ಚಾಕು ತೋರಿಸಿ, ಬೆದರಿಸಿ ಭಿಕ್ಷೆ ಕೇಳುತ್ತಿದ್ದ ಕರಕರಮುಂಡಿ ಸಮುದಾಯ
ಚಾಕು ತೋರಿಸಿ, ಬೆದರಿಸಿ ಭಿಕ್ಷೆ ಕೇಳುತ್ತಿದ್ದ ಕರಕರಮುಂಡಿ ಸಮುದಾಯ
ಭಿಕ್ಷೆ ಬೇಡುತ್ತಾ ಮನೆಗಳ ಬಳಿಗೆ ಬರುವ ಭಿಕ್ಷುಕರು ಮನೆಯವರು ಏನಾದರೂ ಕೊಟ್ಟರೆ ಸ್ವೀಕರಿಸುವುದುಂಟು. ಕೊಡದಿದ್ದರೆ ಸುಮ್ಮನೆ ಹೋಗುವುದುಂಟು.
ಭಿಕ್ಷೆ ಹಾಕಲೇಬೇಕು ಎಂದು ಪಟ್ಟು ಹಿಡಿದು ಚಾಕುವಿನಿಂದ ತಲೆ ಕುಯ್ದುಕೊಳ್ಳುವುದಾಗಿ ಬೆದರಿಕೆ ಹಾಕಿದರೆ, ಮನೆಯ ಮುಂದೆ ವಾಂತಿ ಮಾಡಿಕೊಳ್ಳುವುದಾಗಿ ಹಾಗೂ ಭಿಕ್ಷೆ ಹಾಕುವ ವರೆಗೆ ಜಾಗ ಬಿಟ್ಟು ಹೋಗುವುದಿಲ್ಲ ಎಂದು ಹೆದರಿಸಿದರೆ ?
ಚಾಕು ಹಿಡಿದು ಕೊಲೆ, ಸುಲಿಗೆ ಮಾಡಬಹುದು ಅಥವಾ ಹೆದರಿಸಬಹುದು. ಚಾಕು ತೋರಿಸಿ ಬೆದರಿಸಿ ಭಿಕ್ಷೆ ಕೇಳುವವರು ಇದ್ದಾರೆಯೇ ? ಎಂಬ ಅನುಮಾನ ಬರುವುದುಂಟು. ಆದರೂ ಅಂಥದೊಂದು ಸಮುದಾಯ ಇದೆ. ಭಿಕ್ಷಾಟನೆಯನ್ನೇ ಮೂಲಕ ಕಸುಬನ್ನಾಗಿ ಮಾಡಿಕೊಂಡ 'ಕರಕರಮುಂಡಿ' ಜಾತಿಯವರು ಅವರು. ಕೈಗೆ ಬಳೆಗಳನ್ನು ಹಾಕಿಕೊಂಡು, ಒಂದು ಕೈಯ್ಯಲ್ಲಿ ಬಡಿಗೆ ಮತ್ತೊಂದು ಕೈಯ್ಯಲ್ಲಿ ಜೋಳಿಗೆ ಹಿಡಿದು ಭಿಕ್ಷೆ ಬೇಡುವುದು ಇವರ ಸಂಪ್ರದಾಯವಾಗಿತ್ತು.
ಜೋಪಡಿಗಳಲ್ಲೇ ವಾಸ
ಬೆಳಗಾವಿ, ಬಿಜಾಪುರ ಜಿಲ್ಲೆಗಳಲ್ಲಿ ಕರಕರಮುಂಡಿ ಸಮುದಾಯದವರು ಕಾಣ ಸಿಗುತ್ತಾರೆ. ಅವರ ಜನಸಂಖ್ಯೆ ಹೆಚ್ಚೆಂದರೆ 20 ಸಾವಿರ. ಅಂದಹಾಗೆ ಇವರಿಗೆ ಸ್ವಂತ ಸೂರು ಎಂಬುದಿಲ್ಲ. ನಿಂತ ಸ್ಥಳವೇ ನೆಲೆ. ಹೋಗಿದ್ದೇ ಊರು. ಹೊಲ, ಗದ್ದೆ ಅಥವಾ ಬಯಲಿನಲ್ಲಿ ಜೋಪಡಿಗಳನ್ನು ನಿರ್ಮಿಸಿಕೊಂಡು ವಾಸ ಮಾಡುವ ಇವರು, ಸ್ಥಳದ ಮಾಲೀಕ ಬಂದು ಹೋಗಿ ಎಂದರೆ ಅಲ್ಲಿಂದ ಜಾಗ ಖಾಲಿ ಮಾಡುತ್ತಾರೆ.
ಈ ಸಮುದಾಯದವರಿಗೆ ಭಿಕ್ಷೆ ಬೇಡುವುದು ಬಿಟ್ಟು ಬೇರೇನೂ ಗೊತ್ತಿರಲಿಲ್ಲ. ಜೋಳಿಗೆ ಹಿಡಿದು ಹೊರಟರೆ ಅದನ್ನು ತುಂಬಿಸಿಕೊಂಡು ಬರದೇ ಇರುತ್ತಿರಲಿಲ್ಲ. ಅನ್ನ ಆಹಾರದ ಜೊತೆಗೆ ಧವಸ, ಧಾನ್ಯವನ್ನೂ ಇವರು ಭಿಕ್ಷೆಯಾಗಿ ಪಡೆಯುತ್ತಿದ್ದರು. ಈಗ ಹೊಸ ತಲೆಮಾರಿನವರು ಭಿಕ್ಷಾಟನೆ ಬಿಟ್ಟಿದ್ದಾರೆ. ಹೊಲ, ಗದ್ದೆಗಳು ಮತ್ತಿತರ ಕಡೆ ಕೂಲಿ ಕಾರ್ಮಿಕರಾಗಿ ದುಡಿಯುತ್ತಿದ್ದಾರೆ. ಕೆಲವರ ಮಕ್ಕಳು ವಿದ್ಯಾಭ್ಯಾಸದಲ್ಲೂ ನಿರತರಾಗಿದ್ದಾರೆ. ಅದರೆ, ಇವರನ್ನು ಸಮಸ್ಯೆಯೊಂದು ಕಾಡುತ್ತಿದೆ.
ಅಷ್ಟೋ ಇಷ್ಟೋ ಓದಿದವರು ಉದ್ಯೋಗ ಹುಡುಕಿಕೊಂಡು ಹೋಗುತ್ತಾರೆ. ಅರ್ಜಿಯಲ್ಲಿ ಜಾತಿಯ ಹೆಸರನ್ನು ಕರಕರಮುಂಡಿ ಎಂದು ಬರೆಯುತ್ತಾರೆ. ಆದರೆ, ಈ ಹೆಸರು ಸರ್ಕಾರದ ಜಾತಿ ಪಟ್ಟಿಯಲ್ಲೇ ಇಲ್ಲ. ಹೀಗಾಗಿ ಕೆಲಸ ಸಿಗದೆ ವಾಪಸಾಗುತ್ತಾರೆ. ಸರ್ಕಾರ ಈ ವರೆಗೆ ಈ ಸಮುದಾಯವನ್ನು ಜಾತಿಗಳ ಪಟ್ಟಿಗೆ ಸೇರಿಸಿಯೇ ಇಲ್ಲ. ನಾವು ಯಾವ ವರ್ಗಕ್ಕೆ ಸೇರಿದವರು, ಹಿಂದುಳಿದವರೋ ಅಥವಾ ಪರಿಶಿಷ್ಟರೋ ಗೊತ್ತಿಲ್ಲ. ಇದುವೆ ನಮಗೆ ತಲೆನೋವಾಗಿದೆ ಎನ್ನುತ್ತಾರೆ ಸಮಾಜದ ಹಿರಿಯರು.
ರೀತಿ ರಿವಾಜುಗಳಿಲ್ಲ
ಕರಕರಮುಂಡಿ ಸಮುದಾಯದವರಿಗೆ ತಮ್ಮದೇ ಆದ ರೀತಿ, ರಿವಾಜುಗಳಿಲ್ಲ. ನಿರ್ದಿಷ್ಟವಾದ ಸಂಪ್ರದಾಯ ಎಂಬುದಿಲ್ಲ. ಒಕ್ಕಲಿಗರ ಸಂಪ್ರದಾಯವನ್ನೇ ಇವರು ಹೆಚ್ಚಾಗಿ ಅನುಸರಿಸುತ್ತಾರೆ. ಮದುವೆ, ನಾಮಕರಣ ಮತ್ತಿತರ ಶುಭ ಸಮಾರಂಭಗಳು, ಹಬ್ಬ ಹರಿದಿನಗಳನ್ನು ಬಹುತೇಕ ಓಕ್ಕಲಿಗರು ಅಂದರೆ ಕೃಷಿಕರಂತೆ ನಡೆಸುತ್ತಾರೆ. ಅದರೆ, ಇವರ ಕೊರಗು ಒಂದೇ. ತಮ್ಮನ್ನು ಸರ್ಕಾರ ಜಾತಿ ಪಟ್ಟಿಗೆ ಸೇರಿಸಿಲ್ಲ ಎಂಬುದು. ಅದಕ್ಕಾಗಿ ಇವರು ಕಳೆದ 3-4 ವರ್ಷಗಳಿಂದ ಹೋರಾಟ ನಡೆಸುತ್ತಾ ಬಂದಿದ್ದಾರೆ.
ಸಮಾಜದ ಮುಖಂಡರಾದ ರಾಮಣ್ಣ ಸೋಮಣ್ಣ ಅವರು ಈ ಸಂಬಂಧ ಹಿಂದುಳಿದ ವರ್ಗಗಳ ಶಾಶ್ವತ ಆಯೋಗಕ್ಕೆ ಮನವಿ ಸಲ್ಲಿಸಿದ್ದರು. ಅದರಂತೆ ಆಯೋಗ ಜಾತಿ ಪಟ್ಟಿಗೆ ಸೇರಿಸಲು ಸರ್ಕಾರಕ್ಕೆ ಶಿಫಾರಸು ಮಾಡಿತ್ತು. ಆದರೂ ಪ್ರಯೋಜನವಾಗಿಲ್ಲ ಎನ್ನುತ್ತಾರೆ ಬಿಜಾಪುರದ ಸಿಂಧಗಿ ತಾಲೂಕಿನ ಬಸಪ್ಪ ಕೋಳಿ ಅವರು.
ಚುನಾವಣೆಯಲ್ಲಿ ಮತ ಚಲಾಯಿಸಲು ಒಂದು ಗುರುತಿನ ಚೀಟಿ ಕೊಟ್ಟಿರುವುದನ್ನು ಹೊರತುಪಡಿಸಿದರೆ ನಮಗೆ ಯಾವುದೇ ಸೌಲಭ್ಯ ಇಲ್ಲ. ಚುನಾವಣೆ ಬಂದಾಗ ರಾಜಕಾರಣಿಗಳು ಬರುತ್ತಾರೆ. ಅಶ್ವಾಸನೆಗಳ ಮಳೆ ಸುರಿಸಿ ಹೋಗುತ್ತಾರೆ. ಬಳಿಕ ನಮ್ಮನ್ನು ಕೇಳುವವರೇ ಇಲ್ಲ ಎಂಬುದು ಅವರ ಅಭಿಪ್ರಾಯ.
ಗಾಳಿ ದುರ್ಗಮ್ಮನ ಪೂಜೆ
ಬಿಜಾಪುರದ ಸಿಂಧಗಿ ತಾಲೂಕಿನಲ್ಲಿರುವ ಕರಕರಮುಂಡಿ ಸಮುದಾಯದವರು ಸವದತ್ತಿ ಯಲ್ಲಮ್ಮ ದೇವಿಯನ್ನು ಪೂಜಿಸುತ್ತಾರೆ. ಗಾಳಿ ದುರ್ಗಮ್ಮ ಮತ್ತು ಕೊಡೆಕಲ್ ಬಸವಣ್ಣ ಇವರ ಪಾಲಿಗೆ ಮೂಲ ದೇವರು. ಇವರು ದೀಪಾವಳಿ ಹಬ್ಬವನ್ನು ವಿಶಿಷ್ಟವಾಗಿ ಆಚರಿಸುತ್ತಾರೆ.
ಹಬ್ಬದಲ್ಲಿ ಇವರು 8 ಕಾಲಿನ ಕುರಿಯನ್ನು ದೇವರಿಗೆ ಬಲಿ ಕೊಡುತ್ತಾರೆ. ಕುರಿಗಳಿಗೆ ಇರುವುದೇ ನಾಲ್ಕು ಕಾಲು. ಎಂಟು ಕಾಲು ಹೇಗೆ ? ಎಂಬ ಅನುಮಾನ ಬಂತು. 8 ಕಾಲಿನ ಕುರಿ ಎಂದರೆ ಗರ್ಭ ಧರಿಸಿದ ಹೆಣ್ಣು ಕುರಿ ಎಂದರ್ಥ. ಸಂಜೆ 5 ಗಂಟೆ ಸುಮಾರಿಗೆ ಕುರಿಯನ್ನು ಬಲಿಕೊಟ್ಟು ಮಾಂಸವನ್ನು ಗಾಲಿ ದುರ್ಗಮ್ಮನಿಗೆ ನೈವೇದ್ಯವಾಗಿ ಇಡುತ್ತಾರೆ. ಕಟ್ಟಿಗೆಯಿಂದ ಕೋಣನ ಪ್ರತಿಕೃತಿ ತಯಾರಿಸಿ ಅದಕ್ಕೆ ಸಣ್ಣ ಚಕ್ಕಡಿ ಕಟ್ಟುತ್ತಾರೆ. ಆ ಚಕ್ಕಡಿಯೊಳಗೆ ದುರ್ಗಮ್ಮನ ಮೂರ್ತಿ ಪ್ರತಿಷ್ಠಾಪನೆ ಮಾಡುತ್ತಾರೆ. ಸೀರೆ, ಬಳೆ, ಹೂವು ಮತ್ತಿತರ ಪೂಜಾ ಸಾಮಗ್ರಿಗಳನ್ನು ದೇವರಿಗೆ ಅರ್ಪಿಸುತ್ತಾರೆ.
ರಾತ್ರಿ 11 ಗಂಟೆಗೆ ಸಮುದಾಯದ ಎಲ್ಲ ಮಂದಿ ಬೇರೆ ಊರಿನ ಸೀಮೆಯವರೆಗೆ ಚಕ್ಕಡಿಯನ್ನು ಕೊಂಡೊಯ್ಯುತ್ತಾರೆ. ಬಳಿಕ ಅದನ್ನು ಅಲ್ಲೇ ಬಿಟ್ಟು ಬರುತ್ತಾರೆ. ಬಳಿಕ ಚಕ್ಕಡಿ ಕೊಂಡೊಯ್ಯುವ ಕೆಲಸ ಮುಂದಿನ ಊರಿನ ಕರಕರಮುಂಡಿ ಸಮುದಾಯದವರದ್ದು. ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿದ್ದ ಡಾ.ಸಿ.ಎಸ್.ದ್ವಾರಕಾನಾಥ್ ಅವರು ಸರ್ಕಾರಕ್ಕೆ ಸಲ್ಲಿಸಿರುವ ವರದಿ ಪ್ರಕಾರ ಮತ್ತು ಸಮಾಜದ ಮುಖಂಡರು ನಾನಾ ಮನವಿಗಳಲ್ಲಿ ತಿಳಿಸಿರುವಂತೆ ಕರಕರಮುಂಡಿ ಎಂಬುದು ಆಘೋರಿ ಜಾತಿಗೆ ಪರ್ಯಾಯ ಪದವೂ ಆಗಿದೆ. ಈ ಜನಾಂಗವನ್ನು ಹಿಂದೆ ಹಿಂದುಳಿದ ವರ್ಗವೆಂದು ಪರಿಗಣಿಸಲಾಗಿತ್ತು.
ಆಂಧ್ರದಿಂದ ಬಂದವರು
ತಮ್ಮ ಮೂಲ ಯಾವುದು ಎಂಬುದು ಸಮುದಾಯದ ಹಿರಿಯರಿಗೆ ಸ್ಪಷ್ಟವಾಗಿ ತಿಳಿದಿಲ್ಲ. ಆದರೆ, ಆಂಧ್ರದಿಂದ ವಲಸೆ ಬಂದವರು ನಾವಾಗಿರಬಹುದು ಎನ್ನುತ್ತಾರೆ ಕೆಲವರು. ಅಲ್ಲಿಂದ ಬಂದು ಬಿಜಾಪುರ ಮತ್ತು ಬೆಳಗಾವಿ ಜಿಲ್ಲೆಯ ನಾನಾ ತಾಲೂಕುಗಳಲ್ಲಿ ನೆಲೆಸಿರಬಹುದು ಎನ್ನುತ್ತಾರೆ ಅವರು.
ಕರಕರಮುಂಡಿಗಳು ಮಾಂಸಹಾರಿಗಳು. ಜೊತೆಗೆ ಅವರು ಜೋಳದ ರೊಟ್ಟಿ ಮತ್ತು ರಾಗಿ ಮುದ್ದೆಯನ್ನು ಹೆಚ್ಚಾಗಿ ಬಳಸುತ್ತಾರೆ. ಇವರಲ್ಲಿ ನಾನಾ ಉಪ ಪಂಗಡಗಳೂ ಉಂಟು. ಹಿಂದಿನ ಆಚರಣೆ ಪ್ರಕಾರ ಯಾರ ಮನೆಯಲ್ಲಾದರೂ ಹುಡುಗ ಮದುವೆಗೆ ಸಿದ್ಧನಾದ ಎಂದರೆ ಆತನ ಮನೆಯ ಹಿರಿಯರು ಹೆಣ್ಣಿನ ಮನೆಗೆ ಹೋಗಿ ಕನ್ಯೆ ಕೇಳುತ್ತಿದ್ದರು. ವಿವಾಹ ನಿಶ್ಚಯ ಮಾಡುತ್ತಿದ್ದುದೂ ಅವರೇ. ಆದರೆ, ಮದುವೆಗೆ ಹೆಣ್ಣು ಮತ್ತು ಗಂಡಿನ ಒಪ್ಪಿಗೆ ಬೇಕಿತ್ತು.
ಈ ಸಮುದಾಯದಲ್ಲಿ ಹಿಂದೆ ವಿಚ್ಛೇದನಕ್ಕೆ ಹಿರಿಯರ ಒಪ್ಪಿಗೆ ಬೇಕಿತ್ತು. ಗಂಡ ಅಥವಾ ಹೆಂಡತಿ ಯಾರೇ ಆದರೂ ಹಿರಿಯರ ಸಮ್ಮುಖದಲ್ಲೇ ವಿಚ್ಛೇದನ ಪಡೆದುಕೊಳ್ಳಬೇಕಿತ್ತು. ಅಂದಹಾಗೆ ಮರು ಮದುವೆಗೆ ಇಬ್ಬರಿಗೂ ಅವಕಾಶವಿತ್ತು. ಇವರಲ್ಲೂ ನ್ಯಾಯ ಪಂಚಾಯಿತಿ ವ್ಯವಸ್ಥೆ ಜಾರಿಯಲ್ಲಿತ್ತು. ಸಮುದಾಯದ ಮುಖಂಡನೇ ನ್ಯಾಯಾಧೀಶ. ಆತನ ತೀರ್ಮಾನವೇ ಅಂತಿಮವಾಗಿತ್ತು. ಹಬ್ಬ ಹರಿದಿನ, ಮದುವೆ ಮತ್ತಿತರ ಶುಭ ಕಾರ್ಯಕ್ರಮಗಳ ಬಗ್ಗೆ ಇಲ್ಲೇ ನಿರ್ಧಾರವಾಗುತ್ತಿತ್ತು. ಸಮಸ್ಯೆಗಳನ್ನೂ ಮುಖಂಡನೇ ಬಗೆಹರಿಸುತ್ತಿದ್ದ. ಹೀಗಾಗಿ ಕೋರ್ಟು, ಕಚೇರಿಗೆ ಯಾರೂ ಹೋಗುತ್ತಿರಲಿಲ್ಲ.
ಇಂಥ ಕರಕರಮುಂಡಿ ಸಮುದಾಯದಲ್ಲಿ ಕೆಲವರಿಗೆ ಈಗ ಸರ್ಕಾರದಿಂದ ಜಮೀನು ಮಂಜುರಾಗಿದೆ. ಅದರಲ್ಲಿ ಅವರು ವ್ಯವಸಾಯ ಮಾಡಿಕೊಂಡಿದ್ದಾರೆ. ಉಳಿದವರು ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ತೀರಾ ಹಿಂದುಳಿದಿದ್ದಾರೆ. ರಾಜಕೀಯ ಪ್ರಾತಿನಿಧ್ಯವಂತೂ ಇಲ್ಲವೇ ಇಲ್ಲ.
- ಕೆ.ವಿ.ಪ್ರಭಾಕರ
prabhukolar@yahoo.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

