ಪಕ್ಷವನ್ನು ಬಲಗೊಳಿಸಿ ದೇಶವನ್ನು ದುರ್ಬಲಗೊಳಿಸಿದರೇ?
ನಿರ್ದಿಷ್ಟ ವರ್ಗಗಳನ್ನು ಉದ್ದೇಶಿಸಿ ಮಾತನಾಡುವುದನ್ನು ಬಿಟ್ಟರೆ ಇಡೀ..
ನಿರ್ದಿಷ್ಟ ವರ್ಗಗಳನ್ನು ಉದ್ದೇಶಿಸಿ ಮಾತನಾಡುವುದನ್ನು ಬಿಟ್ಟರೆ ಇಡೀ ದೇಶವಾಸಿಗಳನ್ನು ಉದ್ದೇಶಿಸುವಲ್ಲಿ ಸೋನಿಯಾ ಅಷ್ಟಾಗಿ ಯಶಸ್ಸು ಕಂಡಿಲ್ಲ
ಇದನ್ನು ಸಾಧನೆ ಎನ್ನುವುದಾದರೆ ಖಂಡಿತಾ ಸಾಮಾನ್ಯದ್ದಲ್ಲ. ಯಾವುದೇ ಸಂಘಟನೆಯನ್ನು ದೀರ್ಘಕಾಲ ಮುನ್ನಡೆಸುವುದು ಸುಲಭದ ಮಾತಲ್ಲ. ಇನ್ನು ರಾಜಕೀಯ ಪಕ್ಷ ಅದರಲ್ಲೂ ಕಾಂಗ್ರೆಸ್‌ನಂತಹ ಬೃಹತ್ತಾದ, ಮಹತ್ವಾಕಾಂಕ್ಷಿಗಳ, ಸ್ವಹಿತಕ್ಕಾಗಿ ಸದಾ ಇತರರ ಕಾಲೆಳೆಯುವ, ಅಧಿಕಾರದ ಹಪಾಹಪಿಗಳೇ ಹೆಚ್ಚಿರುವ ರಾಜಕೀಯ ಪಕ್ಷವನ್ನು 15 ವರ್ಷಗಳ ಕಾಲ ಅಧ್ಯಕ್ಷರಾಗಿ ಮುನ್ನಡೆಸುವ ಮೂಲಕ ಸೋನಿಯಾ ಗಾಂಧಿ ಆ ಪಕ್ಷದ ಶತಮಾನದ ಇತಿಹಾಸದಲ್ಲಿ ಹೊಸ ದಾಖಲೆಯನ್ನೇ ಸೃಷ್ಟಿಸಿದ್ದಾರೆ. 1991ರಲ್ಲಿ ಪತಿ ರಾಜೀವ್ ಗಾಂಧಿ ಹತ್ಯೆಯಾಗಿ ಅವರ ಅಸ್ಥಿ ಕರಗುವ ಮುನ್ನವೇ ಕಾಂಗ್ರೆಸಿಗರು ಸೋನಿಯಾ ಮುಂದೆ ಹಾಜರಾಗಿ ಪಕ್ಷ ಮುನ್ನಡೆಸುವಂತೆ ಕೋರಿದ್ದರು. ನೆಹರು-ಗಾಂಧಿ ಕುಟುಂಬವಿಲ್ಲದೆ ತಮ್ಮ ಅಸ್ತಿತ್ವವನ್ನು ಗುರುತಿಸಿಕೊಳ್ಳುವುದು ಸಾಧ್ಯವೇ ಇಲ್ಲ ಎಂದು ನಂಬಿರುವ ಮತ್ತು ಆ ನಂಬಿಕೆಯಲ್ಲಿಯೇ ರಾಜಕೀಯ ಜೀವನ ರೂಪಿಸಿಕೊಳ್ಳುವ ಕಾಂಗ್ರೆಸ್‌ಗೆ ಸೋನಿಯಾ ಅನಿವಾರ್ಯವಾಗಿದ್ದರು. ಆದರೆ ರಾಜಕಾರಣಕ್ಕಿಂತ ಕುಟುಂಬ ಮುಖ್ಯ ಎಂದ ಸೋನಿಯಾ ಕಾಂಗ್ರೆಸಿಗರ ಮನವಿ ತಿರಸ್ಕರಿಸಿದರು. ಆದರೆ ಅದು ಅವರ ಅಂತಿಮ ತೀರ್ಮಾನವಲ್ಲ ಎಂಬುದು ಕಾಂಗ್ರೆಸ್ ಕಾರ್ಯಕರ್ತರಿಗೂ ಗೊತ್ತಿತ್ತು. ಹೀಗಾಗಿ ಹೋದಲ್ಲಿ, ಬಂದಲ್ಲಿ ಸೋನಿಯಾ ಮೇಲೆ ಒತ್ತಡ ಹೇರುತ್ತಲೇ ಇದ್ದರು. ಕೊನೆಗೆ ಯಾವ ಕುಟುಂಬಕ್ಕಾಗಿ ಕಾಂಗ್ರೆಸ್ ಅಧ್ಯಕ್ಷಗಿರಿ ಒಲ್ಲೆ ಎಂದಿದ್ದರೋ ಅದೇ ಕುಟುಂಬದ ಪ್ರತಿಷ್ಠೆ ಉಳಿಸುವುದಕ್ಕಾಗಿ, ಪರಂಪರೆ ಮುಂದುವರಿಸುವುದಕ್ಕಾಗಿ 15 ವರ್ಷಗಳ ಹಿಂದೆ ಸೋನಿಯಾ ಕಾಂಗ್ರೆಸ್‌ನ ಚುಕ್ಕಾಣಿ ಹಿಡಿದರು. ಸೋನಿಯಾ ಪಾರುಪತ್ಯದಲ್ಲಿ ಕಾಂಗ್ರೆಸ್ ಲಾಭ ಕಂಡಿದೆ. ಅವರು ಅಧ್ಯಕ್ಷರಾದಾಗ ಕಾಂಗ್ರೆಸ್ ಮೂರು ರಾಜ್ಯಗಳಲ್ಲಿ ಆಡಳಿತ ನಡೆಸುತ್ತಿತ್ತು. ಆಗ 13 ರಾಜ್ಯಗಳಿಗೆ ಆ ಅಧಿಕಾರ ವಿಸ್ತರಿಸಿದೆ. ಇನ್ನು ಸದ್ಯ ಕೇಂದ್ರದಲ್ಲಿರುವ ಸರ್ಕಾರ ಪೂರ್ಣಾವಧಿ ಮುಗಿಸಿದರೆ 10 ವರ್ಷಗಳ ಕಾಲ ಕಾಂಗ್ರೆಸ್ ಕೇಂದ್ರದಲ್ಲಿ ಅಧಿಕಾರ ನಡೆಸಿದಂತಾಗುತ್ತದೆ. ಈ ದೃಷ್ಟಿಯಿಂದ ನೋಡಿದರೆ ಸೋನಿಯಾ ಗಾಂಧಿ ಕಾಂಗ್ರೆಸ್‌ನ ಅತ್ಯಂತ ಯಶಸ್ವಿ ನಾಯಕರೇ. ಆದರೆ...
ಸೋನಿಯಾ ಒಬ್ಬ ಪ್ರಬಲ ವಾಗ್ಮಿಯಾಗಿ ರೂಪುಗೊಳ್ಳಲೇ ಇಲ್ಲ. ಯಾವುದೇ ನಾಯಕ ಜನಮಾನಸದಲ್ಲಿ ನೆಲೆಸಬೇಕಾದರೆ, ಆತನ ಅಥವಾ ಆಕೆಯ ಕಾಣಿಕೆಯನ್ನು ಪ್ರಚುರಪಡಿಸಬೇಕಾದರೆ, ಜನರಿಗಾಗಿ ತನ್ನಲ್ಲಿರುವ ಕನಸುಗಳನ್ನು ತೆರೆದಿಡಬೇಕಾದರೆ ಅದನ್ನು ಮನಮುಟ್ಟುವ ರೀತಿಯಲ್ಲಿ ಮಾತಿಗಿಳಿಸಬೇಕು. ಆದರೆ ಸೋನಿಯಾಗೆ ಇದು ಸಾಧ್ಯವಾಗಲೇ ಇಲ್ಲ. ಇಂದು ಒಬ್ಬ ಒಬಾಮಾ ಮಾತಿಗೆ ನಿಂತನೆಂದರೆ ಆತನ ಕೃತಿಗಿಂತ ಮಾತಿಗೆ ಮರುಳಾಗಿ ಓಗೊಡುವವರೇ ಹೆಚ್ಚು. ಭಾರತದ ರಾಜಕೀಯ ಇತಿಹಾಸ ಇಂತಹ ಅನೇಕ ಮಾತಿನ ಮೋಡಿಗಾರರನ್ನು ಕಂಡಿದೆ. ಜವಾಹರಲಾಲ್ ನೆಹರೂರಿಂದ ಜಯಪ್ರಕಾಶ ನಾರಾಯಣ್‌ವರೆಗೆ, ಇಂದಿರಾಗಾಂಧಿಯಿಂದ ಅಟಲ್ ಬಿಹಾರಿ ವಾಜಪೇಯಿವರೆಗೆ ನಾಯಕರು ತಮ್ಮ ಮಾತಿನ ಮೂಲಕ ಜನರೊಂದಿಗೆ ಕನೆಕ್ಟ್ ಆಗಿದ್ದಾರೆ. ಇಂದು ಬಿಹಾರದ ನಿತೀಶ್‌ಕುಮಾರ್ ಇರಬಹುದು. ಗುಜರಾತಿನ ನರೇಂದ್ರ ಮೋದಿ ಅಥವಾ ಲೋಕಸಭೆಯಲ್ಲಿನ ಪ್ರತಿಪಕ್ಷದ ನಾಯಕ ಸುಷ್ಮಾ ಸ್ವರಾಜ್ ಇರಬಹುದು. ತಾವು ಕನವರಿಸಿದ್ದನ್ನು ಮಾತಿನಲ್ಲಿ ಅರ್ಥಪೂರ್ಣವಾಗಿ ಕಟ್ಟಿಕೊಡುವಲ್ಲಿ ಸಿದ್ಧ ಹಸ್ತರೆ. ಸೋನಿಯಾ ವಿಷಯಕ್ಕೆ ಬಂದರೆ ಅವರಿಗೆ ಇದು ನಾಸ್ತಿ. ಸಿದ್ಧ ಪ್ರತಿ ಪಠಣವೇ ಇವರ ಪಾಲಿಗೆ ಭಾಷಣ ಕಲೆಯಾಗಿ ಹೋಗಿದೆ. ಇದರಿಂದ ಅನೇಕ ಎಡವಟ್ಟುಗಳೂ ಆಗಿದೆ. 2007ರಲ್ಲಿ ಗುಜರಾತ್ ವಿಧಾನಸಭಾ ಪ್ರಚಾರದ ವೇಳೆ ನರೇಂದ್ರ ಮೋದಿ ಅವರನ್ನು 'ಮೌತ್ ಕಾ ಸೌದಾಗರ್' ಎಂದೂ ಅದಕ್ಕೆ ಮೊದಲು ಅಟಲ್ ಬಿಹಾರಿ ವಾಜಪೇಯಿ ಅವರನ್ನು 'ಗದ್ದಾರ್' ಎಂದೂ ಸಂಬೋಧಿಸಿ ಸಾರ್ವಜನಿಕ ಚರ್ಚೆಯನ್ನು ತೀರಾ ಕೆಳಮಟ್ಟಕ್ಕೆ ಕೊಂಡೊಯ್ದು ಅಪಖ್ಯಾತಿಯೂ ಸೋನಿಯಾರಿಗಿದೆ. ಇನ್ನು ಇತ್ತೀಚಿನ ದಿನಗಳಲ್ಲಂತೂ ಸೋನಿಯಾ ಮಾತನಾಡುವುದನ್ನೇ ಕಡಿಮೆ ಮಾಡಿದ್ದಾರೆ. ಚುನಾವಣಾ ಪ್ರಚಾರ, ಕಾಂಗ್ರೆಸ್ ವೇದಿಕೆಗಳನ್ನು ಹೊರತುಪಡಿಸಿ ಅವರು ಮಾತನಾಡುವುದೇ ವಿರಳ. ಸಂದರ್ಭಾನುಸಾರ ನಿರ್ದಿಷ್ಟ ವರ್ಗಗಳನ್ನು ಉದ್ದೇಶಿಸಿ ಮಾತನಾಡುವುದನ್ನು ಬಿಟ್ಟರೆ ಇಡೀ ದೇಶವಾಸಿಗಳನ್ನು ಉದ್ದೇಶಿಸುವಲ್ಲಿ ಸೋನಿಯಾ ಅಷ್ಟಾಗಿ ಯಶಸ್ಸು ಕಂಡಿಲ್ಲ. ಇನ್ನು ರಾಜಕೀಯ ಮುಖಂಡರಿಗಿರಬೇಕಾದ ಮತ್ತೊಂದು ಲಕ್ಷಣ ಎಂದರೆ ತನ್ನೊಂದಿಗೆ ಬರುವ ಗೆಳೆಯರನ್ನು ಸರಿದೂಗಿಸಿಕೊಂಡು ಹೋಗುವುದು. ರಾಜಕೀಯದ ದಾರಿಯಲ್ಲಿ ಮಿತ್ರರು, ಶತ್ರುಗಳು ಎದುರಾಗುವುದು ಸಹಜ. ಅನಿವಾರ್ಯ ಕಾರಣಗಳಿಂದಾಗಿ ತನ್ನ ಹಿಂದೆ ಬರುವ ರಾಜಕೀಯ ಪಕ್ಷಗಳ ಮುಖಂಡರನ್ನು ಅವರೆಲ್ಲ ಓರೆ-ಕೋರೆ, ಒಪ್ಪು-ತಪ್ಪುಗಳ ನಡುವೆಯೂ ಜೊತೆಗಿಟ್ಟುಕೊಳ್ಳುವುದು, ಒಂದಾಗಿ ಹೆಜ್ಜೆ ಇಡುವಂತೆ ಪ್ರೇರೇಪಿಸುವುದು ಯಾವುದೇ ನಾಯಕನಿಗೆ ದೊಡ್ಡ ಸವಾಲೆ ಸರಿ.
1996ರಿಂದೀಚೆಗೆ ಭಾರತದ ರಾಜಕಾರಣದ ಮಗ್ಗಲು ಹೊರಳಿದೆ. ಏಕಪಕ್ಷ ಆಡಳಿತ ಹಳಸಲು ನಾಣ್ಯವಾಗಿ ಮೈತ್ರಿಕೂಟ ರಾಜಕಾರಣ ನಿತ್ಯಸತ್ಯವಾಗಿದೆ. ಇಲ್ಲಿ ಅನಗತ್ಯವಾಗಿ ಬೇಕಿರುವುದು ಪೊಲಿಟಿಕಲ್ ಮ್ಯಾನೇಜ್‌ಮೆಂಟ್. ಸಮಾನ ಮನಸ್ಕರು ಎಂದು ಒಂದೇ ಛತ್ರಿಯಡಿ ಅಧಿಕಾರಕ್ಕಾಗಿ ಒಂದಾದರೂ ಪ್ರತಿಯೊಂದು ರಾಜಕೀಯ ಗುಂಪಿಗೂ ತನ್ನದೇ ಆದ ಒತ್ತಡ, ಒತ್ತಾಸೆಗಳಿರುತ್ತದೆ. ಅದರದೇ ಆದ ಈ್ಟಟಿಡಡ್ಝಿಡ್ಡಿಜಟ್ಛಿಣ ಇರುತ್ತದೆ. 2004ರಲ್ಲಿ ತೀರಾ ಅನಿರೀಕ್ಷಿತವಾಗಿ ಕಾಂಗ್ರೆಸ್ ಲೋಕಸಭಾ ಚುನಾವಣೆಯಲ್ಲಿ ಸರ್ಕಾರ ರಚಿಸುವ ಸಂದರ್ಭ ಒದಗಿಬಂದಾಗ ಅನೇಕ ರಾಜಕೀಯ ಪಕ್ಷಗಳನ್ನು ಒಂದು ಮಾಡಿ ಮೈತ್ರಿಕೂಟದಲ್ಲಿ ತರುವ ಗುರುತರ ಹೊಣೆ ಸೋನಿಯಾ ಹೆಗಲಿಗೆ ಬಿತ್ತು. ಕಳೆದ ಒಂಬತ್ತು ವರ್ಷಗಳಲ್ಲಿ ಯುಪಿಎ ಎರಡು ಅವತಾರಗಳಲ್ಲಿ ಅಧಿಕಾರದಲ್ಲಿ ಮುಂದುವರಿದಿದ್ದರೂ ಅದರ ಅಂಗ ರಚನೆ ಬದಲಾಗಿದೆ. 2004ರಿಂದ 2008ರವರೆಗೆ ಯುಪಿಎ ಬೆಂಬಲಕ್ಕಿದ್ದ ಎಡರಂಗ ಅಮೆರಿಕ ಜೊತೆಗಿನ ಅಣುಬಂಧ ವಿಚಾರದಲ್ಲಿ ಬೆಂಬಲ ಹಿಂತೆಗೆಯುವ ನಿರ್ಧಾರಕ್ಕೆ ಬಂದಿತು. ಆಗ ಅವರ ಮನವೊಲಿಕೆಯ ಕೆಲಸಕ್ಕೆ ಸ್ವತಃ ಮುಂದಾಗುವ ಬದಲು ಸರ್ಕಾರ ನಡೆಸುವವರಿಗೆ ಆ ಹೊಣೆಯನ್ನು ಬಿಟ್ಟುಕೊಟ್ಟ ಕಾರಣ ಎಡರಂಗ ಯುಪಿಎದಿಂದ ದೂರವಾಯಿತು. ಅದೇ ರೀತಿ 2012ರಲ್ಲಿ ರಾಷ್ಟ್ರಪತಿ ಚುನಾವಣೆ ಸಂದರ್ಭ ಮತ್ತು ನಂತರ ಚಿಲ್ಲರೆ ವ್ಯಾಪಾರ ಕ್ಷೇತ್ರದಲ್ಲಿ ಎಫ್‌ಡಿಐ ಜಾರಿಗೆ ತರುವ ಸರ್ಕಾರದ ನಿರ್ಧಾರವನ್ನು ಪ್ರತಿಭಟಿಸಿ ಮಮತಾ ಬ್ಯಾನರ್ಜಿ ಯುಪಿಎಯಿಂದ ದೂರ ಸರಿದಾಗ ಅವರನ್ನು ಕೂಟದಲ್ಲಿ ಉಳಿಸಿಕೊಳ್ಳಲು ಸೋನಿಯಾ ಯಾವುದೇ ಪ್ರಯತ್ನ ಮಾಡಲಿಲ್ಲ. 2004ರಲ್ಲಿ ಯುಪಿಎ ರಚನೆಯಾದಾಗ ಅಂಗ ಪಕ್ಷಗಳಿಗೆ ನೀಡಿದ್ದ ವಾಗ್ದಾನದಂತೆ ಸಮನ್ವಯ ಸಮಿತಿ ರಚನೆ ಮಾಡಿದ್ದರೆ ಅಂಗ ಪಕ್ಷಗಳನ್ನು ಉಳಿಸಿಕೊಳ್ಳಬಹುದಿತ್ತು. ಆದರೆ ಅಂತಹ ರಾಜಕೀಯ ಸೂಕ್ಷ್ಮತೆ ತೋರಲು ಸೋನಿಯಾ ಮುಂದಾಗಲಿಲ್ಲ. ಹಿನ್ನೋಟದಲ್ಲಿ ಎಡರಂಗದ ಬೆಸುಗೆ ಕಳಚಿದ್ದು, ಯುಪಿಎಗೆ ಲಾಭಕರವಾಯಿತಾದರೂ ಅದು ಕೇವಲ ಅದೃಷ್ಟ (Coincidence) ಅದರಲ್ಲಿ ಯಾವುದೇ ರಾಜಕೀಯ ಲೆಕ್ಕಾಚಾರ ಇರಲಿಲ್ಲ. ಸೋನಿಯಾ ಇಂದೂ ಸಹ ಯುಪಿಎ ಮುಖ್ಯಸ್ಥರಾಗಿದ್ದರೂ ಅದರಡಿ ಇರುವ ಎಲ್ಲ ಪಕ್ಷಗಳ ಅಚಲ ವಿಶ್ವಾಸ ಗಿಟ್ಟಿಸಿಕೊಳ್ಳಲಾಗಿಲ್ಲ.
ಪರೋಕ್ಷ ಪ್ರಭಾವ
2004ರ ಚುನಾವಣಾ ಫಲಿತಾಂಶದ ನಂತರದ ದಿನಗಳಲ್ಲಿ 'ತ್ಯಾಗ'ದ 'ಎಕ್ಕಾ' ಎಸೆದು ಸೋನಿಯಾ ಕಾಂಗ್ರೆಸ್ ನೇತೃತ್ವದ ಸರ್ಕಾರ ಸ್ಥಾಪಿಸುವಲ್ಲಿ ಯಶಸ್ವಿ ಆಗಿದ್ದೇನೂ ನಿಜ. ಆದರೆ ಸರ್ಕಾರದಿಂದ ದೂರ ಉಳಿದರೂ, ಆಡಳಿತದ ಹೊಣೆಗಾರಿಕೆಯಿಂದ ನುಣುಚಿಕೊಂಡರೂ ಪರೋಕ್ಷವಾಗಿ ಪ್ರಭಾವ ಉಳಿಸಿಕೊಂಡಿರುವುದೂ ಅಷ್ಟೇ ನಿಜ. ಪಕ್ಷದ ಅಧ್ಯಕ್ಷರಾಗಿ, ತಮ್ಮದೇ ಪಕ್ಷದ ಸರ್ಕಾರಕ್ಕೆ ಸಲಹೆ-ಸೂಚನೆ ನೀಡುವುದಕ್ಕೆ ಯಾರ ವಿರೋಧವೂ ಇಲ್ಲ. ಆದರೆ ರಾಷ್ಟ್ರೀಯ ಸಲಹಾ ಮಂಡಳಿಯನ್ನು ಅಸ್ತಿತ್ವಕ್ಕೆ ತರುವ ಮೂಲಕ ಮತ್ತು ಸ್ವತಃ ತಾವೇ ಅದರ ಅಧ್ಯಕ್ಷರೂ ಆಗುವ ಮೂಲಕ ಸೋನಿಯಾ ಪರ್ಯಾಯ 'ಸರ್ಕಾರ' ರಚನೆಗೆ ಕಾರಣರಾದರು. ಈ ಮಂಡಳಿಯ ಸದಸ್ಯರಾದರೂ ಯಾರು? ದಶಕಗಳ ಹಿಂದಿನ ಸಮಾಜವಾದಿ ಚಿಂತನೆಯ ಮೂಸೆಯಿಂದ ಹೊರ ಬರದೆ, ಆಧುನಿಕ ಆರ್ಥಿಕತೆಯ ಪರಿಧಿಯಿಂದ ದೂರವೇ ಉಳಿದ ಚಿಂತಕರೇ ಈ ಚಾವಡಿಯಲ್ಲಿ ಕುಳಿತಿರುವುದು. ಖಜಾನೆಗೆ ಹಣ ಹೇಗೆ ಬರುತ್ತದೆ, ಅದಕ್ಕೆ ಏನು ಕ್ರಮಗಳನ್ನು ಅನುಸರಿಸಬೇಕು ಎಂಬ ಬಗ್ಗೆ ಸಲಹೆ ನೀಡುವುದಕ್ಕಿಂತ ಆಕರವಾಗಿರುವ ಹಣವನ್ನು ಹೇಗೆ ಹಂಚಬೇಕು ಎಂಬುದೇ ಇವರ ಮೊದಲ ಆದ್ಯತೆ. ಹಾಗಾಗಿಯೇ ಯುಪಿಎ ಮೊದಲ ಅವತಾರದಲ್ಲಿ ಜಾರಿಗೆ ಬಂದ ರೈತರ ಸಾಲ ಮನ್ನಾ, ನರೇಗಾ ಮುಂತಾದ ಯೋಜನೆಗಳು ಕಾಂಗ್ರೆಸ್‌ಗೆ ಅಲ್ಪಮಟ್ಟಿನ ಪ್ರಯೋಜನ ತಂದುಕೊಟ್ಟರೂ ದೇಶದ ಆರ್ಥಿಕ ಪರಿಸ್ಥಿತಿಯ ಅವನತಿಗೂ ಕಾರಣವಾಗಿದೆ. ಈಗ ಜಾರಿಗೆ ಬರಲು ಕಾದಿರುವ ಆಹಾರ ಭದ್ರತಾ ಕಾಯಿದೆ, ವಸತಿಹೀನರಿಗೆಂದು ನಮ್ಮ ಅಶ್ರಯ ಮಾದರಿಯ ವಸತಿ ಯೋಜನೆ ಇನ್ನೂ ಚೇತರಿಕೆ ಕಾಣದ ಆರ್ಥಿಕತೆಯನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡುವ ಲಕ್ಷಣಗಳೇ ಹೆಚ್ಚಿವೆ. ಇಂತಹ ಯೋಜನೆಗಳ ಜಾರಿಗೆ ಒತ್ತಡ ಹೇರದೆ ಸೋನಿಯಾ ತಟಸ್ಥರಾಗಿ ಉಳಿದಿರುತ್ತಿದ್ದರೆ ಸರ್ಕಾರ ಆರ್ಥಿಕ ಸುಧಾರಣೆಗೆ ಮತ್ತಷ್ಟು ಉಪಕ್ರಮಗಳನ್ನು ಕೈಗೊಂಡು ಸದೃಢತೆ ಸಾಧಿಸಲು ಸಾಧ್ಯವಾಗುತ್ತಿತ್ತು. ಗಟ್ಟಿ ಆರ್ಥಿಕತೆಯ ನೆಲೆಗಟ್ಟಲ್ಲದೇ ಯಾವುದೇ ದೇಶವೂ ಗಿಜಟಜಿಛ್ಠಜ ಡಡಿಛಡಿಜ ಆಗಲು ಸಾಧ್ಯವಿಲ್ಲ. ಆದರೆ ಸೋನಿಯಾ ಅಥವಾ ಎನ್‌ಸಿಪಿ (ಸಲಹಾ ಮಂಡಳಿ) ಈ ವಾಸ್ತವವನ್ನು ಗಣನೆಗೆ ತೆಗೆದುಕೊಂಡಂತಿಲ್ಲ. ಇದೆಲ್ಲದರ ಹೊರತಾಗಿಯೂ ಸೋನಿಯಾ ಇಂದಿಗೂ ಅತ್ಯಂತ ಪ್ರಭಾವಿ ರಾಜಕೀಯ ಮುಖಂಡರಾಗಿದ್ದಾರೆ. ಕಾಂಗ್ರೆಸ್ ಎಂಬ ಹೆಮ್ಮರವನ್ನು ಅದರೆಲ್ಲ ಬಿಳಿಲುಗಳ ಸಮೇತ ಹಿಡಿದಿಡುವ ಶಕ್ತಿಯಾಗಿದ್ದಾರೆ. ಅಧಿಕಾರ ವಂಚಿತವಾಗಿ ಅನಾಥವಾಗಿದ್ದ ಪಕ್ಷಕ್ಕೆ ಅಧಿಕಾರ ತಂದುಕೊಟ್ಟು ಚೈತನ್ಯ ತುಂಬಿದ್ದಾರೆ. ಆದರೆ ಒಂದು ರಾಜಕೀಯ ಪಕ್ಷ ಮತ್ತು ಅದರ ಕಾರ್ಯಕರ್ತರಿಗಷ್ಟೇ ಅವರ ಪ್ರಭಾ ವಲಯ ಸೀಮಿತವಾಗಿದೆಯೇ ಅಥವಾ ಈ 15 ವರ್ಷಗಳಲ್ಲಿ ಅವರು ಕಿಛಟಿ ಕ್ಟಿಟ್ಝಡ್ಝ್ಛಿಛಟ ಟಜಛಜಜ್ಠ (ಪಕ್ಷಾತೀತವಾಗಿ ಎಲ್ಲರ ವಿಶ್ವಾಸ ಗಳಿಸುವ ನಾಯಕಿ) ಆಗಿ ಹೊರಹೊಮ್ಮಿದ್ದಾರೆಯೇ ಎಂಬುದರ ಚರ್ಚೆ ಆಗಬೇಕಿದೆ.
-ಕೆ.ಎಸ್.ಜಗನ್ನಾಥ್
jagannath.kudinoor@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

