ಅಂಕಣಗಳು

ದೇಶದ ಅವನತಿ ತಪ್ಪಿಸಲು ಇಂಥವರಿಂದ ಮಾತ್ರ ಸಾಧ್ಯ

Published On :

ನ್ಯಾಯಮೂರ್ತಿ ಪಿ.ಡಿ. ದಿನಕರನ್ ಬಗ್ಗೆಯಾಗಲೀ, ನ್ಯಾಯಮೂರ್ತಿ ಸೌಮಿತ್ರ ಸೇನ್ ಬಗ್ಗೆಯಾಗಲೀ, ನ್ಯಾಯಮೂರ್ತಿ ಕೆ.ಜಿ. ಬಾಲಕೃಷ್ಣನ್ ಬಗ್ಗೆಯಾಗಲೀ ಈಗೀಗ ಯಾವುದೇ ಸುದ್ದಿ ಕೇಳಿ ಬರುತ್ತಿಲ್ಲ. ಇದೊಂದು ಸಮಾಧಾನಕರ ಸಂಗತಿ. ನ್ಯಾ. ಎಂ.ಎನ್. ವೆಂಕಟಾಚಲಯ್ಯ, ನ್ಯಾ. ಜೆ.ಎನ್. ವರ್ಮಾ, ನ್ಯಾ. ಕೆ.ಟಿ. ಥಾಮಸ್, ನ್ಯಾ. ಸಂತೋಷ್ ಹೆಗ್ಡೆ, ನ್ಯಾ. ಮಾರ್ಕಂಡೇಯ ಕಾಟ್ಜುರಂಥವರೇ ಹೆಚ್ಚಿನ ಸುದ್ದಿ ಮಾಡುತ್ತಿದ್ದಾರೆ. ಇದೊಂದು ಆಶಾಕಿರಣ. ಇವರದು ಒಂದು ಉತ್ತಮ ಕೂಟ. ಇಂಥವರಿಂದಾಗಿಯೇ ಕೆಡುಕಿನ ವಿರುದ್ಧ ಒಳಿತು ಪ್ರಾಬಲ್ಯ ಸಾಧಿಸುತ್ತದೆ.
 ನಮ್ಮ ಸಮಾಜದಲ್ಲಿ ರಾಜಕೀಯ ವರ್ಗವು ನೈತಿಕ ನೆಲೆಯನ್ನು ಕಳೆದುಕೊಂಡಿದೆ. ಹಾಗೆಯೇ ಸಂಸತ್ತೂ ಕೂಡಾ. ಪ್ರಖ್ಯಾತ 'ನಾಲ್ಕನೆಯ ಅಂಗ'ವೂ ತನ್ನ ಹೊಳಪನ್ನು ಬಹಳಷ್ಟು ಕಳೆದುಕೊಂಡಿದೆ. ಇತ್ತ, ಎಲ್ಲ ಮಟ್ಟದಲ್ಲಿ ಭ್ರಷ್ಟಾಚಾರದ ಹೊರತಾಗಿಯೂ ಒಂದಷ್ಟು ವಿಶ್ವಾಸಾರ್ಹತೆಯನ್ನು ಉಳಿಸಿಕೊಂಡಿದೆ ನ್ಯಾಯಾಂಗ. ಕೆಲ ಅಸಾಮಾನ್ಯ ನ್ಯಾಯಾಧೀಶರು ಮತ್ತು ನ್ಯಾಯವಾದಿಗಳ ಅಸಾಧಾರಣ ಕೊಡುಗೆಯೇ ಇದಕ್ಕೆ ಕಾರಣ. ಅವರೇ ನಮ್ಮ  ನಿಜವಾದ ರಕ್ಷಕರು.
 ಅಂದಿನ ಗೃಹ ಸಚಿವ ಎಲ್.ಕೆ. ಆಡ್ವಾಣಿ ಅವರು ಸಂವಿಧಾನದ ಜಾರಿ, ನಿರ್ವಹಣೆ ಬಗ್ಗೆ ಪರಾಮರ್ಶೆಗಾಗಿ ರಾಷ್ಟ್ರೀಯ ಆಯೋಗವೊಂದನ್ನು ರಚಿಸಿದಾಗ, ಬಿಜೆಪಿಯ ಉದ್ದೇಶಗಳ ಬಗ್ಗೆ ಆರೋಪಗಳು ಕೇಳಿಬಂದವು. ಆಯೋಗದ ಅಧ್ಯಕ್ಷರಾಗಿ ನ್ಯಾ. ಎಂ.ಎನ್. ವೆಂಕಟಾಚಲಯ್ಯ ಅವರ ಆಯ್ಕೆ ಈ ಎಲ್ಲ ಆರೋಪ, ಟೀಕೆಗಳನ್ನು ತಣ್ಣಗಾಗಿಸಿತು. ಸುಪ್ರೀಂಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿಯವರು ನೀಡಿದ ಎರಡು ಹೇಳಿಕೆಗಳು ಆಯೋಗದ ವಿಶ್ವಾಸಾರ್ಹತೆಯನ್ನು ಇನ್ನಷ್ಟು ಹೆಚ್ಚಿಸಿದವು. ಅವರು ಹೇಳಿದ ಮೊದಲನೆಯ ಮಾತೆಂದರೆ, ಸಂಸದೀಯ ಆಯೋಗವೇನೋ ಉತ್ತಮವಿರಬಹುದು, ಆದರೆ ಅದು ಸಮಾಜದ ಒಳಿತಿನ ವೈರಿಯಾಗಿರಬಾರದು. ಎರಡನೆಯದಾಗಿ ಅವರು ಹೇಳಿದ್ದೆಂದರೆ, ಆಯೋಗವು ಯಾವುದೇ ರಾಜಕೀಯ ಪಕ್ಷದ ಕಾರ್ಯಸೂಚಿಯನ್ನು ಬೆಂಬಲಿಸಬಾರದು. ಬಹುಶಃ ಅವರು ಸೋನಿಯಾ ಗಾಂಧಿ ಕುಟುಂಬದ ನಿಕಟವರ್ತಿಗಳೆಂದು ಪರಿಗಣಿಸಲಾಗಿದ್ದ ಹಾಗೂ ಆಯೋಗದ ಸದಸ್ಯರಾದ ಪಿ.ಎ. ಸಂಗ್ಮಾ, ಸೋಲಿ ಸೊರಾಬ್ಜಿ ಮತ್ತು ಅಬಿದ್ ಹುಸೇನ್‌ರಂಥವರನ್ನು ಗಮನದಲ್ಲಿರಿಸಿ ಈ ಮಾತು ಹೇಳಿರಬೇಕು. ಕೊನೆಗೆ, ಆಯೋಗದ ವರದಿ (2002) ಮೂಲೆಗುಂಪಾಯಿತು. ಆದರೆ, ನ್ಯಾ. ಎಂಎನ್‌ವಿ ಇನ್ನೂ ಸಕ್ರಿಯರಾಗಿಯೇ ಇದ್ದಾರೆ. ಮಾನವ ಹಕ್ಕುಗಳ ರಕ್ಷಣೆ ಮತ್ತು ಭ್ರಷ್ಟಾಚಾರ ವಿರೋಧಿ ಚಳವಳಿಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.
 ದೆಹಲಿ ಗ್ಯಾಂಗ್‌ರೇಪ್ ಪ್ರಕರಣದಿಂದ ಇಡೀ ದೇಶ ಆತಂಕಕ್ಕೊಳಗಾಗಿದ್ದಾಗ, ನ್ಯಾ. ಜೆ.ಎನ್. ವರ್ಮಾ ಆಯೋಗದ ವರದಿಯು ನೊಂದ ಹೃದಯಗಳಿಗೆ ಸಾಂತ್ವನ ನೀಡಿತು. ದಾಖಲೆ ಅವಧಿಯಲ್ಲಿ ವರದಿಯನ್ನು ಸಿದ್ಧಪಡಿಸಲಾಗಿತ್ತು ಮಾತ್ರವಲ್ಲದೆ, ದಿಟ್ಟ, ಸಮಗ್ರ ವರದಿಯೆಂಬ ಹೆಗ್ಗಳಿಕೆಗೂ ಇದು ಪಾತ್ರವಾಯಿತು. ನಮ್ಮ ದುರದೃಷ್ಟವೋ ಏನೋ, ಅದು ನಿಷ್ಕ್ರಿಯ ಸರ್ಕಾರವೊಂದರ ಕೈಯಲ್ಲಿ ಸಿಲುಕಿಕೊಂಡಿತು. ರಾಜಕೀಯ ಕ್ಷೇತ್ರದಲ್ಲಿನ ಕ್ರಿಮಿನಲ್ ಶಕ್ತಿಗಳೂ ಸೇರಿದಂತೆ ಎಲ್ಲರನ್ನೂ ಸಂತುಷ್ಟಗೊಳಿಸುವ ಆತುರದಲ್ಲಿ, ಆಯೋಗದ ಶಿಫಾರಸುಗಳನ್ನು ಸರ್ಕಾರ ಹಲ್ಲಿಲ್ಲದ ಕಾನೂನನ್ನಾಗಿ ಪರಿವರ್ತಿಸಿತು. ಆದರೆ, ನ್ಯಾ. ವರ್ಮಾ ಇನ್ನೂ ಅಧಿಕಾರವಾಣಿಯಿಂದ ಮಾತನಾಡಬಲ್ಲರು. ಎಷ್ಟು ನ್ಯಾಯಾಂಗ ಪ್ರಜ್ಞೆ, ತಿಳಿವಳಿಕೆ ಹೊಂದಿರುವರೋ ಅಷ್ಟೇ ಪ್ರಾಮಾಣಿಕತೆಯನ್ನೂ ಮೈಗೂಡಿಸಿಕೊಂಡವರು ಅವರು.
ರಾಜೀವ್‌ಗಾಂಧಿ ಹಂತಕರಿಗೆ ಗಲ್ಲು ಶಿಕ್ಷೆ ವಿಧಿಸಿದ್ದ ತ್ರಿಸದಸ್ಯ ನ್ಯಾಯಪೀಠದಲ್ಲಿದ್ದ ನ್ಯಾ. ಕೆ.ಟಿ. ಥಾಮಸ್ ಒಂದು ಮಾತು ಹೇಳಲು ಹಿಂಜರಿಯಲಿಲ್ಲ. 22 ವರ್ಷಗಳಿಂದ ಜಾರಿಯಾಗದ ಶಿಕ್ಷೆಯನ್ನು ಇಂದು ಜಾರಿ ಮಾಡುವುದು ಸಂವಿಧಾನದ ಆಶಯಕ್ಕೆ ವಿರುದ್ಧವಾದುದು ಎಂದರು ಥಾಮಸ್. ಅಷ್ಟೇ ಅಲ್ಲದೆ, ಹತ್ಯೆ ಸಂಚಿಗೆ ಹಣಕಾಸು ನೆರವಿನಂಥ, ಪ್ರಕರಣದ ತನಿಖೆಯಾಗದ ಅಂಶಗಳನ್ನೂ ಪ್ರಸ್ತಾಪಿಸಿದರು ಅವರು. ಒಂದು ಮಹತ್ವದ ತೀರ್ಪನ್ನೂ ಉಲ್ಲೇಖಿಸಿದರು ಥಾಮಸ್. ಅಪರಾಧವನ್ನು ಮಾತ್ರ ಗಮನಿಸಿದರೆ ಸಾಲದು, ಅಪರಾಧಿಗಳ ಗುಣಾವಗುಣ, ಸಂದರ್ಭಗಳನ್ನೂ ಪರಿಗಣಿಸಬೇಕಾಗುತ್ತದೆ ಎಂದು 2010ರಲ್ಲಿ ನ್ಯಾ. ಎಸ್.ಬಿ. ಸಿನ್ಹಾ ತೀರ್ಪೊಂದರಲ್ಲಿ ಅಭಿಪ್ರಾಯಪಟ್ಟಿದ್ದನ್ನು ನೆನಪಿಸಿದರು.
 ಸುಪ್ರೀಂಕೋರ್ಟಿನ ಕೆಲ ನಿವೃತ್ತ ನ್ಯಾಯಾಧೀಶರು ಸಾರ್ವಜನಿಕರ ಮೆಚ್ಚುಗೆ ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅವರಲ್ಲೊಬ್ಬರು ನ್ಯಾ. ಸಂತೋಷ್ ಹೆಗ್ಡೆ. ಗಣಿಗಾರಿಕೆ ಹೆಸರಿನಲ್ಲಿ ನಡೆದ ಭ್ರಷ್ಟಾಚಾರದ ಆಳವನ್ನು ಬಹಿರಂಗಗೊಳಿಸಿದವರು ಇವರು. ಗಣಿಗಾರಿಕೆಯು ಹಲವಾರು ಜನರಿಗೆ ನೌಕರಿ ಕೊಡಿಸುತ್ತದೆ ಎಂಬ ಆಧಾರದ ಮೇಲೆ ಅಕ್ರಮ ಗಣಿಗಾರಿಕೆಯನ್ನು ಸಮರ್ಥಿಸಲು ಸರ್ವಥಾ ಸಾಧ್ಯವಿಲ್ಲ ಎಂದಿದ್ದಾರೆ ಸಂತೋಷ್ ಹೆಗ್ಡೆ. ಇಂಥ ವಾದವು ದಾವೂದ್ ಇಬ್ರಾಹಿಂನನ್ನು ಬಂಧಿಸಿದರೆ ಹಲವಾರು ಜನರು ಕೆಲಸ ಕಳೆದುಕೊಳ್ಳುತ್ತಾರೆ, ಆದ್ದರಿಂದ ಆತನನ್ನು ಬಂಧಿಸಬಾರದು ಎಂದು ವಾದಿಸಿದಂತೆ ಎಂದೂ ಹೆಗ್ಡೆ ತಮ್ಮ ಮಾತನ್ನು ಸಮರ್ಥಿಸಿಕೊಂಡಿದ್ದಾರೆ. ಅವರ ಅಭಿಪ್ರಾಯ ಸರಿಯಾದುದು ಎನಿಸುವುದಿಲ್ಲವೇ? ಅವರ ಮಾತಲ್ಲಿ ರಾಜಕೀಯ ನಾಯಕರು ಸಿಟ್ಟಿಗೇಳುವಂಥದ್ದಾದರೂ ಏನಿದೆ?
 ನ್ಯಾ. ಮಾರ್ಕಂಡೇಯ ಕಾಟ್ಜು ಅವರದು ನಿಷ್ಠುರ ನಡೆ, ಖಡಕ್ ಮಾತು. ಕೆಲವೊಮ್ಮೆ ಅವರ ಮಾತು ನೋವುಂಟುಮಾಡುವುದೂ ಇದೆ. ಆದರೆ, ಅವರ ಉದ್ದೇಶ ಗೌರವಾರ್ಹವಾದುದು. ನ್ಯಾಯವಾದುದಕ್ಕಾಗಿ ಹೋರಾಡುವ ದಿಟ್ಟತನ ಅವರಲ್ಲಿದೆ. ಸಂಜಯ್‌ದತ್ ಅಥವಾ ಜೈಬುನ್ನಿಸಾಗೆ ಕ್ಷಮಾದಾನದ ವಿಚಾರದಲ್ಲೂ ಅವರು ದನಿಯೆತ್ತುತ್ತಾರೆ. ಹೋರಾಟದ ವಿಚಾರದಲ್ಲಿ ಅವರದು ಉನ್ನತ ವ್ಯಕ್ತಿತ್ವ.
 ಈ ಎಲ್ಲ ಗಣ್ಯರು ನಿವೃತ್ತರಾಗಿರಬಹುದು. ಆದರೆ, ವೃತ್ತಿಗೆ ಅವರು ತೋರಿದ ಬದ್ಧತೆ ಇನ್ನೂ ಹಾಗೆಯೇ ಇದೆ. ಅವರಲ್ಲಿನ ಪಾಂಡಿತ್ಯ,  ಅವರಲ್ಲಿನ ನ್ಯಾಯಾಂಗ ಪರಿಣತಿ ಮತ್ತು ಅಚಲ ಸ್ವಾತಂತ್ರ್ಯಪ್ರಜ್ಞೆ ದೇಶದ ಸೇವೆಗೆ ಇನ್ನೂ ಲಭ್ಯ. ಅವರೆಲ್ಲ ಉತ್ತಮರಲ್ಲಿ ಉತ್ತಮರು. ಅವರಂಥವರಿಂದಾಗಿಯೇ ದೇಶದ ಗೌರವ ಉಳಿದಿದೆ, ದೇಶ ಅವನತಿಯತ್ತ ಸಾಗುವುದು ತಪ್ಪಿದೆ.  

-ಟಿಜೆಎಸ್ ಜಾರ್ಜ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.