ಅಂಕಣಗಳು

ಹಿಂದಡಿ ಇಟ್ಟಿದ್ದು ಚೀನಾವೊ? ಭಾರತವೊ?

ವೈರಿಯ ಕಣ್ಣಲ್ಲಿ ಕಣ್ಣಿಟ್ಟು ನೋಡದೆ, ಶಸ್ತ್ರ ತೋಳಿಗೇರಿಸದೆ, ಜೋರು ದನಿಯಲ್ಲಿ...

Published On :

ನಮ್ಮ ಮನೆಯೊಳಗೆ ಕಳ್ಳ ಪ್ರವೇಶಿಸಿ ಮನೆ ಬಿಟ್ಟು ಹೋಗಬೇಕಾದರೆ, ನೀವೂ ಆ ಮನೆಯಲ್ಲಿ ಇರಬಾರದು ಎಂದು ಷರತ್ತು ವಿಧಿಸಿದರೆ ಒಪ್ಪುತ್ತೀರಾ?

ವೈರಿಯ ಕಣ್ಣಲ್ಲಿ ಕಣ್ಣಿಟ್ಟು ನೋಡದೆ, ಶಸ್ತ್ರ ತೋಳಿಗೇರಿಸದೆ, ಜೋರು ದನಿಯಲ್ಲಿ ಮಾತನಾಡದೆ, ಕೇವಲ ಒಂದು ದೂರವಾಣಿ ಕರೆಯ ಮೂಲಕ ಭಾರತವು ಚೀನಾ ಬಾಲ ಮುದುರುವಂತೆ ಮಾಡಿತೇ?
ಟಿಬೆಟ್ ಗಡಿಯಲ್ಲಿ ವಾಸ್ತವ ನಿಯಂತ್ರಣ ರೇಖೆಯ ಈಚೆ, ಭಾರತದ ಪ್ರದೇಶದಲ್ಲಿ 19 ಕಿ.ಮೀ. ಪ್ರವೇಶಿಸಿ ಐದು ಟೆಂಟುಗಳನ್ನು ನಿರ್ಮಿಸಿ,  50 ಮಂದಿ ಸೈನಿಕರನ್ನು ನಿಯೋಜಿಸಿ ಭಾರತದ ಸಾರ್ವಭೌಮತ್ವಕ್ಕೆ ಸವಾಲು ಎಸೆದಿದ್ದ ಚೀನಾ 20 ದಿನಗಳ ವೀರಾವೇಶದ ನಂತರ ತನ್ನ ನೆಲೆಗಳಿಗೆ ಮರಳಿದಾಗ, ಭಾರತವು ಇದನ್ನು ರಾಜತಾಂತ್ರಿಕ ಒತ್ತಡಕ್ಕೆ ದೊರಕಿದ ಪ್ರತಿಫಲ ಎಂದು ಕೊಚ್ಚಿಕೊಂಡಾಗ ಖಂಡಿತ ಇಂಥದೊಂದು ಪ್ರಶ್ನೆ ಉದ್ಭವಿಸಿತ್ತು. ಏನೊ ವಾಸ್ತವ ಅರಿಯದೆ ಚೀನಿ ಸೈನಿಕರು ಭಾರತದ ನೆಲ ಪ್ರವೇಶಿಸಿ ಬಿಟ್ಟಿದ್ದರೇನೋ. ವಾಸ್ತವ ತಿಳಿ ಹೇಳಿದ ಕೂಡಲೇ ತಪ್ಪಿನ ಅರಿವಾಗಿ ವಾಪಸ್ ಹೋದರೇನೋ. ಒಂದು ವೇಳೆ ಅದೇ ನಿಜವಾಗಿದ್ದರೆ ಇನ್ನು ಮುಂದೆ ಭಾರತವು ಚೀನಾದ ಬಗ್ಗೆ ತಲೆಕೆಡಿಸಿಕೊಳ್ಳುವ ಅಗತ್ಯವಾದರೂ ಏನು? ಇನ್ನು ಮುಂದಾದರೂ ಚೀನಾವನ್ನು ನಂಬಬಹುದು ಎಂದು ಯಾರಾದರೂ ಯೋಚಿಸಿದ್ದರೆ ಖಂಡಿತ ಅದು ತಪ್ಪು. ತನ್ನ ಹುಟ್ಟಿನಿಂದ ಭಾರತದ ಪಾಲಿಗೆ ಬಗಲ ಮುಳ್ಳಾಗಿರುವ, ಪದೇ ಪದೆ ಚುಚ್ಚುತ್ತಲೇ ಇರುವ ಪಾಕಿಸ್ತಾನವನ್ನಾದರೂ ನಂಬಬಹುದು. ಆದರೆ ಅಪ್ಪಿತಪ್ಪಿಯೂ ಚೀನಾವನ್ನು ನಂಬಲು ಸಾಧ್ಯವಿಲ್ಲ. ಪಾಕಿಸ್ತಾನಕ್ಕಿಂತ ಚೀನಾವೇ ನಮ್ಮ ಪರಮ ಶತ್ರು ಎಂದು 1999ರಲ್ಲಿ ಅಂದಿನ ರಕ್ಷಣಾ ಸಚಿವ ಜಾರ್ಜ್ ಫರ್ನಾಂಡಿಸ್ ಹೇಳಿದ್ದನ್ನು ನೆನಪಿಸಿಕೊಳ್ಳಿ. ಇತಿಹಾಸದುದ್ದಕ್ಕೂ ಚೀನಾ ಹೊಂಚು ಹಾಕಿ ಭಾರತವನ್ನು ಘಾಸಿಗೊಳಿಸುತ್ತಲೇ ಬಂದಿದೆ. ಭಾಯಿ ಭಾಯಿ ಎನ್ನುತ್ತಲೇ ಬೆನ್ನಿಗೆ ಚೂರಿ ಹಾಕಿದೆ. ವ್ಯಾಪಾರ, ವಹಿವಾಟಿನ ಮಾತಾಡುತ್ತಲೇ ವಂಚನೆಯ ಜಾಲದಲ್ಲಿ ಭಾರತವನ್ನು ಸಿಲುಕಿಸುತ್ತಲೇ ಸಾಗಿದೆ. ಇಷ್ಟಾಗಿಯೂ ಲಡಾಖ್ನಿಂದ ಚೀನಾ ವಾಪಸ್ ಮರಳಿದ್ದನ್ನು ನಮ್ಮ ಸರ್ಕಾರ, ಅಧಿಕಾರಿಗಳು ಮತ್ತು ಸರಕಾರದ ಸುತ್ತ ಹರಿದಾಡುವ ವಿದೇಶಿ ವ್ಯವಹಾರಗಳ ತಜ್ಞರು ರಾಜತಾಂತ್ರಿಕ ವಿಜಯ, ಸಂಧಾನಕ್ಕೆ ಸಿಕ್ಕ ಪ್ರತಿಫಲ ಎಂದೇ ಬಿಂಬಿಸುತ್ತಿದ್ದಾರೆ. ಆದರೆ ಈ ವಿಚಾರದಲ್ಲಿ ಭಾರತಕ್ಕೆ ನಿಜವಾಗಲೂ ಜಯವಾಗಿದೆಯೇ? ಭಾರತದ ನಿಲುವನ್ನು ಚೀನಾ ಒಪ್ಪಿಕೊಂಡು ಹಿಂದೆ ಸರಿದಿದೆಯೇ? ಸುತರಾಂ ಇಲ್ಲ. ನಿಜ ಹೇಳಬೇಕೆಂದರೆ ಇಲ್ಲಿ ನಡೆದಿರುವುದು ಚೀನಾದ ಮಾತು. ಏಕೆಂದರೆ ಭಾರತದ ಪ್ರದೇಶದಲ್ಲಿ 750 ಚದರಡಿ ಪ್ರದೇಶವನ್ನು ಅತಿಕ್ರಮಿಸಿಕೊಂಡು, ನಾಲ್ಕು ಬಾರಿ ಸೇನಾಮಟ್ಟದಲ್ಲಿ ನಡೆದ ಫ್ಲಾಗ್ ಮೀಟಿಂಗ್ಗಳಲ್ಲಿ ಸಹ ತನ್ನ ಕ್ರಮವನ್ನು ಸಮರ್ಥಿಸಿಕೊಂಡಿದ್ದ ಚೀನಾ ಕೊನೆಗೂ ತಾನು ಹಾಕಿದ ಷರತ್ತಿನ ಪೂರೈಕೆಯ ಭರವಸೆ ಪಡೆದೇ ವಾಪಸ್ ಹೋಗಿದೆ. ಹಾಗಾದರೆ ಅಂತಹ ಷರತ್ತಾದರೂ ಏನು?
ಈ ಬಿಕ್ಕಟ್ಟು ಬಗೆಹರಿದಿರುವುದನ್ನು ಪ್ರಕಟಿಸಿದ ವಿದೇಶಾಂಗ ಸಚಿವಾಲಯದ ಅಧಿಕಾರಿಗಳ ಮಾತಲ್ಲೇ ಹೇಳುವುದಾದರೆ 'ಪರಸ್ಪರ ಶಾಂತಿ-ಸೌಹಾರ್ದ ವಾತಾವರಣ ಮೂಡಿಸಲು, ಅನುಮಾನಗಳನ್ನು ನೀಗಿಸಲು ಮತ್ತು ವಾತಾವರಣ ತಿಳಿಗೊಳಿಸುವ ಉದ್ದೇಶದಿಂದ ಭಾರತ ಮತ್ತು ಚೀನಾ ಏಕಕಾಲಕ್ಕೆ ತಂತಮ್ಮ ನೆಲೆಗಳಿಂದ ಹಿಂತಿರುಗಲು ನಿರ್ಧರಿಸಿವೆ. ಅದರಂತೆ ಚೀನಾ ವಾಸ್ತವ ನಿಯಂತ್ರಣ ರೇಖೆಯ ಆಚೆಗೆ ತನ್ನ ನೆಲೆಗೆ ಮರಳಿದೆ'. ಅಂದರೆ ಅತಿಕ್ರಮಣ ಮಾಡಿದ ಚೀನಾ ಹಾಗೂ ತನ್ನದೇ ಪ್ರದೇಶದಿಂದ ಭಾರತ ತಮ್ಮ ಸೇನಾ ನೆಲೆಗಳಿಂದ ಹಿಂದೆ ಸರಿಯುತ್ತಿವೆ. ಇದಾವ ನ್ಯಾಯ ಸ್ವಾಮಿ? ನಮ್ಮ ಮನೆಯೊಳಗೆ ಕಳ್ಳ ಪ್ರವೇಶಿಸಿ ಮನೆ ಬಿಟ್ಟು ಹೋಗಬೇಕಾದರೆ, ನೀವೂ ಆ ಮನೆಯಲ್ಲಿ ಇರಬಾರದು ಎಂದು ಷರತ್ತು ವಿಧಿಸಿದರೆ ನೀವು ಒಪ್ಪುತ್ತೀರಾ? ಒಪ್ಪುವುದಿರಲಿ, ಈ ಮಾತು ಕೇಳುತ್ತಲೇ ಆ ಕಳ್ಳನ ಕಪಾಳಕ್ಕೆ ನಾಲ್ಕು ಬಿಗಿಯುತ್ತೀರಿ. ಆದರೆ ಆ ಧೈರ್ಯ, ಛಲ ಈ ನಮ್ಮ ನರಸತ್ತ ಯುಪಿಎ ಸರ್ಕಾರಕ್ಕೆ ಎಲ್ಲಿಂದ ಬರಬೇಕು ಹೇಳಿ. ದಿನೇ ದಿನೆ ಹಗರಣಗಳ ಸಾಲು, ಸಿಎಜಿ, ಸುಪ್ರೀಂಕೋರ್ಟ್, ಸಿವಿಸಿ ಮುಂತಾದ ಸಾಂವಿಧಾನಿಕ ಅಂಗಗಳಿಂದ ಪ್ರತಿನಿತ್ಯ ಉಗಿಸಿಕೊಳ್ಳುತ್ತಿರುವ, ಹೆಸರಿಗಷ್ಟೇ ಜೀವಂತವಿರುವ, ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಅಂಧಕಾರದಲ್ಲಿ ಹೆಜ್ಜೆ ಇಡುತ್ತಿರುವ ಈ ಯುಪಿಎ ಸರ್ಕಾರಕ್ಕೆ ಅಂತಹ ಎದೆಗಾರಿಕೆ ತೋರಲು ಸಾಧ್ಯವೂ ಇರಲಿಲ್ಲ, ಪುರಸೊತ್ತೂ ಇರಲಿಲ್ಲ. ಇಷ್ಟೆಲ್ಲ ರಾದ್ಧಾಂತ ನಡೆಯುತ್ತಿದ್ದಾಗ ಸಂಸತ್ತಿನ ಬಜೆಟ್ ಅಧಿವೇಶನದ ಎರಡನೇ ಕಂತು ಚಾಲ್ತಿಯಲ್ಲಿತ್ತು. ಸರ್ಕಾರಕ್ಕೆ ವಿತ್ತೀಯ ವಿಧೇಯಕ ಪಾಸು ಮಾಡಿಸಿಕೊಳ್ಳುವ ದೊಡ್ಡ ಜವಾಬ್ದಾರಿ ಇತ್ತು. ಜೊತೆಗೆ ಕಾಂಗ್ರೆಸ್ ಅಧಿನಾಯಕಿ ಸೋನಿಯಾಗಾಂಧಿ ಅವರ ನೆಚ್ಚಿನ ಆಹಾರ ಭದ್ರತಾ ಕಾಯಿದೆ ಮತ್ತು ಭೂಸುಧಾರಣಾ ಕಾಯಿದೆಗಳಿಗೆ ಅಂಗೀಕಾರ ಪಡೆಯುವ ಜರೂರತ್ತು ಹೆಚ್ಚಾಗಿತ್ತು. ಅದರ ಗಮನವೆಲ್ಲ ಆ ಕಡೆಗೇ ಕೇಂದ್ರವಾಗಿತ್ತು. ಇಲ್ಲದಿದ್ದರೆ ಚೀನಾದ ಮುಕ್ತ ಸವಾಲನ್ನು ಸ್ಥಳೀಯ ಸಮಸ್ಯೆ ಎಂದು ಸ್ವತಃ ಪ್ರಧಾನಿ ಮನಮೋಹನ್ ಸಿಂಗ್ ಹಾಗೂ ಭಾರತ ಮತ್ತು ಚೀನಾ ನಡುವಿನ ಸೌಹಾರ್ದ ಸಂಬಂಧದ ಸುಂದರ ವದನದ ಮೇಲೆ ಮೂಡಿರುವ ಚಿಕ್ಕ ಮೊಡವೆ ಎಂದು ವಿದೇಶಾಂಗ ಸಚಿವ ಸಲ್ಮಾನ್ ಖುರ್ಷಿದ್ ಜೋಕರ್ಗಳಂತೆ ಬಡಬಡಿಸಲು ಸಾಧ್ಯವಿತ್ತೆ? ಸಂಸತ್ ಅಧಿವೇಶನ ಆರಂಭಕ್ಕೆ ಮುನ್ನವೇ ಬೆಳಕಿಗೆ ಬಂದ ಸಿಬಿಐಗೇಟ್ ಹಗರಣ ಸರ್ಕಾರದ ಗಮನವನ್ನು ಸಂಪೂರ್ಣವಾಗಿ ತನ್ನ ಕಳಂಕ ತೊಳೆದುಕೊಳ್ಳುವುದು ಹೇಗೆ ಎಂಬುದರತ್ತಲೇ ಕೇಂದ್ರೀಕೃತವಾಗುವಂತೆ ಮಾಡಿತು. ದೇಶದ ಗಡಿಗೆ ಸಂಬಂಧಿಸಿದೆ ಮತ್ತು ಒಂದು ರೀತಿಯಲ್ಲಿ ಭಾರತದ ನೆಲದ ಮೇಲಿನ ಆಕ್ರಮಣವಾಗಿದ್ದ ಈ ಗಂಭೀರ ವಿಷಯದ ಬಗ್ಗೆ ಸಂಸತ್ತಿನಲ್ಲಿ ಹೇಳಿಕೆ ನೀಡುವ ಕನಿಷ್ಠ ಜವಾಬ್ದಾರಿಯನ್ನು ಸಹ ಈ ಸರ್ಕಾರ ಮೆರೆಯಲಿಲ್ಲ. ಸರ್ಕಾರದ ಈ ನಿರ್ಣಯದ ಫಲವಾಗಿ ಚೀನಾಗೆ ಆಯಕಟ್ಟಿನ ಪ್ರದೇಶದಲ್ಲಿ ಎರಡು ವಾರ ನಿರುಮ್ಮಳವಾಗಿ ತನ್ನ ಚಟುವಟಿಕೆ ನಡೆಸಲು ಅನುಕೂಲವಾಯಿತು.
ಸರ್ಕಾರದ ಈ ನಿಷ್ಕ್ರಿಯತೆಯಿಂದ ಬೆಚ್ಚಿದ ಸೇನಾ ಮುಖ್ಯಸ್ಥ ವಿಕ್ರಂ ಸಿಂಗ್, ಸಂಪುಟದ ಮುಂದೆ ಪ್ರಕರಣದ ಸೂಕ್ಷ್ಮತೆಯನ್ನು, ಅದರೆಲ್ಲ ಗಾಂಭೀರ್ಯದೊಂದಿಗೆ ಬಿಚ್ಚಿಟ್ಟಾಗಲೇ ಸರ್ಕಾರಕ್ಕೆ ಮನವರಿಕೆಯಾಗಿದ್ದು. ಇಷ್ಟಕ್ಕೂ ಚೀನಾ ಆಕ್ರಮಿಸಿಕೊಂಡಿದ್ದ ದೌಲತ್ಬೇಗ್ ಓಲ್ಡಿ ಪ್ರದೇಶ ಭಾರತದ ಮಟ್ಟಿಗೆ ತೀರಾ ಆಯಕಟ್ಟಿನ ಸ್ಥಳ. ಚೀನಾ ಒಳನುಸುಳಿರುವುದು ಭಾರತದ ಸೇನೆಯ ಗಮನಕ್ಕೆ ಬಂದರೂ ಸರ್ಕಾರದ ಆಣತಿ ಇಲ್ಲದೆ ಯಾವುದೇ ಪ್ರಮುಖ ಕಾರ್ಯಾಚರಣೆ ನಡೆಸಲು ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲಿ ಚೀನಾದ ದುಃಸ್ಸಾಹಸಕ್ಕೆ ತಕ್ಕ ಉತ್ತರ ನೀಡುವ ಅಗತ್ಯವನ್ನು ಸೇನಾ ಮುಖ್ಯಸ್ಥರು ಸರ್ಕಾರದ ಗಮನಕ್ಕೆ ತಂದರು. ಚೀನಾ ಬೀಡುಬಿಟ್ಟಿರುವ ಪ್ರದೇಶಕ್ಕೆ ವಾಸ್ತವ ನಿಯಂತ್ರಣರೇಖೆಯ ಈ ಬದಿಯಿಂದ ಸರಬರಾಜು ಮಾರ್ಗಗಳನ್ನು ಬಂದ್ ಮಾಡುವುದು, ಚೀನಾ ಟೆಂಟ್ ನಿರ್ಮಿಸಿರುವ ಪ್ರದೇಶದಲ್ಲಿಯೇ ಭಾರತೀಯ ಯೋಧರು ನೆಲೆ ಸ್ಥಾಪಿಸುವುದು ಸೇನೆಯ ಯೋಜನೆಯಾಗಿತ್ತು. ಅದರಂತೆಯೇ ರಾಕಿ ನಾಲಾ ಪ್ರದೇಶದಲ್ಲಿ ಚೀನಾದ ಸೈನಿಕರಿದ್ದ ಪ್ರದೇಶದ 300 ಮೀಟರ್ ದೂರದಲ್ಲಿ ಭಾರತೀಯ ಯೋಧರು ಟೆಂಟ್ ನಿರ್ಮಿಸಿದರು. ಚೀನಾದ 50 ಸೈನಿಕರಿಗೆ ಪ್ರತಿಯಾಗಿ ಭಾರತ ನಿಯೋಜಿಸಿದ್ದ 10-20 ಸೈನಿಕರನ್ನು ಯಾವುದೇ ಕಾರಣಕ್ಕೆ ಪರಿಸ್ಥಿತಿ ಹದ್ದುಮೀರದಂತೆ ತಡೆಯಬೇಕೆಂಬುದು ಸರ್ಕಾರದ ನಿಲುವಾಗಿತ್ತು. ಅದರಂತೆ ಭಾರತೀಯ ಸೇನೆಯೂ ನಡೆದುಕೊಂಡಿತ್ತು. ಆದರೆ ಈಗ ಭಾರತದ ಸೈನಿಕರೂ ಅಲ್ಲಿಂದ ಹಿಂತಿರುಗಬೇಕಾಗಿ ಬಂದಿದೆ. ವಾಸ್ತವ ನಿಯಂತ್ರಣ ರೇಖೆಯ ಸಮೀಪವೇ ಚೀನಾ ತನ್ನ ಮಿಲಿಟರಿ ನೆಲೆಗಳನ್ನೂ ಸ್ಥಾಪಿಸಿದೆ. ಆದರೆ ಭಾರತಕ್ಕೆ ಆ ಅವಕಾಶ ಈಗ ನಿರಾಕರಿಸಿದಂತಾಗಿದೆ. ಅಲ್ಲದೆ ಚೀನಾ ಮತ್ತೆ ಇಂತಹ ದುಸ್ಸಾಹಸ ಮಾಡುವುದಿಲ್ಲ ಎಂಬುದಕ್ಕೆ ಯಾವುದೇ ಖಾತ್ರಿ ಇಲ್ಲ. ಹಾಗಾದರೆ ಭಾರತ ಏನು ಮಾಡಬಹುದಿತ್ತು? ಇಲ್ಲಿ ಒಂದು ಅಂಶ ಗಮನಿಸಬೇಕು. ಚೀನಾವು ತನ್ನ ಯಾವುದೇ ಉನ್ನತ ನಾಯಕನ ಭಾರತ ಪ್ರವಾಸಕ್ಕೆ ಮುನ್ನ ಇಂತಹ ಉಪದ್ವ್ಯಾಪಗಳನ್ನು ಸೃಷ್ಟಿಸುತ್ತದೆ. 2006ರಲ್ಲಿ ಅಂದಿನ ಚೀನಾ ಅಧ್ಯಕ್ಷ ಹು ಜಿಂಟಾವೊ ಬರುವುದಕ್ಕೆ ಮುನ್ನ ಹೊಸದಿಲ್ಲಿಯಲ್ಲಿರುವ ಚೀನಾದ ರಾಯಭಾರಿ ಅರುಣಾಚಲ ಪ್ರದೇಶ ಚೀನಾದ ಭಾಗ ಎಂಬುದನ್ನು ಭಾರತ ಅಲ್ಲಗಳೆಯಲು ಸಾಧ್ಯವೇ ಇಲ್ಲ ಎಂದು ನಾಲಗೆ ಹರಿಯಬಿಟ್ಟಿದ್ದರು. ನಂತರ 2010ರಲ್ಲಿ ವೆನ್ಜಿಯಾಬಾವೊ ಆಗಮನಕ್ಕೆ ಮುನ್ನ ಚೀನಾವು ಜಮ್ಮು-ಕಾಶ್ಮೀದ ಜನರಿಗೆ ಲಗತ್ತು ವೀಸಾ (Stapled Visa) ನೀಡುವ ಮೂಲಕ ಭಾರತವನ್ನು ಪ್ರಚೋದಿಸಲು ಪ್ರಯತ್ನಿಸಿತ್ತು. ಇದರ ಹಿಂದಿರುವ ಉದ್ದೇಶ ಸ್ಪಷ್ಟ. ಭಾರತ ಮಾತುಕತೆಯ ಸಂದರ್ಭದಲ್ಲಿ ಗಡಿ ವಿಷಯವನ್ನು ಪ್ರಧಾನವಾಗಿ ಪ್ರಸ್ತಾಪಿಸದಿರಲಿ ಎಂಬುದೇ ಅದರ ಹವಣಿಕೆ. ಅದರ ಬದಲಾಗಿ ಇಂತಹ ವಿವಾದ ಸೃಷ್ಟಿಸಿ ಮಾತುಕತೆಯ ಜಾಡು ತಪ್ಪಿಸುವುದು ಚೀನಾ ರಾಜತಾಂತ್ರಿಕತೆಯ ಷಡ್ಯಂತ್ರ. ಇದು ಸರ್ಕಾರಕ್ಕೆ ಈವರೆಗೂ ಅರಿವಿಗೆ ಬಂದಂತಿಲ್ಲ. ಈ ಬಗ್ಗೆ ರಕ್ಷಣಾ ವ್ಯವಹಾರಗಳ ತಜ್ಞ ಬ್ರಹ್ಮ ಚೆಲ್ಲಾನಿ ನ್ಯೂಯಾರ್ಕ್ ಟೈಮ್ಸ್ ಬ್ಲಾಗ್ನಲ್ಲಿ ವಿಶ್ಲೇಷಿಸಿದ್ದಾರೆ.
ಈ ಬಾರಿಯೂ ಚೀನಾದ ನೂತನ ಪ್ರಧಾನಿ ಭಾರತಕ್ಕೆ ಆಗಮಿಸುವುದಿದೆ. ಅದಕ್ಕೆ ಪೂರ್ವಭಾವಿಯಾಗಿ ವಿದೇಶಾಂಗ ಸಚಿವ ಸಲ್ಮಾನ್ ಖುರ್ಷಿದ್ ಚೀನಾಕ್ಕೆ ಭೇಟಿ ನೀಡುವ ಕಾರ್ಯಕ್ರಮವೂ ಇತ್ತು (ಈಗ ಆ ಭೇಟಿ ಮುಗಿದಿದೆ). ಯುಪಿಎ ಸರ್ಕಾರಕ್ಕೆ ನಿಜವಾಗಲೂ ನರ ಇದ್ದಿದ್ದರೆ ಇದೇ ವಿಷಯವಾಗಿ ಚೀನಾ ಪ್ರಧಾನಿಯ ಭೇಟಿ ರದ್ದುಪಡಿಸಬಹುದಿತ್ತು. ಇದರಿಂದ ಚೀನಾಕ್ಕೆ ತೀವ್ರ ಮುಖಭಂಗವಾಗುತ್ತಲೂ ಇತ್ತು. ಅದಕ್ಕೆ ಮುನ್ನ ಯಾವುದೇ ಮಾತುಕತೆಗೆ ಒಪ್ಪುವ ಮೊದಲು ವಿದೇಶಾಂಗ ವ್ಯವಹಾರಗಳ ಸಚಿವರ ಭೇಟಿಯನ್ನು ರದ್ದು ಮಾಡಿ ಚೀನಾಕ್ಕೆ ಒಂದು ಕಠಿಣ ಸಂದೇಶ ರವಾನಿಸಬಹುದಿತ್ತು. ಹಾಗೆ ಮಾಡುವ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚೀನಾದ ಸೋಗಲಾಡಿತನವನ್ನು ಬಯಲು ಮಾಡಬಹುದಿತ್ತು. 1987 ಆದಿಭಾಗದಲ್ಲಿ ಭಾರತವು ಅರುಣಾಚಲ ಪ್ರದೇಶಕ್ಕೆ ರಾಜ್ಯದ ಸ್ಥಾನಮಾನ ನೀಡಿದಾಗಲೂ ಚೀನಾ ಗಡಿಗುಂಟ ಪಡೆಗಳನ್ನು ನಿಯೋಜಿಸಿ ಬೆದರಿಕೆಯ ವಾತಾವರಣ ಸೃಷ್ಟಿಸಿತ್ತು. ಆದರೆ ಆಗ ಪ್ರಧಾನಿಯಾಗಿದ್ದ ರಾಜೀವ್ ಗಾಂಧಿ ಅವರಾಗಲಿ, ಸೇನಾ ಮುಖ್ಯಸ್ಥ ಕೆ. ಸುಂದರ್ಜೀ ಆಗಲಿ ಧೃತಿಗೆಡದೆ ಭಾರತೀಯ ಸೇನೆಯ ಜಮಾವಣೆಗೆ ಮುಂದಾದರು. ನಂತರ ಚೀನಾ ಸುಮ್ಮನಾಗಬೇಕಾಯಿತು. ಇಲ್ಲೂ ಸಹ ಭಾರತವು ಅದೇ ಕ್ರಮವನ್ನು ಇನ್ನಷ್ಟು ದಿನ ಅನುಸರಿಸಬಹುದಿತ್ತು. ಚೀನಾದ ಸೈನಿಕರು ತಾವಾಗಿಯೇ ಹಿಂತಿರುಗುವ ತನಕ ಭಾರತೀಯ ಪಡೆಗಳನ್ನು ರಾಕಿ ನಾಲಾದಲ್ಲಿ ಇರಿಸಿ ಯಾವುದೇ ಬೆದರಿಕೆಗೆ ನಾವು ಜಗ್ಗುವುದಿಲ್ಲ ಎಂಬುದನ್ನು ತೋರ್ಪಡಿಸಬಹುದಿತ್ತು. ಆದರೆ ಅಂತಹ ಗಟ್ಸ್ ಈ ಸರ್ಕಾರಕ್ಕೆ ಎಲ್ಲಿಂದ ಬರಬೇಕು? ದೇಶಕ್ಕೇ ಭಾರವಾಗಿದ್ದರೂ ತನಗದರ ಅರಿವೇ ಇಲ್ಲ ಎಂಬಂತೆ ತನ್ನ ಅವಧಿ ಪೂರೈಸುವುದನ್ನೇ ದೊಡ್ಡ ಗುರಿಯಾಗಿರಿಸಿಕೊಂಡಿರುವ, ಹಗರಣಗಳನ್ನು ಹೇಗೆ ಸಮಾಧಿ ಮಾಡಬೇಕು ಎಂಬುದರ ಬಗ್ಗೆಯೇ ಚಿಂತಿತವಾಗಿರುವ ಈ ಸರ್ಕಾರದಿಂದ ಅಂತಹ ಗಡಸುತನ ನಿರೀಕ್ಷಿಸುವುದಾದರೂ ಹೇಗೆ? ಇಲ್ಲಿ ಇನ್ನೂ ಒಂದು ವಿಷಯ, 2001ರಲ್ಲಿ ರಚಿಸಲಾದ ಕಾರ್ಗಿಲ್ ಪರಾಮರ್ಶೆ ಸಮಿತಿಯು ದೇಶದ ಗಡಿಭಾಗಗಳ ಏಕಕಮಾಂಡ್ ವ್ಯವಸ್ಥೆ, ಅದರಲ್ಲೂ ಸೇನಾ ಕಮಾಂಡ್ ವ್ಯವಸ್ಥೆಯೇ ಬೇಕೆಂದು ಹೇಳಿತ್ತು. ಅದರಂತೆ ಇಂದು ಕಾಶ್ಮೀರ ಮತ್ತು ಈಶಾನ್ಯ ಭಾಗಗಳಲ್ಲಿ ಗಡಿಯಲ್ಲಿ ಅರೆಸೇನಾ ತುಕಡಿಗಳಿದ್ದರೂ ಅವು ಸೇನಾ ಕಮಾಂಡ್ಗೆ ಒಳಪಟ್ಟಿವೆ. ಆದರೆ ಟಿಬೆಟ್ ಬಳಿಯ ಚೀನಾ ಗಡಿಯಲ್ಲಿ ಇಂದಿಗೂ ಇರುವುದು ಇಂಡೊ ಟಿಬೆಟಿಯನ್ ಗಡಿ ಪಡೆಯ ಕಾವಲು. ಈ ಪಡೆ ಸೇನಾ ಆಣತಿಯ ವ್ಯಾಪ್ತಿಗೆ ಬರದೆ ನೇರ ಗೃಹ ಸಚಿವಾಲಯದ ಆದೇಶ ಎದುರು ನೋಡುತ್ತದೆ. ಈಗಲಾದರೂ ಸರ್ಕಾರ ಈ ವ್ಯವಸ್ಥೆ ಬದಲಿಸಿ ಸೇನಾ ಸುಪರ್ದಿಗೆ ಈ ಪ್ರದೇಶವನ್ನು ನೀಡುವ ತುರ್ತು ಅಗತ್ಯವಿದೆ. ಈಗ ಹೇಳಿ? ಇಡೀ ಪ್ರಕರಣದಲ್ಲಿ ರಾಜತಾಂತ್ರಿಕವಾಗಿ ಮೇಲುಗೈ ಸಾಧಿಸಿದ್ದು ಯಾರು, ಚೀನಾವೋ, ಭಾರತವೋ?

- ಕೆ.ಎಸ್.ಜಗನ್ನಾಥ್
jagannath.kudinoor@gmail.com


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.