ಅಂಕಣಗಳು

ಅವತ್ತಿನ ಅನಿವಾರ್ಯ, ಇವತ್ತಿನ ದುರಂತ!

Published On :

ರಾಜಕಾರಣಿಗಳು ತಮ್ಮ ಮಾತನ್ನು ಹೇಗೆ ಬೇಕಾದರೂ ಬದಲಿಸುತ್ತಾರೆ. ಒಂದೇ ವಿಷಯದ ಬಗ್ಗೆ ದ್ವಂದ್ವ ನಿಲುವನ್ನು ಹೊಂದಿರುತ್ತಾರೆ ಎಂಬುದಕ್ಕೆ ಕಳೆದ ವಾರ ಸ್ಥಳೀಯ ಸಂಸ್ಥೆಗಳ ಚುನಾವಣಾ ಪ್ರಚಾರಕ್ಕಾಗಿ ಮೈಸೂರಿಗೆ ಬಂದಿದ್ದ ಮಾಜಿ ಸಿಎಂ ಡಿ.ವಿ. ಸದಾನಂದಗೌಡ ನಿದರ್ಶನವಾದರು. ಆಪರೇಷನ್ ಕಮಲದ ಬಗ್ಗೆ ಪ್ರಸ್ತಾಪಿಸಿದ ಅವರು, ಇದು ನಮ್ಮ ಪಕ್ಷದ ಅತ್ಯಂತ ದೊಡ್ಡ ದುರಂತ. ಇದು ಸರಿಯಲ್ಲ. ಈ ಬಗ್ಗೆ ಪಶ್ಚಾತಾಪ ಆಗಿದೆ. ಮುಂದೆ ಈ ರೀತಿಯ ತಪ್ಪು ಮಾಡುವುದಿಲ್ಲ ಎಂದರು. ಕಳೆದ ಬಾರಿ ಮೈಸೂರು ನಗರ ಪಾಲಿಕೆಯಲ್ಲಿ ಬಿಜೆಪಿಯು ಕಾಂಗ್ರೆಸ್ ಹಾಗೂ ಜೆಡಿಎಸ್‌ನ ತಲಾ 8 ಸದಸ್ಯರು, ತಲಾ ಇಬ್ಬರು ಪಕ್ಷೇತರರನ್ನು ಎರಡು ಹಂತದಲ್ಲಿ 'ಆಪರೇಷನ್ ಕಮಲ' ಮಾಡಿದ್ದು ಸರಿಯೇ ಎಂದು ಕೇಳಿದಾಗ, ಅದು ರಾಜಕೀಯ ಅನಿವಾರ್ಯತೆ ಅಂದ್ರು. ಜೈ ಮತದಾರ ಪ್ರಭುವೇ!
ಕಾಪುಸಿ 'ಮದುವೆ' ಪ್ರಚಾರದ ಕಸಿವಿಸಿ
ರಾಜಕಾರಣಿಗಳು ಮತದಾರರನ್ನು ಓಲೈಸಲು ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಎಲ್ಲಾ ಮದುವೆ- ತಿಥಿಗಳಿಗೆ ಹಾಜರಾಗುತ್ತಾರೆ ಎಂಬ ಮಾತಿದೆ. ಇನ್ನು ರಾಜಕಾರಣಿಗಳ ಮನೆಯಲ್ಲಿಯೇ ಮದುವೆ ಇದ್ದರಂತೂ ಮುಗಿದೇ ಹೋಯ್ತು. ಮದುವೆಯನ್ನು ಸಮಾವೇಶದಂತೆ ನಡೆಸುತ್ತಾರೆ. ಅದು ಚುನಾವಣೆ ಸಮೀಪಿಸಿದಾಗಲಂತೂ ತಮ್ಮ ಹುಟ್ಟುಹಬ್ಬ, ತಮ್ಮ ಸಂಬಂಧಿಕರ ಮದುವೆಗಳನ್ನು ಜೋರಾಗಿ ಮಾಡಿ ಕ್ಷೇತ್ರದ ಮತದಾರರನ್ನು ಕರೆಸಿ, ಭೂರಿ ಭೋಜನ ಹಾಕಿಸುತ್ತಾರೆ. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಸ್ವಕ್ಷೇತ್ರ ವರುಣದಲ್ಲಿ ಕೆಜೆಪಿ ಅಭ್ಯರ್ಥಿಯಾಗಲಿರುವ ಮಾಜಿ ಸಿಎಂ ಯಡಿಯೂರಪ್ಪ ಅವರ ಆಪ್ತ ಸಹಾಯಕ ಕಾ.ಪು. ಸಿದ್ದಲಿಂಗಸ್ವಾಮಿ ಅವರ ಅಕ್ಕನ ಮಗನ ಮದುವೆ ಮಾ.5- 6ರಂದು ಮೈಸೂರಿನ ರಾಜೇಂದ್ರ ಕಲಾಮಂದಿರದಲ್ಲಿ ನಡೆಯಲಿದೆ. ಇದಕ್ಕಾಗಿ ಸಹಸ್ರಾರು ಆಹ್ವಾನ ಪತ್ರಿಕೆಗಳನ್ನು ಮುದ್ರಿಸಿದ್ದಾರೆ. ಪ್ರತಿ ಗ್ರಾಮಗಳ ಅಂಗಡಿ, ಹೋಟೆಲ್‌ಗಳಲ್ಲಿ ಮದುವೆಯ ಕರೆಯೋಲೆಗಳನ್ನು ಇರಿಸಿದ್ದಾರೆ. ಅದರ ಜತೆ ಒಂದು ಪತ್ರ. ತಮ್ಮನ್ನು ಖುದ್ದಾಗಿ ಆಹ್ವಾನಿಸಲು ಸಾಧ್ಯವಾಗದ ಕಾರಣ, ಈ ಪತ್ರದ ಮೂಲಕ ಆಹ್ವಾನಿಸುತ್ತಿದ್ದು, ಇದನ್ನೇ ಖುದ್ದು ಆಹ್ವಾನ ಎಂದು ಮನ್ನಿಸಿ ಆಗಮಿಸಿ, ವಧುವರರನ್ನು ಆಶೀರ್ವದಿಸಬೇಕಾಗಿ ಕೋರುತ್ತೇನೆ. ತಮ್ಮ ಸೇವಾಕಾಂಕ್ಷಿ ಕಾ.ಪು. ಸಿದ್ದಲಿಂಗಸ್ವಾಮಿ ಎಂಬ ಒಕ್ಕಣೆ ಆ ಪತ್ರದಲ್ಲಿದೆ. ತಮ್ಮ ಬರುವಿಕೆಯೇ ನಮಗೆ ಉಡುಗೊರೆ ಎಂಬ ಸಾಲು ಕೊನೆಯಲ್ಲಿದೆ. ಇದನ್ನು ಜನ ತಪ್ಪಾಗಿ ಭಾವಿಸಿ, ಮದುವೆಗೆ ಹೋದವರಿಗೆಲ್ಲಾ ಉಡುಗೊರೆ ಎಂದು ಓದಿಕೊಂಡು ಅಂಗಡಿಗಳಲ್ಲಿ ಆಹ್ವಾನಪತ್ರಿಕೆ ಪಡೆಯಲು ಮುಗಿಬೀಳುತ್ತಿದ್ದಾರೆ. ರಾಜಕಾರಣಿಗಳು ಜನರನ್ನು ಅಷ್ಟರ ಮಟ್ಟಿಗೆ ಕೆಡಿಸಿಬಿಟ್ಟಿದ್ದಾರೆ.
ಒಳಗಿದ್ದ ಅತಿಥಿಗೆ ಹೊರಗೆ ಕಾದರು
ಮೈಸೂರಿನಲ್ಲಿ ಕಳೆದ ವಾರ ನಿರಂತರ ರಂಗ ಉತ್ಸವ ಆಯೋಜಿಸಲಾಗಿತ್ತು. ಉದ್ಘಾಟನಾ ಸಮಾರಂಭಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯುಕ್ತ ಕೆ.ಆರ್. ರಾಮಕೃಷ್ಣ ಮುಖ್ಯ ಅತಿಥಿಯಾಗಿ ಆಹ್ವಾನಿತರಾಗಿದ್ದರು. ಅವರನ್ನು ಜಾನಪದ ಕಲಾತಂಡಗಳೊಂದಿಗೆ ಮೆರಣಿಗೆಯಲ್ಲಿ ಕರೆತರಲು ಸಂಘಟಕರು ರಂಗಾಯಣದ ಹೊರಾವರಣದಲ್ಲಿ ಕಾಯುತ್ತಿದ್ದರು. ಪೂಜಾ ಕುಣಿತ, ತಮಟೆ, ನಗಾರಿಗಳ ಸದ್ದು ಕೇಳಿ ಬರುತ್ತಿತ್ತು. ಮುಖ್ಯ ಅತಿಥಿ ಎಷ್ಟು ಹೊತ್ತಾದರೂ ಬಾರದಿದ್ದಾಗ ಸಂಘಟಕರು ಮೊಬೈಲ್‌ಗೆ ಕರೆ ಮಾಡಿದರು. ಆಗ ರಾಮಕೃಷ್ಣ ಅವರು ನಾನಾಗಲೇ ಬಂದಿದ್ದೇನೆ. ಲಂಕೇಶ್ ಕಲಾ ಗ್ಯಾಲರಿಯನ್ನು ವೀಕ್ಷಿಸುತ್ತಿದ್ದೇನೆ ಎಂದಾಗ ಸಂಘಟಕರು ಸುಸ್ತು. ಮತ್ತೆ ಅವರನ್ನು ಹೊರಾವರಣಕ್ಕೆ ಕರೆತಂದು ಮೆರವಣಿಗೆಯಲ್ಲಿ ಕರೆದುಕೊಂಡು ಹೋಗಿ ಸಮಾಧಾನಪಟ್ಟುಕೊಂಡರು.
ಪಕ್ಷ ಸೇರ್ಪಡೆ, ಉಚ್ಚಾಟನೆ ಸುಂಟರಗಾಳಿ
ಪೂಜಾ ಗಾಂಧಿ ಪಕ್ಷದಿಂದ ಪಕ್ಷ ಸೇರ್ಪಡೆ ಕಾರ್ಯಕ್ರಮ ಸುಂಟರಗಾಳಿಯಂತೆ ಮಾಡುತ್ತಿದ್ದರೆ ಅವರಂತೆಯೇ ಮಂಗಳೂರಲ್ಲಿ ಒಬ್ಬರು ಕಾರ್ಪೊರೇಟರ್ ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿ ಕಾರ್ಪೊರೇಟರ್ ಆಗಿ ಮತ್ತೆ ಈ ಬಾರಿ ಬಿಜೆಪಿಯಲ್ಲಿ ಟಿಕೆಟ್ ಸಿಗಲಿಲ್ಲ ಎಂಬ ಕಾರಣಕ್ಕೆ ಮತ್ತೆ 4 ದಿನದ ಹಿಂದೆ ಕಾಂಗ್ರೆಸ್ ಸೇರಿದರು. ಆದರೆ ಕಾಂಗ್ರೆಸ್‌ನಿಂದಲೂ ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ. ಆದರೆ ಕಾಂಗ್ರೆಸ್ ವರಿಷ್ಠರು ದಯೆ ತೋರದೆ ಮರುಸೇರ್ಪಡೆಗೊಂಡ ನಾಲ್ಕೇ ದಿನದಲ್ಲಿ ಉಚ್ಚಾಟನೆ ಮಾಡಿಬಿಟ್ಟರು, ಸುಂಟರಗಾಳಿಯಂತೆ ಬಂದು ಹೋದರು!

ಸಿದ್ರಾಮಣ್ಣ ಫಿಟ್ನೆಸ್ ಅಲರ್ಟ್
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಇತ್ತೀಚೆಗೆ ಸಿಕ್ಕಾಪಟ್ಟೆ ಫಿಟ್‌ನೆಸ್ ಅಲರ್ಟ್ ಆಗಿದ್ದಾರೆ. ಆರೋಗ್ಯದ ಬಗ್ಗೆ ಕಾಳಜಿ ವಹಿಸುತ್ತಿದ್ದಾರೆ. ಇತ್ತೀಚೆಗೆ ಅವರ ಜಿಗರಿ ದೋಸ್ತ್ ಸತೀಶ ಜಾರಕಿಹೊಳಿ ತಮ್ಮ ಹೊಸ ಹೆಲಿಕಾಪ್ಟರ್ ತೋರಿಸಲು ಗೋಕಾಕ್‌ಗೆ ಕರೆದುಕೊಂಡು ಬಂದಿದ್ದರು. ಅವರ ಜೊತೆ ಅವರ ಏಕೈಕ ಕಾಯಂ ಸಂಗಾತಿ ಸಿ.ಎಂ. ಇಬ್ರಾಹಿಂ ಸಹ ಇದ್ರು. ಹೆಲಿಪ್ಯಾಡ್ ಪಕ್ಕದಲ್ಲೇ ಸತೀಶ ಜಾರಕಿಹೊಳಿ ಅವರ ಕ್ಲಬ್, ಅತ್ಯಾಧುನಿಕ ಜಿಮ್ ಇದೆ. ಜಿಮ್ ನೋಡಿದ್ದೇ ತಡ ಸಿದ್ರಾಮಣ್ಣ ಮತ್ತು ಇಬ್ರಾಹಿಂ ಪಂಚೆ ಮೇಲಕ್ಕೆತ್ತಿ ಕಟ್ಟಿ ಏರೋಫಿಟ್ ಏರಿ ಕಸರತ್ತು ಆರಂಭಿಸಿಯೇ ಬಿಟ್ಟರು. ಏಸಿ ಜಿಮ್‌ನಲ್ಲೂ ಕೆಲ ಸಮಯ ಕಸರತ್ತು ನಡೆಸಿ ಬೆವರಲಾರಂಭಿಸಿದರು. ಜಿಮ್‌ನ ವ್ಯವಸ್ಥೆ, ಅತ್ಯಾಧುನಿಕ ಸಲಕರಣೆಯನ್ನು ನೋಡಿ ಪುಳಕಿತಗೊಂಡ ಇಬ್ರಾಹಿಂ ತಮ್ಮ ನಾಯಕನಿಗೆ ಪುಕ್ಕಟೆ ಸಲಹೆಯನ್ನೂ ಕೊಟ್ಟೇ ಬಿಟ್ಟರು. ಸಿದ್ರಾಮಣ್ಣ ಇನ್ನೇನು ಇಲೆಕ್ಷನ್ ಬರತ್ತೈತೆ. ಬಿಸಿಲುಗಾಲ ಬೇರೆ. ದಿನವಿಡಿ ಪ್ರಚಾರ, ಪಾದಯಾತ್ರೆ ಮಾಡಬೇಕಾಗುತ್ತೆ. ಈಗಲೇ ಬಳ್ಳಾರಿ ಪಾದಯಾತ್ರೆ, ಕೂಡಲಸಂಗಮ ಯಾತ್ರೆ, ಹಳ್ಳಿನಡಿಗೆ ಎಲ್ಲ ಮಾಡಿ ದಣಿದಿದ್ದೀರಿ. ಇನ್ನು ಎಲೆಕ್ಷನ್‌ದಾಗೆ ಪ್ರತಿದಿನ ಪಾದಯಾತ್ರೆ, ಯಾತ್ರೆ ಮಾಡಬೇಕು. ಅದ್ರಲ್ಲೂ ನೀವು ಡಯಾಬಿಟಿಸ್ ಪೇಷೆಂಟ್ ಬೇರೆ. ಫಿಟ್‌ನೆಸ್, ಆರೋಗ್ಯ ಕಾಪಾಡಿಕೊಳ್ಲೆಬೇಕು. ಉತ್ತರ ಕರ್ನಾಟಕಕ್ಕೆ ಬಂದಾಗ ಗೋಕಾಕ್‌ದಲ್ಲೇ ಕ್ಯಾಂಪ್ ಹಾಕಿ. ಇಲ್ಲೇ ಜಿಮ್‌ನಲ್ಲಿ ಕಸರತ್ತು ಮಾಡ್ಕೊಂಡು ಆರೋಗ್ಯ ನೋಡ್ಕೋಬಹುದು. ಮುಂದೆ ಸಿಎಂ ಆಗೋ ಕ್ಯಾಂಡಿಡೇಟ್ ನೀವು. ಆರೋಗ್ಯ ನಿರ್ಲಕ್ಷಿಸಬಾರ್ದು ಎಂದೇ ಬಿಟ್ಟರು. ಇಬ್ರಾಹಿಂ ಹಾಸ್ಯ ಚಟಾಕಿಗೆ ಗಂಭೀರ ವದನರಾಗಿದ್ದ ಸಿದ್ರಾಮಣ್ಣನ ಕುರುಚಲು ಗಡ್ಡದ ಮುಖಾರವಿಂದದಲ್ಲೂ ಮುಗುಳ್ನಗೆ ಅರಳಿತ್ತು!

-ನಂಬಿರಾಜ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.