ಅಂಕಣಗಳು

ಸೈಬರ್ ಯುದ್ಧಕ್ಕೆ ಸಿದ್ಧವಿದೆಯೇ ಭಾರತ?

Published On :

ಭಾರತ ಜಾಗತಿಕ ಅನುಕ್ರಮದಲ್ಲಿ ಉತ್ತಮ ಸ್ಥಾನ ಪಡೆದುಕೊಳ್ಳುವತ್ತ ಸಾಗುತ್ತಿದೆ. ಅದು ಏಳ್ಗೆಯಾಗುತ್ತಿರುವ ಕಾರಣದಿಂದಲೇ ಸೈಬರ್ ದಾಳಿಯ ಪ್ರಮುಖ ಗುರಿಯಾಗುತ್ತಿದೆ ಎನ್ನುತ್ತದೆ ಗುಪ್ತಚರ ದಳದ ಒಂದು ವರದಿ.
ಇತ್ತೀಚೆಗೆ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ(ಡಿಆರ್‌ಡಿಒ)ಯ ಮೇಲೆ ನಡೆದಿರುವ ಹ್ಯಾಕಿಂಗ್ ಯಾರೋ ಪೋಲಿ ಮಕ್ಕಳ ತುಂಟಾಟವಲ್ಲ. ಬದಲಾಗಿ, ಇದು ಪೂರ್ಣ ಪ್ರಮಾಣದ ಸೈಬರ್ ಯುದ್ಧ ಎಂದು ಎಚ್ಚರಿಸುತ್ತದೆ ಆ ವರದಿ. ಕೋ ಆಪರೇಟಿವ್ ಸೈಬರ್ ಡಿಫೆನ್ಸ್ ಸೆಂಟರ್ ಆಫ್ ಎಕ್ಸಲೆನ್ಸ್(ಸಿಸಿಡಿಸಿಒಇ) ಎನ್ನುವ ತನ್ನ ಕೈಪಿಡಿಯಲ್ಲಿ ನ್ಯಾಟೋ,, ಸೈಬರ್ ದಾಳಿಯನ್ನು 'ವ್ಯಕ್ತಿಗಳಿಗೆ ಪ್ರಾಣಾಂತಿಕವಾಗಬಲ್ಲ ಅಥವಾ ವಸ್ತುಗಳನ್ನು ನಾಶಮಾಡಬಲ್ಲ ಕಾರ್ಯ' ಎಂದು ಉಲ್ಲೇಖಿಸಿದೆ.
'ಪ್ರಜೆಗಳ ಮೇಲೆ, ಆಸ್ಪತ್ರೆಗಳ ಮೇಲೆ ಮತ್ತು ಪರಮಾಣು ಸ್ಥಾವರ ಕೇಂದ್ರಗಳ ಮೇಲೆ ಸೈಬರ್ ದಾಳಿಯಿಂದಾಗಬಹುದಾದ ದಾಳಿಯ ಬಗ್ಗೆ ಸರ್ಕಾರಗಳು ಎಚ್ಚರಿಕೆ ವಹಿಸಬೇಕು' ಎಂದು ಆ ಕೈಪಿಡಿ ಹೇಳುತ್ತದೆ.  'ಡಿಆರ್‌ಡಿಒದ ದಾಖಲೆಗಳನ್ನು ಹ್ಯಾಕ್ ಮಾಡುವ ಮೂಲಕ ನಿರ್ಣಾಯಕ ಮಾಹಿತಿಗಳನ್ನು ಪಸರಿಸಲಾಯಿತು. ಹಾಗಾಗೇ ಈ ಪ್ರಯತ್ನವನ್ನು ಸೈಬರ್ ಯುದ್ಧವೆಂದೇ ಪರಿಗಣಿಸಬೇಕು' ಎಂದು ಹೇಳುತ್ತಾರೆ ಸೈಬರ್ ಕಾನೂನಿನ ವಿಶೇಷಜ್ಞ ಪವನ್ ದುಗ್ಗಲ್. ಆದರೆ ನಮ್ಮ 'ಪ್ರಾಚೀನ' ಮಾಹಿತಿ ತಂತ್ರಜ್ಞಾನದ ಕಾನೂನಿನಲ್ಲಿ ಸೈಬರ್ ಯುದ್ಧದ ಬಗ್ಗೆ ಉಲ್ಲೇಖವೇ ಇಲ್ಲ! ಭಾರತ ಮತ್ತು ಇನ್ನಿತರ ದೇಶಗಳು ಈ ವಿಷಯದಲ್ಲಿ ಈಗಲಾದರೂ ತೂಕಡಿಸುವುದನ್ನು ಬಿಟ್ಟು, ಸೈಬರ್ ಅಪರಾಧಗಳನ್ನು ತಡೆಯುವ ನಿಟ್ಟಿನಲ್ಲಿ ಅಂತಾರಾಷ್ಟ್ರೀಯ ಒಪ್ಪಂದಕ್ಕೆ ಸಹಿಹಾಕಬೇಕಿದೆ. ಈ ಯುದ್ಧದಿಂದಾಗಿ ಎಷ್ಟೊಂದು ಹಾನಿಯಾಗಬಹುದೆಂಬುದನ್ನು ಅರಿತುಕೊಳ್ಳಲು 'ಎಸ್ಟೋನಿಯಾ' ರಾಷ್ಟ್ರದತ್ತ ನೋಡಬೇಕು ಎಂದು ದುಗ್ಗಲ್ ಹೇಳುತ್ತಾರೆ- 'ರಷ್ಯಾ ನಡೆಸಿದೆ ಎಂದು ಹೇಳಲಾಗುವ ಈ ದಾಳಿಯಿಂದಾಗಿ ಆ ದೇಶದ ಆರ್ಥಿಕ ಸ್ಥಿತಿ ಒಂದು ವಾರದ ವರೆಗೆ ಸ್ಥಗಿತವಾಗಿ ಹೋಗಿತ್ತು.'
ಇಂಥದ್ದೇ ದಾಳಿಯೇನಾದರೂ ಭಾರತದ ಮೇಲೆ ಘಟಿಸಿದರೆ, ದಾಳಿಯ ಸ್ವರೂಪವನ್ನು ಅಳೆಯುವಲ್ಲಿ, ಆದ ನಷ್ಟವನ್ನು ಸರಿದೂಗಿಸುವುದರಲ್ಲೇ ವಾರಗಳವರೆಗೆ ನಮ್ಮ ಸಂಸ್ಥೆಗಳು ಹೆಣಗಾಡಲಿವೆ. ಸೈಬರ್ ಯುದ್ಧವಾದರೆ ಪ್ರತಿಯೊಬ್ಬ ಪಾಲುದಾರರು ಮಾಡಬೇಕಾದ ಕೆಲಸವೇನು ಎನ್ನುವುದರ ಬಗ್ಗೆ ಇದುವರೆಗೂ ನಮ್ಮ ಸರ್ಕಾರ ಒಂದು ಸ್ಪಷ್ಟ ರಾಷ್ಟ್ರೀಯ ನೀತಿಯನ್ನು ರೂಪಿಸಿಲ್ಲ. ಇಂತಹ ಸಮಸ್ಯೆಗಳನ್ನು ತಡೆಗಟ್ಟಬಲ್ಲ ಹ್ಯಾಕರ್‌ಗಳ ನೇಮಕಾತಿಯೂ ನಮ್ಮಲ್ಲಿ ಆಗುತ್ತಿಲ್ಲ.
ಭಾರತದ ವಿರುದ್ಧ ಸೈಬರ್ ಯುದ್ಧ ಸಾರಿ ಅಪಾಯ ತಂದೊಡ್ಡಬಲ್ಲ ಪ್ರಮುಖ ರಾಷ್ಟ್ರ 'ಚೀನಾ' ಎಂದು ಪರಿಣತರು ಹೇಳುತ್ತಾರೆ. ಕಳೆದ ಒಂದೂವರೆ ವರ್ಷಗಳಿಂದ ಸರ್ಕಾರಿ ಪೋಷಿತ ಚೀನಿ ಹ್ಯಾಕರ್‌ಗಳು ಭಾರತದ ಸಾಫ್ಟವೇರ್‌ಗಳ ಮೇಲೆ ನಿರಂತರವಾಗಿ ದಾಳಿ ಮಾಡುತ್ತಲೇ ಇದ್ದಾರೆ. ಚೀನಿ ಹ್ಯಾಕರ್‌ಗಳು ತುಂಬಾ ಅಚ್ಚುಕಟ್ಟಾಗಿ ಭಾರತದ ಅಧಿಕೃತ ಜಾಲದ ಬಗ್ಗೆ ಸೂಕ್ಷವಾಗಿ ಅರಿತುಕೊಳ್ಳುತ್ತಿದ್ದಾರೆ ಎನ್ನುವ ವಿಷಯ ತನಿಖೆಗಳಿಂದ ತಿಳಿದುಬಂದಿದೆ. ಬೋಟ್ಸ್ ಮತ್ತು ಕೀ ಲಾಗರ್ಸ್‌ಗಳ ಮೂಲಕ ನಮ್ಮ ಸಾಫ್ಟವೇರ್ ಜಾಲಗಳನ್ನು ಅವರು ಗುರಿಯಾಗಿಸಿಕೊಳ್ಳುತ್ತಿದ್ದಾರೆ. ಇನ್ನು ಚೀನೀ ಹ್ಯಾಕರ್‌ಗಳು ನ್ಯಾಷನಲ್ ಇನ್ಫಾರ್ಮೆಟಿಕ್ಸ್ ಸೆಂಟರ್, ವಿದೇಶಾಂಗ ಸಚಿವಾಲಯ ಮತ್ತು ರಾಷ್ಟ್ರೀಯ ಭದ್ರತಾ ಮಂಡಳಿಯನ್ನೂ ಅದಾಗಲೇ ಗುರಿಯಾಗಿಸಿಕೊಂಡಿದ್ದಾರಾ ಎಂಬ ಅನುಮಾನ ಭುಗಿಲೆದ್ದಿದೆ.  ಇಂತಹ ದಾಳಿಗಳನ್ನು ಹೇಗೆ ತಡೆಯಬೇಕು ಎನ್ನುವ ಬಗೆಗಿನ ಕೆಲವು ಪಾಠಗಳನ್ನು ಭಾರತೀಯ ಅಧಿಕಾರಿಗಳು ಸಿಸಿಡಿಸಿಒಇಯ ಕೈಪಿಡಿಯಿಂದ ಕಲಿಯಬೇಕಿದೆ.

- ವಿಕಿ ನಂಜಪ್ಪ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.