರು ಅಭಿವೃದ್ಧಿ, ಬೃಹತ್ ಕೈಗಾರಿಕೆಯಂಥ ಖಾತೆಗಳನ್ನು ತಮ್ಮ ಬಳಿಯೇ ಉಳಿಸಿಕೊಳ್ಳುವ ಮೂಲಕ ನೇರವಾಗಿ ಅಧಿಕಾರ ತಮ್ಮೊಬ್ಬರ ಬಳಿ ಕೇಂದ್ರೀಕೃತಗೊಳ್ಳುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ಖಾತೆ ಹಂಚಿಕೆ ಸಂದರ್ಭದಲ್ಲಿ ಶಾಸನಸಭೆಗೆ ಆಯ್ಕೆಗೊಳ್ಳದ ಕೆಲ ವ್ಯಕ್ತಿಗಳ ಸಲಹೆಯನ್ನೇ ಪ್ರಮಾಣವಾಗಿ ಪಾಲಿಸಿದ್ದು, ಪಕ್ಷದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಸಂಪುಟ ವಿಸ್ತರಣೆ ಬೆನ್ನಲ್ಲೇ ಬಹಿರಂಗವಾಗಿ ಬುಗಿಲೆದ್ದ ಅಸಮಾಧಾನ ಸಣ್ಣದೇನಲ್ಲ. ಪ್ರಾತಿನಿಧ್ಯ ವಂಚಿತರಾದವರ ಬೆಂಬಲಿಗರು ರಾಜ್ಯದ ಹತ್ತು ಜಿಲ್ಲೆಗಳಲ್ಲಿ ನಿರಂತರ ಪ್ರತಿಭಟನೆ ನಡೆಸುತ್ತಿದ್ದಾರೆ. ಯಾರದ್ದೋ ಹಿತಾಸಕ್ತಿ ಕಾಯುವುದಕ್ಕಾಗಿ ವಿಧಾನ ಪರಿಷತ್ ಸದಸ್ಯರನ್ನು ಸಂಪುಟದಿಂದ ಹೊರಗಿಟ್ಟುರುವುದು ಕೂಡಾ ಮೂಲ ಕಾಂಗ್ರೆಸಿಗರ ಕಣ್ಣು ಕೆಂಪಗಾಗಿಸಿದೆ. ಮೇಲ್ನೋಟಕ್ಕೆ ಸಣ್ಣದಾಗಿ ಕಂಡರೂ, ಸಚಿವರ ಪ್ರಮಾಣ ವಚನ ಕಾರ್ಯಕ್ರಮಕ್ಕೆ ತಡವಾಗಿ ಬಂದು, ಬೇಗ ನಿರ್ಗಮಿಸಿದ ಜಿ.ಪರಮೇಶ್ವರ ಅವರು, ಡಿ.ಕೆ.ಶಿವಕುಮಾರ್ ಪರವಾಗಿ ಪ್ರತಿಭಟನೆ ನಡೆಸುತ್ತಿದ್ದವರಿಗೆ ಬಹಿರಂಗ ಬೆಂಬಲ ವ್ಯಕ್ತಪಡಿಸಿದ್ದಾರೆ. ಅವರ ಹೇಳಿಕೆ ಅತೃಪ್ತಿಯ ಆಯಾಮ ಸಣ್ಣದಲ್ಲ ಎಂಬುದನ್ನು ಪ್ರತಿಧ್ವನಿಸಿದೆ.
ಅಂದ ಹಾಗೆ ಹೈಕಮಾಂಡ್ ಸಿದ್ದರಾಮಯ್ಯನವರ ಮೇಲೆ ವಿಶ್ವಾಸವಿಟ್ಟಿದೆ. ಅದು ಸದ್ಯದಲ್ಲೇ ಎದುರಾಗುವ ಲೋಕಸಭಾ ಚುನಾವಣೆ ದೃಷ್ಟಿಯಿಂದ. ಅವರ ಮೇಲೆ ಇರುವ ಜವಾಬ್ದಾರಿಯ ನೊಗಕ್ಕೆ ಭಾರ ಜಾಸ್ತಿ. ಹೆಜ್ಜೆ ಇಡುವಾಗಲೂ ಆಯತಪ್ಪ ಕೂಡದು. ಆದರೆ ಸಿಎಂ ಸಿದ್ದರಾಮಯ್ಯ ಮೂಲ ಕಾಂಗ್ರೆಸ್ಸಿಗರನ್ನು ಪಕ್ಕಕ್ಕಿಟ್ಟು ಅತಿ ವೇಗದಲ್ಲಿ ದೌಡಾಯಿಸುತ್ತಿದ್ದಾರೆ. ಇವರೆಲ್ಲರ ಅಸಮಾಧಾನ ಗುಪ್ತಗಾಮಿನಿಯಂತೆ ಪಸರಿಸುತ್ತಿದೆ. ಹೆಚ್ಚಿನ ಸಂದರ್ಭದಲ್ಲಿ ಅವಸರವೇ 'ಅಪಘಾತ'ಕ್ಕೆ ಕಾರಣವಾಗುತ್ತದೆ ಎಂಬುದನ್ನು ಮರೆಯುವಂತಿಲ್ಲ.
- ಪಿ. ತ್ಯಾಗರಾಜ್
thyagarjun@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

