ಅಂಕಣಗಳು

ಗೊಣಗುವುದರಿಂದ ಸಮಸ್ಯೆ ಬಗೆಹರಿಯುವುದಿಲ್ಲ, ಮತದಾನಕ್ಕೆ ಮುಂದಾಗಿ!

Published On :

ಕರ್ನಾಟಕದಲ್ಲೀಗ ಚುನಾವಣಾ ಸಮಯ. ರಾಜಕೀಯ ಪಕ್ಷಗಳು ಮತದಾರರ ಓಲೈಕೆಯಲ್ಲಿ ತೊಡಗಿವೆ; ಕಳೆದ ಚುನಾವಣೆಗಳ ನಂತರ ತಾವು ಮರೆತು ಹೋಗಿದ್ದ ಮತದಾರರನ್ನು! ಮತದಾನದ ಮೂಲಕ ತಮ್ಮ ಇಂಗಿತವನ್ನು ಜಾಹೀರು ಪಡಿಸಲು ಮತದಾರರು ಸಿದ್ಧರಾಗಿದ್ದಾರೆ. ಕಳೆದ ಐದು ವರ್ಷಗಳಿಂದ ಅಧಿಕಾರದಲ್ಲಿರುವವರು ಆಡಿದ ಆಟ, ಅದರಿಂದಾಗಿ ಆಡಳಿತ ಮತ್ತು ಅಭಿವೃದ್ಧಿಗೆ ಬಿದ್ದ ಹೊಡೆತವನ್ನೆಲ್ಲ ಅವರು ನೋಡಿದ್ದಾರೆ. ಇತ್ತೀಚೆಗೆ ನಡೆದ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ, ತಾವು ಆಡಳಿತ ಪಕ್ಷದ ವಿರುದ್ಧ ಎಷ್ಟೊಂದು ರೋಸಿಹೋಗಿದ್ದೇವೆ ಎನ್ನುವುದನ್ನು ಅವರು ತೋರಿಸಿದ್ದಾರೆ. ಬಿಜೆಪಿ ಅವಮಾನಕರ ರೀತಿಯಲ್ಲಿ ಸೋತಿತು. ಕಾಂಗ್ರೆಸ್ ಬಿಜೆಪಿ ವಿರೋಧಿ ಮತದಾನದ ಲಾಭ ಪಡೆದು ಗೆಲುವಿನ ರುಚಿ ಮೆದ್ದಿತು.
ಮೇ 5 ರಂದು ನಡೆಯಲಿರುವ ವಿಧಾನಸಭಾ ಚುನಾವಣೆಗಳಲ್ಲೂ ಇದೇ ಟ್ರೆಂಡ್ ಮುಂದುವರಿಯಲಿದೆಯೇ? ಕರ್ನಾಟಕದ ಮೂಲಕ ದಕ್ಷಿಣ ಭಾರತವನ್ನು ಆಕ್ರಮಿಸಿಕೊಳ್ಳಬೇಕು ಎಂಬ ಬಿಜೆಪಿಯ ಕನಸು ಕನಸಾಗಿಯೇ ಉಳಿಯಲಿದೆಯೇ? ಅಥವಾ ಎಲ್ಲರನ್ನೂ ದಂಗು ಬಡಿಸಿ ಕಮಲ ಮತ್ತೊಮ್ಮೆ ಅರಳಲಿದೆಯೇ? ಕಾಂಗ್ರೆಸ್ ಕ್ಲೀನ್ಸ್ವೀಪ್ ಮಾಡುವುದೇ? ಹಿಂದೆ ಮಾಡಿದ ತಪ್ಪನ್ನು ಮತ್ತೆ ಮಾಡುವುದಿಲ್ಲ ಮತ್ತು ಉತ್ತಮ ಆಡಳಿತದತ್ತಲೇ ತನ್ನ ಗಮನ ಅಂಟಿಸುವುದಾಗಿ ಭರವಸೆ ಕೊಟ್ಟು ಅದು ಹೊಸ ಶಕೆ ಆರಂಭಿಸಲಿದೆಯೇ? ಊಹಿಸುವುದು ಕಷ್ಟ. ಆದರೆ ಜನತೆಯಲ್ಲಿ ಮಡುಗಟ್ಟಿರುವ ಸಿಟ್ಟನ್ನು ನೋಡಿದರೆ, ಬದಲಾವಣೆ ಆಗುವುದಂತೂ ನಿಶ್ಚಿತ. ಉತ್ತಮ ಆಡಳಿತ ನೀಡಲು ಸಫಲರಾಗದವರಿಗೆ ಬಾಗಿಲು ತೋರಿಸಲೇಬೇಕು. ಹಾಗಾದಾಗ ಮಾತ್ರ, ಮತದಾರರು ಆಡಳಿತ ಪಕ್ಷಗಳ ಕಾರ್ಯವೈಖರಿಯ ಮೇಲೆ ಕಣ್ಣಿಟ್ಟಿರುತ್ತಾರೆ ಎನ್ನುವುದು ಪಕ್ಷಗಳಿಗೆ ತಿಳಿಯುತ್ತದೆ.
ಚೆಂಡು ಈಗ ಮತದಾರರ ಅಂಗಳದಲ್ಲಿ ಬಂದು ಬಿದ್ದಿದೆ. ಆದರೆ ಅವರು ಸಿದ್ಧರಾಗಿದ್ದಾರೆಯೇ? ಎಲ್ಲ ಅರ್ಹ ವ್ಯಕ್ತಿಗಳು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ನೋಂದಾಯಿಸಿಕೊಂಡಿದ್ದಾರಾ? ತಮ್ಮ ಗುರುತಿನ ಚೀಟಿಯಲ್ಲಿರುವ ತಪ್ಪನ್ನು ಸರಿಪಡಿಸಿಕೊಂಡಿದ್ದಾರಾ? ಹೌದು ಮತ್ತು ಇಲ್ಲ. ಬಹುತೇಕ ಮತದಾರರು ಕಿಡಿಕಾರುವುದಕ್ಕೆ, ವಿಮರ್ಷೆಗಿಳಿಯುವುದಕ್ಕೆ ಮತ್ತು ಸಲಹೆ ನೀಡುವುದರಲ್ಲಷ್ಟೇ ನಿಸ್ಸೀಮರು. ಆದರೆ ಯಾವಾಗ ಚುನಾವಣೆಗಳು ಎದುರಾಗುತ್ತವೋ, ಆಗ ಸದ್ದಿಲ್ಲದಂತೆ ಸರಿದುಹೋಗುತ್ತಾರೆ. ಅಥವಾ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಇರುವಂತೆ ನೋಡಿಕೊಳ್ಳಲು ವಿಫಲರಾಗುತ್ತಾರೆ. ನಗರ ಪ್ರದೇಶಗಳ ಮತದಾರರಲ್ಲಿ ಈ ಗುಣ ಸಾಮಾನ್ಯ. ಗ್ರಾಮೀಣ ಭಾಗದ ಜನರಿಗೆ ಮತದಾನದ ವಿಷಯದಲ್ಲಿ ಹೆಚ್ಚಿನ ಬದ್ಧತೆಯಿದೆ.
 ತಪ್ಪಿಲ್ಲದ ಮತದಾರರ ಪಟ್ಟಿಯನ್ನು ತಯಾರಿಸುವಲ್ಲಿ ಆಡಳಿತ ತೋರಿಸುತ್ತಿರುವ ಅಸಾಮರ್ಥ್ಯ ಮತದಾರರ ನಿರಾಸಕ್ತಿಗೆ ಇನ್ನಷ್ಟು ನೀರೆರೆಯುತ್ತದೆ. ಬಹುತೇಕ ಬಾರಿ ಮತದಾರರ ಹೆಸರೇ ಪಟ್ಟಿಯಿಂದ ಕಾಣೆಯಾಗಿಬಿಟ್ಟಿರುತ್ತದೆ. ಹಾಗೆ ನೋಡಿದರೆ ಅವರ ಬಳಿ ಗುರುತಿನ ಚೀಟಿಯೂ ಇರುತ್ತದೆ, ಹಲವಾರು ಚುನಾವಣೆಗಳಲ್ಲಿ ಅವರು ಮತವನ್ನೂ ಚಲಾಯಿಸಿರುತ್ತಾರೆ. ಪ್ರತಿ ಚುನಾವಣಾ ಸಮಯದಲ್ಲೂ ನಾವು ಕಾಣೆಯಾಗಿರುವ ಹೆಸರುಗಳ ಬಗ್ಗೆ ಕೇಳುತ್ತಲೇ ಇರುತ್ತೇವೆ. ಅಧಿಕಾರದಲ್ಲಿರುವವರು ಸಮಸ್ಯೆಯನ್ನು ಬಗೆಹರಿಸುವುದಾಗಿ ಭರವಸೆ ಕೊಡುತ್ತಾರಾದರೂ, ಇನ್ನೊಂದು ಚುನಾವಣೆ ಬರುವವರೆಗೂ ಅವರಿಗೆ ಎಚ್ಚರವಾಗುವುದೇ ಇಲ್ಲ. ಇದೊಂದು ವಿಷ ವರ್ತುಲ. ಫಲಿತಾಂಶ: ಅನರ್ಹ ಅಭ್ಯರ್ಥಿಗಳು ಚುನಾಯಿತರಾಗುವುದು.
ಆಪತ್ಕಾಲದಲ್ಲಿ ನಿರ್ಣಾಯಕ ತೀರ್ಪು ಹೊರಬರಬೇಕೆಂದರೆ ಮತದಾನ ಕೇಂದ್ರಗಳಿಗೆ ಹೆಚ್ಚಿನ ಸಂಖ್ಯೆಯ ಜನರು ಹರಿದುಬರಬೇಕು. ಪ್ರತಿಯೊಬ್ಬ ಅರ್ಹ ವ್ಯಕ್ತಿ ತನ್ನ ಹೆಸರನ್ನು ಮತದಾರರ ಪಟ್ಟಿಯಲ್ಲಿ ನೋಂದಾಯಿಸಿಕೊಳ್ಳುವುದು ಅತಿ ಮುಖ್ಯವಾಗುತ್ತದೆ. ಅದಷ್ಟೇ ಅಲ್ಲ, ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಮತ್ತು ವಿಳಾಸ ಸರಿಯಾಗಿದೆಯೇ, ಅದನ್ನು ತೆಗೆದುಹಾಕಲಾಗಿದೆಯೇ ಎನ್ನುವುದನ್ನೆಲ್ಲ ಅವರು ಕಾಲಕಾಲಕ್ಕೆ ಪರೀಕ್ಷಿಸುತ್ತಿರಬೇಕು. ಚುನಾವಣೆಗಳು ನ್ಯಾಯಯುತವಾಗಿ ನಡೆಯುವಂತೆ ಮತ್ತು ಮತದಾರರ ಹಕ್ಕಿಗೆ ಚ್ಯುತಿ ಬರದಂತೆ ನೋಡಿಕೊಳ್ಳುವುದು ಚುನಾವಣಾ ಆಯೋಗದ ಆದ್ಯ ಕರ್ತವ್ಯವಾಗಬೇಕು. ಹಾಗಾದಾಗ ಮಾತ್ರ ಸರಿಯಾದ ಅಭ್ಯರ್ಥಿಗಳು ಆಯ್ಕೆಯಾಗುತ್ತಾರೆ.
ಬಹಳಷ್ಟು ಎನ್ಜಿಒಗಳು ಈ ನಿಟ್ಟಿನಲ್ಲಿ ಉತ್ತಮ ಕೆಲಸ ಮಾಡುತ್ತಿವೆ. ಹೆಸರು ನೋಂದಣಿಯಾಗಲು, ಮತದಾನದ ಚೀಟಿ ಪಡೆಯಲು ಅಥವಾ ಅವುಗಳಲ್ಲಿರುವ ತಪ್ಪನ್ನು ಸರಿಪಡಿಸಲು ಅವು ಮತದಾರರ ಸಹಾಯಕ್ಕೆ ಮುಂದಾಗುತ್ತಿವೆ. ಮತದಾರರು ಅಂತಹ ಸಂಸ್ಥೆಗಳ ಸಹಾಯ ಪಡೆಯುವುದು ಒಳ್ಳೆಯದು. ಪ್ರಜಾಪ್ರಭುತ್ವದಲ್ಲಿ ಮತದಾರನೇ ಮಹಾಪ್ರಭು. ಅವನದ್ದೇ ಅಂತಿಮ ತೀರ್ಮಾನವಾಗಬೇಕು. ಆ ಅಧಿಕಾರವನ್ನು ಅವನಿಂದ ಕಸಿದುಕೊಂಡರೆ, ಪ್ರಜಾಪ್ರಭುತ್ವ ತನ್ನ ಅರ್ಥ ಕಳೆದುಕೊಳ್ಳುತ್ತದೆ.
ಮತಚಲಾವಣೆಯ ಹಕ್ಕನ್ನು ಮತದಾರರು ಬಳಸಿಕೊಳ್ಳುವುದರ ಜೊತೆಗೆ, ಚರ್ಚೆ ಮಾಡಿ ಅನರ್ಹ ಅಭ್ಯರ್ಥಿಗಳನ್ನು ಕಿತ್ತೆಸೆದು ಅರ್ಹ ವ್ಯಕ್ತಿಯೇ ಗೆಲ್ಲುವಂತೆ ಮಾಡುವುದೂ ಮುಖ್ಯವಾಗುತ್ತದೆ. ಉದಾಹರಣೆಯಾಗಿ ಬೆಂಗಳೂರನ್ನೇ ತೆಗೆದುಕೊಳ್ಳಿ. ಪ್ರತಿ ವಾರ್ಡಿನಲ್ಲಿ, ನಿವಾಸಿಗಳ ಕಲ್ಯಾಣ ಒಕ್ಕೂಟ ಮತ್ತು ನಿವಾಸಿಗಳು ಸೇರಿ ಸ್ಪರ್ಧಾಳುಗಳ ನಡುವೆ ಚರ್ಚೆ ಏರ್ಪಡಿಸಿ, ವಾರ್ಡಿನಲ್ಲಿರುವ ಸಮಸ್ಯೆಗಳ ಬಗ್ಗೆ ಮಾತನಾಡುವಂತೆ ಮಾಡಬೇಕು. ಒಂದು ವೇಳೆ ಅಭ್ಯರ್ಥಿಯೊಬ್ಬ ಮುಂಚೆಯೂ ಜನರಿಂದ ಆಯ್ಕೆಯಾಗಿ, ಚುನಾವಣೆಯ ನಂತರ ಜನರ ಸಮಸ್ಯೆಗಳಿಗೆ ಸ್ಪಂದಿಸಿರಲಿಲ್ಲವೆಂದರೆ ಅಥವಾ ಭ್ರಷ್ಟನಾಗಿದ್ದರೆ, ಮುಲಾಜಿಲ್ಲದೆ ಅವನನ್ನು ಕಿತ್ತೆಸೆಯಬೇಕು. ಆಗ ಮಾತ್ರ ರಾಜಕೀಯ ಪಕ್ಷಗಳು ಮತದಾರರನ್ನು ಗಂಭೀರವಾಗಿ ಪರಿಗಣಿಸುತ್ತವೆ.
ಅದರಲ್ಲೂ ಯುವ ಮತದಾರರು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು. ಅವರು ತಂಡೋಪತಂಡವಾಗಿ ಮತೆಗಟ್ಟೆಗಳಿಗೆ ಹೋಗುವುದಷ್ಟೇ ಅಲ್ಲದೆ, ಮೈಗಳ್ಳ ಮತದಾರರನ್ನೂ ಎಬ್ಬಿಸಿಕೊಂಡು ಹೋಗಬೇಕು.ನಮಗೆ ಉತ್ತಮ ಆಡಳಿತ ಮತ್ತು ತ್ವರಿತ ಅಭಿವೃದ್ಧಿ ದಯಪಾಲಿಸುವ ನಾಯಕರು ಬೇಕು. ಮತದಾರರ ಮೇಲೆ ಸವಾರಿ ಮಾಡುವ ಸ್ವಹಿತಾಸಕ್ತ ರಾಜಕಾರಣಿಗಳಲ್ಲ.

ಕೊನೆಯ ಗುಟುಕು: ಮತವೆನ್ನುವುದು ರೈಫಲ್ ಇದ್ದಂತೆ; ಅದರ ಉಪಯೋಗ, ಬಳಸುವವನ ಗುಣದ ಮೇಲೆ ಅವಲಂಬಿತವಾಗಿರುತ್ತದೆ -ಥಿಯೊಡೋರ್ ರೂಸ್ವೆಲ್ಟ್ 

(ಈ ಲೇಖನದ ಇಂಗ್ಲಿಷ್ ಅವತರಣಿಕೆ www.namma-bengaluru.org ಹಾಗೂ  www.suvarnanews.tv/features ನಲ್ಲಿ ಕನ್ನಡ ಅಂಕಣ ಲಭ್ಯ)

- ಎಚ್.ಎಸ್. ಬಲರಾಮ್
hsbalram@gmail.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.