ಇನ್ನಾದರೂ ಇವರಿಗೆ ಕಾರ್ಯಕರ್ತರು ಕಾಣಲಿ
20 ವರ್ಷಗಳ ಹಿಂದಿನ ಮಾತು. ದಾವಣಗೆರೆಯಲ್ಲಿ ಬಿಜೆಪಿ ಅನ್ನೋ ಒಂದು ಪಕ್ಷವಿದೆ ಅಂತಾ ಗೊತ್ತಿದ್ದೋರು ಕೆಲವೇ ಮಂದಿ!
ಆಗೆಲ್ಲಾ ನಗರಸಭೆ ಚುನಾವಣೆ ಘೋಷಣೆ ಆದ್ರೆ ಸಾಕು, ಎರಡನೇ ಡಿವಿಜನ್ನಿಂದ ಬಿಜೆಪಿ ಕಾಯಂ ಅಭ್ಯರ್ಥಿಯಾಗಿ ಕಣಕಿಳಿಯುತ್ತಿದ್ದವರು ಶಂಕರ ನಾರಾಯಣ್. ಪಕ್ಷ ಪ್ರಬಲವಿಲ್ಲದೇ ಇರಬಹುದು, ಗೆಲ್ಲುವುದು ಕನಸೇ ಆಗಿರಬಹುದು. ಆದರೆ ಶಂಕರನಾರಾಯಣ್ ಅವರ ಉತ್ಸಾಹಕ್ಕೆ ಎಂದಿಗೂ ಭಂಗ ಬಂದಿರಲಿಲ್ಲ. ಮನೆಮನೆ ಪ್ರಚಾರ, ಕರಪತ್ರ ಹಂಚೋದು, ಕಬ್ಬಿಣದ ತಗಡಲ್ಲಿ ನೀಲಿದ್ರವ ಹೊತ್ತು ಗೋಡೆಗಳಿಗೆ ಅಚ್ಚೊತ್ತೋದು ಹೀಗೆ ಆಲ್ ಇನ್ ಒನ್ ಅವರೇ. ಅವರೊಂದಿಗೆ ಅಬ್ಬಬ್ಬಾ ಅಂದ್ರೆ 5-6 ಮಂದಿ. ಹೋದಲ್ಲೆಲ್ಲಾ ಕೊಂಕು ನಗೆಯ ಸ್ವಾಗತ, ಹೀಗಳಿಕೆಯ ಮಾತು. 'ಓಹೋ ಬಂದ್ರಪ್ಪ ಶಂಕರನಾರಾಯಣ್. ಅದ್ಯಾವ ಕಾಲಕ್ಕೆ ಗೆಲ್ಲಬೇಕೋ... ನಿಲ್ಲೋದು ಖಚಿತ, ಸೋಲು ನಿಶ್ಚಿತ!' ಊಹುಂ.. ಶಂಕರ ನಾರಾಯಣ್ ಇದಕ್ಕೆಲ್ಲಾ ಎಂದೂ ತಲೆ ಕೆಡಿಸಿಕೊಳ್ಳಲೇ ಇಲ್ಲ. ತಾವಾಯ್ತು ತಮ್ಮ ಕೆಲಸವಾಯ್ತು. ಪಕ್ಷ ಹೇಳಿದ್ದನ್ನು ಚಾಚೂ ತಪ್ಪದೆ ಮಾಡುತ್ತಿದ್ದರು ಅಷ್ಟೇ.
1992, ಡಿಸೆಂಬರ್ 6ರ ಬಾಬ್ರಿ ಮಸೀದಿ ಧ್ವಂಸ ದಾವಣಗೆರೆಯ ಬಿಜೆಪಿ ಚಿತ್ರಣವನ್ನೇ ಬದಲಾಯಿಸಿಬಿಟ್ಟಿತು. ಜಿಲ್ಲೆಯಾದ್ಯಂತ ಬಿಜೆಪಿ ಗಾಳಿ ಜೋರಾಗೇ ಬೀಸಿತು. ಪಕ್ಷದ ತತ್ವ ಸಿದ್ಧಾಂತ ಗೊತ್ತಿಲ್ಲದವರೂ ಪಕ್ಷಕ್ಕೆ ಬಂದರು. ಟಿಕೆಟ್ ಗಿಟ್ಟಿಸಿ ಜನಪ್ರತಿನಿಧಿಗಳಾದರು. ನಗರಸಭೆ, ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಆಯ್ಕೆಯಾದರು. ಅಲ್ಲೀ ತನಕ ಬಿಜೆಪಿಯ ಕಾಯಂ ಅಭ್ಯರ್ಥಿಯಾಗಿದ್ದ ಶಂಕರನಾರಾಯಣ್ಗೆ ಅಪ್ಪಿತಪ್ಪಿ ಕೂಡ ಟಿಕೆಟ್ ಸಿಗಲಿಲ್ಲ.
ಪಕ್ಷ ಬೆಳೆದರೂ ಪಕ್ಷ ಬೆಳೆಸಿದ ಕಾಯಕರ್ತ ನಾಯಕನಾಗಲಿಲ್ಲ. ನೇಪಥ್ಯಕ್ಕೆ ಸರಿದರು. 60ರ ಹರೆಯದ ಶಂಕರನಾರಾಯಣ್ಗೆ ಬಿಜೆಪಿ ಈಗ ನೆನಪು ಮಾತ್ರ!
ಹುಬ್ಬಳ್ಳಿಯ ಶ್ರೀಕಾಂತ ದೇಸಾಯಿ ಅವರದ್ದೂ ಇದೇ ಕಥೆ. ಬಹಳ ಹಿಂದೆಯೇ ದೇಸಾಯಿ ಕಾರ್ಪೋರೇಟರ್ ಅಗಿದ್ದವರು. ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಜೈಲು ಸೇರಿದ್ದವರು. ಇದ್ದದ್ದನ್ನು ಇದ್ದ ಹಾಗೇ ಮುಖಕ್ಕೆ ಹೊಡೆದ ಹಾಗೆ ಹೇಳುತ್ತಿದ್ದ ಶ್ರೀಕಾಂತ ದೇಸಾಯಿ ಹುಬ್ಬಳ್ಳಿ ಧಾರವಾಡ ಭಾಗದ ಪ್ರಾಮಾಣಿಕ ರಾಜಕಾರಣಿ. ಸಣ್ಣ ಕೆಲಸವನ್ನೂ ಶ್ರದ್ಧೆಯಿಂದ ತಾವೇ ಮುಂದೆ ನಿಂತು ಮಾಡುತ್ತಿದ್ದ ದೇಸಾಯಿ ಬೆಳೆಯುತ್ತಾ ಹೋದರು. ಇದೇ ಅವರಿಗೆ ಮುಳುವಾಯ್ತು. ಅವರ ವೇಗವನ್ನು ಕಂಡ ನಾಯಕರಿಗೆ ಶ್ರೀಕಾಂತ ದೇಸಾಯಿ ತಮ್ಮನ್ನು ಮೀರಿ ಬೆಳೆದಾರು ಎಂಬ ಭಯ ಕಾಡಿತು. ಅವರನ್ನು ವ್ಯವಸ್ಥಿತವಾಗಿ ಮೂಲೆಗುಂಪು ಮಾಡಲಾಯಿತು. ಚುನಾವಣೆಯಲ್ಲಿ ಬೇಕೆಂದೇ ಟಿಕೆಟ್ ತಪ್ಪಿಸಲಾಯಿತು. ಪಕ್ಷೇತರರಾಗಿ ನಿಂತ ಅವರನ್ನು ಪಕ್ಷದ ವಿರೋಧಿಗಳೆಲ್ಲಾ ಒಟ್ಟಾಗಿ ನಿಂತು ಸೋಲಿಸಿದರು. ಎತ್ತರೆತ್ತರಕ್ಕೆ ಬೆಳೆಯುವ ಅರ್ಹತೆಯಿದ್ದ ಒಬ್ಬ ನಾಯಕನನ್ನು ಪಕ್ಷದವರೇ ತುಳಿದು ಹಾಕಿದರು. ಇದರಲ್ಲಿ ಈಗ ಮೆರೆಯುತ್ತಿರುವ ಅನೇಕ ನಾಯಕರ ಪಾತ್ರವೂ ಇದೆ. ಇಷ್ಟೆಲ್ಲಾ ಆದ ಮೇಲೆ ಈ ರಾಜಕೀಯದ ಸಹವಾಸವೇ ಬೇಡ ಎಂಬ ನಿರ್ಧಾರಕ್ಕೆ ಬಂದ ಶ್ರೀಕಾಂತ್ ದೇಸಾಯಿ ವಕೀಲರಾಗಿ ಸಮಾಜಸೇವೆ ಮುಂದುವರಿಸಿದ್ದಾರೆ.
ಇನ್ನು ಇದೇ ಭಾಗದ ರಾಜೇಂದ್ರ ಗೋಖಲೆ ಅವರದ್ದೂ ಇದೇ ಕಥೆ-ವ್ಯಥೆ. ಪಕ್ಕಾ ಸಂಘದ ಹಿನ್ನೆಲೆಯ ಕುಟುಂಬ ಇವರದ್ದು. ಹಿರಿಯ ನಾಯಕ ಜಗನ್ನಾಥ್ರಾವ್ ಜೋಷಿ ಅವರ ಕಡೆಯ ದಿನಗಳಲ್ಲಿ ಅವರ ಸೇವೆ ಮಾಡಿದ್ದು ಇದೇ ಗೋಖಲೆ ಕುಟುಂಬ. ತಂದೆ ಕಿಶನ್ರಾವ್ ಗೋಖಲೆ ನೆರಳಲ್ಲಿ ಬೆಳೆದ ರಾಜೇಂದ್ರ ಗೋಖಲೆ ನೇರ ನಿಷ್ಠುರತೆಗೆ ಹೆಸರುವಾಸಿ. 10 ವರ್ಷ ಈಶಾನ್ಯ ಭಾರತದಲ್ಲಿ ಸಂಘದ ಪ್ರಚಾರಕರಾಗಿದ್ದ ರಾಜೇಂದ್ರ ಗೋಖಲೆ ತಮ್ಮ ಅಪ್ರತಿಮ ಬುದ್ಧಿವಂತಿಕೆಯಿಂದಲೇ ಪ್ರಮೋದ್ ಮಹಾಜನರಂಥ ನಾಯಕರನ್ನೂ ಸೆಳೆದಿದ್ದರು.
ಯಡಿಯೂರಪ್ಪ, ಅನಂತಕುಮಾರ್ ಜತೆಯಾಗಿ ಹೋಗುತ್ತಿದ್ದ ಆ ದಿನಗಳಲ್ಲಿ ಇವರಿಬ್ಬರ ಸರಿತಪ್ಪುಗಳನ್ನು ಕೋರ್ ಕಮಿಟಿ ಸಮಿತಿಯಲ್ಲಿ ಎತ್ತಿ ಬೆವರಿಳಿಸುತ್ತಿದ್ದ ಏಕೈಕ ವ್ಯಕ್ತಿ ಈ ರಾಜೇಂದ್ರ ಗೋಖಲೆ. 1999ರಲ್ಲಿ ಸುಷ್ಮಾ ಸ್ವರಾಜ್ ಬಳ್ಳಾರಿಯಲ್ಲಿ ಚುನಾವಣೆಗೆ ನಿಂತಾಗ ಅದರ ಉಸ್ತುವಾರಿ ಹೊತ್ತ ರಾಜೇಂದ್ರ ಗೋಖಲೆ ತಮ್ಮ ಸಂಘಟನಾ ಚಾತುರ್ಯದಿಂದ ಕೇಂದ್ರ ನಾಯಕರ ಮನಗೆದ್ದಿದ್ದರು.
ಇಂಥಾ ರಾಜೇಂದ್ರ ಗೋಖಲೆಯವರನ್ನು ಬಿಜೆಪಿ ಮಹಾನ್ ನಾಯಕರು ಅದ್ಯಾವ ಪರಿ ಮೂಲೆಗೆ ತಳ್ಳಿದರು ಎಂದರೆ ಸುಮಾರು 70-80 ವಿಧಾನ ಸಭಾ ಕ್ಷೇತ್ರಗಳ ಜವಾಬ್ದಾರಿ ಹೊರುತ್ತಿದ್ದ ಇವರನ್ನು ಕಡೇಪಕ್ಷ ರಾಜ್ಯಕಾರ್ಯಕಾರಿಣಿಯಲ್ಲೂ ಇಟ್ಟುಕೊಳ್ಳಲಿಲ್ಲ. ಬದಲಾದ ಸಂದರ್ಭದಲ್ಲಿ ರಾಜೇಂದ್ರ ಗೋಖಲೆ ಈಗ ಕೆಜೆಪಿ ಸಂಘಟನಾ ಕಾರ್ಯದರ್ಶಿ.
ಬೆಂಗಳೂರಿನಲ್ಲಿ ಹುಟ್ಟಿ ಬೆಳೆದ ಅಶ್ವಿನ್ ಕುಮಾರ್ ಕಟ್ಟಾ ಕಾಂಗ್ರೆಸ್ಸಿಗ. ತಂದೆ ಅಜ್ಜನ ಕಾಲದಿಂದಲೂ ಇವರದ್ದು ಕಾಂಗ್ರೆಸ್ ನಿಷ್ಠ ಕುಟುಂಬವೇ. ರಾಜಕೀಯ ವಿಷಯದ ಆಳ ಅಗಲಗಳನ್ನು ಚೆನ್ನಾಗಿ ಬಲ್ಲ ಅಶ್ವಿನ್ ಕೆಪಿಸಿಸಿ ಸದಸ್ಯರಾಗಿದ್ದವರು. ತಮ್ಮ ರಾಜಕೀಯ ಚಾತುರ್ಯದಿಂದಲೇ ರಾಜೀವ್ ಗಾಂಧಿ ಅವರಿಗೆ ಹತ್ತಿರವಾಗಿದ್ದವರು. ರಾಷ್ಟ್ರೀಯ ಸೇವಾದಳದ ಸಂಘಟನಾ ಕಾರ್ಯದರ್ಶಿಯಾಗಿ ಅದ್ಭುತ ಕೆಲಸ ಮಾಡಿದ್ದವರು. ಕಾಂಗ್ರೆಸ್ ಹಿನ್ನೆಲೆಯ ಕುಟುಂಬ, 5-6 ಭಾಷೆಗಳ ಮೇಲೆ ಹಿಡಿತ, ರಾಜಕೀಯ ತಂತ್ರಗಾರಿಕೆ, ಜೊತೆಗೆ ಗಾಂಧಿ ಕುಟುಂಬದ ಜತೆ ನಂಟು, ಇದು ಇತರ ಕಾಂಗ್ರೆಸ್ ನಾಯಕರ ಕಣ್ಣು ಕೆಂಪಾಗಿಸಿತು. ಅದರ ಪರಿಣಾಮ ಈವತ್ತು ಕಾಂಗ್ರೆಸ್ನಲ್ಲಿ ಅಶ್ವಿನ್ಗೆ ಯಾವುದೇ ಸ್ಥಾನ ಮಾನ ಇಲ್ಲ. ನನಗೆ ಹುದ್ದೆ ಬೇಡ, ಅಧಿಕಾರ ಬೇಡ, ಪಕ್ಷದ ಸೇವೆ ಮಾಡಲು ಅವಕಾಶ ಕೊಡಿ ಎಂಬ ಮನವಿ ರಾಜ್ಯ ಕಾಂಗ್ರೆಸ್ ನಾಯಕರ ಕಿವಿಗೆ ಬಿದ್ದಿಲ್ಲ. ಇಷ್ಟೆಲ್ಲ ಆದರೂ ಬೇರೆ ಪಕ್ಷದ ಕಡೆಗೆ ಮುಖ ಮಾಡದ ಅಶ್ವಿನ್ರ ಕಾಂಗ್ರೆಸ್ ನಿಷ್ಠೆ ಪ್ರಶ್ನಾತೀತ.
ಇದು ಒಬ್ಬಿಬ್ಬರ ಕಥೆ ಅಲ್ಲ. ಕಣ್ಣು ಹಾಯಿಸಿದರೆ ಶಂಕರ ನಾರಾಯಣ್, ಶ್ರೀಕಾಂತ ದೇಸಾಯಿ, ಗೋಖಲೆ, ಅಶ್ವಿನ್, ತುಮಕೂರಿನ ಹಿಂದುಳಿದ ವರ್ಗದ ಮಹಿಳೆ ಮಂಜುಳಾ ಅವರಂಥಾ ಲಕ್ಷ ಲಕ್ಷ ಕಟ್ಟಾ ಕಾರ್ಯಕರ್ತರು ಸಿಗುತ್ತಾರೆ.
ಇಂಥವರನ್ನು ಪಕ್ಷದ ನಾಯಕರು ಅಪ್ಪಿ ತಪ್ಪಿ ಕೂಡ ಗಮನಿಸುವುದಿಲ್ಲ. ಅವರಿಗೆ ಗೌರವ ಮನ್ನಣೆ ಎಂದೆಂದಿಗೂ ಸಿಗುವುದೇ ಇಲ್ಲ. ನೀವು ಪಕ್ಷಕ್ಕಾಗಿ ದುಡಿಯಿರಿ, ನಾವು ಅನುಭವಿಸುತ್ತೇವೆ ಎಂಬ ನಾಯಕರೇ ಎಲ್ಲಾ ಪಕ್ಷಗಳಲ್ಲೂ ತುಂಬಿ ತುಳುಕುತ್ತಿದ್ದಾರೆ. ಸಭೆ ಸಮಾರಂಭಗಳಿಗೆ ಕಾರ್ಯಕರ್ತರಿಗೆ ಹಣ ಕೊಟ್ಟು ಕರೆತರಬೇಕಾದ ಸ್ಥಿತಿಗೆ ಪಕ್ಷಗಳು ಬಂದಿವೆ ಎಂದರೆ ಅದಕ್ಕೆ ಕಾರಣವೇ ಕಾರ್ಯಕರ್ತರ ಕೊರತೆ, ಅಸಮಾಧಾನ.
ನಿಜವಾದ ಕಾರ್ಯಕರ್ತರನ್ನು ಕಡೆಗಣಿಸಿದರೆ ಏನಾಗುತ್ತದೆ ಅನ್ನೋದನ್ನು ಸ್ಥಳೀಯ ಸಂಸ್ಥೆ ಚುನಾವಣೆ, ವಿಧಾನಸಭೆಯ ಚುನಾವಣೆಯಲ್ಲಿ ನೋಡಿದ್ದೇವೆ. ಈಗ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ಸಾದರೂ ಕಟ್ಟಾ ಕಾರ್ಯಕರ್ತರನ್ನ ಕಡೆಗಣಿಸಲಾರದು ಅನ್ನಿಸುತ್ತಿದೆ. ಎಲ್ಲವನ್ನೂ ಬಲ್ಲ ಸಿದ್ಧರಾಮಯ್ಯ ಬಿಜೆಪಿಯಂತೆ ನಡೆದುಕೊಳ್ಳಲಾರರು. ಅವರದ್ದೂ ಅದೇ ಹಾಡಾದರೆ, ಮುಂದೊಂದು ದಿನ ದೊಡ್ಡ ಬೆಲೆ ತೆರಬೇಕಾಗುತ್ತದೆ.
- ರಂಗನಾಥ್ ಭಾರದ್ವಾಜ್,
ಸುವರ್ಣನ್ಯೂಸ್
anisikeprabha@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

