ತಾಳಿಕೆಯೇ ಪ್ರೇಮದ ನಿಜ ಮೊಹರು
ಅವನೂ, ಅವಳೂ ಹೈಸ್ಕೂಲ್‌ನಲ್ಲಿ ಇದ್ದಾಗಿಂದಲೂ ಬೆಸ್ಟ್ ಫ್ರೆಂಡ್ಸ್. ಆದರೆ...
ಅವನೂ, ಅವಳೂ ಹೈಸ್ಕೂಲ್‌ನಲ್ಲಿ ಇದ್ದಾಗಿಂದಲೂ ಬೆಸ್ಟ್ ಫ್ರೆಂಡ್ಸ್. ಆದರೆ ಅವರು ಲವರ್ಸ್ ಆಗಿರಲಿಲ್ಲ. ಕಾರಣ, ಅವಳಿಗೆ ಬೇರೊಬ್ಬ ಬಾಯ್‌ಫ್ರೆಂಡ್ ಇದ್ದ. ಇವನಿಗೂ ಸಂಬಂಧಿಕರ ಹುಡುಗಿಯೇ ಗರ್ಲ್ ಫ್ರೆಂಡ್ ಆಗಿದ್ದಳು. ತಮ್ಮ ಮನಮೆಚ್ಚಿದವರು ಹೇಗೆಲ್ಲಾ ವರ್ತಿಸುತ್ತಾರೆ ಎಂಬುದನ್ನು ಪರಸ್ಪರರಿಗೆ ಹೇಳಿಕೊಂಡು ಇವರಿಬ್ಬರೂ ಎಂಜಾಯ್ ಮಾಡುತ್ತಿದ್ದರು.
ಮುಂದೆ ಹೈಸ್ಕೂಲು ಮುಗಿಯಿತು. ಕಾಲೇಜಿನ ಮೆಟ್ಟಿಲು ಹತ್ತಿಳಿಯುತ್ತಿದ್ದಂತೆ ಡಿಗ್ರಿ ಕೂಡ ಆಯಿತು. ಆಗಲೂ ಇಬ್ಬರ ಮಧ್ಯೆ ಇದ್ದದ್ದು ಪವಿತ್ರ ಸ್ನೇಹವೇ. ನಂತರ ಉದ್ಯೋಗದ ನಿಮಿತ್ತ ಅವನು ಬೇರೊಂದು ನಗರಕ್ಕೆ ಹೋದ. ಹೀಗೇ ಐದು ವರ್ಷ ಕಳೆದವು. ಅದೊಂದು ದಿನ ಅವನ ವಿಳಾಸ ಹೊತ್ತಿದ್ದ ಪತ್ರವೊಂದು ರಿಜಿಸ್ಟರ್ಡ್ ಅಂಚೆಯಲ್ಲಿ ಬಂತು. ಈಕೆ ಸಡಗರದಿಂದ ಪತ್ರ ನೋಡಿದಳು. ಅದು ಅವನ- ಮದುವೆಯ ಮಮತೆಯ ಕರೆಯೋಲೆ. ಅವನು, ಪ್ರೀತಿಸಿದಾಕೆಯನ್ನೇ ಮದುವೆಯಾಗುತ್ತಿದ್ದ. ಇವಳು, ತುಂಬ ಸಡಗರದಿಂದ ಮದುವೆಗೆ ಹೋದಳು. ಆತ ಮೊದಲಿನಂತೆಯೇ ತುಂಬ ವಿಶ್ವಾಸದಿಂದ ಮಾತಾಡಿಸಿದ.
ಮದುವೆಯ ನಂತರ ಸಂಸಾರದ ತಾಪತ್ರಯದಲ್ಲಿ ಅವನು ಬ್ಯುಸಿಯಾದ. ಅವನನ್ನು ಡಿಸ್ಟರ್ಬ್ ಮಾಡೋದು ಬೇಡ ಎಂದು ಇವಳೂ ಸುಮ್ಮನಾದಳು. ಹೀಗೇ ಹತ್ತು ವರ್ಷ ಕಳೆದು ಹೋದವು. ಮುಂದೆ ಕಾಲೇಜಿನ ಹಳೆಯ ವಿದ್ಯಾರ್ಥಿಗಳ ಸಂಘ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಇಬ್ಬರೂ ಮುಖಾಮುಖಿಯಾದರು. ಈಕೆ ಗೆಲುವಾಗಿದ್ದಳು. ಆತ ಸಪ್ಪಗಿದ್ದ. ಅದನ್ನು ಗಮನಿಸಿ, ಈಕೆ ಕೇಳಿದಳು: 'ವಿಪರೀತ ಡಲ್ ಆಗಿದೀಯ. ಏನ್ಸಮಾಚಾರ? ಫ್ಯಾಮಿಲಿ ಹೇಗಿದೆ?' 'ಸಾರಿ, ನಾನು ಡೈವೋರ್ಸ್ ತಗೊಂಡೆ' ಎಂದು ಅವನು ತಣ್ಣಗೆ ನುಡಿದ. 'ಹೌದಾ? ವೆರಿ ಬ್ಯಾಡ್. ನನ್ನ ಕಥೆ ಕೇಳು. ಪ್ರೀತಿಸಿದ ಹುಡುಗನನ್ನೇ ನಾನು ಮದುವೆಯಾದೆ ಕಣೊ' ಎಂದಳು ಈಕೆ.
ಮುಂದೆಯೂ ಅವನು ಆ ಊರಲ್ಲಿದ್ದ. ಇವಳು ಈ ಊರಲ್ಲೇ ಉಳಿದಳು. ಹೀಗೇ ಮತ್ತಷ್ಟು ವರ್ಷಗಳು ಕಳೆದವು. ಇವಳ ಮದುವೆಯೂ ವಿಚ್ಛೇದನದಲ್ಲಿ ಕೊನೆಯಾಯಿತು. ಪುಟ್ಟ ಮಗಳೊಂದಿಗೆ ಈಕೆ ಅಪಾರ್ಟ್‌ಮೆಂಟ್‌ನಲ್ಲಿ ವಾಸಕ್ಕೆ ಬಂದಳು. ಈ ವಿವರವನ್ನೆಲ್ಲ ಅದು ಹೇಗೋ ಪತ್ತೆ ಮಾಡಿದ ಹಳೆಯ ಗೆಳೆಯ, ಫೋನ್ ಮಾಡಿ ಕೇಳಿದ: "ಹೇಗಿದೀಯಾ? ನನ್ನ ಕಡೆಯಿಂದ ಏನಾದ್ರೂ ಸಹಾಯ ಬೇಕಾ? ಮಗಳು ಕ್ಷೇಮ ತಾನೆ? ಅವಳಿಗೆ ಯಾವುದೇ ಕೊರತೆ ಆಗದಂತೆ ನೋಡಿಕೋ. ಹಣಕಾಸಿನ ಸಹಾಯ ಬೇಕಾದ್ರೆ ದಯವಿಟ್ಟು ತಿಳಿಸು..."
'ನಂಗೆ ಈಗ ನಿಜವಾಗಿ ನಿನ್ನ ಅಗತ್ಯವಿದೆ. ಹೈಸ್ಕೂಲ್‌ನಲ್ಲಿ ಇದ್ದಾಗ ದಿನಾಲೂ ಸಂಜೆ ಪಾರ್ಕ್‌ನಲ್ಲಿ ಕೂತು ಕಷ್ಟ ಸುಖ ಹಂಚಿಕೊಳ್ತಾ ಇದ್ದೆವಲ್ಲ, ಹಾಗೇ ಮಾತಾಡ್ತಾ ಇರಬೇಕು ಅನ್ನಿಸಿದೆ. ಪ್ಲೀಸ್ ಬಾ...' ಅಂದಳು ಈಕೆ. ಎರಡು ದಿನಗಳ ನಂತರ ಅವನು ಎದುರಿಗಿದ್ದ. ಆನಂತರ ಒಂದು ತಿಂಗಳು ರಜೆ ಹಾಕಿದ. ಮರುದಿನದಿಂದ ದಿನವೂ ಸಂಜೆ ಅವರು ಪಾರ್ಕ್‌ನಲ್ಲಿ ಭೇಟಿಯಾಗುತ್ತಿದ್ದರು. ಇಬ್ಬರೂ ಪರಸ್ಪರ ಕಷ್ಟ ಹೇಳಿಕೊಂಡು, ಪರಿಹಾರ ಕಂಡುಕೊಳ್ಳುತ್ತಿದ್ದರು.
ಹೀಗಿರುವಾಗಲೇ ಒಂದು ದಿನ ಈಕೆ ಅವನನ್ನು ಸಂಜೆ ಕಾಫಿಗೆ ಮನೆಗೇ ಬರುವಂತೆ ವಿನಂತಿಸಿದಳು. ಈತ ಸಂಭ್ರಮದಿಂದಲೇ ಹೋದ. ಕಾಫಿ ನೀಡಿದ ಆಕೆ, ತಡವರಿಸುತ್ತಾ ಹೇಳಿ ಬಿಟ್ಟಳು: 'ಐ ಲವ್ ಯೂ.'
ನಂತರದ ಕ್ಷಣದಲ್ಲಿ ಆಕೆ ಸರಸರನೆ ಬಾತ್‌ರೂಂ ಸೇರಿಕೊಂಡಳು. ಅಲ್ಲಿ ಯೋಚಿಸಿದಳು. ಒಂದೆರಡಲ್ಲ, ಇಪ್ಪತ್ತು ವರ್ಷಗಳಿಂದಲೂ ಸ್ನೇಹಿತ ಆಗಿದ್ದವನೀತ. ಅವನು ಎಂದಿಗೂ ಸ್ನೇಹವನ್ನು ಪ್ರೇಮವಾಗಿ ಬದಲಿಸಿಕೊಳ್ಳಲು ಮುಂದಾಗಲಿಲ್ಲ. ಅಂಥವನ ಬಳಿ ಪ್ರೇಮ ಯಾಚಿಸಿದ್ದು ತಪ್ಪಾಯಿತೇನೋ. ಈಗ ಅವನು ಪ್ರೇಮ ಮತ್ತು ಸ್ನೇಹವನ್ನು ಒಟ್ಟಿಗೇ ತಿರಸ್ಕರಿಸಿಬಿಟ್ಟರೆ ಗತಿಯೇನು? ಹಾಗೇನಾದರೂ ಆಗಿ ಹೋದರೆ ನಾಳೆಯಿಂದ ನನಗೆ ಸಮಾಧಾನ ಹೇಳುವವರಾದರೂ ಯಾರು? ಹೀಗೆಲ್ಲ ಹತ್ತಿಪ್ಪತ್ತು ನಿಮಿಷ ಯೋಚಿಸಿ, ಕಡೆಗೆ ಆಗಿದ್ದಾಗಲಿ ಎಂಬ ನಿರ್ಧಾರದೊಂದಿಗೇ ಆಕೆ ಹೊರಬಂದಳು. ಎದುರು ಕೂತಿದ್ದ ಅವನು ನೇರವಾಗಿ ಹೇಳಿದ: 'ಗಾಬರಿ ಆಗಬೇಡ ನಿನ್ನ ಮನದಲ್ಲಿರುವ ಭಾವನೆಯೇ ನನ್ನಲ್ಲೂ ಇದೆ. ಐ ಲವ್ ಯೂ ಟೂ...'
ಒಂದು ವೇಳೆ ನೀನು ಈ ಪ್ರಪೋಸಲ್‌ನ ನಿರಾಕರಿಸಿದ್ರೆ, ಆ ಕ್ಷಣದಿಂದಲೇ ನಮ್ಮ ಮಧುರ ಸ್ನೇಹವೂ ಹಳಸಿ ಹೋಗುತ್ತೆ ಎನ್ನಿಸಿ ಭಯವಾಗಿತ್ತು. ನನ್ನ ಮಟ್ಟಿಗೆ, ಪ್ರೇಮಕ್ಕಿಂತಲೂ ಸ್ನೇಹ ದೊಡ್ಡದು ಎಂದಳಾಕೆ. ನಿನ್ನ ಮನಸ್ಸಿನ ತಾಕಲಾಟವೆಲ್ಲಾ ಅರ್ಥವಾಗುತ್ತೆ ಹುಡುಗೀ. ನಾವು ಈಗ ಮೊದಲು ಒಂದು ವರ್ಷ ಸ್ನೇಹಿತರಾಗಿಯೇ ಬದುಕೋಣ. ಪರಸ್ಪರರ ಶಕ್ತಿ, ದೌರ್ಬಲ್ಯಗಳನ್ನು ಅರ್ಥ ಮಾಡಿಕೊಂಡ ನಂತರವೇ ಮದುವೆಯಾಗೋಣ. ಸ್ನೇಹಕ್ಕೂ, ಪ್ರೇಮಕ್ಕೂ ನಿನ್ನ ಮಗಳೇ ಸಾಕ್ಷಿಯಾಗಲಿ ಎಂದ ಅವನು, ಕೆಲವೇ ದಿನಗಳಲ್ಲಿ ಅವಳಿಗೆ ಎಂಗೇಜ್‌ಮೆಂಟ್ ರಿಂಗ್ ತೊಡಿಸಿದ. ಆ ಉಂಗುರದ ಮೇಲೆ 'ಅನಂತ ಕಾಲವೂ ಉಳಿವ ಪ್ರೇಮ' ಎಂಬ ಅಕ್ಷರಗಳಿದ್ದವು.
ಮುಂದೆ ಅವರಿಬ್ಬರೂ ಸ್ನೇಹಿತರಾಗಿ, ಪ್ರೇಮಿಗಳಾಗಿ, ದಂಪತಿಯಾಗಿ ಸುಖವಾಗಿ ಬಾಳಿದರು. ಆ ಮೂಲಕ ಅನಂತ ಕಾಲವೂ ಉಳಿದ ಪ್ರೇಮ ಎಂಬ ಮಾತನ್ನು ನಿಜ ಮಾಡಿದರು. 'ನಮ್ಮ ಪ್ರೇಮಿಗಳಿಗೆ ಇದು ಅರ್ಥವಾಗಲಿ'.
ಮತ್ತೊಂದಿಷ್ಟು ಹುಲಿ ಮಾದರಿ
ಓದುಗ ಮಿತ್ರರಾದ ಜಾವಗಲ್‌ನ ಕೃಷ್ಣಶರ್ಮ ಅವರು 'ಹುಲಿ ಸಾಯಿಸುವ ಮಾದರಿ'ಯಿಂದ ಪ್ರಭಾವಿತರಾಗಿ ತಮ್ಮ ಕೊಡುಗೆ ಕಳಿಸಿದ್ದಾರೆ:
ಪ್ರೀತಿ ಪ್ರೇಮ ಪ್ರಣತಿ ಮಾದರಿ- ಹುಲಿ ಘರ್ಜಿಸುತ್ತದೆ, ನಾನು ಪದೇ ಪದೇ ಹೇಳುತ್ತಿರುತ್ತೀನಲ್ಲ, ನಾನಿರೋದು ಪಿ.ಜಿಯಲ್ಲಿ ಅಂತ. ಕಿಟಕಿ ಬಾಗಿಲು ತೆರೆದು, ಒಕ್ಕಣ್ಣು ಅರಳಿಸಿ ನೋಡ್ತೀನಿ ಹುಲಿ ಬೋಲ್ಡ್ ಆಗುತ್ತೆ. ಪಿಜಿಯೊಳಗೆ ಹಾರಲು ಪ್ರಯತ್ನಿಸಿ ಮುಳ್ಳುತಂತಿ ಬೇಲಿಯೊಳಗೆ ಸಿಲುಕಿ ಅಸು ನೀಗುತ್ತದೆ. ನನ್ನ ಕಣ್ಣುಗಳು ತೇವಗೊಳ್ಳುತ್ತವೆ. ನಿಮ್ಮದು?
ಸುವರ್ಣ ನ್ಯೂಸ್ ಸಿಕ್ಸ್ ಗರ್ಲ್ಸ್ ಮಾದರಿ- ಹುಲಿ ಘರ್ಜಿಸುತ್ತದೆ. ನಾವು ಆರ್ಜನ ಹುಡ್ಗೀರು. ಆ ಕಡೆ ಮೂರು ಈ ಕಡೆ ಮೂರು ಏಟು ಕೊಡ್ತೀವಿ. ಹುಲಿ ಘರ್ಜಿಸಿದ ನಂತರ ಎರಡು ಕಡೆಗೂ ಒಮ್ಮೆ ದೃಷ್ಟಿ ಹಾಯಿಸಿ ಕತ್ತು ಕೆಳಗೆ ಹಾಕುತ್ತೆ. ಆರು ತಿಂಗಳು ಬೇಕು ಎಚ್ಚರ ಆಗೋಕೆ! ಅಷ್ಟೊತ್ತಿಗೆ ಉಸ್ರು ಇರೋ ಗ್ಯಾರಂಟಿ ಇರಲ್ಲರಿ...
ಪ್ರತಾಪ್‌ಸಿಂಹ ಮಾದರಿ- ಹುಲಿ ಘರ್ಜಿಸುತ್ತದೆ. ವಿಷ್ಣುವರ್ಧನ್ ತರಹ ಘರ್ಜಿಸಿ, ಸಿಂಹ; ಪ್ರತಾಪ್‌ಸಿಂಹ ಅನ್ನಬೇಕು. ನಿನ್ನ ಜಾತಕವನ್ನೆಲ್ಲ ಬೆತ್ತಲೆ ಮಾಡ್ತೀನಿ ಅನ್ನಬೇಕು. ವಾಕ್ಯ ಪೂರ್ತಿ ಮಾಡುವ ಮುನ್ನವೆ ಹುಲಿ ಮಟಾಶ್.
ಜಾತಿ ಜ್ಯೋತಿ ಪ್ರಭಾಕರ್ ಮಾದರಿ- ಹುಲಿ ಘರ್ಜಿಸುತ್ತದೆ. ಕ್ರಿ.ಪೂ. ಹದಿನೆಂಟನೇ ಶತಮಾನದಲ್ಲಿ ಧರಣಿ ಮಂಡಲ ಮಧ್ಯದೊಳಗೆ ಗೊಂಡಾರಣ್ಯದಲ್ಲೊಮ್ಮೆ ಹುಲಿಯೊಂದರ ಕಾಲಿಗೆ ಚುಚ್ಚಿದ ಮುಳ್ಳು ತೆಗೆದು ಉಪಚರಿಸಿದವರು ನಮ್ಮ ಜಾತಿಯ ಪೂರ್ವಜರು. ತದನಂತರ ಹುಲಿ ಅವರನ್ನೇ ತಿನ್ನಲು ಹೋಯಿತಂತೆ. ಹೇಗೋ ಉಪಾಯಮಾಡಿ ಅಪಾಯದಿಂದ ಪಾರಾದರಂತೆ. ನಿನ್ನ ಜಾತಿಗೆ ಸೇರಿದ ಹುಲಿಯೇ ಅದಾಗಿತ್ತು ಎನ್ನುತ್ತೇನೆ ಅಷ್ಟೆ. ಹುಲಿ ಅವಮಾನ ತಾಳಲಾರದೆ....ಖತಂ!
ರೇಣುಕಾಚಾರ್ಯ ಮಾದರಿ- ಹುಲಿ ಘರ್ಜಿಸುತ್ತದೆ. ಕೋವಿ ಹಿಡಿದು ಕೊಲ್ತೀನಿ ಅನ್ಬೇಕು. ಶೂಟ್ ಮಾಡು ಅಂತ ಆಜ್ಞೆ ಮಾಡಿ ಕೋವಿ ಕೊಟ್ಟಿದ್ದೇ ನಮ್ ನಾಯಕ ಯಡ್ಯೂರಪ್ಪನವರು. ಅವ್ರು ಗೆರೆ ಹಾಕುದ್ರೆ ದಾಟೋದಿಲ್ಲ. ಆದ್ರು ಕೊಲ್ಲಲ್ಲ. ಆದ್ರೂ ಬಿಡಲ್ಲ ಅನ್ನಬೇಕು. ಗಲಿಬಿಲಿಗೊಳಗಾದ ಹುಲಿ ಏಳಂತಸ್ತಿನ 'ಬಾರ್' ಮೇಲಿಂದ ನೆಗೆದು...
ಯಾವಾಗ ಕಾರ್ಯಪ್ರವೃತ್ತರಾಗಬೇಕು?
ವ್ಯಾಕ್ಯೂಮ್ ಕ್ಲೀನರ್ ಸೇಲ್ಸ್‌ಮನ್ ಮನೆಯ ಬಾಗಿಲ ಬಳಿ ನಿಂತು ಒಂದೇ ಸಮನೆ ಬೆಲ್ ಮಾಡತೊಡಗಿದ. ಮನೆಯೊಳಗಿಂದ ಹೆಂಗಸು ಬಂದು ಬಾಗಿಲು ತೆರೆದಳು.
ಸೇಲ್ಸ್‌ಮನ್‌ಗೆ ಅದೇನು ಅವಸರವೋ ಏನೋ, ಬಡಬಡನೆ ತನ್ನ ಪರಿಚಯ ಮಾಡಿಕೊಂಡು ತನ್ನ ಹೊಸ ವ್ಯಾಕ್ಯೂಮ್ ಕ್ಲೀನರ್ ಬಗ್ಗೆ ಬಣ್ಣಿಸಲಾರಂಭಿಸಿದ.
ಆಕೆಗೆ ಪ್ರಶ್ನೆ ಕೇಳಲೂ ಬಿಡದೇ ಮನೆಯ ಲಿವಿಂಗ್ ರೂಮ್‌ಗೆ ಹೋದವನೇ ತನ್ನ ಬ್ಯಾಗಿನಿಂದ ಬೆರಣಿಯ ಪೌಡರನ್ನು ತೆಗೆದು ನೆಲದ ಮೇಲೆ ಚೆಲ್ಲುತ್ತಾ, 'ಮೇಡಂ, ಈ ಸೆಗಣಿ ಪೌಡರನ್ನು ನೋಡ್ತಾ ಇರಿ. ಒಂದು ಪುಡಿ ಸಹ ಇಲ್ಲದಂತೆ ಈ ಹೊಸ ವ್ಯಾಕ್ಯೂಮ್ ಕ್ಲೀನರ್ ಮುಂದಿನ ಐದು ನಿಮಿಷಗಳಲ್ಲಿ ಹೀರಿ ಇಡೀ ಕೋಣೆಯನ್ನು ಸ್ವಚ್ಛಗೊಳಿಸುತ್ತದೆ, ನೋಡ್ತಾ ಇರಿ' ಎಂದು ಉತ್ಸಾಹದಿಂದ ಹೇಳಿದ.
ಆ ಮಹಿಳೆಗೆ ತಲೆ ಕೆಟ್ಟು ಹೋಯಿತು, ಆದರೂ ತೋರಗೊಡದೇ ಕೇಳಿದಳು- 'ಈ ಪೌಡರ್‌ಗೆ ಸ್ವಲ್ಪ ಟೊಮೆಟೋ ಕೆಚ್‌ಅಪ್, ಚಿಲ್ಲಿಸಾಸ್‌ನ್ನು ಮಿಕ್ಸ್ ಮಾಡಿದ್ದರೆ ಚೆನ್ನಾಗಿರುತ್ತಿತ್ತೇನೋ?'
'ಯಾಕೆ ಮೇಡಂ? ಏನಾಯ್ತು?' ಎಂದು ಸೇಲ್ಸ್‌ಮನ್ ಕೇಳಿದ.
ಅದಕ್ಕೆ ಆ ಮಹಿಳೆ ಹೇಳಿದಳು-'ಮುಂದಿನ ಐದು ನಿಮಿಷಗಳಲ್ಲಿ ಕ್ಲೀನ್ ಮಾಡ್ತೀನಿ ಅಂತ ಹೇಳಿದೆಯಲ್ಲ, ಆದರೆ ಮನೆಯಲ್ಲಿ ಕರೆಂಟ್ ಇಲ್ಲ!'
ಈ ಪ್ರಸಂಗದ ನೀತಿ: ಪೆಟ್ರೋಲ್ ಚೆಲ್ಲಿ ಬೆಂಕಿಯಿಡುವ ಮುನ್ನ ಬೆಂಕಿ ಪೊಟ್ಟಣವಿದೆಯೇ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ. ಎಲ್ಲ ಮಾಹಿತಿ ಪಡೆದ ನಂತರವೇ ಕಾರ್ಯಪ್ರವೃತ್ತರಾಗಿ.
ಮುಂದೇನಾಯಿತು?
ಆರು ಮಹಿಳೆಯರು ಜೈಲಿನಲ್ಲಿ ಎಂಟು ವರ್ಷ ಶಿಕ್ಷೆ ಅನುಭವಿಸಿ ಬಿಡುಗಡೆಯಾದರು. ಇವರೆಲ್ಲರನ್ನೂ ಒಂದೇ ಕೋಣೆಯಲ್ಲಿ ಇರಿಸಲಾಗಿತ್ತು. ಜೈಲಿನಿಂದ ಹೊರಬಂದು ಪರಸ್ಪರ ಬೀಳ್ಕೊಡುವಾಗ, ಅವರೆಲ್ಲ ಹೇಳುತ್ತಿದ್ದರು- 'ಮುಂದೇನಾಯಿತು ಎಂಬುದನ್ನು ಫೋನಿನಲ್ಲಿ ಮಾತಾಡಿಕೊಳ್ಳೋಣ.'
- ವಿಶ್ವೇಶ್ವರ ಭಟ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

