ಅಂಕಣಗಳು

ಎಲ್ಲರೂ ಏಕಾಂಗಿಗಳೇ, ಸಂಗಾತಿ ಆಯ್ಕೆ ಈಗಿಲ್ಲ

Published On :

ರಾಜ್ಯದ ವಿಧಾನಸಭೆ ಚುನಾವಣೆಯ ಮುನ್ನಾದಿನಗಳ ರಾಜಕೀಯ ಚಿತ್ರವನ್ನು ಸೂಕ್ಷ್ಮವಾಗಿ ಪರಿಶೀಲಿಸಿದರೆ, ಕಂಡು ಬರುವ ಒಂದು ವಿಶೇಷ ಅಂಶ! ಸ್ಪರ್ಧೆಯ ಕಣದಲ್ಲಿ ಧುಮುಕಲು ಬಯಸಿರುವ ಯಾವ ಪಕ್ಷಕ್ಕೂ ಈಗ ಇತರೇ ಪಕ್ಷಗಳ ಜತೆ ಹೊಂದಾಣಿಕೆ ಬೇಕಿಲ್ಲ. ಎಲ್ಲ ಪಕ್ಷಗಳಲ್ಲೂ, ನಿಜವಾದ ಅರ್ಥದಲ್ಲಿ ಮುತ್ಸದ್ದಿತನದ - ಪ್ರಬುದ್ಧ, ಚೈತನ್ಯ ಪೂರ್ಣ ನಾಯಕತ್ವದ ಅಭಾವ ಎದ್ದು ಕಾಣುತ್ತಿದೆ.
ಸಹಜವಾಗಿಯೇ ಇಂತಹ ಸನ್ನಿವೇಶದಲ್ಲಿ ಪಕ್ಷದ ಪರವಾಗಿ ಯಾರೆಂದರೆ ಅವರು ಮನಸ್ಸಿಗೆ ಬಂದಂತೆ ಮಾತಾಡುವುದು, ಸಾಕಷ್ಟು ಗೊಂದಲವನ್ನು ನಿರ್ಮಿಸಿದೆ. ಆದರೆ ಈಗಿನ ರಾಜಕೀಯ ಸನ್ನಿವೇಶ ಹಾಗೂ ವ್ಯವಸ್ಥೆಯಲ್ಲಿ ಪಕ್ಷ ಗೆಲ್ಲಲಿ ಬಿಡಲಿ ತಾವು ಶಾಸಕರಾದರೆ ಸಾಕು ಎನ್ನುವ ಮನೋಧರ್ಮ ಎಲ್ಲ ಕಡೆ ವಿಜೃಂಭಿಸಿದೆ.
ಅದಕ್ಕೆ ಕಾರಣವನ್ನು ವಿಶೇಷವಾಗಿ ಹೇಳುವ ಅಗತ್ಯವಿಲ್ಲ. ಯಾವುದೇ ಪಕ್ಷ ಅಧಿಕಾರಕ್ಕೆ ಬಂದು ಅಧಿಕಾರದ ಸೂತ್ರಗಳನ್ನು ಹಿಡಿದರೂ, ಎಲ್ಲ ಪಕ್ಷಗಳ ಶಾಸಕರನ್ನು "ಸರಿಯಾಗಿ, ಚೆನ್ನಾಗಿ ನೋಡಿಕೊಳ್ಳುವ ಸಂಪ್ರದಾಯ" ಕಳೆದ ದಶಕದಲ್ಲಿ ಹೆಮ್ಮರದಂತೆ ಬೆಳೆದು ನಿಂತಿರುವುದೇ.
ಅಭ್ಯರ್ಥಿ ಆಯ್ಕೆ ಕಸರತ್ತು: ಚುನಾವಣೆ ಸಿದ್ಧತೆಯ ಮೊದಲ ಹಂತ ಅಭ್ಯರ್ಥಿಗಳ ಆಯ್ಕೆ. ಕಳೆದ ಒಂದು ತಿಂಗಳಿಂದಲೂ ರಾಜಕೀಯ ಪಕ್ಷಗಳ ಮುಖಂಡರು ತಮ್ಮ ತಮ್ಮ ಪಕ್ಷದ ಅಭ್ಯರ್ಥಿಗಳ ಪಟ್ಟಿ ಹೆಚ್ಚು ಕಡಿಮೆ ಸಿದ್ಧವಾಗಿದೆಯೆಂದೂ, ಅದನ್ನು ಯಾವಾಗ ಬೇಕಾದರೂ ಪ್ರಕಟಿಸಬಹುದೆಂದೂ ಹೇಳುತ್ತಿದ್ದರೂ, ಅದು ವಾಸ್ತವ ಸ್ಥಿತಿ ಅಲ್ಲ.
ಉದಾಹರಣೆಗೆ ಕಾಂಗ್ರೆಸ್ಸಿನಲ್ಲಿ ನೂತನ ಉಪಾಧ್ಯಕ್ಷ, ನಾಳಿನ ನಾಯಕ ರಾಹುಲಗಾಂಧಿ ರೂಪಿಸಿರುವ ಆಯ್ಕೆಯ ಚೌಕಟ್ಟನ್ನು ಪಾಲಿಸುವುದು ಸಾಧ್ಯವೇ ಎನ್ನುವುದಕ್ಕೆ ಇಡೀ ದೇಶದಲ್ಲಿ ಕರ್ನಾಟಕವೇ ಮೊದಲ ಪ್ರಯೋಗಾಲಯ ಆಗಬೇಕು.
ಎರಡು ಬಾರಿ ಸೋತವರಿಗೆ, 15000ಕ್ಕೂ ಹೆಚ್ಚಿನ ಮತಗಳ ಅಂತರದಿಂದ ಸೋತವರಿಗೆ, ಟಿಕೆಟ್ ಕೊಡುವುದು ಬೇಡವೆನ್ನುವ ಪ್ರಕಟಿತ ಸೂತ್ರವನ್ನು ಪಾಲಿಸಿದರೆ, ರಾಜ್ಯದ ಉತ್ತರ ಭಾಗದಲ್ಲಿ ಅನೇಕ ಕ್ಷೇತ್ರಗಳನ್ನು ಕಾಂಗ್ರೆಸ್ ಕೈ ಬಿಡುವ ನಿರ್ಧಾರವಾಗಿದೆ ಎನ್ನಬಹುದು. ಇತರ ಪಕ್ಷಗಳು ಅಂತಹ ಕ್ಷೇತ್ರಗಳನ್ನು ಪಟ್ಟಿ ಮಾಡಲಿಕ್ಕೆ ಹೊರಟಿದ್ದಾರೆ.
ಮೇಲ್ನೋಟಕ್ಕೆ ರಾಜ್ಯ ಮಟ್ಟದ ಚುನಾವಣೆ ಸಮಿತಿಯ ಶಿಫಾರ್ಸು ಅಂತಿಮ ಎಂದು ರಾಹುಲ ಗಾಂಧಿ ಸೂತ್ರ ಹೇಳಿದ್ದರೂ, ದೆಹಲಿಯಲ್ಲಿ ಅನಧಿಕೃತವಾಗಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಪಾರುಪತ್ತೆದಾರರಾದ ಆಸ್ಕರ್ ಫರ್ನಾಂಡಿಸ್, ಮಲ್ಲಿಕಾರ್ಜುನ ಖರ್ಗೆ, ಧರ್ಮಸಿಂಗ್, ಅವರ ಕೈವಾಡ ನಡೆಯುವುದಿಲ್ಲ ಎಂದೇನೂ ಅಲ್ಲ. ಪರೋಕ್ಷವಾಗಿ ರಾಜ್ಯಪಾಲರ ಹುದ್ದೆಯಲ್ಲಿರುವ ಮಾರ್ಗರೇಟ್ ಆಳ್ವ ಸುಮ್ಮನಿರುವ ಪೈಕಿ ಅಲ್ಲ, ಅವರ ಮನೆತನಕ್ಕೂ ಟಿಕೆಟ್ ಬೇಕೆಂದು ಒತ್ತಾಯ ಸಲ್ಲಿಸಿದ್ದಾರೆ.
ರಾಜ್ಯದ ನಾಯಕರಲ್ಲಿ ಈಗ ತಮ್ಮ ಬೆಂಬಲಿಗರ ಹೆಸರುಗಳನ್ನು ಮುಂದೆ ತಳ್ಳುವ ಪ್ರಯತ್ನಕ್ಕೆ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಾ॥ ಪರಮೇಶ್ವರ ಹಾಗೂ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯುಅವರು ಕೈ ಹಾಕುವುದು ತೀರ ಸಹಜ. ಇಬ್ಬರೂ ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಗಳೇ.
ಕಾಂಗ್ರೆಸ್ಸಿನ ಸಮಸ್ಯೆ ರಾಜ್ಯದಲ್ಲಿ ಸ್ವಲ್ಪ ವಿಚಿತ್ರ ತಿರುವನ್ನು ಪಡೆದಿದೆ. ಪಕ್ಷ, ರಾಜ್ಯದ ಅನೇಕ ಕಡೆಗಳಲ್ಲಿ ವಿಪರೀತವಾಗಿ ದುರ್ಬಲವಾಗಿರುವುದು ನಿಜ. ಅದು ವರಿಷ್ಠರಿಗೂ ಗೊತ್ತು. ಅದಕ್ಕೇ ರಾಹುಲ ಗಾಂಧಿಯ ಸೂತ್ರದಲ್ಲೂ ಕೆಲವು ಅಪವಾದಗಳಿಗೆ ಅವಕಾಶವನ್ನು ಕಲ್ಪಿಸಲಾಗಿದೆ.
ನಾಲ್ಕೈದು ಪಕ್ಷೇತರರಿಗೆ ಟಿಕೆಟ್ ಕೊಡುವ ಭರವಸೆ ನೀಡಲಾಗಿದೆ ಎಂದು ವರದಿ. ಇತರ ಕೆಲವು ಕಾಂಗ್ರೆಸ್ಸೇತರ ಪ್ರಮುಖರಿಗೆ ಆಹ್ವಾನವನ್ನು ರವಾನಿಸಲಾಗಿದೆ ಎಂದೂ ಸುದ್ದಿ. ಆದರೆ ಇಂತಹ ವ್ಯವಸ್ಥೆಗೆ ಸ್ಥಳೀಯ ಕಾಂಗ್ರೆಸ್ ವಲಯಗಳ ವಿರೋಧ ಕಂಡು ಬಂದಿರುವುದೂ ನಿಜ. ಆದರೆ ಹೇಗಾದರೂ ಮಾಡಿ ಈ ಬಾರಿ ಅಧಿಕಾರವನ್ನು ಹಿಡಿಯಲೇ ಬೇಕೆಂದು ಕಾಂಗ್ರೆಸ್ ನಿರ್ಧರಿಸಿರುವುದರಿಂದ ಗೆಲ್ಲುವ ಕುದುರೆಗೇ ಮಾಲೆ ಹಾಕುವ ಸಂಭವವೇ ಜಾಸ್ತಿ. ಅದೇನೂ ಕಾಂಗ್ರೆಸ್ಸಿಗೆ ಹೊಸದಲ್ಲ.
ಬಿಜೆಪಿ - ಕೆಜೆಪಿ: ಭಾರತೀಯ ಜನತಾ ಪಾರ್ಟಿಯಲ್ಲಿ ಇನ್ನೂ ಬಿಜೆಪಿ-ಕೆಜೆಪಿ ನಡುವಣ ಗೊಂದಲ ಬಗೆಹರಿದಿಲ್ಲ. ಈಗಲೂ ಯಡಿಯೂರಪ್ಪ ಪರವಾಗಿರುವ ಮಂತ್ರಿಗಳಿದ್ದಾರೆ. ಅವರು ತಮ್ಮ ಈ ಸ್ಥಿತಿಯನ್ನು ಯಾವ ರೀತಿ ಸಮರ್ಥಿಸಿಕೊಳ್ಳುತ್ತಾರೋ ಗೊತ್ತಿಲ್ಲ.
ಬಿಜೆಪಿಯ ಆಂತರಿಕ ತಿಸ್ರಗಳನ್ನು ಕುರಿತಂತೆ, ರಹಸ್ಯವಾಗಿರುವಂತಹ ವಿಷಯಗಳು ಬೇಕಾದಷ್ಟಿರುವಂತಿದೆ. ಆ ವಿಚಾರದಲ್ಲಿ ಸದ್ಯಕ್ಕೆ ಯಾರೂ ಬಾಯಿ ಬಿಡುತ್ತಿಲ್ಲ. ಇನ್ನೆಷ್ಟು ದಿನ ಆ ಮಂತ್ರಿಗಳು, ಶಾಸಕರು ತಮ್ಮ ರಹಸ್ಯವನ್ನು ಕಾಪಾಡಿಕೊಳ್ಳುತ್ತಾರೋ ಗೊತ್ತಿಲ್ಲ. ರಹಸ್ಯ ಸ್ಫೋಟಕ್ಕೆ ಬಹುದಿನಗಳು ಬೇಕಾಗಿಲ್ಲ. (ಈಗಾಗಲೇ ಮುರುಗೇಶ ನಿರಾಣಿ ಕೆಜೆಪಿ ಸೇರುವ ಸುದ್ದಿ ಬಹಿರಂಗವಾಗಿದೆ)
ಆದರೆ ಬಿಜೆಪಿಯಲ್ಲಿ ಈಗಿನ ಅರ್ಥವಾಗದ ಒಂದು ಬೆಳವಣಿಗೆ ಎಂದರೆ ಯಡಿಯೂರಪ್ಪ ಅವರನ್ನು ಮತ್ತೆ ಪಕ್ಷಕ್ಕೆ ತರುವ ಪ್ರಯತ್ನ ನಡೆದಿದೆ ಅಥವಾ ನಡೆಯಲಿದೆ ಎನ್ನುವ ವದಂತಿಗಳನ್ನು ಜವಾಬ್ದಾರಿಯುತವಾದ ಮಂತ್ರಿ ಸ್ಥಾನ ಹೊಂದಿದವರೇ ಪ್ರಚಾರ ಮಾಡುತ್ತಿರುವುದು.
ಯಡಿಯೂರಪ್ಪ ಪುನರಾಗಮನದ ಇಂತಹ ಪ್ರಸ್ತಾಪವನ್ನು ಬಿಜೆಪಿ ತನ್ನ ಗಮನದಲ್ಲಿಟ್ಟುಕೊಂಡಿದ್ದರೆ, ಆ ವಿಚಾರದಲ್ಲಿ ವ್ಯವಹರಿಸುವುದಕ್ಕೆ ಪಕ್ಷಕ್ಕೆ ಸೋಮಣ್ಣ ಅವರಂತಹವರು ಬಿಟ್ಟರೆ ಬೇರೆ ಯಾರೂ ಇಲ್ಲವೇ? ಕನಿಷ್ಠ ಪಕ್ಷ ಈ ರೀತಿಯ ಗೊಂದಲದ ಸುದ್ದಿಯನ್ನು ಹಬ್ಬಿಸುವುದರ ವಿರುದ್ಧ ಸಂಬಂಧಪಟ್ಟವರಿಗೆ ಸೂಚನೆ ಕೊಡಲೇಬೇಕು. ಇಂತಹ ಮಾತನ್ನು ನಾಯಕರೆನಿಸಿಕೊಂಡವರು ಕೇಳಿಕೊಂಡು ಸುಮ್ಮನಿದ್ದರೆ ಅದರ ಅರ್ಥವಾದರೂ ಏನು?
ಬಿಜೆಪಿಯ ಈಗಿನ ಅವಾಂತರದ ಸ್ಥಿತಿಯಲ್ಲಿ ಪಕ್ಷದ ಟಿಕೆಟ್ ಹಂಚಿಕೆ ಕಷ್ಟ ಎನ್ನುವುದು ನಿಜ. ಆದರೆ ಅದನ್ನು ಮಾಡಲೇಬೇಕಲ್ಲ. ಬಳ್ಳಾರಿ, ಚಿತ್ರದುರ್ಗ, ದಾವಣಗೆರೆಯಂತಹ ಜಿಲ್ಲೆಗಳಲ್ಲೂ ಬಿಜೆಪಿಗೆ ಅಭ್ಯರ್ಥಿಗಳು ಸಿಗುವುದು ಕಷ್ಟವಾಗಿರುವಂತಿದೆ. ಅದು ಪಕ್ಷದ ನಾಯಕರ ಸ್ವಯಂಕೃತಪರಾಧ.
ವರ್ಷದ ಹಿಂದೆ ರಾಜ್ಯ ರಾಜಕೀಯದ ನಿಯಂತ್ರಣ ಶಕ್ತಿಯನ್ನು ಪಡೆದಿದ್ದ ಬಿಜೆಪಿ, ಈಗ ಸಕ್ರಿಯಾ  ರಾಜಕೀಯದಿಂದ ಪ್ರತಿಕ್ರಿಯಾ ರಾಜಕೀಯಕ್ಕೆ ವಾಲಿರುವುದು ಅನಿವಾರ್ಯವೇನು?
ಜಾತ್ಯತೀತ ಜನತಾದಳದಲ್ಲಿ ಹೆಚ್ಚು ಕಡಿಮೆ ಟಿಕೆಟ್ ಹಂಚಿಕೆಯ ಪ್ರಕ್ರಿಯೆ ಮುಗಿದಿರಬೇಕು. ಆ ಪಕ್ಷದಲ್ಲಿ ಹೇಳಿಕೊಳ್ಳುವಂತಹ ಸಮಸ್ಯೆಗಳು ಟಿಕೆಟ್ ಹಂಚಿಕೆಯ ಸಂಬಂಧದಲ್ಲಿ ಇರಲಿಕ್ಕೆ ಸಾಧ್ಯವಿಲ್ಲ. ದೇವೇಗೌಡರು ಎಲ್ಲ ಕ್ಷೇತ್ರಗಳಲ್ಲೂ ಇರುವ ಪರಿಸ್ಥಿತಿಯನ್ನು ಚೆನ್ನಾಗಿಯೇ ತಿಳಿದವರು. ಸಾಧ್ಯವಿರುವಷ್ಟೂ ಮಟ್ಟಿಗೆ ಸ್ಥಳೀಯ ವಿದ್ಯಮಾನಗಳನ್ನು ಪ್ರತಿಬಿಂಬಿಸುವಂತಹ ಅಭ್ಯರ್ಥಿಗಳನ್ನು ಆರಿಸುವ ಶಕ್ತಿ ಅವರಿಗಿದೆ.
ಯಡಿಯೂರಪ್ಪ ಸಮಸ್ಯೆ: ಈಗ ಸಮಸ್ಯೆ ಇರುವುದು ಯಡಿಯೂರಪ್ಪ ಅವರಿಗೆ. ಅವರು ಹಿಂದೆ ನಿರೀಕ್ಷಿಸಿದಂತೆ, ಅವರ ಪರವಾಗಿ ರಾಜ್ಯದ ಎಲ್ಲ ಕಡೆ ಜನಬೆಂಬಲದ ದೊಡ್ಡ ಅಲೆ ಎದ್ದಿಲ್ಲ. 2008ರಲ್ಲಿ ಯಡಿಯೂರಪ್ಪ ನಾಯಕತ್ವಕ್ಕೆ ಇದ್ದಂತಹ ವಿಶೇಷವಾದ ಆಕರ್ಷಣೆ ಹಾಗೂ ದೊಡ್ಡ ಸಮುದಾಯದ ಬೆಂಬಲದ ಪ್ರದರ್ಶನ ಕಂಡು ಬರುತ್ತಿಲ್ಲ.
ಅವರಿಗೆ ಸಿಕ್ಕಿರುವ ಹಾಗೂ ಸಿಗಬಹುದಾದ ಬೆಂಬಲ ಬಿಜೆಪಿಯ ಕಡೆಯಿಂದಲೇ ಬರಬೇಕು. ಹಾವೇರಿಯಲ್ಲಿ ಕಂಡುಬಂದಿದ್ದ ಉತ್ಸಾಹ ಈಗ ಇಲ್ಲ. ಅವರ ಜತೆ ಏನೇ ಆದರೂ ಇರುತ್ತೀವಿ ಎಂದು ಹೇಳಿದ್ದವರಲ್ಲೂ ಕೆಲವರು ಈಗ ಹಿಂದೇಟು ಹಾಕುತ್ತಿದ್ದಾರೆ. ಆದರೂ ಯಡಿಯೂರಪ್ಪ ಹಿಂದೆ ಸರಿಯುವಂತಿಲ್ಲ. ಅಭ್ಯರ್ಥಿಗಳನ್ನು ಹುಡುಕಲೇಬೇಕು. ಅವರನ್ನು ನಿಲ್ಲಿಸಲೇ ಬೇಕು. ಮುಂದಿನ ಸೋಲು - ಗೆಲವು ಜನರಿಗೇ ಬಿಟ್ಟಿದ್ದು.
ಬಿಎಸ್ಸಾರ್ ಕಾಂಗ್ರೆಸ್ಸನ್ನು ಬಳ್ಳಾರಿಯಿಂದ ಹಿಡಿದು ಬಾಗಲಕೋಟೆಯವರೆಗಿನ ಸೀಮೆಯಲ್ಲಿ, ನಗರಗಳ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಫಲಿತಾಂಶದ ಮಾನದಂಡದಿಂದ ಕಡೆಗಾಣಿಸುವುದು ತಪ್ಪಾದೀತು.
ಆ ಪಕ್ಷದ ಬೆನ್ನೆಲುಬಿನಂತಿರುವ ವಾಲ್ಮೀಕಿ ಸಮಾಜದ ಜನ ಇರುವುದು ಪೇಟೆ-ಪಟ್ಟಣಗಳಲ್ಲಿ ಅಲ್ಲ. ಹಳ್ಳಿಗಳಲ್ಲಿ. ಶ್ರೀರಾಮುಲು ಈಗ ಪಾದಯಾತ್ರೆ, ಶಂಖನಾದ ಅದ್ಧೂರಿಯ ಊಟೋಪಚಾರದ ವ್ಯವಸ್ಥೆಯನ್ನು ಬಿಟ್ಟು ಗಂಭೀರವಾಗಿ ಸಂಘಟನೆಯತ್ತ ಗಮನ ಹರಿಸಿರುವಂತಿದೆ.
ನಾಯಕರು ಯಾರು?: ಸಾಮಾನ್ಯವಾದ ಸನ್ನಿವೇಶದಲ್ಲಿ ರಾಜಕೀಯ ಪಕ್ಷಗಳ ನಾಯಕರು ಯಾರು ಎನ್ನುವುದನ್ನು ಜನ ಗಮನಿಸುವುದಿಲ್ಲ. ಜನರಿಂದ ರಾಜಕೀಯ ಪಕ್ಷಗಳು ದೂರವಾಗಿರುವ ಕಾಲ ಅದು. ನಾಯಕರಿಗೆ ಬೇರೆ ಉದ್ಯೋಗಗಳಿರುತ್ತವೆ.
ಆದರೆ ಚುನಾವಣೆ ಸಮಯದಲ್ಲಿ ಪಕ್ಷಗಳ ನಾಯಕರೇ ಬಹುಮುಖ್ಯವಾದ ಪಾತ್ರಧಾರಿಗಳು. ಅನೇಕರು ಪಕ್ಷದ ನಾಯಕರ ಮುಖ ನೋಡೇ ಮತ ನೀಡುವುದು. ದೇವರಾಜ ಅರಸು, ರಾಮಕೃಷ್ಣ ಹೆಗಡೆ, ದೇವೇಗೌಡರು, ಎಸ್ಸೆಮ್ ಕೃಷ್ಣ, ಕಳೆದ ಚುನಾವಣೆಯಲ್ಲಿ ಯಡಿಯೂರಪ್ಪ ಅವರು ಅಂತಹ ನಾಯಕರಾಗಿದ್ದರು.
ಈಗ ಯಾವ ಪಕ್ಷಕ್ಕೂ ಅಂತಹ ಆಕರ್ಷಣೆ ಇರುವ ನಾಯಕರಿಲ್ಲ. ರಾಷ್ಟ್ರೀಯ ಪಕ್ಷಗಳು ಹೈಕಮಾಂಂಡಿನತ್ತ ಕೈ ತೋರಿಸಿದರೆ, ಇತರರು ಸಾಮೂಹಿಕ ನಾಯಕತ್ವದ ಮಾತಾಡುತ್ತಿದ್ದಾರೆ. (ಇದಕ್ಕೆ ಜಾತ್ಯತೀತ ಜನತಾದಳ ಅಪವಾದ. ಪಕ್ಷಕ್ಕೆ ನಿರ್ಧಾರಕ ನಾಯಕ ಕುಮಾರಸ್ವಾಮಿ)
ವಾಸ್ತವದಲ್ಲಿ ಈಗ ಪ್ರಾಯಶಃ ಜಾತ್ಯತೀತ ಜನತಾದಳ ಬಿಟ್ಟರೆ, ಬೇರೆ ಯಾವ ಪಕ್ಷಕ್ಕೂ "ನಾಯಕತ್ವ"ದ ಕಲ್ಪನೆಯನ್ನು ಪ್ರದರ್ಶಿಸಬಲ್ಲ ವ್ಯಕ್ತಿ ಇಲ್ಲ. ಎಸ್ಸೆಮ್ ಕೃಷ್ಣ ಮೌನವಾಗಿದ್ದಾರೆ, ಜಗದೀಶ್ ಶೆಟ್ಟರ್ ಅವರದ್ದು ಪದನಿಮಿತ್ತ (ಮುಖ್ಯಮಂತ್ರಿ) ನಾಯಕತ್ವ. ಯಡಿಯೂರಪ್ಪ ಅವರ ಅವಾಂತರಗಳಿಂದ ಹಿಂದೆ ಅವರನ್ನು ಹುಡುಕಿಕೊಂಡು ಬಂದಿದ್ದ ನಾಯಕತ್ವದ ಹೊಳಪನ್ನು ಕಳೆದುಕೊಂಡಿದ್ದಾರೆ.
ಕಿಡಿಗೇಡಿತನ: ಈ ಚುನಾವಣೆಯಲ್ಲಿ ಪಕ್ಷಗಳಿಗೆ ನಾಯಕರೂ ಇಲ್ಲ. ಬಲವಾಗಿ ಇಡೀ ರಾಜ್ಯದಲ್ಲಿ ಪ್ರಸ್ತಾಪಿಸಬಹುದಾದಂತಹ ಯಾವ ವಿಚಾರವೂ ಇಲ್ಲ. ಪಕ್ಷಗಳ ನಡುವೆ ಹೊಂದಾಣಿಕೆಯ ಮಾತೂ ಇಲ್ಲ, ಆದರೂ ಚುನಾವಣೆ ನಡೆಯಲೇ ಬೇಕು. ನಡೆಯುತ್ತದೆ ಅಷ್ಟೇ.

- ಸತ್ಯ
anisikeprabha@gmail.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.