ಇಟಲಿಯನ್ನರು ನಮಗಿಂತಲೂ 'ಹೆಚ್ಚು ಸಮಾನ'ರೇ?
ಇಟಲಿಯು ಭಾರತಕ್ಕೆ ತಕ್ಕ ಜೋಡಿಯಂತಿದೆ. ಇವೆರಡು ರಾಷ್ಟ್ರಗಳ ನಡುವಣ ಸಾಮ್ಯತೆಯು ಅಚ್ಚರಿ ಹುಟ್ಟಿಸುತ್ತದೆ. ಮುಂಬೈನಂತೆ ರೋಮ್ ...
ಇಟಲಿಯು ಭಾರತಕ್ಕೆ ತಕ್ಕ ಜೋಡಿಯಂತಿದೆ. ಇವೆರಡು ರಾಷ್ಟ್ರಗಳ ನಡುವಣ ಸಾಮ್ಯತೆಯು ಅಚ್ಚರಿ ಹುಟ್ಟಿಸುತ್ತದೆ. ಮುಂಬೈನಂತೆ ರೋಮ್ ಕೂಡಾ ಚತುರ ಜೇಬುಗಳ್ಳರ ಆಶ್ರಯ ತಾಣ. ಭಾರತೀಯರಂತೆ ಇಟಲಿಯನ್ನರೂ ವ್ಯವಸ್ಥೆಯನ್ನು ಪಾಲಿಸದವರು. ಸಂಚಾರ ನಿಯಮಗಳನ್ನು ಹೆಮ್ಮೆಯಿಂದ ಉಲ್ಲಂಘಿಸುತ್ತಾರೆ, ಇನ್ನೊಬ್ಬ ವ್ಯಕ್ತಿಯ ಮೇಲೆ ಗೂಬೆ ಕೂರಿಸಿ ಕೂಗಾಡುತ್ತಾರೆ. ಭಾರತೀಯ ಪೊಲೀಸರಂತೆ ಇಟಲಿ ಪೊಲೀಸರೂ ಹಣ ಕಂಡರೆ ಸಾಕು, ತಪ್ಪಿತಸ್ಥರನ್ನು ಬಿಟ್ಟುಬಿಡುತ್ತಾರೆ.
ಭ್ರಷ್ಟಾಚಾರ ಎಂಬುದು ಎರಡೂ ರಾಷ್ಟ್ರಗಳ ಲಾಂಛನದಂತಿದೆ. ಅದನ್ನು ಅನಿವಾರ್ಯ ಸಾರ್ವತ್ರಿಕ ಚಟುವಟಿಕೆ ಎಂಬಂತೆ ಗುರುತಿಸಲಾಗುತ್ತದೆ. ತಮ್ಮ ಭಾರತೀಯ ಸಹೋದರರಂತೆ ಇಟಲಿ ರಾಜಕಾರಣಿಗಳೂ ಎಷ್ಟು ಅಸಹ್ಯಕರ ಕಾರ್ಯಗಳಲ್ಲಿ ನಿರತರಾಗಿರುತ್ತಾರೆಂದರೆ, ಏನೋ ಮಹತ್ಸಾಧನೆ ಮಾಡಿದಂತೆ ಅಧಿಕಾರವನ್ನು ದುರ್ಬಳಕೆ ಮಾಡಿಕೊಳ್ಳುತ್ತಾರೆ, ಸಾರ್ವಜನಿಕರ ಹಣವನ್ನು ಖಾಸಗಿ ಉದ್ದೇಶಗಳಿಗೆ ಬಳಸಿಕೊಳ್ಳುತ್ತಾರೆ, ಆಪ್ತ ಬಂಡವಾಳಶಾಹಿಗಳಿಗೆ ಪ್ರೋತ್ಸಾಹ ನೀಡುತ್ತಾರೆ, ಮಾಫಿಯಾ ಜತೆ ಬಿಸಿನೆಸ್ ಮಾಡುತ್ತಾರೆ. ಎರಡೂ ರಾಷ್ಟ್ರಗಳಲ್ಲಿ ತೆರಿಗೆ ತಪ್ಪಿಸುವುದೆಂದರೆ ಜನ್ಮಸಿದ್ಧ ಹಕ್ಕು. ಇಟಲಿಯಂತೆ ಭಾರತದಲ್ಲೂ ಸೆಕ್ಸ್ ಪಾರ್ಟಿಗಳು ಮಮತೆಯಿಂದ ಪೋಷಿಸಿಕೊಂಡು ಬಂದ 'ರಾಜಕೀಯ ವಿನೋದ'ವಾಗಿಬಿಟ್ಟಿವೆ. ಆದರೆ, ಭಾರತೀಯ ರಾಜಕಾರಣಿಗಳು ಇಟಲಿಯ ಸಿಲ್ವಿಯೋ ಬರ್ಲುಸ್ಕೋನಿ ಅವರಲ್ಲಿದ್ದ ಧೈರ್ಯವನ್ನು ಇನ್ನೂ ಬೆಳೆಸಿಕೊಂಡಿಲ್ಲ ಅಷ್ಟೆ.
ಇಂಥ ಸಾಮ್ಯತೆಗಳು ಭಾರತೀಯ ಮತ್ತು ಇಟಲಿ ರಾಜಕಾರಣದ ನಡುವಣ ಅಂತರವನ್ನು ಮರೆಯಾಗಿಸುತ್ತವೆ. ಭಾರತ ಮತ್ತು ಇಟಲಿ ರಾಜಕಾರಣಿಗಳು ಒಂದೇ ವಂಶದವರಂತಿರುತ್ತಾರೆ, ಒಂದೇ ತೆರನಾದ ಸಂಸ್ಕೃತಿ ಹೊಂದಿರುತ್ತಾರೆ, ಒಂದೇ ತೆರನಾದ ದೃಷ್ಟಿಕೋನ ಹೊಂದಿರುತ್ತಾರೆ. 'ದಿ ಇಕಾನಾಮಿಸ್ಟ್' ಒಮ್ಮೆ ಸೋನಿಯಾಗಾಂಧಿಯನ್ನು 'ಇಟಲಿಯ ಅತ್ಯಂತ ಯಶಸ್ವಿ ರಾಜಕಾರಣಿ' ಎಂದು ಬಣ್ಣಿಸಿದ್ದು ಈ ಕಾರಣಕ್ಕಾಗಿಯೇ ಇರಬೇಕು!
ಸುಪ್ರೀಂಕೋರ್ಟಿಗೆ ವಾಗ್ದಾನ ಮಾಡಿದಂತೆ ತನ್ನ ಇಬ್ಬರು ನೌಕಾ ಸಿಬ್ಬಂದಿಯನ್ನು ವಾಪಸ್ ಕಳುಹಿಸಲು ಇಟಲಿ ಒಪ್ಪದ ಬಗ್ಗೆ ಭಾರತದಲ್ಲಿಂದು ಆಕ್ರೋಶ ವ್ಯಕ್ತವಾಗಿದೆ. ಇಟಲಿಯು ನ್ಯಾಯಾಲಯವನ್ನೇ ಮೂರ್ಖನನ್ನಾಗಿಸಲು ಯತ್ನಿಸಿದೆ, ಭಾರತಕ್ಕಿಂತಲೂ ತಾನು ಬುದ್ಧಿವಂತ ಎಂದು ಪ್ರದರ್ಶಿಸಲು ಯತ್ನಿಸಿದೆ. ಹೇಳಿ ಮಾಡಿಸಿದ ಮಿತ್ರರಾಷ್ಟ್ರಗಳ ಮಧ್ಯೆ ಅದೇನು ನಡೆಯುತ್ತಿದೆ?
ವಾಸ್ತವವಾಗಿ, ದೆಹಲಿಗೆ ತಾವು ನೆರವು ನೀಡುತ್ತಲೇ ಬಂದಿರುವುದಾಗಿ 'ಮಿತ್ರರು, ರೋಮನ್ನರು ಮತ್ತು ದೇಶದ ಜನತೆ' ವಾದ ಮುಂದಿಡಬಹುದು. ಸೋನಿಯಾ- ಮನಮೋಹನ್ ಸರ್ಕಾರಕ್ಕೆ ಹಗರಣಗಳಿಂದ ತಪ್ಪಿಸಿಕೊಂಡು ಅಸ್ತಿತ್ವ ಉಳಿಸಿಕೊಳ್ಳುವುದೇ ಪೂರ್ಣಕಾಲಿಕ ಕೆಲಸವಾಗಿಬಿಟ್ಟಿದೆ. ಹಗರಣಗಳಲ್ಲಿ ಸಿಲುಕಿ ಸರ್ಕಾರ ಒದ್ದಾಡುತ್ತದೆ. ಆದರೆ, ಒಂದು ಹಗರಣ ಸರ್ಕಾರಕ್ಕೇ ಮುಳುವಾಗುವಂತೆ ಕಂಡುಬರುತ್ತಿರುವಂತೆಯೇ ಇನ್ನೊಂದು ಹಗರಣ ಬೆಳಕಿಗೆ ಬರುತ್ತದೆ. ಆಗ ಸರ್ಕಾರಕ್ಕೆ ಉಸಿರಾಡಲು ಒಂದಷ್ಟು ಸಮಯ ಸಿಗುತ್ತದೆ.
ಪಿ.ಜೆ. ಕುರಿಯನ್ ಅವರ ಸ್ತ್ರೀ ಸಂಬಂಧಿತ ಹಗರಣ ಸದ್ದು ಮಾಡಿತು. ಆದರೆ, ಅದು ಈಗ ಯಾರಿಗಾದರೂ ನೆನಪಿದೆಯೇ? ಇಟಲಿ ಹೆಲಿಕಾಪ್ಟರ್ ಹಗರಣದಿಂದ ಕುರಿಯನ್ ವಿಚಾರ ಮುಚ್ಚಿಹೋಯಿತು. ಹೆಲಿಕಾಪ್ಟರ್ ಹಗರಣ ಸರ್ಕಾರಕ್ಕೆ ಹಾನಿಯುಂಟುಮಾಡಲು ಆರಂಭಿಸಿದಾಗ, 'ಕೋಲ್‌ಗೇಟ್' ವರದಿ ಸರ್ಕಾರಕ್ಕೆ ತಪ್ಪಿಸಿಕೊಳ್ಳುವ ಅವಕಾಶ ತೆರೆದುಕೊಟ್ಟಿತು. ಸಿಎಜಿ ವರದಿಯು ಗಂಭೀರವಾದುದು. ಭಾರಿ ಭ್ರಷ್ಟಾಚಾರವನ್ನು ಬಹಿರಂಗಪಡಿಸಿದೆ ಅದು. ಆದರೆ, ಇದೇ ಸಮಯದಲ್ಲಿ ಇಟಲಿಯನ್ನರು ಮತ್ತೆ ಸರ್ಕಾರದ 'ರಕ್ಷಣೆ'ಗೆ ಬಂದರು. ಸುಪ್ರೀಂಕೋರ್ಟಿಗೆ ಸುಳ್ಳು ಭರವಸೆ ನೀಡಿ ವಿವಾದಕ್ಕೆ ಕಾರಣರಾದರು.
ಈ ಬಾರಿ, ಅರ್ಧ ಕೆಲಸವನ್ನು ಸುಪ್ರೀಂಕೋರ್ಟಿಗೆ ಒಪ್ಪಿಸುವ ಮೂಲಕ ಹಾಗೂ ಆಕ್ರೋಶಭರಿತ ಸಾರ್ವಜನಿಕರ ಭಾವನೆಗಳಿಗೆ ಸ್ಪಂದಿಸುವ ಮೂಲಕ ಸರ್ಕಾರ ತನ್ನ ಹಾದಿಯನ್ನು ಸುಗಮವಾಗಿಸಿಕೊಳ್ಳಬಹುದು. ಆದರೆ, ಅದು ನಿಜವಾಗಿಯೂ ತಪ್ಪಿಸಿಕೊಳ್ಳಲು ಸಾಧ್ಯವೇ? ಸಂಕಷ್ಟದ ಕ್ಷಣಗಳಲ್ಲಿ ಪಶ್ಚಿಮ ರಾಷ್ಟ್ರಗಳ ಮುಂದೆ ಮಂಡಿಯೂರಿ ಕೂರುವುದು ಅದರ ಜಾಯಮಾನ. ನೆನಪಿಡಿ, ಮನಮೋಹನ್ ಸಿಂಗ್ ಅವರು ಧೈರ್ಯದಿಂದ ಎದುರಿಸಿದ ಒಂದೇ ಒಂದು ವಿಚಾರವೆಂದರೆ, ಅಮೆರಿಕದ ನಾಗರಿಕ ಪರಮಾಣು ಒಪ್ಪಂದ. ಇಲ್ಲಿ ಅಮೆರಿಕ ಏನನ್ನು ಬಯಸಿತ್ತೋ ಅದೇ ಅದಕ್ಕೆ ದೊರೆತಿತ್ತು. ಭಾರತದ ಆರೋಗ್ಯಕ್ಕೆ ಹಾನಿ ಉಂಟು ಮಾಡಿದ್ದೆಂದರೆ ಸರ್ಕಾರದ ಇತ್ತೀಚಿನ ಒಂದು ನಿರ್ಧಾರ. ಅಮೆರಿಕಕ್ಕೆ ಮಣಿದು ಇರಾನ್‌ನಿಂದ ಕಚ್ಚಾ ತೈಲ ಆಮದನ್ನು ಸ್ಥಗಿತಗೊಳಿಸಿತು ಭಾರತ. ಆದರೆ, ಪಾಕಿಸ್ತಾನ ಏನು ಮಾಡಿತು? ಅಮೆರಿಕದ ಸಲಹೆಯನ್ನು ಧಿಕ್ಕರಿಸಿ ಇರಾನ್- ಪಾಕಿಸ್ತಾನ ಅನಿಲ ಪೈಪ್‌ಲೈನ್ ಯೋಜನೆಗೆ ವಿಧ್ಯುಕ್ತವಾಗಿ ಚಾಲನೆ ನೀಡಿತು. ಈಗಾಗಲೇ ಚೀನಾದ ನಿರ್ವಹಣೆಯಲ್ಲಿರುವ ಗ್ವಾದರ್ ಬಂದರಿನಲ್ಲಿ ತೈಲ ಶುದ್ಧೀಕರಣ ಸ್ಥಾವರವನ್ನು ನಿರ್ಮಿಸುವಲ್ಲಿ ಇರಾನ್ ಈಗ ಪಾಕಿಸ್ತಾನಕ್ಕೆ ನೆರವು ನೀಡಲಿದೆ. ಪಾಕಿಸ್ತಾನಕ್ಕೆ ಇದರಿಂದ ಭಾರಿ ಲಾಭವಾಗುವುದಂತೂ ನಿಶ್ಚಿತ.
ಆರ್ಥಿಕ ಹಿತಾಸಕ್ತಿಗಳನ್ನು ಒತ್ತಟ್ಟಿಗಿರಿಸಿ. ಅಪರಾಧ ಕೃತ್ಯಗಳಲ್ಲಿ ಬಿಳಿಯರು ತಪ್ಪಿತಸ್ಥರೆಂದು ಸಾಬೀತಾದ ಪ್ರಕರಣಗಳಲ್ಲೂ ಭಾರತ ತನ್ನ ಸ್ವಾಭಿಮಾನವನ್ನು ಪ್ರದರ್ಶಿಸಲಿಲ್ಲ. ಭಾರತದಿಂದ ತಪ್ಪಿಸಿಕೊಂಡು ಹೋಗಲು ಭೋಪಾಲ್ ಅನಿಲ ದುರಂತದ ಅಪರಾಧಿ ಆ್ಯಂಡರ್ಸನ್‌ಗೆ ನಮ್ಮ ಸರ್ಕಾರ ಸಕಲ ಸೌಲಭ್ಯಗಳನ್ನು ಕಲ್ಪಿಸಿಕೊಟ್ಟಿತು. 1995ರಲ್ಲಿ ಯಾವುದೋ ವಿಮಾನವೊಂದು ಪುರುಲಿಯಾದಲ್ಲಿ ಭಾರಿ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ಸುರಿದು ಹೋದಾಗ ಗಂಭೀರವಾದ ಭದ್ರತಾ ಲೋಪ ಕಂಡುಬಂತು. ಈ ಕೃತ್ಯದ ರೂವಾರಿಗೆ ತಪ್ಪಿಸಿಕೊಳ್ಳಲು ಅವಕಾಶ ಕಲ್ಪಿಸಲಾಯಿತು. ಆದರೆ, ಬ್ರಿಟಿಷ್ ಸಹಚರನೊಬ್ಬ ಜೈಲು ಸೇರಬೇಕಾಯಿತು. ಬಳಿಕ ಬ್ರಿಟನ್ ಸರ್ಕಾರದ ಮನವಿಯ ಮೇರೆಗೆ ಆತನನ್ನೂ ಬಿಡುಗಡೆಗೊಳಿಸಲಾಯಿತು. ಆ ಪ್ರಕರಣದ ವಿಚಾರಣೆ ಪೂರ್ಣಗೊಳ್ಳಲೂ ಇಲ್ಲ, ಪ್ರಕರಣದ ರಹಸ್ಯ ಬಹಿರಂಗವಾಗಲೂ ಇಲ್ಲ.
ಇನ್ನು, ನಮ್ಮ ಸರ್ವಕಾಲದ ಹೀರೋ ಒಟ್ಟಾವಿಯೋ ಕ್ವಟ್ರೋಕಿ ಪ್ರಕರಣವನ್ನು ನೋಡಿ. ಅವರು ಕಾನೂನಿನ ಕೈಯಲ್ಲಿ ಸಿಕ್ಕಿಹಾಕಿಕೊಳ್ಳುವ ಮೊದಲೇ ಕಾಂಗ್ರೆಸ್‌ನ ಸಚಿವರು ಅವರಿಗೆ ಸುಳಿವು ನೀಡಿದರು. ತಕ್ಷಣ ಕ್ವಟ್ರೋಕಿ ಮಲೇಷ್ಯಾಕ್ಕೆ ಪರಾರಿಯಾದರು. ದೇಶದ ಹಿತ ಕಾಯುವ ಪ್ರಮಾಣ ಮಾಡಿದ ಸಚಿವರು ದೇಶದ ಹಿತಾಸಕ್ತಿ ವಿರುದ್ಧ ಕೆಲಸ ಮಾಡುತ್ತಿರುವುದು ಬಹುಶಃ ನಮ್ಮ ರಾಷ್ಟ್ರದಲ್ಲಿ ಮಾತ್ರ ಇರಬೇಕು.
ಇಟಲಿಯನ್ನರು ತಮ್ಮ ದೇಶದ ಸ್ವಾಭಿಮಾನ ವಿಚಾರದಲ್ಲಿ ಆಟ ಆಡುವುದಿಲ್ಲ. ಇಲ್ಲಿ ಕಲಿಯಬೇಕಾದ ಪಾಠ ಸ್ಪಷ್ಟ. ಭಾರತದಲ್ಲಿ ಬಿಳಿಯರು ಭಾರತೀಯರಿಗಿಂತ ಹೆಚ್ಚು ಸಮಾನರು. ಬಿಳಿಯರಲ್ಲಿ, ಇಟಲಿಯನ್ನರು ಇತರರಿಗಿಂತ ಹೆಚ್ಚು ಸಮಾನರು. ನಮ್ಮನ್ನು ಅವರೇ ಆಳಬೇಕು!
-ಟಿಜೆಎಸ್ ಜಾರ್ಜ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

