ರಾಜಕಾರಣಿಗಳನ್ನು ಪಾಪಿಗಳೆನ್ನೋಣವೇ, ಪಾಪದವರೆನ್ನೋಣವೇ?
ನಮ್ಮ ದೇಶದಲ್ಲಿ ಸ್ವಾಮೀಜಿಗಳಾಗುವುದು ಮತ್ತು ರಾಜಕಾರಣಿಗಳಾಗುವುದು...
ನಮ್ಮ ದೇಶದಲ್ಲಿ ಸ್ವಾಮೀಜಿಗಳಾಗುವುದು ಮತ್ತು ರಾಜಕಾರಣಿಗಳಾಗುವುದು ಅತ್ಯಂತ ಸುಲಭ ಎಂಬ ಮಾತಿದೆ.
ಪತ್ರಿಕೋದ್ಯಮ ಪ್ರಾಧ್ಯಾಪಕರೊಬ್ಬರು ಈ ಮಾತನ್ನು ತರಗತಿಗಳಲ್ಲಿ ಯಾವತ್ತೂ ಹೇಳುತ್ತಿದ್ದರು. ಮೇಲ್ನೋಟಕ್ಕೆ ಅದು ಸತ್ಯವೂ ಹೌದು. ನೀವೂ ಹಾಗೆ ನಂಬಿಕೊಂಡಿರಲೂಬಹುದು. ಆದರೆ ನನ್ನ ದೃಷ್ಟಿಯಲ್ಲಿ ಇವೆರಡೂ ಅತ್ಯಂತ ಕಷ್ಟದ ಕೆಲಸಗಳು. ಸತತ ಪರಿಶ್ರಮ, ಸಾಧನೆ ಮಾಡದೆ ನೀವು ಸ್ವಾಮೀಜಿ ಅಥವಾ ರಾಜಕಾರಣಿ ಆಗಲು ಸಾಧ್ಯವೇ ಇಲ್ಲ.
ನನ್ನ ಮಾತಿನ ಮೇಲೆ ನಂಬಿಕೆ ಬರಬೇಕು ಎಂದಾದರೆ ಒಬ್ಬ ರಾಜಕಾರಣಿಯ ಮನೆ ಮುಂದೆ ಸುಮ್ಮನೆ ಒಂದು ಸುತ್ತು ಹಾಕಿ ಬನ್ನಿ. ನೀವು ಚುನಾವಣೆಗೆ ಸ್ಪರ್ಧಿಸಿರುವ ರಾಜಕಾರಣಿಗಳ ಮನೆಗೇ ಹೋಗಬೇಕೆಂದಿಲ್ಲ. ನಿಮ್ಮ ಪ್ರದೇಶದ ಯಾವುದೇ ಮರಿಪುಡಾರಿಯ ಮನೆಗೆ ಹೋದರೂ ಸಾಕು ನಿಮಗೆ ನನ್ನ ಮಾತಿನ ಅರ್ಥ ಅರಿವಾಗುತ್ತದೆ.
ರಾಜಕಾರಣಿಗಳ ಮನೆಗಳ ಮನೆ ಮುಂದೆ ಈಗ ಅಕ್ಷರಶಃ ಜನಜಾತ್ರೆ. ಅವನ ಬೆಂಬಲಿಗರು, ಪಕ್ಷದ ಕಾರ್ಯಕರ್ತರು ನೆರೆದಿರುತ್ತಾರೆ. ಚುನಾವಣೆಯ ಸಮಯವಾದ್ದರಿಂದ ಜನ ಇನ್ನೂ ಹೆಚ್ಚು. ಬೆಂಬಲಿಗರ ಪರಿಚಯವಿರುತ್ತದೆ. ಆದರೆ ಕಾರ್ಯಕರ್ತರೆಲ್ಲರನ್ನು ಪರಿಚಯವಿಟ್ಟುಕೊಳ್ಳುವುದು ಅಸಾಧ್ಯ. ಪರಿಚಯವಿಲ್ಲವೆಂದು ಅವರನ್ನು ದೂರತಳ್ಳುವಂತೆಯೂ ಇಲ್ಲ. ಕಾರ್ಯಕರ್ತರಲ್ಲಿ ನಿಷ್ಠಾವಂತರು, ಇದರಲ್ಲಿ ಹಿತೈಷಿಗಳು, ವಿರೋಧಿಗಳು, ಸಮಯ ಸಾಧಕರು, ಮೋಸಗಾರರು ಎಲ್ಲರೂ ಇರುತ್ತಾರೆ. ಯಾರನ್ನು ನಂಬುವುದು, ಯಾರನ್ನು ಬಿಡುವುದು? ಎಲ್ಲರೂ ಬೆಂಬಲಿಗರಂತೆ, ಹಿತೈಷಿಗಳಂತೆ ಮಾತನಾಡುತ್ತಾರೆ. ನಿಮಗೇ ಮತ ಹಾಕಿಸುತ್ತೇವೆ ಎನ್ನುತ್ತಾರೆ. ಹಾಗಂತ ಈಗ ಯಾರೂ ಸುಮ್ಮನೆ ಮತ ಹಾಕಿಸುತ್ತೇವೆ ಎನ್ನುವುದಿಲ್ಲ. ವೋಟಿಗೆ ತಕ್ಕಷ್ಟು ನೋಟು ಕೊಡಬೇಕು. ಮುಖದ ಮೇಲೇನು ಬರೆದಿರುತ್ತದೆಯೇ ಮೋಸಗಾರನೆಂದು? ಅನುಮಾನಪಟ್ಟು ಬಿಡುವಂತಿಲ್ಲ. ಯಾಕೆಂದರೆ ಒಂದೊಂದು ಮತ ಕೂಡ ಮುಖ್ಯ. ದುಡ್ಡು ತೆಗೆದುಕೊಂಡು ಹೋದವ ಹೇಳಿದಷ್ಟು ಮತ ಹಾಕಿಸುತ್ತಾನೆ ಎಂಬುದಕ್ಕೆ ಗ್ಯಾರಂಟಿಯಿಲ್ಲ. ಈತ ಕೊಟ್ಟಿದ್ದಕ್ಕೆ ಲೆಕ್ಕವಿಲ್ಲ, ಆತ ಮತ ಹಾಕಿಸಿದ್ದಕ್ಕೆ ಖಾತರಿಯಿಲ್ಲ. ಆತ ಮತ ಹಾಕಿಸದೇ ಇದ್ದಲ್ಲಿ ಕೊಟ್ಟವ ಕೋಡಂಗಿ, ಇಸ್ಕೊಂಡವ ಈರಭದ್ರ.
ಇಂತಹ ಸಾವಿರಾರು ಜನ ಈಗ ರಾಜಕಾರಣಿಗಳ ಮನೆ ಸುತ್ತುತ್ತಿರುತ್ತಾರೆ. ಈತ ನನಗೆ ಮೋಸ ಮಾಡುತ್ತಾನೆ ಅನಿಸುತ್ತಿರುತ್ತದೆ. ಹೇಳುತ್ತಿರುವುದೆಲ್ಲ ಸುಳ್ಳು. ಇವನಿಗೆ ಹೆಚ್ಚು ಮತ ಹಾಕಿಸುವ ತಾಕತ್ತಿಲ್ಲ ಅನಿಸುತ್ತಿರುತ್ತದೆ. ಆದರೆ ದೂರ ಇಡುವಂತಿಲ್ಲ! ಮಹಾ ಶಕ್ತಿವಂತರಂತೆ, ಪ್ರಭಾವಿಗಳಂತೆ ಕಾಣುವ ರಾಜಕಾರಣಿಗಳು ಚುನಾವಣೆ ಹೊಸ್ತಿಲಲ್ಲಿ ಪರಮ ಅಸಹಾಯಕರಂತೆ ಗೋಚರಿಸುತ್ತಾರೆ. ರಾಜಕಾರಣಿಗಳು ಗೆದ್ದ ಮೇಲೆ ಜನರಿಗೆ ಮೋಸ ಮಾಡಿದರೆ, ಸಾಕಷ್ಟು ಜನ ಚುನಾವಣೆಯಲ್ಲೇ ಅವರಿಗೆ ಮೋಸ ಮಾಡಿರುತ್ತಾರೆ!
ಗೆದ್ದರೆ ಗೆದ್ದ ಸಮಾಧಾನವಾದರೂ ಇರುತ್ತದೆ. ಸೋತರೆ ಸೋಲಿನ ಯಾತನೆ ಜತೆಗೆ ಮೋಸ ಹೋದ, ದುಡ್ಡು ಕಳೆದುಕೊಂಡ ಯಾತನೆ. ಸಾಮಾನ್ಯ ಜನರಿಗೆ ಇದನ್ನು ಸಹಿಸುವುದು ಅಸಾಧ್ಯ.
ಸಹಜವಾಗಿ ನೋಡುವಾಗ ರಾಜಕಾರಣಿಗಳು ಅಂದರೆ ದುಡ್ಡು ತಿನ್ನುವವರು, ಜನರ ದುಡ್ಡಿಲ್ಲಿ ಐಶಾರಾಮಿ ಜೀವನ ನಡೆಸುವವರು, ಐಶಾರಾಮಿ ಜೀವನದ ಪರಿಣಾಮವಾಗಿ ದೊಡ್ಡ ಹೊಟ್ಟೆ ಬೆಳೆಸಿಕೊಂಡವರು, ಜನರ ದುಡ್ಡು ಹೊಡೆದು ದೊಡ್ಡ ಮನೆ ಕಟ್ಟಿದವರು,ಸರ್ಕಾರಿ ದುಡ್ಡಿನಲ್ಲಿ ಜೀವನ ನಡೆಸುವವರು ಎಂದೆಲ್ಲ ಅಂದುಕೊಂಡಿದ್ದೇವೆ.
ಆದರೆ ಅವರ ಕಷ್ಟಗಳು ಬೇರೆಯೇ ಇರುತ್ತವೆ. ದಿನಾ ಬೆಳಿಗ್ಗೆ ಅವರು ಏಳುವ ಮೊದಲೇ ಬೆಂಬಲಿಗರು, ಕಾರ್ಯಕರ್ತರು, ಕೆಲಸ ಮಾಡಿಸಿಕೊಳ್ಳಲು ಬರುವವರು ಹೀಗೆ ಸಾಕಷ್ಟು ಜನ ಮನೆ ಮುಂದೆ ನೆರೆದಿರುತ್ತಾರೆ. ಬಂದವರೆಲ್ಲರಿಗೂ ಚಹಾ ಕುಡಿಸದಿದ್ದರೂ, ದಿನಕ್ಕೆ ಕನಿಷ್ಟ 50 ಮಂದಿಗಾದರೂ ಮನೆಯಲ್ಲಿ ಚಹಾ ಮಾಡಿಸಬೇಕು. ಊಟಕ್ಕೆ ಮನೆ ಮಂದಿ ಬಿಟ್ಟು ಕನಿಷ್ಟ ಎಂಟರಿಂದ ಹತ್ತು ಜನ ಇದ್ದೇ ಇರುತ್ತಾರೆ. ಇನ್ನು ಎಲ್ಲಾದರೂ ಹೋಗುವಾಗ ಎರಡು ವಾಹನವಾದರೂ ಬೇಕು. ಶಾಸಕರು- ಸಂಸದರಿಗೆ ನೀಡುವ ಸಂಬಳವೆಲ್ಲ ಇದಕ್ಕೇ ಖರ್ಚಾಗುತ್ತದೆ.
ಕೇವಲ ಅವರಿಗೆ ಬರುವ ದೂರವಾಣಿ ಕರೆಗಳನ್ನು ಸ್ವೀಕರಿಸದರೆ ಸಾಕು, ಸಾಮಾನ್ಯರ ಸಹನೆಗೆಡಬಹುದು. ಒಂದು ವರ್ಷದ ಹಿಂದೆ ನಾನು ಒಬ್ಬ ಸಂಸದರ ಜತೆ ಪ್ರಯಾಣಿಸುತ್ತಿದ್ದೆ. ಆಗ ಅವರಿಗೊಂದು ಕರೆ ಬಂತು. ವಿಷಯವೇನೆಂದರೆ ಕರೆ ಮಾಡಿದ ವ್ಯಕ್ತಿಯ ಮನೆ ಮುಂದೆ ಹಂದಿ ಸತ್ತುಬಿದ್ದಿತ್ತು. ಅವರು ಬೆಳಿಗ್ಗೆಯೇ ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ತಿಳಿಸಿದ್ದರು. ಆದರೆ ಸಂಜೆಯಾದರೂ ಯಾರೂ ಅತ್ತ ಸುಳಿದಿರಲಿಲ್ಲ. ಅವರು ನೇರವಾಗಿ ಸಂಸದರಿಗೇ ಕರೆ ಮಾಡಿದ್ದರು
ದಿವಂಗತ ಡಾ. ವಿ.ಎಸ್. ಆಚಾರ್ಯ ಅವರು ಹೇಳಿದ ಒಂದು ಘಟನೆ ನೆನಪಾಗುತ್ತಿದೆ. ಅವರು ಬಿಜೆಪಿ ಸರ್ಕಾರದಲ್ಲಿ ಗೃಹ ಸಚಿವರಾಗಿದ್ದರು. ಯಾರೇ ಕರೆ ಮಾಡಿದರೂ ಡಾಕ್ಟರ್ ಆಚಾರ್ಯ ಎಂದು ಹೇಳಿಯೇ ಅವರು ಕರೆ ಸ್ವೀಕರಿಸುತ್ತಿದ್ದರು. ಒಮ್ಮೆ ಆಚಾರ್ಯ ಅವರು ಗಾಢ ನಿದ್ರೆಯಲ್ಲಿದ್ದರು. ರಾತ್ರಿ ಎರಡು ಗಂಟೆಗೆ ಮೊಬೈಲ್ ರಿಂಗ್ ಆಯಿತು. ಡಾಕ್ಟರ್ ಆಚಾರ್ಯ ಎಂದರು. ಆ ಕಡೆಯಿಂದ ವ್ಯಕ್ತಿ, 'ಸರ್... ಬಸ್ಸು ರಸ್ತೆ ಬದಿ ಹೊಂಡಕ್ಕೆ ಬಿದ್ದುಬಿಟ್ಟಿದೆ. ಏನಾದರೂ ಮಾಡಿ' ಎಂದು ವಿನಂತಿಸಿದರು. ಆಚಾರ್ಯ ಅವರು ಕೂಡಲೇ ಸಂಬಂಧಪಟ್ಟ ಜಿಲ್ಲೆಯ ಪೊಲೀಸರಿಗೆ ಕರೆ ಮಾಡಿ, ಸಹಾಯದ ವ್ಯವಸ್ಥೆ ಮಾಡಿಸಿದರು.
ಇನ್ನೊಂದು ಘಟನೆಯಂತೂ ತೀರಾ ಹಾಸ್ಯಾಸ್ಪದವಾಗಿದೆ. ಒಬ್ಬ ವ್ಯಕ್ತಿ ಸಂಸದರೊಬ್ಬರ ಬಳಿ ಮನವಿಪತ್ರ ತೆಗೆದುಕೊಂಡು ಬಂದಿದ್ದ. ಆತನ ಸಮಸ್ಯೆ ಏನೆಂದರೆ, ಆತನಿಗೂ ಪಕ್ಕದ ಮನೆಯವರಿಗೂ ಆಗಿಬರುತ್ತಿರಲಿಲ್ಲ. ಸಣ್ಣದೊಂದು ಕಾರಣಕ್ಕೆ ಜಗಳವಾಗಿತ್ತು. ಪಕ್ಕದ ಮನೆಯ ವ್ಯಕ್ತಿ ಸಾಕಿದ್ದ ದನಗಳನ್ನು ಎರಡೂ ಮನೆಯ ಜಾಗದ ಗಡಿಯಲ್ಲಿ ಕಟ್ಟುತ್ತಿದ್ದ. ಇಬ್ಬರ ಜಾಗದ ಗಡಿಯಲ್ಲಿ ಕೇವಲ ಎರಡು ಎತ್ತರದ ಪಾಗಾರವಷ್ಟೇ ಇತ್ತು. ಹೀಗಾಗಿ ಆ ವ್ಯಕ್ತಿಯ ದನಗಳು ಈತನ ಜಾಗದಲ್ಲಿ ಸಗಣಿಹಾಕುತ್ತಿದ್ದವು. ದಯವಿಟ್ಟು ಅವು ನನ್ನ ಜಾಗದಲ್ಲಿ ಸಗಣಿ ಹಾಕದಂತೆ ಮಾಡಿಸಿ ಎಂಬುದು ಆತನ ಮನವಿ
ಇವು ಕೇವಲ ಸಣ್ಣ ಉದಾಹರಣೆಗಳಷ್ಟೇ. ಇಂತಹ ಅದೆಷ್ಟೋ ಚಿತ್ರ ವಿಚಿತ್ರ ಸಮಸ್ಯೆಗಳು ದಿನವೂ ರಾಜಕಾರಣಿಗಳ ಮನೆ ಬಾಗಿಲು ತಟ್ಟುತ್ತವೆ. ಆ ವ್ಯಕ್ತಿಯ ಮೇಲೆ ಕೂಗಾಡದೇ, ಸಹನೆ ಕಳೆದುಕೊಳ್ಳದೇ ಇವುಗಳನ್ನು ನಿಭಾಯಿಸಬೇಕು. ಸಮಾಧಾನವಾಗುವಂತಹ ಪರಿಹಾರ ಸೂಚಿಸಬೇಕು. ಒಮ್ಮೆ ಸಹನೆ ಕಳೆದುಕೊಂಡರೂ ಸಾಕು, 'ಮಹಾ ಧಿಮಾಕಿನ ಮನುಷ್ಯ' ಎಂಬ ಬಿರುದು ಸಾರ್ವಜನಿಕರಲ್ಲಿ ಪ್ರಚಾರಕ್ಕೆ ಬಂದುಬಿಡುತ್ತದೆ.
ಪೆಟ್ರೋಲ್ ದರ ಏರಲಿ, ವಿದ್ಯುತ್ ಕಡಿತವಾಗಲಿ, ಬಸ್ ಬಾರದಿರಲಿ, ನೀರು ಪೂರೈಕೆ ಸ್ಥಗಿತಗೊಳ್ಳಲಿ, ರಸ್ತೆ ಹಾಳಾಗಿರಲಿ, ತರಕಾರಿ ತುಟ್ಟಿಯಾಗಲಿ, ಮಕ್ಕಳಿಗೆ ಕೆಲಸ ಸಿಗದಿರಲಿ.... ಹೀಗೆ ಪ್ರತಿಯೊಂದಕ್ಕೂ ನಾವು ರಾಜಕಾರಣಿಗಳನ್ನೇ ದೂರುತ್ತೇವೆ. ನಮ್ಮ ಕಷ್ಟಗಳಿಗೆ ದೂಷಿಸಲು ಯಾರಾದರೂ ಬೇಕು ಎಂಬ ಕಾರಣಕ್ಕೇ ನಾವು ಶಾಸಕರು-ಸಂಸದರನ್ನು ಆರಿಸುತ್ತೇವೇನೊ ಅನಿಸುತ್ತದೆ. ಅಷ್ಟರ ಮಟ್ಟಿಗೆ ನಾವು ಅವರನ್ನು ದೂಷಿಸುತ್ತೇವೆ.
ಇಷ್ಟೆಲ್ಲ ಬೈದರೂ ಏನಾದರೂ ಕೆಲಸ ಆಗಬೇಕಾದರೆ ನೆನಪಾಗುವವರು ಇದೇ ರಾಜಕಾರಣಿಗಳು. ದಿನ ಬೆಳಗಾದರೆ ಕಾರ್ಯಕ್ರಮಗಳಿಗೆ ಚಂದಾ ಕೇಳುವವರು, ದೇವಸ್ಥಾನ-ಕಲ್ಯಾಣ ಮಂಟಪ ನಿರ್ಮಾಣಕ್ಕೆ ದೇಣಿಗೆ ಕೇಳುವವರು, ರೋಗದ ಚಿಕಿತ್ಸೆಗೆ, ಮಕ್ಕಳ ಮದುವೆಗೆ, ಶಿಕ್ಷಣಕ್ಕೆ, ಕ್ರಿಕೆಟ್, ವಾಲಿಬಾಲ್ ಪಂದ್ಯಾವಳಿಗಳಿಗೆ, ಸಾಮೂಹಿಕ ವಿವಾಹ ಕಾರ್ಯಕ್ರಮಕ್ಕೆ ದುಡ್ಡು ಕೇಳಲು ಬರುವವರ ಸಂಖ್ಯೆ ಲೆಕ್ಕವಿಲ್ಲದಷ್ಟು. ಯಾರಿಗೂ ಇಲ್ಲ ಎನ್ನುವಂತಿಲ್ಲ.
ಒಬ್ಬ ರಾಜಕಾರಣಿಗೆ ಅದರಲ್ಲೂ ಬೆಂಗಳೂರಿನಂತಹ ಪ್ರದೇಶದಲ್ಲಿರುವವರಿಗೆ ಪ್ರತಿ ದಿನಕ್ಕೆ ಏನಿಲ್ಲವೆಂದರೂ ಮೂರು- ನಾಲ್ಕು ಗೃಹಪ್ರವೇಶ, ನಾಲ್ಕು-ಐದು ಮದುವೆ ಕಾರ್ಯಕ್ರಮಗಳಿರುತ್ತವೆ. ಅಲ್ಲಿಗೆಲ್ಲ ಬರಿಗೈಲಿ ಹೋಗುವಂತಿಲ್ಲ. ತುಂಬ ಚಿಕ್ಕ ಹೂಗುಚ್ಛವನ್ನೂ ಹಿಡಿದುಕೊಂಡು ಹೋಗುವಂತಿಲ್ಲ. ಒಂದು ಸಾಮಾನ್ಯ ಗಾತ್ರದ ಹೂಗುಚ್ಛಕ್ಕೆ ಕನಿಷ್ಟ 500 ರೂಪಾಯಿ ಇದೆ. ಅಲ್ಲಿಗೆ ದಿನಕ್ಕೆ ಹೂಗುಚ್ಛಕ್ಕೇ 4000 ರೂಪಾಯಿ ಬೇಕು. ಯಾರಾದರೂ ದೊಡ್ಡ ನಾಯಕರನ್ನು ಭೇಟಿ ಮಾಡಬೇಕೆಂದರೆ ದೊಡ್ಡ ಹೂಗುಚ್ಛವೇ ಬೇಕು.
ಇವೆಲ್ಲ ದಿನನಿತ್ಯದ ಖರ್ಚುಗಳು. ಇವುಗಳಿಗೆಲ್ಲ ದುಡ್ಡು ಬೇಕು. ಹೀಗೆಂದಾಕ್ಷಣ ನಾನು ಅವರ ಭ್ರಷ್ಟಾಚಾರವನ್ನು ಸಮರ್ಥಿಸುತ್ತಿದ್ದೇನೆ ಎಂದು ಭಾವಿಸಬೇಡಿ. ವಾಸ್ತವ ಸಂಗತಿಗಳನ್ನು ನಿಮ್ಮ ಮುಂದಿಡುತ್ತಿದ್ದೇನೆ ಅಷ್ಟೇ.
ಅಮೆರಿಕದ ಅಧ್ಯಕ್ಷರಾದವರು ವರ್ಷಕ್ಕೊಮ್ಮೆಯಾದರೂ ಹೆಂಡತಿ-ಮಕ್ಕಳೊಂದಿಗೆ ಪ್ರವಾಸಕ್ಕೆ ತೆರಳುತ್ತಾರೆ. ಅದೇ ನಮ್ಮ ದೇಶದಲ್ಲಿ ಅಂತಹ ಅವಕಾಶಗಳಿಲ್ಲ. ಅಕಸ್ಮಾತ್ ಒಬ್ಬ ರಾಜಕಾರಣಿ ಸಂಸಾರ ಸಮೇತರಾಗಿ ವಿದೇಶಕ್ಕೆ ತೆರಳಿದರೆ, ಬರಗಾಲವಿದ್ದರೂ ಶಾಸಕರು ವಿದೇಶ ಪ್ರವಾಸಕ್ಕೆ ಹೋದರು ಎಂಬುದು ವಿವಾದವನ್ನೇ ಸೃಷ್ಟಿಸಿಬಿಡುತ್ತದೆ. ಶಾಸಕರೊಬ್ಬರು ಸಂಸಾರ ಸಮೇತ ಸಿನಿಮಾ ನೋಡಲು ಹೋದರು ಅಂದುಕೊಳ್ಳಿ. ಅದೇ ಹೊತ್ತಿಗೆ ಅವರ ಕ್ಷೇತ್ರದಲ್ಲಿ ಕಟ್ಟಡ ಬಿದ್ದು ನಾಲ್ಕು ಜನ ಸತ್ತರೆ, ಮಾಧ್ಯಮಗಳಲ್ಲಿ ಕಟ್ಟಡ ಬಿದ್ದಾಗ ಸಿನಿಮಾ ನೋಡುತ್ತಿದ್ದ ಶಾಸಕರು ಎಂಬ ಸುದ್ದಿ ಬಿತ್ತರವಾಗುತ್ತಿರುತ್ತದೆ. ಶಾಸಕರು ಸಿನಿಮಾಕ್ಕೆ ಹೋಗದಿದ್ದರೂ ಕಟ್ಟಡ ಬೀಳುವುದನ್ನೇನೂ ತಡೆಯಲಾಗುತ್ತಿರಲಿಲ್ಲ. ಆದರೂ ಅವರು ಸಿನಿಮಾಕ್ಕೆ ಹೋದದ್ದು ಅಪರಾಧ ಎಂಬಂತೆ ಬಿಂಬಿಸಲಾಗುತ್ತದೆ. ಹೀಗಾಗಿ ಖಾಸಗಿ ಜೀವನ ಎಂಬುದು ರಾಜಕಾರಣಿಗಳ ಪಾಲಿಗೆ ಇಲ್ಲವೇ ಇಲ್ಲ ಎಂಬಂತಾಗಿದೆ.
ಆರಂಭದಲ್ಲಿ ನಾನು ಸ್ವಾಮೀಜಿಗಳ ಹೆಸರನ್ನೂ ಪ್ರಸ್ತಾಪಿಸಿದ್ದೆ. ಎಲ್ಲ ಆಸೆಗಳನ್ನು ಬಿಟ್ಟು, ಸಾಮಾನ್ಯ ಜೀವನ ತೊರೆದು ಸ್ವಾಮೀಜಿಗಳಾಗುವುದು ಅಷ್ಟು ಸುಲಭದ ಮಾತಲ್ಲ. ಒಂದು ಸಿನಿಮಾ ನೋಡುವಂತಿಲ್ಲ. ಗೋಬಿ ಮಂಚೂರಿ ತಿನ್ನುವಂತಿಲ್ಲ. ಪಾನಿಪೂರಿ ಸವಿಯುವಂತಿಲ್ಲ. ಅದೆಲ್ಲ ಇರಲಿ ಕನಿಷ್ಟ ಅಪ್ಪೆಹುಳಿ ಇಷ್ಟವೆಂದು ಹಾಕಿಕೊಂಡು ಸುರಿಯುವಂತಿಲ್ಲ. ಅಪರೂಪಕ್ಕೊಂದು ಒಳ್ಳೆಯ ಶರ್ಟು ಹಾಕುವಂತಿಲ್ಲ. ಕಾವಿ ಬಣ್ಣದ ಬಟ್ಟೆಯನ್ನೇ ಜೀವನಪರ್ಯಂತ ತೊಡಬೇಕು. ಕಟ್ಟುಪಾಡುಗಳ ನಡುವೆಯೇ ಜೀವನ ಸಾಗಿಸಬೇಕು.
ಸ್ವಾಮೀಜಿಗಳು ಸರ್ವಸಂಗಪರಿತ್ಯಾಗಿಗಳು. ಅವರಿಗೆ ಸಂಸಾರದ ಕಷ್ಟಗಳಿಲ್ಲ ಎಂದುಕೊಳ್ಳುತ್ತೇವೆ. ಆದರೆ ಭಕ್ತರ ಸಂಸಾರದಲ್ಲಿ ಮಕ್ಕಳಾಗದಿರುವುದರಿಂದ ಆರಂಭಿಸಿ ಡೈವೋರ್ಸ್‌ವರೆಗಿನ ಸಮಸ್ಯೆಗಳನ್ನು ಸ್ವಾಮೀಜಿಗಳೇ ಪರಿಹಾರ ಕಾಣಿಸಬೇಕು!
ಸ್ವಾಮೀಜಿಗಳು ಮತ್ತು ರಾಜಕಾರಣಿಗಳು ಪ್ರತಿ ಹೆಜ್ಜೆಯನ್ನೂ ಎಚ್ಚರದಿಂದ ಇಡಬೇಕು. ಕೊಂಚ ಎಡವಿದರೂ ವಿವಾದವಾಗುತ್ತದೆ. ಅವರು ಮತ್ತು ಅವರ ಕುಟುಂಬದವರು ವಿವಾದದ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಸ್ವಾಮೀಜಿಗಳು ಮತ್ತು ರಾಜಕಾರಣಿಗಳು ಆಗುವುದು ಎಷ್ಟು ಕಷ್ಟವೋ ಅದನ್ನು ಬಿಡುವುದು ಕೂಡ ಅಷ್ಟೇ ಕಷ್ಟ. ನೀವು ಉದ್ಯೋಗ ಮಾಡುವವರಾದರೆ ಅದುಬೇಡ ಅಂದ ತಕ್ಷಣ ರಾಜೀನಾಮೆ ಕೊಟ್ಟು ಹೊರಬರಬಹುದು. ಆದರೆ ಸ್ವಾಮೀಜಿಗಳು ಮತ್ತು ರಾಜಕಾರಣಿಗಳಿಗೆ ಅದು ಸಾಧ್ಯವಿಲ್ಲ. ಅವರು ಅದಕ್ಕೆ ಕಾರಣ ಕೊಡಬೇಕಾಗುತ್ತದೆ. ಒಬ್ಬ ಸ್ವಾಮೀಜಿ ತಮ್ಮ ಇಷ್ಟದಿಂದ ಸನ್ಯಾಸ ಬಿಟ್ಟು ಮದುವೆಯಾಗಿದ್ದು ಎಷ್ಟೊಂದು ವಿವಾದಕ್ಕೆ ಕಾರಣವಾಯಿತು ಎಂಬುದು ಎಲ್ಲರಿಗೂ ಗೊತ್ತು.
ಇನ್ನು ರಾಜಕಾರಣಿಗಳಿಗೆ ರಾಜಕೀಯ ಬಿಟ್ಟರೆ ಇಷ್ಟು ದಿನ ಸಿಗುತ್ತಿದ್ದ ಮರ್ಯಾದೆ, ಗೌರವ, ಜನ ಬೆಂಬಲ, ಅಧಿಕಾರ ಇಲ್ಲದಂತಾಗುತ್ತದೆ ಎಂಬ ಭಯ ಕಾಡುತ್ತದೆ. ಅಧಿಕಾರವಿಲ್ಲದಿದ್ದರೆ ಅವರನ್ನು ಅಭದ್ರತೆ ಕಾಡುತ್ತದೆ. ಮೇಲ್ನೋಟಕ್ಕೆ ಸರ್ವ ಸಮರ್ಥರಂತೆ, ಮಹಾಧೈರ್ಯವಂತರಂತೆ ಕಾಣುತ್ತಾರೆ. ಒಳಗೊಳಗೇ ಅವರಷ್ಟು ಪುಕ್ಕಲರು ಇನ್ನೊಬ್ಬರಿಲ್ಲ. ಆದರೆ ಅದನ್ನು ಹೊರಗೆ ತೋರಿಸಿಕೊಳ್ಳದ ಅನಿವಾರ್ಯವೂ ಅವರಿಗಿರುತ್ತದೆ.
ರಾಜಕಾರಣಿಗಳಿಗೆ ಮತ್ತು ಸ್ಮಾಮೀಜಿಗಳಿಗೆ ಸಮಸ್ಯೆಗಳೇನೇ ಇರಲಿ ಯಾರಲ್ಲೂ ಹೇಳಿಕೊಳ್ಳುವಂತಿಲ್ಲ. ಹೇಳಿಕೊಂಡರೆ, ಸ್ವಂತ ಸಮಸ್ಯೆಯನ್ನೇ ಬಗೆಹರಿಸಿಕೊಳ್ಳಲು ಆಗದವರು ನಮ್ಮ ಸಮಸ್ಯೆಯನ್ನೇನು ಬಗೆಹರಿಸಿಯಾರು ಎಂದು ಜನ ಅವರನ್ನು ಆಡಿಕೊಳ್ಳುತ್ತಾರೆ. ಯಾವ ಖಾಸಗಿ ಸಂಗತಿಯನ್ನೂ ಹಂಚಿಕೊಳ್ಳಲಾಗದೇ, ಖಾಸಗಿ ಜೀವನವೇ ಇಲ್ಲದೆ, ಬದುಕನ್ನೆಲ್ಲ ಸಾರ್ವಜನಿಕರಿಗಾಗಿಯೇ ಮೀಸಲಿಡಬೇಕು. ಕೊನೇಪಕ್ಷ ಹಾಗೆ ನಟಿಸಬೇಕಾದ ಅನಿವಾರ್ಯ ಇಬ್ಬರಿಗೂ ಇರುತ್ತದೆ. ಒಂದು ಹಂತದಲ್ಲಿ ಇದೆಲ್ಲ ಬೇಡ ಅನ್ನಿಸಿದರೂ ಬಿಡಲಾರದ ಅನಿವಾರ್ಯ.
ಇಬ್ಬರನ್ನು ನೋಡಿದಾಗಲೂ ನನ್ನ ಮನಸ್ಸಿನಲ್ಲೊಂದು ಅನುಕಂಪದ ಗೆರೆ ಮೂಡುತ್ತದೆ.
- ವಿಶ್ವೇಶ್ವರ ಭಟ್
vbhat@me.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

