ಅಂಕಣಗಳು

ಈ ತಿದ್ದುಪಡಿಯಲ್ಲಿ ಹೊಸತೇನೂ ಇಲ್ಲ

Published On :

ಅತ್ಯಾಚಾರದ ಪ್ರಕರಣಗಳ ನಿಯಂತ್ರಣಕ್ಕಾಗಿ ಎಂದು ಹೇಳಿಕೊಂಡು ಕೇಂದ್ರ ಸರ್ಕಾರ ಐಪಿಸಿ ಸೆಕ್ಷನ್ 375ಕ್ಕೆ ತಿದ್ದುಪಡಿ ತಂದಿದೆ. ಇದು ಕೇವಲ ಸಾರ್ವಜನಿಕರ ಕಣ್ಣೊರೆಸುವ ತಂತ್ರವಷ್ಟೆ. ಕಾಯಿದೆಯ ತಿದ್ದುಪಡಿ ನೆಪದಲ್ಲಿ ಐಪಿಸಿಯನ್ನು ಅಶ್ಲೀಲಗೊಳಿಸಲಾಗಿದೆ. ದೆಹಲಿಯ ನಿರ್ಭಯಾ ಪ್ರಕರಣವನ್ನು ಮಾತ್ರ ತಲೆಯಲ್ಲಿಟ್ಟುಕೊಂಡು ದೇಶದ ಸಾಮಾನ್ಯ ಪ್ರಕರಣಗಳ ಬಗ್ಗೆ ಗಮನ ನೀಡಲಾಗಿಲ್ಲ. ಇದರಿಂದ ಕಟು ಸತ್ಯಗಳು ಕಣ್ಣೆದುರಿಗೆ ಇಟ್ಟುಕೊಂಡು ಕೆಟ್ಟ ಕಾನೂನು ರೂಪಿಸಲಾಗಿದೆ ಎಂದು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಹಾಗೂ ಹಿರಿಯ ನ್ಯಾಯವಾದಿ ರವಿ ಬಿ ನಾಯಕ್ ಕಿಡಿಕಾರಿದ್ದಾರೆ.

 ಐಪಿಸಿ ಸೆಕ್ಷನ್ 375 ಹಾಗೂ ಅತ್ಯಾಚಾರಕ್ಕೆ ಸಂಬಂಧಿಸಿದ ಕಾನೂನಿನ ತಿದ್ದುಪಡಿ ಸಮರ್ಪಕವಾಗಿದೆಯೇ?
ಖಂಡಿತ ಇಲ್ಲ. ಪ್ರತಿಭಟನಾ ನಿರತ ಜನರ ಕಣ್ಣೊರೆಸುವ ತಂತ್ರಗಾರಿಕೆಗೆ ಕೇಂದ್ರ ಸರ್ಕಾರ ಮುಂದಾಗಿದೆ. ಈ ತಿದ್ದುಪಡಿಯಲ್ಲಿ ಯಾವುದೇ ಹೊಸತನವಿಲ್ಲ. ಈ ಹಿಂದೆ 1860ರಲ್ಲಿ ರಚನೆಯಾಗಿದ್ದ ಕಾಯಿದೆಗೆ ಹೆಚ್ಚು ಉಪ್ಪು ಖಾರ ಹಾಕಿ ಸುಗ್ರೀವಾಜ್ಞೆ ಹೊರಡಿಸಲಾಗಿದೆ. ಇದರಿಂದ ಯಾವುದೇ ಬದಲಾವಣೆ ನಿರೀಕ್ಷಿಸಲು ಸಾಧ್ಯವಿಲ್ಲ. ತಿದ್ದುಪಡಿ ಹೆಸರಲ್ಲಿ ಕಾಯಿದೆಗೆ ಅಶ್ಲೀಲ ಪದಗಳ ಪ್ರಯೋಗ ಮಾಡಲಾಗಿದೆ. ಇದರ ಅನಿವಾರ್ಯತೆಯಿರಲಿಲ್ಲ.

 ಹಾಗಿದ್ದರೆ ತಿದ್ದುಪಡಿಯಲ್ಲಿ ಏನು ಎಡವಟ್ಟಾಗಿದೆ?
ಅತ್ಯಾಚಾರ ಎಂಬ ಶಬ್ದದ ಬದಲಿಗೆ ಲೈಂಗಿಕ ದೌರ್ಜನ್ಯ ಎನ್ನಲಾಗಿದೆ. ಇದು ಈಗಾಗಲೇ ಐಪಿಸಿ 354ರಲ್ಲಿ ಇದೆ. ಮತ್ತೆ ಪ್ರತ್ಯೇಕಿಸುವ ಅನಿವಾರ್ಯತೆಯಿರಲಿಲ್ಲ. ಇದರ ಜತೆಗೆ ಮಹಿಳೆಯ ವಿರುದ್ಧದ ಅತ್ಯಾಚಾರದ ಜತೆಗೆ ಪುರುಷರನ್ನು ಸೇರಿಸಲಾಗಿದೆ. ಆದರೆ ಮತ್ಯಾವ ಬೇಡಿಕೆಗಳ ಬಗೆಗೂ ಚಿಂತನೆ ಮಾಡಲಾಗಿಲ್ಲ. ದೆಹಲಿಯಲ್ಲಿ ನಡೆದ ಅಮಾನವೀಯ ಘಟನೆಯನ್ನು ಮನದಲ್ಲಿಟ್ಟುಕೊಂಡು ಕಾಯಿದೆ ರೂಪಿಸಲಾಗಿದೆ. ಕೇವಲ ಒಂದು ಘಟನೆಯಿಂದ ದೇಶದ ಕಾನೂನು ರೂಪಿಸಲು ಸಾಧ್ಯವಿಲ್ಲ. ಹಾಗಿದ್ದಲ್ಲಿ ತೀರಾ ಅಪರೂಪದ ಪ್ರಕರಣಗಳ ಬಗೆಗೂ ನಿರ್ದಿಷ್ಟ ಅಂಶಗಳಿಲ್ಲ. ಈ ಹಿಂದೆಯೂ ಅಪರೂಪದ ಕೊಲೆ ಪ್ರಕರಣಕ್ಕೆ ಮರಣ ದಂಡನೆ ಇತ್ತು. ಈಗ ಅತ್ಯಾಚಾರದಿಂದ ಸತ್ತ ಪ್ರಕರಣದಲ್ಲಿ ಮರಣ ದಂಡನೆ ನೀಡಲಾಗುತ್ತದೆ. ಹಾಗಿದ್ದರೆ ನಿರ್ಭಯಾ ಬದುಕಿದ್ದರೆ ಆ ಆರೋಪಿಗಳಿಗೆ ಮರಣ ದಂಡನೆ ಶಿಕ್ಷೆ ನೀಡುತ್ತಿರಲಿಲ್ಲವೇ?
ಮತ್ತೊಂದೆಡೆ ಕಾಯಿದೆಯಲ್ಲಿ ಅತಿಯಾಗಿ ಅಶ್ಲೀಲ ಭಾಷೆ ಬಳಸಲಾಗಿದೆ. ಈ ಹಿಂದೆಯೂ ಮಾಡಿದ ಕಾನೂನಿನಲ್ಲಿ ಇದನ್ನೇ ಸಭ್ಯವಾಗಿ ಹೇಳಲಾಗಿದೆ. ಅಶ್ಲೀಲ ಶಬ್ದಗಳಿಂದ ಕಾಯಿದೆ ಹಾಗೂ ವಿಚಾರಣೆಯಲ್ಲಿ ಯಾವುದೇ ಬದಲಾವಣೆಯಾಗುವುದಿಲ್ಲ. ಬದಲಾಗಿ ಸಮಾಜದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಕಾನೂನು ರೂಪಿಸುವರು ಅಶ್ಲೀಲ ಸಾಹಿತ್ಯ ನೋಡಿ ಬರೆದಂತಿದೆ. ಸಾಮಾನ್ಯ ಜ್ಞಾನವನ್ನು ಉಪಯೋಗಿಸಿದ್ದರೆ ಇಂತಹ ಕೆಟ್ಟ ಕರಡು ರೂಪಿಸುತ್ತಿರಲಿಲ್ಲ. ಇದನ್ನು ಒಪ್ಪಿದ ಕೇಂದ್ರ ಸರ್ಕಾರಕ್ಕಾದರೂ ಬುದ್ಧಿ ಇರಬೇಕಿತ್ತು.

 ಬದಲಾವಣೆಗೆ ಅವಕಾಶವಿದೆ, ಏನು ಮಾಡಬಹುದು?

ಸುಗ್ರೀವಾಜ್ಞೆಗೆ ಕಾನೂನು ರೂಪ ನೀಡಲು ಸಮಯವಿದೆ. ಆಗಲಾದರೂ ಶಬ್ದ ಪ್ರಯೋಗವನ್ನು ಸಭ್ಯವಾಗಿಸಬೇಕು. ಅವಶ್ಯಕ ತಿದ್ದುಪಡಿ ತರಲಿ, ಬದಲಾಗಿ ಕೆಟ್ಟ ಶಬ್ದಗಳ ಪ್ರಯೋಗ ಕೈಬಿಡಲಿ. ಇದರಿಂದ ಸಮಾಜಕ್ಕೂ ಉತ್ತಮ ಸಂದೇಶ ನೀಡಿದಂತಾಗುತ್ತದೆ. ಇದಲ್ಲದೇ ಲೈಂಗಿಕ ದೌರ್ಜನ್ಯಕ್ಕಾಗಿ ಐಪಿಸಿ 354 ಇರುವಾಗ ಮತ್ತೆ ಅದನ್ನು ಇಲ್ಲಿ ಸೇರಿಸುವ ಅಗತ್ಯವಿಲ್ಲ. ಇದರಿಂದ ಕಾನೂನಿನಲ್ಲಿ ದ್ವಂದ್ವ ಹುಟ್ಟುತ್ತದೆ. ಭವಿಷ್ಯದಲ್ಲಿ ಇದೇ ದ್ವಂದ್ವಗಳು ಕಾನೂನು ಬಿಕ್ಕಟ್ಟಿಗೆ ಕಾರಣವಾಗಬಹುದು. ತಿದ್ದುಪಡಿ ವಿಚಾರದಲ್ಲಿ ಸರ್ಕಾರ ಗಂಭೀರವಾಗಿರಬೇಕು. ಯಾವುದೋ ಆಯೋಗ ಪ್ರಾರಂಭವಾಗಿ 3 ದಿನಕ್ಕೆ ಇಂತಹ ಅಸಂಬದ್ಧ ಶಿಫಾರಸು ಕೊಟ್ಟರೆ ಒಪ್ಪಿಕೊಳ್ಳಬೇಕೆಂದಿಲ್ಲ. ಈಗಿರುವ ಐಪಿಸಿಯನ್ನು ನೈಜವಾಗಿ ಬಲಿಷ್ಠಗೊಳಿಸಬೇಕೆಂಬ ಆಸಕ್ತಿ ಇದ್ದರೆ ಅತಿ ಅಪರೂಪದ ಅತ್ಯಾಚಾರ ಪ್ರಕರಣಗಳಿಗೆ ಗಲ್ಲು ಶಿಕ್ಷೆ ನಿಗದಿ ಮಾಡಬಹುದಿತ್ತು. ಆದರೆ ಈ ಬಗ್ಗೆ ಚಕಾರವೆತ್ತಿಲ್ಲ. ಕಾನೂನು ಸಂಘರ್ಷಕ್ಕೆ ಒಳಗಾದ ಮಕ್ಕಳ ವಯೋವುತಿಯನ್ನು ಇಳಿಸುವ ಬಗ್ಗೆ ಚಿಂತನೆ ನಡೆಸಬಹುದಿತ್ತು. ಇವೆಲ್ಲದರ ಬಗ್ಗೆ ಮೌನ ವಹಿಸಿ ತಿದ್ದುಪಡಿಯಲ್ಲಿ ಶಬ್ದ ಭಂಡಾರಗಳ ಪ್ರದರ್ಶನ ಮಾಡಲಾಗಿದೆಯಷ್ಟೆ. ಇನ್ನು ತಿದ್ದುಪಡಿಯಲ್ಲಿ ನೊಂದವರಿಗೆ ವೈದ್ಯಕೀಯ ನೆರವಿನ ಬಗ್ಗೆ ಪ್ರಸ್ತಾಪವಾಗಿದೆ, ಆದರೆ ಅದು ಗ್ಯಾಂಗ್‌ರೇಪ್‌ಗೆ ಸೀಮಿತವಾಗಿದೆ. ಅತ್ಯಾಚಾರವೆನ್ನುವುದು ಇದಕ್ಕೆ ಮಾತ್ರ ಸೀಮಿತವೇ? ಶಿಫಾರಸು ಮಾಡಿದ ಆಯೋಗ ಹಾಗೂ ಕಾನೂನು ರೂಪಿಸಿದ ವ್ಯಕ್ತಿಗಳಿಬ್ಬರು ದೆಹಲಿ ಪ್ರಕರಣವನ್ನೇ ಎದುರಿಗಿಟ್ಟುಕೊಂಡು ರೂಪಿಸಿರುವುದು ತಿಳಿದುಬರುತ್ತದೆ.

 ಕಾನೂನು ಸಂಘರ್ಷಕ್ಕೊಳಗಾದ ಮಕ್ಕಳ ವಯೋವುತಿ ಬಗ್ಗೆ ನಿಮ್ಮ ನಿಲುವೇನು?
ದೆಹಲಿ ಪ್ರಕರಣವನ್ನು ನೋಡಿದರೂ ಅತ್ಯಾಚಾರವೆಸಗಿದವನು 18 ವರ್ಷಕ್ಕೂ ಸಣ್ಣವನೇ. ವಯಸ್ಸಿನ ಇಳಿಕೆ ಅಸಾಧ್ಯವಾದರೂ ಮತ್ತೊಂದು ವಿಷಯ ಪ್ರಸ್ತಾಪಿಸಬಹುದಿತ್ತು. ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯನ್ನು ವಯಸ್ಸಿನ ಆಧಾರದ ಮೇಲೆ ನಿರ್ಧರಿಸುವ ಬದಲು, ಮಾನಸಿಕ ಪ್ರೌಢಿಮೆ ಬಗ್ಗೆ ವೈಜ್ಞಾನಿಕವಾಗಿ ತಿಳಿಯುವ ಅಂಶ ಸೇರಿಸಬಹುದಿತ್ತು. 18 ವರ್ಷದೊಳಗಿನ ಅದೆಷ್ಟೋ ವ್ಯಕ್ತಿಗಳು ಮಾನಸಿಕವಾಗಿ ಬೆಳೆದಿರುತ್ತಾರೆ, ಅವರು ಅತ್ಯಾಚಾರದಲ್ಲಿ ನೇರವಾಗಿಯೂ ಭಾಗಿಯಾಗುತ್ತಾರೆ. ಇಂಥವರ ಬಗೆಗೂ ಕಾನೂನು ಗಟ್ಟಿಯಾಗಬೇಕಿತ್ತು.

 ಇಂತಹ ಕಾಯಿದೆಗಳಿಂದ ಮಾತ್ರ ಅತ್ಯಾಚಾರ, ಅಪರಾಧ ಪ್ರಕರಣ ತಡೆಯಲು ಸಾಧ್ಯವಿದೆಯೇ, ಇಲ್ಲವಾದರೆ ಅನಿವಾರ್ಯವಿರುವುದೇನು?
ನಮ್ಮ ದೇಶದಲ್ಲಿನ ತನಿಖಾ ಸಂಸ್ಥೆಗಳನ್ನು ಬಲಗೊಳಿಸಿ ಪರಿಣಾಮಕಾರಿಯಾಗಿಸದ ಹೊರತು ಏನೂ ಮಾಡಲು ಸಾಧ್ಯವಿಲ್ಲ. ವಿಚಾರಣೆ ಸಂದರ್ಭದಲ್ಲಿ ಆರೋಪಿ ವಿರುದ್ಧದ ಸಾಕ್ಷಿ, ದಾಖಲೆಗಳನ್ನು ಕೋರ್ಟ್ ಮುಂದೆ ಸಲ್ಲಿಸಲು ತನಿಖಾಧಿಕಾರಿಗಳು ವಿಫಲರಾಗುತ್ತಿದ್ದಾರೆ. ತನಿಖೆ ಸಂದರ್ಭದಲ್ಲಿ ಹಸ್ತಕ್ಷೇಪಗಳಾಗುತ್ತಿವೆ. ವಿಚಾರಣೆಯ ಹೊರತಾಗಿ ಪರಿಸ್ಥಿತಿಯನ್ನು ಕೆರಳಿಸುವ ಕೆಲಸವಾಗುತ್ತಿದೆ. ಇದರಿಂದ ನೊಂದವರಿಗೆ ಯಾವುದೇ ನ್ಯಾಯ ದೊರೆಯುವುದಿಲ್ಲ. ಕಾಯಿದೆಗೆ ತಿದ್ದುಪಡಿ ತರುವ ಮುನ್ನ ತನಿಖಾ ಸಂಸ್ಥೆಗೆ ಅನಿವಾರ್ಯವಾಗಿರುವ ಕೆಲ ವೈಜ್ಞಾನಿಕ ನೆರವು ನೀಡಬೇಕು. ತನಿಖಾ ಸಂಸ್ಥೆಗಳ ಅಭಿವೃದ್ಧಿಯಾಗಬೇಕು. ಇದನ್ನು ಮಾಡದೇ ಯಾವುದೇ ತಿದ್ದುಪಡಿ ತಂದರೂ ಪ್ರಯೋಜನವಿಲ್ಲ. ಇಂತಹ ಕಣ್ಣೊರೆಸುವ ತಂತ್ರಗಳಿಂದ ಆರೋಪಿಗಳು ಖುಲಾಸೆಯಾಗಲು ನೆರವಾಗುತ್ತದೆ.

 ಅತ್ಯಾಚಾರ ಪ್ರಕರಣಗಳನ್ನು ನಿಭಾಯಿಸುವಲ್ಲಿ ಕೋರ್ಟ್‌ಗಳು ವಿಫಲವಾಗಿಲ್ಲವೇ?
ಇದನ್ನು ಸಂಪೂರ್ಣವಾಗಿ ಒಪ್ಪಿಕೊಳ್ಳಲು ಸಾಧ್ಯವಿಲ್ಲ. ತನಿಖಾ ಸಂಸ್ಥೆಗಳು ಸಹಕರಿಸದಿದ್ದರೆ ಕೋರ್ಟ್‌ಗಳು ಏನು ಮಾಡಲು ಸಾಧ್ಯವಿಲ್ಲ. ಮಾಧ್ಯಮಗಳಲ್ಲಿ ಬರುತ್ತಿರುವ ಪ್ರಕರಣಗಳು ಬೆರಳೆಣಿಕೆಯಷ್ಟು ಮಾತ್ರ. ಕೆಲ ಪ್ರಕರಣಗಳು ಕೋರ್ಟ್‌ಗೆ ಬಂದರೂ ಸಾಕ್ಷಿ ಹೇಳಲು ಬರುವುದಿಲ್ಲ. ಮೊದಲು ಸಾರ್ವಜನಿಕರಲ್ಲಿ ನೈತಿಕತೆ ಬರಬೇಕು. ಇದಾದ ಬಳಿಕ ಕಾನೂನು ನೆರವು ದೊರೆಯುತ್ತದೆ ಎಂಬ ಬಗ್ಗೆ ನೊಂದವರಿಗೆ ಅನಿಸಬೇಕು. ಆಗ ಅಲ್ಪಮಟ್ಟಿಗೆ ನಿಯಂತ್ರಣಕ್ಕೆ ಬರಬಹುದು.

- ರಾಜೀವ್ ಹೆಗಡೆ, ಕನ್ನಡಪ್ರಭ


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.