ಆಗಸ್ಟಾ ಹಗರಣದ ಹೂಳುವಿಕೆ ಶುರು!
ಇಟಲಿ ನ್ಯಾಯಾಲಯ ಪ್ರತಿಯಲ್ಲಿನ 'ಕುಟುಂಬ' ಎಂಬ ಪದ ತ್ಯಾಗಿ, ಸಂಬಂಧಿಕರ ವಿಷಯದಲ್ಲಿ ಮಾತ್ರ ಬಳಕೆಯಾಗಿಲ್ಲ್ಲ ಎಂಬುದು ನಿಚ್ಚಳವಾಗುತ್ತದೆ
ನಿರೀಕ್ಷೆಯಂತೆ ಆಗಸ್ಟಾ ವೆಸ್ಟ್ಲ್ಯಾಂಡ್ ಹಗರಣವು ಅದಾಗಲೇ ನೇಪಥ್ಯಕ್ಕೆ ಸರಿದಿದೆ. ಬಜೆಟ್ನ ವಾರ ಇದಾಗಿತ್ತು ಎಂಬುದೇನೂ ಅದಕ್ಕೆ ಕಾರಣವಲ್ಲ. ಇಟಲಿ ನ್ಯಾಯಾಲಯಗಳ ಕಾರಣದಿಂದ ಹಾಗೂ ಅವುಗಳ ಬಳಿ ಇರುವ ವಿಸ್ತೃತ ವಿವರಣೆಗಳಿಂದ ಭಾರತದ ಜನತೆಗೆ ಎರಡು ರಾಷ್ಟ್ರಗಳ ಸಹಭಾಗಿತ್ವದಲ್ಲಿ ಭ್ರಷ್ಟಾಚಾರ ಎಷ್ಟು ಹುಲುಸಾಗಿ ಬೆಳೆದಿದೆ ಎಂಬುದು ಅರಿವಾಗಿದೆ. ಹಗರಣವು ಹೊರಹಾಕುತ್ತಿರುವ ವಿವರಗಳನ್ನು ನೋಡಿದರೆ ಕಾಂಗ್ರೆಸ್ನ ಹಲವು ನಾಯಕರಿಗೆ ಇಟಲಿ ಚುನಾವಣೆಯಲ್ಲೂ ತಮ್ಮ ಹಿತಾಸಕ್ತಿ ಇದ್ದದ್ದು ಮನದಟ್ಟಾಗುತ್ತದೆ. ಹೀಗಾಗಿಯೇ ಇಟಲಿ ಚುನಾವಣೆ ಬಗ್ಗೆ ಭಾರತದ ಸಾಮಾನ್ಯರು ಆಸಕ್ತಿ ಬೆಳೆಸಿಕೊಂಡಿದ್ದರೆ ಅದು ಅಸಹಜವೇನೂ ಆಗಲಾರದು. ಇದೀಗ ಇಟಲಿ ಚುನಾವಣೆಯ ಫಲಿತಾಂಶ ಬಂದಿದೆ. ತಾನೇ ಸರ್ಕಾರ ರಚಿಸಬಹುದು ಎಂಬ ಇಟಲಿಯ ಬೆರ್ಲುಸ್ಕೋನಿಯ ಕನಸುಗಳು ಚೂರಾಗಿವೆ. ಫ್ಯಾಸಿಸ್ಟ್ ಚಿಂತನೆಗೆ ಹತ್ತಿರವಾದ ಆತನ ಮೈತ್ರಿ ಲೆಗಾ ನಾರ್ಡ್ ಕೂಡ ನೆಲ ಕಚ್ಚುವಂತಾಗಿದೆ. ಭಾರತದ ಜತೆ ನಡೆಸಿದ ಡೀಲ್ ಹಣದಿಂದಲೇ, ಅಂದರೆ ಇಲ್ಲಿನ ಶ್ರೀಸಾಮಾನ್ಯನ ಹಣದಿಂದಲೇ ಆತನ ಚುನಾವಣೆ ವೆಚ್ಚಕ್ಕೆ ಹಣ ಹೋಗಿತ್ತು ಎಂಬ ವರದಿಗಳಿವೆ. ಭಾರತ ಮತ್ತು ಇಟಲಿ ನಡುವಿನ ಈ ಅಕ್ರಮ ವ್ಯವಹಾರದ ಸುರುಳಿಗಳು ಇನ್ನಷ್ಟೇ ಬಿಚ್ಚಿಕೊಳ್ಳಬೇಕಿವೆ.
ಇಟಲಿಯಲ್ಲಿ ಈ ಹಗರಣ ಬೆಳಕಿಗೆ ಬಂದಾಗ ಸರ್ಕಾರ ಮತ್ತು ಸೋನಿಯಾ ಗಾಂಧಿಯ ನಿಷ್ಠಾವಂತರು ಮೌನವನ್ನೇ ನೆಚ್ಚಿಕೊಂಡರು. 2011ರ ನವೆಂಬರ್ನಲ್ಲಿ ಬೆರ್ಲುಸ್ಕೋನಿ ಅಧಿಕಾರ ಕಳೆದುಕೊಂಡಾಗಲೇ ಇವರೆಲ್ಲ ಕಳವಳಗೊಂಡಿದ್ದರು. ಅದೇನೇ ಆದರೂ ಹಗರಣದ ಬಿರುಗಾಳಿ ಭಾರತದವರೆಗೆ ತಲುಪಲಿಕ್ಕಿಲ್ಲ, ಹಾಗೊಮ್ಮೆ ತಲುಪಿದರೂ ತಮ್ಮ ಮಾಧ್ಯಮ ಪ್ರಭಾವವನ್ನು ಬಳಸಿಕೊಂಡು ಅದರ ಪ್ರಭಾವವನ್ನು ಮುಸುಕಾಗಿಸಬಹುದು ಎಂದೇ ಇವರು ನಂಬಿದ್ದರು. ಬೆರ್ಲುಸ್ಕೋನಿ ಮತ್ತೆ ಆರಿಸಿ ಬರುತ್ತಾನೆ. ಆಗ ವ್ಯವಹಾರ ಮತ್ತೆ ಹಳಿಗೆ ಬರುತ್ತದೆ ಎಂಬುದೂ ಅವರ ನಂಬಿಕೆಯಾಗಿತ್ತು. ಆದರೆ ಕೆಲ ವೃತ್ತ ಪತ್ರಿಕೆಗಳು ಬೆನ್ನಿಗೆ ಬಿದ್ದವರಂತೆ ಭಾರತ-ಇಟಲಿ ಒಪ್ಪಂದದ ಅಕ್ರಮದ ಆಯಾಮಗಳನ್ನು ವರದಿ ಮಾಡುತ್ತ ಹೋದಂತೆ ಹಾಗೂ ಇಟಲಿಯಲ್ಲಿ ಈ ಸಂಬಂಧ ಬಂಧನಗಳಾಗುತ್ತಿದ್ದಂತೆ ಸೋನಿಯಾ ಗಾಂಧಿ ನಿಷ್ಠಾವಂತರು ಈ ಹಗರಣವನ್ನು ಮುಚ್ಚಿಡುವ ಧಾವಂತಕ್ಕೆ ಬಿದ್ದರು. ಹೀಗೆ ಹಗರಣಗಳನ್ನು ಮುಚ್ಚಿಡುವ ಆಟ ಜನಸಾಮಾನ್ಯರಿಗೆ ಅದೆಷ್ಟು ಚಿರಪರಿಚಿತವಾಗಿಬಿಟ್ಟಿದೆ ಎಂದರೆ ಅದು ಮುಂದೇನಾಗಲಿದೆ ಎಂಬುದನ್ನು ಸರಿಯಾಗಿ ಊಹಿಸಿಬಿಡುತ್ತದೆ.
ಈ ನಿಷ್ಠ ಗಣಕ್ಕೆ ಹಗರಣಗಳನ್ನು ತೆರೆಮರೆಗೆ ತಳ್ಳುವುದು ದಶಕಗಳಿಂದ ಅಭ್ಯಾಸವಾಗಿಬಿಟ್ಟಿರುವ ಕಲೆ. ನಿಷ್ಠ ವಕ್ತಾರರು ಹಗರಣ ನಡೆದೇ ಇಲ್ಲ ಎಂದು ಸಮರ್ಥಿಸಿಕೊಳ್ಳುವುದಕ್ಕೆ ಎಂಥ ಅಸಂಬದ್ಧವನ್ನು ಬೇಕಾದರೂ ಉಸುರಬಲ್ಲರು. ಅದಕ್ಕೆ ಮೊದಲ ಹೆಜ್ಜೆ ಎಂಬಂತೆ ಸಾಕ್ಷ್ಯಗಳನ್ನು ತಿರುಚುವ ಹಾಗೂ ಅವನ್ನು ಹಾಳುಮಾಡುವ ಕಾರ್ಯ ಆರಂಭವಾಗುತ್ತದೆ. ಅದಕ್ಕೆ ಸಿಬಿಐ ಅನ್ನು ಸಮರ್ಥವಾಗಿ ಬಳಸಿಕೊಳ್ಳುತ್ತದೆ. ಬೋಫೋರ್ಸ್ ಪ್ರಕರಣದಲ್ಲಿ ಮಾಡಿದಂತೆ ನ್ಯಾಯದ ಕಟಕಟೆಯಲ್ಲಿ ಆ ಪ್ರಕರಣವನ್ನೇ ಶಿಥಿಲಗೊಳಿಸಲಾಗುತ್ತದೆ. ಹಾಗೆಯೇ ರಾಜಕೀಯ ಪಥದಲ್ಲಿ ಜಂಟಿ ಸಂಸದೀಯ ಸಮಿತಿಯನ್ನು ರಚಿಸಲಾಗುತ್ತದೆ. ಅದರಲ್ಲಿ ಸಂಖ್ಯಾಬಲದ ದೃಷ್ಟಿಯಿಂದ ಕಾಂಗ್ರೆಸ್ ಸದಸ್ಯರೇ ಹೆಚ್ಚಿರುತ್ತಾರೆ. ಅದು ಸರ್ಕಾರಕ್ಕೆ ಕ್ಲೀನ್ಚಿಟ್ ಕೊಟ್ಟುಬಿಡುತ್ತದೆ. ಇಂಥ ಸಂಕೀರ್ಣ ಸಮಯದಲ್ಲಿ ತಾವು ಆಳುವವರ ಪರವಾಗಿ ನಡೆದುಕೊಂಡಿದ್ದೇ ಆದರೆ ಅದರಿಂದ ಜೀವನಪೂರ್ತಿ ದೊರೆಯಬಹುದಾದ ಲಾಭಗಳು ಅಧಿಕಾರ ವರ್ಗ ಹಾಗೂ ಪೊಲೀಸ್ ವ್ಯವಸ್ಥೆಗೆ ಚೆನ್ನಾಗಿ ಗೊತ್ತಿದೆ. ಬೋಫೋರ್ಸ್ ಹಗರಣ ನಡೆದ ಕಾಲದಲ್ಲಿದ್ದ ಕೆಲ ಅಧಿಕಾರಿಗಳಿಗೆ ಇವತ್ತಿಗೂ ಅನನ್ಯವಾದ ರಾಜಾಶ್ರಯವಿದೆ. ಆಗಸ್ಟಾ ವೆಸ್ಟ್ಲ್ಯಾಂಡ್ ಪ್ರಕರಣದಲ್ಲೂ ಈ ನಿಟ್ಟಿನಲ್ಲಿ ಅಧಿಕಾರಿ ವರ್ಗದವರಿಗೆ ಈಗಾಗಲೇ ತಕ್ಕ ಪ್ರತಿಫಲ ದೊರೆಯುವುದಕ್ಕೆ ಆರಂಭವಾಗಿದೆ.
ಭಾರತದವರೂ ಈ ಹಗರಣದಲ್ಲಿ ತಪ್ಪಿತಸ್ಥರು ಎಂದು ನಿರೂಪಿಸುವ ಸಾಕಷ್ಟು ಸಾಂದರ್ಭಿಕ ಹಾಗೂ ನೇರ ಸಾಕ್ಷ್ಯಗಳು ಇರುವ ಬಗ್ಗೆ ಈ ಹಿಂದಿನ ಲೇಖನವೊಂದರಲ್ಲಿ ವಿಷದವಾಗಿ ಬರೆದಿದ್ದೆ. ವರ್ಷದ ಹಿಂದೆಯೇ ಇಂಥ ಸಾಕ್ಷ್ಯಗಳು ಮುನ್ನೆಲೆಗೆ ಬಂದಿದ್ದರೂ ರಕ್ಷಣಾ ಸಚಿವರು ಈ ನಿಟ್ಟಿನಲ್ಲಿ ಬೇರೆ ದಿಕ್ಕನ್ನೇ ನೋಡುತ್ತ ಕುಳಿತರು. ಸಂಸತ್ತಿನಲ್ಲಿ ಈ ಬಗ್ಗೆ ಪ್ರಸ್ತಾಪವಾದಾಗಲೂ ಕ್ಲೀನ್ಚಿಟ್ ಕೊಟ್ಟುಬಿಟ್ಟರು. ಆದರೆ ಹಗರಣದಲ್ಲಿ ಭಾರತದವರು ಭಾಗಿಯಾಗಿರುವ ಬಗ್ಗೆ ಭಾರಿ ಪ್ರಮಾಣದ ಸಾಕ್ಷ್ಯಗಳು ಇಟಲಿಯಿಂದ ಹರಿದು ಬರುತ್ತಿದ್ದಂತೆ, ಹೆಜ್ಜೆ ಹೆಜ್ಜೆಗೂ 'ನಿರ್ದಿಷ್ಟ ಕುಟುಂಬ'ದ ಹೆಸರು ಪ್ರಸ್ತಾಪಿತವಾಗುತ್ತಿದ್ದಂತೆ, ಇಟಲಿಯ ಓರ್ಸಿ ಎಂಬಾತನ ಬಂಧನವಾಗಿ ಹಲವು ಮಾಹಿತಿಗಳು ಹೊರಬೀಳುತ್ತಿದ್ದಂತೆ ಒತ್ತಡ ತಾಳಲಾಗದೆ ಇದೇ ರಕ್ಷಣಾ ಸಚಿವರು ಅನಿವಾರ್ಯವಾಗಿ ಸಿಬಿಐ ತನಿಖೆಗೆ ಆದೇಶಿಸಿದರು. ಹಾಗಾದರೆ ಇದು ಏನನ್ನು ಸೂಚಿಸುತ್ತದೆ? ಈ ಹಿಂದೆ ಸಂಸತ್ತಿನಲ್ಲಿ ಮಾತನಾಡುವಾಗ ರಕ್ಷಣಾ ಸಚಿವರು ಸತ್ಯವನ್ನು ಮುಚ್ಚಿಟ್ಟಿದ್ದರು ಎಂದಲ್ಲವೇ? ತಪ್ಪಿತಸ್ಥರಿಗೆ ಶಿಕ್ಷೆಯಾಗಲಿಗೆ ಎಂಬ ಆ್ಯಂಟನಿ ಮಾತು ಅವರ ಬಾಸ್ ಬರೆದುಕೊಟ್ಟ ಸಂಭಾಷಣೆ ಅಷ್ಟೇ ಎಂಬುದು ಸ್ಪಷ್ಟ. ಅದನ್ನು ನಂಬುವ ಸ್ಥಿತಿಯಲ್ಲಿ ಯಾರೂ ಇಲ್ಲ.
ಇಟಲಿಗೆ ಸಿಬಿಐ ತಂಡದ ಭೇಟಿಯೂ ಕಣ್ಕಟ್ಟು ನಾಟಕದಂತೆ ತೋರುತ್ತಿದೆ. ಈ ಬಗ್ಗೆ ಸಾರ್ವಜನಿಕ ವಲಯದಲ್ಲಿ ಹೆಚ್ಚಿನ ಮಾಹಿತಿಯೂ ಅಲಭ್ಯ. ಸುಮ್ಮನೇ ಸಮಯ ಕಳೆದು ಎಲ್ಲವನ್ನೂ ತಣ್ಣಗಾಗಿಸುವುದರತ್ತ ಇಟ್ಟಿರುವ ಒಂದು ಹೆಜ್ಜೆ ಇದಷ್ಟೇ. ಈಗ ಲಭ್ಯವಾಗಿರುವ ಸಾಂದರ್ಭಿಕ ಸಾಕ್ಷ್ಯಗಳಿಗೆ ಅನುಗುಣವಾಗಿಯೇ ಹಲವು ತ್ವರಿತ ಬಂಧನಗಳು ಆಗಬೇಕಿತ್ತು. ತಪ್ಪಿತಸ್ಥರೆಂದು ತೋರುತ್ತಿರುವವರು ಸಾಕ್ಷ್ಯಗಳನ್ನು ನಾಶ ಮಾಡುವುದಕ್ಕೆ ಮುಂಚೆಯೇ ಕಸ್ಟಡಿಯಲ್ಲಿ ವಿಚಾರಣೆಗಳೂ ಆಗಬೇಕಿತ್ತು. ಈ ಎಲ್ಲ ವಿಳಂಬಗಳಲ್ಲೂ ಕಾಂಗ್ರೆಸ್ನ ಕೈ ಕೆಲಸ ಮಾಡುತ್ತಿದೆ. ಅದು ಜನರಿಗೂ ಗೊತ್ತಿದೆ.
ಸರ್ಕಾರ ಮತ್ತು ಸಿಬಿಐ ಈ ಹಗರಣದ ಸಂಬಂಧ ಕೆಲ ಅಂಶಗಳನ್ನು ಸಾರ್ವಜನಿಕರಿಗೆ ಸ್ಪಷ್ಟಪಡಿಸಬೇಕಿರುವುದು ಅವಶ್ಯ.
- ಸಿಬಿಐಗೆ ನೀಡಿರುವ ಖಚಿತ ಗುರಿ ಯಾವುದು ಹಾಗೂ ಇಟಲಿಯಲ್ಲಿ ಅದು ಸಾಧಿಸಿರುವುದಾದರೂ ಏನು?
- ಭಾರತದ ತಪ್ಪಿತಸ್ಥರು ಅವರೆಷ್ಟೇ ರಾಜಕೀಯ ಪ್ರಭಾವಿಗಳಿರಲಿ, ಇಟಲಿಯ ದೃಢ ಸಂಪರ್ಕವನ್ನು ಹೊಂದಿದ್ದವರೇ ಆಗಿರಲಿ, ತಾವು ಅವರ ಗುರುತು ತಿಳಿದುಕೊಳ್ಳುವುದಕ್ಕೆ ಬದ್ಧರಾಗಿದ್ದೇವೆ ಎಂದು ಸಿಬಿಐ ತಂಡವು ಇಟಲಿಯ ಉನ್ನತ ಅಧಿಕಾರಿಗಳು ಹಾಗೂ ನ್ಯಾಯಾಂಗಕ್ಕೆ ಮನದಟ್ಟು ಮಾಡುವಲ್ಲಿ ಯಶಸ್ವಿ ಆಗಿದೆಯೇ?
- ಇಟಲಿಯ ಅಧಿಕಾರ ವರ್ಗದೊಂದಿಗೆ ಇವರು ಯಾವ ಲಿಖಿತ ದಾಖಲೆಗಳನ್ನು ಹಂಚಿಕೊಂಡಿದ್ದಾರೆ? ಅದಕ್ಕೆ ಇಟಲಿಯವರು ನೀಡಿರುವ ಪ್ರತಿಕ್ರಿಯೆಯ ಸಂಪೂರ್ಣ ವಿವರಗಳು ಜನರಿಗೆ ತಿಳಿಯಬೇಕಿದೆ.
- ಇಟಲಿ ಸರ್ಕಾರದ ಮ್ಯಾಜಿಸ್ಟ್ರೇಟರು ನೀಡಿರುವ 50 ಪುಟಗಳ ಆದೇಶ ಪ್ರತಿ ಭಾರತದಲ್ಲಿ ಹರಿದಾಡುತ್ತಿದೆಯಲ್ಲ.. ಈ ಬಗ್ಗೆ ಸಿಬಿಐ ಏನು ಕಂಡುಕೊಂಡಿದೆ? ಅದರ ಅಧಿಕೃತ ಪ್ರತಿಗಳೇನಾದರೂ ಇವರ ಬಳಿ ಲಭ್ಯವೇ?
- ಭಾರತದ ತಪ್ಪಿತಸ್ಥರನ್ನು ಪತ್ತೆ ಹಚ್ಚುವಲ್ಲಿ ಹಾಗೂ ಈ ಸಂಬಂಧ ಮುಂದಿನ ತನಿಖೆ ಕೈಗೊಳ್ಳುವಲ್ಲಿ ರಾಜತಾಂತ್ರಿಕ ಮಟ್ಟದಲ್ಲಿ ಆಗಿರುವ ಪ್ರಯತ್ನಗಳಾದರೂ ಏನು?
- ನಮ್ಮಲ್ಲಿನ ಇಟಲಿ ನ್ಯಾಯವಾದಿಗಳ ಅಂತಿಮ ಸಲಹೆ ಏನು?
- ಈ ವಿಷಯದಲ್ಲಿ ಜಂಟಿ ಸಂಸದೀಯ ಸಮಿತಿ ಎಂಬುದು ಪ್ರತಿಪಕ್ಷದವರು ವ್ಯಾಖ್ಯಾನಿಸಿರುವಂತೆ ಜೋಕ್ ಆಗಿರುವುದಲ್ಲದೇ ಮತ್ತೇನಿಲ್ಲ. ಏಕೆಂದರೆ ಹಗರಣ ನಡೆದ ಭೂಮಿ ಇಟಲಿ. ಅಲ್ಲಿ ಭಾರತೀಯ ಸಂಸತ್ತಿನ ಮಾತೇನೂ ನಡೆಯುವುದಿಲ್ಲ. ಆದರೆ ಕೊನೆಪಕ್ಷ ಈ ಸಮಿತಿಯಲ್ಲಿ ಭಾರತ ಮತ್ತು ಇಟಲಿಗಳ ಅಪರಾಧ ಕಾಯಿದೆಯನ್ನು ತಿಳಿದುಕೊಂಡಿರುವ ನ್ಯಾಯ ಪರಿಣತರು ಇರಬೇಕು ಎಂಬುದನ್ನಾದರೂ ಸರ್ಕಾರವು ಒಪ್ಪಿಕೊಳ್ಳುತ್ತದೆಯೇ? ಅಲ್ಲದೇ ತನಿಖೆಯ ಕ್ರಮಗಳ ಬಗ್ಗೆ ವಿಷಯಜ್ಞಾನ ಹೊಂದಿರುವವರನ್ನೂ ಈ ಸಮಿತಿಯಲ್ಲಿ ಸೇರಿಸಿಕೊಳ್ಳಬೇಕು ಎಂಬ ಧ್ವನಿಯನ್ನು ಅದು ಮನ್ನಿಸುವುದೇ?
- ತನಿಖೆಗೆ ಅಡ್ಡಿಯಾಗುವ ಅಂಶಗಳನ್ನು ಹೊರತುಪಡಿಸಿ, ಉಳಿದಂತೆ ಇದುವರೆಗೆ ತನಿಖೆಯಲ್ಲಿ ಏನೆಲ್ಲ ಅಂಶಗಳು ಹೊರಬಂದಿವೆ ಎಂಬುದನ್ನು ಸಿಬಿಐ ತಿಳಿಸಬಹುದಲ್ಲ? ಈ ನಿಟ್ಟಿನಲ್ಲಿ ಸರ್ಕಾರ ಸಿಬಿಐಗೆ ಅವಕಾಶ ಮಾಡಿಕೊಡುವುದಕ್ಕೆ ಸಿದ್ಧವೇ?
ಇಟಲಿ ನ್ಯಾಯಾಲಯದ ಪ್ರತಿಯನ್ನು ಓದಿದ್ದೇ ಆದರೆ ಅಲ್ಲಿ ಪದೇ ಪದೆ ಪ್ರಸ್ತಾಪಿಸಲಾಗಿರುವ 'ಕುಟುಂಬ' ಎಂಬ ಪದ ಆರೋಪಿತ ತ್ಯಾಗಿ ಹಾಗೂ ಅವರ ಸಂಬಂಧಿಕರ ವಿಷಯದಲ್ಲಿ ಮಾತ್ರ ಬಳಸಲಾಗಿರುವಂಥದ್ದಲ್ಲ ಎಂಬುದು ನಿಚ್ಚಳವಾಗುತ್ತದೆ. ಇದು ದೊಡ್ಡದೊಂದು 'ಸಂಚುಕೂಟದ ಕುಟುಂಬ' ಎಂಬುದನ್ನೇ ಅಲ್ಲಿನ ವಿವರಣೆಗಳು ಸೂಚಿಸುತ್ತವೆ. ಈ ನಿಟ್ಟಿನಲ್ಲಿ ಎಸ್. ಪಿ. ತ್ಯಾಗಿಯವರಿಗೆ ನನ್ನ ವೈಯಕ್ತಿಕ ಸಲಹೆ ಎಂದರೆ ಅವರು ಈ ಪ್ರಕರಣದಲ್ಲಿ ಮುಖ್ಯ ಸೂತ್ರಧಾರರು ಯಾರಿದ್ದಾರೆ ಎಂಬುದನ್ನು ಬಹಿರಂಗಗೊಳಿಸಬೇಕು. ಸ್ವರ್ಗದ ದಾರಿ ತೆರೆದುಕೊಳ್ಳುವುದು ಹಣದಿಂದಲ್ಲ, ಸಾರ್ವಜನಿಕರಿಗೆ ಒಳ್ಳೆಯದನ್ನು ಮಾಡಿರುವುದರ ಪ್ರಮಾಣದಿಂದ ಎಂಬುದನ್ನೇ ಎಲ್ಲ ಮತಗಳೂ ಸಾರಿ ಹೇಳುತ್ತಿರುವಾಗ ಈ ವಿಷಯದಲ್ಲಿ ತ್ಯಾಗಿ ಅಂಜಿಕೆ ಇರಿಸಿಕೊಳ್ಳಬಾರದು.
ಹಗರಣಗಳ ಮೇಲೆಯೇ ಸವಾರಿ ಮಾಡಿಕೊಂಡಿರುವ ಯುಪಿಎ ಸರ್ಕಾರ ಹಾಗೂ ಅದನ್ನು ಮುನ್ನಡೆಸುತ್ತಿರುವ ಕೈ ಕುರಿತು ಜನ ಬೇಸತ್ತು ಹೋಗಿದ್ದಾರೆ. ರಾಜಾರೋಷವಾಗಿ ದೇಶವನ್ನು ಲೂಟಿ ಮಾಡುತ್ತಿದ್ದಾರಿವರು. ಸಿಬಿಐ ಹಾಗೂ ಜಂಟಿ ಸಂಸದೀಯ ಸಮಿತಿಗಳೂ ಸರ್ಕಾರದ ಹಿತಾಸಕ್ತಿಗೆ ಪೂರಕವಾಗಿಯೇ ಕಾರ್ಯ ನಿರ್ವಹಿಸುತ್ತವೆ.ಅವುಗಳಿಂದ ಏನನ್ನೂ ನಿರೀಕ್ಷಿಸಲಾಗದು. ಇನ್ನು ಕೇಂದ್ರ ವಿಚಕ್ಷಣಾ ದಳದ ಮುಖ್ಯಸ್ಥರು ಯಾರೆಂದರೆ ಇದೇ ಒಪ್ಪಂದವನ್ನು ತಾವು ರಕ್ಷಣಾ ಕಾರ್ಯದರ್ಶಿ ಆಗಿದ್ದಾಗ ಮಾನ್ಯ ಮಾಡಿದವರು. ಇದೀಗ ತಾವೇ ಸಹಿ ಹಾಕಿದ್ದ ಕಡತಗಳನ್ನು ತರಿಸಿಕೊಂಡು ಏನೋ ಕಂಡು ಹಿಡಿಯುವುದಕ್ಕೆ ಹೊರಟಿದ್ದಾರೆ. ಎಲ್ಲರೂ ಎಷ್ಟು ಚೆನ್ನಾಗಿ ನಾಟಕವಾಡುತ್ತಿದ್ದಾರೆ ನೋಡಿ!
- ರಾಮ್ ಜೇಠ್ಮಲಾನಿ
ಖ್ಯಾತ ನ್ಯಾಯವಾದಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

