ಅಂಕಣಗಳು

ಒಂದೊಂದೇ ತುಣುಕು, ಭಾವಕೋಶಕ್ಕೆ ಗುಟುಕು

ನಿಮ್ಮ ಜತೆ ಸದಾ ಒಂದು ಪುಟ್ಟ ನೋಟ್‌ಬುಕ್ ಇಟ್ಟುಕೊಳ್ಳಿ.ದಿನಾಲೂ ನಿಮಗೆ ಏನೇನೋ..

Published On :

ನಿಮ್ಮ ಜತೆ ಸದಾ ಒಂದು ಪುಟ್ಟ ನೋಟ್‌ಬುಕ್ ಇಟ್ಟುಕೊಳ್ಳಿ. ದಿನಾಲೂ ನಿಮಗೆ ಏನೇನೋ ಯೋಚನೆ, ಕಲ್ಪನೆ ಸರಿದು ಹೋಗುತ್ತಿರುತ್ತದೆ. ಅವುಗಳಲ್ಲಿ ನಿಮಗೆ ಇಷ್ಟವಾದುದನ್ನು ನೋಟ್ ಮಾಡಿಕೊಳ್ಳಿ. ಪುಸ್ತಕ ಓದುವಾಗ, ಸಿನಿಮಾ ನೋಡುವಾಗ, ಗೆಳೆಯರೊಂದಿಗೆ ಹರಟೆ ಮುಗಿಸಿದಾಗ, ಗಣ್ಯರನ್ನು ಭೇಟಿ ಮಾಡಿ ಬಂದ ನಂತರ, ಸೆಮಿನಾರ್ ಅಥವಾ ಕಾರ್ಯಕ್ರಮದಲ್ಲಿ ಭಾಷಣ ಕೇಳುವಾಗ ನಿಮಗೆ ಇಷ್ಟವಾದ ಸಂಗತಿ, ಸಾಲು, ಜೋಕು, ಕತೆ...ಹೀಗೆ ಎಲ್ಲವನ್ನೂ ನೋಟ್ಸ್ ಮಾಡಿಕೊಳ್ಳುತ್ತಾ ಹೋಗಬೇಕು. ಒಂದೆರಡು ವರ್ಷಗಳ ಬಳಿಕ ಸುಮ್ಮನೆ ತೆರೆದು ನೋಡಬೇಕು.
ಎಂಥ ಮಜಾ ಆಗಿರುತ್ತದೆ ಗೊತ್ತಾ? ಎಂಥಾ ಅದ್ಭುತ ಸಂಗ್ರಹ ಆಗಿರುತ್ತದೆ ಗೊತ್ತಾ?
ನನ್ನ ಬಳಿ ಏನಿಲ್ಲವೆಂದರೂ ಇಂಥ 25-30 ನೋಟ್ ಬುಕ್‌ಗಳಿವೆ. ಅವೆಲ್ಲವನ್ನೂ ಇಟ್ಟುಕೊಂಡು ಪುಸ್ತಕ ಮಾಡಿ ಬಿಡಬಹುದು. ಓದಲು ಬಹಳ ಸೊಗಸಾಗಿರುತ್ತದೆ. ಎಂದೋ ಓದಿದ ಸಾಲು, ಹಾದು ಹೋದ ಯೋಚನೆಗಳೆಲ್ಲ Flash Back ಗಳಂತೆ ಪುನಃ ಸಂಗಾತಿಗಳಾಗುತ್ತವೆ. ಕೆಲವರು ಇದನ್ನು Scrapbook ಅಂತಾನೂ ಕರೆಯುತ್ತಾರೆ. ಹಾಗ್ಯಾಕೆ ಕರೆಯುತ್ತಾರೋ ಗೊತ್ತಿಲ್ಲ. ನನ್ನ ಪಾಲಿಗೆ ಇದು ಅಮೂಲ್ಯ ಕೃತಿ. ಖ್ಯಾತ ಪತ್ರಕರ್ತ ಖುಷವಂತಸಿಂಗ್ ಕೂಡ ಈ ನೋಟ್ಸ್‌ಗಳನ್ನೆಲ್ಲ ಸೇರಿಸಿ ಪುಸ್ತಕ ಪ್ರಕಟಿಸಿದ್ದಾರೆ. ನಿಮ್ಮ ಬಳಿಯೂ ಅಂಥ ನೋಟ್ ಬುಕ್ ಇರಲಿ. ಎರಡು ವರ್ಷಗಳ ಬಳಿಕ ಅದರ ಗಮ್ಮತ್ತು ಹೇಗಿರುತ್ತದೆಂಬುದನ್ನು ನೀವೇ ನನಗೆ ಬಣ್ಣಿಸುತ್ತೀರಿ.
ಇಲ್ಲಿ ನನ್ನ ನೋಟ್‌ಬುಕ್‌ಗಳಲ್ಲಿ ಪಕ್ಕನೆ ಸಿಕ್ಕಿದ ಕೆಲವು ತುಣುಕುಗಳಿವೆ. ಅವುಗಳಿಗೆ ವಿವರಣೆ ಬೇಕಿಲ್ಲ. ಸಮಯ, ಸಂದರ್ಭ ಮೀರಿ ಅವು ನಿಮಗೆ ಹೊಳಹು ನೀಡಬಲ್ಲವು. For a change ಅಂತ ನಿಮಗೆ ಇವನ್ನು ಕೊಡುತ್ತಿದ್ದೇನೆ. ಇಷ್ಟವಾಗಬಹುದೇನೋ?
---
ಅಪ್ಪನಿಗೆ ತನ್ನ ಮಗನ ಎರಡು ವರ್ತನೆ ಬಗ್ಗೆ ಅಪರಿಮಿತ ಅಸಮಾಧಾನವಿತ್ತು. ಹಂದಿ ಮಾಂಸ ಕಂಡರೆ ಸಾಕು ಮಗ ತಕ್ಷಣ ಬಾಯಿ ಬಿಡುತ್ತಿದ್ದ ಹಾಗೂ ಅಂದದ ಹುಡುಗಿಯರನ್ನು ಕಂಡರೆ ತಬ್ಬಿ ಚುಂಬಿಸುತ್ತಿದ್ದ.
ಮಗನಿಗೆ ಅಪ್ಪ ಹೇಳುವಷ್ಟು ಬುದ್ಧಿ ಹೇಳಿದ. ಮನಃಶಾಸ್ತ್ರಜ್ಞರಲ್ಲಿಗೆ ಕರೆದು ಕೊಂಡು ಹೋದ. ಆದರೆ ಪ್ರಯೋಜನವಾಗಲಿಲ್ಲ. ಮಗನ ಬುದ್ಧಿ ನೆಟ್ಟಗಾಗಲಿಲ್ಲ.
ಬೇರೆ ದಾರಿ ಕಾಣದೇ ಧರ್ಮಗುರುವನ್ನು ಭೇಟಿ ಮಾಡಿ ಅವರ ಮುಂದೆ ಅಪ್ಪ ಮಗನ ವರ್ತನೆಯ ಬಗ್ಗೆ ಕಳವಳ ತೋಡಿಕೊಂಡ. ಸ್ವಾಮೀಜಿ ಮಗನನ್ನು ಕರೆದು ಗಟ್ಟಿ ಧ್ವನಿಯಲ್ಲಿ 'ಏನಯ್ಯಾ? ಇದು ನಿಜವೇನಯ್ಯಾ?' ಹಂದಿ ಮಾಂಸ ಕಂಡರೆ ಬಾಯಿ ಬಿಡುತ್ತಿಯಂತೆ. ಸುಂದರ ತರುಣಿಯರನ್ನು ಕಂಡ ತಕ್ಷಣ ತಬ್ಬಿ ಮುದ್ದಾಡುತ್ತೀಯಂತೆ, ನಿನಗೇನಾಗಿದೆ?' ಎಂದು ಕೇಳಿದರು.
ಅದಕ್ಕೆ ಮಗ ಹೇಳಿದ-'ನಾನೇನು ಮಾಡಲಿ ಸ್ವಾಮೀಜಿ. ನಾನು ಸ್ವಲ್ಪ ಕ್ರೇಜಿ. ಅದಕ್ಕೆ ಹೀಗೆಲ್ಲ ಮಾಡುತ್ತೇನೆ.'
ಅದನ್ನು ಕೇಳುತ್ತಲೇ ಸ್ವಾಮೀಜಿ ತಂದೆಯನ್ನು ಕರೆದು ಹೇಳಿದರು-'ನಿಮ್ಮ ಮಗ ಕರೆಕ್ಟ್ ಆಗಿದ್ದಾನೆ. ಅವನದೇನೂ ತಪ್ಪಿಲ್ಲ. ಹುಡುಗಿಯರನ್ನು ಕಚ್ಚಿ ಮಾಂಸವನ್ನು ಚುಂಬಿಸಿದ್ದರೆ ಯೋಚನೆ ಮಾಡಬೇಕಿತ್ತು.'
---
ಕವಿ ರವೀಂದ್ರನಾಥ ಟಾಗೋರ್ ತಮ್ಮ ಒಂದು ಕವನದಲ್ಲಿ ಹೀಗೆ ಹೇಳಿದ್ದಾರೆ. ಅದರ ತಾತ್ಪರ್ಯ ಇಷ್ಟು: ಆಗ ತಾನೆ ಹುಟ್ಟಿದ ಮಗುವನ್ನು ನೋಡಿದಾಗಲೆಲ್ಲ ನಾನು ದೇವರನ್ನು ಅಭಿನಂದಿಸುತ್ತೇನೆ. ಕಾರಣ ಆ ದೇವರು ಮನುಷ್ಯರನ್ನು ಹುಟ್ಟಿಸಿ ಹುಟ್ಟಿಸಿ ಇನ್ನೂ ಸುಸ್ತಾಗಲಿಲ್ಲವಲ್ಲಾ! ಅಲ್ಲದೇ ಮನುಷ್ಯರ ಬಗ್ಗೆ ಇನ್ನೂ ನಂಬಿಕೆ ಕಳೆದುಕೊಂಡಿಲ್ಲವಲ್ಲ.
---
ಮುಲ್ಲಾ ನಸ್ರುದ್ದೀನ್ ಹೆಂಡತಿ ಬೆಳಗ್ಗೆ ಕಾಫಿ ಹೀರುತ್ತಾ ಪತ್ರಿಕೆ ಓದುತ್ತಿದ್ದಳು. ಒಳಪುಟ ತಿರುವಿದಾಗ ಅವಳ ಫೋಟೋ ಕಣ್ಣಿಗೆ ಬಿತ್ತು. ಕುತೂಹಲದಿಂದ ಕೆಳಗಿನ ಸುದ್ದಿ ಕಡೆ ಕಣ್ಣಾಡಿಸಿದರೆ ಅವಳ ನಿಧನದ ಸುದ್ದಿ!
ತಕ್ಷಣ ಮುಲ್ಲಾನಿಗೆ ಫೋನ್ ಮಾಡಿ 'ವಿಷಯ ಗೊತ್ತಾ? ಇಂದಿನ ಪೇಪರ್ ಓದಿದಿಯಾ? ನಾನು ಸತ್ತು ಹೋಗಿದ್ದನಂತೆ!' ಎಂದಳು.
ಅದಕ್ಕೆ ಮುಲ್ಲಾ ಹೇಳಿದ-'ಹೌದಾ? ಅದ್ಸರಿ ಈಗ ನೀನು ಎಲ್ಲಿಂದ ಫೋನ್ ಮಾಡ್ತಾ ಇದಿಯಾ ಮೊದಲು ಹೇಳು. ಅನಂತರ ನೀನು ಸತ್ತಿದ್ದೀಯಾ ಇಲ್ಲವಾ ಅಂತ ಹೇಳ್ತೇನೆ.'
---
'ಯಾಕೋ ನನ್ನ ಯಜಮಾನರ ಬಗ್ಗೆ ಅನುಮಾನ ಕಣೆ. ಪಕ್ಕದ ಮನೆ ಕೆಲಸದಾಕೆ ಜತೆ ಏನಾದರೂ ಅಫೇರ್ ಇಟ್ಟುಕೊಂಡಿದ್ದಾರಾ ಅಂತ ಸಂದೇಹ ನನಗೆ' ಎಂದು ಹೆಂಡತಿ ತನ್ನ ಮನೆ ಕೆಲಸದಾಕೆ ಮುಂದೆ ಅಳಲನ್ನು ತೋಡಿಕೊಂಡಳು.
ಅದಕ್ಕೆ ಕೆಲಸದಾಕೆ ಹೇಳಿದಳು-ಸುಮ್ ಸುಮ್ನೆ ಇಲ್ಲದ್ದೆಲ್ಲ, ಹೇಳಿ ನನ್ನ ಹೊಟ್ಟೆ ಉರಿಸಬೇಡಿ.
---
ಖ್ಯಾತ ರಾಕ್ ಸಂಗೀತಗಾರ ಜೇಮ್ಸ್ ಮ್ಯಾಕ್ ಮರ್‌ಟ್ರಿ ಬರೆದ ಒಂದು ಹಾಡಿನ ಸಾಲನ್ನು 'ಗುಂಡೋಪಂತ್‌ರು ನೆನೆಯಬಹುದಾದರೆ
I don't want another drink
I only want that last one again.
---
ಖುಷವಂತಸಿಂಗ್‌ಗೆ ಯಾರೋ ಕಳಿಸಿಕೊಟ್ಟ ಜೋಕು:
ಲಾಲು ಹಾಗೂ ರಾಬ್ಡಿ ಮನೆಯ ಮುಂದಿನ ಹುಲ್ಲುಹಾಸಿನ ಮೇಲೆ ಕುಳಿತು ಕಾಫಿ ಹೀರುತ್ತಿದ್ದರು. ಫೋನ್ ಬಂತು. ರಾಬ್ಡಿದೇವಿಯೇ ರಿಸೀವರ್ ಎತ್ತಿಕೊಂಡಳು. ಅತ್ತ ಕಡೆಯಿಂದ ಮಗ ಮಾತಾಡುತ್ತಿದ್ದ- 'ನಿನಗೊಂದು ಸಿಹಿ ಸುದ್ದಿ. ನನ್ನ ಒಳ್ಳೆಯ ನಡತೆ ನೋಡಿ ಜೈಲರ್ ನನಗೆ ಆರು ತಿಂಗಳ ಜೈಲುವಾಸ ಶಿಕ್ಷೆಯನ್ನು ಕಡಿತಗೊಳಿಸಿದ್ದಾನೆ.'
ರಾಬ್ಡಿಗೆ ಬಹಳ ಸಂತಸವಾಯಿತು. ಈ ವಿಷಯವನ್ನು ಲಾಲೂಗೆ ಹೇಳಿದಳು. ಅದನ್ನು ಕೇಳಿ ಲಾಲೂ ಉದ್ಗರಿಸಿದ- 'ಎಷ್ಟೆಂದರೂ ನನ್ನ ಮಗನಲ್ವೇ? ನೋಡು, ಜೈಲಿನಲ್ಲೂ ಒಳ್ಳೆಯ ನಡತೆ ಪ್ರದರ್ಶಿಸಿದ್ದಾನೆ.'
---
ಕೆಲವು ಸೂಚನಾ ಫಲಕಗಳಲ್ಲಿ ಬರೆದಿರುವುದನ್ನು ಗಮನಿಸಿ
- Touching wires causes instant death Rs 500 Penalty.
- ನೀವು ಅನಕ್ಷರಸ್ಥರಾ? ಹಾಗಾದರೆ ನಮಗೆ ಬರೆಯಿರಿ. ನಾನು ನಿಮಗೆ ಸಹಾಯ ಮಾಡುತ್ತೇನೆ.
- Bottomless pit ahead 65 ft deep.
- Office closed, when it is closed no information available.
- Please do not sit on the crocodile.
- Dont throw your cigarette ends on the floor. The cocroahes are getting cancer.
---
ತಿಮ್ಮ ಡಾಕ್ಟರ್ ರೂಮ್ ಹೊರಗಡೆ ಕಾದು ಕಾದು ಕಾದು ಕುದ್ದು ಹೋದ. ಆದರೂ ಒಳಗಡೆಯಿಂದ ಡಾಕ್ಟರ್ ತಿಮ್ಮನ್ನು ಕರೆಯಲೇ ಇಲ್ಲ. ಬೇರೆ ದಾರಿ ಕಾಣದೆ ಮನೆಗೆ ಹೋಗಲು ತೀರ್ಮಾನಿಸಿದ ತಿಮ್ಮ ತನ್ನಷ್ಟಕ್ಕೆ ಗೊಣಗಿದ- 'ಸಾಯೋದಕ್ಕೂ ಡಾಕ್ಟರ್ ಬೇಕಾ? ನನ್ನ ಪಾಡಿಗೆ ನಾನು ಸಾಯ್ತೇನೆ ಬಿಡು.'
---
ರ್ಯಾಂಡಿ ಪಾಶ್ ಬರೆದ 'ದಿ ಲಾಸ್ಟ್ ಲೆಕ್ಚರ್‌' ಕೃತಿಯಲ್ಲಿನ ಒಂದು ವಾಕ್ಯ- ಗೆಲ್ಲಲಾಗದಿರುವ ಪರಿಸ್ಥಿತಿಯೊಂದಿದೆ ಎಂದು ನಾನು ನಂಬುವುದಿಲ್ಲ.
---
'ಗುರುಗಳೇ, ನನ್ನ ಗೆಳೆಯ ಈಗಲೋ ಆಗಲೋ ಎಂಬ ಸ್ಥಿತಿಯಲ್ಲಿ ಇದ್ದಾನೆ. ಯಾವ ಕ್ಷಣದಲ್ಲಿ ಬೇಕಾದರೂ ಸಾಯಬಹುದು. ಅವನಿಗೆ ನಾನು ಒಂದು ಸಾಂತ್ವನದ ಮಾತನ್ನು ಹೇಳಬೇಕಾಗಿದೆ ಏನು ಹೇಳಲಿ?' ಎಂದು ಶಿಷ್ಯನೊಬ್ಬ ಜಿಡ್ಡು ಕೃಷ್ಣಮೂರ್ತಿಯವರನ್ನು ಕೇಳಿದ.
ಅದಕ್ಕೆ ಅವರೆಂದರು: 'ಈ ಜಗತ್ತನ್ನು ಎಲ್ಲರೂ ಒಂದಲ್ಲ ಒಂದು ದಿನ ಬಿಟ್ಟು ಹೋಗಲೇಬೇಕು. ಆದರೆ ನಿನ್ನ ಸ್ನೇಹಿತ ಶೀಘ್ರ ಆ ಕೆಲಸ ಮಾಡುತ್ತಿದ್ದಾನೆ. ಅವನ ಜತೆಗೆ ನಿಮ್ಮ ಸ್ನೇಹ ಸಂಬಂಧದ ಒಂದು ಭಾಗ ಸಹ ಹೋಗುತ್ತದೆ. ಹೀಗಾಗಿ ಆತ ಒಬ್ಬಂಟಿ ಅಲ್ಲ. ಈ ಸಂಗತಿಯನ್ನು ನಿನ್ನ ಸ್ನೇಹಿತನಿಗೆ ಹೇಳು.'
ಶಿಷ್ಯ ಈ ಅಂಶವನ್ನು ತನ್ನ ಸ್ನೇಹಿತನಿಗೆ ಹೇಳಿದನಂತೆ. ಆತನ ಮುಖದಲ್ಲಿ ಮಂದಹಾಸ ಮೂಡಿತು. ಆದರೆ ಪ್ರಾಣಪಕ್ಷಿ ಹಾರಿಹೋಗಿತ್ತು.
---
ಪ್ರೊ. ವಿ.ಬಿ. ಅರ್ತಿ ಕಜೆ ಬರೆದ 'ಗುಣಮುಖಿ' ಕನ್ನಡದಲ್ಲಿನ ಒಂದು ಪ್ರಸಂಗ:
ಮಧ್ಯರಾತ್ರಿಯ ಸಮಯ. ವೈದ್ಯರು ಗಾಢನಿದ್ರೆಯಲ್ಲಿದ್ದರು. ಅಷ್ಟರಲ್ಲಿ ಅವರ ದೂರವಾಣಿ ಜೋರಾಗಿ ಸದ್ದು ಮಾಡಿತು. ರಿಸೀವರ್ ಎತ್ತಿಕೊಂಡು ಕಿವಿಗೊಟ್ಟರೆ ಕರೆ ಬಂದದ್ದು ಒಬ್ಬ ಹಳೆಯ ಪರಿಚಿತನಿಂದ. ಆತನ ಮನೆಗೆ ವೈದ್ಯಕೀಯ ಸೇವೆಗಾಗಿ ಹೋಗದೆ ಕೆಲವು ವರ್ಷಗಳೇ ಸಂದು ಹೋಗಿದ್ದವು.
'ಡಾಕ್ಟ್ರೇ, ನೀವು ತತ್‌ಕ್ಷಣ ನಮ್ಮ ಮನೆಗೆ ಧಾವಿಸಿ ಬರಬೇಕು. ನನ್ನ ಹೆಂಡತಿಗೆ ನೋವು ತಡೆದುಕೊಳ್ಳುವುದಕ್ಕೆ ಆಗುತ್ತಿಲ್ಲ. ಅಪೆಂಡಿಸೈಟಿಸ್ ಆಗಿರಬೇಕೆಂದು ನನ್ನ ಊಹೆ. ಅದರ ಲಕ್ಷಣಗಳು ಸ್ಪಷ್ಟವಾಗಿವೆ.
ಕೂಡಲೇ ನಿದ್ರೆಯ ಅಮಲಿನ ನಡುವೆಯೂ ವೈದ್ಯರು ಆ ಕುಟುಂಬದ ವೈದ್ಯಕೀಯ ಚರಿತ್ರೆಯನ್ನು ನೆನಪಿಸಿಕೊಂಡರು. ಸಾಂತ್ವನದ ಧಾಟಿಯಲ್ಲಿ ಮಾತಾಡುತ್ತಾ 'ನೀವು ಮಾಡಿದ ಊಹೆ ತಪ್ಪು. ಹಾಗೇನೂ ಆಗುವ ಸಾಧ್ಯತೆ ಇಲ್ಲ. ಬಹುಶಃ ಅಜೀರ್ಣದಿಂದಾಗಿ ಹೊಟ್ಟೆ ನೋವು ಕಾಣಿಸಿಕೊಂಡಿರಬಹುದು. ಈಗ ಹಾಗೆಯೇ ವಿಶ್ರಾಂತಿ ತೆಗೆದುಕೊಳ್ಳಲಿ. ಬೆಳಗ್ಗೆ ಎದ್ದೊಡನೆಯೇ ನಿಮ್ಮ ಮನೆಗೆ ಬರುತ್ತೇನೆ. ನೀವು ಗಾಬರಿಯಾಗುವ ಕಾರಣವಿಲ್ಲ' ಎಂದರು.
'ನಾನು ಉತ್ಪ್ರೇಕ್ಷೆ ಮಾಡುತ್ತಿಲ್ಲ ಡಾಕ್ಟ್ರೇ. ಇವಳಿಗೆ ಆಗಿರುವುದು ಅಪೆಂಡಿಸೈಟಿಸ್ ಎನ್ನುವುದರ ಬಗೆಗೆ ಅನುಮಾನವೇ ಬೇಡ. ದಯವಿಟ್ಟು ಈಗಲೇ ಬಂದು ಬಿಡಿ.'
'ಅದು ಹೇಗೆ ಸಾಧ್ಯ ಮಹಾರಾಯರೇ? ಎರಡು ವರ್ಷಗಳ ಹಿಂದೆ ನಾನೇ ನಿಮ್ಮ ಹೆಂಡತಿಯ ಅಪೆಂಡಿಕ್ಸನ್ನು ಕತ್ತರಿಸಿ ತೆಗೆದಿದ್ದೇನೆ. ನಿಮಗಿದು ಗೊತ್ತಿದೆ. ಈಗ ಆಕೆಗೆ ಇನ್ನೊಂದು ಅಪೆಂಡಿಕ್ಸ್ ಎಲ್ಲಿಂದ ಬರುತ್ತದೆ?'
'ಒಬ್ಬ ವ್ಯಕ್ತಿಗೆ ಎರಡು ಅಪೆಂಡಿಕ್ಸ್ ಇರಲು ಸಾಧ್ಯವಿಲ್ಲ ಎಂಬ ನಿಮ್ಮ ವಾದ ಸರಿಯಾದುದು. ಆದರೆ ಒರ್ವ ಪುರುಷನಿಗೆ ಎರಡನೆಯ ಹೆಂಡತಿ ಇರಬಹುದಲ್ಲ?' ವೈದ್ಯರಿಗೆ ಈಗ ನಿದ್ದೆ ಪೂರ್ತಿಯಾಗಿ ಹೋಗಿ ಬಿಟ್ಟಿತ್ತು!
---
ಅಮೆರಿಕದ ಖ್ಯಾತ ಕಾಮಿಡಿಯನ್ ಹಾಗೂ ನಟಿ ಜೋನ್‌ರಿವರ್ಸ್ ಹೇಳಿದ ಮಾತನ್ನು ಎಲ್ಲ ಹೆಂಗಸರೂ ನೆನಪಿಸಿಕೊಳ್ಳಬಹುದು.
I hate housework. You make the beds, you do the dishes, wash the inner garments and six months later, you have to start all over again.
---
ಕೆಲ ವರ್ಷಗಳ ಹಿಂದೆ ಚೀನಾದಲ್ಲಿ ಭೀಕರ ಭೂಕಂಪ ಸಂಭವಿಸಿದ್ದು ನೆನಪಿರಬಹುದು. ಈ ಘಟನೆ ಸಂಭವಿಸುವ ಎರಡು ದಿನಗಳ ಮೊದಲು ಪತ್ರಿಕೆಯೊಂದು ಆ ಕುರಿತು ವರದಿ ಪ್ರಕಟಿಸಿತ್ತು. ಆದರೆ ಯಾರೂ ಆ ವರದಿಯನ್ನು ಗಂಭೀರವಾಗಿ ಪರಿಗಣಿಸಲಿಲ್ಲ.
ಆ ವರದಿಗೆ ಪ್ರೇರಣೆಯಾದರೂ ಏನು?
ಮೂರು ದಿನ ಮುಂಚೆ ಪತ್ರಕರ್ತನೊಬ್ಬ ಪ್ರಾಣಿ ಸಂಗ್ರಹಾಲಯಕ್ಕೆ ಹೋಗಿದ್ದ. ಅಲ್ಲಿನ ಬಹುತೇಕ ಪ್ರಾಣಿಗಳು ವಿಚಿತ್ರವೆಂಬಂತೆ ಆ ದಿನ ಆಹಾರ ಸೇವಿಸಲಿಲ್ಲ. ಕಾಳಿಂಗ ಸರ್ಪವಂತೂ ನೆಲದಿಂದ ಒಂದಡಿ ಮೇಲೆ ಜಿಗಿಯುತ್ತಿತ್ತು. ಕುದುರೆ, ಕತ್ತೆಕಿರುಬ ಕೀರಲು ಧ್ವನಿಯಿಂದ ಕಿರುಚುತ್ತಿತ್ತು.
ಪ್ರಾಣಿ ಸಂಗ್ರಹಾಲಯದ ಮುಖ್ಯಸ್ಥ ಕೆಲಸಗಾರರನ್ನೆಲ್ಲ ಕರೆದು, 'ನೀವು ಮಾಡುವ ಕೆಲಸ, ತಯಾರಿಸುವ ಆಹಾರವನ್ನು ವಿರೋಧಿಸಿ ಪ್ರಾಣಿಗಳು ಹರತಾಳ ಮಾಡುತ್ತಿವೆ. ಇನ್ನಾದರೂ ಸರಿಯಾಗಿ ಕೆಲಸ ಮಾಡಿ' ಎಂದು ಬೈದ.
ನಿಮ್ಮ ಕಣ್ಣಿಗೆ, ಕಾಣದ್ದು ಕವಿಗೆ ಕೇಳದ್ದು ಪ್ರಾಣಿಗೆ ಗೊತ್ತಾಗುತ್ತದೆ. ಪ್ರಾಣಿಗಳು ನೀಡುವ ಸಿಗ್ನಲ್ ಮಿಸ್ ಮಾಡಿಕೊಳ್ಳಬೇಡಿ.
---
ಬಹಳ ವರ್ಷಗಳ ಹಿಂದೆ 'ಕಸ್ತೂರಿ'ಯಲ್ಲಿ ಓದಿದ ನೆನಪು:
ಕನ್ನಡದ ಸಾಹಿತಿ ಡಾ. ಗೊರೊರು ರಾಮಸ್ವಾಮಿ ಐಯ್ಯಂಗಾರ್ ಅವರು ಆಗಿನ್ನೂ ಮೆಟ್ರಿಕ್ಯುಲೇಶನ್ ಪಾಸಾಗಿರಲಿಲ್ಲವಾದರೂ ಅವರ ಪುಸ್ತಕಗಳಾಗಲೇ ಆ ವರ್ಗಕ್ಕೆ ಪಠ್ಯಗಳಾಗಿದ್ದವು. ಒಮ್ಮೆ ಮೆಟ್ರಿಕ್ ಪರೀಕ್ಷೆಯ ಉತ್ತರ ಪತ್ರಿಕೆಗಳ ಮೌಲ್ಯ ಮಾಪನಕ್ಕಾಗಿ ಗೊರೂರರಿಗೆ ಕರೆ ಬಂತು. "ನಾನು ಮೆಟ್ರಿಕ್ ಪಾಸಾದವನಲ್ಲ. ನನಗೆ ಮೌಲ್ಯಮಾಪನದ ಅರ್ಹತೆ ಎಂತು ಬಂತು?" ಎಂದು ಪ್ರಶ್ನಿಸಿ ಕರೆಯನ್ನು ತಿರಸ್ಕರಿಸಿ ಬಿಟ್ಟರಂತೆ. ಆಗ ಇನ್ನೊಬ್ಬ ಸಾಹಿತಿ ಮುಳಿಯ ತಿಮ್ಮಪ್ಪಯ್ಯ ಅವರು "ಹಾಗೇಕೆ ಮಾಡಿದಿರಿ? ಕರೆಯನ್ನು ಮನ್ನಿಸಬೇಕಿತ್ತು" ಅಂದರಂತೆ. ಗೊರೂರು ವಾಸ್ತವ ಸ್ಥಿತಿಯನ್ನು ಹೇಳಿದರಂತೆ. "ಹಾಗಾದರೆ ಮೆಟ್ರಿಕ್ ಪರೀಕ್ಷೆ ಕಟ್ಟಿರಿ" ಅಂದರು. "ಹ್ಯಾಗಾದೀತು? ನನ್ನ ಪುಸ್ತಕಗಳೇ ಪಠ್ಯವಾಗಿರುವಾಗ ನಾನು ಹೇಗೆ ಪರೀಕ್ಷೆ ಕಟ್ಟಿಯೇನು?" ಗೊರೂರ ಪ್ರಶ್ನೆ. "ಮಾಡಿದ್ದನ್ನುಣ್ಣ ಬೇಕಪ್ಪಾ ಮಹರಾಯಾ, ಕಟ್ಟದೇ ಬಿಡಬೇಡ" ಎಂದು ದುಂಬಾಲು ಬಿದ್ದು ಪರೀಕ್ಷೆಗೆ ಕೂಡಿಸಿದರಂತೆ ತಿಮ್ಮಪ್ಪಯ್ಯನವರು. ಅಂತೂ ಗೊರೂರರು ತಮ್ಮ ಪುಸ್ತಕಗಳನ್ನೊದಿಯೇ ಮೆಟ್ರಿಕ್ ಪಾಸಾದರು.

-ವಿಶ್ವೇಶ್ವರ ಭಟ್
vbhat@me.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.