ಅಂಕಣಗಳು

ಕರುಳು ಮಾತಾಡಿತ್ತು, ಅಮ್ಮ ಕಾಯುತ್ತಿದ್ದಳು...

Published On :

ತುಮಕೂರು ಜಿಲ್ಲೆ ಶಿರಾ ತಾಲೂಕಿನಿಂದ ಆರು ಕಿಲೋಮೀಟರ್ ದೂರವಿರುವ ಗ್ರಾಮವೇ ಸೋಮಲಾಪುರ. ಅಲ್ಲಿನ ಕೃಷ್ಣಪ್ಪ-ಸಾವಿತ್ರಮ್ಮ ದಂಪತಿಯ ಮುದ್ದಿನ ಮಗಳೇ ರಾಜೇಶ್ವರಿ. ತುಂಬಾ ಮುದ್ದಿನಿಂದ ಬೆಳೆಸಿದರೆ ಮಕ್ಕಳು ಹಠಮಾರಿಗಳಾಗುತ್ತಾರೆ. ಅತಿಯಾದ ಸಲುಗೆ ನೀಡಿದರೆ ಹಾಳಾಗಿ ಹೋಗುತ್ತಾರೆ ಎಂಬುದು ಕೃಷ್ಣಪ್ಪನವರ ನಂಬಿಕೆಯಾಗಿತ್ತು. ಅದನ್ನೇ ಅವರು ಹೆಂಡತಿಗೂ ಹೇಳಿದ್ದರು. ಮಗಳನ್ನು ಶಿಸ್ತಿನಿಂದ ಬೆಳೆಸಬೇಕು. ಅವಳನ್ನು ಎಂಬಿಬಿಎಸ್ ಓದಿಸಬೇಕು ಎಂಬುದು ನನ್ನ ಆಸೆ. ನೀನು ಮುದ್ದು ಮಾಡಿ ಅವಳನ್ನು ಹಾಳು ಮಾಡಬೇಡ ಎಂದು ತಾಕೀತು ಮಾಡಿದ್ದರು. ಆದರೆ ಎಲ್ಲವೂ ಕೃಷ್ಣಪ್ಪನವರು ಅಂದುಕೊಂಡಂತೆ ನಡೆಯಲಿಲ್ಲ. ತಂದೆಯ ಅತಿಯಾದ ಶಿಸ್ತು ರಾಜೇಶ್ವರಿಗೆ ಕಿರಿಕಿರಿ ಅನ್ನಿಸತೊಡಗಿತು. ಸೆಕೆಂಡ್ ಪಿಯೂಸಿಗೆ ಬರುತ್ತಿದ್ದಂತೆಯೇ ಅವಳು ಎಲ್ಲರಿಗೂ ಎದುರು ಮಾತಾಡಲು ಶುರುವಿಟ್ಟಳು. ಯಾರಾದರೂ ಬುದ್ಧಿ ಹೇಳಲು ಬಂದರೆ, ನನ್ನ ಭವಿಷ್ಯ ರೂಪಿಸಿಕೊಳ್ಳಲು ನನಗೆ ಗೊತ್ತಿದೆ. ನೀವು ತೆಪ್ಪಗಿದ್ರೆ ಒಳ್ಳೆಯದು ಎಂದುಬಿಡುತ್ತಿದ್ದಳು. ಅಷ್ಟಕ್ಕೇ ಸುಮ್ಮನಾಗದೆ, ತನ್ನದೇ ಕಾಲೇಜಿನ ಹಿರಿಯ ವಿದ್ಯಾರ್ಥಿಯೊಂದಿಗೆ ಸುತ್ತಾಡಲು ಆರಂಭಿಸಿದಳು. ಕೆಲವೇ ದಿನಗಳಲ್ಲಿ ಈ ವಿಷಯ ಕೃಷ್ಣಪ್ಪನವರನ್ನು ತಲುಪಿತು. ಸಿಟ್ಟಿಗೆದ್ದ ಅವರು-'ನೀನು ಕಾಲೇಜಿಗೆ ಹೋಗಿ ಮನೆ ಮರ್ಯಾದೇನ ಹರಾಜು ಹಾಕೋದು ಬೇಡ. ನಾಳೆಯಿಂದ ತೆಪ್ಪಗೆ ಮನೇಲಿರು ಎಂದು ಆರ್ಡರ್ ಮಾಡಿದರು. ಅಪ್ಪನ ಮಾತಿಗೆ ರಾಜೇಶ್ವರಿ ಕ್ಯಾರೇ ಎನ್ನಲಿಲ್ಲ. ಎರಡು ದಿನಗಳ ನಂತರ ಒಂದು ಪುಟ್ಟ ಲಗೇಜಿನೊಂದಿಗೆ ಹೇಳದೇ ಕೇಳದೆ ಮನೆಯಿಂದ ಎದ್ದು ಬಂದಳು.
ಮಗಳಿಂದ ಇಂಥ ವರ್ತನೆಯನ್ನು ಕೃಷ್ಣಪ್ಪನವರು ನಿರೀಕ್ಷಿಸಿರಲಿಲ್ಲ. ಮುದ್ದಿನ ಮಗಳ ಬಗ್ಗೆ ಕಟ್ಟಿಕೊಂಡಿದ್ದ ಆಶಾಸೌಧ ತಮ್ಮ ಕಣ್ಮುಂದೆಯೇ ಕುಸಿದು ಬಿದ್ದಾಗ ಅವರು ಶಾಕ್‌ಗೆ ಒಳಗಾದರು. ಕೆಲವೇ ದಿನಗಳಲ್ಲಿ ಅವರಿಗೆ ಸ್ಟ್ರೋಕ್ ಹೊಡೆಯಿತು. ಒಂದು ವರ್ಷ ಕಳೆದರೂ ಈ ಆಘಾತದಿಂದ ಅವರು ಚೇತರಿಸಿಕೊಳ್ಳಲೇ ಇಲ್ಲ. ಅದೊಂದು ಸಂಜೆ ದೇವರ ಪೂಜೆಗೆಂದು ಕೂತವರು, ಅಲ್ಲಿಯೇ ಆಯತಪ್ಪಿ ಬಿದ್ದುಬಿಟ್ಟರು. ನೆರೆಹೊರೆಯವರು ಓಡಿ ಬರುವ ವೇಳೆಗೆ ಅವರ ದೇಹ ತಣ್ಣಗಾಗಿತ್ತು.
ಈ ಕಡೆ, ಮನೆಬಿಟ್ಟು ಬಂದಿದ್ದಳಲ್ಲ ರಾಜೇಶ್ವರಿ; ಅವಳು ಪ್ರೀತಿಸಿದ ಹುಡುಗನೊಂದಿಗೆ ಮೊದಲ ನಾಲ್ಕು ತಿಂಗಳು ಊರೂರು ಅಲೆದಳು. ಹೀಗೇ ಅವರು ಬೆಂಗಳೂರಿಗೆ ಬಂದಾಗ, ಮೆಜೆಸ್ಟಿಕ್‌ನ ಗದ್ದಲದ ಮಧ್ಯೆಯೇ ಆ ಹುಡುಗನ ಕಡೆಯವರು ಸಿಕ್ಕಿಬಿಟ್ಟರು. ಆನಂತರದಲ್ಲಿ ಅವರು ಏನು ಮೋಡಿ ಮಾಡಿದರೋ ಗೊತ್ತಿಲ್ಲ; ಆ ಹುಡುಗ ರಾಜೇಶ್ವರಿಯನ್ನು ವಿನಾಕಾರಣ ಹಂಗಿಸಲು ಆರಂಭಿಸಿದ. ಒಂದೆರಡು ಸಂದರ್ಭದಲ್ಲಿ ಮಾತಿಗೆ ಮಾತು ಬೆಳೆದು ಹೊಡೆದೂ ಬಿಟ್ಟ. ಹೀಗೇ ದಿನಗಳು ಉರುಳುತ್ತಾ ಹೋದವು. ಯೌವನದ ಬಿಸಿ ಆರುತ್ತಾ ಹೋದಂತೆ ಅವನಿಗೆ ರಾಜೇಶ್ವರಿಯ ಮೇಲೆ ಆಸಕ್ತಿ ಕಡಿಮೆಯಾಗತೊಡಗಿತು. ಅದೊಂದು ಮುಂಜಾನೆ, ರಾಜೇಶ್ವರಿಗೆ ಸೇರಿದ್ದ ಒಡವೆಗಳನ್ನು ಗಂಟುಕಟ್ಟಿಕೊಂಡು ಅವನು ಕಣ್ಮರೆಯಾಗಿ ಬಿಟ್ಟ. ಒಂದು ಕಡೆ ತಂದೆಯನ್ನು ಕಳೆದುಕೊಂಡ ನೋವು, ಮತ್ತೊಂದು ಕಡೆ ಪ್ರೀತಿಸಿದ ಹುಡುಗನೇ ಮಾಡಿದ ಮರಾಮೋಸದಿಂದ ರಾಜೇಶ್ವರಿ ತತ್ತರಿಸಿ ಹೋದಳು. ಪೆಟ್ಟುಗಳ ಮೇಲೆ ಪೆಟ್ಟು ತಿಂದ ಮೇಲಾದರೂ ಆಕೆ ಹುಷಾರಾಗಿ ಹೆಜ್ಜೆ ಇಡಬೇಕಾಗಿತ್ತು. ಆದರೆ ಹಾಗಾಗಲಿಲ್ಲ. ಸಂಕಟದಿಂದ ಒದ್ದಾಡುತ್ತಿದ್ದ ಸಂದರ್ಭದಲ್ಲಿಯೇ ಆಕೆಗೆ ಘರ್‌ವಾಲಿಯೊಬ್ಬಳ ಪರಿಚಯವಾಯಿತು. ಆರಾಮಾಗಿ ಜೀವನ ನಡೆಸುವ ದಾರಿ ತೋರಿಸ್ತೇನೆ ಬಾ ಎಂದ ಆಕೆ, ರಾಜೇಶ್ವರಿಯನ್ನು ಕತ್ತಲಲೋಕಕ್ಕೆ ಕರೆದೊಯ್ದೇ ಬಿಟ್ಟಳು. ನಂತರದ ಕೆಲವೇ ದಿನಗಳಲ್ಲಿ ರಾಜೇಶ್ವರಿ ವೇಶ್ಯೆಯಾಗಿದ್ದಾಳಂತೆ. ಜೋರಾಗಿ ಸಂಪಾದನೆ ಮಾಡಿದ್ದಾಳಂತೆ ಎಂಬ ಸುದ್ದಿ ತುಮಕೂರು, ಶಿರಾದ ಗಡಿ ದಾಟಿ ಸೋಮಲಾಪುರದ ಮನೆಗಳನ್ನೂ ತಲುಪಿತ್ತು.
ಮುಂದಿನ ಆರು ವರ್ಷಗಳು ಹೀಗೆ ಕಳೆದದ್ದು ಗೊತ್ತೇ ಆಗಲಿಲ್ಲ. ಈ ವೇಳೆಗೆ ರಾಜೇಶ್ವರಿಯ ಸೌಂದರ್ಯ ಕುಂದುತ್ತಾ ಬಂತು. ಆಕೆಗೂ ಸ್ಪರ್ಧಿಗಳು ಹುಟ್ಟಿಕೊಂಡರು. ದ್ವೇಷಿಸುವವರೂ ಸೃಷ್ಟಿಯಾದರು. ಎರಡು ಕಡೆಯವರೂ ಸೇರಿಕೊಂಡು ರಾಜೇಶ್ವರಿಯ ಮನೆಯ ಮೇಲೆ ರೇಡ್ ಮಾಡಿಸಿಬಿಟ್ಟರು. ಆನಂತರದಲ್ಲಿ ರಾಜೇಶ್ವರಿಯ ಬದುಕು ಬರ್ಬಾದ್ ಆಗಿಹೋಯಿತು. ನೆರೆಹೊರೆಯವರು ಛೀ, ಥೂ ಎಂದು ಬೈದು, ಧರ್ಮದೇಟು ಹಾಕಿ ಓಡಿಸಿಬಿಟ್ಟರು. ಮೇಲಿಂದ ಮೇಲೆ ನಡೆದ ದಾಳಿಯಿಂದ ಅಕ್ಷರಶಃ ನಲುಗಿ ಹೋದ ರಾಜೇಶ್ವರಿ ಹೊಟ್ಟೆ ತುಂಬಿಸಿಕೊಳ್ಳುವ ಸಲುವಾಗಿ ಭಿಕ್ಷುಕರ ಪುನರ್ವಸತಿ ಕೇಂದ್ರಕ್ಕೂ ಬಂದಳು. ಈ ಸುದ್ದಿಯೂ ಯಾರ್ಯಾರ ಮೂಲಕವೋ ತುಮಕೂರಿನ ಗಡಿ ದಾಟಿ ಸೋಮಲಾಪುರದ ಸಾವಿತ್ರಮ್ಮನನ್ನು ತಲುಪಿತು. ಆಕೆ ತಡ ಮಾಡಲಿಲ್ಲ. ತಕ್ಷಣವೇ ಊರಲ್ಲಿದ್ದ ಸುಶಿಕ್ಷಿತರನ್ನು ಭೇಟಿ ಮಾಡಿದಳು. ದೊಡ್ಡ ಗಾತ್ರದ ಹತ್ತು ಪೋಸ್ಟರ್‌ಗಳಿಗೆ ತನ್ನ ಮಗಳ ಭಾವಚಿತ್ರ ಅಂಟಿಸಿ, ಅದರ ಕೆಳಗೆ-'ನೀನು ಏನೇ ತಪ್ಪು ಮಾಡಿದ್ದರೂ ಎಂದೆಂದಿಗೂ ನನ್ನ ಪಾಲಿಗೆ ಮುದ್ದಿನ ಮಗಳೇ. ಆಗಿಹೋಗಿರುವುದಕ್ಕೆ ಕೊರಗುತ್ತಾ ಕೂರಬೇಡ. ತಕ್ಷಣವೇ ಊರಿಗೆ ಬಂದು ಬಿಡು' ಎಂದು ದಪ್ಪಕ್ಷರಗಳಲ್ಲಿ ಬರೆಸಿ ಅದನ್ನು ಬೆಂಗಳೂರಿನ ಎಲ್ಲ ಭಿಕ್ಷುಕರ ಪುನರ್ವಸತಿ ಕೇಂದ್ರದಲ್ಲಿ ಅಂಟಿಸಿ ಹೋಗಿಬಿಟ್ಟಳು. ಮಧ್ಯಾಹ್ನದ ಊಟಕ್ಕೆಂದು ಪುನರ್ವಸತಿ ಕೇಂದ್ರಕ್ಕೆ ಬಂದ ರಾಜೇಶ್ವರಿ, ಅಲ್ಲಿ ಕಾಣಿಸಿದ ಬೋರ್ಡ್ ಬರಹವನ್ನು ಎರಡೆರಡು ಬಾರಿ ಓದಿಕೊಂಡಳು. ಮರುಕ್ಷಣವೇ ಯಾರ್ಯಾರ ಮುಂದೆಯೋ ಅಂಗಲಾಚಿ, ಬಸ್ ಚಾರ್ಜ್‌ಗೆ ಆಗುವಷ್ಟು ಹಣ ಹೊಂಚಿಕೊಂಡು ಶಿರಾ ತಲುಪಿಕೊಂಡಳು. ಅಲ್ಲಿಂದ ನಡೆದುಕೊಂಡೇ ಊರು ತಲುಪಿದಾಗ ರಾತ್ರಿ ಒಂಭತ್ತು ದಾಟಿತ್ತು. ರಾಜೇಶ್ವರಿ ನಡುಗುತ್ತಲೇ ತಮ್ಮ ಮನೆಯ ಬಳಿ ಬಂದಳು. ಮನೆಯ ಬಾಗಿಲು ಆಗಲೂ ತೆರೆದೇ ಇತ್ತು. ಒಳಮನೆಯಲ್ಲಿ ಲೈಟಿತ್ತು. ಒಂಟಿ ಹೆಂಗಸು ಮನೇಲಿದ್ದಾಳೆ ಎಂದು ತಿಳಿದ ಮೇಲೆ ಕಳ್ಳರು ನುಗ್ಗಿ ಎಲ್ಲವನ್ನೂ ದೋಚಿದ್ದಾರೇನೋ. ಹಾಗಾಗಿ ಮನೆಯ ಬಾಗಿಲು ತೆರೆದೇ ಇದೆ. ಅಮ್ಮನ ಗತಿ ಏನಾಗಿದೆಯೋ ಎಂದುಕೊಂಡೇ ಆಕೆ ಒಳಗೆ ಬಂದರೆ-ಅಲ್ಲಿ ದೇವರ ಚಿತ್ರಪಟದ ಮುಂದೆ ಸಾವಿತ್ರಮ್ಮ ಕೂತಿದ್ದರು. ಅವರ ಕೈಯಲ್ಲಿ ರಾಜೇಶ್ವರಿಯ ಭಾವಚಿತ್ರವಿತ್ತು. 'ಅಮ್ಮಾ' ಎಂದು ಚೀರುತ್ತಾ ಒಂದೇ ನೆಗೆತಕ್ಕೆ ಅಮ್ಮನ ತೆಕ್ಕೆಗೆ ಬಿದ್ದಳು ರಾಜೇಶ್ವರಿ. ಆನಂತರದ ಎಷ್ಟೋ ಹೊತ್ತು ಆ ಮನೆಯಲ್ಲಿ ಮೌನ ಮಾತಾಗಿತ್ತು. ಕಡೆಗೊಮ್ಮೆ, ಅಮ್ಮನ ತೆಕ್ಕೆ ಬಿಡಿಸಿಕೊಂಡ ರಾಜೇಶ್ವರಿ ಕೇಳಿಯೇ ಬಿಟ್ಟಳು: ರಾತ್ರಿ ಇಷ್ಟು ಹೊತ್ತಾದ್ರೂ ಬಾಗಿಲು ತೆರೆದುಕೊಂಡೇ ಇತ್ತಲ್ಲ ಯಾಕಮ್ಮ?' ಮಗಳನ್ನೇ ಮರುಕದಿಂದ ನೋಡುತ್ತಾ ಸಾವಿತ್ರಮ್ಮ ಹೇಳಿದರು: 'ಇವತ್ತಲ್ಲ ನಾಳೆ ನನ್ನ ಮಗಳು ಬಂದೇ ಬರ್ತಾಳೆ ಎಂದು ನನ್ನ ಕರುಳು ಹೇಳ್ತಾನೇ ಇತ್ತು. ಮಗಳೇ, ಹಾಗಾಗಿ, ನೀನು ಮನೆ ಬಿಟ್ಟು ಹೋದ ದಿನದಿಂದ ಇವತ್ತಿನವರೆಗೂ ನಾನು ಬಾಗಿಲು ತೆರೆದಿಟ್ಟು ನಿನ್ನ ನಿರೀಕ್ಷೆಯಲ್ಲೇ ಇದ್ದೆ. ಬೇರೆಯವರ ದೃಷ್ಟೀಲಿ ನೀನು ಏನೇ ಆಗಿರಬಹುದು. ನನ್ನ ಪಾಲಿಗಂತೂ ಮುದ್ದಿನ ಮಗಳು ಅಷ್ಟೆ...' ಸಾವಿತ್ರಮ್ಮನವರ ಈ ಮಮತೆಯ ಮಾತು ರಾಜೇಶ್ವರಿ ಬದಲಾಗುವುದಕ್ಕೂ ಕಾರಣವಾಯಿತು. ಈಗ ಶಿರಾದಲ್ಲಿ ಪೆಟ್ಟಿಗೆ ಅಂಗಡಿ ಇಟ್ಟುಕೊಂಡಿರುವ ರಾಜೇಶ್ವರಿ ನೆಮ್ಮದಿಯಿಂದ ಇದ್ದಾಳೆ, ಅಮ್ಮನೊಂದಿಗೆ...
ಇವತ್ತು ಅಮ್ಮಂದಿರ ದಿನ ಅಂದುಕೊಂಡಾಗಲೇ ಅಚಾನಕ್ಕಾಗಿ ಈ ಅಮ್ಮ-ಮಗಳು ನೆನಪಾಗಿಬಿಟ್ಟರು...

- ನಾನು ಪ್ರಣತಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.