ಅಂಕಣಗಳು

ಬಾಜಿ ಕಟ್ಟಲೆಂದೇ ಬಂತೇ ಐಪಿಎಲ್?

Published On :

ವಿಶ್ವವನ್ನೇ ತನ್ನತ್ತ ಸೆಳೆದ ಲಂಡನ್ ಒಲಿಂಪಿಕ್ಸ್ ನಡೆದದ್ದು ಕೇವಲ 16 ದಿನ.  ಇನ್ನು ಸದಾ ಕಾತರದಲ್ಲಿಡುವ ವಿಂಬಲ್ಡನ್ ಮುಗಿಯಲಿಕ್ಕೆ ಎರಡು ವಾರಗಳು ಸಾಕು.  ಆದರೆ ಕ್ರಿಕೆಟ್‌ನ ಕೂಸು ಇಂಡಿಯನ್ ಪ್ರೀಮಿಯರ್ ಲೀಗ್ ಏಪ್ರಿಲ್ 03ರಂದು ಆರಂಭವಾಗಿ ಮುಕ್ತಾಯವಾಗುವುದು ಮೇ 26ರಂದು.  ಅಂದರೆ 54 ದಿನಗಳು! ಹಣ ಗಳಿಕೆಯನ್ನಷ್ಟೇ ಮೂಲವಾಗಿಟ್ಟುಕೊಂಡು ನಡೆಯುವ ಈ ಪಂದ್ಯಾವಳಿ ನೈಜ ಕ್ರಿಕೆಟ್‌ನ ಅವಸಾನಕ್ಕೆ ಮುನ್ನುಡಿ ಬರೆಯುತ್ತಿದೆ.
ಭಾರತದಲ್ಲಿ ಕ್ರಿಕೆಟ್ ಎಂದರೆ ಧರ್ಮವಿದ್ದಂತೆ, ಸಚಿನ್ ಕ್ರಿಕೆಟ್‌ನ ದೇವರು ಎಂಬ ಉತ್ಪ್ರೇಕ್ಷೆಯ ಮಾತುಗಳು ಕೇಳಿಬರುತ್ತವೆ.  ಜೊತೆಗೆ ಕ್ರಿಕೆಟ್ ಸೋಮಾರಿತನದ ಆಟವೆಂಬ ಟೀಕೆಯೂ ಸಿಗುತ್ತದೆ. ಇದೀಗ ಐಪಿಎಲ್‌ನಲ್ಲಿನ ಬೆಟ್ಟಿಂಗ್ ಭೂತ ಕಾಲೇಜು ವಿದ್ಯಾರ್ಥಿಗಳು, ತಿಂಗಳಿಗೆ ನಾಲ್ಕೈದು ಸಾವಿರ ದುಡಿಯುವವರಿಂದ ಹಿಡಿದು ಕೋಟ್ಯಂತರ ರುಪಾಯಿ ವ್ಯವಹಾರಸ್ಥರಿಗೂ ಉದ್ಯೋಗ(?) ಸೃಷ್ಟಿಸಿದಂತಿದೆ.   
ದಶಕಗಳ ಹಿಂದೆ ಮ್ಯಾಚ್ ಫಿಕ್ಸಿಂಗ್ ಎಬ್ಬಿಸಿದ್ದ ಹಾವಳಿ ಇನ್ನು ಉಳಿದಿರುವಾಗಲೇ, ಈ ಸ್ಪಾಟ್ ಫಿಕ್ಸಿಂಗ್ ಎನ್ನುವ ಅತಿ ವೇಗದ ಮೋಸದಾಟ ಕ್ರಿಕೆಟ್ ವಲಯದಲ್ಲಿ ತಲ್ಲಣವನ್ನೆಬ್ಬಿಸಿದೆ. ಇಡೀ ಪಂದ್ಯ ಅಥವಾ ಪಂದ್ಯದ ಫಲಿತಾಂಶದ ಮೇಲೆ ಪ್ರಭಾವ ಬೀರುವುದು ಮ್ಯಾಚ್ ಫಿಕ್ಸಿಂಗ್.  ಸ್ಪಾಟ್ ಫಿಕ್ಸಿಂಗ್ ಎಂದರೆ ಒಬ್ಬ ಆಟಗಾರನಿಗೆ ಪಂದ್ಯದ ಯಾವುದೊ ಒಂದು ನಿಗದಿತ ಓವರ್‌ನಲ್ಲಿ ವೈಡ್ ಅಥವಾ ನೋಬಾಲ್ ಎಸೆಯಲು ಒಪ್ಪಿಸುವುದು. ಮೊದಲನೆಯದ್ದರಲ್ಲಿ ಹೆಚ್ಚಿನ ಆಟಗಾರರನ್ನು ಬುಕ್ ಮಾಡಬೇಕಾಗುತ್ತದೆ.  ಆದರೆ ಸ್ಪಾಟ್ ಫಿಕ್ಸಿಂಗ್‌ನಲ್ಲಿ ಒಬ್ಬ ಆಟಗಾರ ಬುಕ್ ಆದರೂ ಸಾಕು ಬೆಟ್ಟಿಂಗ್ ದಂಧೆ ಸುಲಲಿತ. 2010ರಲ್ಲಿ ನಡೆದ ಇಂಗ್ಲೆಂಡ್ ಪಾಕಿಸ್ತಾನ ಪಂದ್ಯ ಮೋಸದಾಟದ ಕಂಬಂಧ ಬಾಹುಗಳನ್ನು ತೆರೆದಿಟ್ಟಿತು. ಮೋಸದಾಟಕ್ಕೆ ಸಹಕರಿಸಿ ಜೈಲು ಶಿಕ್ಷೆಗೆ ಗುರಿಯಾದ ಸಲ್ಮಾನ್ ಬಟ್, ಮಹಮ್ಮದ್ ಅಮೀರ್ ಮತ್ತು ಮಹಮ್ಮದ್ ಆಸೀಫ್ ಅಜೀವ ನಿಷೇಧಕ್ಕೊಳಗಾಗಿದ್ದಾರೆ.  ಕಳೆದ ಬಾರಿಯ ಐಪಿಎಲ್‌ನಲ್ಲಿ ವಿವಾದದ ಅಲೆಯನ್ನೇ ಎಬ್ಬಿಸಿದ್ದ ಮೋಹಿನಿಷ್ ಮಿಶ್ರಾ, ಟಿ.ಪಿ.ಸುಧೀಂದ್ರ, ಶಲಭ್ ಶ್ರೀವಾಸ್ತವ್, ಅಮಿತ್ ಯಾದವ್ ಮತ್ತು ಅಭಿನವ್ ಬಾಲಿಯವರ ಪ್ರಕರಣ ಇನ್ನೂ ಕಣ್ಣಿಗೆ ಕಟ್ಟಿದಂತಿದೆ. ಸ್ವಲ್ಪ ಹಿಂದಕ್ಕೆ ಹೋದರೆ, ಪಾಕಿಸ್ತಾನದ ಸಲೀಮ್ ಮಲಿಕ್, ದಕ್ಷಿಣ ಆಫ್ರಿಕಾದ ಹ್ಯಾನ್ಸಿ ಕ್ರೋನಿಯೇ, ಭಾರತದ ಮಹಮ್ಮದ್ ಅಜರುದ್ದೀನ್‌ಗೆ ಅಜೀವ ನಿಷೇಧ, ಅಜಯ್ ಜಡೇಜಾಗೆ ಐದು ವರ್ಷಗಳು, ಹರ್ಶಲ್ ಗಿಬ್ಸ್‌ಗೆ 6 ತಿಂಗಳು ಸೇರಿದಂತೆ 22ಕ್ಕೂ ಹೆಚ್ಚು ಆಟಗಾರರು ನಿಷೇಧಕ್ಕೆ ಗುರಿಯಾಗಿದ್ದಾರೆ.  ಇದರಲ್ಲಿ ಸಿಂಹಪಾಲು ಭಾರತ ಮತ್ತು ಪಾಕಿಸ್ತಾನಿಯರದ್ದು ಎಂಬುದೇ ವಿಷಾದನೀಯ. ಕ್ರಿಕೆಟ್‌ನಲ್ಲಿ ಬೆಟ್ಟಿಂಗ್ ದಂಧೆಯ ಕರಾಳ ಮುಖ ಹೊರಬರುತ್ತಿರುವುದು ಪ್ರತಿ ಕ್ರಿಕೆಟ್ ಪಂದ್ಯವನ್ನು ಅನುಮಾನದಿಂದ ನೋಡುವಂತೆ ಮಾಡುತ್ತಿದೆ.  ಹೀಗಿರುವಾಗ ಮತ್ತದೆ ಮೋಸದಾಟಕ್ಕೆ ಸಹಕರಿಸಿದ ಶ್ರೀಶಾಂತ್‌ರಂತಹ ತಿಳಿಗೇಡಿಗಳಿಗೆ ಏನನ್ನಬೇಕೋ?
ಐಸಿಸಿಯ ಮಾಜಿ ಅಧ್ಯಕ್ಷ ಎಹಸಾನ್ ಮಣಿಯವರು ಬೆಟ್ಟಿಂಗ್ ದಂಧೆಯನ್ನು ಕಾನೂನಿನಡಿಯಲ್ಲಿ ಮುಕ್ತಗೊಳಿಸಬೇಕೆಂದು ಹೇಳುತ್ತಾರೆ. ಈಗಾಗಲೇ ಬ್ರಿಟನ್ ಮತ್ತು ಆಸ್ಟ್ರೇಲಿಯಾಗಳಲ್ಲಿ ಬೆಟ್ಟಿಂಗ್ ಅನ್ನು ಮುಕ್ತವಾಗಿಸಿದ್ದು, ಅದರ ಸಾಧಕ-ಬಾಧಕಗಳನ್ನು ಪ್ಯಾಟ್ರಿಕ್ ಬಾಷ್ ಮತ್ತು ಕರೆನ್ ವೈಟ್‌ರವರು ತಮ್ಮ 'ಗ್ಯಾಂಬ್ಲಿಂಗ್ ಅವರ್ ಫ್ಯೂಚರ್‌' ಪುಸ್ತಕದಲ್ಲಿ, 'ಬೆಟ್ಟಿಂಗ್ ಅನ್ನು ಕಾನೂನು ಮೂಲಕ ಮುಕ್ತಗೊಳಿಸಿದರೆ, ಆರ್ಥಿಕವಾಗಿ ಸರ್ಕಾರಕ್ಕೆ ತೆರಿಗೆ ಹೆಚ್ಚಾಗಿ ಹಣದ ಹರಿವು ಸರಾಗವಾಗಿರುತ್ತದೆ' ಎಂದು ಬರೆದಿದ್ದಾರೆ. ಆದರಿದು ಭಾರತದಲ್ಲಿ ಸಾಧ್ಯವೇ? ಅಂಥದ್ದೊಂದು ಸಾಧ್ಯತೆ ಕಂಡು ಬಂದರೆ, ಲಾಟರಿ, ಮಟ್ಕಾ, ಒಸಿಯಂತವುಗಳಿಗೂ ಮಾನ್ಯತೆ ನೀಡಬೇಕಾಗುತ್ತದೆ.  ಬೆಟ್ಟಿಂಗ್ ದಂಧೆಗೆ ಕಡಿವಾಣ ಹಾಕಲೇಬೇಕೆಂದಿದ್ದರೆ, ಕಠಿಣ ಕಾನೂನುಗಳು ಜಾರಿಗೆ ಬರಬೇಕು. ಇಂದಿಗೂ ನಮ್ಮಲ್ಲಿ 1867ರ 'ದ ಪಬ್ಲಿಕ್ ಗ್ಯಾಂಬ್ಲಿಂಗ್ ಆ್ಯಕ್ಟ್‌' ಅನ್ನೇ ಅನುಸರಿಸಲಾಗುತ್ತಿದೆ.  ಜೊತೆಗೆ ಒಂದು ಲಕ್ಷ ರುಪಾಯಿ ದಂಡ ಅಥವಾ ಐದು ವರ್ಷ ಜೈಲು ಶಿಕ್ಷೆಯನ್ನು ಹೊಂದಿರುವ ಮಾಹಿತಿ ತಂತ್ರಜ್ಞಾನ ಕಾಯಿದೆ-2000 ಇದರ ಅನುಷ್ಠಾನವು ಹೇಳಿಕೊಳ್ಳುವಂತಿಲ್ಲ. ಗೋವಾ ಮತ್ತು ಸಿಕ್ಕಿಂಗಳಲ್ಲಿ ಬಾಜಿಯ ಕಾನೂನುಗಳು ಸಡಿಲವಾಗಿವೆ. ಬಹುತೇಕ ರಾಜ್ಯಗಳಲ್ಲಿ ಲಾಟರಿ ಸೇರಿದಂತೆ ಬೆಟ್ಟಿಂಗ್, ಮಟ್ಕಾ, ಒಸಿಗಳಿಗೆ ನಿಷೇಧವಿದ್ದರೂ, ರಾಜರೋಷವಾಗಿ ನಡೆಯುತ್ತಿವೆ.
ಐಪಿಎಲ್‌ನಲ್ಲಿ ಎರಡು ತಿಂಗಳುಗಳ ಕಾಲ ಕೋಟ್ಯಂತರ ರುಪಾಯಿ ಹಣದ ವಹಿವಾಟು ನಡೆದರೂ, ಲಾಭ ಯಾರ ಪಾಲು ಎನ್ನುವುದು ನಿಗೂಢವಾಗಿಯೇ ಇರುತ್ತದೆ. ಬೆಟ್ಟಿಂಗ್ ನಡೆಸುವುದೇ ವಿದೇಶಗಳಲ್ಲಿ ಕುಳಿತ ಮಾಫಿಯಾಗಳು. ಐಪಿಎಲ್ ಪ್ರತಿಭಾವಂತರಿಗೆ ಅವಕಾಶ ನೀಡುತ್ತದೆ ಎಂದು ವಾದಿಸುವವರು ಹಲವರಿದ್ದಾರೆ.  ಪ್ರತಿಭೆಗಳನ್ನು ಗುರುತಿಸಲಿಕ್ಕೆ ಐಪಿಎಲ್ ಒಂದೇ ಅಲ್ಲ, ರಣಜಿ, ಇರಾನಿಯಂತಹ ಹಲವು ಟೂರ್ನಿಗಳೂ ಇವೆ.  ಬಿಸಿಸಿಐ, ಐಪಿಎಲ್ ತಂಡಗಳ ಮಾಲೀಕರು ಮತ್ತು ಆಟಗಾರರ ಜೇಬುಗಳನ್ನು ಮಾತ್ರ ತುಂಬಿಸುತ್ತಿರುವ ಐಪಿಎಲ್‌ನಿಂದ ಕ್ರೀಡಾ ಕ್ಷೇತ್ರದಲ್ಲಿ ಏನಾದರೂ ಬದಲಾವಣೆ ಬಯಸಲು ಸಾಧ್ಯವಿದೆಯೇ? ಕೂಲಿ ಕಾರ್ಮಿಕನಿಂದ ಹಿಡಿದು ಉನ್ನತ ಹುದ್ದೆಯಲ್ಲಿರುವವರು ಬೆಂಬಲಿಸಿರುವ ಈ ಐಪಿಎಲ್ ದುಡಿಯುವ ವರ್ಗವನ್ನು, ಯುವಕರನ್ನು, ವಿದ್ಯಾರ್ಥಿಗಳನ್ನು ಸೋಮಾರಿಗಳನ್ನಾಗಿಸುತ್ತಿಲ್ಲವೇ? ಹಣದ ಹರಿವಿನ ಕಾರಣದಿಂದಲೇ ತಾನೇ ಕ್ರಿಕೆಟಿಗರು ದೇಶಕ್ಕಿಂತ ಹಣದ ಕಡೆ ಮುಖ ಮಾಡಿ ಕುಳಿತದ್ದು? ಹಣದ ಮತ್ತಲ್ಲೇ ತೇಲುವ ಬಿಸಿಸಿಐ ಈಗಂತೂ ಯಾರ ನಿಯಂತ್ರಣವನ್ನೂ ಒಪ್ಪುವುದಿಲ್ಲ.
ಭಾರತೀಯ ಕ್ರೀಡಾ ರಂಗದಲ್ಲಿ ಪಾರದರ್ಶಕತೆಯೊಂದಿಗೆ ಇತರ ಉದ್ದೇಶಗಳನ್ನೊಳಗೊಂಡ ರಾಷ್ಟ್ರೀಯ ಕ್ರೀಡಾ ಮಸೂದೆಯನ್ನು ಮಂಡಿಸಲು ಕೇಂದ್ರ ಸರ್ಕಾರ ಮುಂದಾದಾಗ ಇದೇ ಬಿಸಿಸಿಐ ತೀವ್ರ ವಿರೋಧ ವ್ಯಕ್ತಪಡಿಸಿ, ತನ್ನ ಕೇಂದ್ರ ಸ್ಥಾನವನ್ನು ದುಬೈಗೆ ಸ್ಥಳಾಂತರಿಸುವ ದಾಷ್ಟ್ರ್ಯದ ಮಾತನ್ನಾಡಿತ್ತು.  2009ರಲ್ಲಿ ಲೋಕಸಭಾ ಚುನಾವಣೆ ನಡೆಯಬೇಕಿದ್ದರಿಂದ ಭದ್ರತೆ ಮತ್ತು ಇತರೆ ಕಾರಣಗಳಿಗಾಗಿ ಏಪ್ರಿಲ್ ಮೇನಲ್ಲಿ ಐಪಿಎಲ್ ನಡೆಸಲು ಅವಕಾಶ ನೀಡಿರಲಿಲ್ಲ.  ಆದರೆ ಹಣವನ್ನು ಬಿಟ್ಟುಕೊಡಲು ಸಿದ್ಧವಿಲ್ಲದ ಬಿಸಿಸಿಐ, ದಕ್ಷಿಣ ಆಫ್ರಿಕಾಗೆ ಪಂದ್ಯಾವಳಿ ಸ್ಥಳಾಂತರಿಸಿತ್ತು.  ಇದು ಏಪ್ರಿಲ್- ಮೇ ಎರಡೇ ತಿಂಗಳು ಬಿಸಿಸಿಐಗೆ ಸುಗ್ಗಿ ಹಬ್ಬವಿದ್ದಂತೆ ಎಂಬುದನ್ನು ತೋರಿಸಿತ್ತು.  ಕ್ರಿಕೆಟ್ ಅಭಿವೃದ್ಧಿಗಿಂತ ಹಣದ ಹರಿವನ್ನೇ ತನ್ನ ದೈನಂದಿನ ಚಟುವಟಿಕೆಯಂತೆ ಮಾಡಿಕೊಂಡಿರುವ ಬಿಸಿಸಿಐ ಸರ್ಕಾರದ ನಿಯಂತ್ರಣಕ್ಕೊಳಪಡಲು ವಿರೋಧಿಸುತ್ತಲೇ ಇದೆ. ಸರಿ, ಬಿಸಿಸಿಐ ಅನ್ನು ಸ್ವಾಯತ್ತ ಸಂಸ್ಥೆಯೆಂದೇ ಪರಿಗಣಿಸಿ ನಿಯಂತ್ರಣದಿಂದ ಮುಕ್ತಿಕೊಡಲು ಅದೇನಾದರೂ ಕ್ರಿಕೆಟ್ ಬೆಳವಣಿಗೆಗೆ ಇನ್ನಿಲ್ಲದ ಪ್ರಯತ್ನವನ್ನೇನಾದರೂ ಮಾಡಿದೆಯೇ ಅಥವಾ ಭಾರತದಲ್ಲಿರುವ ಅದೆಷ್ಟು ಕ್ರಿಕೆಟ್ ಕ್ರೀಡಾಂಗಣಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಗುಣಮಟ್ಟಕ್ಕೇರಿವೆ.
ಕ್ರೀಡಾ ಮಸೂದೆಯ ಮೂಲಕವಾದರೂ, ಬಿಸಿಸಿಐ ಅನ್ನು ನಿಯಂತ್ರಣಕ್ಕೆ ತಂದು ಅದರ ಮೇಲೆ ಪಾರದರ್ಶಕತೆಯ ಬೆಳಕು ಚೆಲ್ಲಿದರೆ ಮಾತ್ರ ಕ್ರಿಕೆಟ್‌ನಲ್ಲಿ ನಡೆಯುತ್ತಿರುವ ರಾದ್ಧಾಂತಗಳನ್ನು ತಡೆಯಲು ಸಾಧ್ಯ. ಇಲ್ಲವಾದಲ್ಲಿ ಹಣದ ಮೋಹಕ್ಕೆ ಬಿಳುವ ಶ್ರೀಶಾಂತ್, ಅಜಿತ್, ಅಂಕಿತ್ ಚೌವ್ಹಾಣ್‌ರ ಹಾಗೆ ಉಳಿದ ಆಟಗಾರರೂ ಮೋಸದಾಟದಲ್ಲಿ ಸಿಲುಕಿ ಜನರ ಭಾವನೆಗಳೊಂದಿಗೆ ಆಡುವ ಸಂದರ್ಭ ಉಂಟಾದೀತು.  ಇರುವ ಕಾನೂನನ್ನೇ ಬಿಗಿಗೊಳಿಸಿ, ಎರಡು ತಿಂಗಳು ನಡೆಯುವ ಪಂದ್ಯಾವಳಿಯ ಅವಧಿಯನ್ನು ಕಡಿತಗೊಳಿಸಬೇಕಿದೆ.  ಇಲ್ಲದೆ ಇದ್ದರೆ ಫಿಕ್ಸಿಂಗ್ ಹಗರಣಗಳು ರಾಜಕೀಯದಲ್ಲಿನ ಭ್ರಷ್ಟಾಚಾರದಂತೆ ಸರ್ವೇ ಸಾಮಾನ್ಯವಾದರೂ ಆಶ್ಚರ್ಯವಿಲ್ಲ.  ಕ್ರಿಕೆಟ್ ವ್ಯವಹಾರವಾಗಿರದೆ ಕ್ರಿಕೆಟ್ ಆಗಿದ್ದರೆ ಚೆನ್ನ.

-ಗೋಪಾಲಕೃಷ್ಣ.ಕೆ.ಸಿ
gkckm@yahoo.in


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.