ಅಂಕಣಗಳು

ಭ್ರಷ್ಟಾಚಾರ, ಕೋಮುವಾದದಲ್ಲಿ ನಲುಗುತ್ತಿದೆ ಕರ್ನಾಟಕ: ಮತದಾರರಿಲ್ಲಿ ಅಸಹಾಯಕರು

Published On :

ಹೊಸ ಸರ್ಕಾರದ ಆಯ್ಕೆಗಾಗಿ ಕರ್ನಾಟಕದಲ್ಲಿ ಮತದಾನ ನಡೆಯುತ್ತಿದೆ. ಈ ಬಾರಿಯ ಚುನಾವಣೆ ಹಿಂದಿನದಕ್ಕಿಂತ ಭಿನ್ನವಾಗಿ ನಡೆಯುತ್ತಿದ್ದರೆ ಅದಕ್ಕೆ ರಾಜ್ಯದಲ್ಲಿ ನಡೆದ ಘಟನೆಗಳೇ ಕಾರಣ. ರಾಜ್ಯದಲ್ಲಿ ಉತ್ತಮ ಹಾಗೂ ಧೀಮಂತ ಆಡಳಿತಗಾರರ ಬುದ್ಧಿಮತ್ತೆ ಮತ್ತು ದೂರದರ್ಶಿತ್ವದ ಆಡಳಿತದಿಂದಾಗಿ ಕರ್ನಾಟಕ ಪ್ರಗತಿಯ ಪಥದಲ್ಲಿ ನಡೆದಿತ್ತು. ಇದಕ್ಕೆ ಹಲವು ಕಡೆಗಳಿಂದ ಭಾರಿ ಮೆಚ್ಚುಗೆಯೂ ವ್ಯಕ್ತವಾಗಿತ್ತು. 1975ರಲ್ಲಿ ಜಾರಿಯಾದ ತುರ್ತುಪರಿಸ್ಥಿತಿ ಪ್ರಗತಿಯ ಪಥ ಕುಸಿಯಲು ದಾರಿ ಮಾಡಿಕೊಟ್ಟಿತು. ಅಂದಿನಿಂದ ಆರಂಭವಾದ ಕುಸಿತದ ಪರ್ವ ಮುಂದುವರಿದು ಈಗ ನಾಶದ ಹಂತಕ್ಕೆ ಬಂದು ನಿಂತಿದೆ.
ಇದಕ್ಕೆ ಎಲ್ಲ ರಾಜಕೀಯ ಪಕ್ಷಗಳೂ ಕಾರಣ. ಚುನಾವಣೆಯಲ್ಲಿ ಕೇವಲ ಪಕ್ಷಗಳ ಬದಲಾವಣೆಯಿಂದ ಮಾತ್ರ ಪರಿಸ್ಥಿತಿಯಲ್ಲಿ ಯಾವುದೇ ಬದಲಾವಣೆಯಾಗದು. ರಾಷ್ಟ್ರೀಯ ಮಟ್ಟದಲ್ಲೂ ಪರಿಸ್ಥಿತಿ ಏನೂ ಭಿನ್ನವಾಗಿಲ್ಲ. ಚುನಾವಣಾ ಪ್ರಕ್ರಿಯೆ ರಾಜಕೀಯ ಪಕ್ಷಗಳ ಅವಕಾಶವಾದಿತನ ಮತ್ತು ಸಿದ್ಧಾಂತಗಳಿಲ್ಲದ ವಿಚಾರವಾಗಿ ಮಾರ್ಪಟ್ಟಿದೆ.
ಕರ್ನಾಟಕದಲ್ಲಿನ ಮತದಾರ ಹಕ್ಕು ಚಲಾವಣೆ ವೇಳೆ ಇತರ ರಾಜಕೀಯ ಪಕ್ಷಗಳಿಗಿಂತ ಹೆಚ್ಚು ಶಿಕ್ಷೆಗೆ ಗುರಿಪಡಿಸಲಿದ್ದಾನೆ. ಮೊದಲ ತಪ್ಪೆಂದರೆ ಅದು ಕೈಗೊಂಡ ಲಂಚದ ಪ್ರಚಾರಕ್ಕಾಗಿ ಮತ್ತು ಎಲ್ಲ ಪಕ್ಷಗಳಲ್ಲಿ ಈ ಸಮಸ್ಯೆ ಇದೆ ಎಂದು ಹೇಳಿಕೊಂಡ ತಪ್ಪಿಗಾಗಿ. ಬಿ.ಎಸ್.ಯಡಿಯೂರಪ್ಪ ಅಧಿಕಾರದಲ್ಲಿದ್ದ ವೇಳೆ ಬಿಜೆಪಿ ಸರ್ಕಾರ ಬಳ್ಳಾರಿಯ ಗಣಿ ಅಕ್ರಮದಿಂದ ಬಂದ ಹಣದಿಂದ ಶಾಸಕರನ್ನು ಖರೀದಿಸಿ ಬಹುಮತ ಪಡೆದುಕೊಂಡಿತು. ಇಷ್ಟು ಮಾತ್ರವಲ್ಲದೆ, ಗಣಿ ಮಾಫಿಯಾಕ್ಕೆ ತನ್ನಿಷ್ಟ ಬಂದಂತೆ ನಡೆದುಕೊಂಡು ಕಾನೂನು ಮುರಿಯುವ ಕೆಲಸಗಳನ್ನು ಮಾಡಲು ಅನುಕೂಲ ಮಾಡಿಕೊಟ್ಟಿತು. ಇದರ ಜತೆಗೆ ಪ್ರಾಕೃತಿಕ ಸಂಪತ್ತನ್ನು ಕದಿಯುವವರಿಗೆ, ಅತ್ಯಾಚಾರಿಗಳಿಗೆ, ಲೂಟಿಕೋರರಿಗೆ ಸಚಿವ ಸಂಪುಟದಲ್ಲಿ ಸ್ಥಾನವನ್ನೂ ನೀಡಲಾಗಿತ್ತು. ಅದೊಂದು ಕೆಡುಕಿನ ಸಾಮ್ರಾಜ್ಯವಾಗಿತ್ತು. ದುರಂತವೆಂದರೆ ತಮ್ಮ ವಿರುದ್ಧದ ಆರೋಪಗಳಿಗೆ ಜೈಲಿಗೆ ಹೋಗಿ ಬಂದರೂ ಯಡಿಯೂರಪ್ಪನವರು ಯಾವುದೇ ಪಾಠ ಕಲಿಯಲೇ ಇಲ್ಲ. ಇಷ್ಟಾದರೂ ಅವರು ಕರ್ನಾಟಕದ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಬೇಕೆಂಬ ಆಸೆ ಹೊಂದಿದ್ದಾರೆ.
ಇನ್ನು ಎರಡನೇ ತಪ್ಪಿನ ವಿಚಾರದ ಬಗ್ಗೆ ಚರ್ಚಿಸುವುದಾದರೆ ಕರಾವಳಿ ಕರ್ನಾಟಕದಲ್ಲಿ ಸಾರ್ವಜನಿಕ ಜೀವನವನ್ನು ಕೋಮುವಾದೀಕರಣಗೊಳಿಸಿದ್ದು. ಹಿಂದುತ್ವದ ರಕ್ಷಕರೆಂಬ ಗೂಂಡಾಗಳು ಮಂಗಳೂರು ಪರಿಸರದಲ್ಲಿರುವ ಪಬ್, ಹೋಮ್‌ಸ್ಟೇಗಳಲ್ಲಿದ್ದವರ ಮೇಲೆ ದಾಳಿ ನಡೆಸಿ, ಹಲ್ಲೆ ನಡೆಸಿದರು. ಈ ಅವಾಂತರ ಸಾಲದು ಎಂಬಂತೆ ತಮ್ಮ ಸಮುದಾಯಕ್ಕೆ ಸೇರದ ಮಿತ್ರರ ಜತೆ ಮಾತನಾಡಿದ್ದೇ ದೊಡ್ಡ ತಪ್ಪು ಎನ್ನುವಂತೆ ಬಿಂಬಿಸಿ ಕಾಲೇಜಿಗೆ ಹೋಗುವ ವಿದ್ಯಾರ್ಥಿ, ವಿದ್ಯಾರ್ಥಿನಿಯರನ್ನು ಥಳಿಸಲಾಗಿದೆ. ಇಂಥ ಘಟನೆಗಳ ವಿರುದ್ಧ ರಾಜ್ಯ ಸರ್ಕಾರ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಜತೆಗೆ ಜಾಣತನದಿಂದ ಅಂಥ ಕೃತ್ಯಗಳಿಗೆ ಬೆಂಬಲಿಸುವಂತೆಯೇ ನಡೆದುಕೊಂಡಿತು. ಹೀಗಾಗಿ, ಪ್ರಮುಖ ಸ್ಥಳಗಳು ಮತೀಯವಾಗಿ ಒಡೆದು ಹೋದವು.
ಇಂಥ ಕೋಮುವಾದದ ಬೀಜ ಬಿತ್ತಿದ್ದರಲ್ಲಿ ಉತ್ತಮ ಫಸಲು ಕೊಯ್ಯುವ ಆಶಯ ಹಲವರದ್ದು. ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ರಾಜಕೀಯ ವಿಭಾಗವಾಗಿರುವ ಸೋಶಿಯಲ್ ಡೆಮಾಕ್ರಾಟಿಕ್ ಪಾರ್ಟಿ ಆಫ್ ಇಂಡಿಯಾ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 24 ಅಭ್ಯರ್ಥಿಗಳನ್ನು  ಈ ಬಾರಿಯ ಚುನಾವಣೆಯಲ್ಲಿ ಕಣಕ್ಕಿಳಿಸಿದೆ. ಏಕೆಂದರೆ ಕರ್ನಾಟಕದಲ್ಲಿ ಬೀದರ್ ಬಳಿಕ ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಮುಸ್ಲಿಮರಿದ್ದಾರೆ. ಕೇರಳದ ಪೊಲೀಸರು ಕಣ್ಣಾನೂರಿನಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಗೇ ಸೇರಿದ್ದು ಎನ್ನಲಾಗಿರುವ ಶಸ್ತ್ರಾಸ್ತ್ರ ತರಬೇತಿ ಕೇಂದ್ರಕ್ಕೆ ದಾಳಿ ನಡೆಸಿದ್ದರು. ಈ ಸಂದರ್ಭದಲ್ಲಿ ಅಲ್ಲಿದ್ದ ಕೆಲ ಯುವಕರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದರು. ಅದಕ್ಕೆ ಪೂರಕವಾಗಿ ಬೆಂಗಳೂರಿನಲ್ಲಿ ಸ್ಫೋಟ ಸಂಭವಿಸಿದ್ದರಿಂದ ಕರ್ನಾಟಕದ ಪೊಲೀಸರೂ ಅಲ್ಲಿಗೆ ತೆರಳಿ ಬಂಧಿತರ ವಿಚಾರಣೆ ನಡೆಸಿದ್ದರು. ಒಟ್ಟಾರೆಯಾಗಿ ಹೇಳುವುದಿದ್ದರೆ ಕರಾವಳಿ ಪ್ರದೇಶದಲ್ಲಿ ಪರಸ್ಪರ ಕತ್ತಿಮಸೆಯುವ ರಾಜಕೀಯ ನಡೆಯುತ್ತಿದೆ ಎಂದು ಹೇಳಲೇಬೇಕಾಗಿದೆ. ಅದರಲ್ಲಿ ಯಾರು ಗೆದ್ದರೂ ಪ್ರಜಾಪ್ರಭುತ್ವಕ್ಕೇ ನಷ್ಟ.
ಒಂದು ವೇಳೆ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದು ಸರ್ಕಾರ ರಚಿಸಿದರೂ ಅದೂ ಪ್ರಜಾಪ್ರಭುತ್ವದ ಅಣಕವೇ. ಏಕೆಂದರೆ ಅದು ಚುನಾವಣೆಯಲ್ಲಿ ಗೆದ್ದರೆ ಜನರ ಒಳ್ಳೆಯತನವನ್ನೇ ಆ ಪಕ್ಷ ಮೊದಲಾಗಿ ಪರೀಕ್ಷೆಗೆ ಒಳಪಡಿಸಲಿದೆ. ಏಕೆಂದರೆ ಬಿಜೆಪಿಯಂತೆ ಕಾಂಗ್ರೆಸ್ ಕೂಡ ಒಳ್ಳೆಯತನವನ್ನೇ ಕಳೆದುಕೊಂಡಿದೆ. ಎರಡನೆಯದಾಗಿ ಕಾಂಗ್ರೆಸ್‌ನಲ್ಲಿ ಯಡಿಯೂರಪ್ಪನವರಂತೆ ಅಸಾಧಾರಣ ಸಾಮರ್ಥ್ಯ ಹೊಂದಿರುವ ನಾಯಕನ ಕೊರತೆ ಇದ್ದರೂ ಪ್ರತಿಭಾವಂತ ನಾಯಕರಿಗೆ ಏನೂ ಕೊರತೆಯಿಲ್ಲ. ಅವರಲ್ಲಿ ಕೆಲವರ ವಿರುದ್ಧ ಗಂಭೀರ ಆರೋಪಗಳಿದ್ದರೂ ಅವರು ಮತ ಭಿಕ್ಷೆಗಾಗಿ ಕೈಚಾಚಿದ್ದಾರೆ. ಅಂದರೆ ಈ ಚುನಾವಣೆಯಲ್ಲಿ ರೇಣುಕಾಚಾರ್ಯ, ಕೃಷ್ಣಯ್ಯ ಶೆಟ್ಟಿ, ಈಶ್ವರಪ್ಪರಿಂದ ಪಾರಾಗಲು ಸಿ.ಎಂ.ಇಬ್ರಾಹಿಂ, ಡಿ.ಕೆ.ಶಿವಕುಮಾರ್ ಮತ್ತು ರೋಶನ್ ಬೇಗ್ ಅಂಥವರನ್ನೇ ಅವಲಂಬಿಸಬೇಕಾಗಿದೆ.
ಒಂದು ವೇಳೆ ಕಾಂಗ್ರೆಸ್ ಗೆದ್ದು ಸರ್ಕಾರ ರಚಿಸಿದಲ್ಲಿ ಭ್ರಷ್ಟಾಚಾರದ ಆರೋಪ ಇರುವವರನ್ನು ಸರ್ಕಾರದಿಂದ ದೂರವಿರಿಸುವ ಮೂಲಕ ಮತ್ತು ಮುಖ್ಯಮಂತ್ರಿಯಾಗಬೇಕೆಂಬ ಮಹತ್ವಾಕಾಂಕ್ಷೆಯುಳ್ಳ ಡಾ.ಜಿ.ಪರಮೇಶ್ವರ ಹಾಗೂ ಸಿದ್ದರಾಮಯ್ಯ ಒಟ್ಟಾಗಿ ಸೇರಿಕೊಂಡು ಭ್ರಷ್ಟರನ್ನು ದೂರವಿರಿಸಬೇಕು. ಚುನಾವಣಾ ನಂತರದ ಬೆಳವಣಿಗೆಯಲ್ಲಿ ಅವರ ಮಹತ್ವ ಸಾರುವುದೇ ಇಂಥ ಬೆಳವಣಿಗೆಗಳಿಂದ. ಮುಖ್ಯಮಂತ್ರಿಯಾಗಬೇಕು ಎಂದು ಇಬ್ಬರು ಮುಖಂಡರು ಹೇಳಿಕೊಂಡಿದ್ದರಿಂದ ಅವರು ನಂಬಿಕೆಗೆ ಅರ್ಹರೇ ಎಂಬ ಪ್ರಶ್ನೆಯೂ ಮೂಡಿದಂತಾಗಿದೆ. ಈ ಎಲ್ಲ ಬೆಳವಣಿಗೆಗಳಿಂದ ಕಾಂಗ್ರೆಸ್ ವರಿಷ್ಠ ಮಂಡಳಿ ಕೇಂದ್ರ ಕಾರ್ಮಿಕ ಸಚಿವ ಮಲ್ಲಿಕಾರ್ಜುನ ಖರ್ಗೆಯವರನ್ನು ಕರ್ನಾಟಕದಲ್ಲಿ ರಚನೆಯಾಗಲಿರುವ ಕಾಂಗ್ರೆಸ್ ಸರ್ಕಾರವನ್ನು ಮುನ್ನಡೆಸಲು ಸೂಚಿಸಬಹುದು. ಈ ಕ್ರಮವೇ ಆ ಪಕ್ಷದ ಮೇಲಿನ ವಿಶ್ವಾಸ ವರ್ಧಿಸುವ ಕೆಲಸ ಮಾಡಲು ಸಾಧ್ಯವಿದೆ. ಖರ್ಗೆಯವರೂ ಕೂಡ ತಮ್ಮ  ಸಂಭಾವ್ಯ ಸಂಪುಟದಿಂದ ಭ್ರಷ್ಟಾಚಾರದ ಆರೋಪ ಹೊತ್ತವರನ್ನು ದೂರವಿರಿಸಿದಲ್ಲಿ ಮಾತ್ರ ಕರ್ನಾಟಕದಲ್ಲಿ ಪಕ್ಷವನ್ನು ಸಮರ್ಥವಾಗಿ ಮತ್ತೆ ಕಟ್ಟಲು, ಯೋಗ್ಯ ಕಾಣಿಕೆ ಕೊಡಲು ಸಾಧ್ಯವಿದೆ. ಆದರೆ ಅವರನ್ನು ದೆಹಲಿ  ರಾಜಕೀಯದಿಂದ ಹಿಂದಕ್ಕೆ ಕರೆಸಿಕೊಳ್ಳಬೇಕಾದರೆ ಕಾಂಗ್ರೆಸ್‌ನಲ್ಲಿರುವ ಕಾಲೆಳೆಯುವ ರಾಜಕಾರಣ ಕೆಲಸ ಮಾಡದೇ ಇರದು. ಅಂತಿಮವಾಗಿ ವಂಚಕರೇ ಗೆದ್ದಂತಾಗುತ್ತದೆ. ಏಕೆಂದರೆ ಅವರ ಬಳಿ ಯಾವ ಸಮಯಕ್ಕೆ ಏನು ಮಾಡಬೇಕು ಎಂದು ಗೊತ್ತಿರುತ್ತದೆ. ಅದಕ್ಕೆ ಪೂರಕವಾಗಿ ಹಣದ ಬಲವೂ ಇರುತ್ತದೆ. ಎಲ್ಲದಕ್ಕಿಂತ ಹೆಚ್ಚಾಗಿ ಸದ್ಯಕ್ಕೆ ರಾಜಕೀಯ ಸಂಸ್ಕೃತಿಯೂ ಅವರಿಗೆ ಪೂರಕವಾಗಿಯೂ ಇದೆ!


-ಟಿ.ಜೆ.ಎಸ್ ಜಾರ್ಜ್


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.