ಸೀಟು ವೋಯ್ತದೆ ಅಂತ ನಿದ್ದೆ ಬುಟ್ಟು ಬಂದ್ರಂತೆ
'ಥೂತ್ತೇರಿಕೆ, ಲೇ ಮುಂಡೇದೆ, ಮಂತ್ರಿ ಆಗ್ಬೇಕು ಅಂದ್ರೆ ಎದ್ದು ಬರ್ಬೇಕು ಕಣ್ಲಾ. ಕೈ ಪಕ್ಸುದಾಗೆ..
'ಥೂತ್ತೇರಿಕೆ, ಲೇ ಮುಂಡೇದೆ, ಮಂತ್ರಿ ಆಗ್ಬೇಕು ಅಂದ್ರೆ ಎದ್ದು ಬರ್ಬೇಕು ಕಣ್ಲಾ. ಕೈ ಪಕ್ಸುದಾಗೆ ವಸಿ ಲೇಟು ಮಾಡುದ್ರು ಬ್ಯಾರೆ ಯಾರಾದ್ರೂವೆ ಪೋಸ್ಟು ಕಿತ್ಕಂಡು ವೊಂಟೋಯ್ತರೆ' ಅಂದ್ರು ಅಂಬ್ರೀಸು
ವೊಸ ಮಂತ್ರಿಗ್ಳು ಪ್ರಮಾಣವಚ್ನ ತಕ್ಕಳಾದ್ನ ನೋಡಕ್ಕೆ ಅಂತೇಳಿ ಮೈಲಾರಿ ಬೆಂಗ್ಳೂರ್ಗೆ ವೊಂಟ. ರಾಜಭವನದ ಗೇಟ್ಗೆ ವೋತಾಯಿದ್ದಂಗೆ ಪೊಲೀಸ್ನೋರು ವೊಳಿಕ್ಕೆ ಬುಡಾಕಿಲ್ಲ ಅಂದ್ರು.
'ಸುಮ್ಕಿರಣ್ಣೋ ನಮ್ ಲೀಡ್ರುಸು ಪ್ರಮಾಣವಚ್ನ ತಕ್ಕತರೆ. ನೋಡಾಣ ಅಂದ್ರೆ ಬುಡಾಕಿಲ್ಲ ಅಂತೀರಲ್ಲ. ವೂರಿಂದ್ ಕೆಂಪ್ ಬಸ್ ಬ್ಯಾರೆ ಹತ್ಕಂಡು ಬಂದ್ಬುಟ್ಟಿದ್ದೀನಿ' ಅಂದ ಮೈಲಾರಿ. 'ಪಾಸ್ ಐತಾ?' ಇದ್ರೆ ಬುಡ್ತೀವಿ ಅಂದ್ರು ಪೊಲೀಸ್ನೋರು.
'ಪಾಸು ನಂತಾವ ಐತೆ. ಬಿಎಂಟಿಸಿ ಬಸ್ ಸ್ಟ್ಯಾಂಡ್ನಾಗೆ ತಕ್ಕಂಡಿದ್ದೀನಿ. ಈ ಪಾಸು ಮಡಿಕ್ಕಂಡು ಎಲ್ಲಿ ಬೇಕಾದ್ರೂ ವೋಡಾಡ್ಬೋದು ಅಂತ ಕಂಡಕ್ಟರ್ರು ಯೋಳವ್ನೆ. ತಕ್ಕಳಿ ಪಾಸು' ಅಂದ ಮೈಲಾರಿ. 'ಇದು ಬಸ್ನಾಗೆ ವೋಡಾಡಕ್ಕೆ ಸರಿ ವೋಯ್ತದೆ ರಾಜಭವನದಾಗೆ ವೋಡಾಡಕ್ಕೆ ಅಲ್ಲ. ವೊಳಿಕ್ಕೆ ವೋಗಕ್ಕೆ ಬ್ಯಾರೆ ಪಾಸು ತಕ್ಕಬೇಕು' ಅಂದ್ರು ಪೊಲೀಸ್ನೋರು.
'ವೋಟು ಕೇಳಕ್ಕೆ ಮನೆತವ ಬತ್ತರಲ್ಲ ಈ ಲೀಡ್ರುಸು, ಅವಾಗ ಪಾಸುಗೀಸು ಕೇಳಲ್ಲ. ಈವಾಗೇನು? ವೋಟಾಕಕ್ಕೆ ಮಾತ್ರ ನಾವು ಬೇಕು ಅಲ್ವಾ?' ಅಂದ ಮೈಲಾರಿ. 'ಅದೆಲ್ಲ ಗೊತ್ತಿಲ್ಲಯ್ಯ, ವೊಳಿಕ್ಕೆ ವೋಬೇಕು ಅಂದ್ರೆ ಪಾಸು ಇರ್ಬೇಕು ಅಷ್ಟೇಯ' ಅಂದ್ರು ಪೊಲೀಸ್ನೋರು.
'ಇದೊಳ್ಳೆ ಕಥೆ ಆಯ್ತಲ್ಲ, ನಮ್ ಅಂಬ್ರೀಸಣ್ಣ ಪ್ರಮಾಣವಚ್ನ ತಕ್ಕಳಾದ್ನ ನೋಡ್ಬೇಕು ಬುಡ್ರಯ್ಯ' ಅಂದ ಮೈಲಾರಿ. 'ಇಲ್ಲೇ ಇರು ಬತ್ತರೆ. ಜತ್ಯಾಗೇ ವೋಗುವಂತೆ' ಅಂದ್ರು ಪೊಲೀಸ್ನೋರು.
ಮೈಲಾರಿ ಅಲ್ಲೇ ಗೇಟ್ನಾಗೆ ಕೂತ್ಕಂಡ. 'ಮಂಡ್ಯದ ಗಂಡುಗೆ ಜೈ' ಅಂತ ಯಾರೋ ಕೂಗಾಕುದ್ರು. ಅಂಬ್ರಿಸಣ್ಣ ಕೊಳ್ಳಾಗೆ ರೋಜಾ ಹೂವು ಹಾರ ಹಾಕ್ಕಂಡು ಬಂದೇಬುಟ್ರು. ಮೈಲಾರಿ ವೋಡೋಗಿ 'ನಾನು ಕಣಣ್ಣೋ ಮೈಲಾರಿ. ನಂದೂವೆ ನಿಂಗೆ ಜೈ' ಅಂದ. 'ಇದ್ಯಾಕಲಾ ಬೇವಾರ್ಸಿ ಇಲ್ಲೀಗಂಟ ಬಂದಿದ್ದೀಯ. ಹೆಂಗೂ ವೂರ್ತವ ಬತ್ತಾಯಿದ್ನಲ್ಲ. ಅಲ್ಲೇ ಸಿಕ್ತಾಯಿದ್ನಲ್ನೋ ಬಡ್ಡೆತ್ತದೆ' ಅಂದ್ರು ಅಂಬ್ರೀಸು. 'ಸಂದಾಕೇಳುದ್ರಿ ಬುಡಿ ನೀವು ಪ್ರಮಾಣವಚ್ನ ತಕ್ಕಳಾದು ನೋಡಾಣ ಅಂತ ಬಂದ್ರೆ ಹಿಂಗಂತೀರಲ್ಲ. ಅಲ್ಲ, ನಿಮ್ಗ ವತ್ತಾರೆ ಅಗೋದೆ ಸಂಜೆಮ್ಯಾಲೆ. ಈಟೊತ್ಗೆ ಎದ್ದು ಬಂದ್ಬುಟ್ಟಿದ್ದೀರಿ' ಅಂದ ಮೈಲಾರಿ.
'ಥೂತ್ತೇರಿಕೆ, ಲೇ ಮುಂಡೇದೆ, ಮಂತ್ರಿ ಆಗ್ಬೇಕು ಅಂದ್ರೆ ಎದ್ದು ಬರ್ಬೇಕು ಕಣ್ಲಾ. ಕೈ ಪಕ್ಸುದಾಗೆ ವಸಿ ಲೇಟು ಮಾಡುದ್ರು ಬ್ಯಾರೆ ಯಾರಾದ್ರೂವೆ ಪೋಸ್ಟು ಕಿತ್ಕಂಡು ವೊಂಟೋಯ್ತರೆ. ಅದುಕ್ಕೆ ನಿದ್ದೆ ವೋಗ್ದೆ ಹಂಗೆ ಎದ್ದು ಕೂತ್ಕಂಡಿದ್ದೆ ಕಣ್ಲಾ. ಈವಾಗೋಗಿ ಮಲ್ಲಿಕ್ಕಂಬುಡ್ತೀನಿ' ಅಂದ್ರು ಅಂಬ್ರೀಸು.
'ಸುಮ್ಕಿರಣ್ಣ ಜನ್ರು ಕೆಲ್ಸ ಮಾಡ್ಲಿ ಅಂತ ಮಂತ್ರಿ ಮಾಡುದ್ರೆ ಮಲಿಕ್ಕತರಂತೆ ನಡೀರಿ ವಿಧಾನಸೌಧುಕ್ಕೆ ಹೋಗಾವ' ಅಂತಂದ ಮೈಲಾರಿ. 'ನೀನು ವೋಗಿರು ನಾನು ಬತ್ತೀನಿ' ಅಂತೇಳಿ ಅಂಬ್ರೀಸು ರೇಸ್‌ಕೋರ್ಸ್ ರೋಡು ಕಡೆ ವೊಂಟ್ರು.
ಆಟೋತ್ಗೆ 'ಚೂರು ಚೂರು ಚಿಂಚನಸೂರು' ಅಂತೇಳಿ ಯಾರೋ ಕೂಗುದ್ರು. ನೋಡುದ್ರೆ ಪ್ರಮಾಣವಚ್ನ ತಕ್ಕಂಡು ಬಾಬುರಾವು ಚಿಂಚನಸೂರು ಬಂದ್ರು. 'ನಮಸ್ಕಾರ ಕಣೇಳಿ, ನಾನು ಮೈಲಾರಿ ಅಂತ. ಹೆಂಗೂ ಮಂತ್ರಿ ಆಬುಟ್ರಲ್ಲ' ಅಂದ ಮೈಲಾರಿ.
'ಮತ್ತೆ ಆಗ್ದೇ ಇರ್ತೀನ ? ನಾನೇ ಕಣ್ಲಾ ಫುಲ್ ಎಕ್ಸ್‌ಪೀರಿಯನ್ಸು ಹ್ಯಾಂಡು' ಅಂದ್ರು ಚಿಂಚನಸೂರು. 'ಅದೆಂಗೆ?' ಅಂತ ಮೈಲಾರಿ ಕೇಳ್ದ.
'ಕೃಷ್ಣ ಸಾಹೇಬ್ರು ಮಂತ್ರಿ ಆಗಿದ್ದಾಗ ನಂತಾವ ಏಳು ಖಾತೆ ಇತ್ತು. ಎಲ್ಲ ಖಾತೇನೂ ಸಂದಾಕಿ ನೋಡ್ಕಂಡಿದ್ದೆ. ಅದುಕ್ಕೆ ಈವಾಗ ಕರ್ದು ಮಂತ್ರಿ ಮಾಡಿರಾದು' ಅಂದ್ರು ಚಿಂಚನಸೂರು. 'ನಿಮ್ಗೆ ಯಾವ್ ಖಾತೆ ಕೊಟ್ಟಾರು ?' ಅಂತೇಳಿ ಮೈಲಾರಿ ಕೇಳ್ದ. 'ಮಹಿಳಾ ಕಲ್ಯಾಣ ಕೊಟ್ರೆ ಚಲೋ ಇರ್ತದೆ ನೋಡು' ಅಂದ್ರು ಚಿಂಚನಸೂರು.
'ಅದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಲ್ವಾ ?' ಅಂದ ಮೈಲಾರಿ. 'ನಮ್ ಮಕ್ಳು ಸೆಟ್ಲು ಅಬುಟ್ಟವ್ರೆ. ಹಿಂಗಾಗಿ ಮಕ್ಕಳ ಕಲ್ಯಾಣ ಬ್ಯಾಡ. ಅದ್ರಾಗೆ ಗಮ್ಮತ್ತು ಇರಕ್ಕಿಲ್ಲ. ಮಹಿಳಾ ಕಲ್ಯಾಣ ಮಾತ್ರ ಬೇಕು ಅಂತ ಕೇಳ್ಕಂಡೀವ್ನಿ. ಅಮ್ಯಾಲೆ ಕೆಲ್ಸದಾಗೆ ನನ್ ಕಮಾಲು ನೋಡ್ಕಳಿ ಅಂತ ಸಿದ್ರಾಮಣ್ಣೋರ್ಗೆ ಯೋಳಿದ್ದೀನಪ್ಪ. ಅದೇನು ಕೊಡ್ತರೋ ನೋಡ್ಬೇಕು ಅಂತೇಳಿ ಚಿಂಚಸೂರು ಸಾಹೇಹ್ರು ಮಲ್ಗೆ ಹೂವು ಘಮಲು ತಕ್ಕಂಡು ವೊಂಟ್ರು.
-ಕೆ.ವಿ.ಪ್ರಭಾಕರ್
prabhukolar@yahoo.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

