ಬಯಲು ಸೀಮೆಯ ಗುಳೆ ವ್ಯಥೆ...
ಬಾಗಲಕೋಟೆ ಜಿಲ್ಲಾ ಸ್ಥಳ. ಚಂಡಿಗಡದಂತಹ ಮಾದರಿ ಸಿಟಿ. ಅಚ್ಚುಕಟ್ಟಾದ ರಸ್ತೆಗಳು, ರಸ್ತೆ ಬದಿ ಮರಗಳು, ಕಂಗೊಳಿಸುವ ಬೀದಿ ದೀಪಗಳು. 20 ಕಿ.ಮಿ. ಉದ್ದಕ್ಕೂ ಅಲ್ಲಲ್ಲಿ ರಸ್ತೆ ಬದಿ ನಿಂತಿರುವ ಹಿನ್ನೀರು. 524 ಮೀಟರ್ ಹಿನ್ನೀರಿನಲ್ಲಿ ಮುಳುಗದಂತೆ ನಿರ್ಮಿಸಿದ ಉತ್ತಮ ರಸ್ತೆ. ಬಾಗಲಕೋಟೆಯ ನವನಗರ, ವಿದ್ಯಾಗಿರಿ ಬಹುತೇಕ ಸ್ವಚ್ಛ. 524 ಮೀಟರ್ ವ್ಯಾಪ್ತಿಯಲ್ಲಿ ಮುಳುಗಡೆಯಾಗುವ ಹಳೆ ಬಾಗಲಕೋಟೆ ಶಿಫ್ಟಾಗುತ್ತಿದೆ. ತುಂಡು, ತುಂಡಾಗಿರುವ ಬಾಗಲಕೋಟೆ ಒಟ್ಟಾಗುತ್ತಿದೆ. ಬಾಗಲಕೋಟೆ ಜಿಲ್ಲೆಯ ಪ್ರತಿಶತ 75ರಷ್ಟು ಭೂಮಿ ನೀರಾವರಿಗೆ ಒಳಪಟ್ಟಿದೆ. ಅದರಲ್ಲಿ ಹೆಚ್ಚಿನ ಭಾಗದಲ್ಲಿ ಕಬ್ಬು ಬೆಳೆಯಲಾಗುತ್ತಿದೆ. ಗ್ರಾನೈಟ್ ಗಣಿಗಾರಿಕೆ, ಸುಣ್ಣದ ಕಲ್ಲಿನಿಂದ ಸಿಮೆಂಟ್ ತಯಾರಿಕಾ ಫ್ಯಾಕ್ಟರಿಗಳು, ಸುಣ್ಣ ತಯಾರಿಸುವ ಘಟಕಗಳು, ಇಟ್ಟಿಗೆ ಘಟಕಗಳು ಸಾಕಷ್ಟು ಸಂಖ್ಯೆಯಲ್ಲಿವೆ. ಹೆಚ್ಚು ತೋಟಗಾರಿಕಾ ಬೆಳೆಯಿಂದಾಗಿಯೇ ಬಾಗಲಕೋಟೆಗೆ ತೋಟಗಾರಿಕಾ ವಿಶ್ವವಿದ್ಯಾಲಯ ಬಂದಿದೆ. ಜಿಲ್ಲೆಯಲ್ಲಿ ದ್ರಾಕ್ಷಿ, ಚಿಕ್ಕು, ದಾಳಿಂಬೆ ಕ್ಷೇತ್ರವೂ ಸಾಕಷ್ಟಿದೆ. ಅವು ಅರಬ್ ರಾಷ್ಟ್ರಗಳಿಗೂ ರಫ್ತಾಗುತ್ತಿವೆ.
ಕಬ್ಬಿನ ಕ್ಷೇತ್ರ ಹೆಚ್ಚಿರುವುದರಿಂದ ಜಿಲ್ಲೆಯಲ್ಲಿ 14 ಸಕ್ಕರೆ ಕಾರ್ಖಾನೆಗಳು ಹುಟ್ಟಿಕೊಂಡಿವೆ. ಇವು ಸ್ಥಳೀಯರಿಗೆ ಸಾಕಷ್ಟು ಉದ್ಯೋಗಾವಕಾಶ ಒದಗಿಸಿವೆ. ಸಕ್ಕರೆ ಉತ್ಪಾದನೆಯಲ್ಲಿ ಬಾಗಲಕೋಟೆ ಜಿಲ್ಲೆ ಈಗ ನಂಬರ್ ಒನ್ ಸ್ಥಾನದಲ್ಲಿದೆ. ಆದರೆ ಸಮಯಕ್ಕೆ ಸರಿಯಾಗಿ ಕಬ್ಬು ಕಡಿದು ಸಾಗಿಸಲು ಕೆಲಸಗಾರರಿಲ್ಲ. ಅದಕ್ಕಾಗಿ ಕಬ್ಬು ಕಡಿಯಲು ಮಹಾರಾಷ್ಟ್ರದ ಜನ ತಂಡಗಳಲ್ಲಿ ಬಂದು ಹೊಲಗಳಲ್ಲಿ ಬೀಡು ಬಿಡುತ್ತಾರೆ. ಕಬ್ಬಿನ ಸೀಜನ್ ಮುಗಿಯುವವರೆಗೂ ಬಾಗಲಕೋಟೆ ಜಿಲ್ಲೆಯಲ್ಲಿ ಇರುತ್ತಾರೆ.
ಈಗ ಈ ಜಿಲ್ಲೆಯಲ್ಲಿ ದುಡಿಯಲು ಸಾಕಷ್ಟು ಅವಕಾಶಗಳಿದ್ದರೂ ಉತ್ತರ ಕರ್ನಾಟಕ ಹಾಗೂ ಹೈದ್ರಾಬಾದ್ ಕರ್ನಾಟಕದ ಜನ ಇಲ್ಲಿ ಕೆಲಸವಿಲ್ಲವೆಂದು ಬೇರೆಯ ನಗರಗಳಿಗೆ ದುಡಿಯಲು ಗುಳೆ ಹೋಗುವುದು ಸಾಮಾನ್ಯವಾಗಿದೆ. "ನಮ್ಮ ಜೋಳ ಪರರಿಗೆ ಬೀಸಾಕ ಕೊಟ್ಟು, ಪರರ ಜೋಳ ಹಾಡ್ಯಾಡಿ ಬೀಸಿದರಂತೆ" ಎಂಬ ಗಾದೆಯಿದೆ. ನಮ್ಮ ಜೋಳವನ್ನೇ ಬೀಸಿದರಾಗದೆ? ಈಗ ಇಲ್ಲಿ ಬೇಕಾದಷ್ಟು ಕೆಲಸವಿದ್ದು, ಹುಡುಕಿಕೊಂಡು ದುಡಿಯದ ಈ ಜನ ದುಡಿಯಲು ಹೋಗಿ ಮರ್ಯಾದೆ ತೆಗೆಯುತ್ತಿದ್ದಾರೆ. ಬಾಗಲಕೋಟೆ ಜಿಲ್ಲೆಯ ಈ ಗುಳೆ ಹೋಗುವ ಜನ ಕಬ್ಬಿನ ಹೊಲಗಳಲ್ಲಿ ಕಬ್ಬು ಕಡಿಯಲು ಯಾಕೆ ಸಜ್ಜಾಗುತ್ತಿಲ್ಲ? ಅದಕ್ಕಾಗಿ ಮಹಾರಾಷ್ಟ್ರದ ಜನ ಏಕೆ ಬರಬೇಕು?
ಇನ್ನೂ ವಿಚಿತ್ರವೆಂದರೆ ರಾಜಸ್ತಾನ, ಗುಜರಾತ್, ಪಂಜಾಬ್, ಬಿಹಾರ, ಪಶ್ಚಿಮ ಬಂಗಾಳದಿಂದ ಸಾಕಷ್ಟು ಜನ ವಲಸೆ ಬಂದಿದ್ದಾರೆ. ಕೈ ಗಾಡಿಗಳಲ್ಲಿ ಚಹಾ, ಐಸ್ಕ್ರೀಮ್, ಬೇಲ್ಪುರಿಯಂಥ ಸಣ್ಣ ವ್ಯವಹಾರಗಳಿಂದ ಹಿಡಿದು ಬಟ್ಟೆ ವ್ಯಾಪಾರ, ಸ್ವೀಟ್ಮಾರ್ಟ್, ಹಾರ್ಡ್ವೇರ್, ಕಟ್ಟಡ ಸಾಮಗ್ರಿಗಳು, ಸಾಮಿಲ್, ಗ್ರಾನೈಟ್ ಪಾಲಿಶಿಂಗ್ ಫ್ಯಾಕ್ಟರಿಗಳು ಮುಂತಾದ ದೊಡ್ಡ ದೊಡ್ಡ ವ್ಯವಹಾರ ಮಾಡಿ ನೂರಾರು ಕೋಟಿ ಗಳಿಸಿದ್ದಾರೆ. ನಮ್ಮ ಜನ ಗ್ರಾನೈಟ್ ಫ್ಯಾಕ್ಟರಿಗಳಲ್ಲಿ ದುಡಿಯಲು ತಯಾರಿಲ್ಲ. ಹೀಗಾಗಿ ಅಲ್ಲಿನ ಕೆಲಸಗಾರರಿಂದ ಹಿಡಿದು ಮಾಲೀಕರವರೆಗೆ ರಾಜಸ್ತಾನ, ಗುಜರಾತ್ನವರಿದ್ದಾರೆ. ಇದೇ ಬಾಗಲಕೋಟೆ ಜಿಲ್ಲೆಯ ಪ್ರಮುಖ ಊರುಗಳಲ್ಲಿ, ಬರದ ನಾಡೆಂದು ಕರೆಯುವ ಈ ನೆಲದಲ್ಲಿ ಅವರೆಲ್ಲ ಕಂಡುಕೊಂಡ ಕಸಬುಗಳನ್ನು ನಮ್ಮವರು ನೋಡಿ ಕಲಿಯುತ್ತಿಲ್ಲ. ಅದು ಬಿಟ್ಟು ದುಡಿಯುವ ನೆಪ ಮಾಡಿ ಗುಳೆ ಹೋಗುವುದು ಎಷ್ಟು ಸರಿ? ಈ ಗುಳೆ ಹೋಗುವ ಜನ ಕೊಳೆಗೇರಿಗಳ ಗುಡಿಸಿಲುಗಳಲ್ಲಿ ಇಲ್ಲವೆ ಕಟ್ಟಡಗಳು, ಸ್ಟೋರ್ಗಳಲ್ಲಿ ವಾಸಿಸುತ್ತಾರೆ. ಅದೇ ಬೇರೆ ರಾಜ್ಯಗಳಿಂದ ಬಂದವರು ಇಲ್ಲಿ ಉತ್ತಮವಾದ ತಾರಸಿ ಮನೆಗಳಲ್ಲಿ ಸಾಕಷ್ಟು ಬಾಡಿಗೆ ಕೊಟ್ಟು ವಾಸಿಸುತ್ತಾರೆ. ದಕ್ಷಿಣ ಕನ್ನಡ ಹಾಗೂ ಉಡುಪಿಯ ಜನ ಹೋಟೆಲ್ ಉದ್ಯಮಿಗಳಾಗಿ ಉತ್ತರ ಕರ್ನಾಟಕವಲ್ಲದೆ, ದೇಶಾದ್ಯಂತ ಇದ್ದಾರೆ. ಅವರ ವಲಸೆ ಬಹುವರ್ಷಗಳಿಂದ ಇದೆ. ಉದ್ಯೋಗಾರ್ಥ ಬಂದಿರುವ ಬೇರೆ ಬೇರೆ ರಾಜ್ಯಗಳ ಹಾಗೂ ಉಡುಪಿ, ಮಂಗಳೂರಿನವರು ಗುಳೆ ಬಂದವರಲ್ಲ. ಇವರು ಸ್ವತಂತ್ರ ಉದ್ಯೋಗಿಗಳು. ಹೀಗೆ ಸ್ವತಂತ್ರವಾಗಿ ದುಡಿಯದ ನಮ್ಮ ಉತ್ತರ ಕರ್ನಾಟಕದ ಜನ ಗುಳೆ ಹೋಗಿ ಜಿಲ್ಲೆಯ ಚಿತ್ರಣವನ್ನೇ ಬದಲಿಸಲು ಕಾರಣರಾಗಿದ್ದಾರೆ.
ದುಡಿಯಲು ಹೋಗುವ ಜಿಲ್ಲೆಯ ಹೆಚ್ಚಿನ ಜನ ಎಲ್ಲ ಸರ್ಕಾರಿ ಸೌಲಭ್ಯಗಳನ್ನೂ ಪಡೆಯುತ್ತಾರೆ. ಉದ್ಯೋಗಖಾತ್ರಿ, ರೇಷನ್, ಸೀಮೆಎಣ್ಣೆ, ಹೆರಿಗೆ ಭತ್ಯೆ, ವಿಧವಾ ಭತ್ಯೆ, ಭಾಗ್ಯಲಕ್ಷ್ಮಿ ಮುಂತಾದ ಎಲ್ಲ ಸರ್ಕಾರಿ ಸೌಲಭ್ಯಗಳನ್ನೂ ಪಡೆಯುತ್ತಾರೆ. ಬಡವರು ಈ ಎಲ್ಲ ಸರಕಾರಿ ಸೌಲಭ್ಯಗಳನ್ನು ಪಡೆಯಲು ಯಾವ ಅಭ್ಯಂತರವೂ ಇಲ್ಲ. ಕೆಲವರಿಗೆ ಕೆಲವು ಸರಕಾರಿ ಸೌಲಭ್ಯಗಳು ಸಿಕ್ಕಿರಲಿಕ್ಕಿಲ್ಲ. ಇನ್ನೂ ಕೆಲವು ಕಡೆ ರಾಜಕಾರಣಿಗಳು, ಹಿಂಬಾಲಕರು ಹಾಗೂ ಅಧಿಕಾರಿ ನೌಕರ ವರ್ಗ ತಿಂದು ಹಾಕಿದ ಉದಾಹರಣೆಗಳಿವೆ. ಸರಕಾರಿ ಸೌಲಭ್ಯಗಳನ್ನು ಪಡೆದೂ, ಇಲ್ಲಿ ಉದ್ಯೋಗ ಅವಕಾಶಗಳು ಇದ್ದಾಗ್ಯೂ ದುಡಿಯಲು ಹೋಗುತ್ತಾರಲ್ಲ. ಇವರು ಬದಲಾಗುವುದು ಯಾವಾಗ? ಉತ್ತರ ಕರ್ನಾಟಕದ ವಿಜಾಪುರ, ಗುಲಬರ್ಗಾ, ಯಾದಗಿರಿ, ಕೊಪ್ಪಳ, ರಾಯಚೂರು ಜಿಲ್ಲೆಗಳು ಕೂಡಾ ಇಂಥ ವೈರುಧ್ಯಗಳಿಂದ ಹೊರತಾಗಿಲ್ಲ.
- ಜಿ.ಬಿ. ಕಂಬಾಳಿಮಠ, ಹುನಗುಂದ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

