ಇವು ಸಾರ್ವಭೌಮತೆಯ ಸೌಧಗಳೇ?
ವ್ಯವಸ್ಥೆಯ ಆಡಳಿತದ ಬೆನ್ನೆಲುಬು ಎಂದು ಕರೆಯಲ್ಪಡುವ ನಾಗರಿಕ ಸೇವೆಗಳಿಗೆ ಅರ್ಹರನ್ನು ಆಯ್ಕೆ ಮಾಡುವ ಕಾರ್ಯದಲ್ಲಿ ತೊಡಗಿರುವ ಲೋಕಸೇವಾ ಆಯೋಗಗಳ ನಿರ್ಧಾರಗಳು ಕೆಲವೊಮ್ಮೆ ರಾಷ್ಟ್ರೀಯ ಐಕ್ಯತೆಗೆ ಮತ್ತು ಸಂವಿಧಾನದ ಆಶಯಗಳಿಗೆ ಧಕ್ಕೆಯುಂಟು ಮಾಡುವಂತಿರುತ್ತದೆ.
ಪರೀಕ್ಷಾ ಕ್ರಮವನ್ನು ಬದಲಾವಣೆಗೊಳಪಡಿಸಲು ಯುಜಿಸಿಯ ಮಾಜಿ ಚೇರ್ಮನ್ ಪ್ರೊ. ಅರುಣ್ ಎಸ್.ನಿಗವೇಕರ್ ಅವರ ನೇತೃತ್ವದ ಪರಿಣಿತರ ಸಮಿತಿ ಶಿಫಾರಸ್ಸು ಮಾಡಿತ್ತು. ಸಮಿತಿ ನೀಡಿದ ವರದಿಯಂತೆ ಪರೀಕ್ಷಾ ಕ್ರಮದಲ್ಲಿ ಸಾಕಷ್ಟು ಬದಲಾವಣೆ ತಂದಿರುವುದೇನೋ ಸಂತಸ. ಆದರೆ ಷರತ್ತುಗಳನ್ನು ವಿಧಿಸಿರುವುದನ್ನು ಮಾತ್ರ ವಿರೋಧಿಸಲೇಬೇಕು. ಪ್ರಾದೇಶಿಕ ಭಾಷೆಯಲ್ಲಿ ನಾಗರಿಕ ಸೇವಾ ಪರೀಕ್ಷೆಯನ್ನು ಬರೆಯಬೇಕಾದರೆ 25 ಜನರಿರಲೇಬೇಕು ಎಂಬ ಷರತ್ತು ವಿಧಿಸಲಾಗಿದೆ. ಕೇಂದ್ರ ಲೋಕಸೇವಾ ಆಯೋಗವೇ ಚರಿತ್ರೆಯನ್ನು ಮರೆತಿದೆಯೇ ಅಥವಾ ಆಯೋಗದಲ್ಲಿ ದೂರದೃಷ್ಟಿಯ ಕೊರತೆ ಎದ್ದು ಕಾಣುತ್ತಿದೆಯೇ ಎಂಬ ಅನುಮಾನಗಳು ಕಾಡುತ್ತಿವೆ. ಸ್ವಾತಂತ್ರ್ಯ ಪಡೆದ ಆರಂಭದಲ್ಲಿ ಹಿಂದಿಯನ್ನು ದೇಶದುದ್ದಗಲ್ಲಕ್ಕೂ ಹೇರಲು ಹೋಗಿ, ಅಂದಿನ ಕೇಂದ್ರ ಸರ್ಕಾರ ಫಜೀತಿ ಅನುಭವಿಸಿದ್ದು, ಆ ಸಮಯದಲ್ಲಿ ಪ್ರಾದೇಶಿಕ ಭಾಷೆಗಳ ಪರ ಹೋರಾಟ ಉತ್ತುಂಗಕ್ಕೆ ತಲುಪಿದ್ದನ್ನು ಅರುಣ್ ಎಸ್. ನಿಗವೇಕರ್ ಸಮಿತಿ ಗಮನಿಸಿಯೇ ಇಲ್ಲವೆನಿಸುತ್ತಿದೆ. ಸದ್ಯದ ಆಯೋಗದ ಷರತ್ತಿನಂತೆ ಪರೀಕ್ಷೆಗಳು ನಡೆದಲ್ಲಿ ದೇಶದ ಜನಸಂಖ್ಯೆಯ ಶೇ.40ರಷ್ಟಿರುವ ಹಿಂದಿ ಭಾಷಿಕರು, ಜೊತೆಗೆ ಶೈಕ್ಷಣಿಕ ಹಂತದಲ್ಲೇ ಇಂಗ್ಲಿಷ್ ಮಾಧ್ಯಮವನ್ನು ಹೊಂದಿದ್ದವರು ನಿರಾಯಾಸವಾಗಿ ಅತ್ಯುನ್ನತ ಹುದ್ದೆಗಳನ್ನು ಪಡೆದುಕೊಳ್ಳುತ್ತಾರೆ. ಪ್ರಾದೇಶಿಕ ಭಾಷೆಗಳನ್ನಷ್ಟೇ ಬಲ್ಲ ಪ್ರತಿಭಾವಂತ ಆಕಾಂಕ್ಷಿಗಳು ಹೇಳ ಹೆಸರಿಲ್ಲದಂತೆ ಕಾಣೆಯಾಗುತ್ತಾರೆ. ಲೋಕಸೇವಾ ಆಯೋಗ ಇಷ್ಟನ್ನಾದರೂ ಆಲೋಚಿಸಬೇಕಿತ್ತಲ್ಲವೇ?
ರಾಷ್ಟ್ರೀಯ ಐಕ್ಯತೆ ಮತ್ತು ದೇಶದಲ್ಲಿ ಒಗ್ಗಟ್ಟನ್ನು ಬಲಪಡಿಸಲು ನಾಗರಿಕ ಸೇವೆಯು ಒಂದು ಮಹತ್ತರ ಸಾಧನವೆಂದು ಪರಿಗಣಿಸಿದವರು ಸರ್ದಾರ್ ವಲ್ಲಭಬಾಯಿ ಪಟೇಲ್. ಬ್ರಿಟಿಷ್ ಭಾರತದಲ್ಲಿದ್ದ ಇಂಪಿರೀಯಲ್ ಸಿವಿಲ್ ಸರ್ವಿಸ್ಗಳಿಗೆ ಹೊಸ ರೂಪ ನೀಡಿ, ಭಾರತದ ಆಧುನಿಕ ನಾಗರಿಕ ಸೇವೆಗಳ ಸಂತನೆನಿಸಿದರು. ಅವರ ದೂರದೃಷ್ಟಿಯ ಫಲವಾಗಿ ರಾಷ್ಟ್ರದ ಸಾರ್ವಭೌಮತೆಯಡಿ ಪ್ರಾದೇಶಿಕತೆಗೆ ಧಕ್ಕೆ ಬಾರದಂತೆ ಸಿವಿಲ್ ಸರ್ವಿಸ್ಗಳನ್ನು ನಡೆಸಲಾಗುತ್ತಿತ್ತು. ಇದ್ಯಾವುದನ್ನೂ ಗಮನಿಸದ ಕೇಂದ್ರ ಲೋಕಸೇವಾ ಆಯೋಗ ತನ್ನಿಚ್ಛೆಯಂತೆ ಷರತ್ತುಗಳನ್ನು ವಿಧಿಸಿದೆ.
ಪ್ರಾದೇಶಿಕ ಭಾಷೆಗಳಿಗೆ ಇದು ನುಂಗಲಾರದ ತುತ್ತು. ಅದರಲ್ಲೂ ಕನ್ನಡಿಗರಿಗೆ ದಾರಿಯಾವುದಯ್ಯಾ ಸರ್ಕಾರಿ ಸೇವೆಗೆ ಎಂಬಂತಾಗಿದೆ. ಐಪಿಎಸ್/ಐಎಎಸ್/ಐಎಫ್ಎಸ್ನಂತಹ ಮಹತ್ವದ ಹುದ್ದೆಗಳತ್ತ ಕನ್ನಡಿಗರು ದೃಷ್ಟಿ ನೆಡಲೇ ಬಾರದೆಂಬಂತಿದೆ ಯುಪಿಎಸ್ಸಿ ನಿರ್ಧಾರ. ಅದು ಹೋಗಲಿ, ಇತ್ತ ರಾಜ್ಯ ಲೋಕಸೇವಾ ಆಯೋಗವನ್ನಾದರೂ ನೆಚ್ಚಬಹುದೇ ಎಂದರೆ ಇಲ್ಲೂ ಗೊಂದಲಗಳು. ರೈತರು ಆಕಾಶದತ್ತ ಮುಖ ಮಾಡಿ ಮಳೆ ಬರಲಿ ಎಂದು ಆಸೆಗಣ್ಣಿನಿಂದ ನೋಡುವಂತೆ, ಕೆಪಿಎಸ್ಸಿ ನಡೆಸುವ ಪರೀಕ್ಷೆಗಳನ್ನು, ಅವುಗಳ ಫಲಿತಾಂಶಗಳನ್ನು ಕಾಯಬೇಕಾದ ಪರಿಸ್ಥಿತಿ ಇದೆ. 18-05-2011ರಂದು ರಾಜ್ಯ ಲೋಕಸೇವಾ ಆಯೋಗ ತನ್ನ ವಜ್ರಮಹೋತ್ಸವ ಆಚರಿಸಿಕೊಂಡರೂ, ಪ್ರತಿ ವರ್ಷ ನೇಮಕಾತಿ ನಡೆಸಲು ಸಾಧ್ಯವಾಗುತ್ತಿಲ್ಲ. 2012ರ ಏಪ್ರಿಲ್ 22ರಂದು ನಡೆದ ಪೂರ್ವಭಾವಿ ಪರೀಕ್ಷೆಯ ನಂತರ, ಮುಖ್ಯ ಪರೀಕ್ಷೆ ಮುಗಿಯಲಿಕ್ಕೆ ಜನವರಿ 06 ರವರೆಗೆ ಕಾಯಬೇಕಾಯಿತು. ಮುಖ್ಯಪರೀಕ್ಷೆಯ ಫಲಿತಾಂಶ ಇನ್ಯಾವಾಗಲೋ? ಭಗವಂತನೇ ಬಲ್ಲ! ಇನ್ನು ಪ್ರತಿ ವರ್ಷ ಪರೀಕ್ಷೆ ನಡೆಸುವುದು ವಾಸ್ತವದಿಂದ ದೂರವೇ ಸರಿ.
ಸರ್ಕಾರ ಮತ್ತು ಪ್ರಜೆಗಳ ನಡುವೆ ಸೇತುವೆಯಾಗಬೇಕಾದ ನಾಗರಿಕ ಸೇವಾ ಅಧಿಕಾರಿಯಿಂದ ನಿರೀಕ್ಷಿಸಬಹುದಾದದ್ದು ಕಾಮನ್ಸೆನ್ಸ್ ಅಷ್ಟೇ. ಆದರೆ ಇಂದು ಸ್ಪರ್ಧಾತ್ಮಕ ಪರೀಕ್ಷೆಗಳೆಂದರೆ ರಾಕೆಟ್ ಸೈನ್ಸ್ ಆದಂತಿದೆ. ನಾಗರಿಕ ಸೇವಾ ಹುದ್ದೆಯನ್ನು ಅಲಂಕರಿಸುವ ಅಧಿಕಾರಿ ಮೊದಲಿಗೆ ತನ್ನ ವ್ಯಾಪ್ತಿಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಜವಾಬ್ದಾರಿ ಹೊತ್ತಿರುತ್ತಾರೆ. ಇದರೊಂದಿಗೆ ಸರ್ಕಾರದ ಯೋಜನೆಗಳನ್ನು, ನೀತಿಗಳನ್ನು ಅನುಷ್ಠಾನಗೊಳಿಸುವ ಮತ್ತು ಸಂಬಂಧಪಟ್ಟ ಇಲಾಖೆಗಳೊಂದಿಗೆ ಸತತ ಸಂಪರ್ಕದಲ್ಲಿರುವ ಹೊಣೆಯು ಇರುತ್ತದೆ. ಐಎಎಸ್ ಉತ್ತೀರ್ಣರಾದವರಿಗೆ ಮಸ್ಸೂರಿಯ ಲಾಲ್ಬಹದ್ದೂರ್ ಶಾಸ್ತ್ರೀ ಅಕಾಡೆಮಿಯಲ್ಲಿ, ಐಪಿಎಸ್ ಪಾಸು ಮಾಡಿದವರಿಗೆ ಹೈದ್ರಾಬಾದ್ನ ಸರ್ದಾರ್ ವಲ್ಲಭಬಾಯಿ ಪಟೇಲ್ ರಾಷ್ಟ್ರೀಯ ಪೋಲಿಸ್ ಅಕಾಡೆಮಿಯಲ್ಲಿಯು ತರಬೇತಿ ನೀಡುತ್ತಾರೆ. ಅದಕ್ಕೂ ಮುನ್ನ ನಡೆಯುವ ಪೂರ್ವಭಾವಿ, ಮುಖ್ಯ ಪರೀಕ್ಷೆ ಮತ್ತು ಸಂದರ್ಶನಗಳು ಆಯ್ಕೆಯಾಗಲು ಮಾನದಂಡಗಳಷ್ಟೇ. ಆದರೆ ಎಲ್ಲೆಂದರಲ್ಲಿ ತಲೆ ಎತ್ತಿರುವ ಕೋಚಿಂಗ್ ಸೆಂಟರ್ಗಳು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹುರಿಯಾಳುಗಳನ್ನು ತಯಾರಿಸುವ ಕಾರ್ಖಾನೆಗಳಂತಾಗಿವೆ. ಸದ್ಯ ಲಾಭದಾಯಕ ಉದ್ಯಮದಂತಾಗಿ, ತರಬೇತಿ ಶುಲ್ಕ 20 ಸಾವಿರದಿಂದ ಆರಂಭವಾಗಿ ಲಕ್ಷವನ್ನೂ ದಾಟುತ್ತಿದೆ. ಈ ಸ್ಪರ್ಧಾ ಯುಗದಲ್ಲಿ ತೀವ್ರತರವಾದ ಸ್ಪರ್ಧೆ ಇರುವುದರಿಂದ ಅಗತ್ಯವಾದ ಮಾರ್ಗದರ್ಶನವಿರಬೇಕಾದುದು ಒಪ್ಪಬೇಕಾದದ್ದೇ. ಆದರೆ, ಬಡತನವಿದ್ದರೂ, ಸಾಲ ಮಾಡಿಯಾದರೂ ಅಥವಾ ಇರುವ ಉದ್ಯೋಗವನ್ನು ಬಿಟ್ಟು, ಕೇಳಿದಷ್ಟು ಹಣ ನೀಡಿ, ತರಬೇತಿ ಪಡೆದವರ ದಯನೀಯ ಸ್ಥಿತಿ ಕೇಳುವವರಾರು? ಕನ್ನಡದಲ್ಲಿ ಮುಖ್ಯ ಪರೀಕ್ಷೆ ಬರೆಯುವವರ ಸಂಖ್ಯೆ 2009ರಲ್ಲಿ 11, 2010ರಲ್ಲಿ 11, 2011ರಲ್ಲಿ 05 ಮಂದಿ ಮಾತ್ರ. ಅಂದರೆ ಕನ್ನಡಿಗರಿಗೆ ಯಪಿಎಸ್ಸಿ ಬಾಗಿಲು ಮುಚ್ಚಿದಂತೆಯೇ! ಇನ್ನು ಕೆಪಿಎಸ್ಸಿ ಕಾಯುವುದು, ರೈತರು ಆಗಸದತ್ತ ಮುಖ ಮಾಡಿ ಮಳೆರಾಯನಿಗೆ ಕಾದಂತಾಗುತ್ತಿದೆ.
30-40 ವರ್ಷಗಳ ಹಿಂದೆ ಓದಿದರೆ ಸಾಕು, ಹುಡುಕಿ ಕೆಲಸ ಕೊಡುತ್ತಿದ್ದರು ಎಂಬ ಮಾತು ಈಗ ಹಾಸ್ಯಾಸ್ಪದವಾಗಿದೆ. ಲಕ್ಷಾಂತರ ಜನರು ಸರ್ಕಾರಿ ಉದ್ಯೋಗಗಳಿಗಾಗಿ ಹಾತೊರೆಯಬಹುದು, ಅದು ಸಾಮಾನ್ಯ ಸಂಗತಿ. ಪರೀಕ್ಷಾ ಕ್ರಮದಲ್ಲಿಯೂ ಬದಲಾವಣೆ ತರುತ್ತಿದ್ದರೆ, ಬದಲಾದ ಕಾಲಕ್ಕೆ ತಕ್ಕಂತೆ ಅರ್ಹರನ್ನು ಆಯ್ಕೆ ಮಾಡಬಹುದು. ಇದನ್ನೆಲ್ಲಾ ಬಿಟ್ಟು, ಸ್ಪರ್ಧೆ ಮಾಡುವವರ ಸಂಖ್ಯೆಯನ್ನೇ ಕಡಿಮೆ ಮಾಡುತ್ತೇನೆಂದು ಹೊರಟಂತಿದೆ ಯುಪಿಎಸ್ಸಿ. ಇವು ಸ್ವಾಯತ್ತ ಸಂಸ್ಥೆಗಳೇ ಇರಬಹುದು. ಆದರಿದು ಪ್ರಜಾಪ್ರಭುತ್ವ. ಸಾರ್ವಜನಿಕ ನಿಯೋಜನೆಯ ವಿಷಯಗಳಲ್ಲಿ ಸಮಾನಾವಕಾಶ ನೀಡಬೇಕೆಂದು ಸಂವಿಧಾನದ ಅನುಚ್ಛೇದ 16ರಲ್ಲಿ ಸ್ಪಷ್ಟವಾಗಿ ನಮೂದಿಸಲಾಗಿದೆ. ಕಲ್ಯಾಣ ರಾಜ್ಯ ನಿರ್ಮಾಣಕ್ಕೆ ಪೂರಕವೆಂಬಂತಿರುವ ಸಂವಿಧಾನದ ಅನುಚ್ಛೇದ 38 ಮತ್ತು 41ರಲ್ಲಿಯೂ ಸಹ ಉದ್ಯೋಗದ ವಿಚಾರದಲ್ಲಿ ತಾರತಮ್ಯ ಮಾಡದಂತೆ ತಿಳಿಸಲಾಗಿದೆ.
ರಾಜ್ಯ ಸರ್ಕಾರವಾಗಲಿ, ಕೇಂದ್ರ ಸರ್ಕಾರವಾಗಲಿ ತಾನೆ ಮುಂದೆ ನಿಂತು, ನೇಮಕಾತಿಯಲ್ಲಾಗುತ್ತಿರುವ ಲೋಪಗಳನ್ನು ಸರಿಪಡಿಸಬೇಕಾದ ಅಗತ್ಯತೆ ಇದೆ. ಸಿವಿಲ್ ಸರ್ವಿಸ್ ವಿಚಾರದಲ್ಲಿ ಮಹತ್ತರ ಜವಾಬ್ದಾರಿ ಹೊಂದಿರುವ ರಾಜ್ಯಸಭೆಗೆ ಈ ಎಲ್ಲಾ ನ್ಯೂನತೆಗಳನ್ನು ಮನವರಿಕೆ ಮಾಡಿಕೊಡಬೇಕಾದದ್ದು ಜನಪ್ರತಿನಿಧಿಗಳು.
ಈ ಮೊದಲಿದ್ದಂತೆ ಸಮಾನವಕಾಶ ಪದ್ಧತಿಯನ್ನು ಪುನಃ ಮುಂದುವರೆಸಿ, ಗ್ರಾಮೀಣ ಭಾಗದ, ಹಿಂದುಳಿದ ಪ್ರದೇಶಗಳ ಹಾಗೂ ಆರ್ಥಿಕವಾಗಿ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಾಗಲು ಸಾಧ್ಯವಾಗದಿರುವವರಲ್ಲಿ ತಿಳವಳಿಕೆ ಮೂಡಿಸಬೇಕಾಗಿದೆ. ಅದರಲ್ಲೂ ಕರ್ನಾಟಕದಲ್ಲಿ ಬಹುತೇಕ ಯುವಕ-ಯುವತಿಯರಿಗೆ ನಾಗರಿಕ ಸೇವಾ ಪರೀಕ್ಷೆಗಳ ಬಗ್ಗೆ ಒಂದು ಸ್ಪಷ್ಟ ಕಲ್ಪನೆ, ತಿಳವಳಿಕೆ ಇಲ್ಲದಿರುವುದೇನೋ ನಿಜ. ಇದಕ್ಕೆ ಸರ್ಕಾರವೇ ಮುಂದಾಗಿ, ಪ್ರತಿ ವರ್ಷ ತಾಲೂಕು ಮಟ್ಟದಲ್ಲಾದರೂ ನಾಗರಿಕ ಸೇವಾ ನೇಮಕಾತಿ ಪರೀಕ್ಷೆಗಳ ಬಗ್ಗೆ ಶಿಬಿರಗಳನ್ನು ಏರ್ಪಡಿಸಿ, ತಿಳಿ ಹೇಳುವುದು ಒಳಿತು.
ಸ್ವಾಯತ್ತ ಸಂಸ್ಥೆಗಳೆಂಬ ಹಣೆಪಟ್ಟಿಯಲ್ಲಿ ಷರತ್ತುಗಳನ್ನು ವಿಧಿಸುತ್ತಾ ಹೋದರೆ ರಾಷ್ಟ್ರದ ಐಕ್ಯತೆಗೆ ಭಾರೀ ಧಕ್ಕೆಯುಂಟಾಗುವ ಸಂಭವವಿದೆ. ಭಾಷಾವಾರು ರಾಜ್ಯ ರಚನೆಗೆ ವಿರೋಧಿಸಿದಾಗ ಆಂಧ್ರಪ್ರದೇಶದ ಪೊಟ್ಟಿ ಶ್ರೀರಾಮುಲು ಮುಟ್ಟಿಸಿದ ಬಿಸಿ, ಹಿಂದಿಯನ್ನು ಎಲ್ಲಾ ರಾಜ್ಯಗಳಿಗೂ ಹೇರಲು ಹೋದಾಗ ತಮಿಳುನಾಡು ಕೊಟ್ಟ ತಿರುಗೇಟು, ಕನ್ನಡಕ್ಕೆ ಸಾಂಸ್ಕೃತಿಕ ಭಾಷಾ ಸ್ಥಾನಮಾನ ನೀಡದಿದ್ದಾಗ ಕನ್ನಡಿಗರು ಸಿಡಿದೆದ್ದ ಘಟನೆಗಳನ್ನು ಕೇಂದ್ರ ಸರ್ಕಾರ ಮರೆಯಬಾರದು. ಎಲ್ಲಿ ತನ್ನ ನಾಡು-ನುಡಿಗೆ ಧಕ್ಕೆಯಾಗುವುದೋ ಅಲ್ಲಿ ಪ್ರಾದೇಶಿಕತೆಯ ಒಕ್ಕೊರಲ ಕೂಗು ಏಳುತ್ತಲೇ ಇದೆ. ಕೇಂದ್ರ ಲೋಕಸೇವಾ ಆಯೋಗದ '25' ನಿರ್ಧಾರ ಅದಕ್ಕೆ ತಿರುಗುಬಾಣವಾಗುವುದರಲ್ಲಿ ಸಂಶಯವಿಲ್ಲ. ಈಗಾಗಲೇ ವಿರೋಧದ ಕೂಗನ್ನು ಎತ್ತಿರುವ ಸಾಹಿತಿಗಳು, ಸಂಘಟನೆಗಳು ಫಲ ಕಾಣುವವರೆಗೆ ಮುಂದುವರೆದರೆ, ಪ್ರಾದೇಶಿಕ ಮಟ್ಟದ ಲಕ್ಷಾಂತರ ಜನರ ಆಸೆಗಳನ್ನು ಮತ್ತೆ ಚಿಗುರಿಸಿದಂತಾಗುತ್ತದೆ.
ಇಂಜಿನಿಯರಿಂಗ್, ವೈದ್ಯರು, ಕಲಾವಿದರು ಹೀಗೆ ಹಲವರು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಉತ್ತುಂಗಕ್ಕೇರಿದರೂ, ಪದವಿ, ಮನ್ನಣೆ, ಅಧಿಕಾರ, ವರ್ಚಸ್ಸಿನ ವಿಚಾರದಲ್ಲಿ ನಾಗರಿಕ ಸೇವೆಗಳು ಸದಾ ಆಕರ್ಷಕವಾಗುತ್ತವೆ. ಇದನ್ನೆಲ್ಲಾ ಸಂವಿಧಾನವೇ ಕಲ್ಪಿಸಿಕೊಟ್ಟಿದೆ. ಇಂತಹ ಹುದ್ದೆಗಳ ವಿಚಾರದಲ್ಲಿ ಯುಪಿಎಸ್ಸಿ ರಾಷ್ಟ್ರದ ಐಕ್ಯತೆಗೆ ಧಕ್ಕೆಯಾಗುವಂತೆ ತೀರ್ಮಾನ ಕೈಗೊಂಡರೆ ಅದು ಸಂವಿಧಾನದ ಆಶಯಕ್ಕೆ ಭಂಗ ತರುವುದಲ್ಲದೆ ಮತ್ತೇನಲ್ಲ.
- ಗೋಪಾಲ್ ಸಿ.
gkckm@yahoo.in
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

