ಅಂಕಣಗಳು

'ಅಪ್ಪಿಕೊ'0ಡ ಸುಂದರ ಗುಣ, ಮತ್ತೆ ಹುಟ್ಟಿಕೊಳ್ಳುತ್ತಾ ಈ ಕ್ಷಣ?

ಹಿಮಾಲಯದ ತಪ್ಪಲಿನಲ್ಲಿ ಹುಟ್ಟಿಕೊಂಡ 'ಅಪ್ಪಿಕೊ' ಇಡೀ ವಿಶ್ವವನ್ನೇ ವ್ಯಾಪಿಸಿಬಿಟ್ಟಿತು.

Published On :

ಅದಾಗಿ ಮೊನ್ನೆ ಮಾರ್ಚ್ 27ಕ್ಕೆ ನಲವತ್ತು ವರ್ಷಗಳಾದವು. ಬಹುಶಃ ಪರಿಸರ ಸಂರಕ್ಷಣೆಯ ನಿಟ್ಟಿನಲ್ಲಿ ಇಂಥದ್ದೊಂದು ಚಳವಳಿ ನಡೆದದ್ದು ಪ್ರಪಂಚದ ಇತಿಹಾಸದಲ್ಲಿಯೇ ಮೊದಲೇನೊ? ಹಿಮಾಲಯದ ತಪ್ಪಲಿನಲ್ಲಿ ಹುಟ್ಟಿಕೊಂಡ ಈ ಚಳವಳಿ 'ಎಕಾಲಜಿ ಈಸ್ ಪರ್ಮನೆಂಟ್ ಎಕಾನಮಿ' ಎಂಬ ಘೋಷ ವಾಕ್ಯದೊಂದಿಗೆ ಇಡೀ ವಿಶ್ವವನ್ನೇ ವ್ಯಾಪಿಸಿಬಿಟ್ಟಿತು. ಸ್ವೀಡನ್, ಜರ್ಮನಿ, ನೆದರ್ಲೆಂಡ್, ಸ್ವಿಟ್ಜರ್ಲೆಂಡ್, ಫ್ರಾನ್ಸ್, ಇಂಗ್ಲೆಂಡ್, ಅಷ್ಟೇಕೆ ಸ್ವತಃ ಅಮೆರಿಕನ್ನರು ಸಹ ಈ ಚಳವಳಿಯಿಂದ ಪ್ರಭಾವಿತರಾದರು. ಆ ದೇಶಗಳ ಪ್ರತಿನಿಧಿಗಳು ಭಾರತಕ್ಕೆ ಬಂದು ಚಳವಳಿಯ ಪ್ರದೇಶವನ್ನು ಸಂದರ್ಶಿಸಿ ಹೋದರು. ಅದಾಗಲೇ ಪರಿಸರಕ್ಕಾಗಿ ನೂರಾರು ಮಂದಿ ಈ ನೆಲದಲ್ಲಿ ಪ್ರಾಣ ತೆತ್ತಿದ್ದರು. ಅದೇ ಪ್ರೇರಣೆಯೊಂದಿಗೆ ದೇಶ ವಿದೇಶಗಳಲ್ಲಿ ಚಳವಳಿ ಕಾವು ಪಡಕೊಂಡು ವಿಶ್ವಸಂಸ್ಥೆಯ ಮಟ್ಟಕ್ಕೆ ಮಾತು ಬೆಳೆಯಿತು. 
ಅದು ಚಿಪ್ಕೊ. ಸುಂದರಲಾಲ್ ಬಹುಗುಣ ಎಂಬ ಚೇತೋಹಾರಿ ಶಕ್ತಿ ಆರಂಭಿಸಿದ್ದ ವಿನೂತನ ಚಳವಳಿ. ನಲವತ್ತು ವರ್ಷಗಳ ಹಿಂದಿನ ಮಾತು. 1973 ಮಾರ್ಚ್ 27ರ ದಿನ. ಹಿಮಾಲಯ ಕಣಿವೆಯ ಹಳ್ಳಿಯೊಂದರಲ್ಲಿ ಮುಗುದ ಮಂದಿಗಳಷ್ಟು ಮರಗಳನ್ನು ಉರುಳಿಸಗೊಡದೇ ಹಠಕ್ಕೆ ಬಿದ್ದು ಕುಳಿತುಬಿಟ್ಟಿದ್ದರು. ಅಧುನಿಕ ಭಾರತದ ಇತಿಹಾಸದಲ್ಲಿ ಚಳವಳಿ ಎಂಬುದಕ್ಕೆ ಹೊಸತೊಂದು ವ್ಯಾಖ್ಯಾನ ಹುಟ್ಟಿಕೊಂಡದ್ದೇ ಚಿಪ್ಕೊದಿಂದ ಎಂದರೆ ತಪ್ಪಿಲ್ಲ.
ಸ್ವಾತಂತ್ರ್ಯ ನಂತರದ ದಿನಗಳಲ್ಲಿ ಆರಂಭಗೊಂಡ ಕೈಗಾರಿಕೆಗಳ ಸ್ಥಾಪನೆಯ ಸರಣಿ, ಅಭಿವೃದ್ಧಿಯ ಹೆಸರಿನಲ್ಲಿ ಶುರುವಿಟ್ಟುಕೊಂಡ ಕಾಡುಗಳ ನಾಶಕ್ಕೆ ತೆರಬೇಕಾಗಿ ಬಂದ ಬೆಲೆಯ ಅರಿವು ಆಳುವವರಿಗೆ ಆಗಲೇ ಇಲ್ಲ. ಹಿಂದಿನ ತಲೆಮಾರಿನಿಂದ ಭಾರತಕ್ಕೆ ಬಳುವಳಿಯಾಗಿ ಬಂದ ಮೂಲ ಬಂಡವಾಳವೆಂದರೇ ಪ್ರಾಕೃತಿಕ ಸಂಪತ್ತು. ಅದನ್ನೇ ಗುರಿಯಾಗಿಸಿಕೊಂಡು ಅಭಿವೃದ್ಧಿಯ ಭ್ರಮೆಯನ್ನು ಬಿತ್ತಿದ್ದರು ಬ್ರಿಟಿಷರು. ಈ ನೆಲದಲ್ಲಿ ನಿಜವಾದ ಅಭಿವೃದ್ಧಿ ಎಂದರೆ ಸುತ್ತಲಿನ ಎಲ್ಲ ಜೀವಸಂಕುಲಗಳ ಹಿತರಕ್ಷಣೆಯಾಗಿತ್ತು. ಅವುಗಳ ಒಳಿತಿಗಾಗಿ ಹಮ್ಮಿಕೊಳ್ಳುವ ಕಾರ್ಯಕ್ರಮ ಅಭಿವೃದ್ಧಿ ಎನಿಸಬೇಕಾಗಿತ್ತು. ಆದರೆ ಸ್ವಾತಂತ್ರ್ಯಾನಂತರದಲ್ಲೂ ಹಾಗಾಗದೇ ಕೆಲವೇ ಬಂಡವಾಳಶಾಹಿಗಳ ಹಿತಾಸಕ್ತಿ, ಸ್ವಾರ್ಥಕ್ಕಾಗಿ ಅಭಿವೃದ್ಧಿ ಹೆಸರಿನಲ್ಲಿ ನಿಸರ್ಗ ಸಂಪತ್ತಿನ ಲೂಟಿ ಆರಂಭವಾಯಿತು. ಅರಣ್ಯ ನಾಶದ ಜತೆಜತೆಗೇ ನಡೆದದ್ದು ನಗರಗಳ ಬೆಳವಣಿಗೆ, ಕೈಗಾರಿಕೆಗಳ ಹೆಚ್ಚಳ. ವಾತಾವರಣದ ಬಿಸಿಯನ್ನು ಏರಿಸಿ ನಿಂತ ಇಂಥ ಆಧುನಿಕ ಅಪಸವ್ಯ ಹಿಮಾಲಯ ತಪ್ಪಲನ್ನು ನೇರವಾಗಿ ತಟ್ಟಿತ್ತು. ಅಲ್ಲಿಯ ಹಳ್ಳಿಯೊಂದರಲ್ಲಿಯೇ ಹುಟ್ಟಿ ಬೆಳೆದ (ಜನವರಿ 9, 1927) ಸುಂದರಲಾಲ್ ಬಹುಗುಣ ಅವರು ಗಾಂಧಿ ತತ್ವದೊಂದಿಗೇ ಜೀವನ ರೂಪಿಸಿಕೊಂಡವರು. ವಿದ್ಯಾಭ್ಯಾಸದ ನಂತರ ರಾಜಕೀಯ ಪ್ರವೇಶಿಸಿದ್ದವರು. 1956ರಲ್ಲಿ ರಾಜಕೀಯ ಬಿಟ್ಟು ಪತ್ನಿ ವಿಮಲರೊಂದಿಗೆ ತಮ್ಮದೇ ಆಶ್ರಮ ಸ್ಥಾಪಿಸಿಕೊಂಡಿದ್ದವರು. ಆಶ್ರಮದಲ್ಲಿ ಬಡವರೊಟ್ಟಿಗೆ ಬದುಕುತ್ತಾ ಈ ದೇಶದ 'ಬಡತನ'ಕ್ಕೆ ಕಾರಣ ಹುಡುಕುತ್ತಾ ಹೊರಟಿದ್ದವರು. ಅದೇ ಆಶ್ರಮದಲ್ಲೇ ಜ್ಞಾನೋದಯ ಹೊಂದಿದ್ದವರು. ಅರಣ್ಯ ನಾಶ, ಮಣ್ಣಿನ ಸವಕಳಿ, ನೀರಿನ ಕೊರತೆ ಇವೇ ಈ ದೇಶದ  ಬಡತನಕ್ಕೆ ಕಾರಣ ಎಂಬುದು ಅರಿವಾಗುತ್ತಿದ್ದಂತೆಯೇ ಪರಿಸರ ಸಂರಕ್ಷಣೆ  ಹೋರಾಟ ಆರಂಭಿಸಿದ್ದವರು. ನಮ್ಮ ನೆಲ, ಜಲ, ಕಾಡಿನ ಸಂರಕ್ಷಣೆಯಾಗದಿದ್ದರೆ ಮುಂದೊಂದು ದಿನ ಈ ಭೂಮಿ ಮರುಭೂಮಿಯಾದೀತು ಎಂಬ ಅರಿವಿನೊಂದಿಗೆ ಮರಗಳ ನಡುವೆ ಚಳವಳಿಯನ್ನು ಸಂಘಟಿಸಿದವರು.
ಇಷ್ಟಕ್ಕೂ ಅವರಿಗೆ ಪ್ರೇರಣೆಯೊದಗಿಸಿದ್ದು ಬ್ರಿಟಿಷ್ ಕಾನೂನೊಂದು. 1930ರಲ್ಲಿ ಅರಣ್ಯವನ್ನು ವಾಣಿಜ್ಯ ಉದ್ದೇಶಕ್ಕೆ ಬಳಕೆ ಮಾಡಿಕೊಳ್ಳಲು ಅನುಮತಿಯಿತ್ತು ಆದೇಶ ಹೊರಡಿಸಿತು. ದುರಂತವೆಂದರೆ ಅದರ ವಿರುದ್ಧ ತಿರುಗಿ ಬಿದ್ದವರನ್ನು ನಿರ್ದಾಕ್ಷಿಣ್ಯವಾಗಿ ಹತ್ಯೆ ಮಾಡಲಾಯಿತು. 17 ಮಂದಿ ಈ ಹೋರಾಟದಲ್ಲಿ ಪ್ರಾಣತ್ಯಾಗ ಮಾಡಿದರು. ಇದೇ ಮುಂದೆ ಚಿಪ್ಕೊಕ್ಕೆ ಪ್ರೇರಣೆಯಾಯಿತು.
ಗ್ರೀಕ್ನಲ್ಲಿ ECOಎಂದರೆ ಮನೆ ಎಂದರ್ಥ. ಅದೇ ಸ್ಥಾನವನ್ನು ನಾವು ಸಹ ಪರಿಸರಕ್ಕೆ ಕೊಟ್ಟವರು. ನಮ್ಮೊಂದಿಗೆ ಎಲ್ಲ ಜೀವರಾಶಿಗಳ ಬದುಕಿನ ಹಕ್ಕು 'ECOಮನೆ'ಯಲ್ಲಿ ಎಟುಕಬೇಕು. ಭಾರತೀಯ ವೇದಗಳಲ್ಲಂತೂ ಇಡೀ ಬ್ರಹ್ಮಾಂಡವೇ ನಮ್ಮ ಪರಿಸರದ ವ್ಯಾಪ್ತಿ. ಇಲ್ಲಿನ ಚರಾಚರ ಜೀವರಾಶಿಗಳೆಲ್ಲದರ ಸಂರಕ್ಷಣೆಯ ಹೊಣೆ ಮಾನವ ಹೆಗಲ ಮೇಲೆ ಧರ್ಮದ ಹೆಸರಿನಲ್ಲಿ ನಿಂತಿದೆ. ಭೌತಿಕ ಮತ್ತು ಜೈವಿಕ ಪರಿಸರವನ್ನೊಳಗೊಂಡ ಜೀವಗೋಳದ ಅಧ್ಯಯನ ECOLOGY. ಅದೇ ನಮ್ಮ ಭಾರತೀಯ ಅರ್ಥದಲ್ಲಿಯೂ ಪರಿಸರ ಆರಾಧನೆ ಎನಿಸಿದೆ. ಹೀಗಾಗಿ ಇದೇ ಹಿನ್ನೆಲೆಯಲ್ಲಿ 'ಎಕಾಲಜಿ ಈಸ್ ಪರ್ಮನೆಂಟ್ ಎಕಾನಮಿ' ಎಂಬ ಘೋಷವಾಕ್ಯದೊಂದಿಗೆ ಚಿಪ್ಕೊ ಚಳವಳಿ ಬಲಗೊಂಡಿದ್ದು. ಹೀಗಾಗಿ ಇಲ್ಲಿ ಅಭಿವೃದ್ಧಿಯ ಜತೆಗೆ ಸಕಲ ಅಹಿಂಸೆಯೂ ಚಳವಳಿಯ ವ್ಯಾಖ್ಯಾನಕ್ಕೆ ಸೇರಿಕೊಂಡಿತು. ಈ ಕಾರಣಕ್ಕಾಗಿಯೇ ವಿಶ್ವಾದ್ಯಂತ ಚಳವಳಿ ಮನೆಮಾತಾಯಿತು. 'ಗಾಂಧಿ ತತ್ವ'ದ ಪ್ರಕಾರ ಶಾಂತಿಯುತ ಹೋರಾಟಕ್ಕೆ ಮುನ್ನುಡಿ ಬರೆದರು ಬಹುಗುಣ. ಅದಕ್ಕಾಗಿ ಬಹುಗುಣ ಅವರು 'ಪಾದಯಾತ್ರೆ'ಯನ್ನೇ ಅಸ್ತ್ರವನ್ನಾಗಿಸಿಕೊಂಡರು. ಪಾದಯಾತ್ರೆಯ ಇನ್ನೊಂದು ಉದ್ದೇಶವೆಂದರೆ ಜನರ ಸಂಪರ್ಕ ಮತ್ತು ಸಂಘಟನೆ. ಭಾವನಾತ್ಮಕ ನಡೆಯ ಮೂಲಕ ಜನರ ಮನಸ್ಸು ತಟ್ಟಿ, ನಾಡಿಮಿಡಿತ ಅರಿತು, ಪರಿಸರ ಶಿಕ್ಷಣ ನೀಡಿ, ಮುಂದಿನ ಹೋರಾಟಕ್ಕೇ ಸ್ಥಳೀಯರನ್ನೇ ಸ್ವಯಂಸೇವಕರನ್ನಾಗಿಸಿದರು ಬಹುಗುಣ.
ಮುನ್ನೂರು ದಿನ; ಅರಣ್ಯದಲ್ಲಿ ಮರ ಕಡಿಯುವುದಕ್ಕೆ ನಿರ್ಬಂಧ ಹೇರುವಂತೆ ಒತ್ತಾಯಿಸಿ 1981ರಿಂದ 83ರವರೆಗೆ ಹಿಮಾಲಯ ವ್ಯಾಪ್ತಿಯ ಏಳು ರಾಜ್ಯಗಳಲ್ಲಿ ಐದು ಸಾವಿರ ಕಿಲೋಮೀಟರ್ ಪಾದಯಾತ್ರೆ ಮಾಡಿದರು. ಹಳ್ಳಿ- ಹಳ್ಳಿ ಸುತ್ತುತ್ತಾ ಜನರ ಸಹಕಾರ ಅರಸುತ್ತಾ, ಚಳವಳಿ ಗಟ್ಟಿಗೊಳಿಸಿದ ಅವರು, ಅಂದಿನ ಪ್ರಧಾನಿ ಇಂದಿರಾಗಾಂಧಿಯವರಿಗೆ ಮನವರಿಕೆ ಮಾಡಿಕೊಟ್ಟರು. ಏಳು ರಾಜ್ಯಗಳಲ್ಲಿ ಪರಿಸರ ಸಂರಕ್ಷಣಾ ಪಾದಯಾತ್ರೆ ಮಾಡಿ ಜನರನ್ನು ಸಂಘಟಿಸಿದ್ದರು ಅವರು. ಭಾವನಾತ್ಮಕ ವನಮಹೋತ್ಸವದ ಪರಿಕಲ್ಪನೆಯನ್ನು ಹುಟ್ಟು ಹಾಕಿದರು. 1980ರಲ್ಲಿ 'ಮರ ಕತ್ತರಿಸುವುದಕ್ಕೆ' 15 ವರ್ಷಗಳ ಕಾಲ ನಿಷೇಧ ಹೇರಲಾಯಿತು. ಹೋರಾಟಕ್ಕೆ ಜಯ ಸಿಕ್ಕಿತು.
ಮುಂದೆ ಬಹುಗುಣರ ಈ ಪಾದಯಾತ್ರೆ, ಚಳವಳಿ, ಹೋರಾಟಗಳೇ 1982ರಲ್ಲಿ ಕರ್ನಾಟಕದಲ್ಲಿ 'ಅಪ್ಪಿಕೊ' ಚಳವಳಿಗೂ ಸ್ಫೂರ್ತಿಯಾಯಿತು. ಶಿರಸಿಯ ಪಾಂಡುರಂಗ ಹೆಗಡೆ ಮತ್ತಿತರ ಪರಿಸರಾಸಕ್ತರ ನೇತೃತ್ವದಲ್ಲಿ  ಉತ್ತರ ಕನ್ನಡದ ಪಶ್ಚಿಮ ಘಟ್ಟದಲ್ಲಿ ಆರಂಭವಾದ ಈ ಚಳವಳಿಯಲ್ಲಿ ಬಹುಗುಣ ಖುದ್ದು ಪಾಲ್ಗೊಂಡಿದ್ದರು. ಇದು ಮಾತ್ರವಲ್ಲ, ರಾಜ್ಯದಲ್ಲಿ ಪರಿಸರ ಸಮಸ್ಯೆಗಳ ವಿರುದ್ಧ ಹೋರಾಟ ನಡೆದಾಗಲೆಲ್ಲ ಬಹುಗುಣ ಬಂದೊದಗಿದ್ದಾರೆ. 1983ರ ಪ್ರೊ.ಎಂ.ಡಿ. ನಂಜುಂಡಸ್ವಾಮಿ ನೇತೃತ್ವದಲ್ಲಿ ರೈತಸಂಘ ನಡೆಸಿದ 'ನೀಲಿಗಿರಿ ನಾಟಿ' ವಿರುದ್ಧದ ಹೋರಾಟ, ದಕ್ಷಿಣ ಕನ್ನಡದಲ್ಲಿ ನಡೆದ ಮಂಗನ ಕಾಯಿಲೆ ವಿರುದ್ಧ ಜಾಗೃತಿ, 1992ರಲ್ಲಿ ಕೊಡಗಿನ ಶೋಲಾ ಅರಣ್ಯದಲ್ಲಿ 'ಟೀ ಪ್ಲಾಂಟೇಷನ್' ವಿರುದ್ಧ ಆಂದೋಲನ, 2003ರ ಕಾರವಾರದ ಕಾಳಿ ಪಾದಯಾತ್ರೆ, 2005ರ ಶರಾವತಿ ಅವಲೋಕನ ಪಾದಯಾತ್ರೆ ಇವೆಲ್ಲದರಲ್ಲಿ ಬಹುಗುಣರ ಪಾಲ್ಗೊಳ್ಳುವಿಕೆಯಿತ್ತು. ರಾಜ್ಯದ ಅರಣ್ಯ ನೀತಿ ಪರಿಷ್ಕರಣೆಗೆ ಕಾರಣರಾದವರೇ ಬಹುಗುಣ.
ಪರಿಸರ ಮತ್ತು ಕೃಷಿ, ತಾಯಿ- ಮಕ್ಕಳಿದ್ದಂತೆ ಎಂಬುದು ಬಹುಗುಣರ ಪ್ರತಿಪಾದನೆ. ಚಿಪ್ಕೋ ಚಳವಳಿಯಲ್ಲಿದ್ದವರಲ್ಲಿ ಬಹುತೇಕರು ರೈತರು. ರಾಜ್ಯದ 'ಅಪ್ಪಿಕೋ' ಚಳವಳಿಯಲ್ಲೂ ರೈತರಿದ್ದರು. ಪರಿಸರ ಹೋರಾಟ ಬಲಗೊಳ್ಳಬೇಕಾದರೆ ಕೃಷಿಕರಲ್ಲೂ ಪರಿಸರ ಪ್ರಜ್ಞೆ ಮೂಡಬೇಕು. ಹಳ್ಳಿಗಳು ಹಳ್ಳಿಗಳಾಗಿ ಉಳಿದರೆ ಪರಿಸರವೂ ಉಳಿದಂತೆ. ದುರಂತವೆಂದರೆ ಇತ್ತೀಚೆಗೆ ಹಳ್ಳಿಗಳೂ ಹಾಗೆ ಉಳಿದಿಲ್ಲ. ಅಲ್ಲಿ ಪರಿಸರ ಕಾಳಜಿಯೂ ಕುಂಠಿತವಾಗಿದೆ. ಗಣಿಗಾರಿಕೆ, ರಿಯಲ್ ಎಸ್ಟೇಟ್, ಭೂ ಮಾಫಿಯಾಗಳಿಂದಾಗಿ ಹಳ್ಳಿ ಬರಿದಾಗುತ್ತಿದೆ. ಹಳ್ಳಿಗಳಲ್ಲಿದ್ದವರು ನಗರಕ್ಕೆ ವಲಸೆ ಬಂದಾಗಿದೆ. ಇನ್ನು ಅಲ್ಲುಳಿದ ವೃದ್ಧರಿಂದ ಭವಿಷ್ಯದ ಪರಿಸರ ಉಳಿದೀತಾದರೂ ಹೇಗೆ?
ಹಳ್ಳಿಗಳಲ್ಲಿರುವ ಹಿರಿಯರಿಂದಲೇ ಯುವಕರಿಗೆ ಪರಿಸರ ಪಾಠ ಹೇಳಿಸಬೇಕು. ಅದಕ್ಕಿಂಥ ಹೆಚ್ಚಾಗಿ ಅವರನ್ನು  ಹಳ್ಳಿಗಳಲ್ಲಿ ವಾಸಿಸಲು ನಿರ್ಧರಿಸುವಂತೆ ಪ್ರೇರೇಪಿಸಬೇಕು. ಆಯಾ ಊರಿನ ಪರಿಸರ ಸಂರಕ್ಷಣೆಗೆ ಅಲ್ಲಿಯವರೇ ಕಾವಲುಗಾರರಾಗಬೇಕು. ಯೋಜನೆ ಮತ್ತು ಅಭಿವೃದ್ಧಿ ವ್ಯವಸ್ಥೆಯಲ್ಲಿ ವಿಕೇಂದ್ರೀಕರಣವಾಗಬೇಕು. ಅದು ಹಳ್ಳಿಗಳಿಗೆ, ಬ್ಲಾಕ್ ಮಟ್ಟಕ್ಕೆ ವರ್ಗಾವಣೆಯಾಗಬೇಕು. ಪರಿಸರಕ್ಕೆ ಹಾನಿಯಾಗದಂಥ 'ಪರಿಸರಪೂರಕ, ಸುಸ್ಥಿರ ಅಭಿವೃದ್ಧಿ' ಜಾರಿಗೆ ಬರಬೇಕು. ಶಾಂತಿ, ಸಂತೋಷ ಹಾಗೂ ಸಂತುಷ್ಟಿ ನೆಲಸುವಂತೆ ಮಾಡುವುದೇ 'ಸುಸ್ಥಿರ ಅಭಿವೃದ್ಧಿ' ಎಂಬುದು ಬಹುಗುಣರ ಹಿತೋಕ್ತಿ.
ಅವರು ಹಿಂದೊಮ್ಮೆ ಕರ್ನಾಟಕಕ್ಕೆ ಬಂದಿದ್ದಾಗಲೇ ಹೇಳಿದ್ದರು- ಎಲ್ಲದಕ್ಕೂ ಸರ್ಕಾರವನ್ನು ಆಶ್ರಯಿಸಬೇಡಿ. ಅದೊಂದು ಹೃದಯವಿಲ್ಲದ ಯಂತ್ರವಿದ್ದಂತೆ. ಸರ್ಕಾರ ಎಂದೂ ಜನರ ಸಮಸ್ಯೆಗಳನ್ನು ಪರಿಹರಿಸುವುದಿಲ್ಲ. ಹಾಗಾಗಿ ಸರ್ಕಾರವನ್ನು ಮರೆತುಬಿಡಿ. ಅಭಿವೃದ್ಧಿ ವಿಷಯದಲ್ಲಿ ಪಾಶ್ಚಿಮಾತ್ಯರ ವಿಧಾನಗಳು ನಮಗೆ ಮಾದರಿಯಲ್ಲ. ಅವರು ಅಭಿವೃದ್ಧಿ ಹೆಸರಲ್ಲಿ ಬಡವರನ್ನು ಸುಲಿಗೆ ಮಾಡುತ್ತಾರೆ. ನಾವು ಅದನ್ನು ಅನುಸರಿಸಿದರೆ ನಮ್ಮ ದೇಶದ ಬಡವರನ್ನು ಸುಲಿಗೆ ಮಾಡಬೇಕಾಗುತ್ತದೆ. ನಮ್ಮದು ವನಸಂಸ್ಕೃತಿ. ಟಿಂಬರ್, ಮೈನಿಂಗ್ ಸಂಸ್ಕೃತಿಯಲ್ಲ. ಅದು ನಮ್ಮನ್ನು ಆಳಿದ ಬ್ರಿಟಿಷರ ಕೊಡುಗೆ.
ಚಿಪ್ಕೊದ ಹಾದಿ ಸುಗಮವಾಗಿಯೇನೂ ಇರಲಿಲ್ಲ. ಇಲ್ಲಿನ ಆಂದೋಲನ ಪಶ್ಚಿಮದಲ್ಲಿ ಅರಿವು ಮೂಡಿಸಿತು ಖರೆ, ಅದು ಚಳವಳಿ ಮೇಲೆ ಮತ್ತೊಂದೇ ರೀತಿಯಲ್ಲಿ ವ್ಯತಿರಿಕ್ತ ಪರಿಣಾಮವನ್ನೂ ಬೀರಿತು. 'ಚಿಪ್ಕೊ ಚಳವಳಿ ಪಾಶ್ಚಾತ್ಯ ಪ್ರಣೀತವಾದದ್ದು. ಅಲ್ಲಿನ ರಾಷ್ಟ್ರಗಳಿಂದ ಹಣದ ಹೊಳೆ ಹರಿದು ಬರುತ್ತಿದೆ. ವಸಾಹತುಶಾಹಿ ವ್ಯವಸ್ಥೆಗೆ ಭಾರತ ಅಭಿವೃದ್ಧಿ ಹೊಂದುವುದು ಇಷ್ಟವಿಲ್ಲ. ನಮ್ಮ ದೇಶ ಹಿಂದುಳಿದ ದೇಶವಾಗಿಯೇ ಇರಬೇಕು ಎನ್ನುವುದು ಅವರ ಬಯಕೆ. ಅದಕ್ಕಾಗಿ ಚಿಪ್ಕೊ ಚಳವಳಿಯನ್ನು ದಾಳವಾಗಿ ಬಳಸಿಕೊಳ್ಳಲಾಗುತ್ತಿದೆ' ಎಂಬೆಲ್ಲ ಆರೋಪಗಳ್ನು ಮಾಡಲಾಯಿತು. ಗಾಂಧಿವಾದಿ ಬಹುಗುಣರು ಅದಾವುದಕ್ಕೂ ತಲೆ ಕೆಡಿಸಿಕೊಳ್ಳಲಿಲ್ಲ. ಕನಿಷ್ಠ ಪ್ರತಿಕ್ರಿಯಿಸುವ ಗೋಜಿಗೂ ಹೋಗಲಿಲ್ಲ. ಸತ್ಯ ಏನೆಂಬುದು ತಮ್ಮ ಹೋರಾಟದಲ್ಲಿ ಭಾಗಿಯಾಗುತ್ತಿರುವ, ಬೆಂಬಲಿಸುತ್ತಿರುವ ಜನರಿಗೆ ಗೊತ್ತಿರುವಾಗ ಸುಳ್ಳು ಆರೋಪಗಳಿಗೆಲ್ಲ ಸ್ಪಷ್ಟೀಕರಣ ಕೊಡುವ ಜರೂರತ್ತಾದರೂ ಏನು? ಅಷ್ಟಕ್ಕೂ ಅದಕ್ಕೆಲ್ಲ ಬಹುಗುಣರ ಬಳಿ ಸಮಯವೂ ಇರಲಿಲ್ಲ. ಹೋರಾಟ ವ್ಯರ್ಥವಾಗಲಿಲ್ಲ. 1980ರ ದಶಕದಲ್ಲಿ ಇಂದಿರಾಗಾಂಧಿ ಮತ್ತೆ ಪ್ರಧಾನಿಯಾದರು. ಅವರಿಗೆ ಚಿಪ್ಕೊ ಚಳವಳಿಯ ಕಾಳಜಿ ತಕ್ಕಮಟ್ಟಿಗೆ ಅರ್ಥವಾಗತೊಡಗಿತ್ತು. ಹೀಗಾಗಿ ಕೇಂದ್ರದಲ್ಲಿ ಪ್ರತ್ಯೇಕವಾಗಿ ಪರಿಸರ ಸಚಿವಾಲಯ ಆರಂಭಿಸಿದರು. ಪರಿಸರ ಮಾಲಿನ್ಯ ತಡೆಯಲು, ನೈಸರ್ಗಿಕ ಸಂಪತ್ತು ಉಳಿಸಲು ಬಿಗಿ ಕಾಯ್ದೆಗಳು ಬಂದವು. ನೀರು ಮತ್ತು ಅರಣ್ಯ ನಿರ್ವಹಣೆಯನ್ನು ಸಮುದಾಯದ ಪಾಲಿಗೆ ಒಪ್ಪಿಸಬೇಕು ಅಥವಾ ಸಮುದಾಯದ ಸಹಭಾಗಿತ್ವದೊಡನೆ ಕೈಗೊಳ್ಳಬೇಕು ಎನ್ನುವ ಚರ್ಚೆ ಶುರುವಾಯಿತು.
ಗಮನಿಸಬೇಕಾದ ಮತ್ತೊಂದು ಅಂಶವೆಂದರೆ ಚಿಪ್ಕೊ ಚಳವಳಿ ನಂತರ ಮಾಧ್ಯಮಗಳು ಎಚ್ಚೆತ್ತಿದ್ದು. ಕೈಗಾರಿಕೀಕರಣದಿಂದ ಪರಿಸರದ ಮೇಲೆ ಆಗುತ್ತಿರುವ ಅತ್ಯಾಚಾರದ ಕುರಿತು ಅನೇಕ ಪತ್ರಕರ್ತರು ಗಂಭೀರ ಅಧ್ಯಯನಕ್ಕೆ ತೊಡಗಿದರು. ಕೆಲವರು ಇದರ ಜತೆಜತೆಯಲ್ಲೇ ಪರಿಸರ ಹೋರಾಟಗಳಲ್ಲೂ ತೊಡಗಿಕೊಂಡರು. ನಮ್ಮವರೇ ಆದ ನಾಗೇಶ ಹೆಗಡೆಯವರೂ ಸೇರಿದಂತೆ ಉಷಾ ರೈ, ಅನಿಲ್ ಅಗರ್ವಾಲ್, ಕಲ್ಪನಾ ಶರ್ಮಾ ಮೊದಲಾದವರನ್ನು ಹೀಗೆ ಪರಿಸರನಾಶದ ವಿರುದ್ಧದ ಹೋರಾಟದಲ್ಲಿ ತೊಡಗಿಕೊಂಡವರ ಸಾಲಿನಲ್ಲಿ ಹೆಮ್ಮೆಯಿಂದ ಹೆಸರಿಸಬಹುದು. ಮಾಧ್ಯಮಗಳ ಈ ಬೆಂಬಲ ಚಳವಳಿಗೆ ನೈತಿಕ ಸ್ಥೈರ್ಯ ತುಂಬಿತಲ್ಲದೆ, ಚಳವಳಿಯಲ್ಲಿ ತೊಡಗಿಕೊಳ್ಳುವಂತೆ ಜನರನ್ನು ಪ್ರೇರೇಪಿಸಿತು.
ರಾಜಕೀಯ, ಸಾಮಾಜಿಕ, ಆರ್ಥಿಕ ಪರಿಸ್ಥಿತಿಗಳು ಒಂದೇ ರೀತಿ ಇರುವುದಿಲ್ಲವಲ್ಲ? 1990ರಲ್ಲಿ ಭಾರತ ಆರ್ಥಿಕ ಉದಾರೀಕರಣ, ಜಾಗತೀಕರಣಕ್ಕೆ ತನ್ನನ್ನು ಒಪ್ಪಿಸಿಕೊಂಡಿತು. ಅದರ ಫಲವಾಗಿ ಕಾರ್ಪೊರೇಟ್ ಸಂಸ್ಕೃತಿ ನಿಧಾನವಾಗಿ ಬೇರೂರತೊಡಗಿತು. ಅದು ನೀರು, ಆಹಾರ, ಪರಿಸರದಂಥ ಸೂಕ್ಷ್ಮ ವಿಷಯಗಳನ್ನು ಮೆಲ್ಲನೆ ಪಕ್ಕಕ್ಕೆ ನೂಕಲಾರಂಭಿಸಿತು. ಪರಿಸರ ಹೋರಾಟಗಾರರನ್ನು ಜನ ಅನುಮಾನದಿಂದ ನೋಡುವ ವ್ಯವಸ್ಥಿತ ಷಡ್ಯಂತ್ರಗಳು ನಡೆದು, ಅವು ಫಲ ಕೊಡಲಾರಂಭಿಸಿದವು. ಪರಿಸರವಾದಿಗಳನ್ನು ತಾತ್ಸಾರದಿಂದ ನೋಡುವ ಮನಸ್ಥಿತಿಯನ್ನು ಜನರಲ್ಲಿ ಬಿತ್ತಲಾಯಿತು. 'ಅಭಿವೃದ್ಧಿಗೆ ತ್ಯಾಗ ಅನಿವಾರ್ಯ' ಎನ್ನುವುದನ್ನು ಪ್ರಧಾನವಾಗಿ ಬಿಂಬಿಸಲಾಯಿತು. ಕನಸುಗಳ ಗೋಪುರ ಕಟ್ಟಿ, ಇಲ್ಲದ ಆಸೆಗಳನ್ನು ಹುಟ್ಟಿಸಿ, ಅಮಾಯಕರನ್ನು ದಾರಿ ತಪ್ಪಿಸುವ ಪ್ರಯತ್ನಗಳು ಜೋರಾಗಿಯೇ ನಡೆದವು. ಅದರ ಫಲವನ್ನೂ ನಾವಿಂದು ಅನುಭವಿಸುತ್ತಿದ್ದೇವೆ. ಮಲಿನ ಆಗಸ, ಸತ್ತು ಹೋದ ನದಿಗಳು, ಪಾತಾಳ ಕಾಣುತ್ತಿರುವ ಅಂತರ್ಜಲ ಮಟ್ಟ, ಎಲ್ಲೆಲ್ಲೂ ಹೆಚ್ಚುತ್ತಿರುವ ತ್ಯಾಜ್ಯ, ಮರೆಯಾಗುತ್ತಿರುವ ಅರಣ್ಯ ಮತ್ತು ಜೀವವೈವಿಧ್ಯ, ಋತುಮಾನದ ಬದಲಾವಣೆ... ಎಲ್ಲವೂ ಇದರ ಪ್ರಭಾವವೇ. ಚಿಪ್ಕೊ ಮಾದರಿಯ ಮತ್ತೊಂದು ಚಳವಳಿ ಹುಟ್ಟಿಕೊಳ್ಳಲು ಕಾಲ ಪಕ್ವವಾಗಿದೆ! ಹಾಗಂತ ಅನ್ನಿಸುವುದಿಲ್ಲವೇ?

- ರಾಧಾಕೃಷ್ಣ ಎಸ್. ಭಡ್ತಿ
abhyagatha@yahoo.co.in

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.