ವೈದಿಕ ಧರ್ಮದ ಅನುಷ್ಠಾನದಲ್ಲಿ ಹೆಸರು ಮಾಡಿದ ಉಲುಚುಕಮ್ಮೆ ಬ್ರಾಹ್ಮಣರು
ಉಲುಚುಕಮ್ಮೆ...ಇದು ಕರ್ನಾಟಕದಲ್ಲಿ ಪ್ರಾಚೀನ ಕಾಲದಿಂದಲೂ ನೆಲೆಸಿರುವ...
ಉಲುಚುಕಮ್ಮೆ...
ಇದು ಕರ್ನಾಟಕದಲ್ಲಿ ಪ್ರಾಚೀನ ಕಾಲದಿಂದಲೂ ನೆಲೆಸಿರುವ ಬ್ರಾಹ್ಮಣ ಸಮುದಾಯಕ್ಕೆ ಸೇರಿದ ಒಂದು ಪಂಗಡ. ಕಮ್ಮೆ ಎಂಬ ಹೆಸರಿನಿಂದಲೂ ಈ ಪಂಗಡದವರನ್ನು ಕರೆಯುವ ವಾಡಿಕೆ ಇದೆ.
ಉಲುಚುಕಮ್ಮೆ ಬ್ರಾಹ್ಮಣ ಸಮುದಾಯದ ಮುಖಂಡರ ಪ್ರಕಾರ, ಚಾಲುಕ್ಯ ದೊರೆ ಅರಿಕೇಸರಿಯ ಆಸ್ಥಾನದಲ್ಲಿ ದಂಡನಾಯಕನಾಗಿದ್ದ ಕವಿ ಪಂಪ, ಬಿಜ್ಜಳನ ಆಸ್ಥಾನದಲ್ಲಿ ಭಂಡಾರಿಯಾಗಿದ್ದ ವೀರಶೈವ ಧರ್ಮ ಪ್ರತಿಪಾದಕ ಬಸವಣ್ಣ, ಹೊಯ್ಸಳರ ಆಶ್ರಯದಲ್ಲಿದ್ದ ಜನ್ನ, ಸುಮನೋಭಾಣ ಮತ್ತಿತರ ದಿಗ್ಗಜರೆಲ್ಲ ಕಮ್ಮೆ ಕುಲದವರು. ವಿಜಯ ನಗರ ಸಾಮ್ರಾಜ್ಯ ಸ್ಥಾಪಕರಾದ ವಿದ್ಯಾರಣ್ಯರೂ ಉಲುಚುಕಮ್ಮೆ ಸಮುದಾಯಕ್ಕೆ ಸೇರಿದವರು ಎಂಬ ನಂಬಿಕೆ ಇದೆ. ಹಿನ್ನೆಲೆ ಗಮನಿಸಿದರೆ ಸಮುದಾಯದವರಿಗೆ ಭಾರಿ ಹಿನ್ನೆಲೆಯೇ ಇದೆ. ಅದರಲ್ಲೂ ಇವರು ರಾಜ ಮಹಾರಾಜರ ಕಾಲದಲ್ಲಿ ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದವರು. ಅಂದರೆ, ರಾಜರಿಗೆ ಆಡಳಿತದಲ್ಲಿ ಮತ್ತು ಹಣಕಾಸು ವಿಚಾರಗಳಲ್ಲಿ ಸಲಹೆಗಾರರಾಗಿ ಕೆಲಸ ಮಾಡಿದವರು. ಇನ್ನು ವೇದ ಅಧ್ಯಯನದಲ್ಲೂ ಇವರು ಹೆಸರುವಾಸಿ.
ವೇದ ಪಾರಂಗತವಾಗಿ ಹಬ್ಬಿದರು : ಬ್ರಾಹ್ಮಣ ಕರ್ಮಗಳನ್ನು ನಡೆಸಿಕೊಂಡು ಹೋಗುವುದು ಈ ಸಮುದಾಯದವರ ಮೂಲ ವೃತ್ತಿ ಆಗಿತ್ತಂತೆ. ಜೊತೆಗೆ ರಾಜ ಮಹಾರಾಜರ ಕಾಲದಲ್ಲಿ ಇವರು ಅಧಿಕಾರ ವರ್ಗದಲ್ಲೂ ಇದ್ದರಂತೆ. 'ಉಲುಚುಕಮ್ಮೆಯೋ ಉಗಣಿ ಹಂಬೋ' ಎಂಬ ಗಾದೆ ಮಾತು ಈ ಸಮುದಾಯದವರಿಗೆ ಸಂಬಂಧಪಟ್ಟಂತೆ ಚಾಲ್ತಿಯಲ್ಲಿ ಇತ್ತಂತೆ. ಈ ಗಾದೆ ಮಾತಿನ ಅರ್ಥ 'ಉಗಣಿ ಗಿಡದ ಬಳ್ಳಿ ಯಾವ ರೀತಿ ಸುರಳಿಯಾಗಿ ಎಲ್ಲೆಡೆ ಹರಡುವುದೋ ಅದೇ ರೀತಿ ಈ ಜನಾಂಗದವರೂ ಬಹು ವರ್ಷಗಳ ಹಿಂದೆಯೇ ವೇದ ಪಾರಂಗತವಾಗಿ ನಾಲ್ಕು ದಿಕ್ಕುಗಳಿಗೂ ಪ್ರಖ್ಯಾತಿ ಪಡೆದಿದ್ದ ಶ್ರೇಷ್ಠ ಬ್ರಾಹ್ಮಣರಾಗಿದ್ದರು.
ಅಂದಹಾಗೆ ಎಲ್ಲರೊಂದಿಗೂ ಹೊಂದಿಕೊಳ್ಳುವ, ಎಲ್ಲ ಸಮಾಜದವರೊಂದಿಗೆ ಅನುಸರಿಸಿಕೊಂಡು ಹೋಗುವ ಸ್ವಭಾವ ಉಲುಚುಕಮ್ಮೆ ಸಮುದಾಯದವರದ್ದು. ಈ ಸಮಾಜದವರು ಕೋಲಾರ, ತುಮಕೂರು, ಬಳ್ಳಾರಿ ಮತ್ತಿತರ ಜಿಲ್ಲೆಗಳಲ್ಲಿ ನೆಲೆಸಿದ್ದಾರೆ. ಶಿವಮೊಗ್ಗ ಜಿಲ್ಲೆಯಲ್ಲೂ ಹಲವಾರು ಕುಟುಂಬಗಳಿವೆ. ಜನಸಂಖ್ಯೆ 50 ಸಾವಿರಕ್ಕೂ ಹೆಚ್ಚಿರಬಹುದು.
ರಾಜ್ಯದಲ್ಲಿರುವ ಬ್ರಾಹ್ಮಣ ಸಮುದಾಯದ ಅನೇಕ ಪಂಗಡಗಳ ಹೆಸರುಗಳು ಮೂಲ ನಿವಾಸದ ಹೆಸರುಗಳನ್ನು ಸೂಚಿಸುತ್ತವೆ. ಹಾಗೆಯೇ ಉಲುಚುಕಮ್ಮೆ ಪಂಗಡವೂ ಊರಿನ ಹೆಸರಿನಿಂದಲೇ ಹುಟ್ಟಿದೆ. ಕೇಂದ್ರ ಸರ್ಕಾರದ ಎಫಿಗ್ರಫಿಸ್ಟ್ ಹುದ್ದೆಯಲ್ಲಿ ಸೇವೆ ಸಲ್ಲಿಸಿದ್ದ ಎನ್.ಲಕ್ಷ್ಮೀನಾರಾಯಣ ಅವರ ಪ್ರಕಾರ ಉಲ್ಚ ಮತ್ತು ಕಮ್ಮೆ ಎಂಬುದು 'ಕರ್ಮಿನ್' ಅಂದರೆ ವೈದಿಕ ಕರ್ಮಗಳನ್ನು ಶ್ರದ್ಧೆಯಿಂದ ಅನುಷ್ಠಾನ ಮಾಡುವವರು ಎಂದರ್ಥ.
'ಉಳ್ವಳು' ಉಲಚಾಲವೇ ಆಗಿದೆ :ಇದಕ್ಕೆ ಪುಷ್ಟಿ ಕೊಡುವ ವಿಚಾರ ಆಂಧ್ರದ ಉಲಚಾಲ ಎಂಬ ಶಾಸನದಲ್ಲಿ ಇದೆಯಂತೆ. ಈ ಶಾಸನ ಬಾದಾಮಿಯ ಚಾಲುಕ್ಯ ವಂಶದ ವಿಜಯಾದಿತ್ಯ ಮಹಾರಾಜನ 35ನೇ ಸಂವತ್ಸರದ ಅಂದರೆ ಕ್ರಿ.ಶ.730ರಲ್ಲಿ ಕೊಟ್ಟ ದಾನ ಪತ್ರವಂತೆ. ಇದರಲ್ಲಿ ವಿಜಯಾದಿತ್ಯನ ಮಗನಾದ ಯುವರಾಜ ವಿಕ್ರಮಾದಿತ್ಯ ಕಾಂಚಿ ಪಟ್ಟಣಕ್ಕೆ ಮುತ್ತಿಗೆ ಹಾಕಿ ಅಲ್ಲಿಯ ರಾಜನಾದ ಪರಮೇಶ್ವರ ಪಲ್ಲವನಿಂದ ಕಪ್ಪ, ಕಾಣಿಕೆ ಪಡೆದು ಹಿಂತಿರುಗುತ್ತಿದ್ದಾಗ 'ಉಲ್ಚಳು' ಮತ್ತು 'ಪರಿಯಾಳು' ಎಂಬ ಗ್ರಾಮವನ್ನು ಕೊಂಗುಣಿ ವಂಶದವನಾದ ದುರ್ವಿನೀತ ಪರೆಯಪ್ಪೋರ್ ಎಂಬ ಸಾಮಂತನಿಗೆ ಕೊಟ್ಟಂತೆ ಹೇಳಿದೆ.
ಈ ಶಾಸನ ಉಲಚಾಲ ಗ್ರಾಮದಲ್ಲೇ ಇರುವುದರಿಂದ ಇದರಲ್ಲಿ ಉಲ್ಲೇಖ ಮಾಡಿರುವ 'ಉಳ್ವಳು' ಉಲಚಾಲವೇ ಆಗಿದೆ ಎಂದು ಸ್ಪಷ್ಟವಾಗಿದೆ. ವಿಜಯಾದಿತ್ಯನ ತಂದೆ ವಿನಯಾದಿತ್ಯನ ಶಾಸನವೊಂದರಲ್ಲಿ ಗ್ರಾಮದ ಹೆಸರು ಉಳ್ವಳ್ ಎಂದಿದೆ. ಉಲ್ಚಲಕಮ್ಮೆಯ ಉಲ್ಚ ಎಂಬ ಪೂರ್ವಾರ್ಧ ಪದ ಉಳ್ವಳ್ ಎಂಬ ಪದದ ಸಂಕ್ಷಿಪ್ತ ರೂಪ.
ಈ ಉಲಚಾಲ ಗ್ರಾಮ ರಾಯಚೂರಿನ ಗಡಿಯಲ್ಲಿದೆ. ಈ ಗ್ರಾಮದ ಸುತ್ತಮುತ್ತಲ ಪ್ರದೇಶ ಆಂಧ್ರ ಪ್ರದೇಶಕ್ಕೆ ಸೇರಿಕೊಂಡಿದೆ. ಈ ಪ್ರದೇಶ ಮೊದಲು ಕರ್ನಾಟಕಕ್ಕೆ ಸೇರಿತ್ತು ಎಂಬುದಕ್ಕೆ ದಾಖಲೆಗಳಿವೆ. ಅಲ್ಲಿ ಸಿಕ್ಕಿರುವ ಶಾಸನಗಳು ಕನ್ನಡದಲ್ಲೇ ಇರುವುದು ಇದಕ್ಕೆ ಸಾಕ್ಷಿ. ಉಲ್ಚಕಮ್ಮಿ ಜನರು ಕರ್ನಾಟಕಕ್ಕೆ ಸೇರಿದ ಜಾಗದಿಂದ ಬಂದಿರುವುದರಿಂದಲೇ ಅವರ ಮಾತೃಭಾಷೆ ಕನ್ನಡವಾಗಿದೆ ಎನ್ನುತ್ತಾರೆ ಸಮುದಾಯದ ಮುಖಂಡರು.
ಬ್ರಹ್ಮವಿದ್ಯೆ ಸಾಧನೆ: ಬೆಂಗಳೂರಿನ ಜಯನಗರದಲ್ಲಿರುವ ಶ್ರೀ ಜಿತಬಿಂದು ಮಹರ್ಷಿಗಳ ಪ್ರಕಾರ ಕಮ್ಮೆ ಪದದ ಅರ್ಥ ಬಹು ದೊಡ್ಡದು. ಕ-ಬ್ರಹ್ಮ, ಮ-ಶಿರ, ಏ-ಸಂಬೋಧನೆ, ರೋಪ್ರಾಯದ ಬ್ರಹ್ಮ ವಿದ್ಯಾ ಸಂಬೋಧನೆಯೇ ಕಮ್ಮೆ ಉಳಿಚು ಎಂಬುದು ಉಳಿಸು ಎಂಬ ಪದದ ತತ್ಸಮ ಮತ್ತು ತದ್ಭವ ಸೂಚಿಸುತ್ತದೆ. ಬ್ರಹ್ಮ ವಿದ್ಯೆ ಸಾಧನೆಯನ್ನು ಉಳಿಸಿಕೊಂಡು ಬಂದ ವಿಶ್ವದ ಶ್ರೇಷ್ಠ ಗುಂಪಿಗೆ ಉಳಿಚುಕಮ್ಮೆ ಎಂದು ಹೆಸರು ಎನ್ನುತ್ತಾರೆ ಅವರು. ಈ ಸಮುದಾಯದವರು ಲಕ್ಷ್ಮೀನರಸಿಂಹ ಮತ್ತು ವೆಂಕಟರಮಣನ ಆರಾಧಕರು. ಆಂಧ್ರದ ಗಡಿಯಿಂದ ಬಂದವರಾದ್ದರಿಂದ ವೆಂಕಟರಮಣನ ಮೇಲೆ ಭಕ್ತಿ ಹೆಚ್ಚು.
ಹೀಗೆ ಶತಮಾನಗಳಿಂದ ಸತ್ಕರ್ಮ, ಉತ್ಕೃಷ್ಟ ವಿಚಾರ ಮತ್ತು ಬೌದ್ಧಿಕ ಸಂಪತ್ತಿಗೆ ಹೆಸರಾದ ಉಲುಚುಕಮ್ಮೆ ಸಮುದಾಯದವರು ಇಂದಿಗೂ ಅದೇ ಪರಂಪರೆಯನ್ನು ಮುಂದುವರಿಸಿಕೊಂಡು ಬಂದಿದ್ದಾರೆ. ಹೀಗಾಗಿಯೇ 30 ವಿದ್ಯಾರ್ಥಿಗಳಿಗೆ ಉಚಿತವಾಗಿ ಎಲ್ಲ ಸೌಕರ್ಯಗಳನ್ನು ಒದಗಿಸಿ ಅವರ ವ್ಯಾಸಂಗಕ್ಕೆ ಅನುವು ಮಾಡಿಕೊಡಲಾಗಿದೆ ಎನ್ನುತ್ತಾರೆ ಉಲುಚುಕಮ್ಮೆ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷರಾದ ವಿ. ಮಂಜುನಾಥ್ ಅವರು.
ಅರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಉಲುಚುಕಮ್ಮೆ ಸಮುದಾಯದವರು ಮುಂದಿದ್ದಾರೆ. ರಾಜಕೀಯವಾಗಿ ಹೇಳಿಕೊಳ್ಳುವಂತಹ ಪ್ರಾತಿನಿಧ್ಯ ಇಲ್ಲದಿದ್ದರೂ ಕೃ.ನರಹರಿ ಅವರು ವಿಧಾನ ಪರಿಷತ್ತಿಗೆ ಮೂರು ಬಾರಿ ಆಯ್ಕೆಯಾಗಿದ್ದರು. ಇನ್ನು ಐಪಿಎಸ್, ಐಎಎಸ್ ಅಧಿಕಾರಿಗಳು ಹಲವರಿದ್ದಾರೆ. ಎಂ.ಎನ್.ಶಂಕರ ನಾರಾಯಣರಾವ್ ಅವರು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿದ್ದರು. ಅನಿವಾಸಿ ಭಾರತೀಯರ ಪೈಕಿ 200 ಕ್ಕೂ ಹೆಚ್ಚು ಮಂದಿ ಉಲುಚುಕಮ್ಮೆ ಸಮುದಾಯಕ್ಕೆ ಸೇರಿದವರಾಗಿದ್ದಾರೆ.
ವಿದ್ಯಾಭ್ಯಾಸದಲ್ಲಿ ಮುಂದು: ವೈದ್ಯರು, ಎಂಜಿನಿಯರ್‌ಗಳು ಮತ್ತು ಸಾಫ್ಟ್‌ವೇರ್ ಎಂಜಿನಿಯರುಗಳು ಸಹ ಈ ಸಮುದಾಯದಲ್ಲಿ ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ವಾಣಿಜ್ಯ ಪದವೀಧರರಿಗೂ ಕೊರತೆ ಏನಿಲ್ಲ. ಒಟ್ಟಿನಲ್ಲಿ ವಿದ್ಯಾಭ್ಯಾಸದಲ್ಲಿ ಈ ಸಮಾಜದ ಜನ ಮುಂದಿದ್ದಾರೆ. ಜೊತೆಗೆ ಶೇ.50ಕ್ಕೂ ಹೆಚ್ಚು ಕುಟುಂಬಗಳು ಆರ್ಥಿಕವಾಗಿಯೂ ಪ್ರಗತಿ ಹೊಂದಿವೆ. ಏನೇ ಆದರೂ ಮೂಲ ವೃತ್ತಿಯನ್ನು ಮಾತ್ರ ಈ ಸಮುದಾಯದವರು ಮರೆತಿಲ್ಲ. ವೇದ ಅಧ್ಯಯನ ಮತ್ತು ವೈದಿಕ ಕರ್ಮಗಳ ಆಚರಣೆಯನ್ನು ಈಗಲೂ ಮುಂದುವರಿಸಿಕೊಂಡು ಬಂದಿದ್ದಾರೆ. ಯುವಕ, ಯುವತಿಯರಿಗೆ ವೇದ ಅಭ್ಯಾಸ ಮಾಡಿಸುವ ಕೆಲಸವೂ ನಡೆಯುತ್ತಿದೆ. 1945ರಲ್ಲಿ ಸ್ಥಾಪನೆಯಾಗಿರುವ ಉಲುಚುಕಮ್ಮೆ ಬ್ರಾಹ್ಮಣ ಮಹಾಸಭಾ ಆ ಕಾರ್ಯದಲ್ಲಿ ಸಕ್ರಿಯವಾಗಿದೆ.
ಈ ಮಹಾಸಭಾದ ಅಧ್ಯಕ್ಷರಾಗಿ ವೆಂಕಟರಾಮಯ್ಯ, ನಿವೃತ್ತ ನ್ಯಾಯಮೂರ್ತಿ, ದಿವಂಗತ ನಿಟ್ಟೂರು ಶ್ರೀನಿವಾಸ ರಾವ್, ಎಂ.ಎನ್.ಕೃಷ್ಣರಾವ್, ಲೇಖಕರಾದ ಟಿ. ಸುನಂದಮ್ಮ, ಆರ್‌ಎಸ್‌ಎಸ್‌ನ ಕೃ.ಸೂರ್ಯನಾರಾಯಣರಾವ್, ಗಾಯಕ ಅಶ್ವತ್ಥ್, ಸಿನಿಮಾ ನಟ, ದಿವಂಗತ ಕೆ.ಎಸ್.ಅಶ್ವತ್ಥ್, ಕ್ರಿಕೆಟಿಗ ಜಿ. ವಿಶ್ವನಾಥ್, ಬರಹಗಾರರಾದ ಸುರೇಶ್ ಮೂನ, ಟಿ.ಆರ್.ಅನಂತರಾಮನ್ ಮತ್ತಿತರರು ಕಾರ್ಯನಿರ್ವಹಿಸಿದ್ದಾರೆ. ಮಹಾಸಭಾದ ಕಚೇರಿ ಬೆಂಗಳೂರಿನ ವಿಲ್ಸನ್ ಗಾರ್ಡನ್ ಬಡಾವಣೆಯ ಸಿದ್ದಯ್ಯ ರಸ್ತೆಯಲ್ಲಿದೆ. ಮೈಸೂರಿನ ಮಹಾರಾಜರು ಕೊಟ್ಟಿರುವ ಜಾಗದಲ್ಲಿ ಕಚೇರಿ ಕಟ್ಟಡ ನಿರ್ಮಾಣ ಮಾಡಲಾಗಿದೆ.
- ಕೆ.ವಿ.ಪ್ರಭಾಕರ
prabhukolar@yahoo.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

