ಬೆಳಕು, ಬೆರಗಿನ ಸೂಕ್ತಿಗಳು...
ಖಾಲಿ ಜೇಬಿನೊಂದಿಗೆ ನಡೆಯುತ್ತಾ ಹೋದರೆ, ಎದುರಾಗುವ ಒಂದೊಂದು ತಿರುವೂ...
ಖಾಲಿ ಜೇಬಿನೊಂದಿಗೆ ನಡೆಯುತ್ತಾ ಹೋದರೆ, ಎದುರಾಗುವ ಒಂದೊಂದು ತಿರುವೂ ಒಂದೊಂದು ಪಾಠ ಹೇಳಿಕೊಡುತ್ತದೆ. ಜೇಬು ತುಂಬಿಸಿಕೊಂಡು ಹೊರಟವರಿಗೆ ಎದುರಾಗುವ ಪ್ರತಿ ತಿರುವೂ ದಾರಿ ತಪ್ಪಿಸುತ್ತದೆ.
ಮೂರು ಅಥವಾ ನಾಲ್ಕು ವಾಕ್ಯಗಳಲ್ಲಿ ಮುಗಿದು ಹೋಗುವ ಸೂಕ್ತಿಗಳಿವು. ಒಂದರ್ಥದಲ್ಲಿ ಇವುಗಳನ್ನು ಮಾಡರ್ನ್ ಸುಭಾಷಿತಗಳು ಎನ್ನಬಹುದೇನೋ. ಇವೆಲ್ಲಾ ಫಾರ್ವರ್ಡ್ ಮೇಲ್‌ನ ರೂಪದಲ್ಲಿ ಬಂದಿರುವುದರಿಂದ ಇವುಗಳ ಮೂಲ ಲೇಖಕರು ಯಾರೆಂದು ಗೊತ್ತಿಲ್ಲ. ಸ್ವಾರಸ್ಯವೇನೆಂದರೆ, ಈ ಸೂಕ್ತಿಗಳಲ್ಲಿ ಬೆರಗಿದೆ, ಬೆಳಕಿದೆ. ಬುದ್ಧಿವಾದವಿದೆ. ಜೀವನ ದರ್ಶನವಿದೆ. ಮನುಷ್ಯ ಹೇಗೆ ಬದುಕಬೇಕು? ಯಾವ ಸಂದರ್ಭದಲ್ಲಿ ಹೇಗಿರಬೇಕು ಎಂಬುದರ ವಿಚಾರಣೆಯೂ ಇದೆ. ನಿಮಗಿಷ್ಟವಾಗಬಹುದು, ಓದಿಕೊಳ್ಳಿ...
- ಯಾರು ಎಷ್ಟೇ ಆಪ್ತರಾಗಿದ್ದರೂ ಸರಿ, ಅವರೊಂದಿಗೆ ಬದುಕಿನ ಎಲ್ಲಾ ರಹಸ್ಯಗಳನ್ನು ಹೇಳಿಕೊಳ್ಳಬೇಡಿ. ಕಾಲ ಒಂದೇ ರೀತಿ ಇರುವುದಿಲ್ಲ. ಇವತ್ತು ಪರಮಾಪ್ತರಾಗಿದ್ದವರೇ ಐದಾರು ವರ್ಷಗಳ ನಂತರ ವಿರೋಧಿಯಾಗಬಹುದು. ಅಂಥ ಸಂದರ್ಭದಲ್ಲಿ ಹಿಂದೊಮ್ಮೆ ಅವರಿಗೆ ಹೇಳಿಕೊಂಡ ರಹಸ್ಯಗಳೇ ಈಗ ನಿಮ್ಮ ಮರ್ಯಾದೆ ಕಳೆಯಬಹುದು.
- ಸಮಸ್ಯೆಗಳು ಎದುರಾದಾಗ ಅದನ್ನು ಎಲ್ಲರ ಬಳಿಯೂ ಹೇಳಬೇಡಿ. ಕಾರಣ, ನಿಮ್ಮ ಸಮಸ್ಯೆಯ ಬಗ್ಗೆ ಗೊತ್ತಾದಾಗ- ಶೇಕಡಾ 20ರಷ್ಟು ಮಂದಿ ಆ ಬಗ್ಗೆ ತಲೆ ಕೆಡಿಸಿಕೊಳ್ಳದೆ ಇದ್ದು ಬಿಡುತ್ತಾರೆ. ಶೇಕಡಾ 70ರಷ್ಟು ಮಂದಿ ನಿಮಗೆ ಒದಗಿದ ಕಷ್ಟ ಕಂಡು ಒಳಗೊಳಗೇ ಖುಷಿ ಪಡುತ್ತಾರೆ! ಅಯ್ಯೋ ಪಾಪ ಎಂದು ಕನಿಕರಿಸಿ ನೆರವಿಗೆ ಬರುವವರ ಸಂಖ್ಯೆ ಶೇ. 10ಕ್ಕಿಂತ ಕಮ್ಮಿ ಇರುತ್ತದೆ.
-ಯಾವುದೇ ಒಂದು ವಸ್ತು ತುಂಬ ಮಹತ್ವದ್ದು ಅನ್ನಿಸುವುದು ಎರಡು ಸಂದರ್ಭಗಳಲ್ಲಿ.
1. ಅದನ್ನು ಪಡೆದುಕೊಳ್ಳುವ ಮುಂಚೆ.
2. ಅದನ್ನು ಕಳೆದುಕೊಂಡ ನಂತರ!
-ಯಾವಾಗಲೂ ಒಳ್ಳೆಯದನ್ನೇ ಪ್ರಾರ್ಥಿಸಿ. ಒಳ್ಳೆಯದನ್ನೇ ಧ್ಯಾನಿಸಿ. ಎಲ್ಲರಿಗೂ ಒಳಿತನ್ನೇ ಬಯಸಿ. ಎದೆಯ ಅಂಗಳದಲ್ಲಿ ಹಚ್ಚ ಹಸಿರಿನ ತೋಟವನ್ನೇ ಸದಾ ಇಟ್ಟುಕೊಳ್ಳಿ. ಇಷ್ಟಿದ್ದರೆ ಸಾಕು: ಹಾಡುವ ಕೋಗಿಲೆಗಳು ತಾವಾಗಿಯೇ ಹಾರಿ ಬರುತ್ತವೆ.
- ಸಮಸ್ಯೆಗಳು ಬಂದಿರುವುದು ನಮಗಲ್ಲ ಎನ್ನುವ ಸಂದರ್ಭದಲ್ಲಿ ಮಾತ್ರ ಎಂಥ ಸಮಸ್ಯೆಗೂ ಪರಿಹಾರ ಸೂಚಿಸುವ ಉತ್ಸಾಹ ನಮಗಿರುತ್ತದೆ.
- ಖಾಲಿ ಜೇಬಿನೊಂದಿಗೆ ನಡೆಯುತ್ತಾ ಹೋದರೆ, ಎದುರಾಗುವ ಒಂದೊಂದು ತಿರುವೂ ಒಂದೊಂದು ಪಾಠ ಹೇಳಿಕೊಡುತ್ತದೆ. ಜೇಬು ತುಂಬಿಸಿಕೊಂಡು ಹೊರಟವರಿಗೆ ಎದುರಾಗುವ ಪ್ರತಿ ತಿರುವೂ ದಾರಿ ತಪ್ಪಿಸುತ್ತದೆ.
- ಸತ್ಯ ಹೇಳಲು ಯಾರೂ ಹೆದರುವುದಿಲ್ಲ ನಿಜ. ಆದರೆ ಸತ್ಯ ಹೇಳಿದ ನಂತರ ಉಂಟಾಗುವ ಪರಿಣಾಮಗಳನ್ನು ಎದುರಿಸಲು ಖಂಡಿತ ಹೆದರುತ್ತಾರೆ.
- ಸಂತೋಷ ಅಥವಾ ನೆಮ್ಮದಿ ಎಂಬುದು ಎಲ್ಲಿ ಸಿಗಬಹುದು ಎಂದು ಹುಡುಕಲು ಹೊರಡ್ತೀವಲ್ಲ, ಆ ಕ್ಷಣದಿಂದಲೇ ನಮ್ಮ ಬದುಕಲ್ಲಿ ಟೆನ್ಶನ್ ಎಂಬ ಮಾಯೆ ಪ್ರವೇಶಿಸಿ ಬಿಡುತ್ತೆ.
- ನಮ್ಮ ಆಸೆ, ನಿರೀಕ್ಷೆ ಮತ್ತು ಕನಸುಗಳನ್ನು ತಲೆಗೂದಲು ಹಾಗೂ ಉಗುರಿಗೆ ಹೋಲಿಸಬಹುದೇನೋ. ಎಷ್ಟೋ ಬಾರಿ ಕತ್ತರಿಸಿದರೂ ಸರಿ; ಅವು ಬೆಳೆಯುತ್ತಲೇ ಇರುತ್ತವೆ.
- ಕೆಲವೊಂದು ಸಂದರ್ಭದಲ್ಲಿ ನಮ್ಮ ದುಃಖದ ಕ್ಷಣಗಳನ್ನು ನೆನಪಿಸಿಕೊಂಡು ನಗುತ್ತೇವೆ. ಮತ್ತೆ, ಕೆಲವೊಮ್ಮೆ ನಮ್ಮ ಬದುಕಲ್ಲಿ ಸುಖವಾಗಿದ್ದ ಸಂದರ್ಭ ನೆನಪಿಸಿಕೊಂಡು ಬಿಕ್ಕಿ ಬಿಕ್ಕಿ ಅಳುತ್ತೇವೆ.
ಇದೇ ಜೀವ- ಇದೇ ಜೀವನ.
ಏನೇನ್ ಬ್ಯಾನ್ ಸರ್?
'ಸಾರ್ಕ್ ರಾಷ್ಟ್ರಗಳು ಭವಿಷ್ಯದಲ್ಲಿ ಏನೇನನ್ನು ನಿಷೇಧಿಸಬಹುದು?' ಎಂಬ ಬಗ್ಗೆ ಓದುಗ ಮಿತ್ರ ಎಚ್. ಆನಂದರಾಮ ಶಾಸ್ತ್ರಿ ಕೆಲವು ಸ್ಯಾಂಪಲ್‌ಗಳನ್ನು ಕಳುಹಿಸಿಕೊಟ್ಟಿದ್ದಾರೆ:
'ರಷ್ಯನ್ ಆರ್ತೋಡಾಕ್ಸ್ ಚರ್ಚ್‌ನ ಅನುಯಾಯಿಯಾಗಲೊಪ್ಪದ ಯಾವುದೇ ಧಾರ್ಮಿಕ ಸಂಘಟನೆಯಿರಲಿ ಅದನ್ನು ರಷ್ಯಾದಲ್ಲಿ ನಿಷೇಧಿಸಲಾಗುತ್ತದೆ. ಅಮೆರಿಕದ ಓಕ್ಲಹೋಮಾ ರಾಜ್ಯದಲ್ಲಿ ನಾಯಿಯನ್ನು ಕೆಟ್ಟದಾಗಿ ದಿಟ್ಟಿಸಿ ನೋಡುವುದನ್ನು ಮತ್ತು ನಾಯಿಯತ್ತ ನೋಡುತ್ತ ಮುಖ ಕಿವುಚುವುದನ್ನು ಉಗ್ರಗಾಮಿತ್ವ ವಿರೋಧಿ ಕಾನೂನಿಡಿ ನಿಷೇಧಿಸಲಾಗಿದೆ. ಚೀನಾದಲ್ಲಿ ಕಾಲಯಾನ (ಟೈಮ್ ಟ್ರಾವೆಲ್) ಕುರಿತ ಚಲನಚಿತ್ರಗಳನ್ನು ಮತ್ತು ಟಿ.ವಿ. ಕಾರ್ಯಕ್ರಮಗಳನ್ನು ನಿಷೇಧಿಸಲಾಗಿದೆ. ಉತ್ತರ ಕೊರಿಯಾದಲ್ಲಿ ಸ್ವದೇಶಿಯರು ಮೊಬೈಲ್ ಫೋನ್ ಬಳಸುವಂತಿಲ್ಲ. ಬಳಸಿದಲ್ಲಿ ಅವರನ್ನು ಯುದ್ಧಾಪರಾಧಿಗಳೆಂದು ಪರಿಗಣಿಸಲಾಗುತ್ತದೆ. ಹಾಗೆಯೇ ಸಾರ್ಕ್ ರಾಷ್ಟ್ರಗಳು ಭವಿಷ್ಯದಲ್ಲಿ ಏನೇನನ್ನು ನಿಷೇಧಿಸಬಹುದೆಂಬ ಬಗ್ಗೆ ನನ್ನ ಕಲ್ಪನೆ ಹೀಗಿದೆ-
ಭಾರತ: ಬೈಸಿಕಲ್ ಮತ್ತು ಟಿಫನ್ ಕ್ಯಾರಿಯರ್ ನಿಷೇಧ. ಬಾಂಬ್‌ಗಳನ್ನು ಹೆಚ್ಚಾಗಿ ಇವುಗಳಲ್ಲಿ ತಾನೇ ಇಡೋದು?
ಪಾಕಿಸ್ತಾನ: ಉಗ್ರಗಾಮಿಗಳು ಬಾಲಿವುಡ್‌ಚಲನಚಿತ್ರಗಳನ್ನು ನೋಡದಂತೆ ನಿಷೇಧ. ಬಾಲಿವುಡ್ ಚಿತ್ರಗಳನ್ನು ನೋಡಿದ ಅವರು ಮುಂಬೈಗೆ ಬಾಂಬ್ ಹಾಕಲು ಬಂದಾಗ ಬಂದ ಕೆಲಸ ಮರೆತು ಬಾಲಿವುಡ್ ತಾರೆಯರ ನ್ನರಸಿ ಚಿತ್ರನಗರಿಗೆ ಹೋಗಿ ಬಿಟ್ಟರೆ, ಸ್ಫೋಟದ ಗತಿ?
ಬಾಂಗ್ಲಾದೇಶ: ಗಡಿ ಪ್ರದೇಶದ ಪ್ರಜೆಗಳಿಗೆ ಆಹಾರ ನಿಷೇಧ. ಹಸಿವಿನಿಂದ ಕಂಗೆಟ್ಟು ಅವರು ಭಾರತಕ್ಕೆ ನುಸುಳಬೇಕಲ್ಲ!
ನೇಪಾಳ: ತನ್ನ ಕರೆನ್ಸಿಯ ಮೇಲೆಯೇ ನಿಷೇಧ. ಆಗ ಜನರು ಭಾರತೀಯ ಕರೆನ್ಸಿಯನ್ನು ಒಟ್ಟು ಮಾಡಿ ಮತ್ತು ಪ್ರಿಂಟ್ ಮಾಡತೊಡಗಿ ಪ್ರವಾಸೋದ್ಯಮದ ಆದಾಯ ಹೆಚ್ಚಳಕ್ಕೂ ಮತ್ತು ಅಗತ್ಯ ವಸ್ತುಗಳ ಆಮದು ಹೆಚ್ಚಳಕ್ಕೂ ನೆರವಾಗುತ್ತಾರೆ.
ಶ್ರೀಲಂಕಾ: 'ಟೈಗರ್' ಎಂಬ ಪದದ ನಿಷೇಧ. ವಿವರಣೆ ಅನಗತ್ಯ.
ಭೂತಾನ್: ಪ್ರಜೆಗಳಿಗೆ ಭಾರತ ಪ್ರವಾಸ ನಿಷೇಧ. ಭಾರತದ ಆಧುನಿಕ ಜೀವನ ಶೈಲಿ ನೋಡಿ ಪ್ರಜೆಗಳು ತಮ್ಮ ಉಡುಗೆ-ತೊಡುಗೆ- ಜೀವನ ಶೈಲಿಯನ್ನೆಲ್ಲ ಬದಲಾಯಿಸಿಕೊಂಡು ಬಿಟ್ಟರೆ ಓಬೀ'ರಾಜ' ಸಂಪ್ರದಾಯದ ಗತಿಯೇನಪ್ಪಾ?
ಮಾಲ್ಡಿವ್ಸ್: ಮೀನಿನ ಬಳಕೆ ನಿಷೇಧ. ಸಿಗುವ ಮೀನುಗಳನ್ನೆಲ್ಲ ವಿದೇಶಗಳಿಗೆ ಕಳಿಸಿ ಗರಿಷ್ಠ ವಿದೇಶಿ ವಿನಿಮಯ ಗಳಿಸಿದರೆ ತಾನೆ, ಆ ದೇಶ ಉಸಿರಾಡಲು ಸಾಧ್ಯ?
ಒಗಟು ಮಾತುಗಳ ಒಳಹೊಕ್ಕಾಗ...
ಏನೆಂದರೆ, ಹುಟ್ಟಾ ಸೋಮಾರಿಯೂ, ಸ್ವಲ್ಪ ಒರಟನೂ ಆದ ವ್ಯಕ್ತಿಯೊಬ್ಬ, ಮನೆಗೆ ಅಂಟಿಕೊಂಡಂತೆಯೇ ಇರುವ ಕೊಳದಲ್ಲಿ ಮೀನು ಹಿಡಿದು ಅದರ ಫ್ರೈ ಮಾಡಿಸಿಕೊಂಡು ತಿನ್ನುತ್ತಾ ಕುಳಿತಿದ್ದಾನೆ. ಈ ಅಪ್ಪನ ತೊಡೆಯ ಮೇಲೆ ಅವನ ಮಗರಾಯ ಕುಳಿತಿದ್ದಾನೆ. ಈ ಸೋಮಾರಿ ಯಜಮಾನ ತಿಂದು ಬಿಟ್ಟ ಮೂಳೆಗಳನ್ನು ಆ ಮನೆಯ ನಾಯಿ ಗುಳುಂ ಮಾಡುತ್ತಿದೆ. ಅದನ್ನು ಗಮನಿಸಿದ ಯಜಮಾನ, ನಾಯಿಗೆ ಒಮ್ಮೆ ಝಾಡಿಸಿ ಒದೆಯುತ್ತಾನೆ. ಈ ಸಂದರ್ಭಕ್ಕೆ ಸರಿಯಾಗಿ ಆ ಹಾದಿಯಲ್ಲಿ ಬಂದ ಅವಧೂತನೊಬ್ಬ ಹೇಳುವ ಮಾತುಗಳಿವು: 'ಅಯ್ಯೋ ಏನನ್ಯಾಯ? ಈ ಮನುಷ್ಯ ತನ್ನ ತಂದೆಯ ಮಾಂಸವನ್ನೇ ತಿನ್ನುತ್ತಿದ್ದಾನೆ. ಹೆತ್ತ ತಾಯಿಯನ್ನೇ ಝಾಡಿಸಿ ಒದೆಯುತ್ತಿದ್ದಾನೆ, ಶತ್ರುವಿನ ಮಗನನ್ನೇ ತೊಡೆಯ ಮೇಲೆ ಕೂರಿಸಿಕೊಂಡು ಮುದ್ದು ಮಾಡುತ್ತಿದ್ದಾನೆ. ಹೆಂಡತಿ ಅನ್ನಿಸಿಕೊಂಡವಳು, ಗಂಡನ ಮೂಳೆಗಳನ್ನು ಕಚಕಚನೆ ಅಗಿಯುತ್ತಿದ್ದಾಳೆ. ಸಂಸಾರವೆಂದರೆ ಹೀಗೇನೇ. ಸಂಸಾರವೆಂದರೆ ಇಷ್ಟೇನೇ...'
ಸುಳ್ಳಲ್ಲ. ಆ ವೇದಾಂತಿಯ ಮಾತುಗಳಲ್ಲಿ ಸತ್ಯವಿತ್ತು, ಏನಾಗಿತ್ತು ಅಂದರೆ- ಹುಟ್ಟಾ ಸೋಮಾರಿ ಯಜಮಾನ ಇದ್ದಾನಲ್ಲ, ಅವನ ತಂದೆ, ಮನೆಯ ಹಿಂಬದಿಯ ಕೊಳದಲ್ಲಿ ಮೀನಿನ ರೂಪದಲ್ಲಿ ಪುನರ್ಜನ್ಮ ಎತ್ತಿದ್ದ. ಇದೇನೂ ಗೊತ್ತಿಲ್ಲದ ಈ ಸೋಮಾರಿ, ಕೊಳದಲ್ಲಿದ್ದ ಮೀನು ಹಿಡಿದು ಬೇಯಿಸಿ ಸ್ವಾಹಾ ಮಾಡಿದ್ದ. ಈ ಸೋಮಾರಿ ಯಜಮಾನನ ತಾಯಿ, ಪುನರ್ಜನ್ಮ ಪಡೆದು ಅದೇ ಮನೆಯ ನಾಯಿಯಾಗಿದ್ದಳು. ಮೂಳೆ ತಿನ್ನಲು ಬಂದ ನಾಯಿ ಎಂದು ಈ ಯಜಮಾನ ಒದ್ದಾಗ, ಹೆತ್ತ ತಾಯಿಯನ್ನೇ ಒದ್ದಂತಾಯಿತು. ಪರಿಚಯದ ಆಸಾಮಿಯೊಬ್ಬ ಹೆಂಡತಿಯ ಮೇಲೆ ಅತ್ಯಾಚಾರ ಎಸಗಿದನೆಂದು, ಮನೆಯ ಯಜಮಾನ ಅವನನ್ನು ಕೊಂದು ಹಾಕಿದ್ದ. ಆ ಅತ್ಯಾಚಾರದ ಫಲವಾಗಿಯೇ ಹುಟ್ಟಿದ ಮಗುವನ್ನು ಯಜಮಾನ ಮುದ್ದು ಮಾಡುತ್ತಿದ್ದ!
-----
ಅವಧೂತನ ಮಾತುಗಳನ್ನು ಒಳಹೊಕ್ಕು ನೋಡಿದಾಗ ಎಂಥಾ ಎದೆಯೊಡೆಯುವ ಸಂಗತಿ ಹೊರಬಂತು ನೋಡಿದಿರಾ...
ಮೂರನೇ ಅಳಿಯನಿಗೆ ಮರ್ಸಿಡಿಸ್
ಅತ್ತೆಯೊಬ್ಬಳಿಗೆ ತನ್ನ ಅಳಿಯಂದಿರಿಗೆ ತನ್ನ ಮೇಲಿರುವ ಪ್ರೀತಿ ಎಷ್ಟು ಎಂಬುದನ್ನು ಪರೀಕ್ಷಿಸುವ ಮನಸ್ಸಾಯಿತು. ಕೂಡಲೇ ಆಕೆ ಮನೆಯ ಪಕ್ಕದಲ್ಲಿದ್ದ ಬಾವಿಗೆ ಜಿಗಿದು ಬಿಟ್ಟಳು. ಅಲ್ಲೇ ಕುಳಿತು ಹರಟೆ ಹೊಡೆಯುತ್ತಿದ್ದ ಅಳಿಯಂದಿರು ಓಡಿ ಬಂದರು. ಮೊದಲನೆಯ ಅಳಿಯ ಬಾವಿಗೆ ಹಾರಿ ಆಕೆಯನ್ನು ಕಾಪಾಡಿದ. ಹಿರಿಹಿರಿ ಹಿಗ್ಗಿದ ಅತ್ತೆಮ್ಮ, ಅವನಿಗೆ ತನ್ನ ಕಾರ್ ಕೊಟ್ಟುಬಿಟ್ಟಳು.
ಎರಡನೆಯ ದಿನ ಮತ್ತೆ ಬಾವಿಗೆ ಹಾರಿದಳು. ಎರಡನೆಯ ಅಳಿಯ ಜಿಗಿದು ಆಕೆಯನ್ನು ಬದುಕುಳಿಸಿದ. ಅವನಿಗೆ ಬೈಕ್ ಕೊಟ್ಟಳು.
ಮೂರನೆಯ ಅಳಿಯನನ್ನು ಪರೀಕ್ಷಿಸಬೇಕೆಂದು ಮೂರನೇ ದಿನವೂ ಬಾವಿಯಲ್ಲಿ ಜಿಗಿದಳು. ಮೂರನೇ ಅಳಿಯ ಇನ್ನೇನು ಆಕೆಯನ್ನು ಉಳಿಸುವವನಿದ್ದ, ಅಷ್ಟರಲ್ಲೇ ಅವನು ಅಂದುಕೊಂಡ: 'ಇನ್ನೇನು ಮನೆಯಲ್ಲಿ ಹಳೆಯ ಸೈಕಲ್ ಅಷ್ಟೇ ಉಳಿದಿರೋದು. ಆ ಡಬ್ಬಾ ಸೈಕಲ್‌ಗಾಗಿ ಯಾಕೆ ಕಷ್ಟ ಪಡಬೇಕು? ಹೀಗೆ ಯೋಚಿಸಿದವನೇ. ಸುಮ್ಮನಾಗಿಬಿಟ್ಟ. ಅತ್ತೆ ಸತ್ತೇಹೋದಳು.
ಆದರೂ ಮರುದಿನ ಈ ಮೂರನೇ ಅಳಿಯನಿಗೆ ಮರ್ಸಿಡಿಸ್ ಕಾರು ಸಿಕ್ಕಿತು. ಹೇಗೆ ಗೊತ್ತಾ?
ಮಾವ ತಂದು ಕೊಟ್ಟ!
ಯಾವ ತೋಳ ಗೆಲ್ಲುತ್ತೆ?
ಮೊಂಡುತನ ಮಾಡುತ್ತಿದ್ದ ಮೊಮ್ಮಗನನ್ನು ಕರೆದು ಅಜ್ಜ ಹೇಳಿದ-'ನಮ್ಮೊಳಗೆ ಎರಡು ರೀತಿಯ ತೋಳಗಳಿವೆ. ಒಂದು ಒಳ್ಳೆಯದು, ಇನ್ನೊಂದು ಕೆಟ್ಟದ್ದು. ಕೆಟ್ಟ ತೋಳಕ್ಕೆ ಸಿಟ್ಟು, ಸುಳ್ಳು, ಅಸೂಯೆ, ಅಸಮಾಧಾನ ಮತ್ತು ಕೀಳರಿಮೆಯೇ ಆಹಾರ. ಒಳ್ಳೆಯ ತೋಳ ಸಂತೋಷ, ಶಾಂತಿ, ವಿನಮ್ರತೆ, ದಯೆ, ಆಶಾಭಾವನೆ, ಸತ್ಯ ಮತ್ತು ಸಹಾನುಭೂತಿಗಳ ಮೇಲೆ ಬದುಕುತ್ತೆ.'
ತಲೆ ಕೆರೆದುಕೊಳ್ಳುತ್ತಾ ಮೊಮ್ಮಗ ಅಜ್ಜನನ್ನು ಮುಗ್ಧವಾಗಿ ಕೇಳಿದ, 'ಅಜ್ಜ ಇವೆರಡರಲ್ಲಿ ಯಾವ ತೋಳ ಗೆಲ್ಲುತ್ತೆ?'
ಅವನ ತಲೆಯ ಮೇಲೆ ಪ್ರೀತಿಯಿಂದ ಕೈಯಾಡಿಸುತ್ತಾ ಅಜ್ಜ ಹೇಳಿದ, 'ನೀನು ಯಾವುದಕ್ಕೆ ಆಹಾರ ಹಾಕುತ್ತೀಯೋ ಅದು'
- ವಿಶ್ವೇಶ್ವರ ಭಟ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

