ಯಾವ ಆಸ್ಕರೂ ಕಾಣದ 'ಲೈಫ್ ಆಫ್ ಪೈರು'
ಯುಪಿಎ ಸರ್ಕಾರದ ಹಗರಣಗಳ ಸಾಲು ಕೃಷಿ ಕ್ಷೇತ್ರವನ್ನೂ ತಟ್ಟಿದೆ. ರೈತನ...
ಸಮಸ್ಯೆ ಪರಿಹಾರವಾಗಬೇಕೆಂದರೆ ಕೇಂದ್ರದ ಸೂಚನೆಯಂತೆ ರಸಗೊಬ್ಬರ ಪೂರೈಕೆ ಹೊಣೆಯನ್ನು ರಾಜ್ಯವೇ ಹೊರಬೇಕು.
ಯುಪಿಎ ಸರ್ಕಾರದ ಹಗರಣಗಳ ಸಾಲು ಕೃಷಿ ಕ್ಷೇತ್ರವನ್ನೂ ತಟ್ಟಿದೆ. ರೈತನ ಉದ್ಧಾರದ ಹೆಸರಿನಲ್ಲಿ ಘೋಷಣೆಯಾಗುವ ಸಾಲಮನ್ನಾ ಯೊಜನೆಯನ್ನೂ ಅವ್ಯವಹಾರದ ಆರೊಪ ಕೇಳಿಬಂದಿದೆ. ಮೊದಲೆ ಭದ್ರತೆಯಿಲ್ಲದ ಜಟಕಾ ಬಂಡಿಯ ಬದುಕು ಸಾಗಿಸುತ್ತಿರುವ ಈ ದೇಶದ ರೈತನನ್ನು ಹೀಗೂ ಕಿತ್ತು ತಿನ್ನಬಹುದೇ? ಬಹುಸಂಖ್ಯಾತ ರೈತಾಪಿ ವರ್ಗ ನಿಜಕ್ಕೂ ಇಲ್ಲಿ ಶೋಷಿತರು. ಬೀಜ ನೆಲಕ್ಕೂರಿದ ದಿನದಿಂದಲೂ ಆರಂಭವಾಗುವ ಸಂಕಷ್ಟ ಪರಂಪರೆ, ಬೆಳೆದ ಫಸಲಿನೊಂದಿಗೆ ತಾನೂ ಬೆಳೆದು ರೈತನ ಮನೆ ಸೇರುತ್ತಿರುವುದು ವಾಸ್ತವ. ಪರಿಣಾಮ ದೇಶದ ಹೊಟ್ಟೆ ತುಂಬುವ ರೈತ ತಾನು ಮಾತ್ರ ಅರೆಹೊಟ್ಟೆಯಲ್ಲಿ ದಿನದೂಡಬೇಕಾದ ಪರಿಸ್ಥಿತಿಗೆ ಬಂದು ನಿಲ್ಲುವ ದುರಂತ ಸಂಭವಿಸುವುದು ಈ ದೇಶದಲ್ಲಿ ಮಾತ್ರ.
ನಿಸರ್ಗದ ಜೂಜಾಟ, ನೀರು-ಮಣ್ಣು ಸೇರಿದಂತೆ ಭೌಗೋಳಿಕ ಅಸಮಾನತೆಯಂಥ ಅನಿವಾರ್ಯಗಳ ಜತೆಗೆ ಅಭಿವೃದ್ಧಿಯ ಸಕಾಲಿಕ ಚಿಂತನೆಯ ಕೊರತೆ, ಕಳಪೆ ಬಿತ್ತನೆ ಬೀಜ- ರಾಸಾಯನಿಕ ಗೊಬ್ಬರ, ಸರಕಾರಿ ಇಲಾಖೆಗಳಲ್ಲಿ ಇಲ್ಲದ ಸಮನ್ವಯ, ಪ್ರಭೃತಿಗಳಂತಾದ ಪ್ರಭುತ್ವ, ಅಧಿಕಾರಶಾಹಿಯ ಅಸಡ್ಡೆ, ಮಾಹಿತಿ- ತರಬೇತಿಯ ಅಲಭ್ಯತೆ... ಹೀಗೆ ಸನ್ನಿವೇಶಕ್ಕೆ ಕಾರಣಗಳನ್ನು ಪಟ್ಟಿ ಮಾಡುತ್ತ ಸಾಗಬಹುದು. ಇತ್ತೀಚಿನ ಉದಾರೀಕರಣ, ಕೈಗಾರೀಕರಣದ ಹಾವಳಿಯಲ್ಲಂತೂ ರೈತ ಸಮುದಾಯವನ್ನುಳಿಸಿ ಮುನ್ನಡೆಸಬಲ್ಲ ಸಮರ್ಥ ನಾಯಕತ್ವವೇ ಕಾಣದಾಗಿದೆ.
ಮಾತೆತ್ತಿದರೆ ರೈತ, ಕೃಷಿ ಅಭಿವೃದ್ಧಿಯ ಮಾತನಾಡುವ ಸರಕಾರಗಳು, ನಾಯಕರು, ಸರಕಾರಿ ಸಂಸ್ಥೆಗಳು ಮಧ್ಯವರ್ತಿಗಳ ಸ್ನೇಹಿಯಾಗಿ ವರ್ತಿಸುತ್ತಿವೆಯೇ ಹೊರತೂ ನೇರವಾಗಿ ಬೆಳೆಗಾರನ ಮನೆ ಬಾಗಿಲಿಗೆ ಯೋಜನೆಗಳನ್ನು ಕೊಂಡೊಯ್ಯುತ್ತಿಲ್ಲ. ಹಸಿರುಕ್ರಾಂತಿಯ ಹೊಸ್ತಿಲು ದಾಟಿ ಬಂದ ಈ ನೆಲದಲ್ಲಿ ಇಂದು ಪ್ರಕೃತಿ ವಿಕೋಪ, ಬೆಲೆ ಅಸ್ಥಿರತೆ, ಮಾರುಕಟ್ಟೆ ಶೋಷಣೆ ಇತ್ಯಾದಿ ನಿತ್ಯದ ನಿರೀಕ್ಷಿತ ಸಂಕಷ್ಟಗಳೆಂಬಂತೆ ಆಗಿವೆ.
ಪ್ರದೇಶದಿಂದ ಪ್ರದೇಶಕ್ಕೆ ಬೆಳೆ ವೈವಿಧ್ಯವನ್ನು ಹೊಂದಿರುವ ರಾಜ್ಯದಲ್ಲಿ ರೈತನ ಸಮಸ್ಯೆಗಳೂ ಅಷ್ಟೇ ವಿಭಿನ್ನ. ಒಣ ಭೂಮಿಯ ಬದುಕಿನ ಸಮಸ್ಯೆ ಒಂದು ತೆರನಾದರೆ ನೀರಾವರಿ ಪ್ರದೇಶದ ರೈತರ ಜಂಜಡಗಳಿಗೆ ಹತ್ತು ಹಲವು ಮುಖ. ಪರ್ಯಾಯ ಕೃಷಿ ಮಾರ್ಗಗಳೇ ಇಲ್ಲವೆಂಬಂತೆ ಒಂದೇ ಬೆಳೆ ಪದ್ಧತಿಯ ಅನುಸರಣೆಯಿಂದ ರೈತ ಹೊರಬರುತ್ತಿಲ್ಲ. ಏತನ್ಮಧ್ಯೆ ಅತ್ತ ಸಾಂಪ್ರದಾಯಿಕ ಪದ್ಧತಿಗಳಲ್ಲೂ ಉಳಿಯದೇ, ಇತ್ತ ಪೂರ್ಣ ಆಧುನಿಕನಾಗೂ ಮಾರ್ಪಡದ ರೈತ, ಸಂದಿಗ್ಧಕ್ಕೆ ಸಿಲುಕಿ ಕೃಷಿಯ ಬಗ್ಗೆಯೇ ರೇಜಿಗೆ ಬೆಳೆಸಿಕೊಳ್ಳುತ್ತಿರುವುದು ಸತ್ಯ.
ಸಾಲದ್ದಕ್ಕೆ ಅತಿಯಾದ ರಾಸಾಯನಿಕ, ಕೀಟನಾಶಕಗಳ ಬಳಕೆಯಿಂದ ಭೂಮಿ ತನ್ನ ಎಂದಿನ ಸತ್ವ ಕಳೆದುಕೊಂಡು ಕ್ಷಾರಯುಕ್ತವಾಗಿದೆ. ಬರಡುತನದಿಂದ ಭೂಮಿಯನ್ನು ಮುಕ್ತಗೊಳಿಸುವ ದಾರಿ ರೈತನಿಗೆ ತೋಚುತ್ತಿಲ್ಲ. ಆ ಬಗ್ಗೆ ಸೂಕ್ತ ಮಾರ್ಗದರ್ಶನ ಮಾಡಬೇಕಾದ ಸರಕಾರಿ ಇಲಾಖೆಗಳು, ವಿಶ್ವವಿದ್ಯಾಲಯಗಳ ಮಂದಿ ಪಕ್ಕಾ ಸಾಂಸ್ಥಿಕ ಆಸಕ್ತಿಗಳಿಗೇ ಸೀಮಿತಗೊಳ್ಳುತ್ತಿದ್ದಾರೆ. ಪರಿಣಾಮ ಒಂದೋ ಸಂಶೋಧನೆಗಳು ಕಾರ್ಯಸಾಧ್ಯವಾಗದೇ ಪುಸ್ತಕ, ಪದವಿಗಳಿಗಷ್ಟೇ ಸೀಮಿತವಾಗುತ್ತಿವೆ. ಇಲ್ಲವೇ ಮೌಲ್ಯಯುತ ಆವಿಷ್ಕಾರಗಳು ರೈತನ ಹೊಲದವರೆಗೆ ಬರುವುದೇ ಇಲ್ಲ.
ಕೃಷಿ ಸಂಶೋಧನೆಗಳ ಫಲ ಸ್ವರೂಪದ ನೀರನ್ನು ರೈತನ ಹೊಲದವರೆಗೆ ಹರಿಸಲು ಸರಕಾರ ಸೂಕ್ತ ಕಾಲುವೆ ತೋಡಿಲ್ಲ. ಅನ್ನದಾತನ ಜಮೀನಿನಲ್ಲಿ ಸಮೃದ್ಧಿಯ ಹೊಳೆ ಹರಿಸುವ ಕಾರ್ಯವನ್ನು ವಿಶ್ವವಿದ್ಯಾಲಯ, ಸರಕಾರ ಒಂದಾಗಿ ಮಾಡಬೇಕು. ಬೇಸಾಯಕ್ಕೆ ಅನುಕೂಲವಾಗುವ ಸಂಶೋಧನೆ, ವಿವಿ ಹಾಗೂ ತಜ್ಞರಿಂದ ಆಗುತ್ತಿದೆ. ಸರಕಾರದ ನೀತಿ ಬರೋಬ್ಬರಿ ಇಲ್ಲದ್ದರಿಂದ ಸಂಶೋಧನೆ ಪ್ರಯೋಜನ ರೈತರಿಗೆ ದೊರಕುತ್ತಿಲ್ಲ. ವಿವಿಗಳು ಸಂಶೋಧನೆ, ತಳಿ ಸುಧಾರಣೆ ಮಾಡಿ ಸರಕಾರಕ್ಕೆ ಮಾಹಿತಿ ಕೊಡುತ್ತವೆ. ಇದನ್ನು ರೈತರಿಗೆ ತಲುಪಿಸುವ ಹೊಣೆ ಕೃಷಿ ಇಲಾಖೆಯದ್ದು. ಇದೇ ಚಾನೆಲ್ ಅಸಡ್ಡೆ ತೋರುತ್ತಿರುವುದರಿಂದ ತೊಂದರೆಯಾಗಿದೆ. ರೈತ, ಕೃಷಿ ವಿವಿ ಮಧ್ಯೆ ಇಲಾಖೆ ಕೊಂಡಿಯಾಗಬೇಕು. ಇಲ್ಲದಿದ್ದರೆ ಸಂಶೋಧನೆಯೆಂಬುದು ಮುಂದೆಯೂ ಹಾಸ್ಯಾಸ್ಪದ ಸಂಗತಿಯಾಗಿಯೇ ಉಳಿಯುತ್ತದೆ. ವಿವಿಯಿಂದ ರೈತ ಶಿಕ್ಷಣ, ತರಬೇತಿ ಕೊಡಿಸುವ ಕೆಲಸವನ್ನು ಕೃಷಿ ಇಲಾಖೆ ಮಾಡಬೇಕು. ಜತೆಗೆ ವಿವಿಯವರೂ ಬಿಗುಮಾನ ಬಿಟ್ಟು ಸರಕಾರದೊಂದಿಗೆ ಹೊಂದಾಣಿಕೆಯಿಂದ ನಡೆದುಕೊಳ್ಳಬೇಕು.
ಇನ್ನು ಕೃಷಿ ನೀತಿಯಂತೂ ಸಬ್ಸಿಡಿ, ಬೆಂಬಲ ಬೆಲೆಯಂಥ ಸೋಗಲಾಡಿತನದಿಂದಲೇ ತುಂಬಿ ಹೋಗುತ್ತಿವೆಯೇ ಹೊರತು ಸಮಸ್ಯೆಗಳಿಗೆ ಶಾಶ್ವತ ಪರಿಹಾರವನ್ನಂತೂ ಒಳಗೊಂಡಿರುವುದಿಲ್ಲ. ಸಾಲಮನ್ನಾ, ಸಬ್ಸಿಡಿಗಳು ಬೆಳಗಾಗುವುದರೊಂದಿಗೆ ರೈತನನ್ನು ಸುಖಿಯಾಗಿಸಿಬಿಡುತ್ತವೆ ಎಂಬುದು ಕೇವಲ ಭ್ರಮೆ. ಇದರಿಂದ ರೈತನನ್ನು ಇನ್ನಷ್ಟು ಸಾಲಕ್ಕೆ ಪ್ರೇರೇಪಿಸುತ್ತದೆ. ಹಾಗೆಂದು ಸಾಲ ಮಾಡದೇ ಕೃಷಿಯನ್ನು ಮುನ್ನಡೆಸುವ ಸ್ಥಿತಿಯಲ್ಲಂತೂ ನಮ್ಮ ರೈತ ಉಳಿದಿಲ್ಲ. ಇಂಥ ಜಿಜ್ಞಾಸೆ ನಮ್ಮ ಬೇಸಾಯಗಾರರನ್ನು ಕೃಷಿಯಿಂದ ಇನ್ನಷ್ಟು ವಿಮುಖರನ್ನಾಗಿಸುತ್ತಿದೆ.
ಕ್ಷೇತ್ರ ಬಹಳ ದೊಡ್ಡದು. ಇದರೊಳಗೆ ಇಣುಕಿದರೆ ವಿಷ್ಣುವಿನ ಜಠರದೊಳಗೆ ಹೊಕ್ಕ ಬ್ರಹ್ಮನಿಗೆ ವಿಶ್ವದರ್ಶನವಾದಂತಾಗುತ್ತದೆ. ಸದ್ಯ ಬಿತ್ತನೆ ಬೀಜ ಹಾಗೂ ರಸಗೊಬ್ಬರಕ್ಕಾಗಿ ರೈತರು ಬೀದಿಗಿಳಿದು ಹೋರಾಡುತ್ತಿರುವುದು ಕಾಣುತ್ತದೆ. ರೈತರ ಆತ್ಮಹತ್ಯೆಯಂತೂ ಮುಗಿಯದ ಗೋಳಾಗಿದೆ. ಬೆಳೆದ ಬೆಳೆಗೆ ಸೂಕ್ತ ಮಾರುಕಟ್ಟೆ, ವೈಜ್ಞಾನಿಕ ಬೆಲೆಯಿಲ್ಲದೇ ಕೃಷಿಕರು ಸಂಕಷ್ಟ ಅನುಭವಿಸತೊಡಗಿ ವರ್ಷಗಳೇ ಗತಿಸಿವೆ. ಸಾಲ ಮನ್ನಾ, ಬಡ್ಡಿ ಮನ್ನಾ ಯೋಜನೆಗಳೂ ಪ್ರವಾಹದಲ್ಲಿ ಕೊಚ್ಚಿ ಹೋಗುತ್ತಿರುವ ಇವರನ್ನು ರಕ್ಷಿಸುತ್ತಿಲ್ಲ.
ಇಂಥ ನಿರ್ಣಾಯಕ ಘಟ್ಟದಲ್ಲಿ ವೈಜ್ಞಾನಿಕ ಬೆಲೆ ದೊರಕಿಸಿ ಕೊಟ್ಟರೆ ಮಾತ್ರ ಕೃಷಿಕರ ಬದುಕು ಸುಧಾರಿಸಲು ಸಾಧ್ಯ. ಇನ್ನು ಕೃಷಿ ಕ್ಷೇತ್ರವನ್ನು ಉದ್ಯಮವಾಗಿ ಪರಿವರ್ತಿಸಬೇಕು. ರೈತರಿಗೆ ಅಗತ್ಯ ಶಿಕ್ಷಣ, ತರಬೇತಿ ಕೊಡಲು ವಿಶ್ವವಿದ್ಯಾಲಯಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು. ಹೋಬಳಿ ಮಟ್ಟದಲ್ಲಿ ಈಗಾಗಲೇ ಇರುವ ರೈತ ಸಂಪರ್ಕ ಕೇಂದ್ರಗಳನ್ನು ಕ್ರಿಯಾಶೀಲಗೊಳಿಸಬೇಕು. ಕರಾವಳಿ, ಮಲೆನಾಡು ಹೊರತುಪಡಿಸಿ ದಕ್ಷಿಣೋತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಮಳೆ ಆಧಾರಿತ ಬೇಸಾಯ ಮಾಡಲಾಗುತ್ತಿದೆ. ಮಳೆ ನೀರು ಹರಿದು ಧರೆ ತಂಪಾದರೆ ಮಾತ್ರ ಇಲ್ಲಿನ ರೈತರಲ್ಲಿ ಆತ್ಮವಿಶ್ವಾಸ ಮೂಡುತ್ತದೆ. 2001 ಕೃಷಿ ಗಣತಿಯಂತೆ 123.07 ಲಕ್ಷ ಹೆಕ್ಟೇರ್ ಭೂಮಿ (ಶೇ. 64.60) ಬೇಸಾಯಕ್ಕೆ ಯೋಗ್ಯವಾಗಿದೆ. ಇದರಲ್ಲಿ ನೀರಾವರಿ ಸೌಲಭ್ಯವಿರುವುದು ಕೇವಲ 27.02 ಲಕ್ಷ ಹೆಕ್ಟೇರ್. ಈ ಕಾರಣದಿಂದ ರಾಜಸ್ಥಾನ ಬಿಟ್ಟರೆ ಅಧಿಕ ಒಣಭೂಮಿ ಹೊಂದಿರುವ ರಾಜ್ಯ ಕರ್ನಾಟಕ ಎಂಬ ಕುಖ್ಯಾತಿಯೂ ನಮ್ಮದಾಗಿದೆ. ಹೀಗಾಗಿ ಮಳೆಕೊಯ್ಲು ಮಾಡಲು ಗಂಭೀರ ಕ್ರಮ ಅಗತ್ಯ.
ಬೆಳೆ ಅವಕಾಶವಿದ್ದಾಗ ಹಾಗೂ ರೇಟು ಸಿಕ್ಕಾಗ ಬೆಳೆಯಬಹುದಾದ ಬೆಳೆಗಳು ಹಲವಿವೆ. ವೆನಿಲ್ಲಾ, ಅಲೋವೇರಾ, ಔಷಧೀಯ ಸಸ್ಯಗಳು ಈ ಸಾಲಿಗೆ ಸೇರುತ್ತವೆ. ಈ ಬಗ್ಗೆ ಪ್ರಾದೇಶಿಕ ಹವಾಗುಣ, ಮಣ್ಣಿನ ಗುಣದ ಆಧಾರದ ಮೇಲೆ ಕೃಷಿ ಇಲಾಖೆ ರೈತರಿಗೆ ಮಾಹಿತಿ ಕೊಡಬೇಕು. ಇಸ್ರೊ ಸಹಕಾರ ಪಡೆಯಬೇಕು. ಉಪಗ್ರಹದ ಸಹಾಯದಿಂದ ಗ್ರಾಮೀಣ ಭಾಗಕ್ಕೆ ಕೃಷಿ ಮಾಹಿತಿ ತಲುಪಿಸಬೇಕು. ಕರಾವಳಿಯ ಮೀನುಗಾರರಿಗೆ ಹವಾಮಾನದ ಮುನ್ಸೂಚನೆ ಕೊಡಲು ಇದು ಬಳಕೆಯಲ್ಲಿದೆ. ಒಣ ಬೇಸಾಯದ ಸುಜಲ ಯೋಜನೆಯಲ್ಲೂ ತಕ್ಕಮಟ್ಟಿಗೆ ಇದರ ಲಾಭ ಪಡೆಯಲಾಗುತ್ತಿದೆ. ರೈತರು, ವಿಜ್ಞಾನಿಗಳೊಂದಿಗೆ ವಿಡಿಯೊ ಕಾನ್ಫರೆನ್ಸ್ ಸೇವೆಗೆ ಇಸ್ರೊ ನೆರವು ಬೇಕಿದೆ. ತಮಿಳುನಾಡಿನಲ್ಲಿ ಸ್ವಾಮಿನಾಥನ್ ಫೌಂಡೇಷನ್ ಈ ಮಾದರಿಯಲ್ಲಿ ರೈತರ ಮಾರ್ಗದರ್ಶಿಯಾಗಿದೆ.
ಒಣ ಭೂಮಿ ಬೇಸಾಯದಲ್ಲಿ ರಸಗೊಬ್ಬರ ಬಳಕೆ ನಿಲ್ಲಿಸದಿದ್ದರೆ ಅಪಾಯವಿರುವುದಾಗಿ ಡಾ. ದ್ವಾರಕಿನಾಥ್ ನೇತೃತ್ವದಲ್ಲಿ ರಚಿಸಲಾಗಿದ್ದ ರಾಜ್ಯ ಕೃಷಿ ಆಯೋಗ, ಏಳೆಂಟು ವರ್ಷದ ಹಿಂದೆಯೇ ಎಚ್ಚರಿಸಿತ್ತು. ರಸಗೊಬ್ಬರದ ಅತಿ ಬಳಕೆಯಿಂದ ಭೂಮಿಯ ಫಲವತ್ತತೆ ಕಡಿಮೆಯಾಗಿದೆ. ನೈಸರ್ಗಿಕ ಹಾಗೂ ಸಾವಯವ ಗೊಬ್ಬರ ಬಳಸಲು ಅರಿವು ಮೂಡಿಸಬೇಕು. ಪಶು ಸಂಪತ್ತು ಉಳಿಸಿಕೊಳ್ಳಬೇಕು ಎಂದಿತ್ತು. ಈ ನಿಟ್ಟಿನಲ್ಲಿ ಕ್ರಮ ಜಾರಿಯಾಗಿಲ್ಲ.
ರೈತರು ಹಿಂದಿನ ಕೃಷಿ ಪದ್ಧತಿಯತ್ತ ಒಲವು ತೋರುತ್ತಿದ್ದಾರೆ. ಸಾವಯವದ ಕೃಷಿ ಆಕರ್ಷಣೆಯೆನಿಸಿದೆ. ಇದಕ್ಕೆ ಸೂಕ್ತ ಜ್ಞಾನ, ಮಾರ್ಗದರ್ಶನ ಅಗತ್ಯ. ಸುಮ್ಮನೆ ಲಾಬಿಗಾಗಿ ಹೀಗೆಲ್ಲ ಕೃಷಿ ಪದ್ಧತಿ ವಿಂಗಡಿಸಿ ಹುಯಿಲೆಬ್ಬಿಸುವ ಬದಲು ನೈಸರ್ಗಿಕ, ಸಾಂಪ್ರದಾಯಿಕ ಕೃಷಿ ಪ್ರೋತ್ಸಾಹಕ್ಕೊಳಗಾಗಬೇಕು. ಕ್ಷೇತ್ರದ ಅನುಭವಿ ಸಂಸ್ಥೆಗಳಿಗೆ ಈ ಹೊಣೆ ವಹಿಸಬೇಕು. ಶಾಲೆಯ ಬಿಸಿಯೂಟ, ವಸತಿನಿಲಯದ ಅಡುಗೆಗೆ ರೈತರ ತರಕಾರಿ ನೇರ ಬಳಕೆ ಕಡ್ಡಾಯಗೊಳಿಸಬೇಕು.
ಮುಂಗಾರು ಬಂತೆಂದರೆ ರಸಗೊಬ್ಬರ ಹೊಯ್ದಾಟದ ಸುದ್ದಿ ಯಾವತ್ತೂ ಮಾಧ್ಯಮದ ಮುಖಪುಟದಲ್ಲಿ ರಾರಾಜಿಸುತ್ತದೆ. ನಿಜವಾಗಿ ಸಮಸ್ಯೆ ಪರಿಹಾರವಾಗಬೇಕೆಂದರೆ ಕೇಂದ್ರದ ಸೂಚನೆಯಂತೆ ರಸಗೊಬ್ಬರ ಪೂರೈಕೆ ಹೊಣೆಯನ್ನು ರಾಜ್ಯವೇ ಹೊರಬೇಕು. ರಸಗೊಬ್ಬರ ಕಂಪನಿಗಳೊಂದಿಗೆ ರಾಜ್ಯ ಸರಕಾರ ನೇರವಾಗಿ ವ್ಯವಹರಿಸಬೇಕು. ಸಹಕಾರ ಮಾರುಕಟ್ಟೆ ಮಹಾ ಮಂಡಳ ಈ ಪ್ರಕ್ರಿಯೆಯಲ್ಲಿ ಭಾಗಿಯಾಗ ಬೇಕು. ಮುಂಗಾರಿಗೆ 3 ತಿಂಗಳು ಮುನ್ನ ಹಣ ಕೊಟ್ಟರೆ ಬಿತ್ತನೆ ಸಮಯಕ್ಕೆ ಕಂಪನಿಗಳಿಂದ ಗೊಬ್ಬರ ಪೂರೈಕೆಯಾಗುವುದಾಗಿ ತಜ್ಞರು ಹೇಳುತ್ತಾರೆ.
ರೈತರ ಆತ್ಮಹತ್ಯೆ ನಿಲ್ಲಿಸುವ ಶಕ್ತಿ ಮಾರುಕಟ್ಟೆಗೆ ಮಾತ್ರ ಇದೆ. ಈಗಿರುವ ಮಾರಾಟ ವ್ಯವಸ್ಥೆ ಬದಲಾಗಬೇಕು. ಯೋಜನೆಗಳು ಎಲ್ಲ ವರ್ಗದ ರೈತರಿಗೂ ದೊರಕಬೇಕು. ಎಲ್ಲಕ್ಕಿಂತ ಮಿಗಿಲಾಗಿ ಕೃಷಿಕನಿಗೆ ಆತ್ಮಸ್ಥೈರ್ಯ ತುಂಬಬೇಕು. ಕೃಷಿ ವಲಯದ ಬಲವರ್ಧನೆಗೆ ಸಮಗ್ರ ನೀತಿ ಅಗತ್ಯ.
ತೋಟಗಾರಿಕೆ ಕೃಷಿಯಲ್ಲಿ ರಾಜ್ಯದ ಕೊಡುಗೆ ಉತ್ತಮವಾಗಿದೆ. ಹೀಗಾಗಿ ರಾಷ್ಟ್ರೀಯ ತೋಟಗಾರಿಕಾ ಮಿಷನ್‌ನ ಪೂರ್ಣ ಪ್ರಯೋಜನ ಪಡೆದುಕೊಳ್ಳಬೇಕು. ರಾಷ್ಟ್ರದ ಪುಷ್ಪೋದ್ಯಮದಲ್ಲಿ ನಮ್ಮ ಪಾಲು ಶೇ.75 ರಷ್ಟಿದೆ. ಈ ಮಟ್ಟ ಕಾಯ್ದು ಕೊಳ್ಳುವುದರ ಜತೆಗೆ ಪುಷ್ಪ ಕೃಷಿಯ ಮಾರಾಟ ಜಾಲ ವಿಸ್ತರಿಸಬೇಕಿದೆ. ರೇಷ್ಮೆ ಕೃಷಿಗಂತೂ ಪೂರ್ಣ ಕಾಯಕಲ್ಪ ಕೊಡಬೇಕಿದೆ.
ಇನ್ನು ಜೌಗು ಸಮಸ್ಯೆ, ಕಾಡಾನೆ ಹಾವಳಿ, ಒಣಭೂಮಿಯ ಸಂಕಟ, ಅರಣ್ಯ ಒತ್ತುವರಿ, ಮಧ್ಯವರ್ತಿಗಳ ಕಾಟ, ಖಾಸಗಿ ಕಾರ್ಖಾನೆಗಳ ರೈತ ವಿರೋಧಿ ನೀತಿ ಹಾಗೂ ಸರಕಾರಿ ಸ್ವಾಮ್ಯದ ಕಾರ್ಖಾನೆಗಳ ಅಸಡ್ಡೆ, ಬಹುರಾಷ್ಟ್ರೀಯರ ವಂಚನೆ... ಹೀಗೆ ಕೃಷಿಯನ್ನು ಕಾಡುತ್ತಿರುವ ಸಮಸ್ಯೆಗಳಿಗೆ ಮಿತಿಯೇ ಇಲ್ಲದಂತಾಗಿದೆ. ಒಟ್ಟಾರೆ ರಾಜ್ಯದಲ್ಲಿ ರೈತರು ಹಾಗೂ ಕೃಷಿ ಕಾರ್ಮಿಕರ ಸಂಖ್ಯೆ ಶೇ. 79ರಷ್ಟಿದೆ. ಈ ಸಮುದಾಯವನ್ನು ಒಂದು ದೋಣಿಯಲ್ಲಿ ಕುಳ್ಳಿರಿಸಿಕೊಂಡು ಹೊಳೆ ದಾಟಿಸುವ ಕೆಲಸವನ್ನು ಇನ್ನಾದರೂ ಸರಕಾರ ಮಾಡಬೇಕಿದೆ. ಇದಕ್ಕೆ ಯಾವೆಲ್ಲ ತಂತ್ರಜ್ಞಾನದ ನೆರವು ಬೇಕೋ ಅದನ್ನು ಅವಶ್ಯಕವಾಗಿ ಪಡೆದುಕೊಳ್ಳಬೇಕು. ಕೃಷಿ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆ ತರುವುದಕ್ಕಾಗಿ ವಾಸ್ತವ ಸ್ಥಿತಿಯ 'ವಿಶ್ವ ದರ್ಶನ' ಪಡೆಯಲು ಸಮಗ್ರ ಸಮೀಕ್ಷೆ ಕೈಗೊಳ್ಳಬೇಕು. ಇದಕ್ಕಾಗಿ ಸರಕಾರದ ಪ್ರತಿನಿಧಿ, ಕೃಷಿ ವಲಯವೆಂಬ ಬೃಹತ್ ಉದರ ಪ್ರವೇಶ ಮಾಡಲಿ.
- ರಾಧಾಕೃಷ್ಣ ಎಸ್. ಭಡ್ತಿ
abhyagatha@yahoo.co.in
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

