ನಿರುಪಯೋಗಿ ಯೋಜನೆಗಳಲ್ಲ, 'ನೀರು'ಪಯೋಗಿ ಯೋಚನೆಗಳು
ಹೊಸತೇನೂ ಇಲ್ಲ. ವಿಷಯ ಹಳೆಯದೇ. ಆದರೆ ಸರಕಾರ ಹೊಸತು. ಹಾಗಾಗಿ ನಿರೀಕ್ಷೆಗಳು...
ಹೊಸತೇನೂ ಇಲ್ಲ. ವಿಷಯ ಹಳೆಯದೇ. ಆದರೆ ಸರಕಾರ ಹೊಸತು. ಹಾಗಾಗಿ ನಿರೀಕ್ಷೆಗಳು ಹೊಸದಾಗಿ ಮೂಡಿವೆ. ಪ್ರತಿ ಬಾರಿ ಹೊಸ ಸರಕಾರ ಬಂದಾಗಲೂ ನಿರೀಕ್ಷೆಗಳು ಮತ್ತೊಮ್ಮೆ ಚಿಗುರೊಡೆಯುತ್ತವೆ. ಅದು ಸಹಜ. ಅಂಥ ಮತ್ತೊಂದು ಸನ್ನಿವೇಶದಲ್ಲಿ, ಅಂಥದ್ದೇ ಅಭಿಪ್ರಾಯ ಸಂಘಟನೆ ನಾಡಿನ ಜನಮಾನಸದಲ್ಲಿ ಮೂಡಿದೆ. ಕೊನೆಗೂ ರಾಜ್ಯದಲ್ಲಿ ಜನಪ್ರಿಯ ಸರಕಾರವೊಂದರ ಸ್ಥಾಪನೆಯಾದಾಗ ಇನ್ನು ನಮ್ಮ ಕೆಲಸ ಮುಗಿಯಿತೆಂದು ಕೈಕಟ್ಟಿ ಕುಳಿತುಕೊಳ್ಳುವ ಜಾಯಮಾನವನ್ನು ಜನರೂ ತೋರಬಾರದು, ಆಡಳಿತಾರೂಢರೂ ಅಂಥ ವರ್ತನೆಯನ್ನು ತೋರಬಾರದು. ಯಾವುದೇ ಹೊಸ ಸರಕಾರ ಬಂದಾಗ ನಿರೀಕ್ಷೆಯ ಸಾಗರ, ಸರಕಾರ ಇಳಿದಾಗ ನಿರಾಸೆಯ ಕಾರ್ಮೋಡ. ಇದನ್ನು ಮೀರಿ ಹೊಸ ಪ್ರಯತ್ನ ನಡೆಯಬೇಕೆನ್ನುವ ಉದ್ದೇಶದೊಂದಿಗೆ ಮತ್ತು ಹೊಸ ಸರಕಾರಕ್ಕೆ ಪರಿಣಾಮಕಾರಿಯಾಗಿ ಏನು ಮಾಡಬೇಕು ಎಂದು ಹೇಳುವ ಮನಸ್ಸಿನೊಂದಿಗೆ ಜನತೆಯ ಬಯಕೆಯನ್ನು ಹೊಸ ಧ್ವನಿಯಲ್ಲಿ ಹೇಳುವ ಪ್ರಯತ್ನ ಇದು. ಜನರಿಂದ ಆಯ್ಕೆಯಾದ ಸರಕಾರಕ್ಕೆ ಜನರ ಆದ್ಯತೆಗಳೇನೆಂದು ತಿಳಿಯಬೇಕಿದೆ.
ಪ್ರಮುಖವಾಗಿ ಕೃಷಿ, ನೀರಾವರಿ, ವಿದ್ಯುತ್, ಆರೋಗ್ಯ, ಶಿಕ್ಷಣ, ಕೈಗಾರಿಕೆ, ಪ್ರವಾಸೋದ್ಯಮ, ಉದ್ಯಮ ಮೂಲಸೌಲಭ್ಯ ಕ್ಷೇತ್ರಗಳಲ್ಲಿನ ಸಮಸ್ಯೆಗಳು ರಾಜ್ಯವನ್ನು ಬಾಧಿಸುತ್ತಿದೆ. ಅಲ್ಲಿನ ಸಮಸ್ಯೆಗಳನ್ನು ವಿಶ್ಲೇಷಿಸಿ, ಅವುಗಳಿಗೆ ಪರಿಹಾರವನ್ನೂ ಪಟ್ಟಿ ಮಾಡುವ ಕಾರ್ಯ ಮೊದಲಾಗಬೇಕಿದೆ. ಇಲ್ಲಿನ ಕೃಷಿ, ನೀರಾವರಿ ಸೇರಿದಂತೆ ಸಮಗ್ರ ಗ್ರಾಮೀಣ ವಿಕಾಸವೆನ್ನುವುದು ಅತ್ಯಂತ ಭಿನ್ನವಾಗಿ ಅರಳಿಬಂದಿರುವಂಥದ್ದು. ಇದೊಂದು ಸಂಘಟಿತ, ಸಾಮುದಾಯಿಕ ವಿಕಾಸ. ಉತ್ತಮ ಆಡಳಿತಗಾರ ಎಂಬ ಹೆಸರು ಪಡೆದು ಏಳು ಬಾರಿ ಬಜೆಟ್ ಮಂಡಿಸಿದ ಸಮರ್ಥ ವ್ಯಕ್ತಿ ನಮ್ಮ ಮುಖ್ಯಮಂತ್ರಿಯಾಗಿ ಹುದ್ದೆಗೇರಿದ್ದಾರೆ. ಹೀಗಾಗಿ ಜನತೆಯ ಪ್ರಣಾಳಿಕೆಯನ್ನು ಅವರು ಅರ್ಥಮಾಡಿಕೊಳ್ಳಬಲ್ಲರು ಎಂಬ ಭರವಸೆ ಮೂಡಿದೆ.
ರಾಜ್ಯದ ಇತ್ತೀಚಿನ ರಾಜಕೀಯ ಅವಸ್ಥಾಂತರಗಳಲ್ಲಿ ಅಭಿವೃದ್ಧಿ ಎಂಬುದು ಮರೀಚಿಕೆಯೇ ಆಗಿ ಹೋಗಿದೆ. ಸಮ್ಮಿಶ್ರ ಸರಕಾರವೆಂಬ ಪ್ರಹಸನ ಇಡೀ ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಅಣಕಿಸಿದ್ದು ಸುಳ್ಳಲ್ಲ. ಕೊನೆಗೂ ರಾಷ್ಟ್ರಪತಿ ಆಡಳಿತದ ಗ್ರಹಣವನ್ನು ದಾಟಿ ರಾಜ್ಯದಲ್ಲಿ ಜನಪ್ರಿಯ ಸರಕಾರವೊಂದರ ಸ್ಥಾಪನೆಯಾಗುವ ಹೊತ್ತಿಗೆ ಅಭಿವೃದ್ಧಿಯ ಕುರಿತಾಗಿ ಜನಮಾನಸದಲ್ಲಿರಬಹುದಾದ ಕನಸುಗಳು ಗರಿಬಿಚ್ಚತೊಡಗಿದ್ದವು. ಆದರೆ ನಂತರ ಬಂದ ಸರಕಾರದಲ್ಲೇ ಭ್ರಷ್ಟಾಚಾರ, ಹೇಸಿಗೆ ಹುಟ್ಟಿಸುವ ರಾಜಕೀಯ ಮೇಲಾಟಗಳಿಂದ ಮೂವರು ಮುಖ್ಯಮಂತ್ರಿಗಳಾಗಿ ಜಗತ್ತಿನ ಅತ್ಯಂತ ಪ್ರಬಲ ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಅಣಕಿಸಿದ್ದು ಸುಳ್ಳಲ್ಲ. ರಾಜಕೀಯ ಪಕ್ಷಗಳು ಜನಾದೇಶವನ್ನು ಅರ್ಥೈಸಿಕೊಂಡ ಸಂದರ್ಭಗಳು ಇತ್ತೀಚೆಗೆ ತೀರಾ ವಿರಳವಾಗುತ್ತಿರುವುದು ವಿಷಾದನೀಯ.
ಹೇಗೂ ಇರಲಿ, ಇವತ್ತು ರಾಜ್ಯದಲ್ಲಿ ಎಲ್ಲ ರೀತಿಯಿಂದಲೂ ಬದುಕಿನ ಅವಕಾಶ ವಿಸ್ತರಣೆಗೆ ತೀರಾ ಅಡ್ಡಿಯಾಗಿ ನಿಂತಿರುವ ಪ್ರಮುಖ ಸಂಗತಿಯೆಂದರೆ ನೀರು. ಅದು ಕೃಷಿ ಇರಬಹುದು, ವಿದ್ಯುತ್, ಪರಿಸರ, ಕೈಗಾರಿಕೆ, ಕೊನೆಗೆ ನಗರ, ಗ್ರಾಮೀಣ ಅಭಿವೃದ್ಧಿ... ಹೀಗೆ ಎಲ್ಲ ಕ್ಷೇತ್ರಗಳನ್ನೂ ಬಾಧಿಸುತ್ತಿರುವುದು ನೀರಿನ ಕೊರತೆ. ರಾಜ್ಯದ ಜನ ಸಮುದಾಯ ಎದುರಿಸುತ್ತಿರುವ ಹತ್ತು ಹಲವು ಸಮಸ್ಯೆ ಆತಂಕಗಳನ್ನು ಮೀರಿ ನಿಂತಿರುವುದು ಇಂದು ನೀರಿನ ನಿರ್ವಹಣಾ ಕೊರತೆ. ಮೂಲಭೂತ ಮಾನವ ಸ್ವಾತಂತ್ರ್ಯಕ್ಕೇ ನೀರಿನ ಸಮಸ್ಯೆ ಧಕ್ಕೆ ತರುತ್ತಿದೆ ಎಂಬ ಸಂಗತಿ ತಡವಾಗಿಯಾದರೂ ನಮಗೆ ಅರ್ಥವಾಗಬೇಕಿದೆ. ಆದ್ದರಿಂದಲೇ ನೀರನ್ನು 'ಮೂಲಭೂತ ಹಕ್ಕು' ಎಂದು ಪರಿಗಣಿಸುವ ಕಾರ್ಯ ನೂತನ ಸರಕಾರದಿಂದ ಮೊಟ್ಟ ಮೊದಲಿಗೆ ಆಗಬೇಕಿದೆ.
ನೀರಿನ ಕೊರತೆ ರಾಜ್ಯದ ಮಟ್ಟಿಗೆ ಪ್ರಾದೇಶಿಕ ಅಸಮಾನತೆ, ಬಡತನದಂಥ ಹತ್ತಾರು ಸಂಕಷ್ಟಗಳಿಗೆ ಪರೋಕ್ಷವಾಗಿ ನಮ್ಮನ್ನು ದೂಡುತ್ತಿದೆ. ವಿಶ್ವದ ಪ್ರತಿ ಆರು ಮಂದಿಯಲ್ಲಿ ಒಬ್ಬ ಶುದ್ಧ ಹಾಗೂ ಅಗತ್ಯ ಪ್ರಮಾಣದ ನೀರಿನಿಂದ ವಂಚಿತನಾಗುತ್ತಿದ್ದಾನೆ ಎನ್ನುತ್ತದೆ 'ಮಾನವಾಭಿವೃದ್ಧಿ ವರದಿ'. ರಾಜ್ಯದಲ್ಲಿ ಈ ಅನುಪಾತ ಇನ್ನೂ ಹೆಚ್ಚೇ ಇರಬಹುದು. ವಿಶ್ವದಲ್ಲಿ ಪ್ರತಿ ವರ್ಷ 2 ದಶಲಕ್ಷ ಮಕ್ಕಳು ನೀರಿನಿಂದ ಬರುವ ಅತಿಸಾರದಂಥ ರೋಗಗಳಿಗೆ ತುತ್ತಾಗಿ ಸಾಯುತ್ತಿದ್ದಾರೆ. ಭಾರತವೊಂದರಲ್ಲೇ ವರ್ಷಕ್ಕೆ 4.50 ಲಕ್ಷ ಮಕ್ಕಳನ್ನು ಅತಿಸಾರ ಬಲಿ ತೆಗೆದುಕೊಳ್ಳುತ್ತಿದೆ. ವ್ಯಾಪಕ ನಗರೀಕರಣ, ಕೈಗಾರಿಕಾ ಬೆಳವಣಿಗೆ ನೀರಿಗಾಗಿನ ಪೈಪೋಟಿಯನ್ನು ಹೆಚ್ಚಿಸಿದೆ. ಇದು ರಾಜ್ಯದ ಪರಿಸ್ಥಿತಿಯ ಚಿತ್ರಣವೂ ಹೌದು. ಹಾಗೆ ನೋಡಿದರೆ ನಮ್ಮಲ್ಲಿ ಕೃಷಿಯೇತರ ವಲಯದ ನೀರಿನ ಬೇಡಿಕೆ ಇಂದಿಗಿಂತ ಎಂಟು ಪಟ್ಟು ಹೆಚ್ಚುವ ಸೂಚನೆ ಮುಂದಿನ ದಶಕಾಂತ್ಯದಲ್ಲಿ ಕಾಣಿಸಿಕೊಳ್ಳುವ ಅಪಾಯವಿದೆ.
ವಿಚಿತ್ರವೆಂದರೆ ನಗರ ಪ್ರದೇಶದ ಬಡವರ್ಗದವರು ಕಡಿಮೆ ನೀರನ್ನು ಪಡೆಯುತ್ತಿದ್ದರೂ ಅದಕ್ಕಾಗಿ ಹೆಚ್ಚಿನ ಹಣ ತೆರುತ್ತಿದ್ದಾರೆ. ಅತಿ ಹೆಚ್ಚು ಬಳಕೆ ಮಾಡುತ್ತಿರುವ ಶ್ರೀಮಂತ ವರ್ಗದ ಮಂದಿ ಅತಿ ಕಡಿಮೆ ಬೆಲೆಯಲ್ಲಿ ನೀರು ಪಡೆಯುತ್ತಿದ್ದಾರೆ. ಬೆಂಗಳೂರಿನ ನಿವಾಸಿಗಳ ಪೈಕಿ ಶೇ.20ರಷ್ಟಿರುವ ಶ್ರೀಮಂತರು ನೀರಿನ ಶುಲ್ಕದಲ್ಲಿ ಹೆಚ್ಚಿನ ಸಬ್ಸಿಡಿ (ಶೇ.30ರಷ್ಟು )ಯ ಫಲಾನುಭವಿಗಳು. ಆದರೆ ಶೇ. 50ರಷ್ಟಿರುವ ಬಡವರ್ಗದ ಮಂದಿಗೆ ನೀರಿನ ಶುಲ್ಕದಲ್ಲಿ ಶೇ. 10ರಷ್ಟು ಮಾತ್ರ ಸಹಾಯಧನ ದೊರೆಯುತ್ತಿದೆ.
ಅಸಮರ್ಪಕ ವ್ಯವಸ್ಥೆ, ತಾಂತ್ರಿಕತೆಯಲ್ಲಿನ ಹಿನ್ನಡೆ, ನೀತಿ- ನಿರೂಪಣೆಯಲ್ಲಿನ ದೋಷ, ರಾಜಕೀಯ ಇಚ್ಛಾಶಕ್ತಿಯ ಕೊರತೆಗಳ ಫಲಿತಾಂಶ ಇದು. ನೀರಿನ ಬಳಕೆಗೆ ಸಂಬಂಧಿಸಿದಂತೆ ಈವರೆಗೂ ನಮ್ಮಲ್ಲಿ ಮಾದರಿ ಎನ್ನಬಹುದಾದ ಯಾವುದೇ ನೀತಿ ನಿಯಮಗಳು ರೂಪಿತವಾಗಿಲ್ಲದಿರುವುದು ಸಮಸ್ಯೆಗೆ ಇನ್ನಷ್ಟು ಕಾರಣವಾಗಿದೆ. ಅಂತರ್ಜಲ ಬಳಕೆಗೆ ಕಾನೂನು ನಿಯಂತ್ರಣದ ಕೊರತೆ, ಅನಗತ್ಯ ವಿದ್ಯುತ್ ಸಬ್ಸಿಡಿಯಂಥ ಕಾರಣಗಳಿಂದ ರಾಜ್ಯದಲ್ಲಿಂದು ಶೇ. 56ರಷ್ಟು ಮಂದಿ ನೀರಿನ ವಿಚಾರದಲ್ಲಿ 'ಸುಸ್ತಿದಾರ'ರಾಗಿದ್ದಾರೆ. ಅಂತರ್ಜಲ ಠೇವಣಿಯನ್ನು ಹದ್ದು ಮೀರಿ ಬರಿದಾಗಿಸಿದ್ದಲ್ಲದೇ ಖಾತೆಯಲ್ಲಿ 'ಓವರ್ ಡ್ರಾಫ್ಟ್' ಸೌಲಭ್ಯವನ್ನೂ ಬಳಸಿ 'ಜಲ ಬ್ಯಾಂಕ್' ಅನ್ನೇ ದಿವಾಳಿಗೆ ತಲುಪಿಸಿದ್ದಾರೆ.
ನಮ್ಮ 'ಸಬ್ಸಿಡಿ ನೀತಿ'ಯೇ ನೀರು ಪೂರೈಕೆಯ ಅಸಮಾನತೆಗೆ ಬಹುತೇಕ ಕಾರಣ ಎಂಬುದನ್ನು ಮತ್ತೆ ಹೇಳಬೇಕಿಲ್ಲ. ರೈತರಲ್ಲಿ ಶೇ. 13ರಷ್ಟು ಮಂದಿ ನೀರಾವರಿ ಸೌಲಭ್ಯವನ್ನು ಅನುಭವಿಸುತ್ತಿದ್ದಾರೆ. ಈ ಪೈಕಿ ಮೂರನೇ ಒಂದು ಭಾಗದಷ್ಟು ರೈತರಿಗೆ ಗರಿಷ್ಠ ಶೇ. 73ರಷ್ಟು ಸಹಾಯಧನ ದೊರೆಯುತ್ತಿದೆ. ಇವರು ವಿದ್ಯುತ್ ಸಬ್ಸಿಡಿಯಲ್ಲೂ ಪಾಲುದಾರರು. ಹೀಗಾಗಿ, ನೀರಿನ ಬಳಕೆ ವಿಚಾರದಲ್ಲಿ ಅವರಲ್ಲಿ ನಿಯಂತ್ರಣವೇ ಇಲ್ಲದಾಗಿದೆ. ಶ್ರೀಮಂತ ರೈತರು ಹೆಚ್ಚಿನ ಹಣ ತೊಡಗಿಸಿ ಆಳದವರೆಗೆ ಬೋರ್‌ವೆಲ್‌ಗಳನ್ನು ಕೊರೆದೂ ನೀರು ಪಡೆಯಬಲ್ಲರು. ಇದು ಸಣ್ಣ, ಅತಿಸಣ್ಣ ರೈತರ ನೀರಿನ ಹಕ್ಕನ್ನು ಕಸಿದುಕೊಳ್ಳುತ್ತಿದೆ. ಹೀಗಾಗಿ, ಕಟ್ಟ ಕಡೆಯ ರೈತರು ನೀರಿನ ಕೊರತೆಯೊಂದಿಗೆ ಅನಿಶ್ಚಿತತೆಯನ್ನು ಅನುಭವಿಸುವಂತಾಗಿದೆ. ಕಾಲುವೆಗಳ ಮೂಲಕ ನೀರು ಪೂರೈಕೆ ವಿಷಯದಲ್ಲೂ ಇದೇ ಅಸಮಾನತೆ ಬಾಧಿಸುತ್ತದೆ. ಕಾಲುವೆಯ ಕೊನೆಯ ರೈತ ಕೆಲವೊಮ್ಮೆ ಹಣ ಖರ್ಚು ಮಾಡಿದರೂ (ಶುಲ್ಕ, ತೆರಿಗೆ ಪಾವತಿ) ನೀರು ಸಿಗದೇ ಪರದಾಡುತ್ತಾನೆ. ದುರಂತವೆಂದರೆ ಇಂಥ 'ಕೊನೆಯ' ರೈತ ಬಡತನ, ಉತ್ಪಾದನಾ ಕೊರತೆಯಂಥ ಸಮಸ್ಯೆಗಳಿಂದಲೂ ಬಳಲುತ್ತಿರುತ್ತಾನೆ. ಹಾಗಾದರೆ ಇವಕ್ಕೆಲ್ಲ ಪರಿಹಾರವಿಲ್ಲವೇ? ಖಂಡಿತಾ ಇದೆ. ನೀರಿನ ಸಮಸ್ಯೆ ಕೊನೆಯಿಲ್ಲದ್ದೇನೂ ಅಲ್ಲ. ಗುಜರಾತಿನಲ್ಲಿ ಇಂದು 10 ಸಾವಿರ ಚೆಕ್‌ಡ್ಯಾಮ್‌ಗಳು ಸಮೃದ್ಧಿಯನ್ನು ಕಟ್ಟಿ ಕೊಡುತ್ತಿವೆ. ಅಲ್ಲಿ ನೀರಿಗಾಗಿ ಸರಿಸುಮಾರು 50 ರು.ಗಳಷ್ಟು ಹೂಡಿಕೆ ಮಾಡುವ ರೈತ ಮೂರು ವರ್ಷಗಳಲ್ಲಿ ಒಂದೂವರೆ ಪಟ್ಟು ಹೆಚ್ಚು ಅಂದರೆ 150 ರು.ಗಳಿಗೂ ಹೆಚ್ಚು ಲಾಭ ಪಡೆಯುತ್ತಿದ್ದಾನೆ. ಗುಜರಾತ್ ನೀರಾವರಿ ವ್ಯವಸ್ಥೆಯಲ್ಲಿನ ಸುಧಾರಣೆ ದೇಶದ ಕೃಷಿ ಉತ್ಪಾದಕತೆಯನ್ನು ಐದು ಪಟ್ಟು ಹೆಚ್ಚಿಸುತ್ತಿದೆ. ಆಂಧ್ರದಲ್ಲಿನ ಕಡಿಮೆ ವೆಚ್ಚದ ಹನಿನೀರಾವರಿ ಯೋಜನೆಗಳು ಉತ್ಪಾದನೆಯನ್ನು ದ್ವಿಗುಣಗೊಳಿಸಿವೆ. ಮಧ್ಯಪ್ರದೇಶ, ಮಹಾರಾಷ್ಟ್ರಗಳಲ್ಲೂ ಮಿತ ನೀರು ಬಳಕೆಯ ಕೃಷಿ ಪದ್ಧತಿಗಳು ಅಲ್ಲಿನ ರೈತರನ್ನು ಯಶಸ್ಸಿನೆಡೆಗೆ ಕೊಂಡೊಯ್ದಿವೆ.
ಈ ಎಲ್ಲ ಹಿನ್ನೆಲೆಯನ್ನು ಗಮನಿಸಿದಾಗ 'ನೀರಿನ ನೀತಿ' ಯೊಂದರ ಅಗತ್ಯ ತೀರಾ ತುರ್ತಾಗಿದೆ. ಇದರೊಂದಿಗೆ ನೀರಿನ ಶುಲ್ಕ, ಸಬ್ಸಿಡಿ ಇತ್ಯಾದಿಗಳ ಬಗ್ಗೆ ನಮ್ಮ ಸರಕಾರ ಮರುವಿಮರ್ಶೆ ನಡೆಸುವುದೊಳಿತು. ನೀರನ್ನು ಯಥೇಚ್ಛ ಬಳಸುತ್ತಿರುವ ಶ್ರೀಮಂತ ವರ್ಗದ ಮೇಲೆ ದುಬಾರಿ ದರ ವಿಧಿಸುವ ಮೂಲಕ ನಿಯಂತ್ರಿಸಬೇಕು. ಅದರಿಂದ ಸಂಗ್ರಹವಾಗುವ ಮೊತ್ತವನ್ನು ಬಡ ವರ್ಗದ ಜನಕ್ಕೆ ಪೂರಕ ಸಬ್ಸಿಡಿಯಾಗಿ ನೀಡಬೇಕು. ಆಗ ಮಾತ್ರ ಅಸಮಾನತೆ ಹೋಗಲಾಡಿಸಲು ಸಾಧ್ಯ.
ನೀರಿನ ವಿಚಾರದಲ್ಲಿ ಪಾರದರ್ಶಕತೆ ಹಾಗೂ ಲೆಕ್ಕಾಚಾರದ ಕೊರತೆ, ಸೂಕ್ತ ನಿರ್ವಹಣಾ ನಾಯಕತ್ವದ ಕೊರತೆ, ಮೂಲ ಸೌಕರ್ಯದ ಕೊರತೆ, ಬದ್ಧತೆಯ ಕೊರತೆ, ಯೋಜನೆ ಹಾಗೂ ವ್ಯವಸ್ಥಾಪನೆಯ ಕೊರತೆಯಿಂದಾಗಿ ನಮ್ಮಲ್ಲಿ ಸಮಸ್ಯೆ ಇನ್ನಷ್ಟು ಉಲ್ಬಣಿಸಿದೆ. ಇಷ್ಟೆಲ್ಲ ಕೊರತೆಗಳಿದ್ದೂ ಅತಿಮುಖ್ಯ ಅಗತ್ಯವಾದ 'ನೀರಿಗೆ' ನಮ್ಮ ಸರಕಾರಗಳು ಬಜೆಟ್‌ನಲ್ಲಿ ಅತಿ ಕಡಿಮೆ ಹಣ ಮೀಸಲಿಡುತ್ತಿವೆ.
ಇನ್ನೊಂದು ಪ್ರಮುಖ ಸಂಗತಿಯೆಂದರೆ ನಮ್ಮಲ್ಲಿ ನೀರಿಗೆ ಸಂಬಂಧಿಸಿದ ವಿಚಾರಗಳು ಹಲವು ಇಲಾಖೆಗಳ ಅಡಿಯಲ್ಲಿ ಹಂಚಿಹೋಗಿವೆ. ಆ ಇಲಾಖೆಗಳ ನಡುವೆ ಸಮನ್ವಯ ಸಾಧನೆ ಆಗುತ್ತಿಲ್ಲ. ಗಣಿ ಮತ್ತು ಭೂಗರ್ಭ ಇಲಾಖೆ, ಅರಣ್ಯ ಮತ್ತು ಪರಿಸರ ಇಲಾಖೆ, ನೀರಾವರಿ (ಸಣ್ಣ- ಬೃಹತ್) ಇಲಾಖೆ, ನೀರು ಪೂರೈಕೆ ಮತ್ತು ಒಳಚರಂಡಿ ಮಂಡಳಿ, ವಿದ್ಯುತ್ ಮಂಡಳಿ, ಕೃಷಿ ಇಲಾಖೆ ಹೀಗೆ ಸರಕಾರದ ಎಲ್ಲ ಸಾಂಸ್ಥಿಕ ಸ್ವರೂಪಗಳೂ ಒಗ್ಗೂಡಿ ಕೆಲಸ ಮಾಡುವುದು 'ಸಮಗ್ರ ನೀತಿ'ಯಿಂದ ಮಾತ್ರ ಸಾಧ್ಯ.
ಇದೆಲ್ಲಕ್ಕಿಂತ ಮುಖ್ಯವಾಗಿ ಆಗಬೇಕಿರುವುದು ಅಂತರ್ಜಲ ಸಂರಕ್ಷಣೆಯ ನಿಟ್ಟಿನಲ್ಲಿ ಸ್ಪಷ್ಟ, ಸಬಲ ಕಾನೂನು ರಚನೆ ಮತ್ತು ಅದರ ಸಮರ್ಪಕ ಅನುಷ್ಠಾನ. ನೀರಾವರಿ ಯೋಜನೆಗಳಲ್ಲಿನ ಗೊಂದಲದ್ದು ಪ್ರತ್ಯೇಕ ವಿಚಾರವೇ ಇದೆ. ಸಾಕಷ್ಟು ದೊಡ್ಡ ಇತಿಹಾಸವನ್ನೇ ಹೊಂದಿರುವ ಈ ಯೋಜನೆಗಳು ಮತ್ತವಕ್ಕೆ ಸಂಬಂಧಿಸಿದ ವಿವಾದಗಳ ಕುರಿತಾಗಿ ಸ್ಪಷ್ಟ ನಿಲುವು ತೆಗೆದುಕೊಂಡು ರಾಜ್ಯಕ್ಕಾಗುತ್ತಿರುವ ಅನ್ಯಾಯ ಸರಿಪಡಿಸಬೇಕಿದೆ. ನೂತನ ಸರಕಾರ ಬಂದ ಮಾತ್ರಕ್ಕೆ ರಾಜ್ಯದಲ್ಲಿ ಅಭಿವೃದ್ಧಿ ತಂತಾನೇ ಆಗಿಬಿಡುತ್ತದೆ, ಸರಕಾರ ಬದಲಾಗುತ್ತಿದ್ದಂತೆ ಬದಲಾವಣೆ ತಾನಾಗಿ ನಡೆದು ಬರುತ್ತದೆ ಎಂಬ ಭ್ರಮೆ ಖಂಡಿತಾ ಸಲ್ಲ. ಅಥವಾ ಯಾವ ಸರಕಾರ ಬಂದರೂ ಮಾಡುವುದಿಷ್ಟೇ ಎಂಬ ಹತಾಶೆಯೂ ಸರಿಯಲ್ಲ. ಇಂಥದ್ದೊಂದು ಹತಾಶೆ-ನಿರೀಕ್ಷೆಗಳ ನಡುವೆ ನೀರನ್ನು 'ಆದ್ಯತೆ'ಯಾಗಿ ಪರಿಗಣಿಸಿ ನಾಡಿನ ಸಮಗ್ರ ಅಭಿವೃದ್ಧಿಗೆ ಮುನ್ನುಡಿ ಬರೆಯಬೇಕಿದೆ. ಏಕೆಂದರೆ ಯುನಿಸೆಫ್‌ನಂಥ ವಿಶ್ವಮಟ್ಟದ ಸಂಸ್ಥೆಗಳು ಈಗಾಗಲೇ ರಾಜ್ಯದಿಂದ ಕಾಲ್ಕಿತ್ತು ಉತ್ತರಮುಖಿಯಾಗಿವೆ. ಗುಜರಾತ್, ಬಿಹಾರದಂಥ ರಾಜ್ಯಗಳೊಂದಿಗೆ ಅವು ಹನಿಮೂನ್ ನಡೆಸುತ್ತಿದ್ದರೆ ಅದಕ್ಕೆ ಕಾರಣ ಅಲ್ಲಿನ ಸರಕಾರಗಳು ನೀರಾವರಿ ಮತ್ತು ಕೃಷಿ ಕ್ಷೇತ್ರದಲ್ಲಿ ಜಾರಿಗೊಳಿಸಿರುವ ಸಮರ್ಥ ನೀತಿ ಎಂಬುದು ಗಮನಾರ್ಹ. ಎಲ್ಲ ಸಿದ್ಧ ನಂಬಿಕೆಗಳನ್ನು ಮೀರಿ ಹೊಸದೊಂದು ಪ್ರಯತ್ನಶೀಲ ಪ್ರಣಾಳಿಕೆ ಚುನಾವಣೋತ್ತರ ಸನ್ನಿವೇಶದಲ್ಲಿ ಸರಕಾರದಿಂದ ಪ್ರಕಟಗೊಳ್ಳಬೇಕು. ಅದು ನೂರಕ್ಕೆ ನೂರು ಜನತೆಯ ಆಶೋತ್ತರಗಳನ್ನೇ ಹೊಂದಿರಬೇಕು. ಯಾವುದೋ ರಾಜ್ಯದಿಂದ ಇಲ್ಲಿಗೆ ಬಂದಿರುವ ಅಧಿಕಾರಿಯಾಗಲೀ, ಕೆಲವೇ ಕೆಲ ಜನಪ್ರತಿನಿಧಿಗಳಾಗಲಿ, ತಮ್ಮ ಮೂಗಿನ ನೇರಕ್ಕೆ ಅಭಿವೃದ್ಧಿಯನ್ನು ವ್ಯಾಖ್ಯಾನಿಸುವ ಬದಲಿಗೆ ಒಟ್ಟಾರೆ ನಾಡಿನ ಜನತೆಯ ಅಭಿಪ್ರಾಯ ಕ್ರೋಡೀಕರಣವೇ ಸರಕಾರದ ಕಾರ್ಯ ಸೂಚಿಯಾಗಬೇಕು. ಬಿಹಾರ, ಗುಜರಾತ್ ಸರಕಾರಗಳು ಇಂದು ದೇಶದಲ್ಲಿ ಮಾದರಿಯಾಗಿದ್ದರೆ ಅದಕ್ಕೆ ಇಂಥ ಕಾರ್ಯಸೂಚಿಯೇ ಕಾರಣ. ಈ ಸಂಕಲ್ಪಶಕ್ತಿಗೆ ನೂತನ ಸರಕಾರ 'ನೀರೆರೆದು' ಪೋಷಿಸಲಿ. ಅದರೊಂದಿಗೆ ಜನತೆಯ ಅಣತಿಯಂತೆ ಕಾರ್ಯ ನಿರ್ವಹಿಸುವ ಸತ್ಪರಂಪರೆಗೆ ನೂತನ ಮುಖ್ಯಮಂತ್ರಿ ಮತ್ತವರ ಸಂಪುಟ ನಾಂದಿ ಹಾಡಲಿ ಎಂಬುದು ಆಶಯ. ಕೊನೇ ಪಕ್ಷ ಈ ನಾಡಿನ ಪ್ರತಿಯೊಬ್ಬ ವ್ಯಕ್ತಿಗೂ ಶುದ್ಧ ಕುಡಿಯುವ ನೀರೊದಗಿಸುವ ಬದ್ಧತೆಯಾದರೂ ಸರಕಾರದಿಂದಾದರೆ ಅದಕ್ಕಿಂತ ಅಭಿವೃದ್ಧಿ ಮತ್ತೊಂದಿಲ್ಲ.
-ರಾಧಾಕೃಷ್ಣ ಎಸ್. ಭಡ್ತಿ
abhyagatha@yahoo.co.in
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

