ಅಂಕಣಗಳು

ಸವಾಲೇ ಇರಲಿಲ್ಲ: ಬಿಜೆಪಿ ಸೋಲು ನಿರ್ಣಾಯಕ

Published On :

ಈ ಬಾರಿಯ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ತನ್ನ ರಾಷ್ಟ್ರೀಯ ಎದುರಾಳಿಯಾದ ಭಾರತೀಯ ಜನತಾ ಪಾರ್ಟಿ ಹಾಗೂ ಪ್ರಾದೇಶಿಕ ಎದುರಾಳಿಯಾದ ಜಾತ್ಯತೀತ ಜನತಾ ಪಕ್ಷಗಳನ್ನು ಅನುಮಾನಕ್ಕೆ ಆಸ್ಪದವೇ ಇಲ್ಲದಂತೆ ಸೋಲಿಸಿದೆ.
  ನಿಜವಾಗಲೂ ಈ ಫಲಿತಾಂಶ ಅನಿರೀಕ್ಷಿತವೇ?
  ಜನಸಮುದಾಯಗಳ ನಡುವೆ ಇರಬಹುದಾದ ಅಥವಾ ಇಲ್ಲದೇ ಇರುವ ಲೆಕ್ಕಾಚಾರವನ್ನೇ ಆಧಾರವಾಗಿಟ್ಟುಕೊಂಡು, ಜಾತಿಗಳ ಜನಸಂಖ್ಯೆಯ ಅಶಾಸ್ತ್ರೀಯ ಆಧಾರದ ಮೇಲೆ ಜನಮತದ ಸ್ವರೂಪವನ್ನು ಊಹಿಸುವ ಮೇಲ್ಮಟ್ಟದ ಸಮೀಕ್ಷಕ, ವಿಶ್ಲೇಷಣೆಕಾರರಿಗೆ ಅಂತರಂಗದ ಸತ್ಯ ಗೊತ್ತಾಗುವುದು ಚುನಾವಣೆ ಫಲಿತಾಂಶ ಪ್ರಕಟವಾದ ಅನಂತರವೇ. ಕಾಂಗ್ರೆಸ್ಸಿಗೆ ವಿಧಾನಸಭೆಯಲ್ಲಿ ಸ್ಪಷ್ಟವಾದ ಬಹುಮತದ ಸಾಧ್ಯತೆಯನ್ನು ಚುನಾವಣೆಗೆ ಮೂರು ವಾರಗಳ ಮುಂಚೆಯೇ ಕೆಲವು ಸಂಖ್ಯಾಶಾಸ್ತ್ರ ಆಧಾರಿತ ಸಮೀಕ್ಷಾ ವರದಿಗಳು ತಿಳಿಸಿದರೂ ಅದನ್ನು ಕಾಂಗ್ರೆಸ್ಸಿಗರೇ ನಂಬಲಿಲ್ಲ.
  ಜನರ ಮನಸ್ಸಿನ ಮೇಲೆ ತುಂಬಾ ಪರಿಣಾಮವನ್ನು ಬೀರಿದ್ದು ಪ್ರಭಾವಿ, ಪ್ರತಿಷ್ಠಿತ ಮಾಧ್ಯಮ ಪ್ರಪಂಚದಲ್ಲಿ ರಾಜ್ಯಕ್ಕೆ ಈಗಿನ ರಾಜಕೀಯ ಸ್ಥಿತಿಯಲ್ಲಿ ಲಿಂಗಾಯಿತರಲ್ಲದೇ ಬೇರೆ ಯಾವ ಜಾತಿಯ ಮುಖ್ಯಮಂತ್ರಿಯೂ ಆಯ್ಕೆಯಾಗುವುದು ಸಾಧ್ಯವೇ ಇಲ್ಲ ಎನ್ನುವ ಪ್ರಚಾರ ನಡೆದಿದ್ದು, ಕಾಂಗ್ರೆಸ್ಸಿನಲ್ಲಿ ಮುಖ್ಯಮಂತ್ರಿಯ ಸ್ಥಾನಕ್ಕೆ ಯಾವ ಒಬ್ಬ ನಾಯಕರನ್ನೂ ಮುಂದಕ್ಕೆ ಬಿಡುವ ಅವಕಾಶ ಇರಲಿಲ್ಲ, ಅಂತಹ ವ್ಯಕ್ತಿ ಸಿಗಲಿಲ್ಲ.
  ಜಾತ್ಯತೀತ ಜನತಾದಳದಲ್ಲಿ ಕುಮಾರ ಸ್ವಾಮಿ ಅವರ ಹೆಸರು, ಭಾರತೀಯ ಜನತಾ ಪಾರ್ಟಿಯಲ್ಲಿ ಜಗದೀಶ ಶೆಟ್ಟರ್ ಹೆಸರೂ ಪ್ರಚಾರದಲ್ಲಿ ಅಧಿಕೃತವಾಗಿಯೇ ಇತ್ತು. ಆದರೂ ಜನ ಇತರ ಕಾರಣಗಳಿಂದಾಗಿ ಕಾಂಗ್ರೆಸ್ಸಿಗೆ ಓಟು ಕೊಡಬಹುದೆನ್ನುವ ಯೋಚನೆಯೇ ಪ್ರಚಾರ ಮಾಧ್ಯಮಕ್ಕೆ ಹೊಳೆದಿರಲಿಲ್ಲ.
  ಕಾಂಗ್ರೆಸ್ ಗೆದ್ದರೆ, ಸಿದ್ದರಾಮಯ್ಯ, ಪರಮೇಶ್ವರ ಅಥವಾ ಮಲ್ಲಿಕಾರ್ಜುನ ಖರ್ಗೆ ಅವರಲ್ಲಿ ಒಬ್ಬರು ಮುಖ್ಯಮಂತ್ರಿಯಾಗುವ ನಿರೀಕ್ಷೆ ಇದ್ದರೂ, ಉತ್ತರ ಕರ್ನಾಟಕದ ಲಿಂಗಾಯಿತರು ಕಾಂಗ್ರೆಸ್ಸಿಗೇ ಹೆಚ್ಚು ಸ್ಥಾನಗಳನ್ನು, ಮತಗಳನ್ನು ಒದಗಿಸಿದ್ದೇಕೆ? ಜನರ ಚಿಂತನೆಯೇ ಬೇರೆ ಇತ್ತು ಹಾಗೆಂದು ಈಗ ಹೇಳಬಹುದು.
  ಚುನಾವಣೆಯ ಮತದಾನದ ದಿನ ಸಮೀಪಿಸಿದಂತೆ ಪ್ರಕಟವಾದ ಸಮೀಕ್ಷೆಗಳ ಫಲಿತಾಂಶದಲ್ಲಿ ಕಾಂಗ್ರೆಸ್ಸಿಗೇ ಮೊದಲ ಸ್ಥಾನವಿದ್ದರೂ, ಬಹುಮತದ ಸ್ಥಾನಗಳ ಪ್ರಸ್ತಾಪ ಇರಲಿಲ್ಲ, ಈ ಹಿನ್ನೆಲೆಯಲ್ಲಿ "ಅನಿರೀಕ್ಷಿತ" (ಯಾರ ಪಾಲಿಗೆ?) ಎನ್ನುವ ರೀತಿಯಲ್ಲಿ ಕಾಂಗ್ರೆಸ್ 121 ಸ್ಥಾನಗಳನ್ನು ಗಳಿಸಿದ್ದು ಐದು ವರ್ಷಗಳ ಅವಧಿಯಲ್ಲಿ ರಾಜ್ಯದ ರಾಜಕೀಯ ನಿಂತ ನೀರಾಗಿರಲಿಲ್ಲ ಎನ್ನುವುದಕ್ಕೆ ಸಾಕ್ಷಿ.

ಯಡಿಯೂರಪ್ಪ - ಬಿಜೆಪಿ
  ಈ ಸಂದರ್ಭದಲ್ಲೇ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ನಿರ್ವಹಿಸಿದ ಪಾತ್ರದ ಪ್ರಸ್ತಾಪ ಅನಿವಾರ್ಯ. ಕಾರಣ ಏನೇ ಇರಲಿ, ಯಡಿಯೂರಪ್ಪ ಬಿಜೆಪಿ ನಾಯಕತ್ವವನ್ನು (ರಾಷ್ಟ್ರೀಯ - ಪ್ರಾದೇಶಿಕ) ಧಿಕ್ಕರಿಸಿದ್ದರು. ಅದಕ್ಕೆ ತಕ್ಕಂತೆ ಬಿಜೆಪಿ, ತನ್ನ ಪ್ರದೇಶ ಸಮಿತಿಗೆ ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವಂತೆ ಪ್ರಹ್ಲಾದ ಜೋಷಿ ಅವರನ್ನು ಅಧ್ಯಕ್ಷರನ್ನಾಗಿ ನೇಮಿಸಿತು.
  ಆ ನೇಮಕದಿಂದಲೇ ಪಕ್ಷ ಉತ್ತರ ಕರ್ನಾಟಕದಲ್ಲಿ ಗಳಿಸಬಹುದಾದ ಮತಗಳ ಸಂಖ್ಯೆಯನ್ನು ಬಿಜೆಪಿ ತಾನೇ ಕುಗ್ಗಿಸಿಕೊಂಡಿತು. ಚುನಾವಣೆ ಫಲಿತಾಂಶದ ಪ್ರಕಟಣೆಯ ವಿವರಗಳು ತಿಳಿಸುವ ವಿಚಾರ ಇದು. ಯಡಿಯೂರಪ್ಪ ಅವರು ತಮ್ಮಿಂದಲೇ ಬಿಜೆಪಿ ಮೂವತ್ತೈದು ಸ್ಥಾನಗಳಲ್ಲಿ ಸೋಲಲಿದೆ ಎಂದು ಚುನಾವಣೆಯ ಮತದಾನಕ್ಕೆ ಮುಂಚೆಯೇ ಹೇಳಿದ್ದರು. ಆ ಮೂವತ್ತೈದು ಸ್ಥಾನಗಳು ಎಲ್ಲಿತ್ತು ಎನ್ನುವುದು ಯಾರಿಗೂ ಗೊತ್ತಿಲ್ಲ. (ಅವರ ಜೇಬಿನಲ್ಲಿ ಒಂದು ಪಟ್ಟಿ ಇತ್ತಂತೆ).
  ಬಿಜೆಪಿಯ ಅಭ್ಯರ್ಥಿಗಳ ಪಟ್ಟಿ, ಹಾಗೂ ಹಿಂದಿನ ಶಾಸಕರ ಪಟ್ಟಿಯನ್ನು ಸೂಕ್ಷ್ಮವಾಗಿ ಗಮನಿಸಿದರೆ ಅದರಲ್ಲಿ ಅರ್ಧಕ್ಕರ್ಧದಷ್ಟು ಭಾಗದ ವ್ಯಕ್ತಿಗಳಿಗೂ ಬಿಜೆಪಿಯ ಸಿದ್ಧಾಂತ, ಶಿಸ್ತುಸಂಹಿತೆ ಹಾಗೂ ಆಚಾರ-ವಿಚಾರಕ್ಕೂ ಏನೇನೂ ಸಂಬಂಧವಿರಲಿಲ್ಲವೆನ್ನುವುದು ಸ್ಪಷ್ಟವಾಗಿತ್ತು. ಆದ್ದರಿಂದಲೇ ಬಿಜೆಪಿ ಹಿಂದೆ ಭಾರಿ ಅಲೆಯಲ್ಲಿ ಗೆದ್ದಿದ್ದ ಸ್ಥಾನಗಳಲ್ಲಿ ಅರ್ಧದಷ್ಟನ್ನೂ ಗೆಲ್ಲಲಿಕ್ಕೆ ಆಗಲಿಲ್ಲ.
  ಯಡಿಯೂರಪ್ಪ ಅವರೇ 40 ಸ್ಥಾನಗಳನ್ನು ಬಿಜೆಪಿಗೆ "ಕೊಟ್ಟಿದ್ದರು" ಅದು ಅಡ್ಡೇಟಿನ ಮೇಲೆ ಗುಡ್ಡೇಟು ಎನ್ನುವಂತೆ ಸರಿಯಾಯಿತು. ಆದರೆ ಅದರಿಂದ ಲಾಭವಾಗಿದ್ದು ಯಾರಿಗೆ?
  ಮೂಲತಃ ಕಾಂಗ್ರೆಸ್ಸಿಗೆ, ಅನಂತರ ಜಾತ್ಯತೀತ ಜನತಾದಳಕ್ಕೆ.   ಜಾತ್ಯತೀತ ಜನತಾದಳ ಹಿಂದಿಗಿಂತ ಹೆಚ್ಚು ಸ್ಥಾನಗಳನ್ನು ಈಗ ಪಡೆದಿದೆ. (12 ಸ್ಥಾನಗಳು). ಆದರೆ ಪಕ್ಷದ ವ್ಯಾಪ್ತಿ ರಾಜ್ಯದಲ್ಲಿ ಹಿಗ್ಗಿಲ್ಲ, ರಾಜ್ಯದ ಹಿತರಕ್ಷಣೆ ಪ್ರಾದೇಶಿಕ ಪಕ್ಷದಿಂದಲೇ ಆಗಬೇಕೆನ್ನುವ ಘೋಷಣೆಯನ್ನು ಜನ ಒಪ್ಪಲಿಲ್ಲ. ಈಗ ವಿಧಾನ ಸಭೆಯಲ್ಲಿ ಎರಡನೇ ಸ್ಥಾನಕ್ಕೆ ಬಿಜೆಪಿ, ಜೆಡಿಎಸ್ ಸೆಣಸಬೇಕು. ಅದರಲ್ಲಿ ಸದ್ಯಕ್ಕೆ ಜೆಡಿಎಸ್ ಮುಂದಿದೆ.
  ಚುನಾವಣೆ ಫಲಿತಾಂಶದ ವಿವರಗಳನ್ನು ನಿಧಾನವಾಗಿ ಪರಿಶೀಲಿಸುತ್ತಾ ಹೋದರೆ ಇನ್ನೂ ಹಲವು ಆಶ್ಚರ್ಯಕರವಾದ ವಿಷಯಗಳು ಹೊರ ಬೀಳಬಹುದು. ಉದಾಹರಣೆಗೆ 2008 ರಲ್ಲಿ 110 ಕ್ಷೇತ್ರಗಳಲ್ಲಿ ಗೆದ್ದಿದ್ದ ಭಾರತೀಯ ಜನತಾ ಪಾರ್ಟಿ ಈ ಬಾರಿ ಹೆಚ್ಚು ಕಡಿಮೆ ಅಷ್ಟೇ ಕ್ಷೇತ್ರಗಳಲ್ಲಿ ಠೇವಣಿಯನ್ನು ಕಳೆದುಕೊಂಡಿದೆ.
  ಅಂದರೆ ಈ ಚುನಾವಣೆಯಲ್ಲಿ ಬಿಜೆಪಿ ನಿರ್ಣಾಯಕವಾಗಿ ಸೋತಿದೆ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಬಿಜೆಪಿಯ ಅಂತರಂಗದ ಸ್ವರೂಪ ಹೇಗಾದರೂ ಇರಲಿ, ಬಹಿರಂಗವಾಗಿ ಅದಕ್ಕೆ ಬಹುಜನಪ್ರಿಯತೆಯ ಸ್ವರೂಪವನ್ನು ತಂದು ಕೊಡಲು ಒಂದ ಕಾಲದಲ್ಲಿ ಸೋಷಿಯಲ್ ಎಂಜಿನಿಯರಿಂಗ್ ಎನ್ನುವ ಸಿದ್ಧಾಂತವನ್ನು ಪ್ರತಿಪಾದಿಸಿದವರು ಆಗಿನ ಪಕ್ಷದ ಬೌದ್ಧಿಕ - ಸೈದ್ಧಾಂತಿಕ ನಾಯಕ ಗೋವಿಂದಾಚಾರ್ಯ.   ಬಿಜೆಪಿಯಲ್ಲಿ ಅನೇಕರು ಅದನ್ನು ಒಪ್ಪಿ, ಅದಕ್ಕೆ ಅಪ್ಪಟ ಜಾತೀಯತೆಯ ಸ್ವರೂಪವನ್ನೇ ತಂದುಕೊಡಲು ಪ್ರಯತ್ನಿಸಿದರು. ಅದು ಒಮ್ಮೆ ಫಲ ನೀಡಿದರೂ, ಕೇವಲ ಒಂದು ಮುಖವಾಡವಾಗಿದ್ದರಿಂದ ಬಹುಕಾಲ ನಿಲ್ಲಲಿಲ್ಲ.   ಈ ಬಾರಿ ಕರ್ನಾಟಕದಲ್ಲಿ ಕಾಂಗ್ರೆಸ್, ಸೋಷಿಯಲ್ ಎಂಜಿನಿಯರಿಂಗ್ ಸಿದ್ಧಾಂತವನ್ನು ಒಪ್ಪಿಕೊಂಡಿದೆ. ಅದು ರಾಜ್ಯದ ಬಹುಭಾಗದಲ್ಲಿ ಯಶಸ್ವಿಯೂ ಆಗಿದೆ. ಆ ಯಶಸ್ಸಿನ ಹಿಂದೆ ಇದ್ದಿದ್ದು ಸಿದ್ದರಾಮಯ್ಯ, ಪರಮೇಶ್ವರ, ಮಲ್ಲಿಕಾರ್ಜುನ ಖರ್ಗೆ ಅವರ ಹೆಸರುಗಳು.
  ಸಿದ್ದರಾಮಯ್ಯ ಅವರು ತುಂಬಾ ಹಿಂದೆಯೇ ಮುಖ್ಯಮಂತ್ರಿಯಾಗಬೇಕೆನ್ನುವ ಬಯಕೆಯನ್ನು ವ್ಯಕ್ತಪಡಿಸಿದ್ದರು. ಅದನ್ನು ಬೇರೆಯವರು ಗಂಭೀರವಾಗಿ ಪರಿಗಣಿಸದೇ ಹೋದರೂ, ಅವರು ನಂಬಿದ್ದ ಸಮುದಾಯ ಅವರನ್ನು ಕೈ ಬಿಡಲಿಲ್ಲ. ಅವರ ಹಳೆಯ ಗೆಳೆಯರೆಲ್ಲರೂ ಗೆದ್ದಿದ್ದಾರೆ. ವರಿಷ್ಠರಿಗೂ ಈಗ ಸಿದ್ದರಾಮಯ್ಯ ಅವರ ಹಟಮಾರಿತನದ ಅರಿವಾಗಿದೆ. ಆದ್ದರಿಂದಲೇ ಅವರು ಮುಖ್ಯಮಂತ್ರಿಯ ಆಯ್ಕೆಯಲ್ಲಿ ಹೆಚ್ಚು ತಕರಾರು ಮಾಡಲಿಲ್ಲ.

ವರ್ಗ - ವರ್ಣ ಸಂಘರ್ಷ
  ಸಿದ್ದರಾಮಯ್ಯ, ರಾಜ್ಯದ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದು ಒಂದು ರೀತಿಯಲ್ಲಿ ದಂತಕತೆಯಂತೆಯೇ ಕಂಡು ಬಂದರೂ, ಅದು ದೇವರಾಜ ಅರಸು ಆರಂಭಿಸಿದ ವರ್ಗಸಂಘರ್ಷದ ಅಂಗವಾಗಿಯೇ ವರ್ಣ ಸಂಘರ್ಷದ ಮುಂದುವರಿದ ಹಂತ. ರಾಜ್ಯದಲ್ಲಿ ಒಕ್ಕಲಿಗರು, ಲಿಂಗಾಯಿತರು, ಬ್ರಾಹ್ಮಣರು, ಒಬ್ಬ ದೇವರಾಜ ಅರಸು, ಬಂಗಾರಪ್ಪ, ವೀರಪ್ಪ ಮೊಯಿಲಿ ಅವರಂತಹ ಇತರೆ ಹಿಂದುಳಿದ ಜಾತಿ ಪಂಗಡಗಳ ಮುಖ್ಯಮಂತ್ರಿಗಳು ಆಗಿ ಹೋಗಿದ್ದಾರೆ. ಇದು ರಾಜ್ಯದಲ್ಲಿ ಬೀಸಿದ ಪರಿವರ್ತನೆಯ ಗಾಳಿಯ ಪರಿಣಾಮ.
  ಆದರೆ ಇದುವರೆಗೆ ದಲಿತರಲ್ಲಿ ಯಾರೂ ಮುಖ್ಯಮಂತ್ರಿ ಕುರ್ಚಿಯ ಹತ್ತಿರವೇ ಬರಲಿಲ್ಲ. ಅವರಲ್ಲಿ ಸಮರ್ಥರು ಇರಲಿಲ್ಲ ಎಂದೇನೂ ಅಲ್ಲ. ರಾಜ್ಯಾಡಳಿತದ ವಿಚಾರಕ್ಕೆ ಬಂದರೆ, ಸಾಮಾಜಿಕ ನ್ಯಾಯದ ವಿತರಣೆಯ ಪ್ರಸ್ತಾಪದ ಚರ್ಚೆಯಾದರೆ, ಬಸವಲಿಂಗಪ್ಪ ಅವರಿಗಿಂತ ದಕ್ಷರು, 'ಬದ್ಧರು' ಸಿಗುವುದು ಕಷ್ಟ.
  ಆದರೂ ಬಸವಲಿಂಗಪ್ಪ ಅವರು ಮುಖ್ಯಮಂತ್ರಿಯಾಗುವ ಮಾತು ಹಾಗಿರಲಿ, ಪ್ರತಿಪಕ್ಷದ ನಾಯಕರಾಗಿ ಕೆಲಸ ಮಾಡುವ ಅವಕಾಶವನ್ನೂ ಪಡೆಯಲಿಲ್ಲ. ಪ್ರಾಯಶಃ ಮಲ್ಲಿಕಾರ್ಜುನ ಖರ್ಗೆ ಅವರು ಕಳೆದ ಬಾರಿ ಲೋಕಸಭೆಗೆ ಹೋಗದೇ ರಾಜ್ಯದಲ್ಲೇ ಭದ್ರವಾಗಿ ನೆಲೆಯನ್ನು ಕಂಡುಕೊಂಡಿದ್ದರೆ, ಆಗ ಈಗಿನ ಸನ್ನಿವೇಶವೇ ನಿರ್ಮಾಣವಾಗಿದ್ದರೆ ಅವರ ಹೆಸರೇ ಮುಖ್ಯಮಂತ್ರಿ ಸ್ಥಾನಕ್ಕೆ ಮೊದಲ ಹೆಸರಾಗಿ ಇರುತಿತ್ತೇನೋ.
  ರಾಜ್ಯದಲ್ಲಿ ಶೋಷಿತ ಜನಾಂಗಗಳ ಸಾಮಾಜಿಕ ಪ್ರಜ್ಞೆ ಜಾಗೃತವಾಗುವುದರಲ್ಲಿ ಮೈಸೂರು (ಚಾಮರಾಜ ನಗರವೂ ಸೇರಿದಂತೆ) ಜಿಲ್ಲೆ ಹಾಗೂ ಬೀದರ್ - ಗುಲ್ಬರ್ಗ ಜಿಲ್ಲೆಗಳ ಉತ್ತರದ ತಾಲ್ಲೂಕುಗಳಿಗೆ ಮೊದಲ ಸ್ಥಾನ ಸಿಗಬೇಕು. ಮೈಸೂರು ಸೀಮೆಯಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಕಾಲದಲ್ಲೇ ಮೇಲಿನಿಂದ ಸರ್ಕಾರ ಮಾಡಿದ ಪ್ರಯತ್ನದಿಂದಲೇ ಈ ಜಾಗೃತಿ ಕಂಡು ಬಂದರೆ, ಬೀದರ್ - ಗುಲ್ಬರ್ಗಾಗಳಲ್ಲಿ ಅಂಬೇಡ್ಕರ್ ಅವರ ಮೊದಲ ತಲೆಮಾರಿನ ಅನುಯಾಯಿ ಶ್ಯಾಮಸುಂದರ ಅವರ ನೇತೃತ್ವದಲ್ಲಿ ಹೋರಾಟಕ್ಕೆ ಸಿದ್ಧವಾದ ಯುವಕರ ಪಡೆಗಳೇ ತಯಾರಾದವು.
  ದೇವರಾಜ ಅರಸು ಅವರು ಪ್ರಜ್ಞಾಪೂರ್ವಕವಾಗಿ, ಈ ಹೋರಾಟಗಳನ್ನು ಸಾಮಾಜಿಕ ನ್ಯಾಯ ವಿತರಣೆ ಹಾಗೂ ಪರಿವರ್ತನೆಯ ಆಂದೋಲನಕ್ಕೆ ಬಳಸಿದರು. ಅದನ್ನು ಅವರು ಆ ಕಾಲದಲ್ಲೇ ವರ್ಣ ಸಂಘರ್ಷದ ಒಂದು ಭಾಗ ಎಂದಿದ್ದರು. ಈಗ ಆ ಸಂಘರ್ಷದ ಲಕ್ಷಣಗಳು ಅಲ್ಲಲ್ಲಿ ಕಂಡು ಬರುತ್ತಿವೆ.
  ಈಗ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮುಖ್ಯಮಂತ್ರಿಯಾಗುವ ಅವಕಾಶ ತಪ್ಪಿಹೋದ ಸಂದರ್ಭದಲ್ಲಿ ಚಾಮರಾಜನಗರ, ಬೀದರ್‌ಗಳಲ್ಲಿ ಕಂಡು ಬಂದ ಪ್ರದರ್ಶನಗಳನ್ನು ವರ್ಣಸಂಘರ್ಷದ ಮುಂದುವರಿದ ಭಾಗ ಎಂದು ಭಾವಿಸಬಹುದೇನೋ ಗೊತ್ತಿಲ್ಲ.   ಖರ್ಗೆ ಅವರೇನೋ, ಕಟ್ಟಕಡೆಯ ನಿಮಿಷದಲ್ಲಿ ನಿರ್ಣಾಯಕವಾದ ಹೆಜ್ಜೆಯನ್ನಿಡಲು ತಮ್ಮ ಸಹಜ ಸ್ವಭಾವದಂತೆ ಹಿಂಜರಿದಿದ್ದಾರೆ. ಆದರೆ ಮುಂದೆ ಇಂತಹದ್ದೇ ಅವಕಾಶವನ್ನು ನಿರ್ಮಿಸಿಕೊಳ್ಳುವ ಪ್ರಯತ್ನದ ಕಡೆ ಅವರ ಗಮನ ಈಗಲೇ ಹರಿದಿರಬೇಕು.
  ಕರ್ನಾಟಕದಲ್ಲಿ ಬಂಗಾರಪ್ಪ - ಮೊಯಿಲಿ ಅವರು ಮುಖ್ಯಮಂತ್ರಿಗಳಾಗಿದ್ದು, ಆ ಕಾಲದ ವಿಶಿಷ್ಟ ಸನ್ನಿವೇಶದಲ್ಲಿ ವರಿಷ್ಠರ ಅನಿವಾರ್ಯ ಆದೇಶದ ಪರಿಣಾಮವಾಗಿ. ಈಗ ಸಿದ್ದರಾಮಯ್ಯ ಆ ಸ್ಥಾನ ಪಡೆದಿದ್ದು ತಮ್ಮ ಪ್ರಯತ್ನದ ಪರಿಣಾಮವಾಗಿ. ಇದು ಸಾಮಾನ್ಯವಾದ ಬದಲಾವಣೆಯಲ್ಲ. ಮುಂದಿನ ದಿನಗಳಲ್ಲಿ ಇದೊಂದು ಪ್ರವೃತ್ತಿಯೇ ಆಗಬಹುದು.   ರಾಜ್ಯದಲ್ಲೀಗ ಸಿದ್ದರಾಮಯ್ಯ ಅವರ ಯುಗ ಆರಂಭವಾಗಿದೆ. ಮುಂದಿನದನ್ನು ಪರದೆಯ ಮೇಲೇ ನೋಡಬೇಕು.

ಕಿಡಿಗೇಡಿತನ :
ಕರ್ನಾಟಕ ರಾಜ್ಯದ ಜನರಲ್ಲಿ ಶೇಕಡಾ ಅರವತ್ತಕ್ಕೂ ಹೆಚ್ಚಿನ ಸಂಖ್ಯೆಯ (360 ಲಕ್ಷ) ಬಡವರು ಕಡು ಬಡವರು ಇದ್ದಾರೆ. ವಿಧಾನ ಸಭೆಯಲ್ಲಿ ಅವರನ್ನು ಪ್ರತಿನಿಧಿಸುವವರಲ್ಲಿ 103 ಮಂದಿ ಕೋಟೀಶ್ವರರಿದ್ದಾರೆ. ಈಗಲೂ 223 ಮಂದಿ ವಿಧಾನಸಭೆ ಸದಸ್ಯರಲ್ಲಿ 103 ಮಂದಿ ಪ್ರಬಲ, ಪ್ರತಿಷ್ಠಿತ ಲಿಂಗಾಯತ - ಒಕ್ಕಲಿಗ ಸಮಾಜಕ್ಕೆ ಸೇರಿದವರು.

- ಸತ್ಯ
anisikeprabha@gmail.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.