ಅಂಕಣಗಳು

Hmmm... ಪಾಂಚ್ (ಚುನಾವಣೆಗೆ ನಿಂತಿರುವ ಮಾಜಿ ರೌಡಿ)

-    ಎಂಎಲ್‌ಎ ಆಗೋಕ್ ಹೊರಟಿರೋ ರೌಡಿ ಸಾಹೇಬ್ರೇ, ಈ ಎಲೆಕ್ಷನ್‌ನಲ್ಲಿ ಗೆದ್ರೆ ಮುಂದೆ ಏನ್ ಮಾಡ್ಬೇಕೂಂತಿದೀರಿ?
ರೌಡಿ ಅನ್‌ಬೇಡ್ರೀ. ನಾನು ಮೊದಲು ಜೈಲಲ್ಲಿದ್ದೆ ನಿಜ. ಆದ್ರೆ ಈಗ ನಾನು 'ಸ್ವತಂತ್ರ ಅಭ್ಯರ್ಥಿ'. ಈ ಎಲೆಕ್ಷನ್‌ನಲ್ಲಿ ಗೆದ್ರೆ, ಮಿನಿಸ್ಟರ್ ಆಗ್‌ಬೇಕೂಂತಿದೀನಿ!

-    ರೀ ಸ್ವಾಮಿ, ನಾನ್ ಕೇಳಿದ್ದು ಎಲೆಕ್ಷನ್‌ನಲ್ಲಿ ಗೆದ್ರೆ, ಜನಗಳಿಗೆ ಏನ್ ಮಾಡ್‌ಬೇಕೂಂತಿದೀರಿ ಅಂತ?
ಅಯ್ಯೋ, ಆ ವಿಷಯದಲ್ಲಿ ಯಾರೂ ಚಿಂತೆ ಮಾಡ್‌ಬೇಕಾಗಿಲ್ಲ. ನಾನೀಗ ರೌಡಿಸಂ ಬಿಟ್ಟುಬಿಟ್ಟಿದೀನಿ, ಯಾರೂ  ಹೆದರ್‌ಕೋಬೇಕಾಗಿಲ್ಲ, ನಾನು ಯಾರ್ಗೂ ಏನೂ ಮಾಡಲ್ಲ, ಗ್ಯಾರಂಟಿ ಏನೂ ಮಾಡಲ್ಲ..!

-    ಆಹಾ, ಸರಿ ಹೋಯ್ತು.. ಸರಿ, ನಿಮ್ಮ ಹಳೆ ಉದ್ಯೋಗ ನೆನಪಿಸೋ ಥರಾ, ಮಚ್ಚನ್ನೇ ನಿಮ್ಮ ಸಿಂಬಲ್  ಮಾಡ್ಕೊಂಡಿದೀರಲ್ಲ, ನಿಮ್ಮ ನೆಚ್ಚಿದ ಮತದಾರರು ಹೋಗಿ ಹೋಗಿ, ಮಚ್ಚಿನ ಸಿಂಬಲ್‌ಗೆ ಓಟು ಹಾಕ್ತಾರಾ?
ಅದಕ್ಕೆ ಅಂತಾನೆ, 'ಪ್ರಚಾರಕ್ಕೆ ಬಂದು ನನಗೆ ಓಟು ಕೊಡಿಸಿ' ಅಂತ ಶಿವರಾಜ್‌ಕುಮಾರ್ ಅವರನ್ನ ಕರೆಯೋಕೆ ಹೋಗಿದ್ದೆ. ಕಡ್ಡಿ ಪುಡಿ ಮಾಡೋ ಥರಾ 'ಆಗಲ್ಲ' ಅಂದಿದ್ರೆ ಆಗ್ತಿತ್ತು. ಅದು ಬಿಟ್ಟು, ಜೋಗಿ ಸ್ಟೈಲಲ್ಲಿ 'ಮಚ್ಚಾ ಹಿಡ್ಕೊಳೋ ಅವನ್ನ' ಅಂತ ಮಚ್ಚಲ್ಲೇ ಏಟು ಹಾಕೋಕೆ ಬಂದ್ರು'. ಎದ್ದು ಓಡ್ ಬಂದೆ.

-    ಆಗ್‌ಬೇಕಿತ್ತು ನಿಮ್ಗೆ, ಸರಿ, ನೀವೇ ಹೋಗಿದ್ರಲ್ಲ ಪ್ರಚಾರಕ್ಕೆ, ಹೇಗಿದೆ ಎಲೆಕ್ಷನ್‌ನಲ್ಲಿ ಓಟು ಕೇಳೋ ಅನುಭವ?
ಅಯ್ಯೋ, ಎಲ್ಲಾ ಉಲ್ಟಾ ಆಗ್‌ಬಿಟ್ಟಿದೆ ನೋಡಿ ಇವ್ರೇ. ಒಂದ್ ಕಾಲದಲ್ಲಿ ನಾನ್ ಹೋಗಿ ಜನಗಳ ಹತ್ರ ಮಾಮೂಲಿ ವಸೂಲಿ ಮಾಡ್ತಿದ್ದೆ. ಈಗ ನಾನೇ ಅವರಿಗೆ ಮಾಮೂಲಿ ಕೊಟ್ಟು ಓಟು ಕೇಳೋ ಥರಾ ಆಗಿದೆ.

-    ಹೋಗ್ಲಿ, ಕೊನೇ ಪಕ್ಷ, ನಿಮಗೆ ಠೇವಣಿನಾದ್ರೂ ವಾಪಸ್ ಬರೋ ಛಾನ್ಸ್ ಇದೆಯಾ?
ಎಲೆಕ್ಷನ್‌ನಲ್ಲಿ ಸೋತ್ರೆ ಮತ್ತೆ ರೌಡಿಸಂ ಕೆಲ್ಸಾನೇ ಮಾಡ್‌ಬೇಕಲ್ಲ. ಸೋ, ಠೇವಣಿ ವಾಪಸ್ ಕೊಡ್ದೆ ಇದ್ರೆ, ಒದ್ದು ವಸೂಲಿ ಮಾಡ್ತೀನಿ. ಅದ್ಸರಿ ಅದೇನೋ 'ಕೊನೇ ಪಕ್ಷ' ಅಂದ್ರಲ್ಲ? ಅದ್ಯಾವ್ದ್ ರೀ ಹೊಸ ಪಕ್ಷ?

ಒಮ್ಮೆ ಭೇಟಿ ಕೊಡಿ
ನನ್ನ ಒಂದು ಓಟಿಂದ ಏನ್ ಮಹಾ ವ್ಯತ್ಯಾಸ ಆಗುತ್ತೆ. ಯಾರ್ ಅಧಿಕಾರಕ್ಕೆ ಬಂದ್ರೂ ನಮ್ಮ ಕಷ್ಟ ತಪ್ಪಿದ್ದಲ್ಲ. ಇವು ಓಟು ಹಾಕದೇ ಇರುವವರ ಪ್ರಮುಖ ನೆಪಗಳು. ಈ ಬಾರಿ ಚುನಾವಣೆಯ ನೆಪದಲ್ಲಿ ಇಂಥ ಪ್ರಶ್ನೆಗಳು ನಿಮಗೂ ಇದ್ದರೆ ಅವುಗಳಿಗೆ ಒಂದಿಷ್ಟು ತಾರ್ಕಿಕ ಉತ್ತರ ಕೊಡುವಂಥ ಪ್ರಯತ್ನ ಈ ವೆಬ್‌ಸೈಟ್‌ಗಳಲ್ಲಿದೆ. ಓದಿ, ಓಟು ಹಾಕಿ.
 n bit.ly/108jNj2 n bit.ly/4M2hFU n bit.ly/108jPY8 n bit.ly/RtnExX

ಹರಿ-ಕಥೆ
ಮಹಾನ್ ಸುಳ್ಳುಗಾರ ಅಂತ ಹೆಸರು ಮಾಡಿದ್ದ ಮಂತ್ರಿ ಖೇಮು ಚುನಾವಣಾ ಪ್ರಚಾರಕ್ಕೆ ಹೆಲಿಕಾಪ್ಟರ್‌ನಲ್ಲಿ ಹೋಗಿದ್ದ. ಬೆಟ್ಟ, ಕಾಡುಗಳ ನಡುವೆ ಮಂತ್ರಿ ಖೇಮು ಅವರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಅಪಘಾತಕ್ಕೀಡಾಗಿದೆ ಅಂತ ರಾಜಧಾನಿಗೆ ವಿಷಯ ತಲುಪಿತು. ರಕ್ಷಣಾ ಕಾರ್ಯದ ಸಿಬ್ಬಂದಿ ಹೆಲಿಕಾಪ್ಟರ್ ಹುಡುಕ್ಕೊಂಡು 2 ದಿನಗಳ ನಂತರ ಅಲ್ಲಿಗೆ ತಲುಪಿದರು. ಅಲ್ಲಿ ನೋಡಿದರೆ  ಹೆಲಿಕಾಪ್ಟರ್ ಸುಟ್ಟು ಕರಕಲಾಗಿ ಬಿದ್ದಿತ್ತು. ಆದರೆ ಯಾವ ಮೃತದೇಹಗಳೂ ಕಾಣಲಿಲ್ಲ. ಸುತ್ತಮುತ್ತ ಯಾರಾದ್ರೂ ಇದ್ದಾರಾ ಎಂದು ನೋಡಿದ ರಕ್ಷಣಾ ದಳದ ಮುಖ್ಯಸ್ಥನಿಗೆ ಪಕ್ಕದ ಹೊಲದಲ್ಲಿ ನೆಲ ಉಳುತ್ತಿದ್ದ ರೈತನೊಬ್ಬ ಕಾಣಿಸಿದ. ಅವನ ಬಳಿಗೆ ಓಡಿದ  ಅಧಿಕಾರಿ ಕೇಳಿದ 'ಈ ಆಕ್ಸಿಡೆಂಟ್ ಆಗಿದ್ದನ್ನ ನೀನು ನೋಡಿದೆಯಾ?'. ರೈತ ನಿರ್ಲಿಪ್ತತೆಯಿಂದ ಹೇಳಿದ 'ಹಾ, ಹೌದು ಮೊನ್ನೆ ಬೆಳಿಗ್ಗೆ ಬೆಳಿಗ್ಗೆನೇ ನೋಡಿದೆ'. 'ಹೆಲಿಕಾಪ್ಟರ್‌ನಲ್ಲಿದ್ದವರೆಲ್ಲಾ ಏನಾದರು?' ಅಧಿಕಾರಿ ಕೇಳಿದ. ರೈತ 'ನಾನು ಬಂದು ನೋಡಿದಾಗ ಯಾರೂ ಬದುಕುಳಿದಿರಲಿಲ್ಲ, ಎಲ್ಲರನ್ನೂ ನಾನೇ ಮಣ್ಣು ಮಾಡಿದೆ' ಅಂದ. ಅಧಿಕಾರಿಗೆ ಅನುಮಾನ. 'ನಮ್ಮ ಮಂತ್ರಿ ಖೇಮು ಅವರೂ ಸತ್ತುಹೋಗಿದ್ರಾ?'.  ಅದಕ್ಕೆ ರೈತ ಉಡಾಫೆಯಿಂದ ಹೇಳಿದ 'ಅಯ್ಯೋ ಹೌದು ಸಾರ್, ಅವನೂ ಸತ್ತೋಗಿದ್ದ, ಆದ್ರೆ ಆ ಟೈಮಲ್ಲೂ ಕೂಡ, ಒಂದೇ ಸಮನೆ 'ನಾನಿನ್ನೂ ಬದ್ಕಿದೀನಿ, ಬದ್ಕಿದೀನಿ' ಅಂತ ಬಡ್ಕೊತಾ ಇದ್ದ. ಆದ್ರೆ, ಅವನೆಂಥ ಸುಳ್ಳ ಅಂತ, ನಂಗೊತ್ತಿಲ್ವಾ? ನಂಬ್ತೀನಾ ನಾನು? ಮಣ್ಣಲ್ ಹಾಕಿ ಮುಚ್‌ಬಿಟ್ಟೆ'.

ಸ್ಕ್ಯಾಂಡಲ್‌ವುಡ್
ಈ ಬಾರಿಯ ಚುನಾವಣೆಯಲ್ಲಿ ಸಿನಿಮಾ ಸ್ಟಾರ್‌ಗಳ ಪ್ರಚಾರದ ಭರಾಟೆ ದೊಡ್ಡದಾಗಿಯೇ ಇದೆ. ಅದರಲ್ಲೂ ನಟಿ ರಮ್ಯಾ ಫುಲ್ ಬ್ಯುಸಿ. ಎಷ್ಟು ಬ್ಯುಸಿ ಅಂದ್ರೆ, ಅಜಾತಶತ್ರು ಅಂಬರೀಶ್ ಪರವಾಗಿ ಪ್ರಚಾರ ಮಾಡಲು ಸಮಯ ಇಲ್ಲದಿರುವಷ್ಟು. ರಮ್ಯಾರ ಕಿರಿಕ್ ಬುದ್ಧಿ ಗೊತ್ತಿದ್ದವರು, ಸಿನಿಮಾ ರಂಗದಲ್ಲಿ ಕಿರಿಕ್ ಮಾಡಿಕೊಂಡಾಗ ಮಾತ್ರ ಅಂಬಿ ಸಹಾಯ ಬೇಕು. ಇನ್ನೊಂದ್‌ಸಲ ಕಿರಿಕ್ ಆದಾಗ ಅದ್ಯಾವ್ ಮುಖ ಇಟ್ಕೊಂಡ್ ಅಂಬರೀಶ್ ಅವರತ್ರ ಹೋಗ್ತಾರೋ ಇವ್ರು ಎನ್ನುತ್ತಿರುವುದಂತೂ ಸತ್ಯ. ಮೊನ್ನೆ ಮೊನ್ನೆ ತಮಿಳಿನಲ್ಲಿ ಮಾತನಾಡಿ ಈಗಾಗಲೇ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿರುವ ರಮ್ಯಾ, ಈಗ ಅಂಬರೀಶ್‌ರ ಕೆಂಪು ಕಣ್ಣನ್ನೂ ಕಡೆಗಣಿಸಿದ್ದಾರೆ. ಈ ಬಗ್ಗೆ ಕೇಳಿದ್ರೆ 'ಒಂದೊಂದು ಊರ್‌ಗೆ ಒಂದೊಂದ್ ಗಂಟೆ ಕಾಲ್ ಶೀಟ್ ಕೊಟಿದೆ, ಆದ್ರೆ ಮಂಡ್ಯಕ್ಕೆ ಹೋಗೋಕೆ ಟೈಮ್ ಸಿಗ್ಲಿಲಾ' ಎಂದು ಒತ್ತಕ್ಷರಗಳಿಲ್ಲದ ತಮ್ಮ ಶೈಲಿಯಲ್ಲಿ ಮಾತನಾಡುವ ರಮ್ಯಾ ಅವರಿಗೆ ಮನಸ್ಸಿದ್ದಲ್ಲಿ  ಮಂಡ್ಯದ ಮಾರ್ಗ ತಿಳಿಯುತ್ತಿರಲಿಲ್ಲವೇ?. ಹಾಗೆ ನೋಡಿದರೆ, ರಮ್ಯಾ ಬಂದು ನನ್ನ ಗೆಲ್ಲಿಸುತ್ತಾರೆ ಎಂದು ಮನಸ್ಸಿನಲ್ಲೇ ಮಂಡಿಗೆ ತಿನ್ನುವ ಅಗತ್ಯ, ಮಂಡ್ಯದ ಗಂಡಿಗೆ ಇಲ್ಲ ಬಿಡಿ. ಹಾಗಾಗಿ, ಮಂಡ್ಯದ ಕಾಂಗ್ರೆಸ್ ಕಾರ್ಯಕರ್ತರು 'ಅಯ್ಯೋ ಜನ, ಆಯಮ್ಮನ ಮುಖ ನೋಡ್ಕೊಂಡು ಅಂಬಿಗೆ ಓಟು ಹಾಕುವಂಥ ದುರ್ಗತಿ ಇನ್ನೂ ಬಂದಿಲ್ಲ ಬಿಡ್ರಲಾ' ಎನ್ನುತ್ತ 'ತಲ್ಲಣಿಸದಿರು ಮಂಡ್ಯ' ಎಂದು ಹಾಡುತ್ತಿದ್ದಾರಂತೆ.

ಡಬ್ಕುಡಬಲ್ ತುದಾಂಡಲ್...
- ಎಲೆಕ್ಷನ್ ಸ್ಪೆಷಲ್
ಕೇವಲ ಅಭ್ಯರ್ಥಿಗಳ ಮಧ್ಯೆ ಅಷ್ಟೇ ಅಲ್ಲ ಮತದಾನ ಮಾಡುವವರಿಗೂ ತೀವ್ರ ಪ್ರತಿಸ್ಪರ್ಧೆ ಎದುರಾಗಿದೆ, ಡ್ಯೂಪ್ಲಿಕೇಟ್ ವೋಟರ್ ಐಡಿಗಳಿಂದಾಗಿ.
ಇವತ್ತು ನೀವು ಓಟು ಮಾಡದೇ ಇದ್ರೆ ಈ ಭಾನುವಾರ ಅರ್ಧಗಂಟೆ ಹೆಚ್ಚು ನಿದ್ದೆ ಮಾಡಬಹುದು. ಓಟ್ ಮಾಡಿದ್ರೆ, ಇನ್ನೈದು ವರ್ಷ ನೆಮ್ಮದಿಯಾಗಿ ನಿದ್ದೆ ಮಾಡಬಹುದು.
ರಿಯಾಲಿಟಿ ಶೋಗಳಿಗೆ ಓಟು ಮಾಡೋದು ಇದ್ದೇ ಇದೆ, ಇವತ್ತು ಎಲೆಕ್ಷನ್‌ನಲ್ಲಿ ಓಟ್ ಮಾಡಿ.
ನಿಮ್ಮ ತೋರು ಬೆರಳಿನ ಪವರ್ ಉಪಯೋಗಿಸಿ, ಭ್ರಷ್ಟಾಚಾರಕ್ಕೆ ಮಧ್ಯದ ಬೆರಳು ತೋರಿಸಿ.
ಈಗ ಓಟು ಹಾಕದೆ, ಮುಂದೆ, ರಾಜಕಾರಣಿಗಳ ಮೇಲಿನ ಸಿಟ್ಟಿಗೆ ವಿಧಾನಸೌಧಕ್ಕೆ ಮುತ್ತಿಗೆ ಹಾಕಬೇಡಿ, 'ಬೆರಳಿನ ಉಗುರಲ್ಲಿ' ಹೋಗೋದಕ್ಕೆ ಕೊಡಲಿ ಯಾಕೆ?
ಸರ್ವೆ ಒಂದರಲ್ಲಿ, 'ಅಲ್ಲಿ ನಿಂತಿರೋ ಎಲ್ಲಾ ಕಾಂಗ್ರೆಸ್ ಮಂತ್ರಿಗಳೂ ಇಲ್ಲಿ ಬನ್ನಿ, ಸೋನಿಯಾ ಗಾಂಧಿ ಅವರ ಮಾತು ಕೇಳೋರು ಬಲಗಡೆ ನಿಂತ್ಕೊಳಿ, ಕೇಳೊಲ್ಲ ಅನ್ನೋವ್ರು ಎಡಗಡೆ ನಿಂತ್ಕೊಳ್ಳಿ' ಅಂತ ಅನೌನ್ಸ್ ಮಾಡಿದರು. ಎಲ್ರೂ ಬಂದು ಬಲಗಡೆ ನಿಂತ್ಕೊಂಡ್ರು. ಒಬ್ಬನೇ ಒಬ್ಬ ಮಾತ್ರ ಎಡಗಡೆ ನಿಂತ್ಕೊಂಡ. ಸರ್ವೆ ಮಾಡೋರು 'ಸದ್ಯ ನೀ ಒಬ್ಬನಾದ್ರೂ ಗಂಡಸು ಅಂತ ಇದೀಯಲ್ಲ, ಶಭಾಷ್‌' ಅಂದ್ರು. ಅದಕ್ಕೆ ಆ ಕಾಂಗ್ರೆಸ್ ಮಂತ್ರಿ ಹೇಳಿದ 'ಹಂಗೇನಿಲ್ಲ ಸರ್, ಇಲ್ಲಿಗೆ ಬರೋಕ್ ಮುಂಚೆ, ಸೋನಿಯಾ ಮೇಡಂ 'ಎಡಗಡೆನೇ  ನಿಂತ್ಕೊಬೇಕು' ಅಂತ ಆರ್ಡರ್ ಮಾಡಿದ್ರು'

-   ಹರಿ
harikannadaprabha@gmail.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.