ಅಂಕಣಗಳು

Hmmm... ಪಾಂಚ್-ಪೂಜಾಗಾಂಧಿ

ನೀವು ದಂಡುಪಾಳ್ಯದಲ್ಲಿ 'ಬೆನ್ನು' ತೋರಿಸಿದ್ದನ್ನೇನೋ 'ಹೊಟ್ಟೆ'ಪಾಡು ಅನ್ನಬಹುದು, ಆದ್ರೆ, ಅದನ್ನೇ ಅಭ್ಯಾಸ  ಮಾಡ್ಕೊಂಡು ಈಗ ಪೊಲಿಟಿಕಲ್ ಪಾರ್ಟಿಗಳಿಗೂ ಬೆನ್ನು ತೋರಿಸೋದು ಸರೀನಾ?
ಸಿನಿಮಾ ಹೀರೋಯಿನ್‌ಗಳು ಅಲ್ಲಿಂದ ಇಲ್ಲಿಗೆ, ಇಲ್ಲಿಂದ ಅಲ್ಲಿಗೆ, 'ವಲಸೆ' ಹೋಗೋದು ಹೊಸದೇನೂ ಅಲ್ಲವಲ್ಲ.

    ಸಿನಿಮಾದವ್ರನ್ನ ಸಾಮಾನ್ಯವಾಗಿ 'ನಿಮ್ಮ ಮುಂದಿನ ಚಿತ್ರ ಯಾವುದು?' ಅಂತ ಕೇಳ್ತಾರೆ, ಆದ್ರೆ ನಿಮ್ಮ ಬಿಹೇವಿಯರ್ ನೋಡಿದ್ರೆ ಈ ಪ್ರಶ್ನೆ ಕೇಳಲೇಬೇಕು, 'ನಿಮ್ಮ ಮುಂದಿನ ಪಕ್ಷ ಯಾವುದು?'
ಹಂಗೇನಿಲ್ಲ, ಮಲೆನಾಡಿನವರಿಗೆ ನನ್ನ ಅವಶ್ಯಕತೆ ಇಲ್ಲ, ಆದ್ರೆ, ಬಳ್ಳಾರಿಯವರಿಗೆ ಮಳೆ ಹುಡುಗಿ ಅವಶ್ಯಕತೆ ಜಾಸ್ತಿ ಅಂತ ಶ್ರೀರಾಮುಲು ಪಕ್ಷ ಸೇರಿದೆ ಅಷ್ಟೆ.

    ನೀವು ಯಾವ ಪಕ್ಷದಲ್ಲೂ 100 ಡೇಸ್ ಪೂರೈಸೋ ಥರಾ ಕಾಣ್ತಿಲ್ಲ, ಇನ್ನೊಂದು ಆರು ತಿಂಗಳಲ್ಲಿ ಇರೋ ಇನ್ನೆರಡು ಪಕ್ಷನೂ ಮುಗಿದ್ಮೇಲೆ ಎಲ್ಲಿ ಹೋಗ್ತೀರಿ?
'ಹೋಮ್ ಬ್ಯಾನರ್‌'ನಲ್ಲೇ ಪಕ್ಷ ಕಟ್ತೀನಿ, 'ಕರ್ನಾಟಕ ಪೂಜಾಗಾಂಧಿ ಪಕ್ಷ', ಪಕ್ಷದ ಸಿಂಬಲ್ 'ಛತ್ರಿ ಹಿಡಿದು ನಿಂತ ಹುಡುಗಿ'.
                                                                                                                                            ಹೋಮ್ ಬ್ಯಾನರ್ ಕಟ್ಟಿದ್ರೆ ಹೋಮ್ ಮಿನಿಸ್ಟರ್ ಆಗಬಹುದು ಅಂತಾನಾ? ಸರಿ, ಇನ್ಮೇಲೆ, ಬೆಳಿಗ್ಗೆ ಎದ್ದು ನಿಮ್ಮ ಫೇಸ್‌ಬುಕ್ ಸ್ಟೇಟಸ್ ಅಪ್‌ಡೇಟ್ ನೋಡಿ ನೀವು ಇವತ್ತು ಯಾವ ಪಕ್ಷದಲ್ಲಿದ್ದೀರಿ ಅಂತ ತಿಳ್ಕೋಬೇಕಾ?
ಏನ್ ಮಾಡೋಕಾಗತ್ತೆ, ಈ ಐಪಿಎಲ್ ಥರಾ ಇದು 'ಇಂಡಿಯನ್ ಪೊಲಿಟಿಕಲ್ ಲೀಗ್‌'ನ ಹರಾಜು ಪ್ರಕ್ರಿಯೆ,  ಯಾರು ಜಾಸ್ತಿ (ಮರ್ಯಾದೆ) ಕೊಡ್ತಾರೋ ಅಲ್ಲಿಗೆ ಹೋಗೋದು.

    ಸಿನಿಮಾರಂಗಕ್ಕೂ ರಾಜಕೀಯ ರಂಗಕ್ಕೂ ಏನು ವ್ಯತ್ಯಾಸ?
ಇಲ್ಲೂ ಫ್ಯಾನ್‌ಗಳಿದಾರೆ, ಅಲ್ಲೂ 'ಫ್ಯಾನ್‌' ಇದೆ. ಆದ್ರೆ, ಇಲ್ಲಿ ಬಾಕ್ಸ್ ಆಫೀಸು, ಅಲ್ಲಿ ಪಾರ್ಟಿ ಆಫೀಸು. ಇದು ಡರ್ಟಿ ಪಿಕ್ಚರ್, ಅದು ಡರ್ಟಿ ಪೊಲಿಟಿಕ್ಸ್. ಹ್ಹ ಹ್ಹ ಹ್ಹ, ಜೋಕ್ ಇದೆ ನಗ್‌ಬೇಕು, ನಗ್‌ಬೇಕು!
(ಕಾಲ್ಪನಿಕ ಸಂದರ್ಶನ)

ಒಮ್ಮೆ ಭೇಟಿ ಕೊಡಿ
ಇದು ಸಚಿನ್ ಸ್ಟಾಪ್. ಇಲ್ಲಿ ಅಭಿಮಾನಿಗಳಿಗೆ ಸಚಿನ್ ಬಗ್ಗೆ ನಾನ್‌ಸ್ಟಾಪ್ ವಿಷಯಗಳು ಸಿಗುತ್ತವೆ. ಸಚಿನ್ ತೆಂಡೂಲ್ಕರ್ ಮೇಲಿರುವ ಟೀಕೆಗಳಿಗೆ ಉತ್ತರಿಸುವುದಕ್ಕೂ ಒಂದು ವೆಬ್‌ಸೈಟ್ ಇರುವುದು ವಿಶೇಷ. ಎಷ್ಟೇ ಆದರೂ ಸಚಿನ್ 'ಸೆಂಚುರಿ' ಸ್ಟಾರ್. ಹಾವಿನ ದ್ವೇಷ ಹನ್ನೆರಡು ವರುಷ, ಸಚಿನ್ ಅಭಿಮಾನಿಗಳ ಶಾಪ '100' ವರುಷ ಎಂಬುದನ್ನು ಈ ವೆಬ್‌ಸೈಟ್ ಪ್ರೂವ್ ಮಾಡುತ್ತದೆ. ಜೊತೆಗೆ ಸಚಿನ್ ವಿಡಿಯೋಗಳಿರುವ ಒಂದು ಬ್ಲಾಗ್ ಕೂಡಾ ಇದೆ.
 http://bit.ly/1l3sST n http://bit.ly/7uDyc2 nhttp://bit.ly/rwOTFl n http://bit.ly/4l6Bmb n http://bit.ly/Xh7JJR

ಹರಿ-ಕಥೆ
ರಾಮು, ಸೋಮು ಮತ್ತು ಖೇಮುಗೆ ಡಿಟೆಕ್ಟಿವ್ ಕೆಲಸಕ್ಕೆ ಸೇರಬೇಕು ಅಂತ ಸಿಕ್ಕಾಪಟ್ಟೆ ಆಸೆ. ತಮಗೆ ಡಿಟೆಕ್ಟಿವ್ ಆಗುವ ಎಲ್ಲ ಸ್ಕಿಲ್‌ಗಳೂ ಇವೆ ಅಂತ ನಂಬ್ಕೊಂಡು ಒಂದಿನ ಒಂದು ಫೇಮಸ್ ಡಿಟೆಕ್ಟಿವ್ ಏಜೆನ್ಸಿಗೆ ಹೋದ್ರು. ಅಲ್ಲಿನ ಮುಖ್ಯಸ್ಥನಿಗೆ ಹಿಂಗಿಂಗೆ ನಾವು ಡಿಟೆಕ್ಟಿವ್ ಆಗಬೇಕು ಅಂತ ಹೇಳಿದ್ರು. ಹಾಗಾದರೆ ನಿಮಗೆ ಆ ಕೆಪ್ಯಾಸಿಟಿ ಇದೆಯಾ ಅಂತ ಟೆಸ್ಟ್ ಮಾಡ್ತೀನಿ, ಅದರಲ್ಲಿ, ನೀವು ಪಾಸ್ ಆದರೆ ನಮ್ಮ ತಂಡಕ್ಕೆ ಸೇರಿಸ್ಕೊತೀವಿ ಎಂದ ಮುಖ್ಯಸ್ಥ ರಾಮುಗೆ ಒಂದು ಪೋಟೋ ತೋರಿಸಿ ಹೇಳಿದ 'ಇವನು ಮೋಸ್ಟ್ ವಾಂಟೆಡ್ ಕಿಲ್ಲರ್. ಈಗ ತಲೆ ತಪ್ಪಿಸಿಕೊಂಡಿದ್ದಾನೆ. ಈ ಫೋಟೋ ನೋಡಿ ಇವನನ್ನು ಹುಡುಕಲು ಏನಾದರೂ ಒಂದು ಕ್ಲೂ ಕೊಡು' ಎಂದ. ಪೋಟೋ ನೋಡಿದ ರಾಮು ಹೇಳಿದ 'ಅಯ್ಯೋ, ಇವನನ್ನು  ಹುಡುಕೋದು ತುಂಬಾ ಸುಲಭ. ನೋಡಿ, ಇವನಿಗೆ ಒಂದು ಕಣ್ಣೇ ಇಲ್ಲ'. ಏಜೆನ್ಸಿಯ ಮುಖ್ಯಸ್ಥ 'ನಿನ್ ತಲೆ ಇದು ಸೈಡ್ ವ್ಯೂ ಫೋಟೋ, ಇದರಲ್ಲಿ ಒಂದೇ ಕಣ್ಣು ಕಾಣ್ಸೋದು. ನಡಿ ಮನೆಗೆ' ಎಂದ. ನಂತರ ಸೋಮುಗೆ ಅದೇ ಪೋಟೋ ತೋರಿಸಿ ಅದೇ ಪ್ರಶ್ನೆ ಕೇಳಿದ. ಸೋಮು ಹೇಳಿದ 'ಅಯ್ಯೋ, ಇವನನ್ನು ಹುಡುಕೋದು ತುಂಬಾ ಸುಲಭ. ನೋಡಿ, ಇವನಿಗೆ ಒಂದು ಕಿವಿನೇ ಇಲ್ಲ'. ಡಿಟೆಕ್ಟಿವ್ ಏಜೆನ್ಸಿ ಮುಖ್ಯಸ್ಥನಿಗೆ ಕೋಪ ಬಂತು 'ನಿನ್ ತಲೆ ಇದು ಸೈಡ್ ವ್ಯೂ ಫೋಟೋ ಇದರಲ್ಲಿ ಒಂದೇ ಕಿವಿ ಕಾಣ್ಸೋದು. ನಡಿ ಮನೆಗೆ' ಎಂದ. ನಂತರ ಖೇಮುವಿನ ಸರದಿ. ಖೇಮುಗೂ ಅದೇ ಪ್ರಶ್ನೆ. ಖೇಮು ಹೇಳಿದ, 'ಬಹುಶಃ ಈ ವ್ಯಕ್ತಿ ಕಾಂಟ್ಯಾಕ್ಟ್ ಲೆನ್ಸ್ ಬಳಸ್ತಾನೆ'. ಮುಖ್ಯಸ್ಥನಿಗೆ ಅಚ್ಚರಿ. ಏಕೆಂದರೆ ಖೇಮು ಹೇಳಿದ್ದು ನಿಜ ಆಗಿತ್ತು. ಇವನಿಗೆ ಏನೋ ಸ್ಪೆಷಲ್ ಟ್ಯಾಲೆಂಟ್ ಇದೆ ಅಂತ ಮುಖ್ಯಸ್ಥ ಅವನನ್ನು ತಂಡಕ್ಕೆ ಸೇರಿಸ್ಕೊಂಡ. ಅಲ್ಲಿಂದ ವಾಪಸ್ ಹೋಗುವಾಗ ರಾಮು, ಸೋಮು ಇಬ್ಬರೂ ಖೇಮುವನ್ನು ಕೇಳಿದರು 'ಅಲ್ಲಾ, ನಿಂಗೆ ಅವನು ಕಾಂಟ್ಯಾಕ್ಟ್ ಲೆನ್ಸ್ ಬಳಸ್ತಾನೆ ಅಂತ ಹೆಂಗೆ ಗೊತ್ತಾಯ್ತು?'. ಖೇಮು ಹೇಳಿದ 'ಅಯ್ಯೋ, ನಿಮ್ ತಲೆ. ಅದು ತುಂಬಾ ಸುಲಭ. ಅವನಿಗೆ ಒಂದು ಕಣ್ಣಿಲ್ಲ, ಸೋ ಕನ್ನಡಕ ಹಾಕಬೇಕು. ಆದ್ರೆ ಕಿವಿನೂ ಇಲ್ಲವಲ್ಲ. ಸೋ ಕಾಂಟ್ಯಾಕ್ಟ್ ಲೆನ್ಸ್ ಹಾಕ್ಲೇಬೇಕಲ್ಲ'

ಸ್ಯಾಂಡಲ್‌ವುಡ್
ಪತ್ರಕರ್ತ ವಿಜಯಸಾರಥಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದ ಸಮಾರಂಭದಲ್ಲಿ ಕೇಳಿ ಬಂದ ಕೆಲವು ಮಾತುಗಳು...
 ಚಿತ್ರರಂಗದ ಇಬ್ಬರ ನಡುವೆ ಸಮಸ್ಯೆ ಇದೆ ಅಂತ ಗೊತ್ತಾದರೆ ವಿಜಯಸಾರಥಿ ಅದನ್ನು ಸರಿಪಡಿಸೋ ಕೆಲಸ ಮಾಡುತ್ತಿದ್ದರು. ಅದು ನನ್ನ ಮತ್ತು ವಿಷ್ಣು ಮಧ್ಯೆ ಇರಬಹುದು, ವಿಷ್ಣು ಮತ್ತು ದ್ವಾರಕೀಶ್ ನಡುವೆ ಇರಬಹುದು. 'ಇಬ್ಬರ ನಡುವೆ ಸುದ್ದಿಯ ಆಟ' ಆಡಿ ನನಗೊಂದು ನ್ಯೂಸ್ ಸಿಕ್ತು ಅಂತ ಎಂದೂ ಎಂಜಾಯ್ ಮಾಡಿದವರಲ್ಲ.
 -ಎಸ್.ವಿ.ರಾಜೇಂದ್ರಸಿಂಗ್ ಬಾಬು

    ನನ್ನ ಎಷ್ಟೋ ಚಿತ್ರಗಳ ಪ್ರೆಸ್‌ಮೀಟ್ ಇದೇ ಗ್ರೀನ್‌ಹೌಸ್‌ನಲ್ಲಿ ನಡೆದಿವೆ. ಆಗೆಲ್ಲಾ ಇಲ್ಲಿಗೆ ಬರುವಾಗ ಎಷ್ಟು ಸಂಭ್ರಮ ಇರುತ್ತಿತ್ತು. ಆದರೆ ಇವತ್ತು ಇಲ್ಲಿಗೆ ಬರುವಾಗ ತುಂಬಾ ಸಂಕಟ ಅನುಭವಿಸಿದೆ.
 -ರಾಧಿಕಾ ಪಂಡಿತ್

 ವಿಜಯಸಾರಥಿ ಜೊತೆ ರಾತ್ರಿ ಫೋನ್‌ನಲ್ಲಿ ಮಾತನಾಡದೆ ನಿದ್ದೆ ಮಾಡಿದ ಉದಾಹರಣೆಗಳೇ ಇಲ್ಲ. ವಾರದ ಹಿಂದೆ ಅವರು ಚಿರನಿದ್ದೆಗೆ ಜಾರಿದ್ದಾರೆ. ಆದರೆ ನನಗೆ ನಿದ್ದೆ ಬರ್ತಿಲ್ಲ.
  -ದ್ವಾರಕೀಶ್

ಡಬ್ಕುಡಬಲ್ ತುದಾಂಡಲ್...
 ಪ್ರತಿ ಯಶಸ್ವಿ ಪುರುಷನ ಹಿಂದೆ ಒಬ್ಬ ಮಹಿಳೆ ಇರ್ತಾಳೆ.
ಪ್ರತಿ ಅವಿವಾಹಿತ ಪುರುಷನ ಹಿಂದೆ, 'ಅವನು ನನಗೋಸ್ಕರನೇ ಮದುವೆ ಆಗದೇ ಉಳಿದಿದ್ದಾನೆ' ಎಂದುಕೊಳ್ಳುವ ಕನಿಷ್ಠ ಮೂವರು ಹುಡುಗಿಯರಿರುತ್ತ್ತಾರೆ.

 ವೈರುಧ್ಯ
ಪ್ರತಿದಿನ ಚರ್ಚೆ ಮಾಡಿ, ಮಾಡಿ, ಕಾವೇರಿ 'ನೀರಿ'ನ ವಿವಾದ ಯಾಕೋ 'ಡ್ರೈ' ಅನ್ನಿಸುತ್ತಿರುವುದು.

  ರೆಬೆಲ್‌ಸ್ಟಾರ್ ಅಂಬರೀಶ್‌ಗೆ ಡಾಕ್ಟರೇಟ್
ಅದರಲ್ಲಿ ಹೊಸತೇನಿದೆ ಬಿಡಿ. ಚಿತ್ರರಂಗದಲ್ಲಿ ಏನೇ ಸಮಸ್ಯೆ ಬಂದರೂ ಅದಕ್ಕೆ ಅಂಬಿಯೇ ಡಾಕ್ಟರ್ ಅಲ್ವಾ?

  ನೀನು ನಿನ್ನ ಗರ್ಲ್‌ಪ್ರೆಂಡ್‌ನ ಬರೀ ನೈಟ್ ಕ್ಲಬ್‌ಗಳಿಗೆ ಮಾತ್ರ ಯಾಕ್ ಕರ್ಕೊಂಡ್ ಹೋಗ್ತೀಯಾ?
ಏನ್ಮಾಡೋದು, ಅವಳು ಮೇಕಪ್ ಮುಗಿಸೋ ಹೊತ್ತಿಗೆ ಬೇರೆ ಎಲ್ಲೂ ಕರ್ಕೊಂಡ್ ಹೋಗೋಕೆ ಆಪ್‌ಶನ್ನೇ  ಇರಲ್ಲ.

ತಮಗೆ ಬಂದ ಪತ್ರವೊಂದರಲ್ಲಿ 'ಈ ಪ್ರಪಂಚದ ಅತಿ ಮೂರ್ಖ ಮನುಷ್ಯನಿಗೆ' ಎಂದು ಬರೆಯಲಾಗಿದ್ದ ವಿಳಾಸ ನೋಡಿ ಮಂತ್ರಿಗಳು ತುಂಬಾ ಬೇಜಾರು ಮಾಡ್ಕೊಂಡಿದ್ರು. ಮಂತ್ರಿಗಳ ಕೆಲವು ಹಿಂಬಾಲಕರು, 'ಅವನ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಬೇಕು' ಎಂದು ಉರಿದು ಬೀಳುತ್ತಿದ್ದರು. ಇನ್ನು ಕೆಲವರು 'ಹೋಗ್ಲಿ ಬಿಡಿ ಅವನ್ಯಾವನೋ ಏನೋ ಬರೆದ ಅಂತ ನೀವ್ಯಾಕೆ ಇಷ್ಟು ಬೇಜಾರು ಮಾಡ್ಕೊತೀರಿ' ಎಂದು ಸಮಾಧಾನ  ಪಡಿಸಲೆತ್ನಿಸಿದರು. ಅದಕ್ಕೆ ಮಂತ್ರಿಗಳು ಕೋಪದಿಂದ ಕೈ ಹಿಚುಕಿಕೊಳ್ಳುತ್ತ ಹೇಳಿದರು 'ಅವನು ಬರೆದಿದ್ದಕ್ಕೆ ಬೇಜಾರಿಲ್ಲ,  ಆದ್ರೆ, ಹಾಗೆ ಬರೆದಿರೋ ಆ ಲೆಟರ್‌ನ ಆ ಪೋಸ್ಟ್‌ಮ್ಯಾನ್ ಬಡ್ಡೀಮಗ ನನಗೇ ತಂದುಕೊಟ್ಟಿದಾನಲ್ಲ'

-   ಹರಿ
harikannadaprabha@gmail.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.