'ಫ್ಯಾನ್' ತೆಗೆದ ಮೇಲೆ 'ಕೈ' ಬಿಡೋಕಾಗತ್ತಾ?
ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಪ್ರಾದೇಶಿಕ ಪಕ್ಷಗಳಿಗೆ 'ಚಿಹ್ನೆ' ಸಮಸ್ಯೆ ಬೆಂಬಿಡದೆ ಕಾಡಿದೆ. ರಾಯಚೂರು ತಾಲೂಕು ಮುದಗಲ್ ಪಪಂಗೆ ...
ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಪ್ರಾದೇಶಿಕ ಪಕ್ಷಗಳಿಗೆ 'ಚಿಹ್ನೆ' ಸಮಸ್ಯೆ ಬೆಂಬಿಡದೆ ಕಾಡಿದೆ. ರಾಯಚೂರು ತಾಲೂಕು ಮುದಗಲ್ ಪಪಂಗೆ ಮತಗಟ್ಟೆ 10, 11ರಲ್ಲಿ ಇದು ಸ್ವಲ್ಪ ಭಿನ್ನ ಹಾಗೂ ಗಂಭೀರ ಸ್ವರೂಪವನ್ನೇ ಪಡೆದಿತ್ತು. ಮತಗಟ್ಟೆಯಲ್ಲಿ ಚುನಾಯಿತ ಪ್ರತಿನಿಧಿಗಳ ಭಾವಚಿತ್ರ ಅಥವಾ ಅವರ ಪಕ್ಷದ ಚಿಹ್ನೆ ಕಾಣಬಾರದು ಎಂಬ ಚುನಾವಣಾ ಆಯೋಗದ ಆದೇಶದ ಹಿನ್ನೆಲೆಯಲ್ಲಿ ಅಧಿಕಾರಿಗಳು ಬಿಎಸ್‌ಆರ್ ಕಾಂಗ್ರೆಸ್ ಪಕ್ಷದ ಚಿಹ್ನೆ 'ಫ್ಯಾನ್'ನ್ನು ಬಟ್ಟೆಯಿಂದ ಮುಚ್ಚಿದ್ದರು. ಇದನ್ನು ಗಮನಿಸಿದ ಕೆಲವು ಮತದಾರರು ಬಿಎಸ್‌ಆರ್ ಕಾಂಗ್ರೆಸ್ ಚಿಹ್ನೆ 'ಫ್ಯಾನ್'ನ್ನು ಬಟ್ಟೆಯಿಂದ ಮುಚ್ಚಿದ್ದಾಯ್ತು. ಆದರೆ, ಕಾಂಗ್ರೆಸ್‌ನ ಚಿಹ್ನೆ 'ಕೈ'. ಅದನ್ನು ಮಾತ್ರ ಹಾಗೇ ಬಿಟ್ಟಿದ್ದೀರಿ. ಇದ್ಯಾವ ನ್ಯಾಯ? 'ಕೈ'ಯನ್ನು ಮುಚ್ಚಿಬಿಡಿ ಎಂದು ಅಲ್ಲಿದ್ದ ಅಧಿಕಾರಿಗಳನ್ನು ಪ್ರಶ್ನಿಸಿದರು. ಆದರೆ, ಇದಕ್ಕೆ ಉತ್ತರಿಸಲಾಗದೆ ಚುನಾವಣಾಧಿಕಾರಿಗಳು ಬೆಪ್ಪರಾಗಿದ್ದರು!
ಗೋಮ ಅಡ್ಡಾದಿಡ್ಡಿ ಪ್ರಶ್ನೆ
ಕಳೆದ ವಾರ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಬಜೆಟ್‌ನ್ನು ಆಯುಕ್ತ ಡಾ.ಸಿ.ಜಿ. ಬೆಟ್‌ಸೂರ್ ಮಠ ಮಂಡಿಸಿದರು. ಉದ್ಯಾನವನಗಳ ಅಭಿವೃದ್ಧಿ ಹಾಗೂ ಹಸಿರೀಕರಣಕ್ಕೆ ಗ್ರೀನ್ ಪ್ಲಸ್ ಯೋಜನೆಯನ್ನು ರೂಪಿಸಿರುವುದಾಗಿ ಹೇಳಿದರು. ಎಂಡಿಎ ಸದಸ್ಯರೂ ಆಗಿರುವ ಬಿಜೆಪಿಯ ವಿಧಾನ ಪರಿಷತ್ ಸದಸ್ಯ ಗೋ. ಮಧುಸೂದನ್ ಅವರು ಮೇಲ್ಮನೆ ಇರಲಿ, ಸುದ್ದಿಗೋಷ್ಠಿ ಇರಲಿ, ಟಿವಿ ಚಾನೆಲ್‌ಗಳಲ್ಲಿ ಸಂವಾದ ಇರಲಿ ಕ್ರಾಸ್ ಕ್ವಶ್ಚನ್ ಮಾಡುವುದರಲ್ಲಿ ಎಕ್ಸ್‌ಫರ್ಟ್. ಇದನ್ನು ಗಮನಿಸಿದ ಗೋಮ, ಆಯುಕ್ತರ ಬಜೆಟ್ ಭಾಷಣದ ಮಧ್ಯೆಯೇ ರೀ... ಅದು ಪ್ಲಸ್ ಅಲ್ಲಾ ಕ್ರಾಸ್ ಅಲ್ವಾ ಅಂತಾ ಕ್ರಾಸ್ ಕ್ವಶ್ಚನ್ ಮಾಡಿದರು. ಇದರಿಂದ ಗಲಿಬಿಲಿಗೊಂಡ ಆಯುಕ್ತರು ಹೌದೌದು ಸಾರ್, ಪ್ಲಸ್ ಅಲ್ಲಾ ಕ್ರಾಸು, ರೆಡ್‌ಕ್ರಾಸ್ ಇದ್ದಂತೆ ಎಂದು ಹೇಳಿದಾಗ ಸಭೆಯಲ್ಲಿ ನಗುವಿನ ಅಲೆ.
ಆಂವ ಹಿಂಗ್ಯಾಕಾದ
ಕೆಲವರು ನೇರ ಮತ್ತು ನಿಷ್ಠುರ ಪದಗಳನ್ನು ತಪ್ಪಾಗಿ ಅರ್ಥೈಯಿಸುವುದುಂಟು. ಇತ್ತೀಚೆಗೆ ಬಾಗಲಕೋಟೆಯಲ್ಲಿ ಜಲಸಂಪನ್ಮೂಲ ಸಚಿವ ಬಸವರಾಜ ಬೊಮ್ಮಾಯಿ ಶಾಸಕ ವೀರಣ್ಣ ಚರಂತಿಮಠ ಅವರ ನೇರ, ನಿಷ್ಠುರ ನಡೆಯ ಬಗ್ಗೆ ಸುಮಾರು ಹೊತ್ತು ಮಾತನಾಡಿದರು. ನಮ್ಮ ಈರಣ್ಣ ನನ್ನ ಕಚೇರಿಗೆ ಸಳಸಳನೇ ಬರ್ತಾನ, ಬಸಣ್ಣಾ ಈ ಯೋಜನೆ ಮಂಜೂರಿ ಆಗದ ಹೊರ್ತು ನಾ ಚಾ ಕುಡಿಯಾಂಗಿಲ್ಲ ಅಂತಾನೆ ಎಂದು ತಮ್ಮದೇ ಧಾಟಿಯಲ್ಲಿ ಮಿಮಿಕ್ರಿ ಮಾಡಿದರು. ಚರಂತಿಮಠರನ್ನು ಅತ್ಯಂತ ಹತ್ತಿರದಿಂದ ಬಲ್ಲವರು ಎದ್ದು-ಬಿದ್ದು ನಗುತ್ತಿದ್ದರು. ಕಾರಣ, ಬಾಗಲಕೋಟೆಯಲ್ಲಿನ ಸರ್ಕಾರಿ ಅಧಿಕಾರಿಗಳು, ಬಿಜೆಪಿ ಕಾರ್ಯಕರ್ತರಿಗೂ ಚರಂತಿಮಠರು ಅತ್ಯಂತ ಸಲುಗೆಯಿಂದ ಆಂವ, ಇಂವ, ಬಾರಲೇ, ಹೋಗಲೇ, ಏನಂತಾನ್ಲೇ, ಹೇಳಿಲ್ಲೇನ್, ಇವಾ ಭಾಳ್ ಶ್ಯಾಣಾ ಅದಾನ, ನಿನಗ, ಅವುಗ ಎಂಬಂಥ ಪದಗಳ ಮೂಲಕ ಏಕವಚನದಲ್ಲಿ ಸಂಭೋದಿಸುತ್ತಾರೆ. ಇದನ್ನು ಬಿಜೆಪಿಯ ಬಹುತೇಕರು ನೇರ, ನಿಷ್ಠುರ ನಡೆ ಎಂದೇ ಬಿಂಬಿಸುತ್ತ ಬಂದಿದ್ದಾರೆ. ಆದರೆ, ಬೊಮ್ಮಾಯಿ ಅವರು ಮಾತ್ರ ಒಬ್ಬ ಜನಪ್ರತಿನಿಧಿಗೆ ಇಂಥ ನಡೆ ಸರಿಯಲ್ಲ ಎನ್ನುವ ಎಚ್ಚರಿಕೆಯನ್ನು ಅಂದು ತಮ್ಮ ವಿಶ್ಲೇಷಣೆಯಲ್ಲಿ ನೀಡಿದ್ದರು. ಇದಾವುದನ್ನು ಅರಿಯದ ಚರಂತಿಮಠ ವೇದಿಕೆಯಲ್ಲಿ ಕುಳಿತೇ ಒಳಗೊಳಗೇ ಹಿಗ್ಗಿದ್ದರು. ಆದರೆ, ಇತ್ತೀಚೆಗೆ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ ಹಿನ್ನಡೆ ಅನುಭವಿಸಿದ ಬಳಿಕ ಚರಂತಿಮಠ ತುಸು ಸಪ್ಪೆಯಾಗಿದ್ದಾರೆ. ಮೊದಲಿನಂತೆ ಯಾರಿಗೂ ಅವರು ದಾರ್ಷ್ಟ್ಯದಿಂದ ಮಾತನಾಡುವುದಿಲ್ಲ. ಶಾಸಕರ ಈ ನಡೆಯನ್ನು ಗಮನಿಸಿದ ಅವರದೇ ಪಕ್ಷದ ಕೆಲವರು 'ಆಂವ ಹಿಂಗ್ಯಾಕಾದ' ಎಂದು ಚರಂತಿಮಠರ ಭಾಷೆಯಲ್ಲೇ ಲೇವಡಿ ಮಾಡುತ್ತಿದ್ದಾರೆ!
ಹೋಮ್ ಸ್ಟೇ ತನಿಖಾಧಿಕಾರಿಗೆ ಬಾಲಗ್ರಹ ಪೀಡೆ
ಹೋಮ್‌ಸ್ಟೇ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಮಂಗಳೂರು ಗ್ರಾಮಾಂತರ ಠಾಣೆ ಇನ್‌ಸ್ಪೆಕ್ಟರ್‌ಗೆ ಬಾಲಗ್ರಹ ಪೀಡೆ ಕಾಡುತ್ತಿದೆ. ಹೋಂ ಸ್ಟೇ ದಾಳಿ ಆರೋಪಿಗಳನ್ನು ಬಂಧಿಸುವಾಗ 17 ವರ್ಷದೊಳಗಿನವರನ್ನು ಬಂಧಿಸಿ ಆರೋಪ ಹೊತ್ತ ಬೆನ್ನಲ್ಲೇ ಮಹಿಳೆಯೊಬ್ಬರು ನೀಡಿದ ದೂರಿನ ಆಧಾರದ ಮೇಲೆ 14 ವರ್ಷದ ಬಾಲಕನನ್ನು ಠಾಣೆಗೆ ಕರೆತಂದು ಕೆನ್ನೆಗೆ ಬಾರಿಸಿದ ಆರೋಪ ಎದುರಿಸುತ್ತಿದ್ದಾರೆ. ಆಗಿದ್ದಿಷ್ಟು. ನೆರೆಮನೆಯ ಮಹಿಳೆ ಕಾರಿಗೆ 14 ವರ್ಷದ ಬಾಲಕ ಕಲ್ಲಿಂದ ಗೀಚಿದ್ದಾನೆ. ಮಹಿಳೆ ತಕ್ಷಣ ಗ್ರಾಮಾಂತರ ಠಾಣೆಗೆ ದೂರಿದ್ದಾರೆ. ಇನ್‌ಸ್ಪೆಕ್ಟರ್ ಸಾಹೇಬರು ಬಾಲಕ ಮತ್ತು ತಂದೆಯನ್ನು ಕರೆಸಿ ಠಾಣೆಯಲ್ಲಿ ಗಂಟೆಗಟ್ಟಲೆ ಕಾಯಿಸಿದ್ದಾರೆ. ದೂರು ನೀಡಿದ ಮಹಿಳೆ ಬಂದ ಬಳಿಕ ಆಕೆ ಎದುರುಗಡೆಯೇ ಇನ್‌ಸ್ಪೆಕ್ಟರ್ ಬಾಲಕನ ಕೆನ್ನೆಗೆ ಬಾರಿಸಿದ್ದಾರೆ. ಬಾಲಕ ಪರಿ ಪರಿಯಾಗಿ ಬೇಡಿಕೊಂಡರೂ ಬಿಟ್ಟಿಲ್ಲ. ತಂದೆ ಪ್ರತಿಭಟಿಸಿದಾಗ ಇಬ್ಬರನ್ನೂ ಜೈಲಿಗೆ ಹಾಕುವುದಾಗಿ ಬೆದರಿಸಿದ್ದಾರೆ. ಈಗ ಮಕ್ಕಳ ಹಕ್ಕು ಕಲ್ಯಾಣ ಸಮಿತಿ ಮುಂದೆ ದೂರು ಬಂದಿದ್ದು ನೋಟಿಸ್ ನೀಡಲಾಗಿದೆ. ಹಿಂದೆ ಉಳ್ಳಾಲ ಇನ್‌ಸ್ಪೆಕ್ಟರ್ ಒಬ್ಬರು ಬಾಲಕನಿಗೆ ಲಾಠಿಯಿಂದ ಹೊಡೆದು ದಂಡ ತೆತ್ತಿದ್ದರು ಇದೀಗ ಗ್ರಾಮಾಂತರ ಇನ್‌ಸ್ಪೆಕ್ಟರ್ ಸರದಿ!
ವೈದ್ಯನ ಎಡವಟ್ಟಿಗೆ ಉದುರಿದ್ದು 2 ಹಲ್ಲು
ದಂತ ವೈದ್ಯರು ಮಾಡುವ ಎಡವಟ್ಟುಗಳು ಒಂದೆರಡಲ್ಲ. ಸದಾ ಏನಾದರೂ ಯಡವಟ್ಟು ಮಾಡಿಕೊಂಡು ರೋಗಿಗಳ ಹಲ್ಲಿರಲಿ ತಮ್ಮ ಹಲ್ಲನ್ನೇ ಉದುರಿಸಿಕೊಳ್ಳುವ ಪಜೀತಿಯನ್ನು ಆಗಾಗ ತಂದಿಟ್ಟುಕೊಳ್ಳುತ್ತಾರೆ. ಇತ್ತೀಚೆಗೆ ಮೈಸೂರಿನಲ್ಲಿಯೂ ಹಾಗೇ ಆಯಿತು. ರೋಗಿಯೊಬ್ಬರು ಹಲ್ಲು ನೋವೆಂದು ದಂತ ವೈದ್ಯರೊಬ್ಬರ ಬಳಿ ಹೋದರು. ಹಲ್ಲು ಹುಳುಕಾಗಿದೆ ಅದನ್ನು ತೆಗೆಯಬೇಕು ಎಂದು ವೈದ್ಯರು ಸಲಹೆ ಮಾಡಿದರು. ರೋಗಿ ಇದಕ್ಕೆ ಸಮ್ಮತಿಸಿದಾಗ ಅರವಳಿಕೆ ಚುಚ್ಚುಮದ್ದು ನೀಡಿ ಹಲ್ಲನ್ನು ಕೀಳಲಾಯಿತು. ಆದರೂ ಹಲ್ಲು ನೋವು ಕಡಿಮೆಯಾಗದಿದ್ದಾಗ ಆ ರೋಗಿ ಮತ್ತೆ ವೈದ್ಯರ ಬಳಿ ಹೋದಾಗ ಹುಳುಕು ಹಲ್ಲಿನ ಬದಲು ಪಕ್ಕದ ಹಲ್ಲನ್ನು ತೆಗೆದಿದ್ದು ಗೊತ್ತಾಯಿತು. ಇದನ್ನು ಕೇಳಿ ರೋಗಿ ಹೌಹಾರಿದ. ಆದರೂ ವೈದ್ಯರು ಪರಿಚಿತರಾಗಿದ್ದರಿಂದ ರಂಪಾಟ ಮಾಡಲು ಹೋಗಲಿಲ್ಲ. ಬದಲಿಗೆ ಆ ಹಲ್ಲನ್ನು ಕೀಳಿಸಿಕೊಂಡರು. ಒಂದು ಹಲ್ಲಿನ ಬದಲು ಎರಡು ಹೋಯ್ತು. ಜತೆಗೆ ನೋವು ಬೇರೆ ಎಂದು ಆ ರೋಗಿ ಸ್ನೇಹಿತರ ಬಳಿ ಹೇಳಿಕೊಂಡಾಗ ಅವರ ನೋವಿನ ಅಲ್ಲಲ್ಲ ಹಲ್ಲಿನ ಕಥೆ ಕೇಳಿ ಸ್ನೇಹಿತರು ಹಲ್ಲು ತೋರಿಸಿ ನಕ್ಕರು.
-ನಂಬಿರಾಜ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

