ವರ್ತೂರು ಹುಲಿ ಊರು ಬುಟ್ಟೋಯ್ತದಂತೆ ನೋಡ್ಲಾ ಮಗ
'ಚಕ್ಲಿ ನಿಪ್ಪಟ್ ತಿನ್ಕಂಡು, ಗಂಟು ಮೂಟೆ ಕಟ್ಕಂಡು' ಅಂತೇಳಿ ಹಾಡ್ಕಂಡು...
'ಚಕ್ಲಿ ನಿಪ್ಪಟ್ ತಿನ್ಕಂಡು, ಗಂಟು ಮೂಟೆ ಕಟ್ಕಂಡು' ಅಂತೇಳಿ ಹಾಡ್ಕಂಡು ಕೋಲಾರದ ಬೈಪಾಸ್ ರೋಡ್ನಾಗೆ ವರ್ತೂರು ಹುಲಿ ವೋಯ್ತಾ ಇತ್ತು.
'ಹುಲಿ ಮರಿ ವೋಯ್ತಾ ಐತೆ ನೋಡ್ಲಾ ಮಗ, ಮುಸುಡಿ ಯಾಕ್ಲಾ ಆಗೈತೆ ಟಾರು ಕುಡ್ದೋರಂಗ' ಅಂತೇಳಿ ಹಾಡು ಯೋಳ್ಕಂಡು ಮೈಲಾರಿ ಎಂಟ್ರಿ ಕೊಟ್ಟ.
'ಇದೇನಣ್ಣ ಹುಲಿ ಗಂಟು ಮೂಟೆ ಕಟ್ಕಂಡು, ತಲೆದಿಂಬು, ಚಾಪೆ ಸುತ್ಕಂಡು ಎತ್ಗೋ ವೋಯ್ತಾ ಐತೆ. ಎಲ್ಲಿಗೆ ?' ಅಂತೇಳಿ ಮೈಲಾರಿ ಕೇಳ್ದ.
'ನಮ್ಮೂರ್ಗೆ ವಾಪ್ಸು ವೊಂಟೋಯ್ತೀನಿ ಕಣ್ಲಾ ಮೈಲಾರಿ. ಇನ್ನ ನಾನು ಕೋಲಾರುಕ್ಕೆ ಬರಗಿಂಲ್ಲ' ಅಂದ್ರು ಹುಲಿ ಉರುಫ್ ಬಟ್ಟೆ ಮಂತ್ರಿ ವರ್ತೂರು ಪ್ರಕಾಸು. 'ಥೂ ಬುಡ್ತು ಅನ್ನಣ್ಣ. ಹುಲಿ ಎಲ್ಲರ ಜಾಗ ಬುಟ್ಟು ವೋಯ್ತದಾ ? ಆ ಪಟ್ಟೆ ಹುಲಿ ಕಾಡ್ಗೇ ರಾಜ. ಈ ವರ್ತೂರು ಹುಲಿ ಕೋಲಾರುಕ್ಕೆ ಮಹಾರಾಜ' ಅಂತಂದ ಮೈಲಾರಿ.
'ಎಲ್ಲಾರೂವೆ ಹಿಂಗೇ ನನ್ನುನ್ನ ರೈಲು ಹತ್ಸಿ ಹತ್ಸಿ ವೊಗೆ ಹಾಕುಸ್ಬುಟ್ರು ಕಣ್ಲಾ. ಅದುಕ್ಕೆ ಸ್ಯಾನೆ ಬ್ಯಾಸ್ರ ಆಗೋಗದೆ. ವೂರು ಬುಟ್ಟು ವೋಯ್ತಾಯಿದ್ದೀನಿ' ಅಂದ್ರು ಪ್ರಕಾಸು. 'ವರ್ತೂರು ಹುಲಿ ಪ್ರಕಾಸು ಅಂದ್ರೆ ತಮಾಸೀನ ? ನೀವು ಕ್ಲಾಸ್ ಲೀಡ್ರು ಥರ ಕಾಸ್ ಲೀಡ್ರು. ಕೇಳ್ದೋರ್ಗೆಲ್ಲಾ ಕಾಸು ಕೊಟ್ಟು ಕೊಟ್ಟು ಪೇಮಸ್ಸು ಆಗೋಗಿದ್ದೀರ. ನೀವೇನರ ಹಿಂಗೆ ವೂರು ಬುಟ್ಟು ವೋದ್ರೆ ಜನ ಚಪ್ಪಾಳೆ ವೊಡ್ಕಂಡು ನಗಾಕಿಲ್ವಾ ? ಈವಾಗ ವೂರು ಬುಡೋಂಥದ್ದು ಏನಾಗದೆ? ಯಾರರ ಏನರ ಅಂದ್ರ? ಹುಲಿಗೆ ಯಾರು ಏನಂತರೆ ಅಲ್ವೇನಣ್ಣೋ?' ಅಂದ ಮೈಲಾರಿ.
'ಕಿವಿನಾಗೆ ಸಂದಾಕಿ ದಾಸ್ವಾಳ ಹೂವು ಮಡುಗ್ತೀಯ ಕಣ್ಲಾ ನೀನು. ಅಲ್ಲಲೇ ಮಾತ್ ಮಾತ್ಗೂ ಹುಲಿ ಹುಲಿ ಅಂತೀಯಲ್ಲ ಯಾಕೆ ?' ಅಂದ್ರು ವರ್ತೂರು ಪ್ರಕಾಸು. ಏನಣ್ಣೋ ನೀನು ಹುಲಿ ಹಿಡ್ಕಂಡಿರೋ ಪೋಟೋ ಪೇಪ್ರಾಗೆ ಬಂದಿರ್ಲಿಲ್ವಾ ? ಅಣ್ಣ ಎಲ್ಲಣ್ಣ ಆ ಹುಲಿ. ಒಂದಿನಾನೂ ತೋರ್ಸಿಲ್ಲ' ಅಂದ ಮೈಲಾರಿ.
'ನಮ್ಮೂರ್ನೋರು ಬಂದು ಜಾತ್ರೆನಾಗೆ ಕುಣ್ಯಕ್ಕೆ ಹುಲಿ ವೇಸ್ದೋರು ಸಿಕ್ತಾ ಇಲ್ಲ. ಹೆಂಗೂ ನಿಂತಾವ ಹುಲಿ ಅವೆ. ಅದುನ್ನೇ ಕಳ್ಸು. ಕುಣುಸ್ಬುಟ್ಟು ವಾಪ್ಸು ಕಳುಸ್ತೀವಿ ಅಂತಂದ್ರು. ಹಂಗೆ ಕರ್ಕಂಡು ವೋದೋರು ಇನ್ನಾಗಂಟ ವಾಪ್ಸು ತಂದು ಬುಟ್ಟಿಲ್ಲ ಕಣ್ಲಾ' ಅಂದ್ರು ಪ್ರಕಾಸು. 'ಸಮುದ್ರದಾಗೆ ಮೀನು ಹಿಡೀತಾಯಿದ್ದೋರ್ನ ಕೊಂದೋರ್ನ ಅರೆಸ್ಟು ಮಾಡಿದ್ರಂತೆ. ಇಟಲಿನೋರು ಅವ್ರುನ್ನ ಕರ್ಕಂಡೋಗಿ ಅಲ್ಲೇ ಮಡಿಕ್ಕಂಬುಟ್ಟವ್ರೆ. ಇಂಡಿಯಾದೋರು ಎಷ್ಟು ಯೋಳುದ್ರೂ ಈವಾಗ ಕಳುಸ್ತಾಯಿಲ್ಲ. ಹಂಗೆ ನಿಮ್ದು ಹುಲಿ ಕರ್ಕಂಡೋಗಿ ಮಡಿಕ್ಕಂಬುಟ್ಟವ್ರೆ ಅಲ್ವಾ ? ವೋಗ್ಲಿ ಬುಡಣ್ಣ ಹುಲಿ ಯಾವಾಗಾರ ಬರ್ಲಿ, ಇಚಾರ ಎಲ್ಲಿಂದ ಎಲ್ಗೋ ವೊಂಟೋಯ್ತು. ವೂರು ಬುಡಕ್ಕೆ ಏನು ರೀಜನ್ನು ಯೋಳಣ್ಣ' ಅಂದ ಮೈಲಾರಿ.
'ಅಲ್ಲಲೇ, ಮುನ್ಸಿಪಾಲ್ಟಿ ಎಲೆಕ್ಸನ್ನು ಬಂತು. ನಮ್ ಕ್ಯಾಂಡೇಟುಗುಳ್ಗೇ ವೋಟಾಕಿ ವೋಟಾಕಿ ಅಂತ ಬಾಯಿ ಬಡ್ಕಂಡು ಕೇಳ್ಕಂಡೆ. ಹುಣಸೆ ಬೀಜ ಚೆಲ್ದಂಗೆ ಕಾಸು ಚೆಲ್ಲಾಕ್ದೆ. ಏನ್ಲಾ ಮಾಡಿದ್ದು ಜನ? ಹಣೆಮ್ಯಾಲೆ ಮೂರು ನಾಮ ಬಳುದ್ರಲ್ಲಪ್ಪ. ನಾಮ ಹಾಕುಸ್ಕಂಡು ಇನ್ನಾ ಇದೇ ವೂರ್ನಾಗೆ ಇರು ಅಂತೀಯ. ವೋಗೋಗಲೆ' ಅಂದ್ರು ಪ್ರಕಾಸು. 'ಅಲ್ಲ ಕಣಣ್ಣಾ ವರ್ತೂರ್ನಾಗೆ ಜಮೀನು ಯವಾರ ಮಾಡ್ಕಂಡಿದ್ದೆ. ಹೆಂಗೆಂಗೋ ನಾಲ್ಕು ಕಾಸು ಸೇರುಸ್ಕಂಡಿದ್ದೆ. ಅಲ್ಲೆ ಇರೋದು ಬುಟ್ಟು ವೂರು ವುದ್ಧಾರ ಮಾಡ್ತೀನಿ ಅಂತೇಳಿ ಕೋಲಾರುಕ್ಕೆ ಬಂದೆ. ಏನೋ ಪ್ರಕಾಸು ಬಂದವ್ರೆ ಅಂತೇಳಿ ಜನಾನು ವೋಟಾಕಿ ಸಾಸ್ಕ ಅಂತ ಮಾಡುದ್ರು'.
'ಅದುಕ್ಕೆ ನೀನು ಏನಣ್ಣಾ ಮಾಡ್ದೆ. ವೂರ್ನಾಗೆ ಇರೋ ವುಡುಗ್ರುನ್ನೆಲ್ಲಾ ಕೆಟ್ಟು ಕೆರ ಹಿಡ್ಯಂಗೆ ಮಾಡ್ದೆ. ಪಡ್ಡೆ ಹೈಕ್ಳು ಎಣ್ಣೆ ಹೈಕ್ಳು ಆಗೋದ್ರು. ಇನ್ನ ಆ ಆಪೀಸರ್ಸು ಜೀವ ಹಿಂಡ್ಬುಟ್ಟೆ. ಗೂಟದ ಕಾರು ಹಾಕ್ಕಂಡು, ಅದ್ರು ಮ್ಯಾಲೆ ಕೆಂಪು ಲೈಟು ಬುಟ್ಕಂಡು ವೂರೆಲ್ಲಾ ವೋಡಾಡ್ದೆ. ಈ ಪಾಟಿ ಅವ್ತಾರ ನೋಡಿದ್ಮೇಕೆ ಜನ ಸುಮ್ಕೆ ಇದ್ದಾರೇನು? ಅದುಕ್ಕೆ ಮುನ್ಸಿಪಾಲ್ಟಿ ಎಲೆಕ್ಸನ್ನಾಗೆ ತಿಕ್ಕುದ್ರು ನಾಮ' ಅಂದ ಮೈಲಾರಿ. 'ಮುನ್ಸಿಪಾಲ್ಟಿ ಎಲೆಕ್ಸನ್ನಾಗೆ ಕಮ್ಮಿ ಸೀಟು ಬಂದ್ರೆ ವೂರು ಬುಡ್ತೀನಿ ಅಂತ ಯೋಳಿದ್ದೆ ಕಣ್ಲಾ. ಅದುಕ್ಕೆ ವೋಯ್ತಾಯಿದ್ದೀನಿ. ವರ್ತೂರಿಂದ ಹುಲಿಗಳು ಏನರ ಬಂದ್ರೆ ಕಟ್ಟಾಕಿ, ಹುಲ್ಲು, ನೀರು ಹಾಕಿರು ಬತ್ತೀನಿ ಬಾಯ್' ಅಂತೇಳಿ ಪ್ರಕಾಸು ವೊಂಟೋಬುಟ್ರು.
-ಕೆ.ವಿ.ಪ್ರಭಾಕರ್
prabhukolar@yahoo.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

