ಅಂಕಣಗಳು

ಸಹಕಾರ ಸಂಘಗಳ ಕಾಯಿದೆ ತಿದ್ದುಪಡಿಯ ಸುತ್ತ

Published On :

ಸಹಕಾರ ಚಳವಳಿಗೆ ತನ್ನದೇ ಆದ ಇತಿಹಾಸವಿದೆ. ಭಾರತದಲ್ಲಿ ಒಂದು ನೂರು ವರ್ಷಗಳನ್ನು ಪೂರೈಸಿರುವ ಸಹಕಾರಿ ರಂಗವು ದೇಶದ ಆರ್ಥಿಕ ಅಭಿವೃದ್ಧಿಯಲ್ಲಿ, ಅದರಲ್ಲೂ ಪ್ರಮುಖವಾಗಿ ಗ್ರಾಮೀಣ ಪ್ರದೇಶದ ಮತ್ತು ರೈತರ ಅಭಿವೃದ್ಧಿಯಲ್ಲಿ ಅಚ್ಚರಿಯ ಕೊಡುಗೆಯನ್ನು ನೀಡಿರುತ್ತದೆ. ಕಳೆದ ವರ್ಷವನ್ನು ಅಂತಾರಾಷ್ಟ್ರೀಯ ಸಹಕಾರಿ ವರ್ಷವನ್ನಾಗಿ ಆಚರಣೆ ಮಾಡಲಾಯಿತು. ಇದೇ ಸಂದರ್ಭದಲ್ಲಿ ಕೇಂದ್ರ ಕೃಷಿ ಖಾತೆಯ ಸಚಿವರಾದ  ಶರದ್ ಪವಾರ್ ಅವರು ಸಂವಿಧಾನದ ಅನುಚ್ಛೇದ 19ರ ತಿದ್ದುಪಡಿಯ ಮೂಲಕ ಸಹಕಾರ ಸಂಘಗಳ ರಚನೆಯನ್ನು ಮೂಲಭೂತ ಹಕ್ಕಾಗಿಸಿರುತ್ತಾರೆ. ಇದಕ್ಕೆ ಅನುಗುಣವಾಗಿ ಕರ್ನಾಟಕದಲ್ಲಿ ಸಹಕಾರ ಕಾಯ್ದೆಯನ್ನು ತಿದ್ದುಪಡಿಮಾಡಲಾಗಿದ್ದು, ಸಾಕಷ್ಟು ಬದಲಾವಣೆಗಳನ್ನು ತರಲಾಗಿದೆ.
ಬಹುಶಃ ಕರ್ನಾಟಕ ಸಹಕಾರ ಕಾಯ್ದೆ ಹಾಗೂ ನಿಯಮಗಳಿಗೆ ಆಗಿರುವ ತಿದ್ದುಪಡಿಗಳು ಮತ್ಯಾವ ಕಾಯ್ದೆ ಅಥವಾ ನಿಯಮಗಳಿಗೆ ಆಗಿರುವುದಿಲ್ಲ. ಬದಲಾದ ಸನ್ನಿವೇಶಗಳಿಗೆ ಅನುಗುಣವಾಗಿ ಆಯಾ ಕಾಲಕ್ಕೆ ಸಹಕಾರಿ ಕಾಯ್ದೆಗೆ ತಿದ್ದುಪಡಿಗಳನ್ನು ತರಲಾಗಿದೆ. ಕರ್ನಾಟಕದಲ್ಲಿ ಸಹಕಾರಿ ಸಂಘಗಳಲ್ಲಿ ರಾಜಕೀಯ ಹಸ್ತಕ್ಷೇಪವನ್ನು ತಪ್ಪಿಸಬೇಕೆಂಬ ಒತ್ತಾಯ ಬಹಳ ಹಳೆಯ ಕಾಲದ ಒತ್ತಾಯವಾಗಿರುತ್ತದೆ. ಈ ಕಾಯ್ದೆಗೆ ಏನೆಲ್ಲಾ ತಿದ್ದುಪಡಿಗಳು ಬಂದರೂ, ಇಂದಿಗೂ ಸಹಕಾರಿ ಸಂಘಗಳು ರಾಜಕೀಯ ಹಸ್ತಕ್ಷೇಪದಿಂದ ಮುಕ್ತವಾಗಿರುವುದಿಲ್ಲ. ಅದೇ ರೀತಿ ಬಹಳಷ್ಟು ರಾಜಕಾರಣಿಗಳು ಸಹಕಾರಿ ಸಂಘಗಳನ್ನು ತಮ್ಮ ರಾಜಕೀಯ ಬೆಳವಣಿಗೆಯ ದಾರಿಯನ್ನಾಗಿ ಮಾಡಿಕೊಂಡಿರುವುದು ಬಹಿರಂಗ ಸತ್ಯವಾಗಿರುತ್ತದೆ.
ಕರ್ನಾಟಕ ಸಹಕಾರ ಸಂಘಗಳ (ತಿದ್ದುಪಡಿ) ವಿಧೇಯಕ, 2012ರ ಸೇರ್ಪಡೆ ಕಲಂ 39ಎ ರ ಅನ್ವಯ 2013ರ ಮಾರ್ಚ್ ಮತ್ತು ಏಪ್ರಿಲ್ ತಿಂಗಳಲ್ಲಿ ನಡೆಯಬೇಕಾಗಿದ್ದ ಪ್ರಾಥಮಿಕ ಸಹಕಾರ ಸಂಘಗಳ ಚುನಾವಣೆಯನ್ನು 2013ರ ಸೆಪ್ಟಂಬರ್ ತಿಂಗಳ 30ನೇ ತಾರೀಖಿನವರೆಗೆ ಅವಕಾಶ ಕಲ್ಪಿಸಿ ಮುಂದೂಡಲಾಗಿದೆ. ಅದೇ ರೀತಿ ಸೆಕೆಂಡರಿ ಸಹಕಾರ ಸಂಘಗಳು 2013ರ ಅಕ್ಟೋಬರ್ 31ನೇ ತಾರೀಖಿಗೆ ಮುಂಚೆ, ಫೆಡರಲ್ ಸಹಕಾರ ಸಂಘಗಳು ನವೆಂಬರ್ 30ನೇ ತಾರೀಖಿಗೆ ಮುಂಚೆ ಮತ್ತು ಅಪೆಕ್ಸ್ ಸಹಕಾರ ಸಂಘಗಳು ಡಿಸೆಂಬರ್ 31ನೇ ತಾರೀಖಿಗೆ ಮುಂಚೆ ಚುನಾವಣೆಗಳನ್ನು ನಡೆಸಲು ಈ ತಿದ್ದುಪಡಿ ಕಾಯ್ದೆ ಅವಕಾಶ ಕಲ್ಪಿಸುತ್ತದೆ.
ತಿದ್ದುಪಡಿ ವಿಧೇಯಕದ ಅನ್ವಯ ಚುನಾಯಿತ ಆಡಳಿತ ಮಂಡಳಿಯಲ್ಲಿ ಹಿಂದುಳಿದ ವರ್ಗಗಳಿಗೆ ಎರಡು ಸ್ಥಾನವನ್ನು ಕಲ್ಪಿಸಲಾಗಿದೆ. ಅದೇ ರೀತಿ ಮಹಿಳೆಯರಿಗೆ ಎರಡು ಸ್ಥಾನ (ಮೊದಲು ಒಂದು ಸ್ಥಾನ ನಿಗದಿ ಪಡಿಸಲಾಗಿತ್ತು) ಮೀಸಲಾಗಿದೆ, ಉಳಿದಂತೆ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಒಂದು ಸ್ಥಾನ ಕಾಯ್ದಿರಿಸಲಾಗಿದೆ. ಸಹಕಾರ ಸಂಘಗಳ ಆಡಳಿತ ಮಂಡಳಿಗೆ ಅವಶ್ಯಕವಾದರೆ ವಿಶೇಷ ಪರಿಣತಿಯನ್ನು ಹೊಂದಿರುವ ಇಬ್ಬರು ಸದಸ್ಯರನ್ನು ಆಡಳಿತ ಮಂಡಳಿಯಲ್ಲಿ ನೇಮಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಯಾವುದೇ ಸಂದರ್ಭದಲ್ಲಿ ಸಹಕಾರ ಸಂಘದ ಆಡಳಿತ ಮಂಡಳಿಯ ಗರಿಷ್ಠ ನಿರ್ದೇಶಕರ ಸಂಖ್ಯೆ 21 ಮೀರತಕ್ಕದ್ದಲ್ಲ. ಸಹಕಾರ ಸಂಘದ ಕಾರ್ಯಕ್ಷೇತ್ರವು ತಾಲ್ಲೂಕಿನ ಒಂದು ಭಾಗಕ್ಕೆ ವ್ಯಾಪಿಸಿದ್ದರೆ 11 ಜನ ಸದಸ್ಯರು, ಇಡೀ ತಾಲ್ಲೂಕಿಗೆ ವ್ಯಾಪಿಸಿದ್ದರೆ 13 ಜನ ಸದಸ್ಯರು, ತಾಲ್ಲೂಕನ್ನು ಮೀರಿ ಜಿಲ್ಲೆಯನ್ನು ಮೀರದ ಸಂಘವಾದರೆ 15 ಜನ ಸದಸ್ಯರು ಮತ್ತು ಒಂದು ಜಿಲ್ಲೆಯನ್ನು ಮೀರಿದ ಸಹಕಾರ ಸಂಘವಾದಲ್ಲಿ ಗರಿಷ್ಠ 19 ಜನ ಸದಸ್ಯರು ಹಾಗೂ ಫೆಡರಲ್ ಸಹಕಾರ ಸಂಘವಾದರೆ ಗರಿಷ್ಠ 21 ಸದಸ್ಯರ ನಿರ್ದೇಶಕರು ಆಡಳಿತ ಮಂಡಳಿಗೆ ಆಯ್ಕೆಯಾಗಲು ಅವಕಾಶ ಕಲ್ಪಿಸಲಾಗಿದೆ.
ತಿದ್ದುಪಡಿಯ ವಿಧೇಯಕದಲ್ಲಿ ಪ್ರಮುಖವಾಗಿ ಸಹಕಾರ ಸಂಘಗಳ ಸದಸ್ಯರು ಸಕ್ರಿಯವಾಗಿ ಸಹಕಾರ ಸಂಘದ ಚಟುವಟಿಕೆಗಳಲ್ಲಿ ಭಾಗವಹಿಸಲು ಅನುವು ಮಾಡಿಕೊಡಲಾಗಿದೆ. ಯಾರು ಅಂತಹ ಸಹಕಾರ ಸಂಘದ ಸೇವೆಗಳ ಅಗತ್ಯವಿರುವ ಮತ್ತು ಅಂತಹ ಸಂಘದ ಕಾರ್ಯಪ್ರವರ್ತನೆಯ ಪ್ರದೇಶದಲ್ಲಿ ವಾಸವಾಗಿದ್ದಲ್ಲಿ ಸದಸ್ಯತ್ವವನ್ನು ಪಡೆದುಕೊಳ್ಳಬಹುದು. ಸಂಘದ ಸದಸ್ಯರು ಸಂಘದ ಐದು ವಾರ್ಷಿಕ ಮಹಾಸಭೆಗಳ ಪೈಕಿ ಮೂರು ಮಹಾಸಭೆಗಳಿಗೆ ಹಾಜರಾಗಲು ತಪ್ಪಿದರೆ ಅವರಿಗೆ ಮುಂದಿನ ಚುಣಾವಣೆಯಲ್ಲಿ ಮತ ಚಲಾಯಿಸಲು ಅವಕಾಶವಿರುವುದಿಲ್ಲ. ಅದೇ ರೀತಿ ಮೂರು ನಿರಂತರ ಸಹಕಾರ ವರ್ಷಗಳವರೆಗೆ ಉಪವಿಧಿಗಳಲ್ಲಿ ನಿರ್ದಿಷ್ಟಪಡಿಸಬಹುದಾದಂತಹ ಕನಿಷ್ಠ ಸೇವೆಗಳನ್ನು ಅಥವಾ ಸೌಲಭ್ಯಗಳನ್ನು ಬಳಸಿಕೊಳ್ಳಲು ತಪ್ಪಿದ ಸದಸ್ಯ ಅಥವಾ ಪ್ರತಿನಿಧಿಗಳಿಗೆ ಮತದಾನದ ಹಕ್ಕನ್ನು ನೀಡಲಾಗುವುದಿಲ್ಲ. ಇದರಿಂದ ಬರುವ ದಿನಗಳಲ್ಲಿ ಸಹಕಾರ ಸಂಘಗಳ ವಾರ್ಷಿಕ ಮಹಾಸಭೆಯಲ್ಲಿ ಸದಸ್ಯರು ಕಡ್ಡಾಯವಾಗಿ ಹಾಜರಾಗಿ ಹಾಜರಾತಿಯ ಪ್ರಮಾಣ ಪತ್ರವನ್ನು ಪಡೆಯಬೇಕಾಗುತ್ತದೆ. ಇಲ್ಲದೇ ಹೋದಲ್ಲಿ ಮತದಾನದ ಹಕ್ಕನ್ನು ಕಳೆದುಕೊಳ್ಳಬಹುದು.
ತಿದ್ದುಪಡಿ ವಿಧೇಯಕದಲ್ಲಿ ರಾಜ್ಯ ಸರ್ಕಾರವು ಪ್ರಾಥಮಿಕ ಕೃಷಿ ಸಾಲ ಸಹಕಾರ ಸಂಘದ ಆಡಳಿತ ಮಂಡಳಿಯನ್ನು ಹೊರತುಪಡಿಸಿ ಇತರೆ ಸಹಕಾರ ಸಂಘಗಳ ಆಡಳಿತ ಮಂಡಳಿಗೆ ಒಬ್ಬ ಪ್ರತಿನಿಧಿಯನ್ನು ನಾಮ ನಿರ್ದೇಶನ ಮಾಡಲು ಅವಕಾಶ ಕಲ್ಪಿಸಲಾಗಿದೆ. ಈ ಮೊದಲು ಮೂರು ಜನ ಸದಸ್ಯರನ್ನು ನಾಮ ನಿರ್ದೇಶನ ಮಾಡಲು ರಾಜ್ಯ ಸರ್ಕಾರಕ್ಕೆ ಅವಕಾಶವಿತ್ತು. ಯಾವುದೇ ಸಹಕಾರ ಸಂಘದ ಆಡಳಿತ ಸಮಿತಿಯನ್ನು ರದ್ದು ಮಾಡಲು ಅಥವಾ ಅಮಾನತ್ತು ಮಾಡಲು ಸರ್ಕಾರಕ್ಕಿರುವ ಅವಕಾಶವನ್ನು ಆರು ತಿಂಗಳ ಅವಧಿಗೆ ಸೀಮಿತಗೊಳಿಸಲಾಗಿದೆ. ಆರು ತಿಂಗಳ ಮೀರಿದ ಅವಧಿಗೆ ಯಾವುದೇ ಆಡಳಿತ ಸಮಿತಿಯನ್ನು ರದ್ದುಮಾಡುವಂತಿಲ್ಲ ಅಥವಾ ಅಮಾನತ್ತಿನಲ್ಲಿ ಇಡುವಂತಿಲ್ಲ. ಆದರೆ ಸರ್ಕಾರದ ಷೇರು ಅಥವಾ ಸಾಲ ಅಥವಾ ಧನ ಸಹಾಯ ಅಥವಾ ಸರ್ಕಾರದ ಗ್ಯಾರಂಟಿಯಿಲ್ಲದ ಯಾವುದೇ ಸಹಕಾರ ಸಂಘದ ಆಡಳಿತ ಸಮಿತಿಯನ್ನು ರದ್ದುಪಡಿಸುವಂತಿಲ್ಲ ಅಥವಾ ಅಮಾನತ್ತಿನಲ್ಲಿ ಇಡುವಂತಿಲ್ಲ.
ಸ್ಥಳೀಯ ಸಂಸ್ಥೆಗಳ ಕಾಯ್ದೆಯ ರೀತಿಯಲ್ಲಿ ಸಹಕಾರಿ ಸಂಘಗಳಲ್ಲಿ ಆಡಳಿತ ಮಂಡಳಿಯ ಸದಸ್ಯರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ಕಲಂ 29ಎಚ್ ಅಡಿಯಲ್ಲಿ ಅವಕಾಶ ಕಲ್ಪಿಸಲಾಗಿದೆ. ಇಂತಹ ಅವಿಶ್ವಾಸ ನಿರ್ಣಯವನ್ನು ಆ ಉದ್ದೇಶಕ್ಕಾಗಿ ವಿಶೇಷವಾಗಿ ಕರೆಯಲಾದ ಸರ್ವ ಸದಸ್ಯರ ಸಭೆಯಲ್ಲಿ ಮತ ನೀಡುವ ಹಕ್ಕನ್ನು ಹೊಂದಿರುವ ಒಟ್ಟು ಸದಸ್ಯರ ಪೈಕಿ ಮೂರನೇ ಎರಡಕ್ಕಿಂತ ಕಡಿಮೆ ಇಲ್ಲದೆ ಸದಸ್ಯರು ಬಹುಮತದಿಂದ ಅಂಗೀಕರಿಸಿದರೆ ಅಂತಹ ಸ್ಥಾನ ತೆರವುಗೊಳ್ಳುತ್ತದೆ. ಇದರಿಂದ ಸಹಕಾರ ಸಂಘಗಳಲ್ಲಿ ರಾಜಕೀಯ ಕಾರಣಗಳಿಗಾಗಿ ಸರ್ವ ಸದಸ್ಯರ ಸಭೆಗಳು ನಡೆಯಲು ಅನುವು ಮಾಡಿಕೊಟ್ಟಂತಾಗಿದೆ.
ಹಿಂದಿನ ಕಾಯ್ದೆಯಲ್ಲಿ ಆಡಳಿತ ಮಂಡಳಿಯ ಯಾವುದೇ ಸ್ಥಾನ ಖಾಲಿ ಆದರೆ ಅಂತಹ ಸ್ಥಾನಕ್ಕೆ ನಿರ್ದೇಶಕರನ್ನು ಭರ್ತಿ ಮಾಡಿಕೊಳ್ಳಲು (ಕೋ-ಆಪ್) ಅವಕಾಶವಿತ್ತು. ಆದರೆ ತಿದ್ದುಪಡಿ ಕಾಯ್ದೆಯಲ್ಲಿ ಸಹಕಾರ ಸಂಘದ ಚುನಾಯಿತ ಸದಸ್ಯರ ಸ್ಥಾನ ಆಕಸ್ಮಿಕವಾಗಿ ಖಾಲಿ ಆದರೆ, ಅಂತಹ ಅವಧಿಯು ಅರ್ಧ ಅವಧಿಗಿಂತ ಹೆಚ್ಚಾಗಿದ್ದರೆ, ಖಾಲಿಯಾದ ಸ್ಥಾನವನ್ನು ಚುನಾವಣೆ ಮೂಲಕ ಭರ್ತಿ ಮಾಡಿಕೊಳ್ಳಬೇಕಾಗುತ್ತದೆ. ಒಂದು ವೇಳೆ ಖಾಲಿಯಾದ ಸ್ಥಾನವು ಉಳಿದ ಅರ್ಧ ಅವಧಿಗಿಂತ ಕಡಿಮೆ ಇದ್ದರೆ ಆ ಸಂದರ್ಭದಲ್ಲಿ ಕಾರ್ಯಕಾರಿ ಮಂಡಳಿಯು ಖಾಲಿಯಾದ ಸ್ಥಾನವನ್ನು ನಾಮ ನಿರ್ದೇಶನದ ಮೂಲಕ ಭರ್ತಿ ಮಾಡಿಕೊಳ್ಳಬಹುದು. ಅಲ್ಲದೆ ಆಡಳಿತ ಮಂಡಳಿಯಲ್ಲಿ ಪದಾಧಿಕಾರಿಗಳ ಸ್ಥಾನವು ತೆರವಾದರೆ ಅಂತಹ ಸ್ಥಾನವನ್ನು ಅಧಿಸೂಚಿತವಾಗಿರುವ ದಿನಾಂಕದಿಂದ 60 ದಿನಗಳ ಒಳಗೆ ಚುನಾವಣೆಯ ಮೂಲಕ ತುಂಬಬೇಕಾಗುತ್ತದೆ.
ಸ್ಥಳೀಯ ಸಂಸ್ಥೆಗಳ ಕಾಯ್ದೆಯಲ್ಲಿ ರಾಜ್ಯ ಚುನಾವಣಾ ಆಯೋಗವನ್ನು ರಚಿಸಲಾಗಿದ್ದು, ಈ ಸಂಸ್ಥೆಗಳ ಚುನಾವಣಾ ನಿರ್ವಹಣೆ ಹಾಗೂ ದೂರು ವಿಲೇವಾರಿಗಳ ಅಧಿಕಾರವನ್ನು ಚುನಾವಣಾ ಆಯೋಗಕ್ಕೆ ನೀಡಲಾಗಿದೆ. ತಿದ್ದುಪಡಿಯ ಸಹಕಾರಿ ಕಾಯ್ದೆಯಡಿ ಸ್ಥಳೀಯ ಸಂಸ್ಥೆಗಳ ರಾಜ್ಯ ಚುನಾವಣಾ ಆಯೋಗದ ಮಾದರಿಯಲ್ಲಿ ಕಲಂ 39ಎಎ ಅಡಿಯಲ್ಲಿ ಸಹಕಾರಿ ಚುನಾವಣಾ ಆಯೋಗವನ್ನು ರಚಿಸಲು ಅವಕಾಶ ಕಲ್ಪಿಸಲಾಗಿದೆ. ರಾಜ್ಯ ಸರ್ಕಾರವು ಅಧಿಸೂಚನೆಯ ಮೂಲಕ ಒಬ್ಬ ಸಹಕಾರಿ ಚುನಾವಣಾ ಆಯುಕ್ತ ಹಾಗೂ ಒಬ್ಬ ಕಾರ್ಯದರ್ಶಿಯನ್ನು ಒಳಗೊಂಡ ಮತ್ತು ಅಗತ್ಯ ಸಿಬ್ಬಂದಿ ಇರುವ ಚುನಾವಣಾ ಆಯೋಗವನ್ನು ರಚಿಸಬೇಕಾಗಿರುತ್ತದೆ. ಈ ಆಯೋಗವು ರಾಜ್ಯದಲ್ಲಿರುವ ವಿವಿಧ ರೀತಿಯ 36 ಸಾವಿರಕ್ಕೂ ಅಧಿಕ ಸಹಕಾರ ಸಂಘಗಳ ಚುನಾವಣೆಯ ನಿರ್ವಹಣೆ, ಸಹಕಾರ ಸಂಘಗಳ ಪದಾಧಿಕಾರಿಗಳ ಚುನಾವಣಾ ನಿರ್ವಹಣೆ ಹಾಗೂ ಚುನಾವಣಾ ಸಂಬಂಧ ದೂರು ವಿಲೇವಾರಿ ಕಾರ್ಯವನ್ನು ನಿರ್ವಹಿಸಬೇಕಾಗುತ್ತದೆ. ಇದರಿಂದ ರಾಜ್ಯದಲ್ಲಿರುವ ಎಲ್ಲಾ ರೀತಿಯ ಸಹಕಾರ ಸಂಘಗಳು ಇನ್ನು ಮುಂದೆ ಸಹಕಾರ ಚುನಾವಣಾ ಆಯೋಗದ ಅಡಿಯಲ್ಲಿ ಚುನಾವಣೆಗಳನ್ನು ನಡೆಸಬೇಕಾಗುತ್ತದೆ. ಈ ಆಯೋಗವು ಸಹಕಾರ ಸಂಘಗಳ ಮತದಾರರ ಪಟ್ಟಿಯ ಪರಿಷ್ಕರಣೆ ಅಧಿಕಾರವನ್ನು ಹೊಂದಿರುತ್ತದೆ.
ತಿದ್ದುಪಡಿ ವಿಧೇಯಕದಲ್ಲಿ ಕಲಂ 63ರ ಅಡಿಯಲ್ಲಿ ಪ್ರತಿಯೊಂದು ಸಹಕಾರ ಸಂಘವು ವಾರ್ಷಿಕ ಲೆಕ್ಕ ಪರಿಶೋಧನೆಯನ್ನು ಕಡ್ಡಾಯವಾಗಿ ಮಾಡಿಸಬೇಕಾಗುತ್ತದೆ ಮತ್ತು ಸಂಘದ ವಾರ್ಷಿಕ ಮಹಾಸಭೆಯಲ್ಲಿ ಲೆಕ್ಕ ಪರಿಶೋಧಕರ ವರದಿಯನ್ನು ಕಡ್ಡಾಯವಾಗಿ ಮಂಡಿಸಬೇಕಾಗುತ್ತದೆ.
ಭಾರತ ಸರ್ಕಾರವು ಸಂವಿಧಾನದ 97ನೇ ತಿದ್ದುಪಡಿಯ ಮೂಲಕ ಸಹಕಾರ ಸಂಘಗಳ ರಚನೆಯ ಹಕ್ಕನ್ನು ಮೂಲಭೂತ ಹಕ್ಕಾಗಿ ನೀಡಿರುತ್ತದೆ. ಪ್ರತಿಯೊಂದು ರಾಜ್ಯವು ಇದರ ಅನ್ವಯ ಸಹಕಾರ ಸಂಘಗಳ ಸ್ವ-ಇಚ್ಚೆಯ ರಚನೆ, ಸ್ವಾಯತ್ತ ಕಾರ್ಯಾಚರಣೆ, ಪ್ರಜಾಸತ್ತಾತ್ಮಕ ಹತೋಟಿ ಹಾಗೂ ವೃತ್ತಿ ಪರತೆಯನ್ನು ಪ್ರೋತ್ಸಾಹಿಸಲು ಪ್ರಯತ್ನಿಸಬೇಕಾಗಿರುತ್ತದೆ.
ತಿದ್ದುಪಡಿಯ ಕಾಯ್ದೆಯಲ್ಲಿ ಸಹಕಾರ ಸಂಘದ ಸದಸ್ಯರು ತಮ್ಮ ಸಂಘದ ದೈನಂದಿನ ವ್ಯವಹಾರಗಳ ನಿರ್ವಹಣೆಯ ಲೆಕ್ಕ ಪುಸ್ತಕಗಳನ್ನು ನೋಡಲು ಹಾಗೂ ಇದಕ್ಕೆ ಸಂಬಂಧಪಟ್ಟ ಮಾಹಿತಿ ಮತ್ತು ಲೆಕ್ಕಗಳನ್ನು ಪಡೆಯಲು ಹಕ್ಕನ್ನು ನೀಡಲಾಗಿರುತ್ತದೆ. ಒಟ್ಟಾರೆ ಕರ್ನಾಟಕ ಸಹಕಾರ ಸಂಘಗಳ (ತಿದ್ದುಪಡಿ) ವಿಧೇಯಕ, 2012 ತಾತ್ಕಾಲಿಕವಾಗಿ ನಡೆಯಬೇಕಾಗಿದ್ದ ಸಹಕಾರ ಸಂಘಗಳ ಆಡಳಿತ ಮಂಡಳಿಯ ಚುನಾವಣೆಯನ್ನು ಆರು ತಿಂಗಳ ಅವಧಿಗೆ ಮುಂದೂಡಿರುತ್ತದೆ. ಕಾಯ್ದೆಯಲ್ಲಿ ಅನೇಕ ತಿದ್ದುಪಡಿಗಳನ್ನು ತರಲಾಗಿದ್ದು, ಈ ತಿದ್ದುಪಡಿಗಳು ಸಹಕಾರ ಸಂಘಗಳು ಪ್ರಜಾಸತಾತ್ಮಕವಾಗಿ ಕಾರ್ಯನಿರ್ವಹಿಸಲು ಎಷ್ಟು ಸಹಕಾರಿ ಎಂಬುದನ್ನು ಬರುವ ದಿನಗಳು ನಿರ್ಧರಿಸಲಿವೆ.

-ರಮೇಶ್ ಬಾಬು
ಜೆಡಿಎಸ್ ವಕ್ತಾರರು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.