ಬಿರುಗಾಳಿಗೆ ಹಾರುವವನು ಆಂಜನೇಯನಾದಾನೇ?
ಕರ್ನಾಟಕ 'ಕೈ'ವಶವಾಗಿದೆ. ಕಾಂಗ್ರೆಸ್‌ನ ಸಂತೋಷಕ್ಕೆ ಪಾರವಿಲ್ಲ. ಅದು ಸಹಜ ಕೂಡ.
ಕರ್ನಾಟಕ 'ಕೈ'ವಶವಾಗಿದೆ. ಕಾಂಗ್ರೆಸ್‌ನ ಸಂತೋಷಕ್ಕೆ ಪಾರವಿಲ್ಲ. ಅದು ಸಹಜ ಕೂಡ.
ಆದರೆ ರಾಜ್ಯದ ಗೆಲುವನ್ನೇ ಮುಂದಿಟ್ಟುಕೊಂಡು ತನ್ನ ಹುಳುಕುಗಳನ್ನು ಮುಚ್ಚುವ ಕಾರ್ಯಕ್ಕೆ ಕಾಂಗ್ರೆಸ್ 'ಕೈ'ಹಾಕಿದೆ. ಹತಾಶೆಯ ನಡುವೆ ಸಿಕ್ಕಿರುವ ಹುಲ್ಲುಕಡ್ಡಿಯಂತಹ ಗೆಲುವನ್ನೇ ಬ್ರಹ್ಮಾಸ್ತ್ರ ಎಂದು ಕಾಂಗ್ರೆಸ್‌ನ ರಾಷ್ಟ್ರೀಯ ನಾಯಕರು ಭಾವಿಸಿದಂತಿದೆ. ಕೇಂದ್ರ ಸರ್ಕಾರದ ಹಲ್ಕಟ್ ಕೆಲಸಗಳಿಗೆಲ್ಲ ರಾಜ್ಯದ ಗೆಲುವು ಜನರು ಒಪ್ಪಿಗೆಯ ಮುದ್ರೆ ಒತ್ತಿದ್ದಾರೆ ಎಂಬಂತೆ ಬಿಂಬಿಸಲು ತೊಡಗಿದ್ದಾರೆ.
ವಿಶೇಷವಾಗಿ ಒಲ್ಲದ ಮನಸ್ಸಿನಿಂದ ರಾಜಕೀಯದಲ್ಲಿರುವ ರಾಹುಲ್ ಗಾಂಧಿಗೆ ಕರ್ನಾಟಕದ ಗೆಲುವಿನ ಕಿರೀಟ ತೊಡಿಸಲು ಕಾಂಗ್ರೆಸ್ ನಾಯಕರು ಪೈಪೋಟಿಗಿಳಿದಿದ್ದಾರೆ. ಮಾತಾಡಿದರೆ ಮುತ್ತುದುರಿದಂತೆ ಆಡುವ ಪ್ರಧಾನಿ ಮನಮೋಹನ ಸಿಂಗ್ ಕೂಡ ರಾಹುಲ್ ಹೊಗಳುವ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಬಹುಶಃ ಇವರ ಈ ಪೈಪೋಟಿ ನೋಡಿದರೆ ರಾಹುಲ್ ಗಾಂಧಿಗೂ ಹೇಸಿಗೆಯಾಗಬಹುದೇನೊ. ಯಾಕೆಂದರೆ ರಾಹುಲ್ ವ್ಯಕ್ತಿಗತವಾಗಿ ಇಂತಹುದನ್ನೆಲ್ಲ ಇಷ್ಟಪಡುವ ವ್ಯಕ್ತಿಯಲ್ಲ.
ಕರ್ನಾಟಕದ ಚುನಾವಣೆಯನ್ನಿಟ್ಟುಕೊಂಡು ರಾಹುಲ್ ಗಾಂಧಿಯನ್ನು ರಾಷ್ಟ್ರದ ಮಹಾನ್ ನಾಯಕನನ್ನಾಗಿಸುವ ಮತ್ತು ನರೇಂದ್ರ ಮೋದಿಯನ್ನು ಗುಜರಾತ್‌ಗೆ ಸೀಮಿತಗೊಳಿಸುವ ಮಹತ್ಕಾರ್ಯದಲ್ಲಿ ನಾಯಕರು ನಿರತರಾಗಿದ್ದಾರೆ. ಎಲ್ಲರೂ ಒಪ್ಪಲೇಬೇಕಾದ ಸಂಗತಿಯೆಂದರೆ ನರೇಂದ್ರ ಮೋದಿ ಮತ್ತು ರಾಹುಲ್ ಗಾಂಧಿ ರಾಜ್ಯಕ್ಕೆ ಬರುವ ಮೊದಲೇ ರಾಜ್ಯದಲ್ಲಿ ಕಾಂಗ್ರೆಸ್ ಗೆಲ್ಲುವುದು ಮತ್ತು ಬಿಜೆಪಿ ಸೋಲುವುದು ನಿಶ್ಚಿತವಾಗಿತ್ತು. ಇನ್ನೊಂದು ಸಂಗತಿಯೆಂದರೆ ಇಬ್ಬರೂ ನಾಯಕರು ರಾಜ್ಯದ ಚುನಾವಣೆಯ ಸಂಪೂರ್ಣ ಜವಾಬ್ದಾರಿ ಹೊತ್ತಿರಲಿಲ್ಲ.
ರಾಹುಲ್ ಗಾಂಧಿ ಕಾಂಗ್ರೆಸ್ ಉಪಾಧ್ಯಕ್ಷರಾಗಿದ್ದರೂ, ಅಭ್ಯರ್ಥಿಗಳು ಹೇಗಿರಬೇಕೆಂದು ಆಯ್ಕೆ ಸಮಿತಿಗೆ ಮೂರು ತಾಸು ಕ್ಲಾಸು ತೆಗೆದುಕೊಂಡಿದ್ದರೂ, ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ಮಾತ್ರ ಭಾಗವಹಿಸಿರಲಿಲ್ಲ! ಅಭ್ಯರ್ಥಿಗಳ ಆಯ್ಕೆಯಲ್ಲೇ ಭಾಗವಹಿಸದವರು ಅವರ ಗೆಲುವನಲ್ಲಿ ಪಾಲುದಾರರಾಗಲು ಹೇಗೆ ಸಾಧ್ಯ?
ರಾಷ್ಟ್ರಕ್ಕೆ, ರಾಜ್ಯಕ್ಕೆ ಒಳ್ಳೆಯ ನಾಯಕತ್ವ ನೀಡುವ ವ್ಯಕ್ತಿಯನ್ನು ಯಾವ ಪಕ್ಷದವರಾದರೂ ಬೆಂಬಲಿಸೋಣ. ರಾಹುಲ್ ಗಾಂಧಿ ನಿಜಕ್ಕೂ ದೇಶಕ್ಕೊಂದು ಉತ್ತಮ ನಾಯಕತ್ವ ನೀಡುವುದಾದರೆ, ಯುವ ಐಕಾನ್ ಆಗುವುದಾದರೆ ಖಂಡಿತ ಸ್ವಾಗತವಿದೆ. ಆದರೆ ಅಂತಹ ನಾಯಕತ್ವ ಸತ್ಯದ ಮತ್ತು ಸಾಧನೆಯ ಅಡಿಪಾಯದಲ್ಲಿ ನಿಂತಾಗ ಮಾತ್ರ ಅದಕ್ಕೊಂದು ಬೆಲೆ. ಬೇರೆಯವರ ಪೊಳ್ಳು ಭರವಸೆಯ ಹೊಂಡದಲ್ಲಿ ಹಾಕಿದ ಟೊಳ್ಳು ಅಡಿಪಾಯದ ಮೇಲೆ ನಾಯಕತ್ವ ಗಟ್ಟಿಯಾಗಿ ನಿಲ್ಲಲಾರದು. ನಕಲಿ ಅಡಿಪಾಯದ ಮೇಲೆ ಅಸಲಿ ನಾಯಕತ್ವ ಕಟ್ಟಲು ಸಾಧ್ಯವಿಲ್ಲ.
ಸುಮ್ಮನೆ ಮಾತಿಗೆ, ರಾಹುಲ್ ಗಾಂಧಿಯನ್ನು ಟೀಕಿಸಲೇಬೇಕು ಎಂಬ ಹಠಕ್ಕೆಬಿದ್ದು ಈ ಮಾತುಗಳನ್ನು ಹೇಳುತ್ತಿಲ್ಲ. ಈ ಮಾತುಗಳನ್ನು ಪುಷ್ಠೀಕರಿಸಲು ಸಾಕಷ್ಟು ಅಂಕಿಸಂಖ್ಯೆಗಳನ್ನು ನೀಡಬಹುದು. ಗುಜರಾತ್‌ನಲ್ಲಿ ಚುನಾವಣೆ ನಡೆದಾಗ ರಾಹುಲ್ ಗಾಂಧಿ ಜಾದೂ ನಡೆಯಲಿಲ್ಲ. ಅದು ನರೇಂದ್ರ ಮೋದಿ ಹೋಂ ಪಿಚ್ಚು, ಅಲ್ಲಿ ಅವರು ಚೆನ್ನಾಗಿ ಆಡ್ತಾರೆ ಬಿಡಿ ಅಂತ ಹೇಳಿ, ಭಾರತ ಕ್ರಿಕೆಟ್ ತಂಡ ವಿದೇಶಿ ಪಿಚ್‌ಗಳಲ್ಲಿ ಸೋಲುವುದಿಲ್ಲವೇ ಎಂಬರ್ಥದ ಸಮರ್ಥನೆಕೊಟ್ಟು ನುಣುಚಿಕೊಂಡರು.
ಹಾಗೆ ನೋಡಿದರೆ ಉತ್ತರಪ್ರದೇಶ ರಾಹುಲ್ ಗಾಂಧಿ ಹೋಂ ಪಿಚ್ಚು. ರಾಜೀವ ಗಾಂಧಿ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಎಲ್ಲರೂ ಚುನಾವಣೆಗೆ ಸ್ಪರ್ಧಿಸಿದ್ದು ಮತ್ತು ಗೆದ್ದಿದ್ದು ಉತ್ತರಪ್ರದೇಶದಲ್ಲಿ. ಇಂದಿಗೂ ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಪ್ರತಿನಿಧಿಸುತ್ತಿರುವುದು ಉತ್ತರಪ್ರದೇಶದ ಕ್ಷೇತ್ರವನ್ನೇ. ಅಲ್ಲಿನ ವಿಧಾನಸಭೆ ಚುನಾವಣೆಯಲ್ಲಿ ರಾಹುಲ್ ಗಾಂಧಿ ಮೂರು ತಿಂಗಳು ಮೊಕ್ಕಾಂ ಹೂಡಿದ್ದರು. ಅಭ್ಯರ್ಥಿಗಳ ಆಯ್ಕೆಯಿಂದ ಆರಂಭಿಸಿ, ಚುನಾವಣೆ ತಂತ್ರದವರೆಗೂ ರಾಹುಲ್ ಗಾಂಧಿ ಒಟ್ಟು 403 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆದ್ದಿದ್ದು ಕೇವಲ 28 ಕ್ಷೇತ್ರಗಳನ್ನು!
ಉತ್ತರ ಪ್ರದೇಶ ರಾಹುಲ್ ಗಾಂಧಿಯ ಹೋಂ ಪಿಚ್ ಅಲ್ಲ ಎಂದು ಕಾಂಗ್ರೆಸ್ಸಿಗರು ವಾದಿಸುವುದಾದರೆ, ರಾಹುಲ್ ಗಾಂಧಿಗೆ ಒಂದು ಹೋಂ ಪಿಚ್ ಎಂಬುದೇ ಇಲ್ಲ ಎಂದಂತಾಗುತ್ತದೆ!
ಬಿಹಾರ ಚುನಾವಣೆಯಲ್ಲೂ ರಾಹುಲ್ ಗಾಂಧಿ ಮುಂಚೂಣಿಯಲ್ಲಿದ್ದರು. ಭರ್ಜರಿ ಪ್ರಚಾರದಲ್ಲಿ ತೊಡಗಿದ್ದರು. ಅಲ್ಲಿನ 243 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆದ್ದಿದ್ದು ಕೇವಲ 4 ಕ್ಷೇತ್ರಗಳನ್ನು! ಹಿಂದಿನ ಚುನಾವಣೆಗಿಂತ 5 ಸೀಟು ಕಮ್ಮಿ!!
ಈ ಸೋಲಿನ ಭಯದಿಂದ ರಾಜಸ್ಥಾನದ ಚುನಾವಣೆಯಲ್ಲಿ ರಾಹುಲ್ ಗಾಂಧಿ ಅಷ್ಟೇನೂ ಪ್ರಮುಖವಾಗಿ ಕಾಣಿಸಿಕೊಳ್ಳಲಿಲ್ಲ. ಆದರೆ ಅಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದುಬಿಟ್ಟಿತು. ಅದನ್ನೂ ರಾಹುಲ್ ಪಾದಕ್ಕರ್ಪಿಸುವವಲ್ಲಿ ಕಾಂಗ್ರೆಸ್ ನಾಯಕರು ಹಿಂದೆಬೀಳಲಿಲ್ಲ.
ಕರ್ನಾಟಕದ ಅಂಕಿಸಂಖ್ಯೆಗಳತ್ತಲೇ ಬರೋಣ. ರಾಹುಲ್ ಗಾಂಧಿ ರಾಜ್ಯದಲ್ಲಿ ಪ್ರಚಾರ ಸಭೆಗಳನ್ನು ಬಂದಾಗ ಅಭೂತಪೂರ್ವ ಎನ್ನಬಹುದಾದಷ್ಟು ಜನರೇನೂ ಬಂದಿರಲಿಲ್ಲ. ರಾಜ್ಯದಲ್ಲಿ ರಾಹುಲ್ ಗಾಂಧಿ ಪ್ರಚಾರ ಸಭೆಗಳನ್ನು ನಡೆಸಿದ ಪ್ರದೇಶಗಳ ಫಲಿತಾಂಶವನ್ನೇ ತೆಗೆದುಕೊಳ್ಳೋಣ.
ರಾಯಚೂರು ನಗರದಲ್ಲಿ ರಾಹುಲ್ ಗಾಂಧಿ ಪ್ರಚಾರ ಸಭೆ ನಡೆಸಿದ್ದರು. ನಗರ ವ್ಯಾಪ್ತಿಯ ಎರಡೂ ಕ್ಷೇತ್ರಗಳು ಬೇರೆ ಪಕ್ಷಗಳ ಪಾಲಾಗಿವೆ! ರಾಯಚೂರು ಜಿಲ್ಲೆಯಲ್ಲಿರುವ ಒಟ್ಟು ಏಳು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಜಯಗಳಿಸಿದೆ. ಮೈಸೂರು ನಗರದಲ್ಲಿ ಪ್ರಚಾರ ಸಭೆ ನಡೆಸಿದ್ದರು. ಮೈಸೂರು ಜಿಲ್ಲೆಯ ಹತ್ತು ಕ್ಷೇತ್ರಗಳಲ್ಲಿ ಏಳು ಕಾಂಗ್ರೆಸ್ ಪಾಲಾಗಿವೆ. ಬಾಗಲಕೋಟೆಯಲ್ಲೂ ಪ್ರಚಾರಸಭೆ ನಡೆಸಿದ್ದು, ಅಲ್ಲಿನ ಏಳು ಕ್ಷೇತ್ರಗಳಲ್ಲಿ ಆರು ಕಾಂಗ್ರೆಸ್‌ಗೆ ದಕ್ಕಿದೆ. ಆದರೆ ಮಂಡ್ಯದಲ್ಲಿ ರಾಹುಲ್ ಗಾಂಧಿ ಪ್ರಚಾರ ಸಭೆ ನಡೆಸಿದ್ದರು. ಆದರೆ ಮಂಡ್ಯ ಜಿಲ್ಲೆಯ ಏಳು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆದ್ದಿದ್ದು ಕೇವಲ ಎರಡು ಕ್ಷೇತ್ರಗಳನ್ನು ಮಾತ್ರ!
ಮೈಸೂರು, ಬಾಗಲಕೋಟೆ ಜಿಲ್ಲೆಗಳಲ್ಲಿ ರಾಹುಲ್ ಜಾದೂ ನಡೆದಿದೆ ಎಂದು ವಾದಿಸುವುದಾದರೆ, ಆ ಜಾದೂಗೆ ಮಂಡ್ಯದಲ್ಲೇನಾಯಿತು ಎಂಬ ಅನುಮಾನ ಮೂಡುತ್ತದೆ. ಹಾಗೆಯೇ ಸಾಕಷ್ಟು ಜಿಲ್ಲೆಗಳಿಗೆ (ಉತ್ತರ ಕನ್ನಡ, ಉಡುಪಿ) ರಾಹುಲ್ ಗಾಂಧಿ ಹೋಗಿಯೇ ಇಲ್ಲ. ಅಲ್ಲೆಲ್ಲ ಕಾಂಗ್ರೆಸ್ ಒಳ್ಳೆಯ ಸಾಧನೆ ಮಾಡಿದೆ. ಅಲ್ಲಿ ಯಾರ ಜಾದೂ ನಡೆದಿದ್ದು ಎಂಬ ಪ್ರಶ್ನೆಯೂ ಮೂಡುತ್ತದೆ. ಇದನ್ನೆಲ್ಲ ನೋಡಿದರೆ ಒಂದು ಅಂಶ ಸ್ಪಷ್ಟವಾಗುತ್ತದೆ. ರಾಜ್ಯಾದ್ಯಂತ ಬಿಜೆಪಿ ವಿರೋಧಿ ಅಲೆ ಅಥವಾ ಆಡಳಿತ ವಿರೋಧಿ ಅಲೆ ಇತ್ತು. ಜೆಡಿಎಸ್‌ಗೆ ರಾಜ್ಯಾದ್ಯಂತ ಅಸ್ತಿತ್ವವಿಲ್ಲ. ಜನತೆಗೆ ಬೇರೆ ಆಯ್ಕೆಯಿಲ್ಲ. ಕಾಂಗ್ರೆಸ್‌ಗೆ ಮತ ಹಾಕಿದ್ದಾರೆ. ನಾವು ಚೆನ್ನಾಗಿ ಆಡಿ ಗೆಲ್ಲುವುದಕ್ಕೂ, ಇನ್ನೊಂದು ತಂಡ ಕಳಪೆ ಆಟವಾಡಿದ್ದರಿಂದ ಗೆಲ್ಲುವುದಕ್ಕೂ ವ್ಯತ್ಯಾಸವಿದೆ.
ಗೆದ್ದರೆ ರಾಹುಲ್, ಸೋತರೆ ರಾಜ್ಯ ನಾಯಕರು. ಇದು ಕಾಂಗ್ರೆಸ್ ಈವರೆಗೆ ಅನುಸರಿಸಿಕೊಂಡು ಬಂದ ನೀತಿ. ರಾಹುಲ್ ಅವರ ಸುತ್ತ ಒಂದು ಭ್ರಮಾಲೋಕವನ್ನು, ಸುಳ್ಳು ಪ್ರಭಾವಳಿಯನ್ನು ನಿರ್ಮಿಸಲು ಕಾಂಗ್ರೆಸ್ ಬುಧ್ಯಾಪೂರ್ವಕವಾಗಿ ಯತ್ನಿಸುತ್ತಿದೆ. ಈ ಪ್ರಭಾವಳಿ ರಾಹುಲ್ ಗಾಂಧಿಗೆ ಬೇಡವಾಗಿರಬಹುದು. ಆದರೆ ಕಾಂಗ್ರೆಸ್‌ನ ಕೆಲವು ನಾಯಕರಿಗೆ ಬೇಕು.
ಆದರೆ ಸೋತಾಗ ಪಲಾಯನ ಮಾಡಿ, ಗೆದ್ದಾಗ ಮಾತ್ರ ಮಂದೆ ಬಂದು ಎದೆತಟ್ಟಿಕೊಳ್ಳುವವರನ್ನು ಸಮಯಸಾಧಕ ಎನ್ನುತ್ತಾರೆ ಹೊರತು ನಾಯಕ ಎಂದು ಕರೆಯುವುದಿಲ್ಲ. ನಾಯಕನಾದವನು ಸೋತ ಸಂದರ್ಭದಲ್ಲೂ ಹೊಣೆ ಹೊರಲು ಸಿದ್ಧನಿರಬೇಕು. ಗೆದ್ದಾಗ ನಾಯಕರಾಗಲು ಸಾಕಷ್ಟು ಜನರಿರುತ್ತಾರೆ. ನಿಜವಾದ ನಾಯಕನ ಗುಣ ಗೊತ್ತಾಗುವುದು ಸೋಲಿನಲ್ಲಿ. ಸೋತಾಗ ಆತ ಹೇಗೆ ವರ್ತಿಸುತ್ತಾನೆ? ಸೋಲನ್ನು ಹೇಗೆ ಸ್ವೀಕರಿಸುತ್ತಾನೆ? ಸೋಲನ್ನು ಗೆಲುವಿನ ಮೆಟ್ಟಿಲಾಗಿ ಹೇಗೆ ಪರಿವರ್ತಿಸುತ್ತಾನೆ ಎಂಬುದರ ಮೇಲೆ ಆತನ ನಾಯಕತ್ವ ಸಾಮರ್ಥ್ಯ ತೀರ್ಮಾನವಾಗುತ್ತದೆ.
ಬಿರುಗಾಳಿ ಬಂದಾಗ ಹಾರಿಹೋಗುವವನು ಆಂಜನೇಯನಾಗಲಾರ. ಬಿರುಗಾಳಿಯ ವಿರುದ್ಧವೂ ಹಾರಿ ತೋರಿಸುವವನು ಮಾತ್ರ ಆಂಜನೇಯನಾಗಬಲ್ಲ!
- ವಿನಾಯಕ ಭಟ್ ಮೂರೂರು
vakradanta@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

