ಅಂಕಣಗಳು

ಗಂಡಿಲ್ಲದ ಮನೆಗೆ ಮಗನಾದಳು ಗಾಯತ್ರಿ

Published On :

ಅವಳ ಹೆಸರು ಗಾಯತ್ರಿದೇವಿ. ಮನೆಯವರೆಲ್ಲಾ ಗಾಯತ್ರಿ ಎನ್ನುತ್ತಿದ್ದರು. ಸಾಧಾರಣ ಬುದ್ಧಿವಂತೆ ಅನ್ನಿಸಿಕೊಂಡಿದ್ದ ಗಾಯತ್ರಿ ನನಗೆ ದೂರದ ಸಂಬಂಧಿ. ಈಕೆ ತನ್ನ ಹೆಸರನ್ನು ಗಾಯ3, ಗಾಘಆ3, ಗಊಾ3 ಎಂದೆಲ್ಲಾ ಬರೆಯುತ್ತಿದ್ದಳು. ಆಕೆಯೊಂದಿಗೆ ಒಂದೆರಡು ದಿನ ಕಳೆದವರಿಗೆ, ಆಕೆ ಬಗೆಬಗೆಯಲ್ಲಿ ತನ್ನ ಹೆಸರು ಬರೆಯುವುದು ಅರಿವಿಗೆ ಬರುತ್ತಿತ್ತು. ಅವಳನ್ನು ಬೀಳ್ಕೊಂಡು ಮನೆಗೆ ಬಂದವರೆಲ್ಲಾ ಗಾಯತ್ರಿ ಬಹುಬಗೆಯಲ್ಲಿ ಹೆಸರು ಬರೆಯುವುದನ್ನು ತಪ್ಪದೇ ವಿವರಿಸಿ ಹೇಳುತ್ತಿದ್ದರು. ಹುಡುಗಿ ಜಾಣೆ. ತುಂಬಾ ಚುರುಕಾಗಿದ್ದಾಳೆ ಎಂದೂ ಸೇರಿಸುತ್ತಿದ್ದರು.
ಸಂಪ್ರದಾಯಸ್ತ ಮನೆಯಿಂದ ಬಂದಾಕೆ ಗಾಯತ್ರಿ. ಆಕೆ ಸಾಧಾರಣ ಬುದ್ಧಿವಂತೆ ಎಂದು ಮೊದಲೇ ಹೇಳಿದ್ದೆನಲ್ಲ; ಹಾಗಾಗಿ, ಅವಳಿಗೆ ಎಸ್ಸೆಸ್ಸೆಲ್ಸಿ ಮುಗಿದ ನಂತರವೇ ಮದುವೆ ಮಾಡಲು ಮನೆಯಲ್ಲಿ ನಿರ್ಧರಿಸಿದರು. ಪ್ರತಿ ತಿಂಗಳೂ ಎರಡೆರಡು ಸಂಬಂಧಗಳು ಬಂದುಹೋದವು. ಆದರೆ ಸಂಬಂಧಗಳು ಕೂಡಿ ಬರಲೇ ಇಲ್ಲ. ಕಾರಣ ಎಲ್ಲರೂ ಭಾರಿ ಎನ್ನುವಷ್ಟು ವರದಕ್ಷಿಣೆಗೆ ಡಿಮ್ಯಾಂಡ್ ಮಾಡುತ್ತಿದ್ದರು. ಗಾಯತ್ರಿಯ ಪೋಷಕರು ಬಡವರಾಗಿದ್ದರು. ಹಾಗಾಗಿ, ಏನು ಮಾಡಲೂ ತೋಚದೆ ಸುಮ್ಮನೆ ಉಳಿದುಬಿಟ್ಟರು. ಹಳ್ಳಿ ಅಂದ ಮೇಲೆ ಕೇಳಬೇಕೆ? ಗಂಡಿನವರು ಒಪ್ಪಲಿಲ್ಲ ಎಂಬ ವಿಷಯವನ್ನೇ ಮುಂದಿಟ್ಟುಕೊಂಡು ಕೆಲವರು ಕೊಂಕು ನುಡಿದರು. ಇಂಥ ಮಾತುಗಳಿಂದ ಬೇಸರಗೊಂಡ ಗಾಯತ್ರಿ, ಹೆತ್ತವರಿಗೆ ಧೈರ್ಯ ಹೇಳಿ, ಮದುವೆಗೆ ಅಗತ್ಯವಿರುವ ಹಣ ಸಂಪಾದಿಸುವ ಸದಾಶಯದಿಂದಲೇ ಬೆಂಗಳೂರಿಗೆ ಬಂದು, ಗಾರ್ಮೆಂಟ್ಸ್‌ನಲ್ಲಿ ಕೆಲಸಕ್ಕೆ ಸೇರಿದಳು.
ನಂತರದ ಒಂದು ವರ್ಷದಲ್ಲಿ ಉಳಿದವರು ಹಾಗಿರಲಿ, ಗಾಯತ್ರಿಯೇ ನಿರೀಕ್ಷಿಸಿರದಂಥ ಘಟನೆಗಳು ನಡೆದು ಹೋದವು. ಮೊದಲನೆಯದಾಗಿ ಆಕೆಗೆ ಬೇರೊಂದು ಜಾತಿಯ ಹುಡುಗನೊಂದಿಗೆ ಮದುವೆಯಾಯಿತು. ಆತ ಅಪ್ಪ-ಅಮ್ಮನ ಒಬ್ಬನೇ ಮಗ. ಅದೊಮ್ಮೆ ತೀರಾ ಆಕಸ್ಮಿಕವಾಗಿ ಬಿಟಿಎಸ್ ಬಸ್ಸಿನಲ್ಲಿ ಗಾಯತ್ರಿಯ ಪರಿಚಯವಾಯಿತಂತೆ. ಮುಂದೆ ಸ್ನೇಹ ಮುಂದುವರಿದಂತೆಲ್ಲ, ಈಕೆಯ ಹಿನ್ನೆಲೆ, ಮನೆ ಮಂದಿಯ ಅಸಹಾಯಕ ಪರಿಸ್ಥಿತಿ ತಿಳಿದು ಆತ ಕರಗಿದನಂತೆ. ತಾನೇ ಮುಂದಾಗಿ ಮದುವೆಯ ಪ್ರಸ್ತಾಪ ಮಾಡಿದನಂತೆ. ಮದುವೆಯ ನಂತರ ನಮ್ಮ ಪೋಷಕರು ಸಿಟ್ಟಾಗಬಹುದು. ಅದಕ್ಕೆಲ್ಲ ಹೆದರಬೇಡ. ಚಿಂತಿಸಬೇಡ. ಏನೇ ಆದರೂ ನನನ್ನನ್ನು ಬಿಟ್ಟು ಅಪ್ಪ-ಅಮ್ಮ ಬದುಕಲಾರರು. ಒಂದೆರಡು ವರ್ಷಗಳಲ್ಲಿ ಎಲ್ಲವೂ ಸರಿಯಾಗುತ್ತದೆ ಎಂದು ಹೇಳಿಯೇ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಮದುವೆಯಾದನಂತೆ.
ಮದುವೆಯ ಸುದ್ದಿ ತಿಳಿಯುತ್ತಿದ್ದಂತೆಯೇ ಗಾಯಿತ್ರಿಯ ಅತ್ತೆ-ಮಾವ ಮೊದಲು ಮಗನ ಮನೆಗೆ ಹೋಗಿ ಜಗಳ ಮಾಡಿದರು. ಸೊಸೆಯನ್ನು, ಮಾಟಗಾತಿ ಎಂದರು. ನಮ್ಮ ಮಗನನ್ನು ಬಲೆಗೆ ಹಾಕ್ಕೊಂಡ್ಯೇನೇ ಬಿನ್ನಾಣಗಿತ್ತಿ ಎಂದೆಲ್ಲಾ ಹಂಗಿಸಿದರು. ಅಷ್ಟಕ್ಕೇ ಸುಮ್ಮನಾಗದೆ, ಆಕೆಯ ತವರಿಗೂ ಹೋಗಿ, ಅಲ್ಲಿ ಊರಿನ ಎಲ್ಲರ ಮುಂದೆಯೂ ಗಾಯಿತ್ರಿಯ ವಂಶದವರನ್ನೆಲ್ಲ ಹಂಗಿಸಿ, ಬಾಯಿಗೆ ಬಂದಂತೆ ಬಯ್ದರು. ಇಷ್ಟಾದ ಮೇಲೆ, ಮಗನಿಗೆ ಫೋನ್ ಮಾಡಿ, ನಮ್ಮ ಪಾಲಿಗೆ ನೀನು ಸತ್ತು ಹೋಗಿದೀಯ ಕಣೋ. ಇನ್ನು ಮುಂದೆ ನೀನು ಊರಿಗೆ ಬರೋದೇ ಬೇಡ ಎಂದುಬಿಟ್ಟರು. ಈ ವರ್ತಮಾನವೆಲ್ಲಾ ಅಮ್ಮನೊಂದಿಗೆ ಫೋನ್‌ನಲ್ಲಿ ಮಾತಾಡುವಾಗ ನನ್ನನ್ನು ತಲುಪುತ್ತಿತ್ತು. ಹೀಗೇ ಎರಡು ವರ್ಷ ಕಳೆದವು. ಗಾಯಿತ್ರಿಯ ಗಂಡ, ಅಪ್ಪ-ಅಮ್ಮನಿಂದ ದೂರವೇ ಉಳಿದಿದ್ದ. ಈ ಸಂದರ್ಭದಲ್ಲೇ ಅವರ ಬದುಕಲ್ಲಿ ಪುಟ್ಟ ಕಂದನ ಪ್ರವೇಶವಾಗಿತ್ತು. ಮೊಮ್ಮಗು ಬಂದಿದೆ ಎಂಬ ಸುದ್ದಿ ತಿಳಿದೊಡನೆ ಗಾಯತ್ರಿಯ ಅತ್ತೆ-ಮಾವ ಮುನಿಸು ಮರೆತರು. ಬೆಂಗಳೂರಿಗೆ ಬಂದು ಹೋದರು. ಸೊಸೆಯ ಕ್ಷೇಮ ವಿಚಾರಿಸಿದರು. ಈ ಬೆಳವಣಿಗೆಯಿಂದ ಗಾಯತ್ರಿಯ ಗಂಡನೂ ಖುಷಿಯಾದ. ಮಗುವಿನ ಮೊದಲ ಹುಟ್ಟು ಹಬ್ಬವನ್ನು ಊರಲ್ಲಿಯೇ ಆಚರಿಸಲು ನಿರ್ಧರಿಸಿ, ಆಹ್ವಾನ ಪತ್ರಿಕೆಗಳನ್ನು ಪ್ರಿಂಟ್ ಮಾಡಿಸಿಕೊಂಡು ಬರುತ್ತಿದ್ದಾಗಲೇ, ಆಕಸ್ಮಿಕವಾಗಿ ಚಲಿಸುತ್ತಿದ್ದ ಬಸ್‌ನಿಂದ ಜಾರಿ ಬಿದ್ದು ಸತ್ತೇ ಹೋದ. ಎಲ್ಲರ ಪಾಲಿಗೂ ಇದು ಬಹು ದೊಡ್ಡ ಶಾಕ್.
ಪರಿಸ್ಥಿತಿ ಹೀಗಿದ್ದಾಗ, ಗಟ್ಟಿಯಾಗಿ ನಿಂತವಳು ಗಾಯತ್ರಿ. ಆಕೆ ಸೀದಾ ಗಂಡನ ಮನೆಗೆ ಬಂದಳು. ಪುಟ್ಟ ಮಗುವನ್ನು ಅತ್ತೆ-ಮಾವನ ಮಡಿಲಿಗಿಟ್ಟು- 'ಅವರು' ಇಲ್ಲ ಅಂತ ಯೋಚಿಸಬೇಡಿ. ಇವತ್ತಿನಿಂದ ನನಗೆ ನೀವೇ ತಂದೆ-ತಾಯಿ. ನಿಮ್ಮನ್ನು ಜೋಪಾನವಾಗಿ ನೋಡ್ಕೋತೀನಿ' ಎಂದಳು. ಮುಂದೆ ಅತ್ತೆ-ಮಾವನಿಗೆ ಮೇಲಿಂದ ಮೇಲೆ ಆರೋಗ್ಯ ಕೆಟ್ಟಾಗ ಅವರಿಗೆ ಸೂಕ್ತ ಚಿಕಿತ್ಸೆ ಕೊಡಿಸಿದಳು. ಊರಿನ ಹಿರಿಯರೊಂದಿಗೆ ತಮ್ಮ ಕುಟುಂಬದ ಕಷ್ಟ ಹೇಳಿಕೊಂಡಳು. ನನ್ನನ್ನು ನಿಮ್ಮ ಮಗಳು ಅಂದ್ಕೊಳ್ಳಿ, ಕೈ ಬಿಡಬೇಡಿ ಎಂದು ನೆರವಿಗಾಗಿ ಪ್ರಾರ್ಥಿಸಿದಳು.
ಈ ಹುಡುಗಿಯ ಪ್ರಾರ್ಥನೆಗೆ ಹಳ್ಳಿಯ ಜನ ಕರಗಿದರು. ಬಿಡುವಿನ ಸಂದರ್ಭದಲ್ಲಿ ಮನೆಗೆ ಒಬ್ಬರಂತೆ ಬಂದು ಕೃಷಿ ಕಾರ್ಯದಲ್ಲಿ ನೆರವಾದರು. ಗಾಯತ್ರಿ ಗಂಡಸಿಗಿಂತ ಹೆಚ್ಚಾಗಿ ದುಡಿದಳು. ತನ್ನ ಸಂಕಟ ಹೇಳಿಕೊಳ್ಳದೆ ಅತ್ತೆ-ಮಾವಂದಿರ ಕಂಬನಿ ಒರೆಸುತ್ತಾ ಉಳಿದು ಬಿಟ್ಟಳು. ಜೊತೆಗಿದ್ದವರು ಎರಡನೇ ಮದುವೆಯ ಪ್ರಸ್ತಾಪ ಮಾಡಿದಾಗ, ಅದೆಲ್ಲಾ ನನ್ನ ಹಣೇಲಿ ಬರೆದಿಲ್ಲ. ಮಗಳನ್ನು ಚೆನ್ನಾಗಿ ಓದಿಸಬೇಕು. ಅಪ್ಪ-ಅಮ್ಮನನ್ನು ಚೆನ್ನಾಗಿ  ನೋಡ್ಕೋಬೇಕು ಎಂಬುದಷ್ಟೇ ನನ್ನ ಗುರಿ ಎಂದಳು. ಈ ಮಾತು ಕೇಳಿದ ಅವಳ ಅತ್ತೆ-ಮಾವ- ಇಂಥ ಹುಡುಗೀನ ನಾವು 'ಬೇಡ' ಅಂದಿದ್ದೆವಲ್ಲಾ ಎಂದು ಕೆನ್ನೆಕೆನ್ನೆ ಬಡಿದುಕೊಂಡಿದ್ದರು. 'ಗಾಯತ್ರಿಯ ಮಗಳಿಗೆ ಈಗ ಐದು ವರ್ಷ. ಯುಗಾದಿಗೆ ಅಮ್ಮ-ಮಗಳು ಊರಿಗೆ ಬರ್ತಾರೆ. ಇಬ್ರಿಗೂ ಹೊಸಾ ಬಟ್ಟೆ ತಗೊಂಡ್ಬಾ ಎಂದು ಅಮ್ಮ ನಿನ್ನೆ ಫೋನ್ ಮಾಡಿ ಹೇಳಿದಳು. ನಾಳೆ ಶಾಪಿಂಗ್‌ಗೆ ಹೋಗಬೇಕು. ಅವರಿಗೆ ಯಾವ ಕಲರ್‌ನ ಬಟ್ಟೆ ತೆಗೆಯಲಿ?

- ನಾನು ಪ್ರಣತಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.