ಅಂಕಣಗಳು

'ಸ್ರಿ' ಎಂಬ ಭತ್ತ ಬೆಳೆಯುವ ಅನುಕ್ರಮ

Published On :

ಜಾನ್ ವಿಡಾಲ್ ಎಂಬ ಪರಿಸರ ಪತ್ರಕರ್ತ ಜನವರಿ 6, 2013ರಂದು ಲಂಡನ್‌ನ ದೈನಿಕ ದಿ ಗಾರ್ಡಿಯನ್/ಅಬ್ಸರ್‌ವರ್‌ನಲ್ಲಿ ಒಂದು ರೋಚಕವಾದ ವರದಿ ಬರೆದಿದ್ದಾನೆ. ಬಿಹಾರದ ರೈತ ಸುಮಂತ್ ಕುಮಾರ್  ಅಚ್ಚರಿಯಾಗುವಂತಹ ಅಕ್ಕಿಯ ಇಳುವರಿ ಪಡೆದಿರುವುದರ ಕುರಿತಾದ ವರದಿ ಅದು. ಈ ವರದಿ ಪ್ರಪಂಚದ ಕೃಷಿ ಕ್ಷೇತ್ರದಲ್ಲಿ ಸಂಚಲನ ಮೂಡಿಸಿದೆ. ರೈತ ಸುಮಂತ್ ಕುಮಾರ್, ದರ್ವೆಶ್‌ಪುರ ಎಂಬ ಉತ್ತರ ಬಿಹಾರದ ಹಳ್ಳಿಯಲ್ಲಿ ಯಾರೂ ಕೇಳರಿಯದಂತಹ ಭತ್ತದ ಇಳುವರಿಯನ್ನು(22.4 ಟನ್‌ನಷ್ಟು) ಕೇವಲ ಹಸುವಿನ ಗೊಬ್ಬರದಿಂದ ಪಡೆದಿದ್ದಾನೆ. ಸಾಧಾರಣವಾಗಿ ಭಾರತದಲ್ಲಿ ಭತ್ತ ಬೆಳೆಯುವ ರೈತರಿಗೆ 7ರಿಂದ 10 ಟನ್ನಿನ ಮೇಲೆ ಹೆಚ್ಚು ಬೆಳೆಯುವುದಕ್ಕಾಗಿಲ್ಲ. ಆದರೆ ಸುಮಂತ್ ಕುಮಾರ್ ಯಾವ ತರಹದ ರಾಸಾಯನಿಕಗಳನ್ನೂ ಉಪಯೋಗಿಸದೇ ಅತ್ಯಂತ ಕಡಿಮೆ ಖರ್ಚಿನಲ್ಲಿ ಬೆರಗು ಮೂಡಿಸುವಷ್ಟು ಭತ್ತದ ಇಳುವರಿ ಪಡೆದಿದ್ದಾನೆ. ಈ ವರದಿಯನ್ನು ಓದಿದ ತಕ್ಷಣ, ನನಗೂ ನಂಬಲಾಗಲಿಲ್ಲ. ಅಷ್ಟೇ ಅಲ್ಲದೆ, ಅದೇ ಹಳ್ಳಿಯ ಮತ್ತೊಬ್ಬ ರೈತ, ಸುಮಂತ್‌ಕುಮಾರ್‌ರ ಕ್ರಮವನ್ನೇ  ಅನುಸರಿಸಿ ಸಫಲನಾಗಿದ್ದಾನೆ. ಇವರಿಬ್ಬರೇ ಅಲ್ಲದೆ ದೇವೇಶ್‌ಪುರದಇನ್ನಿತರೆ ರೈತರುಗಳು ವಿವಿಧ ಬೆಳೆಗಳನ್ನು, ಬೆರಗಾಗುವಂತೆ ಬೆಳೆದಿದ್ದಾರೆ. ಈ ಬೆರಗುಗೊಳಿಸುವ ಕೃಷಿ ಕ್ರಮದಿಂದಾಗಿ ದೇವೇಶ್‌ಪುರವನ್ನು ಎಲ್ಲರೂ "ಪವಾಡ ಗ್ರಾಮ" ಎಂದು ಕರೆಯತೊಡಗಿದ್ದಾರೆ. ಬಿಹಾರ ಭಾರತದ ಅತ್ಯಂತ ಬಡ ರಾಜ್ಯ ಮತ್ತು ಅಲ್ಲಿನ ರೈತರು ದೇಶದ ಅತಿ ಕಡು ಬಡವರೆಂಬ ವಿಷಯ ಎಲ್ಲರಿಗೂ ಗೊತ್ತಿರುವಂಥದ್ದೇ. ವಾಸ್ತವ ಸ್ಥಿತಿ ಹೀಗಿರುವಾಗ, ಮೇಲೆ ಹೇಳಿದಂತೆ ಬಡ ರೈತರು ಪ್ರಪಂಚದಲ್ಲೇ ಯಾರೂ ಸಾಧಿಸದಂತಹ ಇಳುವರಿಯನ್ನು ಯಾವುದೇ ಆಧುನಿಕ ತಂತ್ರಜ್ಞಾನದ ಸಹಾಯವಿಲ್ಲದೇ ಬೆಳೆದರೆ ಯಾರಿಗೆ ತಾನೇ ಆಶ್ಚರ್ಯವಾಗುವುದಿಲ್ಲ?
ಹಾಗಾದರೆ, ಸುಮಂತ್‌ಕುಮಾರ್ ಮತ್ತು ಆತನ ಸಂಗಡಿಗರು ಯಾವ ವಿಧಾನ ಉಪಯೋಗಿಸಿ ಈ ಸಾಧನೆ ಮಾಡಿದ್ದಾರೆ? "ಸ್ರಿ" (SRI) ವಿಧಾನ! SRI ಅಂದರೆ System Rice Intensfication ಎಂದರ್ಥ. ಈ ಕ್ರಮಕ್ಕೆ ಮೆಡಗಾಸ್ಕರ್ ಕ್ರಮವೆಂದೂ ಕರೆಯಲಾಗುತ್ತದೆ. ಏಕೆಂದರೆ ಹೆನ್ರಿ ಡಿ ಲೌಲಾನಿ ಎಂಬ ಕ್ರಿಶ್ಚಿಯನ್ ಪಾದ್ರಿ ಎಂಭತ್ತರ ದಶಕದಲ್ಲಿ ಮಡಗಾಸ್ಕರ್‌ನಲ್ಲಿ, ಗುಡ್ಡಗಾಡು ಮತ್ತು ಎತ್ತರದ ಪ್ರದೇಶದಲ್ಲಿನ ಹಳ್ಳಿಗರು ಭತ್ತ ಬೆಳೆಯುವ ಕ್ರಮವನ್ನು ಗಮನಿಸಿ ವಿಷಯ ಸಂಗ್ರಹಣೆ ಮಾಡಿದ್ದ.
ಇತ್ತೀಚಿನ ದಿನಗಳಲ್ಲಿ, ಅಂದರೆ ಕಳೆದ ಹದಿನೈದು ವರ್ಷಗಳಿಂದ "ಸ್ರಿ" ಕೃಷಿ ವಿಧಾನಕ್ಕೆ ಪ್ರವರ್ತಕರಾಗಿ ದುಡಿಯುತ್ತಿರುವವರು ಪ್ರೊ. ನಾರ್ಮನ್ ಅಪ್‌ಹಾಫ್ ಎಂಬ ಕಾರ್ನಲ್ ವಿವಿಯ ಅರ್ಥಶಾಸ್ತ್ರದ ಪ್ರಾಧ್ಯಾಪಕ. "ಸ್ರಿ" ಕ್ರಮವನ್ನು ಪ್ರಪಂಚದಾದ್ಯಂತ ಹರಡಿ, ದಿನನಿತ್ಯವೂ ಅದರ ಮಂತ್ರ ಜಪಿಸುವ ಏಕೈಕ ವ್ಯಕ್ತಿ ಎಂದರೆ ಈ ನಾರ್ಮನ್ ಅಪ್‌ಹಾಫ್. ಭಾರತ ದೇಶಕ್ಕೂ "ಸ್ರಿ" ಕ್ರಮವನ್ನು ಹರಡಿದ್ದೂ ಸಹ ಇವರೇ. ಈತ ಕೇಂದ್ರದ ಯೋಜನಾ ಸಂಸ್ಥೆಗೂ ಲಗ್ಗೆ ಇಟ್ಟು ಈ ಕ್ರಮವನ್ನು ಹನ್ನೆರಡನೇ ಪಂಚವಾರ್ಷಿಕ ಯೋಜನೆಯಲ್ಲಿ ಸೇರಿಸಿದ. ಹೀಗಾಗಿ, ಭಾರತದಲ್ಲಿ "ಸ್ರಿ" ಕೃಷಿ ವಿಧಾನಕ್ಕೆ ಕೋಟ್ಯಾಂತರ ರುಪಾಯಿ ಅನುದಾನ ಲಭಿಸಿದೆ. ಪ್ರೊಫೆಷನಲ್ ಅಸಿಸ್ಟೆನ್ಸ್ ಫಾರ್ ಡೆವಲಪ್‌ಮೆಂಟ್ ಆಕ್ಷನ್ ಎಂಬ ಸರ್ಕಾರೇತರ ಸಂಸ್ಥೆ "ಸ್ರಿ" ಕ್ರಮದ ತರಬೇತಿ ಶಾಲೆಗಳನ್ನು ಭಾರತದಾದ್ಯಂತ ನಡೆಸುತ್ತಿದೆ.
"ಸ್ರಿ"  ಕ್ರಮದ ವಿಶೇಷತೆಯೆಂದರೆ, ಭತ್ತದ ತಳಿಗಳನ್ನು ನಾಟಿ ಮಾಡದೇ ಬೀಜವನ್ನು ಎರಚುವ Broadcast ವಿಧಾನ ಅನುಸರಿಸುವುದು. ಭತ್ತಕ್ಕೆ ನೀರಿನಾಂಶ ಬಹಳಷ್ಟು ಕಡಿಮೆ ಬೇಕಾಗಿರುವುದರಿಂದ ರಾಸಾಯನಿಕಗಳು ಮತ್ತು ನೀರು ಅತಿ ಕಡಿಮೆ ಮೊತ್ತದಲ್ಲಿ ಬಳಕೆಯಾಗುತ್ತವೆ. ಹಾಗಾಗಿ ಅತ್ಯಂತ ಕಡು ಬಡ ರೈತನಿಗೂ ಕೂಡ ಶೇಕಡ 30-40 ಪ್ರತಿಶತ ಅಧಿಕ ಇಳುವರಿ ಪಡೆಯಲು ಸಾಧ್ಯ. ಆಂಧ್ರಪ್ರದೇಶದ ಕೃಷಿ ವಿವಿ ಈ ಕ್ರಮದ ಮೇಲೆ ಸುಮಾರು ಹತ್ತರಿಂದ ಹದಿನೈದು ವರ್ಷ ಪ್ರಯೋಗ ಮಾಡಿ "ಸ್ರಿ" ಕ್ರಮದಿಂದ ಸಾಕಷ್ಟು ಅಧಿಕ ಇಳುವರಿ ಪಡೆಯಬಹುದೆಂದು ದೃಢೀಕರಿಸಿದ್ದಾರೆ. ಬಿಹಾರದಲ್ಲಿ ರಾಜೀವ್‌ಕುಮಾರ್ ಎಂಬ ಕೃಷಿ ಇಲಾಖೆಯ ತರುಣ ಅಧಿಕಾರಿ, ಭತ್ತದ ಬೀಜವನ್ನು ಎರಚುವ ಬದಲು, ಜಾಗರೂಕತೆಯಿಂದ 25 ಸೆಂಟಿ ಮೀಟರ್ ಅಂತರದಲ್ಲಿ ಭತ್ತದ ಪೈರನ್ನು ನಾಟಿ ಮಾಡಿದರೆ ಮತ್ತು ಅಷ್ಟೇ ಜಾಗರೂಕವಾಗಿ ಕಳೆ ಕಿತ್ತು ಹಾಕಿದರೆ 'ಸ್ರಿ' ಕ್ರಮದಿಂದ ಇನ್ನೂ ಅಧಿಕ ಇಳುವರಿ ಪಡೆಯಬಹುದೆಂದು ತೋರಿಸಿಕೊಟ್ಟಿದ್ದಾರೆ.
 ಪ್ರೊ. ನಾರ್ಮನ್ ಅಪ್‌ಹಾಫ್‌ಗೆ 'ಸ್ರಿ' ಕ್ರಮವನ್ನು ಪ್ರಪಂಚದ ಎಲ್ಲಾ ಭತ್ತ ಬೆಳೆಯುವ ದೇಶಗಳಿಗೆ ಬಿತ್ತರಿಸುವುದಕ್ಕೆ ಹದಿನೈದು ಮಿಲಿಯನ್ ಡಾಲರ್‌ನ ಅನುದಾನ ಒದಗಿಸಿದೆ. 'ಸ್ರಿ' ಕ್ರಮ ಹಸಿರು ಕ್ರಾಂತಿಯ ತತ್ವಗಳಿಗೆ ತದ್ವಿರುದ್ಧವಾದದ್ದು. ಆದರೆ ಭೂ ತಾಪಮಾನ ಹೆಚ್ಚಾದಂತೆ, ನೀರಿಲ್ಲದೆ ಬವಣೆ ಅಧಿಕವಾಗುತ್ತಿರುವ ಕಾಲದಲ್ಲಿ 'ಸ್ರಿ' ಯಂತಹ ಕ್ರಮ ಅನುಸರಿಸಿ ಕಡಿಮೆ ನೀರಿನಲ್ಲಿ ಕೃಷಿ ಮಾಡುವುದು ಎಷ್ಟು ಒಳ್ಳೆಯದಲ್ಲವೇ? ಪ್ರೊ. ಅಪ್‌ಹಾಫ್ ಪ್ರಕಾರ 'ಸ್ರಿ' ಕ್ರಮದ ಮೇಲೆ ಯಾರ ಹಕ್ಕೂ ಇಲ್ಲ, ಯಾವುದೇ ತರಹದ ಸುಂಕವಿಲ್ಲ ಮತ್ತು ಯಾವುದೇ ಪರವಾನಗಿ ಪಡೆಯಬೇಕಾಗಿಲ್ಲ. ಅವರು ಹತ್ತರಿಂದ ಹದಿನೈದು ವರ್ಷ ಪ್ರಯೋಗ ಮಾಡಿ 'ಸ್ರಿ'  ಕ್ರಮದಿಂದ ಸಾಕಷ್ಟು ಇಳುವರಿ ಪಡೆಯಬಹುದೆಂದು ದೃಢೀಕರಿಸಿದ್ದಾರೆ.
ಇಷ್ಟೆಲ್ಲಾ ಲಾಭದಾಯಕವಾದ 'ಸ್ರಿ'  ಕ್ರಮ ಸರ್ವವ್ಯಾಪಿಯಾಗಿ ಹಬ್ಬಿಲ್ಲ ಎಂಬುದೇ ಸೋಜಿಗದ ಸಂಗತಿ. ಬಹುಮುಖ್ಯವಾಗಿ ಕೃಷಿಯಲ್ಲಿ ಶ್ರೇಷ್ಠವಾದ ಭತ್ತದ ತಳಿಗಳನ್ನು ಉಪಯೋಗಿಸಬೇಕು. ಉತ್ತಮ ಗುಣಮಟ್ಟದ ತಳಿಗಳಿಂದ ಕೃಷಿ ಆರಂಭವಾಗಿ ಉತ್ತಮ ಗುಣಮಟ್ಟದ ಬೀಜಗಳಲ್ಲಿ ಅಂತ್ಯಗೊಳ್ಳಬೇಕು. ಇದಕ್ಕೆ genetic potential ಎಂದು ಕರೆಯುತ್ತಾರೆ. ಯಾವುದೋ ಹಳೆ ತಲೆಮಾರಿನ ಬೀಜ ಉಪಯೋಗಿಸಿದರೆ, ಯಾವುದೋ ಕೃಷಿ ಕ್ರಮವನ್ನನುಸರಿಸಿದರೆ, ಅದರಿಂದ ಹೆಚ್ಚಿಗೆ ಇಳುವರಿ ನಿರೀಕ್ಷಿಸುವುದಕ್ಕಾಗುವುದಿಲ್ಲ. ಆದರೆ genetically endowed ಬೀಜವನ್ನು, ಅತ್ಯಂತ ಉಪಯುಕ್ತವಾಗುವಂತಹ ಕ್ರಮದಿಂದ ಬೆಳೆದರೆ, ಅಧಿಕ ಇಳುವರಿ ಪಡೆಯಬಹುದು. ಅದಕ್ಕೆ integrated agricultural system ಎಂದೂ ಕರೆಯುತ್ತಾರೆ.
ಅಂತಾರಾಷ್ಟ್ರೀಯ ಭತ್ತ ಸಂಶೋಧನಾ ಸಂಸ್ಥೆ ಈ 'ಸ್ರಿ' ಕ್ರಮದ ಮೇಲೆ ಸಂಶೋಧನೆ ನಡೆಸಿದೆ. ಆಗ ತಿಳಿದು ಬಂದ ವಿಷಯವೆಂದರೆ ರಾಸಾಯನಿಕ ಗೊಬ್ಬರವಲ್ಲದೇ ಹೋದರೂ, ಸಾವಯವ ಗೊಬ್ಬರವನ್ನು ಬಳಸಲೇಬೇಕು ಎಂಬುದು. ಇನ್ನು ಕಳೆಗಳ ಕಾಟ 'ಸ್ರಿ' ಕ್ರಮದಲ್ಲಿ ಅತಿ ಅಧಿಕವಾಗಿರುತ್ತದೆ. ಈ ಕಳೆ ನಿಯಂತ್ರಣಕ್ಕೆ ಸಾಕಷ್ಟು ಕಳೆ ಕೀಳುವ ಕೆಲಸಗಾರರಿರಬೇಕು ಅಥವಾ ರಾಸಾಯನಿಕ ಹರ್ಬಿಸೈಡನ್ನು ತಡೆಯುವಂತಹ ತಳಿಗಳಾದರೂ ಇರಬೇಕು. ಆಧುನಿಕ ಹೈಬ್ರಿಡ್ ರೆಸಿಸ್ಟೆಂಟ್ (ತಡೆಯುವ) ಕುಲಾಂತರಿ ತಳಿ ಭತ್ತವನ್ನು ಉಪಯೋಗಿಸಿದರೆ, ಅತ್ಯಂತ ಯಶಸ್ವಿಯಾಗಿ 'ಸ್ರಿ' ಕ್ರಮದಿಂದ ಲಾಭ ಪಡೆಯಬಹುದು, ಖರ್ಚೂ ಕಡಿಮೆಯಾಗುತ್ತದೆ.
ಕುಲಾಂತರಿ ತಳಿಗಳಲ್ಲದೆ ಹೋದರೆ, ಸಾಂಪ್ರದಾಯಿಕವಾಗಿ ಅಭಿವೃದ್ಧಿ ಪಡಿಸಿದ ರಾಸಾಯನಿಕ ಕಳೆ ನಾಶಕವನ್ನು ತಡೆಯುವಂತಹ ತಳಿಗಳನ್ನು 'ಸ್ರಿ' ಕ್ರಮಕ್ಕೆ ಅಳವಡಿಸಿಕೊಳ್ಳಬಹುದಾಗಿದೆ. ಈ ತರಹದ ಸಾಂಪ್ರದಾಯಿಕ ತಳಿಗಳನ್ನು ಉಪಯೋಗಿಸಿ 'ಸ್ರಿ' ಕ್ರಮದ ಸಂಶೋಧನೆಗಳಾಗಿವೆ ಮತ್ತು ಅದರಿಂದ ಕಡಿಮೆ ಖರ್ಚಿನಲ್ಲಿ ಅಧಿಕ ಇಳುವರಿ ಪಡೆಯಬಹುದೆಂದು ದೃಢೀಕರಿಸಲಾಗಿದೆ. ಆಧುನಿಕ ತಂತ್ರಜ್ಞಾನದ ವಿಶೇಷತೆ ಏನೆಂದರೆ, ಯಾವ ತರಹದ ತಳಿಗಳು ಬೇಕೋ, ಅಂತಹ ತಳಿಗಳನ್ನು (designer Crops) ತಯಾರಿಸಬಹುದು ಮತ್ತು ಆಧುನಿಕ ತಳಿಗಳನ್ನು ಯಾವುದೇ ಕ್ರಮದ ಕೃಷಿಯಲ್ಲಿಯೂ ಅಳವಡಿಸಿಕೊಳ್ಳಬಹುದು. ಬಿಹಾರದಲ್ಲಿ ಅದೇ ಜಮೀನಿನಲ್ಲಿ ಸತತವಾಗಿ ಮೂರು-ನಾಲ್ಕು ವರ್ಷ ಅಷ್ಟೇ ಇಳುವರಿ ಪಡೆಯಲು ಆ ರೈತ ಸಫಲನಾದರೆ, ಈ ಕ್ರಮವನ್ನು ಒಪ್ಪಿಕೊಳ್ಳಬಹುದೆಂದು ವಿಜ್ಞಾನಿಗಳು ಹೇಳುತ್ತಿದ್ದಾರೆ. ಹಾಗೆ ನೋಡಿದರೆ ಇಂತಹ ಪ್ರಶ್ನೆಗಳು ಎಲ್ಲಾ ತಂತ್ರಜ್ಞಾನವನ್ನೂ ಮೊದಲಿಗೆ ಕಾಡುತ್ತವೆ. ಸದ್ಯಕ್ಕೆ ಪ್ರಪಂಚದಲ್ಲಿ ನಾಲ್ಕರಿಂದ-ಐದು ಮಿಲಿಯನ್ ರೈತರುಗಳು 'ಸ್ರಿ' ಕ್ರಮವನ್ನು ಚೀನಾ, ಭಾರತ, ಇಂಡೋನೇಷಿಯಾ, ಕಾಂಬೋಡಿಯ, ಶ್ರೀಲಂಕ ಮತ್ತು ವಿಯಟ್ನಾಂನಲ್ಲಿ ಉಪಯೋಗಿಸುತ್ತಿದ್ದಾರೆ. ಖಖಐ ಕ್ರಮದಲ್ಲಿ ಒಂದೊಂದೇ ಪೈರನ್ನು ನಾಟಿ ಮಾಡಬೇಕಾಗಿರುವುದರಿಂದ ಅದು  ಬೆನ್ನು ಮೂಳೆ ಮುರಿಯುವಂತಹ ಕೆಲಸ. ನೊಬೆಲ್ ಪ್ರಶಸ್ತಿ ವಿಜೇತ ಜೋಸೆಫ್ ಸ್ವಿಗ್ಲಿಟ್ಜ್ ಬಿಹಾರದ ದೇವೇಶ್‌ಪುರಕ್ಕೆ ಭೇಟಿ ನೀಡಿ, ಎಲ್ಲವನ್ನೂ ಕಣ್ಣಾರೆ ಕಂಡು 'ಸ್ರಿ' ಕ್ರಮವನ್ನು ಮೆಚ್ಚಿಕೊಂಡಿದ್ದಾರೆ.
ಹತ್ತೊಂಬತ್ತರ ಆದಿ ದಶಕಗಳಲ್ಲಿ ಬಿಹಾರದ ಪೂಸಾ ಕೃಷಿ ವಿದ್ಯಾಲಯದಲ್ಲಿ ವಿಜ್ಞಾನಿಯಾಗಿದ್ದ ಸರ್ ಆಲ್ಬರ್ಟ್ ಹೊವರ್ಡ್ ಎಂಬ ವಿಜ್ಞಾನಿ ಇದೇ 'ಸ್ರಿ' ಮಾದರಿಯ ಭತ್ತ ಬೆಳೆಯುವ ಕ್ರಮದ ಮೇಲೆ ಹತ್ತಾರು ವರ್ಷ ಸಂಶೋಧನೆ ಮಾಡಿದ್ದ. ಅದನ್ನು ಇತ್ತೀಚಿನ ದಿನಗಳಲ್ಲಿ ಆಧುನಿಕ 'ಸ್ರಿ' ಪ್ರವರ್ತಕರು ಸ್ಮರಿಸಿಕೊಳ್ಳುವುದೂ ಇಲ್ಲ. ಹೊವರ್ಡ್ ಮತ್ತು ಆತನ ಪತ್ನಿ ಲೂಯಿಸೇ, ಭತ್ತದ ಬೇರಿಗೆ ಹೆಚ್ಚು ಆಮ್ಲಜನಕ ಒದಗಿಸಬೇಕಾದ ಅವಶ್ಯಕತೆಯಿರುತ್ತದೆ ಎಂದು ವೈಜ್ಞಾನಿಕವಾಗಿ ಆಗಲೇ ತೋರಿಸಿಕೊಟ್ಟಿದ್ದರು. ಆದರೆ ಆಧುನಿಕ ಭತ್ತ ಬೆಳೆಯುವ ಕ್ರಮದಲ್ಲಿ ಅತಿಯಾಗಿ ನೀರು ಬಿಡುವುದರಿಂದ, ಬೇರಿಗೆ ಉಸಿರು ಕಟ್ಟುವಂತಾಗುತ್ತದೆ. 'ಸ್ರಿ ' ಕ್ರಮದಿಂದ ಬರೀ ತೇವವಾದ ಜಮೀನಿನಲ್ಲಿ ಸರಿಯಾದ ದೂರದಲ್ಲಿ ನಾಟಿ ಮಾಡುವುದರಿಂದ ಅಧಿಕ ಇಳುವರಿ ಪಡೆಯಬಹುದು.
ಈ 'ಸ್ರಿ' ಕ್ರಮದ ಯಶಸ್ಸಿನಿಂದ ತಿಳಿದು ಬರುವ ವಿಷಯವೇನೆಂದರೆ ಪಾರಂಪರಿಕ ಕ್ರಮದ ಜೊತೆಗೆ, ಆಧುನಿಕ ತಂತ್ರಜ್ಞಾನವನ್ನು ಸಮಗ್ರ ಕೃಷಿ ವಿಧಾನದಲ್ಲಿ ಅಳವಡಿಸಿಕೊಳ್ಳಬೇಕಾಗಿದೆ ಎಂಬುದು. 

- ಪ್ರೊ. ಶಾಂತು ಶಾಂತಾರಾಮ್
ಐಯೋವ ರಾಜ್ಯ ಕೃಷಿ ವಿವಿ
Shanthus@iastate.edu

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.