ಅಂಕಣಗಳು

ಈ ಹಸೀ ಸುಳ್ಳುಗಳೇಕೆ ದಿಗ್ವಿಜಯ ಸಿಂಗ್?

Published On :

ತಮ್ಮ ಎಡಬಿಡಂಗಿ ಹೇಳಿಕೆಗಳ ಮೂಲಕ ಸದಾ ಸುದ್ದಿಯಲ್ಲಿರುವುದು ಕಾಂಗ್ರೆಸ್ನ ಪ್ರಧಾನ ಕಾರ್ಯದರ್ಶಿ ದಿಗ್ವಿಜಯಸಿಂಗ್ ಅವರ ಜಾಯಮಾನ. ಕಾಲಕಾಲಕ್ಕೆ ಒಂದೊಂದೇ ಹೊಸ ಹೇಳಿಕೆ ನೀಡುವ ಅವರು, ಅದೇ ಕಾರಣದಿಂದ ಹಲವು ಬಾರಿ ಗೇಲಿಗೆ ಒಳಗಾಗಿದ್ದಾರೆ. ಹಾಸ್ಯಾಸ್ಪದ ವ್ಯಕ್ತಿ ಅನ್ನಿಸಿಕೊಂಡಿದ್ದಾರೆ. ಆದರೂ ಇನ್ನು ಬುದ್ಧಿ ಕಲಿತಂತೆ ಕಾಣುತ್ತಿಲ್ಲ.
ಕೆಲವೇ ದಿನಗಳ ಹಿಂದೆ ನ್ಯೂಸ್ ಎಕ್ಸ್ ಸುದ್ದಿ ವಾಹಿನಿಗೆ ದಿಗ್ವಿಜಯಸಿಂಗ್ ಸಾಹೇಬರು ನೀಡಿರುವ ಹೇಳಿಕೆಯ ಒಂದು ಸಾಲು ಹೀಗಿದೆ: 'ಯುಪಿಎ ಸರ್ಕಾರ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದೆ. ಇದಕ್ಕೆ ಕಾರಣ, ಅಧಿಕಾರವೆಂಬುದು ಪ್ರಧಾನಿ ಮನಮೋಹನಸಿಂಗ್ ಅವರ ಹಿಡಿತದಲ್ಲಿದ್ದದ್ದು. ಕಾಂಗ್ರೆಸ್ನ ಅಧ್ಯಕ್ಷೆ ಸೋನಿಯಾ ಗಾಂಧಿಯವರು ಯಾವುದೇ ಸಂದರ್ಭದಲ್ಲೂ ಮನಮೋಹನಸಿಂಗ್ ಅವರ ಕೆಲಸದಲ್ಲಿ ಮಧ್ಯೆ ಪ್ರವೇಶಿಸಲಿಲ್ಲ...'
ಎಲ್ಲರೂ ಬಲ್ಲಂತೆ ಯುಪಿಎ ಸರ್ಕಾರವನ್ನು 2ಜಿ ತರಂಗಾಂತರ ಹಗರಣ, ಕಾಮನ್ವೆಲ್ತ್ ಗೇಮ್ಸ್ ಹಗರಣ, ಶ್ರೀಲಂಕಾದಲ್ಲಿರುವ ತಮಿಳರ ರಕ್ಷಣೆ ವಿಷಯದಲ್ಲಿ ಉಂಟಾಗಿರುವ ಗೊಂದಲ... ಇಂಥವೇ ಸಮಸ್ಯೆಗಳು ಕಾಡುತ್ತಲೇ ಇವೆ. ಈ ಎಲ್ಲ ಸಂದರ್ಭಗಳಲ್ಲೂ ಮನಮೋಹನ್ ಸಿಂಗ್ ತುಂಬ ಅಸಹಾಯಕರಂತೆ ವರ್ತಿಸಿದ್ದಾರೆ. ಸೋನಿಯಾ ಗಾಂಧಿಯವರಿಗೆ ಮೊದಲೇ ತಿಳಿಸದೆ ಸ್ವತಂತ್ರ ನಿರ್ಧಾರ ಕೈಗೊಂಡರೆ ಏನಾದೀತೋ ಎಂಬ ಭಯದಿಂದಲೇ ಚಡಪಡಿಸಿದ್ದಾರೆ. ವಾಸ್ತವ ಹೀಗಿದ್ದರೂ, ಸರ್ಕಾರದ ಕೆಲಸದಲ್ಲಿ ಸೋನಿಯಾ ಗಾಂಧಿ ಅವರು ಮೂಗು ತೂರಿಸುತ್ತಿಲ್ಲ ಎಂಬಂಥ ಅಸಡ್ಡಾಳ ಹೇಳಿಕೆಯನ್ನು ದಿಗ್ವಿಜಯಸಿಂಗ್ ನೀಡಿದ್ದಾರೆ!
2012ರ ಜೂನ್ನಲ್ಲಿ ಪತ್ರಿಕೆಯೊಂದರಲ್ಲಿ ಒಂದು ಸುದ್ದಿ ಬಂದಿತು: ಇತ್ತೀಚಿನ ಎರಡು ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷ ಹೆಚ್ಚು ಸ್ಥಾನಗಳನ್ನು ಗಳಿಸಲು ತಾನೇ ಕಾರಣವೆಂದು ಭಾವಿಸಿರುವ ಆ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿಯವರು, ಕೇಂದ್ರ ಸರ್ಕಾರದ ಯಾವುದೇ ಅಂತಿಮ ನಿಲುವಿಗೂ ತಮ್ಮ ಒಪ್ಪಿಗೆಯ ಮುದ್ರೆ ಇರಲೇ ಬೇಕು ಎಂದು ಭಾವಿಸಿದ್ದಾರೆ. ಈ ಸಂದರ್ಭದಲ್ಲಿಯೇ ಮನಮೋಹನಸಿಂಗ್ ಅವರು ಸೋನಿಯಾರ ಕೃಪೆಯಿಂದ ನೇಮಕಗೊಂಡ ಪ್ರಧಾನಿಯಾಗಿದ್ದಾರೆ. ಇಬ್ಬರ ನಡುವಣ ಅಧಿಕಾರ ಹಂಚಿಕೆಯ ವಿಷಯವೇ ಕೇಂದ್ರ ಸರ್ಕಾರ ರೂಪಿಸಿರುವ ಮುಕ್ತ ಆರ್ಥಿಕ ನೀತಿಯನ್ನು ದುರ್ಬಲಗೊಳಿಸುತ್ತದೆ ಎಂದು ಹೇಳಲಾಗುತ್ತಿದೆ...'
ಹೀಗೊಂದು ಪತ್ರಿಕಾ ವರದಿ ಪ್ರಕಟವಾದಾಗ ಅದಕ್ಕೆ ಕಾಂಗ್ರೆಸ್ನಿಂದ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು. ಮರುದಿನವೇ ಪತ್ರಿಕಾಗೋಷ್ಠಿ ನಡೆಸಿದ್ದ ಕಾಂಗ್ರೆಸ್ ವಕ್ತಾರ ರಶೀದ್ ಆಳ್ವಿ, - ಲೋಕಸಭೆಯ ಚುನಾಯಿತ ಸದಸ್ಯರಾದ ಮನಮೋಹನ್ ಸಿಂಗ್ ಅವರು ಎಲ್ಲ ಸದಸ್ಯರ ಬೆಂಬಲದಿಂದ ಪ್ರಧಾನಿಯಾಗಿದ್ದಾರೆ. ಅವರನ್ನು 'ನೇಮಕಗೊಂಡ ಪ್ರಧಾನಿ' ಎಂದು ಹೇಳುವುದಕ್ಕೆ ಯಾವುದೇ ಆಧಾರವೂ ಇಲ್ಲ' ಎಂದಿದ್ದರು.
ದೇಶದ ಸಮಸ್ತರೂ ಈವರೆಗೂ ಗಮನಿಸಿರುವ ಹಲವು  ಸಂಗತಿಗಳನ್ನೇ ನೋಡೋಣ: 2ಜಿ ತರಂಗಾಂತರ ಹಗರಣದಲ್ಲಿ ದೂರಸಂಪರ್ಕ ಖಾತೆಯ ಸಚಿವರಾಗಿದ್ದ ಎ. ರಾಜಾ ಅವರು ತಪ್ಪಿತಸ್ಥರು ಎಂದು ಗೊತ್ತಾದಾಗ ಕೂಡ ಅವರ ವಿರುದ್ಧ ತಕ್ಷಣವೇ ಕ್ರಮ ತೆಗೆದುಕೊಳ್ಳಲು ಆಗದಂಥ ಸ್ಥಿತಿಯಲ್ಲಿ ಪ್ರಧಾನಿ ಮನಮೋಹನಸಿಂಗ್ ಇದ್ದರು. ಬಜೆಟ್ ಮಂಡನೆಯ ಸಂದರ್ಭದಲ್ಲಿ ಆಗಿನ ಹಣಕಾಸು ಸಚಿವರಾಗಿದ್ದ ಪ್ರಣಬ್ ಮುಖರ್ಜಿಯವರೇ ನೇರವಾಗಿ ನಿರ್ಣಯಗಳನ್ನು ಕೈಗೊಂಡರು. ಈವರೆಗೂ ಎಲ್ಲರಿಂದಲೂ ಸುಧಾರಣೆಯ ಹರಿಕಾರ ಎಂದು ಕರೆಸಿಕೊಂಡ ಪಿ. ಚಿದಂಬರಂ ಕೂಡ, ತೆರಿಗೆ ಸಂಗ್ರಹದ ವಿಷಯದಲ್ಲಿ ಬಜೆಟ್ ನಿರ್ವಹಣಾ ಕಾಯಿದೆಯನ್ನು ಉಲ್ಲಂಘಿಸುವ ಎರಡು ಸಂದರ್ಭಗಳಿಗೆ ಅವಕಾಶ ಮಾಡಿಕೊಟ್ಟರು. ಈ ಎಲ್ಲ ಸಂದರ್ಭಗಳಲ್ಲೂ ಪ್ರಧಾನಿ ಮನಮೋಹನ್ ಸಿಂಗ್ ತುಟಿಪಿಟಿಕ್ ಎನ್ನದೆ ಸುಮ್ಮನಿದ್ದರು. ಕಾರಣ, ಚಿದಂಬರಂ ಹಾಗೂ ಪ್ರಣಬ್ ಮುಖರ್ಜಿಯವರಿಗೆ ಸೋನಿಯಾ ಗಾಂಧಿಯವರ ಬೆಂಬಲವಿತ್ತು.
ವಾಸ್ತವ ಹೀಗಿದ್ದರೂ, ದೇಶದ ಎಲ್ಲರೂ ಇದನ್ನು ಗಮನಿಸಿದ್ದರೂ, ಸೋನಿಯಾ ಗಾಂಧಿಯವರು ಸರ್ಕಾರದ ಕಾರ್ಯ ಚಟುವಟಿಕೆಯಲ್ಲಿ ಯಾವಾಗಲೂ ಹಸ್ತಕ್ಷೇಪ ಮಾಡುವುದಿಲ್ಲ. ತಮ್ಮ ಕೆಲಸ ಆಗಬೇಕಾದಾಗ ಮಾತ್ರ ಮೂಗು ತೂರಿಸುತ್ತಾರೆ. ಮನಮೋಹನ್ ಸಿಂಗ್ ಅವರು ಸ್ವಂತ ನಿರ್ಧಾರ ಕೈಗೊಳ್ಳುವ ಮುನ್ನ, ಸಮ್ಮತಿಗಾಗಿ ಸೋನಿಯಾ ಅವರತ್ತ ತಿರುಗುತ್ತಾರೆ ಎಂಬ ಮಾತಿಗೆ ಹಲವು ಉದಾಹರಣೆಗಳನ್ನು ನೀಡಬಹುದು. ಅಂಥ ವಿಷಯಗಳನ್ನು ಹೀಗೆ ವಿವರಿಸಬಹುದು:
ಬಾಂಗ್ಲಾ ದೇಶಕ್ಕೆ ವಿದೇಶಾಂಗ ನೀತಿಯನ್ನು ರೂಪಿಸುವುದು ಕೇಂದ್ರ ಸರ್ಕಾರದ ಪರಮಾಧಿಕಾರ. ಆದರೆ ತೀಸ್ತಾ ನದಿ ನೀರು ಹಂಚಿಕೆಯ ವಿಷಯವಾಗಿ ಕೇಂದ್ರ ಸರ್ಕಾರ ನೀತಿಯೊಂದನ್ನು ರೂಪಿಸಲು ಹೊರಟಾಗ, ಮಮತಾ ಬ್ಯಾನರ್ಜಿ ಒಮ್ಮೆ ಹೂಂಕರಿಸಿ, ಕೇಂದ್ರದ ಯೋಜನೆಗೆ ಅಡ್ಡಗಾಲು ಹಾಕಿದರು. ಗುಜರಾತ್ ಚುನಾವಣೆಯ ಸಂದರ್ಭದಲ್ಲಿ ನರೇಂದ್ರ ಮೋದಿಯವರು, ಸರ್ ಕ್ರೀಕ್ನ ವಿಷಯ ಎತ್ತಿಕೊಂಡು ಕಾಂಗ್ರೆಸ್ ನಾಯಕರನ್ನು ಚರ್ಚೆಗೆ ಕರೆದರು. ಆ ಸಂದರ್ಭದಲ್ಲಿ ಕಾಂಗ್ರೆಸ್ನ ಒಬ್ಬರೂ ಮೋದಿಯವರೊಂದಿಗೆ ಮುಖಾಮುಖಿಯಾಗಲು ಮುಂದಾಗಲಿಲ್ಲ. ಈಗ, ಶ್ರೀಲಂಕಾದಲ್ಲಿರುವ ತಮಿಳರ ರಕ್ಷಣೆಯ ವಿಷಯ ಎತ್ತಿಕೊಂಡಿರುವ ಡಿಎಂಕೆ ಮತ್ತು ಎಐಎಡಿಎಂಕೆ ಪಕ್ಷಗಳು, ಶ್ರೀಲಂಕಾಗೆ ಆರ್ಥಿಕ ದಿಗ್ಭಂಧನ ವಿಧಿಸುವಂತೆ, ಅದನ್ನು ಮಿತ್ರ ರಾಷ್ಟ್ರ ಎಂದು ಪರಿಗಣಿಸದಂತೆ ವಿಶ್ವಸಂಸ್ಥೆಯನ್ನೇ ಒತ್ತಾಯಿಸುವ ಮಟ್ಟಕ್ಕೆ ಹೋಗಿವೆ. ಇಷ್ಟೆಲ್ಲಾ ಆಗಿದ್ದರೂ, ಪ್ರಧಾನಿಗಳು ಮೌನ ಮುರಿದಿಲ್ಲ. ಇನ್ನು, ಕೇರಳದ ಮೀನುಗಾರರನ್ನು ಗುಂಡಿಟ್ಟುಕೊಂದು ಇಟಲಿ ತಲುಪಿಸಿಕೊಂಡಿದ್ದ ಅಲ್ಲಿನ ನೌಕಾನೆಲೆಯ ಇಬ್ಬರನ್ನೂ ವಿಚಾರಣೆಗಾಗಿ ಭಾರತಕ್ಕೆ ಕಳಿಸಿ ಎಂದು ಒತ್ತಾಯಿಸುವ ಮಾತು ಸಿಂಗ್ ಸಾಹೇಬರಿಂದ ಬರಲೇ ಇಲ್ಲ. ಈ ಸಂದರ್ಭದಲ್ಲಿ ಸುಪ್ರಿಂಕೋರ್ಟು ಚಾಟಿ ಬೀಸಿ, ಈ ನೆಲದ ಕಾನೂನಿಗೆ ಗೌರವ ನೀಡಲು ಕಲಿಯಿರಿ ಎಂದು ಇಟಲಿಯ ರಾಯಭಾರಿಗೆ ಕಟ್ಟುನಿಟ್ಟಿನ ಆದೇಶ ಹೊರಡಿಸಿದ ನಂತರವೇ, ಆರೋಪಿಗಳು ಇಟಲಿಯಿಂದ ಭಾರತಕ್ಕೆ ಬಂದರು. ಈ ಸಂದರ್ಭದಲ್ಲಿ ಸೋನಿಯಾ ಗಾಂಧಿಯವರು ಪ್ರಭಾವ ಬೀರಿದ್ದರಿಂದಲೇ ತನ್ನ ಜನರನ್ನು ಕಳಿಸಲು ಇಟಲಿ ಸರ್ಕಾರ ಮನಸ್ಸು ಮಾಡಿತು ಎಂದು ದೇಶ- ವಿದೇಶದ ಪತ್ರಿಕೆಗಳು ಬರೆದವು.
ಇನ್ನು, ಭಾರತದ ವಿರುದ್ಧ ನಡೆಯುವ ಎಲ್ಲ ಭಯೋತ್ಪಾದನಾ ಚಟುವಟಿಕೆಗಳಿಗೆ ಎಲ್ಲ ರೀತಿಯ ಸಹಾಯವನ್ನು ಮೊದಲಿನಿಂದಲೂ ಮಾಡುತ್ತಲೇ ಇರುವ ನೆರೆ ರಾಷ್ಟ್ರ ಪಾಕಿಸ್ತಾನದ ವಿರುದ್ಧ ತಕ್ಷಣವೇ ಒಂದು ತೀಕ್ಷ್ಣ ಪ್ರತಿಕ್ರಿಯೆ ನೀಡುವುದಕ್ಕೂ ಪ್ರಧಾನಿ ಮನಮೋಹನ್ಸಿಂಗ್ ಹಿಂದೇಟು ಹಾಕುತ್ತಿದ್ದಾರೆ. ಕಾರಣ ಸ್ಪಷ್ಟ: ಒಂದು ವೇಳೆ ಆ ಹೇಳಿಕೆ ಸೋನಿಯಾ ಗಾಂಧಿಯವರಿಗೆ ಹಿಡಿಸದೇ ಹೋದರೆ ಗತಿ?
ಯಾವುದೇ ವಿಷಯದ ಬಗ್ಗೆ ತಕ್ಷಣವೇ ಸ್ವತಂತ್ರವಾಗಿ ದಿಟ್ಟ ನಿರ್ಧಾರ ಕೈಗೊಳ್ಳಲು ಪ್ರಧಾನಮಂತ್ರಿಗೆ ಅವಕಾಶವೇ ಇಲ್ಲ. ಈ ಕಾರಣದಿಂದಲೇ ರಾಷ್ಟ್ರೀಯ ಹೂಡಿಕೆ, ನೀತಿ, ಗಣಿ ಹಾಗೂ ವಿಮಾನಯಾನ ಕ್ಷೇತ್ರಗಳಲ್ಲಿ ಕೇಂದ್ರ ಯಾವುದೇ ಹೊಸ ನಿರ್ಧಾರವನ್ನು ಕೈಗೊಂಡಿಲ್ಲ. ಗಣಿ ಕ್ಷೇತ್ರದ ವಿಷಯವಂತೂ ಈಗ ನ್ಯಾಯಾಲಯದ ಅಂಗಳದಲ್ಲಿದೆ. ಯಾವ ರಾಜ್ಯದಲ್ಲಿ ಅದಿರು ತೆಗೆಯುವ ಕೆಲಸ ಆರಂಭಿಸಬೇಕು, ಅದರಿಂದ ಪರಿಸರ ಮಾಲಿನ್ಯ ಆಗುವುದೇ ಹೇಗೆ ಎಂಬುದರ ಬಗ್ಗೆ ವರದಿ ನೀಡಬೇಕೆಂದು ಕೆಲವು ರಾಜ್ಯಗಳಿಗೆ ಕೋರ್ಟ್ ನಿರ್ದೇಶನ ನೀಡಿದ್ದೂ ಆಗಿದೆ.
ವಿದೇಶಾಂಗ ಹೂಡಿಕೆ ನೀತಿ ಸಂಬಂಧವಾಗಿ ಯೋಜನೆ ರೂಪಿಸುವುದು ಹಾಗೂ ಕಾನೂನನ್ನು ಜಾರಿಗೆ ತರುವುದು ಕೂಡ ಕೇಂದ್ರ ಸರ್ಕಾರಕ್ಕೆ ಇರುವ ಪರಮಾಧಿಕಾರ. ಆದರೆ ಇವತ್ತಿನ ಸಂದರ್ಭದಲ್ಲಿ ಕೇಂದ್ರದ ಮಾತನ್ನು ಹೆಚ್ಚಿನ ರಾಜ್ಯದ ಮುಖ್ಯಮಂತ್ರಿಗಳು ಒಪ್ಪುತ್ತಿಲ್ಲ. ಅವರೆಲ್ಲರ ಬಾಯಿ ಮುಚ್ಚಿಸಿ ವಿಶೇಷಾಧಿಕಾರ ಬಳಸಿ ಹೊಸ ನೀತಿಯೊಂದನ್ನು ಜಾರಿಗೊಳಿಸುವ ಧಾಡಸೀತನ ಮನಮೋಹನ್ಸಿಂಗ್ ನೇತೃತ್ವದ ಸರ್ಕಾರಕ್ಕೆ ಖಂಡಿತ ಇಲ್ಲ.
ಪಿ. ಚಿದಂಬರಂ ಅವರು ಗೃಹ ಸಚಿವರಾಗಿದ್ದಾಗ- 'ದೇಶದಲ್ಲಿ ಅಪರಾಧಗಳನ್ನು ತಡೆಯುವ ಸದಾಶಯದಿಂದ ಎಲ್ಲ ನಾಗರಿಕರಿಗೂ ಗುರುತಿನ ಪತ್ರ ನೀಡುವ ಮಹತ್ವಾಕಾಂಕ್ಷಿ ಯೋಜನೆಯೊಂದನ್ನು ಆರಂಭಿಸುವುದಾಗಿ ಹೇಳಿಕೆ ನೀಡಿದ್ದರು. ಈ ಯೋಜನೆಯ ಸಿಇಒ ಎಂದು ನಂದನ್ ನೀಲೇಕಣಿ ಅವರನ್ನು ನೇಮಿಸಲಾಗಿತ್ತು. ಆದರೆ, ಈ ಘೋಷಣೆ ಹೊರಟು ಆಗಲೇ ವರ್ಷ ಕಳೆದಿದೆ. ಕೋಟ್ಯಂತರ ರೂಪಾಯಿಗಳೂ ಖರ್ಚಾಗಿವೆ. ಆದರೆ ದೇಶದ ಒಟ್ಟು ಜನಸಂಖ್ಯೆಯ ಪೈಕಿ ಶೇ. 25ರಷ್ಟು ಮಂದಿಗೂ ಗುರುತಿನ ಪತ್ರಗಳು ವಿತರಣೆಯಾಗಿಲ್ಲ.
ಇದೆಲ್ಲಾ ಏನನ್ನು ಸೂಚಿಸುತ್ತದೆ ಹೇಳಿ?
ಮನಮೋಹನಸಿಂಗ್ ಅವರು ದುರ್ಬಲ ಪ್ರಧಾನಿ. ಸ್ವತಂತ್ರ ನಿರ್ಧಾರಗಳನ್ನು ಕೈಗೊಳ್ಳುವ ಅವಕಾಶ ಮತ್ತು ಅಧಿಕಾರ ಇದ್ದಿದ್ದರೆ, ಇಷ್ಟೆಲ್ಲಾ ಅನಾಹುತಗಳನ್ನು ಕಂಡೂ ಪ್ರಧಾನಿ ಮನಮೋಹನಸಿಂಗ್ ಸುಮ್ಮನಿರುತ್ತಿದ್ದರೆ? ಮೇಲಿಂದ ಮೇಲೆ ಹಗರಣಗಳಿಗೆ ತುತ್ತಾದ, ಅದೇ ಕಾರಣಕ್ಕೆ ಸುಪ್ರಿಂಕೋರ್ಟ್ನಿಂದ ಛೀಮಾರಿ ಹಾಕಿಸಿಕೊಂಡ ಯುಪಿಎ ಸರ್ಕಾರವನ್ನು ,- ಇದೊಂದು ಮಾದರಿ ಸರ್ಕಾರ ಎಂದು ದಿಗ್ವಿಜಯಸಿಂಗ್ ಹೇಗೆ ಕರೆಯುತ್ತಾರೆ? ಪ್ರಧಾನಮಂತ್ರಿಗಳ ಪ್ರತಿಯೊಂದು ನಡೆಯನ್ನೂ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾರೇ ನಿರ್ಧರಿಸುತ್ತಾರೆ ಎಂಬ ಸತ್ಯ ಜಗತ್ತಿಗೇ ಗೊತ್ತಿರುವಾಗ, ಸರ್ಕಾರದ ಕಾರ್ಯ ಚಟುವಟಿಕೆಯಲ್ಲಿ ಸೋನಿಯಾ ಯಾವತ್ತೂ ಮೂಗು ತೂರಿಸುವುದಿಲ್ಲ ಎಂಬ ಹಸೀಸುಳ್ಳುಗಳನ್ನು ದಿಗ್ವಿಜಯಸಿಂಗ್ ಯಾಕಾದರೂ ಹೇಳುತ್ತಿದ್ದಾರೆ?
ಅವರೇ ವಿವರಿಸಬೇಕು...

- ಆರ್.ಜಗನ್ನಾಥನ್
ಸಂಪಾದಕರು,
ಫಸ್ಟ್ಪೋಸ್ಟ್ ಜಾಲತಾಣ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.