ಅಂಕಣಗಳು

ಹವಾಮಾನ ವೈಪರೀತ್ಯದಿಂದ ಕೃಷಿಗೆ ಬರಲಿರುವ ಗಂಡಾಂತರಗಳು

Published On :

ಬಹುಮುಖ್ಯವಾದ ಹವಾಮಾನ ವೈಪರೀತ್ಯವೆಂದರೆ ಈಗಾಗಲೇ ಆಗುತ್ತಿರುವ ಮತ್ತೆ ಭವಿಷ್ಯದಲ್ಲಿ ಕಾಡಲಿರುವ ಗಂಡಾಂತರವೆಂದರೆ, ತಾಪಮಾನ ಏರಿಕೆ. ಇದೊಂದೇ ಕಾರಣಕ್ಕಾಗಿ ಕೃಷಿಯ ಮೇಲೆ ಸಂಭವಿಸಲಿರುವ ಗಂಡಾಂತರವೆಂದರೆ ನೀರಿಲ್ಲದ ಕ್ಷಾಮ. ಪ್ರಪಂಚದ ಎಲ್ಲಾ ದೇಶಗಳಿಗಿಂತ ಮಿಗಿಲಾಗಿ ಬವಣೆ ಪಡುವ ದೇಶವೆಂದರೆ ನಮ್ಮ ದೇಶ ಭಾರತ.ಈಗಾಗಲೇ ಉಪಗ್ರಹಗಳ ವೀಕ್ಷಣೆಯಿಂದ ಕಾಣಬರುವಂತೆ ಸಿಗುವುದು ಮಧ್ಯ ಮತ್ತು ಉತ್ತರ ಭಾರತದ ಅತ್ಯಂತ ಘೋರವಾದ ನೀರಿಲ್ಲದ ನಕ್ಷೆ. ಹಾಗೆಂದು ದಕ್ಷಿಣ ಭಾರತೀಯರು ನಮಗೇನೂ ತೊಂದರೆ ಇರುವುದಿಲ್ಲ ಎಂದು ಸಮಾಧಾನಪಟ್ಟುಕೊಳ್ಳಬೇಕಾಗಿಲ್ಲ. ಕಾವೇರಿ ನೀರಿನ ಹೊಡೆದಾಟದ ಜೊತೆಗೆ ನಿಜವಾಗಲೂ ಇನ್ನು ಮುಂದೆ ಕಾವೇರಿ ನದಿಯಲ್ಲಿ ನೀರು ಸಿಗುವುದೇ ಎಂಬುದೇ ಪ್ರಮುಖ ಪ್ರಶ್ನೆಯಾಗುತ್ತೆ. ನಮ್ಮ ದೇಶದ ನೀರಿನ ಬವಣೆ ಬಗ್ಗೆ ರಾಧಾಕೃಷ್ಣ ಭಡ್ತಿಯವರು ವಾರ-ವಾರ ತಮ್ಮ ಅಂಕಣದಲ್ಲಿ ಬರೆಯುತ್ತಲೇ ಇರುತ್ತಾರೆ.
ಕ್ಷಾಮದಿಂದ ಕೃಷಿ ಬಸವಳಿಯುವುದು ಎಲ್ಲಾ ರೈತರಿಗೂ ಗೊತ್ತಿರುವ ವಿಷಯವೇ ಸರಿ. ಭಾರತದ ಕೃಷಿಯಲ್ಲಿ ಪ್ರತಿಶತ ಎಪ್ಪತ್ತು ಭಾಗ ಮಳೆ ನೀರನ್ನು ಅವಲಂಬಿಸಿದೆ. ಮುಂಗಾರು ಪದೇ ಪದೆ ಕೈ ಕೊಡುವುದು ಸಾಮಾನ್ಯವಾಗಿ ಬಿಟ್ಟಿದೆ. ಮತ್ತೊಂದು ಮುಖ್ಯ ಅಂಶವೆಂದರೆ, ಕೃಷಿಗಾಗಿ ಶೇಕಡಾ 80ರಿಂದ 90ರಷ್ಟು ಸಾಮಾನ್ಯ ನೀರು ಉಪಯೋಗಿಸಲಾಗುತ್ತಿದೆ. ಸದ್ಯಕ್ಕೆ ಸಮುದ್ರದ ನೀರಿನಿಂದ ಕೃಷಿ ಮಾಡಲಾಗುವುದಿಲ್ಲ. ಆದರೆ, ಡಾ. ಸ್ವಾಮಿನಾಥನ್ ರಿಸರ್ಚ್ ಫೌಂಡೇಷನ್‌ನಲ್ಲಿ, ಸುಮಾರು ಹತ್ತು ವರ್ಷಗಳಿಂದ ಸಮುದ್ರದ ತೀರಗಳಲ್ಲಿ ಬೆಳೆಯುವ ಕಾಂಡ್ಲ  (Mangrove) ಸಸ್ಯಗಳಿಂದ ಬೇರ್ಪಡಿಸಿದ ಉಪ್ಪಿನ ನೀರಿನಲ್ಲಿ ಬೆಳೆಯಬಹುದಾದ ಗುಣಾಣುಗಳನ್ನು ಭತ್ತದ ತಳಿಗೆ ಸೇರಿಸಿ ಕುಲಾಂತರಿ ತಳಿಗಳನ್ನು ತಯಾರಿಸಿ ಬೇಕಾದಷ್ಟು ಜಾಗಗಳಲ್ಲಿ ಪ್ರಯೋಗ ಮಾಡಿದ್ದಾರೆ. ಈ ತರಹದ ಕುಲಾಂತರಿ ತಳಿಗಳು ರೈತರ ಉಪಯೋಗಕ್ಕೆ ತಯಾರಿವೆ. ಆದರೆ ಎಲ್ಲರಿಗೂ ಗೊತ್ತಿರುವ ಕಾರಣಾಂತರಗಳಿಂದ ಮಾರುಕಟ್ಟೆಗೆ ಬರಲು ಸಾಧ್ಯವಾಗುತ್ತಿಲ್ಲ. ಕುಲಾಂತರಿ ತಂತ್ರಜ್ಞಾನವಿಲ್ಲದೆ ಲವಣಾಂಶವಾದ ಮಣ್ಣಿನಲ್ಲಿ ಬೆಳೆಯುವ ತಳಿಗಳನ್ನು ಸೃಷ್ಟಿಸುವುದಕ್ಕೆ ಸಾಧ್ಯವೇ ಇಲ್ಲ. ಆದರೆ ಏನು ಮಾಡುವುದು. ಕಣ್ಣಿನ ಮುಂದೆ ಬೇಕಾದಂತಹ ತಳಿ ಇಟ್ಟುಕೊಂಡು ಅಳುವುದೇ ಕೆಲಸ. ಈ ಕುಲಾಂತರಿ ತಳಿ ತಯಾರು ಮಾಡುವುದಕ್ಕೆ ನೂರಾರು ಕೋಟಿ ರೂಪಾಯಿಗಳಷ್ಟು ಅನುದಾನವನ್ನು ಕೇಂದ್ರ ಸರ್ಕಾರದಿಂದ ಖರ್ಚು ಮಾಡಲಾಗಿದೆ.
ಹವಾಮಾನ ವೈಪರೀತ್ಯದಿಂದ ಮಗದೊಂದು ಮುಖ್ಯವಾದ ಪರಿಣಾಮವೆಂದರೆ, ನೈಸರ್ಗಿಕ ಜೈವಿಕ ವೈವಿಧ್ಯತೆಯ ನಾಶ. ಲಾಗಾಯ್ತಿನಿಂದಲೂ ಜೈವಿಕ ವೈವಿಧ್ಯತೆಯ ನಾಶಕ್ಕೆ ಒಂದೇ ಒಂದು ಮುಖ್ಯ ಕಾರಣವೆಂದರೆ, ಪರಿಸರ ನಾಶ. ಹವಾಮಾನ ವೈಪರೀತ್ಯದಿಂದ ಖಂಡಿತವಾಗಿ ಜೈವಿಕ ವೈವಿಧ್ಯತೆ ನಾಶವಾಗಿ, ಕೃಷಿಗೆ ಅಳೆಯಲಾರದಷ್ಟು ಪೆಟ್ಟು ಬೀಳಲಿದೆ. ಮುಖ್ಯವಾಗಿ, ಪ್ರಪಂಚದ ಉಷ್ಣ ವಲಯಗಳಲ್ಲಿ ಆಗುವ ಕೃಷಿ ತಳಿಗಳ ನಾಶ. ಈ ವಿಷಯ ಈಗಾಗಲೇ ತಿಳಿದಿರುವುದರಿಂದ, ಅತ್ಯಂತ ಆಧುನಿಕ ಜೈವಿಕ ತಂತ್ರಜ್ಞಾನವನ್ನು ಉಪಯೋಗಿಸಿ, ತಳಿಗಳ ಸಂರಕ್ಷಣಾ ಕಾರ್ಯ ಆರಂಭವಾಗಿದೆ. ಆದರೆ ಆಧುನಿಕ ತಂತ್ರಜ್ಞಾನವೇ ಬೇಡ ಎಂದು ಹಟ ಮಾಡಿದರೆ, ಎಲ್ಲಾ ತಳಿಗಳನ್ನು ಕಳೆದುಕೊಳ್ಳಬೇಕಾಗುತ್ತದೆ.
ಪ್ರಪಂಚದ ನಂಬರ್ ಒನ್ ಎಂದು ಪ್ರಖ್ಯಾತಿ ಗಳಿಸಿರುವ ಬೆಳೆ ಎಂದರೆ ಭತ್ತ. ಭತ್ತ ಪ್ರಪಂಚದ 128 ಉಷ್ಣ ವಲಯದ ದೇಶಗಳಲ್ಲಿ ಬೆಳೆಯಲಾಗುತ್ತಿದೆ. ಹಾಗೆಯೇ ಪ್ರಪಂಚದ, ಅದರಲ್ಲೂ ಉಷ್ಣವಲಯದ ಭಾರತ ದೇಶದಲ್ಲಿ ಜನಸಂಖ್ಯೆ ಹೆಚ್ಚಾಗಿ, ಹೆಚ್ಚು-ಹೆಚ್ಚು ಆಹಾರ ಧಾನ್ಯಗಳ ಬೇಡಿಕೆ ಈಡೇರಿಸುವುದಕ್ಕಾಗಿ ಕೃಷಿ ಮಾಡುವ ಜಮೀನನ್ನು ಹೆಚ್ಚುಗೊಳಿಸಬೇಕಾಗಿದೆ. ಸದ್ಯಕ್ಕೆ, ಭಾರತದಲ್ಲಂತೂ ಕೃಷಿ ಜಮೀನು ಹೆಚ್ಚುವರಿ ಮಾಡುವುದಕ್ಕಿರಲಿ, ವಸತಿಗೂ ಸಾಧ್ಯವಾಗಲಾರದು. ಅಂದರೆ, ಸದ್ಯಕ್ಕೆ ಇರುವ ಕೃಷಿ ಭೂಮಿಯಲ್ಲಿ ಬೆಳೆಯುತ್ತಿರುವ ಜನಸಾಗರಕ್ಕೆ ಒದಗುವಂತಹ ಆಹಾರ ಧಾನ್ಯ ಬೆಳೆಯಾಗಬೇಕು. ಅದು ಸದ್ಯದಲ್ಲಿರುವ ತಂತ್ರಜ್ಞಾನದಿಂದ ಸಾಧ್ಯವಿಲ್ಲ. ಆಧುನಿಕ ತಂತ್ರಜ್ಞಾನಗಳಾದ ಜೈವಿಕ ತಂತ್ರಜ್ಞಾನ ಮತ್ತು ಕೃತಕ ಸಂಯೋಗದ ಜೀವಶಾಸ್ತ್ರಗಳನ್ನು ಅಳವಡಿಸಿಕೊಳ್ಳಲೇ ಬೇಕು.
ಭಾರತವನ್ನು ಬೇರ್ಪಡಿಸಿ, ಬೇರೆ ಉಷ್ಣ ವಲಯ ದೇಶಗಳಲ್ಲಿ ಸರಾಸರಿ 48,000 ಚದರ ಕಿ.ಮಿ. ನಷ್ಟು ಭೂಮಿಯನ್ನು ಒಂದು ವರ್ಷಕ್ಕೆ ಹೆಚ್ಚುವರಿ ಮಾಡಲಾಗಿದೆ. ಭತ್ತ, ಜೋಳ, ಮುಸುಕಿನ ಜೋಳ, ಎಣ್ಣೆ ತಾಳೆಮರ, ಹುರುಳಿಕಾಯಿ, ಕಬ್ಬು, ಬೇಳೆ, ಗೋಧಿ, ಕೆಸಾವ ಜೊತೆಗೆ ಸೋಯಾ ಬೆಳೆಗಳನ್ನು ಬೆಳೆಸುವ ಜಮೀನು ಮಾತ್ರ ಹೆಚ್ಚುವರಿಯಾಗಿದೆ. ಆದರೆ ಭತ್ತ ಮಾತ್ರ ಸೇರಿಲ್ಲ. ಇದರಿಂದ ತಿಳಿದು ಬರುವ ವಿಷಯವೆಂದರೆ, ಅತ್ಯಂತ ಇಳುವರಿ ಕೊಡುವ ಜಮೀನುಗಳನ್ನು ಕೃಷಿಯಲ್ಲದೇ ಬೇರೆ, ಬೇರೆ ಕಾರಣಗಳಿಂದಾಗಿ ಪರಿವರ್ತನೆಯಾಗುತ್ತದೆ. ಹಾಗಾಗಿ, ಕಡಿಮೆ ಜಮೀನಿನಲ್ಲಿ ಅತ್ಯಂತ ಅಧಿಕವಾಗಿ ಬೆಳೆ ಬೆಳೆಯಬೇಕಾಗುತ್ತದೆ. ಮುಂಬರುವ ಕೃಷಿ ಕ್ರಮಗಳು ಖಂಡಿತ, ಅತ್ಯಂತ ವೈಜ್ಞಾನಿಕವಾಗಿಯೂ ಮತ್ತು ಅತ್ಯಂತ ತಂತ್ರಜ್ಞಾನಯುತವಾಗಿಯೂ ಬೆಳೆಯಬೇಕಾಗುತ್ತದೆ. ಹಾಗಾಗಿ, ಮುಂಬರುವ ದಶಕಗಳಲ್ಲಿ, ಕೃಷಿಯನ್ನು ಸಾಂದ್ರತೆಯಾನುಸಾರವಾಗಿ ಬೆಳೆಯಬೇಕಾದರೆ, ಆಧುನಿಕ ತಂತ್ರಜ್ಞಾನ ಬಿಟ್ಟು ಬೇರೆ ದಾರಿಯೇ ಇರುವುದಿಲ್ಲ. ಯಾರು ಏನೇ ಹೇಳಲಿ ಅಥವಾ ಕೂಗಾಡಲಿ, ವಿಜ್ಞಾನ ಮತ್ತು ತಂತ್ರಜ್ಞಾನ ಬಿಟ್ಟು ಭವಿಷ್ಯದಲ್ಲಿ ಕೃಷಿ ಮಾಡಲಾಗುವುದಿಲ್ಲ. ನಮ್ಮ ದೇಶದ ರೈತರನ್ನು ಆಧುನಿಕ ವಿಜ್ಞಾನ ಮತ್ತು ತಂತ್ರಜ್ಞಾನದತ್ತ ಈಗಿನಿಂದಲೇ ಕೊಂಡೊಯ್ಯಬೇಕಾಗಿದೆ.
ಕೃಷಿಯಂತಹ ಉದ್ಯಮದಲ್ಲಿ ಬದಲಾವಣೆಗಳು ಕಂಡು ಬರುವುದು ಬಹಳ ವಿರಳ. ಯಾವುದೇ ತಂತ್ರಜ್ಞಾನವಾಗಲಿ, ಅದನ್ನು ಕೃಷಿಯಲ್ಲಿ ಅಳವಡಿಸಿಕೊಳ್ಳಬೇಕಾದರೆ, ದಶಕಗಳೇ ಬೇಕಾಗುತ್ತದೆ. ಹಾಗಾಗಿ, ಬದಲಾವಣೆಗಾಗಿ ಈಗಾಗಲೇ ಪ್ರಕ್ರಿಯೆ ಆರಂಭ ಮಾಡಿಕೊಳ್ಳಬೇಕು. ಕಾಲ ಯಾರನ್ನೂ ಕಾಯುವುದಿಲ್ಲ. ಈಗಾಗಲೇ ಅಮೆರಿಕದಲ್ಲಿ ಕ್ಷಾಮವನ್ನು ತಡೆದುಕೊಳ್ಳುವ ಕುಲಾಂತರಿ ಮೆಕ್ಕೆ ಜೋಳವನ್ನು ರೈತರಿಗೆ ಬಿಡುಗಡೆಗೊಳಿಸಲಾಗಿದೆ. ಅದರಿಂದ ರೈತರು ಸಾಕಷ್ಟು ಲಾಭ ಪಡೆಯುತ್ತಿದ್ದಾರೆ. ಬಿಸಿಲುಗಾಲದಲ್ಲಿ, ಮಧ್ಯಂತರ ಅಮೆರಿಕದಲ್ಲಿ ಬಿಸಿಲಿನ ಬೇಗೆ ತಡೆಯಲಾಗುವುದಿಲ್ಲ ಮತ್ತು ನೀರಿನ ಅಭಾವ ಅತಿಯಾಗುತ್ತದೆ. ಆಧುನಿಕ ತಂತ್ರಜ್ಞಾನದಿಂದ ಆವಿಷ್ಕಾರವಾದ ತಳಿಗಳನ್ನು ಉಷ್ಣವಲಯದ ರೈತರು ಯಾಕಾಗಿ ಲಾಭ ಪಡೆದುಕೊಳ್ಳಬಾರದು?
ಕೊನೆಯದಾಗಿ ಪರಿಸರವಾಗಲಿ ಅಥವಾ ಕೃಷಿ ಕ್ಷೇತ್ರವಾಗಲೀ ಅಲ್ಲಿನ ಗಂಡಾಂತರಗಳನ್ನು ಎದುರಿಸಲು ರಾಜಕೀಯ ಇಚ್ಛಾಶಕ್ತಿ ಮುಖ್ಯ. ಯಾವುದೇ ಪಕ್ಷಗಳು ಆಡಳಿತ ನಡೆಸಲಿ, ಆದರೆ ಪರಿಸರ ಮತ್ತು ಕೃಷಿ ಸಮಸ್ಯೆಗಳು ಬದಲಾಗುವುದಿಲ್ಲ. ಆದ್ದರಿಂದ ಪಕ್ಷಾತೀತವಾಗಿ, ಎಲ್ಲ ರಾಜಕೀಯ ಪಕ್ಷಗಳು ಪರಿಸರ ಮತ್ತು ಕೃಷಿಯ ಬಗ್ಗೆ ಅತ್ಯಂತ ವೈಜ್ಞಾನಿಕವಾಗಿ ರೀತಿ, ನೀತಿ, ನಿಯಮಗಳಿಗೆ ಬದ್ಧವಾಗಿ ಆಡಳಿತ ನಡೆಸಬೇಕು. ನಮ್ಮ ದೇಶದ ಸೋಗಲಾಡಿ ರಾಜಕಾರಣಿಗಳಿಗೆ ಮತ್ತು ರಾಜಕೀಯ ಪಕ್ಷಗಳಿಗೆ ದೂರಾಲೋಚನೆಯೇ ಇಲ್ಲದೆ ಬರೀ ಮುಂದಿನ ಚುನಾವಣೆಯ ದುರಾಲೋಚನೆ ಬಿಟ್ಟು ಬೇರೆ ಯಾವುದಕ್ಕೂ ತಲೆಕೆಡಿಸಿಕೊಳ್ಳಲು ಪುರಸೊತ್ತೇ ಇಲ್ಲ. ಮುಂಬರುವ ದಶಕಗಳಲ್ಲಿನ ಗಂಡಾಂತರಗಳನ್ನು ಎದುರಿಸಲು ತತ್‌ಕ್ಷಣದಿಂದಲೇ ಕಾರ್ಯಪ್ರವೃತ್ತರಾಗಬೇಕಾಗಿದೆ. ಮುಂಬರುವ ಚುನಾವಣೆಗಳಲ್ಲಿ ಕೃಷಿ ಮತ್ತು ಪರಿಸರ ನೀತಿ, ನಿಯಮಗಳಿಗೆ ಎಲ್ಲಾ ರಾಜಕೀಯ ಪಕ್ಷಗಳು, ಸಾರ್ವಜನಿಕರ ಒಳಿತಿಗೆ, ಒಂದೇ ನೀತಿ ಅನುಸರಿಸುವಂತೆ ಮತದಾರರು ಒತ್ತಡ ಹೇರಬೇಕು.

-ಪ್ರೊ. ಶಾಂತು ಶಾಂತಾರಾಮ್, ಐಯೋವ ರಾಜ್ಯ ಕೃಷಿ ವಿವಿ
Shanthus@iastate.edu

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.