ಅಂಕಣಗಳು

ಶರ್ಮಿಳಾ ಯಾರಿಗೂ ನೆನಪಾಗಲೇ ಇಲ್ಲ...

Published On :

ವಿಶ್ವ ಮಹಿಳಾ ದಿನಾಚರಣೆ ಎಂಬುದು, ಹೀಗೆ ಬಂದು ಹಾಗೆ ಹೋಗಿಬಿಟ್ಟ ಸಂದರ್ಭದಲ್ಲಿಯೇ ಬಿಟ್ಟೂ ಬಿಡದಂತೆ ನೆನಪಾದವಳು ಇರೋಮ್ ಚಾಮಿ ಶರ್ಮಿಳಾ. ಈಕೆ, ಸರ್ಕಾರದ ಒಂದು ಆದೇಶವನ್ನು ಪ್ರಶ್ನಿಸಿದ್ದಾಳೆ. ಅದನ್ನು ಹಿಂದೆ ಪಡೆಯುವಂತೆ, ಸರ್ಕಾರದ ಆದೇಶವನ್ನೇ ನೆಪ ಮಾಡಿಕೊಂಡು ಅಮಾಯಕರ ಮಾನ ಹಾಗೂ ಪ್ರಾಣವನ್ನು ಬಲಿ ತೆಗೆದುಕೊಂಡವರ ವಿರುದ್ಧ ಹೋರಾಟ ಆರಂಭಿಸಿದ್ದಾಳೆ. ನ್ಯಾಯಕ್ಕಾಗಿ ಆಗ್ರಹಿಸಿ, ಕಳೆದ 12 ವರ್ಷಗಳಿಂದಲೂ ಉಪವಾಸ ಕೂತಿದ್ದಾಳೆ. ವಿಪರ್ಯಾಸವೆಂದರೆ, ಮೊನ್ನೆ ಮಹಿಳಾ ದಿನಾಚರಣೆಯ ನೆಪದಲ್ಲಿ ತುಂಬ ಲಕ್ಷಣವಾಗಿ ಕ್ಯಾಮರಾಗೆ ಫೋಸ್ ಕೊಟ್ಟ ವಿಐಪಿ ಮಹಿಳೆಯರಿಗೆ, ಒಂದು ಕ್ಷಣದ ಮಟ್ಟಿಗೂ ಈ ಶರ್ಮಿಳಾ ನೆನಪಾಗಲಿಲ್ಲ!
ಈಕೆ ಮಣಿಪುರದ ಹೆಣ್ಣುಮಗಳು. ಎಲ್ಲರಿಗೂ ಗೊತ್ತಿರುವಂತೆ, ಕಾಶ್ಮೀರ, ಮಣಿಪುರ ಮುಂತಾದ ಕಡೆಗಳಲ್ಲಿ ಸರ್ಕಾರವು ಸೇನಾ ಪಡೆಗಳಿಗೆ ವಿಶೇಷ ಅಧಿಕಾರವನ್ನು ನೀಡಿದೆ. ಇವು ದೇಶದ ಗಡಿಭಾಗದಲ್ಲಿರುವುದರಿಂದ ಉಗ್ರರು ಮತ್ತು ವಿದೇಶೀಯರು ಅಕ್ರಮವಾಗಿ ಒಳನುಗ್ಗದಂತೆ ತಡೆಯುವುದು ಹಾಗೂ ಉಗ್ರಗಾಮಿ ಚಟುವಟಿಕೆಗಳನ್ನು ಹತ್ತಿಕ್ಕುವುದು ಸೇನಾಪಡೆಗಳಿಗೆ ವಹಿಸಲಾಗಿರುವ ಕೆಲಸ. 10 ವರ್ಷದ ಹಿಂದೆ ಏನಾಯಿತೆಂದರೆ, ಅಸ್ಸಾಂ ರೈಫಲ್ಸ್‌ನ ಯೋಧರು ತಮಗೆ ನೀಡಲಾಗಿದ್ದ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡರು. ಮಣಿಪುರದ ನೂರಾರು ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ಮಾಡಿದರು. 2002ರ ನವೆಂಬರ್ 3 ರಂದು 10 ಮಂದಿ ಅಮಾಯಕರನ್ನು ಗುಂಡಿಟ್ಟು ಕೊಂದರು. ಘಟನೆ ನಡೆದು ತಿಂಗಳು ಕಳೆದರೂ ಯಾರನ್ನೂ ಬಂಧಿಸಲಿಲ್ಲ. ಸತ್ತವರಿಗೆ ಸಂತಾಪವನ್ನೂ ಸೂಚಿಸಲಿಲ್ಲ. ಆ ಸಂದರ್ಭದಲ್ಲಿ ಕುರುಡು ವ್ಯವಸ್ಥೆಯ ವಿರುದ್ಧದ ಧಿಕ್ಕಾರದ ದನಿಯಾಗಿ ಎದ್ದು ನಿಂತಾಕೆ ಅದೇ ಮಣಿಪುರದ ಪುಟ್ಟ ಹಳ್ಳಿಯಿಂದ ಬಂದ ಇರೋಮ್ ಚಾಮಿ ಶರ್ಮಿಳಾ. ಸೇನೆಗೆ ನೀಡಿರುವ ವಿಶೇಷಾಧಿಕಾರವನ್ನು ಹಿಂತೆಗೆದುಕೊಳ್ಳಿ. ಅಮಾಯಕರ ಮಾನ ಹಾಗೂ ಪ್ರಾಣಹಾನಿಯನ್ನು ನಿಲ್ಲಿಸಿ ಎಂದು ಒತ್ತಾಯಿಸಿ ಆಕೆ ಉಪವಾಸ ಕೂತಳು. ಪತ್ರಿಕಾಗೋಷ್ಠಿ ನಡೆಸಿದಳು. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಗೃಹ ಸಚಿವರಿಗೆ ಪತ್ರ ಬರೆದು ನ್ಯಾಯ ಕೊಡಿಸಿ ಎಂದು ಬೇಡಿಕೊಂಡಳು.
ಪರಿಣಾಮ ಏನಾಯಿತು ಗೊತ್ತೆ? ಪೊಲೀಸರು ಬಂದು ಉಪವಾಸ ಕೂತವಳನ್ನೇ ಎತ್ಹಾಕಿಕೊಂಡು ಹೋಗಿ ಬಿಟ್ಟರು. ಆಸ್ಪತ್ರೆಗೆ ದಾಖಲಿಸಿದರು. ಆಕೆ ಊಟ ತಿನ್ನಲು ನಿರಾಕರಿಸಿದಾಗ ಬಲವಂತದಿಂದಲೇ ಮೂಗಿನ ಭಾಗಕ್ಕೆ ಪೈಪ್ ಜೋಡಿಸಿ ದ್ರವರೂಪದ ಆಹಾರ ಕೊಡಲು ಶುರು ಮಾಡಿದರು. ಕಳೆದ 12 ವರ್ಷಗಳಿಂದಲೂ ಶರ್ಮಿಳಾ ವೈದ್ಯರ ಮಧ್ಯೆಯೇ, ದ್ರವರೂಪದ ಆಹಾರದ ಸೇವನೆಯಿಂದಲೇ ಬದುಕಿದ್ದಾಳೆ. ಅಧಿಕಾರದ ದುರ್ಬಳಕೆ ಹಾಗೂ ಅಮಾಯಕರ ಮೇಲಿನ ದೌರ್ಜನ್ಯ ನಿಲ್ಲಲಿ ಎಂಬುದಷ್ಟೇ ಈಕೆಯ ಬೇಡಿಕೆ. ನಮ್ಮನ್ನು ಆಳುವ ಜನರಿಗೆ ಅದೆಂಥ ದಪ್ಪ ಚರ್ಮವಿದೆ ಅಂದರೆ, ಅವರ್ಯಾರೂ ಈ ಹುಡುಗಿಯ ಮಾತುಗಳನ್ನು 'ಕೇಳಿಸಿಕೊಳ್ಳುವ', ಅವಳ ಬೇಡಿಕೆಯನ್ನು 'ಪರಿಶೀಲಿಸುವ' ಪ್ರಯತ್ನ ಮಾಡಲಿಲ್ಲ. ಬದಲಿಗೆ, ದೆಹಲಿಯ ಜಂತರ್‌ಮಂಥರ್‌ನಲ್ಲಿ ಉಪವಾಸ ಕೂತವಳ ಮೇಲೆ ಆತ್ಮಹತ್ಯೆಗೆ ಯತ್ನಿಸಿದ ಆರೋಪ ಹೊರಿಸಿ ನ್ಯಾಯಾಲಯಕ್ಕೆ ಕಳಿಸಿ ಬಿಟ್ಟರು. ಕೋರ್ಟ್‌ನ ಕಟಕಟೆಯಲ್ಲಿ ನಿಂತವಳನ್ನು, ಆತ್ಮಹತ್ಯೆಗೆ ಯತ್ನಿಸಿದ ಆರೋಪ ನಿನ್ನ ಮೇಲಿದೆ. ಏನು ಹೇಳ್ತೀಯ ಎಂದು ಪ್ರಶ್ನಿಸಿದಾಗ- 'ಸ್ವಾಮೀ, ಜೀವಗಳನ್ನು ಉಳಿಸಬೇಕೆಂದು ಹೋರಾಟಕ್ಕೆ ನಿಂತವಳು ನಾನು. ಹಾಗಿರುವಾಗ ಜೀವ ಕಳೆದುಕೊಳ್ಳುವಂಥ ಕೆಲಸಕ್ಕೆ ಹೇಗೆ ಮುಂದಾಗಲಿ?' ಎಂದು ಪ್ರಶ್ನಿಸಿದ್ದಾಳೆ ಶರ್ಮಿಳಾ. ಕೇಂದ್ರ ಗೃಹ ಸಚಿವರು ಹಾಗೂ ಮಣಿಪುರದ ಸಿಎಂ ಈಕೆಯನ್ನು ಭೇಟಿ ಮಾಡಿದ್ದಾರೆ ನಿಜ. ಆದರೆ, ಆಕೆಯ ಬೇಡಿಕೆಗಳಿಗೆ ಮಣಿಯುವ ಮನಸ್ಸು ಮಾಡಿಲ್ಲ. ಇತ್ತ ಈ ಹುಡುಗಿ ಕೂಡಾ ಪಟ್ಟು ಸಡಿಲಿಸಲಿಲ್ಲ. ಉಪವಾಸ ಆರಂಭಿಸಿದಾಗ 28 ವರ್ಷದವಳಿದ್ದ ಶರ್ಮಿಳಾಗೆ ಈಗ 40 ವರ್ಷ. ವಯಸ್ಸು ಆಕೆಗೆ ತಾಳ್ಮೆ, ಸಂಯಮ ತಂದುಕೊಟ್ಟಿದೆ.
ಈ ದಿಟ್ಟೆಯ ಹಠ ಮತ್ತು ಛಲದ ಬಗ್ಗೆ ಆಗಿಂದ್ದಾಗ್ಗೆ ಸುದ್ದಿ ಪ್ರಕಟವಾಗುವುದನ್ನು ಗೋವಾ ಮೂಲದ ಡೆಸ್ಮಂಡ್ ಎಂಬಾತ ಗಮನಿಸಿದ್ದಾನೆ. ಆಕೆಯ ವಿಷಯವಾಗಿ ಪ್ರೀತಿ, ಅನುಕಂಪ ಬೆಳೆಸಿಕೊಂಡಿದ್ದಾನೆ. ಅದು ಹೇಗೋ ವಿಳಾಸ ಸಂಪಾದಿಸಿ, 2011ರಲ್ಲಿ ಶರ್ಮಿಳಾಗೆ ಮೇಲಿಂದ ಮೇಲೆ ಪತ್ರ ಬರೆದಿದ್ದಾನೆ. ಕಡೆಗೊಮ್ಮೆ-'ನಿನ್ನ ಪ್ರತಿಯೊಂದು ಹೋರಾಟದಲ್ಲೂ ನೆರಳಾಗಿ ನಾನಿರ್ತೇನೆ. ನಿನ್ನನ್ನು ಪ್ರೀತಿಸ್ತಾ ಇದೀನಿ. ದಯವಿಟ್ಟು ಒಪ್ಪಿಕೋ' ಎಂದಿದ್ದಾನೆ. 11 ವರ್ಷದ ಏಕಾಂತ ವಾಸದಿಂದ ಶರ್ಮಿಳಾ ಅದೆಷ್ಟು ಕಂಗೆಟ್ಟಿದ್ದಳು ಅಂದರೆ, ಡೆಸ್ಮಂಡ್‌ನ ಪ್ರೀತಿಯನ್ನು ತಕ್ಷಣವೇ ಒಪ್ಪಿಕೊಂಡಿದ್ದಾಳೆ. ಹಿಡಿದಿರುವ ಕೆಲಸದಲ್ಲಿ ಯಶಸ್ಸು ಕಂಡ ನಂತರವೇ ಸ್ವಂತದ ಬದುಕು, ಪ್ರೀತಿಯ ಮಾತು,. ಮದುವೆಯ ಕನಸು ಇತ್ಯಾದಿ. ಅಲ್ಲಿಯವರೆಗೂ ನನ್ನ ಜೊತೆಗಿರು ಗೆಳೆಯಾ ಎಂದು ಪ್ರಾರ್ಥಿಸಿದ್ದಾಳೆ. ಈ ಗೋವಾದ ಹುಡುಗ, ತನ್ನದು ಎನ್ನುವ ಎಲ್ಲವನ್ನೂ ಮರೆತು ಶರ್ಮಿಳಾಳ ಒಳಿತಿಗಾಗಿ ಪ್ರಾರ್ಥಿಸುತ್ತಿದ್ದಾನೆ.
ಸಂದರ್ಭ ಹೀಗಿರುವಾಗಲೇ - ಉಪವಾಸವಿದ್ದು ಆತ್ಮಹತ್ಯೆಗೆ ಪ್ರಯತ್ನಿಸಿದಳು ಎಂಬ ಆರೋಪವನ್ನು ಶರ್ಮಿಳಾ ಮೇಲೆ ಹೊರಿಸಲಾಗಿದೆ. ಶಾಂತಿಗೆ ಭಂಗ ತಂದಳು ಎಂಬ ನೆಪದಲ್ಲಿ ಇಂಪಾಲದ ಜವಾಹರಲಾಲ್ ನೆಹರೂ ಆಸ್ಪತ್ರೆಯಲ್ಲಿ ಆಕೆಯನ್ನು ಒಂದರ್ಥದಲ್ಲಿ ಕೂಡಿ ಹಾಕಲಾಗಿದೆ. ದಿನಕ್ಕೊಂದು ವಿಚಾರಣೆಯ ನೆಪದಲ್ಲಿ ಆಕೆಯನ್ನು ಮಾನಸಿಕವಾಗಿ ಹಿಂಸಿಸಲಾಗುತ್ತಿದೆ. ಹೀಗಿದ್ದರೂ ಶರ್ಮಿಳಾ ಎದೆಗುಂದಿಲ್ಲ. ಪ್ರಭುತ್ವ ಎಚ್ಚೆತ್ತುಕೊಳ್ಳುವವರೆಗೂ ನಾನು ಸಾಯುವುದಿಲ್ಲ, ನನ್ನ ಚೈತನ್ಯ ಬತ್ತುವುದಿಲ್ಲ ಎಂದಿದ್ದಾಳೆ.
ಎಲ್ಲರ ಮನೆಯ ಮಗಳಂತೆ, ಸೋದರಿಯಂತೆ, ಪ್ರತಿಭಟನೆಯ ಕಿಡಿಯಂತೆ, ಇಡೀ ದೇಶದ ಯುವ ಜನಾಂಗದ ಮನಸ್ಸಾಕ್ಷಿಯಂತೆ ಇರುವ, 12 ವರ್ಷಗಳಿಂದಲೂ ಉಪವಾಸ ಕೂತು ಅಮಾಯಕರ ಪರವಾಗಿ ಹೋರಾಡುತ್ತಿರುವ ದಿಟ್ಟೆ ಶರ್ಮಿಳಾ. ಆಕೆಯ ಪರವಾಗಿ ಎಲ್ಲರೂ ದನಿ ಎತ್ತಿದ್ದರೆ ಮಹಿಳಾ ದಿನಾಚರಣೆಗೆ ಖಂಡಿತವಾಗಿಯೂ ವಿಶೇಷ ಅರ್ಥ ಬರುತ್ತಿತ್ತು. ವಿಪರ್ಯಾಸವೆಂದರೆ, ಮೊನ್ನೆ ಯಾರಿಗೂ ಇರೋಮ್ ಚಾನು ಶರ್ಮಿಳಾ ನೆನಪಾಗಲೇ ಇಲ್ಲ...

- ನಾನು ಪ್ರಣತಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.