ಅಂಕಣಗಳು

ಅಂದ ಹಾಗೆ, ಶೆಟ್ಟರ್ ಅಂಗಡಿಯಲ್ಲಿ ಏನೇನು ಸಿಗುತ್ತೆ...?

ರಾಜಕೀಯ ತಿರುಗಣಿ ಆಟದಲ್ಲಿ ಬಿಜೆಪಿ ಸರ್ಕಾರದ ಮೂರನೇ ಮುಖ್ಯಮಂತ್ರಿಯಾಗಿ...

Published On :

ರಾಜಕೀಯ ತಿರುಗಣಿ ಆಟದಲ್ಲಿ ಬಿಜೆಪಿ ಸರ್ಕಾರದ ಮೂರನೇ ಮುಖ್ಯಮಂತ್ರಿಯಾಗಿ ಜಗದೀಶ್ ಶೆಟ್ಟರ್ ಅಧಿಕಾರ ಸ್ವೀಕರಿಸಿದಾಗ 'ಕನ್ನಡಪ್ರಭ' ಮುಖಪುಟದಲ್ಲಿ 'ಶೆಟ್ರ ಅಂಗಡಿ ಓಪನ್ ' ಎಂಬ ಶೀರ್ಷಿಕೆ ಅಡಿ ವರದಿ ಪ್ರಕಟಿಸಿದಾಗ ಹಲವು ಆಕ್ಷೇಪಗಳು ಬಂದಿದ್ದವು. ರಾಜ್ಯಾಡಳಿತ ಚುಕ್ಕಾಣಿ ಹಿಡಿದು ಅಧಿಕಾರ ನಡೆಸುವ ಮುಖ್ಯಮಂತ್ರಿ ಪ್ರಮಾಣ ವಚನ ಸ್ವೀಕರಿಸಿದ ಗಂಭೀರ ಕ್ಷಣವನ್ನು ದಿನಸಿ ಅಂಗಡಿ ವ್ಯಾಪಾರದ ಮಟ್ಟಕ್ಕೆ ಇಳಿಸಿದ್ದೀರಲ್ಲ, ಶೆಟ್ಟರ್ ಏನು ಅಂಗಡಿ ಇಟ್ಟುಕೊಂಡಿದ್ದಾರೆಯೇ ? ಎಂಬ ಟೀಕೆ ವ್ಯಕ್ತವಾಗಿತ್ತು. ಅಂದು ಆ ಶೀರ್ಷಿಕೆ ನೀಡುವಾಗ ಅಪ 'ಅರ್ಥ' ತರುವ ಉದ್ದೇಶವಂತೂ ಇರಲಿಲ್ಲ. ಆದರೆ ತಮ್ಮ ಅಧಿಕಾರಾವಧಿ ಮುಗಿಸುವ ಹೊತ್ತಿಗೆ ಶೆಟ್ಟರ್ ನಿಜಕ್ಕೂ ವಿಧಾನಸೌಧದಲ್ಲಿ ಅಂಗಡಿ ತೆರೆದು ವ್ಯಾಪಾರ ಆರಂಭಿಸಿದ್ದಾರೆ ಎಂದೇ ಜನ ಮಾತನಾಡುತ್ತಿದ್ದಾರೆ!
ಹಾಗೆ ನೋಡಿದರೆ, ಜಗದೀಶ್ ಶೆಟ್ಟರ್ ಮುಖ್ಯಮಂತ್ರಿಯಾದಾಗ ಜನರು ಹುಬ್ಬೇರಿಸಿದ್ದರು. ಅವರ ಕಣ್ಣುಗಳಲ್ಲಿ ಮಿಂಚು ಮೂಡಲಿಲ್ಲ. ಯಾವ ಮರದ ಎಲೆಗಳೂ ಅಲುಗಾಡಲಿಲ್ಲ. ಹಣ್ಣು ತೂಗಾಡಲಿಲ್ಲ. ಹಾಗೆ ನೋಡಿದರೆ ಶೆಟ್ಟರ್ ಈ ರಾಜ್ಯದ ಮುಖ್ಯಮಂತ್ರಿಯಾದರು ಎಂದಾಗ ಬೆರಗು ಮತ್ತು ಬೆಡಗು ಎರಡೂ ಇರಲಿಲ್ಲ. ರಾಜಕೀಯ ಚದುರಂಗದಾಟದಲ್ಲಿ ಅವರು 'ಬೈ ಚಾನ್ಸ್ ' ಸಿಎಂ ಆಗಿಬಿಟ್ಟರು.
ಮುಖ್ಯಮಂತ್ರಿಯಾಗುವುದಕ್ಕೆ ಮುನ್ನ ಶೆಟ್ಟರ್ ಅವರನ್ನು ಯಾರೂ ಗಂಭೀರವಾಗಿ ಪರಿಗಣಿಸಿರಲಿಲ್ಲ. 'ಈಗಲೂ ಇಲ್ಲ' ಎಂಬುದು ಬೇರೆ ಮಾತು. ಅವರನ್ನು ಯಾರೂ ನಾಯಕರೆಂದು ಪರಿಗಣಿಸಿರಲಿಲ್ಲ. ರಾಜ್ಯದ ಸಮಸ್ತ ಪ್ರಜಾ ವರ್ಗದ ಮಾತು ಬಿಡಿ, ಉತ್ತರ ಕರ್ನಾಟಕ ಭಾಗದಲ್ಲೇ ಅವರನ್ನು ನಾಯಕರೆಂದು ಒಪ್ಪಿಕೊಂಡವರ ಸಂಖ್ಯೆ ಮೂರು-ಮತ್ತೊಂದು. ಎಲ್ಲಕ್ಕಿಂತ ಹೆಚ್ಚಾಗಿ ಸ್ವತಃ ಶೆಟ್ಟರ್‌ಗೆ ತಾನೊಬ್ಬ ಮುಖ್ಯಮಂತ್ರಿ ಮೆಟೀರಿಯಲ್ ಎಂದು ಅನಿಸಿರಲಿಲ್ಲ. ಆರಂಭದ ದಿವಸಗಳಲ್ಲಂತೂ ತಾನು ಈ ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದು ನಿಜವೇ ? ಎಂಬ ಅನುಮಾನದಲ್ಲೇ ಅವರು ತಿರುಗಾಡುತ್ತಿದ್ದರು. ತಮ್ಮ ಮನೆ ಅಂಗಳದಲ್ಲಿರುವ ಹೂವಿನ ಗಿಡಗಳ ಎಲೆ ಅಲ್ಲಾಡುವುದಕ್ಕೂ ಯಡಿಯೂರಪ್ಪನವರ ಅನುಮತಿ ಇದ್ದರೆ ಚೆನ್ನ ಎಂಬಂತೆ ವರ್ತಿಸುತ್ತಿದ್ದ ಅವರ ನಡೆ-ನುಡಿ 'ಅಪೌಷ್ಠಿಕತೆಯಿಂದ ನರಳುವ ಮಕ್ಕಳಂತೆ ' ಇತ್ತು. ಹೀಗಾಗಿ ಶೆಟ್ಟರ್ ಮುಖ್ಯಮಂತ್ರಿಯಾಗಿದ್ದು ಅಡ್ಡೇಟಿನ ಮೇಲೆ ಗುದ್ದೇಟು ಎಂದು ಜನ ವ್ಯಾಖ್ಯಾನಿಸಿದ್ದರು.
ಉಳಿದವರ ಮಾತು ಒತ್ತಟ್ಟಿಗಿರಲಿ, ಮುಖ್ಯಮಂತ್ರಿ ಪೀಠದ ಮೇಲೆ ಕುಳಿತ ಶೆಟ್ಟರ್ ಮಾತುಗಳನ್ನು ಆಡಳಿತ ಪಕ್ಷದವರೇ ಸೀರಿಯಸ್ ಆಗಿ ತೆಗೆದುಕೊಳ್ಳಲಿಲ್ಲ. ಸಂಪುಟದ ಕೆಲ ಹಿರಿಯ ಸಹೋದ್ಯೋಗಿಗಳಂತೂ ಕ್ಯಾರೇ ಇಲ್ಲದವರಂತೆ ವರ್ತಿಸಿದರು. ಇನ್ನು ಕೆಲವರಂತೂ ಶೆಟ್ಟರ್ ನಮ್ಮ ಮಾತುಗಳನ್ನು ಮಾತ್ರ ಕೇಳಿಕೊಂಡು ಇದ್ದರೆ ಸಾಕು ಎಂದು ಪಳಗಿಸುವ ಪ್ರಯತ್ನ ನಡೆಸಿದರು. ಆಡಳಿತ ಪಕ್ಷದವರೇ ಮುಖ್ಯಮಂತ್ರಿಯವರಿಗೆ ಇಂಥ'ಗೌರವ' ನೀಡಿದರೆ ಇನ್ನು ಪ್ರತಿಪಕ್ಷದವರಿಂದ ಇನ್ನೆಂಥಾ ಆರಾಧನೆ, ದೂಪ-ದೀಪಾರ್ಚನೆಯ ಮರ್ಯಾದೆ ಸಿಗಬಹುದು ಹೇಳಿ ? ಶೆಟ್ಟರ್ ಸ್ಥಿತಿ ಹಾಗಿತ್ತು.ಕ್ರಿಕೆಟ್ ಮೈದಾನದಲ್ಲಿ 9ನೇ ಆಟಗಾರ ಬ್ಯಾಟ್ ಹಿಡಿದು ಆಟದ ಕಣಕ್ಕೆ ಬಂದಾಗ ವೇಗದ ಬೌಲರ್‌ಗಳೂ ವಿಧಿ ಇಲ್ಲದೇ ಉತ್ಸಾಹ ಕಳೆದುಕೊಳ್ಳುತ್ತಾರೆ. ಕ್ಷೇತ್ರ ರಕ್ಷಕರೂ ನಿರುತ್ಸಾಹದಲ್ಲಿ ಕೈ ಚೆಲ್ಲಿರುತ್ತಾರೆ. ಈ ಬಾಲಂಗೋಚಿ ಏನು ಮಾಡಿಯಾನು ? ಎಂಬ ವಾತಾವರಣ ಫೀಲ್ಡ್‌ನಲ್ಲಿ ತೇಲುತ್ತಿರುತ್ತದೆ. ಬೀಸಿದ ಬ್ಯಾಟ್ ಅಪ್ಪಿತಪ್ಪಿ ಚೆಂಡಿಗೆ ತಗುಲಿದರೆ ನಾಲ್ಕು ರನ್ ಬರಬಹುದೇ ಹೊರತು ಅವರೊಬ್ಬ ಉತ್ತಮ ಬ್ಯಾಟ್ಸ್‌ಮನ್ ಎಂದು ಯಾರೂ ತಲೆಕೆಡಿಸಿಕೊಳ್ಳುವುದಿಲ್ಲ. ನಮ್ಮ ಜಗದೀಶ್ ಶೆಟ್ಟರ್ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದಾಗ ಆಡಳಿತ-ಪ್ರತಿಪಕ್ಷದವರ ಮನಸ್ಥಿತಿ ಇದೇ ರೀತಿ ಇತ್ತು.
ಆದರೆ ದಿನಗಳು ಓಡುತ್ತಿವೆ. ಬಿಜೆಪಿ ಸರ್ಕಾರ ಈ ರಾಜ್ಯಕ್ಕೆ ತನ್ನ ಅಧಿಕಾರಾವಧಿಯಲ್ಲಿ ಮೂರು ಮುಖ್ಯಮಂತ್ರಿಗಳನ್ನು ಕೊಟ್ಟಿದ್ದೇ ದುರಂತ ಮತ್ತು ಸಾಧನೆ. ಆಕಸ್ಮಿಕವಾಗಿ ಮುಖ್ಯಮಂತ್ರಿಯಾದ ಶೆಟ್ಟರ್ ಅವರ ಅಧಿಕಾರಾವಧಿಯೂ ಮುಗಿಯುತ್ತಾ ಬಂದಿದೆ. ಆದರೆ ಕಾಲದ ವೇಗವನ್ನು ಮೀರಿಸುವ ಹಪಾಹಪಿಕೆ ಹಾಗೂ ಆಸೆಬುರುಕತನ ಅವರನ್ನು ಆವರಿಸಿಬಿಟ್ಟಿದೆ. ನೋಡ ನೋಡುತ್ತಿದ್ದಂತಯೇ ಶೆಟ್ಟರ್ ಅಂಗಡಿ ಓಪನ್ ಮಾಡಿಯೇ ಬಿಟ್ಟಿದ್ದಾರೆ. ಲೋಕೋಪಯೋಗಿ, ಅರಣ್ಯ, ಹಣಕಾಸು, ಸೇರಿದಂತೆ ಶೆಟ್ಟರ್ ಅಂಗಡಿಯಲ್ಲಿ ಬಂಬಾಟ್ ಐಟಂಗಳೇ ಇವೆ. ಎಲ್ಲವೂ ಕಾಸ್ಟ್ಲಿ ಹಾಗೂ ಭಾರಿ ಬೇಡಿಕೆ ಇರುವ ಸರಕುಗಳೇ ! ಜಗದೀಶ್ ಪ್ರಾವಿಜನ್ ಸ್ಟೋರ್‌ನಲ್ಲಿ ಯಾವುದೇ ಇಲಾಖೆ ಕೆಲಸ ಆಗಬೇಕಿದ್ದರೂ, ಕಡತ ಮುಂದೆ ಹೋಗಬೇಕಿದ್ದರೂ ಕಾಂಚಾಣ ಕುಣಿಯಲೇಬೇಕು. ಕಾಸಿಲ್ಲದೇ ಕೆಲಸವಿಲ್ಲ. ಹೀಗಾಗಿ ಶೆಟ್ಟರ್ ಅಂಗಡಿ ಮುಂದೆ 'ಪುಗ್ಸಟ್ಟೆ ಕೆಲಸ ಸಂಬಂಧ ನಷ್ಟ ' ಎಂದು ಬೋರ್ಡ್ ನೇತು ಹಾಕುವ ಸ್ಥಿತಿ ನಿರ್ಮಾಣವಾಗಿದೆ.
ಶೆಟ್ಟರ್  ಶಕ್ತಿಭವನದಲ್ಲಿ ಕುಳಿತರೆಂದರೆ 'ಮೌಲ್ಯಾಧಾರಿತ' ಕಡತಗಳ ವಿಲೇವಾರಿ ಭರದಿಂದ ಸಾಗಿದೆ ಎಂದೇ ಅರ್ಥ. ಇಲ್ಲಿ ಕ್ಷಣಕ್ಷಣವೂ ಅಮೂಲ್ಯ. ಇದೇನಾಪ್ಪ ಕೊನೆ ಕಾಲಕ್ಕೆ ಶೆಟ್ಟರ್‌ಗೆ ಇಷ್ಟೊಂದು ಜನಪರ ಕಾಳಜಿ. ನಾಡಿನ ಏಳಿಗೆಯ ಚಿಂತೆ. ಭಲೇ ಭಲೇ ಒಬ್ಬರಾದರೂ ಇದ್ದಾರಲ್ಲ ಎಂದು ತಲೆದೂಗುವುದು ಬೇಕಿಲ್ಲ. ಏಕೆಂದರೆ ಇಲ್ಲಿ ವಿಲೇವಾರಿಯಾಗುವುದು ಭಾರಿ ಬೆಲೆಯ ಕಡತಗಳು, ಯೋಜನಾ ಗುತ್ತಿಗೆಗಳ ದಾಖಲೆಗಳು ಮಾತ್ರ.ಇರುವಷ್ಟು ದಿನದಲ್ಲಿ ಅಷ್ಟೂ ಕಡತಗಳಿಗೆ ಸಹಿ 'ಹೊಡೆದು' ಬಿಡಬೇಕು ಎಂಬ ಗಡಿಬಿಡಿಯಲ್ಲಿ ಶೆಟ್ಟರ್ ಮುಳುಗಿದ್ದಾರೆ. ಯಾವುದೇ ಕಡತದ ಮೇಲೆ ತಮ್ಮ ಅಮೂಲ್ಯ ಹಸ್ತಾಕ್ಷರ ಬಿತ್ತು ಎಂದರೆ ಎಷ್ಟು ಬಂತು ಎಂಬ ಎಣಿಕೆ ಕಾರ್ಯದಲ್ಲಿ ಅವರು ತಲ್ಲೀನರಾಗಿದ್ದಾರೆ.
ಹಾಗಂಥ ಶೆಟ್ಟರೇನು ದೊಡ್ಡಮಟ್ಟದಲ್ಲಿ ವ್ಯವಹಾರ ನಡೆಸುತ್ತಿಲ್ಲ. ಅವರದ್ದೇನಿದ್ದರೂ 'ಕಿರುಕುಳ ವ್ಯಾಪಾರ'. ದೊಡ್ಡದ್ದಕ್ಕೆ ಕೈ ಹಾಕುವ ಮನಸು, ಆಸೆ, ಅವಕಾಶ ಎಲ್ಲವೂ ಇದೆ. ಆದರೆ ಆ ರೀತಿ ಯೋಚಿಸಿದಾಗಲೆಲ್ಲ ಅವರಿಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೆನಪಿಗೆ ಬರುತ್ತಾರೆ. ಭಾರಿ ಸಾಹಸಕ್ಕೆ ಕೈ ಹಾಕಿ ಅವರು 'ಎಲ್ಲೆಲ್ಲಿ' ಹೋಗಿ ಬಂದರು, ಎಷ್ಟು ದಿನ ರಾಜಾತಿತ್ಯ ಅನುಭವಿಸಿದರು ಎಂಬ ಚಿತ್ರಣ ಸ್ಮೃತಿಪಟಲದಲ್ಲಿ ಅಚ್ಚೊತ್ತಿದೆ. ಅಷ್ಟರಮಟ್ಟಿಗೆ ಜಾಗೃತರಾಗಿ ಅಂಗಡಿ ವ್ಯವಹಾರ ನೋಡಿಕೊಳ್ಳುತ್ತಿದ್ದಾರೆ. ಇನ್ನು ಈ ಅಂಗಡಿಗೆ ಶೆಟ್ಟರ್ ಸದ್ಯಕ್ಕೆ ಮಾಲೀಕರಾದರೂ ಆಗಾಗ ಗಲ್ಲಾ ಪೆಟ್ಟಿಗೆ ಮೇಲೆ ಕುಳಿತುಕೊಳ್ಳುವ ಮ್ಯಾನೇಜರ್ ಬದಲಾಗುತ್ತಾರೆ. ಧವಳೇಶ್ವರ, ತೋರಗಲ್, ಶಂಕರ ಪಾಟೀಲ್ ಮುನೇನಕೊಪ್ಪ, ಪ್ರದೀಪ್ ಶೆಟ್ಟರ್, ಶಿಲ್ಪಾ ಶೆಟ್ಟರ್ ಆಗಾಗ ಕಾಲಮಿತಿ ಪ್ರಯೋಗದಲ್ಲಿ ತಮ್ಮ ವ್ಯವಹಾರ ಜ್ಞಾನ ಪ್ರದರ್ಶಿಸಿ ಭೇಷ್ ಎನಿಸಿಕೊಳ್ಳುತ್ತಿದ್ದಾರೆ. ಇವರೆಲ್ಲರೂ ಶೆಟ್ಟರ್ ಅಂಗಡಿಯ ತೂಕದ ಕಲ್ಲುಗಳು. ತಕ್ಕಡಿಯ ಇನ್ನೊಂದು ಬದಿಯಲ್ಲಿಟ್ಟ 'ದ್ರವ್ಯ'ದ ಆಧಾರದ ಮೇಲೆ ಈ ಕಲ್ಲುಗಳ 'ಪರಿಮಾಣ' ನಿಗದಿಯಾಗುತ್ತದೆ. ಆದರೆ ಒಂದು ಇಲ್ಲಿ ಚೌಕಾಶಿಗಂತೂ ಅವಕಾಶ ಇಲ್ಲ. ಉದ್ರಿ ಮಾತು ನಡೆಯುವುದೇ ಇಲ್ಲ. ಚೆಕಾ 'ಚೆಕ್‌' ವ್ಯವಹಾರ.
ಇಲ್ಲಿ ಇನ್ನೊಂದು ಬಹುಮುಖ್ಯ ಸಂಗತಿಯನ್ನು ಗಮಿನಿಸಲೇಬೇಕು. ಯಾವುದೇ ಒಂದು ಚುನಾಯಿತ ಸರ್ಕಾರಕ್ಕೆ ತನ್ನ ಅಧಿಕಾರಾವಧಿಯನ್ನು ಮುಕ್ತಾಯಗೊಳಿಸುವ ಕೊನೆಯ ಗಳಿಗೆ ತುಂಬಾ ಅಮೂಲ್ಯ. ಅಧಿಕಾರದಲ್ಲಿ ಕುಳಿತ ಪ್ರತಿಯೊಬ್ಬರು ಈ ಸಮಯದಲ್ಲಿ  ವೈಯಕ್ತಿಕವಾಗಿ ಮತ್ತು ಸಾಂಘಿಕವಾಗಿ 'ದುಡಿಯುವುದು' ಒಂದು ಪರಿಪಾಠವಾಗಿಬಿಟ್ಟಿದೆ. ಕೊನೆಯ ಹಂತದಲ್ಲಿ ಇವರೆಲ್ಲ ಹಗಲು ರಾತ್ರಿ ಶ್ರಮವಹಿಸಿ ಕೆಲಸ ಮಾಡುವುದು ರಾಜ್ಯ ಕಲ್ಯಾಣಕ್ಕೂ ಅಲ್ಲ, ಜನತೆಯ ಹಿತಕ್ಕೂ ಅಲ್ಲ. ಇದು ಹಿಂದೆಯೂ ಆಗಿದೆ. ಎಚ್.ಡಿ.ಕುಮಾರಸ್ವಾಮಿ ಬಿಜೆಪಿಗೆ ಅಧಿಕಾರ ಹಸ್ತಾಂತರಿಸುವ ಪ್ರಶ್ನೆ ಬಂದಾಗ, ಬಿ.ಎಸ್.ಯಡಿಯೂರಪ್ಪ, ಡಿ.ವಿ.ಸದಾನಂದಗೌಡ ಅವರು ಅಧಿಕಾರವನ್ನು ಬಿಟ್ಟು ಇಳಿಯುವಾಗ ಇಂಥದ್ದೇ ಪರಿಸ್ಥಿತಿ ನಿರ್ಮಾಣವಾಗಿತ್ತು. ಅದೆಲ್ಲದಕ್ಕೂ ಒಂದು ಇತಿಮಿತಿ ಎಂಬುದು ಇತ್ತು. ಆದರೆ ಶೆಟ್ಟರ್ ಆ ಎಲ್ಲ ಸಂದರ್ಭವನ್ನು ಮೀರಿ ಮುನ್ನುಗ್ಗುತ್ತಿದ್ದಾರೆ. ಕಳೆದು ಹೋಗುತ್ತಿರುವ ಅಧಿಕಾರಾವಧಿಯ ವೇಗವನ್ನೂ ಹಿಮ್ಮೆಟ್ಟಿಸಿ ಅವರ ಆಸೆ ಮತ್ತು ಅಭೀಪ್ಸೆ ಕೆಲಸ ಮಾಡುತ್ತಿದೆ. ಹೀಗಾಗಿ ಅವರು ಸದಾ ಕ್ರಿಯಾಶೀಲರು. ಅದರಲ್ಲಿಯೂ ವಿಶೇಷವಾಗಿ ಮಾರ್ಚ್ ತಿಂಗಳ ಅಂತ್ಯಕ್ಕೆ ನಾನಾ ಇಲಾಖೆಗಳಿಗೆ ಬಟವಾಡೆ ಮಾಡಬೇಕಾದ ಯೋಜನಾ ಗಾತ್ರವೇ ಅವರ ಕಣ್ಣಮುಂದೆ ಕುಣಿದಾಡುತ್ತಿದೆ. ಎಲ್ಲವನ್ನೂ ಅವರು ಸ್ವಾರ್ಥ ಹಾಗೂ ರಾಜಕೀಯ ಲಾಭದ ದೃಷ್ಟಿಯಿಂದಲೇ ನೋಡುತ್ತಿದ್ದಾರೆ. ಈಗಂತೂ ಸ್ಥಳೀಯ ಸಂಸ್ಥೆಗಳ ಚುನಾವಣೆಯ ನೀತಿ ಸಂಹಿತೆ ಜಾರಿಯಲ್ಲಿದೆ. ಅದು ಮುಗಿದ ತಕ್ಷಣ ರಾಜ್ಯ ವಿಧಾನಸಭೆ ಚುನಾವಣೆಯ ಪಂಚಾಂಗ ಓದಲಾಗುತ್ತದೆ. ಹೀಗಾಗಿ ಮತ್ತೆ ಏನೇನೋ ತೊಡಕು ಎದುರಾಗಬಹುದು. ಹೀಗಾಗಿ ಯಾವ ಜಿಲ್ಲೆಗೆ ಯಾವ ಯೋಜನೆ ನೀಡಿದರೆ ತಮಗೆಷ್ಟು ಅನುಕೂಲ ? ಯಾರಿಗೆ ಯಾವ ಪ್ರಾಜೆಕ್ಟ್ ಕೊಡುವುದರಿಂದ ಸಾಧನೆಯಾಗಬಹುದು ತಮ್ಮ ಯೋಗಕ್ಷೇವು ? ಎಂಬ ಕಠಿಣ ಲೆಕ್ಕ ಬಿಡಿಸುವುದಕ್ಕೆ ಶೆಟ್ಟರ್ ಎಲ್ಲಿಲ್ಲದ ಆದ್ಯತೆ ನೀಡುತ್ತಿದ್ದಾರೆ. ಸಾಮಾನ್ಯವಾಗಿ ಮಾರ್ಚ್ ಅಂತ್ಯ ಎಂದರೆ ಐಎಎಸ್ ಅಧಿಕಾರಿಗಳ ಪಾಲಿಗೆ ಸುಗ್ಗಿ ಕಾಲ ಎಂದೇ ಪ್ರತೀತಿ. ಈಗ ರಾಜ್ಯಾಡಳಿತದ ಮುಖ್ಯಸ್ಥರೇ ಅವರ ಜತೆ ಕೈ ಜೋಡಿಸುತ್ತಿದ್ದಾರೆ. ಇದು ಓಡಿ ಹೋಗಲು ಸಿದ್ದರಾದವರನ್ನು ದೂಡಿ ಬಿಟ್ಟಂತಾಗಿದೆ. ಅಷ್ಟು ಮಾತ್ರವಲ್ಲ ತಾವು ಭವಿಷ್ಯದಲ್ಲಿ ಮುಖ್ಯಮಂತ್ರಿಯಾಗುವುದಿಲ್ಲ ಎಂಬ ದೃಢ ವಿಶ್ವಾಸ ಹೊಂದಿರುವ ಶೆಟ್ಟರ್ ಈ ಅವಧಿಯಲ್ಲೇ ಎಲ್ಲವನ್ನು ಪೂರೈಸಿಕೊಳ್ಳುವ ಯುದ್ಧೋನ್ಮಾದ ಪ್ರಕಟಿಸುತ್ತಿದ್ದಾರೆ. ಹೀಗಾಗಿ ಅವರಿಗೆ ಕಳೆದ ಎರಡು ವರ್ಷಗಳ ಭೀಕರ ಬರದಿಂದ ಕಂಗೆಟ್ಟ ಪ್ರಜೆಗಳಾಗಲಿ, ಕಾವೇರಿ ಐತೀರ್ಪಿನ ಅಧಿಸೂಚನೆಯಿಂದ ಮೈಸೂರು ಪ್ರಾಂತ್ಯದ ರೈತರ ಮೇಲಾಗುವ ದುಷ್ಪರಿಣಾಮಗಳಾಗಲಿ ಅರ್ಥವಾಗುವುದಿಲ್ಲ.
ಹೀಗಾಗಿ ಲಾಭ ಕೊಡುವ ಯಾವುದೇ ಪ್ರಸ್ತಾಪಗಳು ಶೆಟ್ಟರ್ ಮುಂದೆ ಬಂದಾಗ 'ಬಾಳ್ ಚಲೋ ಇದೇರಿ ಪ್ಲ್ಯಾನ್‌' ಎಂಬ ಶಹಬ್ಬಾಸ್‌ಗಿರಿಯೊಡನೆ ವ್ಯಾಪಾರ ಶುರುವಾಗುತ್ತಿದೆ. ಇದಕ್ಕೆ ಇತ್ತೀಚಿನ ಉದಾಹರಣೆ ಎಂದರೆ ಬೆಂಗಳೂರು ಅರಮನೆ ಮೈದಾನದ ಹಂಚಿಕೆ ವಿಚಾರ. ನಗರದ ಹೃದಯ ಭಾಗದಲ್ಲಿರುವ ವಿವಾದಿತ 452 ಎಕರೆ ಜಮೀನಿನ ಇಂದಿನ ಮಾರುಕಟ್ಟೆ ಮೌಲ್ಯ ರು. 32 ಸಾವಿರ ಕೋಟಿಗೂ ಅಧಿಕ. ಸಾರ್ವಜನಿಕ ಹಿತದೃಷ್ಟಿಯಿಂದ ಇದನ್ನು ಸರ್ಕಾರ ತಮ್ಮ ವಶಕ್ಕೆ ತೆಗೆದುಕೊಂಡಿತ್ತು. ಆದರೆ ಕೆಲ ರಿಯಲ್ ಎಸ್ಟೇಟ್ ಉದ್ಯಮಿಗಳು ರಾಜವಂಶಸ್ಥರ ಜತೆಯಾಗಿ ತಂದ ಒಪ್ಪಂದಕ್ಕೆ ಹಿಂದೆಮುಂದೆ ನೋಡದೆ ಅಂಗೀಕಾರ ನೀಡುವಂಥ ಧಾವಂತ ಶೆಟ್ಟರ್‌ರನ್ನು ಆವರಿಸಿದೆ. ಸರ್ಕಾರಿ ಮಟ್ಟದಲ್ಲಿ ನಡೆಯುತ್ತಿರುವ ಹಲವು ಯೋಜನೆಗಳ ಜಾರಿಯಲ್ಲಿ ಶೆಟ್ಟರ್ ಇದೆ ಆತುರ ಮತ್ತು ಆಸಕ್ತಿ ತೋರುತ್ತಿದ್ದಾರೆ. ಏಕೆಂದರೆ ಅಂಗಡಿ ಶೆಟ್ಟರ್ ಅವರ ಹೆಸರಿನಲ್ಲಿ ನೋಂದಾಯಿಸಲ್ಪಟ್ಟಿದ್ದರೂ, ಇಟ್ಟಿರುವ ಜಾಗ ರಾಜ್ಯದ ಜನತೆ ಚಲಾಯಿಸಿದ ಮತದಿಂದ ಸೃಷ್ಟಿಯಾದ ಜಾಗದಲ್ಲಿ ಭೋಗ್ಯ ಪಡೆದಿದ್ದು. ಭೋಗ್ಯದ ಅವಧಿ ಮುಗಿಯುವುದಕ್ಕೆ ಕ್ಷಣಗಣನೆ ಶುರುವಾಗಿರುವುದರಿಂದ ಭೋಗದ ಆಸೆಯೂ ನೂರ್ಮಡಿಗೊಳ್ಳುತ್ತಿದೆ. ಜನರ ನಿರೀಕ್ಷೆ ಪಾತಾಳಕ್ಕೆ ಇಳಿಯುತ್ತಿದೆ.
ಲಗೋರಿ: ಯಾರೇ ಮುಖ್ಯಮಂತ್ರಿಯಾದರೂ ಹಿಂದಿನವರೇ ವಾಸಿ ಅನ್ನಿಸುವುದು ಕರ್ನಾಟಕದ ದೌರ್ಭಾಗ್ಯ.

- ಪಿ. ತ್ಯಾಗರಾಜ್
thyagarjun@gmail.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.