ಅಂಕಣಗಳು

ಬಿಎಸ್‌ವೈ ಬಿಜೆಪಿಗೆ ಬರಲು 'ಅರ್ಜಿ ಲೇಹ್ಯ'!

ಒಮ್ಮೆ ಅಧಿಕಾರದ ರುಚಿ ಕಂಡವರು ಅದಿಲ್ಲದಿದ್ದಾಗ ಅನುಭವಿಸುವ ಬವಣೆ...

Published On :

ಅಧಿಕಾರ ಇದ್ದಾಗ ಅದರ ಬೆಲೆ ಗೊತ್ತಾಗುವುದಿಲ್ಲ. ಅದು ಹೋದ ನಂತರವಷ್ಟೇ ಅದರ ಮಹತ್ವ ಅರಿವಿಗೆ ಬರುತ್ತದೆ. ಒಮ್ಮೆ ಅಧಿಕಾರದ ರುಚಿ ಕಂಡವರು ಅದಿಲ್ಲದಿದ್ದಾಗ ಅನುಭವಿಸುವ ಬವಣೆ ಹೇಳತೀರದು. ನೀರಿನಿಂದ ಹೊರ ತೆಗೆದ ಮೀನಿನಂತೆ ವಿಲವಿಲ ಒದ್ದಾಡುತ್ತಿರುತ್ತಾರೆ. ಹೋದ ಅಧಿಕಾರಕ್ಕಾಗಿ ಪರಿತಪಿಸುತ್ತಿರುತ್ತಾರೆ. ಆ ಪರಿತಪನೆಯಲ್ಲಿ ಮಾಡಿದ ತಪ್ಪುಗಳು ಕೊತಕೊತನೆ ಕುದಿಯುತ್ತಿರುತ್ತವೆ. ಆದರೆ ಅಷ್ಟೊತ್ತಿಗೆ ಕಾಲ ಮಿಂಚಿ ಹೋಗಿರುತ್ತದೆ.
ಭ್ರಷ್ಟಾಚಾರ ತಳಹದಿಯ ಅಧಿಕಾರದಾಹ, ಸ್ವಜನಪಕ್ಷಪಾತ, ಪ್ರತಿಷ್ಠೆ, ಹಠ, ಹಗೆ, ಒಣ ಸವಾಲುಗಳ ಸಮ್ಮಿಶ್ರಣದ ಪ್ರತಿಫಲವಾಗಿ ಬಿಜೆಪಿ ಮೂರು ತುಂಡಾಗಿದ್ದು ಸರಿಯಷ್ಟೇ. ಅದರ ಜತೆ ಅಧಿಕಾರವೂ ಕಿತ್ತುಕೊಂಡು ಹೋಗಿದ್ದೂ ನಿಜವಷ್ಟೇ. ಈಗ ತುಂಡುಗಳನ್ನು ಬೆಸೆಯುವ ಕಾರ್ಯ ಶುರುವಾಗಿದೆ. ಭವಿಷ್ಯದ ದೃಷ್ಟಿಯಿಂದ ಬಿಜೆಪಿ ಮತ್ತು ಯಡಿಯೂರಪ್ಪ ನೇತೃತ್ವದ ಕೆಜೆಪಿ ಮತ್ತೆ ಬೆರೆಯಬೇಕು ಎಂಬ ಅಭಿಪ್ರಾಯ ಎರಡೂ ಪಾಳೆಯದಲ್ಲಿ ವ್ಯಕ್ತವಾಗಿದೆ. ಯಡಿಯೂರಪ್ಪ ಅವರನ್ನು ಪಕ್ಷಕ್ಕೆ ಮತ್ತೆ ಸೇರಿಸಿಕೊಳ್ಳುವ ವಿಚಾರದಲ್ಲಿ ಬಿಜೆಪಿಯೊಳಗೆ ಎರಡು ಪಂಗಡಗಳಾಗಿದ್ದು, ದ್ವೇಷ ಹಾಗೂ ಪ್ರತಿಷ್ಠೆ ಈ ಪಂಗಡಗಳನ್ನು ಪರಸ್ಪರ ಆಳುತ್ತಿದೆ. ಹೀಗಾಗಿ ಯಡಿಯೂರಪ್ಪ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ವಿಚಾರದಲ್ಲಿ ಬಿಜೆಪಿ ಷರತ್ತುಗಳನ್ನು ಮುಂದೊಡ್ಡಿದೆ.
ಹೌದು, ಯಡಿಯೂರಪ್ಪ ಅವರಿಗೆ ಪಕ್ಷಕ್ಕೆ ಬರುವಂತೆ ಆಹ್ವಾನ ಕೊಡುವುದು ಬೇಡ. ಅವರು ಪಕ್ಷಕ್ಕೆ ಬರುವುದಾದರೆ ಅವರಾಗಿಯೇ ಅರ್ಜಿ ಹಾಕಿಕೊಳ್ಳಲಿ. ಆಮೇಲೆ ನೋಡೋಣ ಎಂಬ ತೀರ್ಮಾನಕ್ಕೆ ಬಿಜೆಪಿ ಕೋರ್ ಕಮಿಟಿ ಸಭೆ ಬಂದಿದೆ. ಆದರೆ, ಈ ಸಭೆಯ ತೀರ್ಮಾನಕ್ಕೆ ಮುನ್ನ ಭಿನ್ನಾಭಿಪ್ರಾಯಗಳು ಗರಿಗೆದರಿದ್ದು, ಅವುಗಳ ಹಿಂದೆ ದ್ವೇಷ ರಾಜಕಾರಣ ವಿಜೃಂಭಿಸಿದೆ.
ಕಳೆದ ವಿಧಾನಸಭೆ ಚುನಾವಣೆ ಫಲಿತಾಂಶ ಪರಾಮರ್ಶಿಸಿದಾಗ ಬಿಜೆಪಿಗೆ ಯಡಿಯೂರಪ್ಪ ಮತ್ತು ಯಡಿಯೂರಪ್ಪ ಅವರಿಗೆ ಬಿಜೆಪಿ ಅನಿವಾರ್ಯ ಎಂಬ ವಿಚಾರ ಹೊರಬಿದ್ದಿರುವುದಂತೂ ಸ್ಪಷ್ಟ. ಆದರೆ, ಮಿಂಚಿಹೋದ ಕಾರ್ಯಕ್ಕೆ ಚಿಂತಿಸಿ ಫಲವಿಲ್ಲ. ಈಗ ಎದ್ದು ಆ ಕುರಿತು ಆಲೋಚನೆ ಮಾಡಿದರೆ ಅದು ಆಲೋಚನೆಯಾಗಿಯೇ ಉಳಿಯುತ್ತದೆ ಹೊರತು ಏನನ್ನೂ ಸಾಧಿಸಲು ಸಾಧ್ಯವಿಲ್ಲ. ಇನ್ನು ಉಳಿದಿರುವುದು ಲೋಕಸಭೆ ಚುನಾವಣೆ. ಅದಕ್ಕೂ ಹೆಚ್ಚು ಸಮಯವಿಲ್ಲ. ಅತ್ತ ಕಾಂಗ್ರೆಸ್ ನೇತೃತ್ವದ ಯುಪಿಎ ತನ್ನ ಎರಡು ಅವಧಿಯ ಅಧಿಕಾರ ಪೂರ್ಣಗೊಳಿಸಿ ಮೂರನೇ ಬಾರಿ ಅಧಿಕಾರಕ್ಕೆ ಬರುವ ನಿರೀಕ್ಷೆಯಲ್ಲಿದೆ. ಇನ್ನೊಂದೆಡೆ ಬಿಜೆಪಿ ತನ್ನ ಅಳಿದುಳಿದ ಎನ್‌ಡಿಎ ಮೈತ್ರಿಕೂಟದ ಜತೆ ಅಧಿಕಾರಕ್ಕೇರುವ ಕನಸು ಕಾಣುತ್ತಿದೆ. ಹಾಗೆಂದು ಬಿಜೆಪಿಯಲ್ಲಿ ಇದಕ್ಕೆ ಪೂರಕವಾದ ಅಂಶಗಳಿಲ್ಲ. ಎನ್‌ಡಿಎ ಮೈತ್ರಿಕೂಟದಲ್ಲಿ ಬಿರುಕು ಕಾಣಿಸಿಕೊಂಡಿದೆ. ಅಷ್ಟೇ ಅಲ್ಲ, ರಾಷ್ಟ್ರೀಯ ಬಿಜೆಪಿಯಲ್ಲೂ ಆಂತರಿಕ ಜಗಳ ತಾರಕಕ್ಕೇರಿ, ಅದು ನರೇಂದ್ರ ಮೋದಿ ಮತ್ತು ಎಲ್.ಕೆ. ಆಡ್ವಾಣಿ ಅವರ ವಿರಸದಲ್ಲಿ ಕೊನೆಯಾಗಿದೆ. ಈ ಜಗಳ ಬಿಜೆಪಿ ಅಸ್ತಿತ್ವದಲ್ಲಿರುವ ರಾಜ್ಯಗಳಲ್ಲೂ ನೇರ ಅಥವಾ ಪರೋಕ್ಷ ಪರಿಣಾಮ ಬೀರಿರುವುದು ಸುಳ್ಳಲ್ಲ.
ಹೀಗಾಗಿ ಅಧಿಕಾರ ರಾಜಕಾರಣ, ಪಕ್ಷ ಸಂಘಟನೆಗಾಗಿ ಸಾಧ್ಯವಿರುವ ಎಲ್ಲಾ ಅವಕಾಶಗಳನ್ನು, ಋಣ ಸ್ವರೂಪ ಅವಕಾಶಗಳನ್ನೂ ಬಿಡದೆ ಬಳಸಿಕೊಳ್ಳುವುದು ಬಿಜೆಪಿಗೆ ಅನಿವಾರ್ಯ ಮತ್ತು ಅಗತ್ಯವೂ ಹೌದು. ಆದ್ದರಿಂದ ಯಾರಿಗೆ ಇಷ್ಟವಿರಲಿ, ಇಲ್ಲದೇ ಇರಲಿ ಅವಕಾಶ ಮತ್ತು ಅನುಕೂಲ ಸಿಂಧು ರಾಜಕಾರಣವನ್ನು ಬಳಸಿಕೊಳ್ಳಲು ಅದು ಪ್ರಯತ್ನಿಸುತ್ತಿದೆ. ಏಕೆಂದರೆ, ರಾಜಕಾರಣದಲ್ಲಿ ಅಧಿಕಾರವೇ ಪ್ರಧಾನ ಪಾತ್ರ ವಹಿಸುತ್ತದೆ ಮತ್ತು ರಾಜಕಾರಣ ನಡೆಯುವುದೇ ಅಧಿಕಾರಕ್ಕಾಗಿ. ಇದರಿಂದ ಯಡಿಯೂರಪ್ಪ ಮತ್ತು ಬಿಜೆಪಿ ಸಮ್ಮಿಲನ ಅನಿವಾರ್ಯ ಎನ್ನುವ ಹಂತಕ್ಕೆ ಬಂದು ನಿಂತಿದೆ.
ಆದರೆ, ಈ ಸಮ್ಮಿಲನಕ್ಕೆ ಪ್ರತಿಷ್ಠೆ ಅಡ್ಡಬರುತ್ತಿದೆ. ನಾವಾಗಿಯೇ ಕರೆಯಬೇಕೋ ಅಥವಾ ಅವರಾಗಿಯೇ ಬರಬೇಕೋ ಎಂಬ ಬಗ್ಗೆ ಗೊಂದಲ ಕಾಣಿಸಿಕೊಂಡಿದೆ. ಏಕೆಂದರೆ, ಒಮ್ಮೆ ಪಕ್ಷ ಬಿಟ್ಟವರನ್ನು ಮತ್ತೆ ಕರೆಯುವ ಸಂಪ್ರದಾಯ ಅಥವಾ ಅಭ್ಯಾಸ ಬಿಜೆಪಿಯಲ್ಲಿ ಇಲ್ಲ. ಮೊದಲಿನಿಂದಲೂ ಇದು ನಡೆದುಕೊಂಡು ಬಂದಿದೆ. ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಕಲ್ಯಾಣ್‌ಸಿಂಗ್ ಹಾಗೂ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಉಮಾಭಾರತಿ ಅವರು ನಾನಾ ಕಾರಣಗಳಿಂದ ಪಕ್ಷದ ನಾಯಕರ ವಿರುದ್ಧ ಮುನಿಸಿಕೊಂಡು ಪಕ್ಷ ತ್ಯಜಿಸಿದ್ದರು. ನಂತರದಲ್ಲಿ ಅವರನ್ನು ಯಾರೂ ಕರೆತರಲಿಲ್ಲ. ಕೆಲವು ವರ್ಷಗಳ ಬಳಿಕ ತಮಗೆ ಪಕ್ಷದ ಅನಿವಾರ್ಯತೆಯನ್ನು ಮನಗಂಡು ಅವರಾಗಿಯೇ ಪಕ್ಷಕ್ಕೆ ಬಂದರು. ಅವರು ಮತ್ತೆ ಬಿಜೆಪಿಗೆ ಬರುವುದಾಗಿ ಹೇಳಿದ ಬಳಿಕವೇ ಬೇರೆಯವರು ಮಧ್ಯಸ್ಥಿಕೆ ವಹಿಸಿದ್ದು. ಇದು ಬಿಜೆಪಿಯಲ್ಲಿ ನಡೆದು ಬಂದಿರುವ ಸಂಪ್ರದಾಯ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಪಕ್ಷಕ್ಕೆ ಸೇರುವ ವಿಚಾರದಲ್ಲೂ ಶನಿವಾರ ನಡೆದ ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆಯೂ ಇದನ್ನೇ ಪ್ರತಿಪಾದಿಸಿದೆ. ಯಡಿಯೂರಪ್ಪ ಅವರು ಪಕ್ಷಕ್ಕೆ ಬರಬಾರದೆಂದೇನೂ ಅಲ್ಲ. ಆದರೆ, ಅದಕ್ಕಾಗಿ ನಮ್ಮತನ ಬಿಟ್ಟುಕೊಡುವುದು ಅಥವಾ ವ್ಯಕ್ತಿಗಿಂತ ಪಕ್ಷ ದೊಡ್ಡದು ಎಂಬ ಪ್ರತಿಪಾದನೆಯನ್ನು ಬದಿಗಿಡಲು ಪಕ್ಷ ಸಿದ್ಧವಿಲ್ಲ. ಹೀಗಾಗಿ ಮತ್ತೆ ಪಕ್ಷಕ್ಕೆ ಬರುವುದಾದರೆ ಯಡಿಯೂರಪ್ಪ ಅವರೇ ಅರ್ಜಿ ಸಲ್ಲಿಸಲಿ ಎಂಬ ಅಭಿಪ್ರಾಯವನ್ನು ಕೋರ್ ಕಮಿಟಿ ವ್ಯಕ್ತಪಡಿಸಿದೆ.
ಯಡಿಯೂರಪ್ಪ ಅವರು ಬಿಜೆಪಿಗೆ ಬರುವ ವಿಚಾರದಲ್ಲಿ ಪ್ರಮುಖವಾಗಿ 'ಶತ್ರುವಿನ ಶತ್ರು ಮಿತ್ರ' ಎಂಬ ಅಂಶ ಪ್ರಾಧಾನ್ಯತೆ ಪಡೆದುಕೊಂಡಿದೆ. ಪಕ್ಷ ತಮಗೆ ಯಡಿಯೂರಪ್ಪ ಅವರನ್ನು ಕರೆತರುವ ಜವಾಬ್ದಾರಿ ನೀಡಿದೆ ಎಂದು ಮಾಜಿ ಮುಖ್ಯಮಂತ್ರಿ ಸದಾನಂದಗೌಡ ಅವರು ತಮ್ಮ ಆಪ್ತ ವಲಯದಲ್ಲಿ ಹೇಳುತ್ತಿದ್ದಾರಾದಾರೂ ಅದಕ್ಕಿಂತ ಮುಖ್ಯವಾದ ಅಂಶ ಇನ್ನೊಂದಿದೆ. ಸಂಸದ ಅನಂತಕುಮಾರ್ ಅವರ ಜತೆಗಿರುವ ಭಿನ್ನಾಭಿಪ್ರಾಯವೇ ಸದಾನಂದಗೌಡ ಅವರು ಈ ಪ್ರಕ್ರಿಯೆಯಲ್ಲಿ ಮುಂಚೂಣಿಯಲ್ಲಿರಲು ಕಾರಣವಾಗಿದೆ. ಮೊದಲಿನಿಂದಲೂ ಯಡಿಯೂರಪ್ಪ ಮತ್ತು ಸದಾನಂದಗೌಡ ಅವರು ಆತ್ಮೀಯರಾಗಿದ್ದವರು. 2008ರ ವಿಧಾನಸಭಾ ಚುನಾವಣೆಯಲ್ಲಿ ಇವರಿಬ್ಬರೇ ಪ್ರಮುಖ ಪಾತ್ರ ವಹಿಸಿದ್ದರು. ಟಿಕೆಟ್ ಹಂಚಿಕೆಯಿಂದ ಹಿಡಿದು ಪಕ್ಷ ಗೆದ್ದು ಅಧಿಕಾರಕ್ಕೆ ಬರುವವರೆಗೂ ಇವರ ಮಾತೇ ಅಂತಿಮವಾಗಿತ್ತು. ಆಗಲೇ ಸಂಸದ ಅನಂತಕುಮಾರ್ ಬಣ ಇವರಿಬ್ಬರ ವಿರುದ್ಧ ಸೆಟೆದು ನಿಂತಿತ್ತು.
ರಾಜಕಾರಣದಲ್ಲಿ ಉಂಟಾದ ಏರಿಳಿತಗಳಿಂದಾಗಿ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯಬೇಕಾಯಿತು. ಈ ಸಂದರ್ಭದಲ್ಲಿ ಜಗದೀಶ್ ಶೆಟ್ಟರ್ ಅವರು ಮುಖ್ಯಮಂತ್ರಿ ಸ್ಥಾನದ ಮೇಲೆ ಕಣ್ಣಿಟ್ಟಿದ್ದರೂ ಅವರು ಅನಂತಕುಮಾರ್ ಬಣ ಎಂಬ ಕಾರಣಕ್ಕಾಗಿ ಶಾಸಕರೇ ಅಲ್ಲದ ಸದಾನಂದಗೌಡರಿಗೆ ಯಡಿಯೂರಪ್ಪ ಮುಖ್ಯಮಂತ್ರಿ ಪಟ್ಟ ಕಟ್ಟಿದರು. ಇದು ಇವರಿಬ್ಬರ ಮೇಲೆ ಅನಂತಕುಮಾರ್ ಗುಂಪಿನ ಸಿಟ್ಟನ್ನು ಹೆಚ್ಚಿಸಿತ್ತು. ನಂತರ ತಮ್ಮ ಆಣತಿಯಂತೆ ನಡೆಯುತ್ತಿಲ್ಲ ಎಂಬ ಕಾರಣಕ್ಕೆ ಸದಾನಂದಗೌಡರನ್ನು ಕೆಳಗಿಳಿಸಿದ ಯಡಿಯೂರಪ್ಪ ಅವರು ಜಗದೀಶ್ ಶೆಟ್ಟರ್ ಅವರನ್ನು ಒಲ್ಲದ ಮನಸ್ಸಿನಿಂದಲೇ ಅಧಿಕಾರಕ್ಕೆ ತಂದರು. ಜಗದೀಶ್ ಶೆಟ್ಟರ್ ತಮ್ಮವರೇ ಆಗಿದ್ದರೂ ಅವರಿಗೆ ಯಡಿಯೂರಪ್ಪ ಪಟ್ಟ ಕಟ್ಟಿದವರು. ಇದನ್ನು ಸಹಿಸಲು ಅನಂತಕುಮಾರ್‌ಗೆ ಸಾಧ್ಯವಾಗಲಿಲ್ಲ. ಹಾಗಾಗಿ ಯಡಿಯೂರಪ್ಪ ಮತ್ತು ಸದಾನಂದಗೌಡರ ವಿರುದ್ಧ ಅನಂತಕುಮಾರ್ ಅವರ ಆಂತರ್ಯದಲ್ಲಿ ದ್ವೇಷ ಇಮ್ಮಡಿಯಾಗುತ್ತಾ ಬಂತು. ಕೆ.ಎಸ್.ಈಶ್ವರಪ್ಪ ನಂತರ ಹೊಸ ರಾಜ್ಯಾಧ್ಯಕ್ಷರನ್ನು ಆಯ್ಕೆ ಮಾಡುವ ಸಂದರ್ಭದಲ್ಲಿ ಇದನ್ನು ತೀರಿಸಿಕೊಂಡರು. ಸದಾನಂದಗೌಡ ಅವರಿಗೆ ಅಡ್ಡಗಾಲು ಹಾಕಿ ತಮ್ಮವರೇ ಆದ ಪ್ರಹ್ಲಾದ ಜೋಶಿ ಅವರಿಗೆ ರಾಜ್ಯಾಧ್ಯಕ್ಷ ಸ್ಥಾನ ಸಿಗುವಂತೆ ನೋಡಿಕೊಂಡರು. ಈಗ ಅನಂತಕುಮಾರ್ ಅವರ ಮೇಲಿನ ಈ ಹಳೇ ಜಿದ್ದು ತೀರಿಸಿಕೊಳ್ಳಲು ಸದಾನಂದಗೌಡರ ತಂಡ ಹೊರಟಿದೆ. ಸಂಸದ ಡಿ.ಬಿ. ಚಂದ್ರೇಗೌಡ, ಮಾಜಿ ಸಚಿವರಾದ ಅರವಿಂದ ಲಿಂಬಾವಳಿ, ಬಸವರಾಜ ಬೊಮ್ಮಾಯಿ, ಉಮೇಶ್ ಕತ್ತಿ, ಮುರುಗೇಶ್ ನಿರಾಣಿ, ಡಿ.ಎನ್. ಜೀವರಾಜ್, ಶಾಸಕ ಗೋ. ಮಧುಸೂಧನ್ ಮತ್ತಿತರರು ಈ ತಂಡದಲ್ಲಿದ್ದಾರೆ.
ಪ್ರಸ್ತುತ ಸದಾನಂದಗೌಡ ಅವರು ವಿಧಾನ ಪರಿಷತ್ತಿನಲ್ಲಿ ಪ್ರತಿಪಕ್ಷ ನಾಯಕರಾಗಿದ್ದಾರಾದರೂ 2014ರ ಜೂನ್ ವೇಳೆಗೆ ಅವರ ಅವಧಿ ಮುಗಿಯುತ್ತದೆ. ಅಷ್ಟರೊಳಗೆ ಬೇರೆ ಹುದ್ದೆ ಗಿಟ್ಟಿಸಿಕೊಳ್ಳಬೇಕು ಎನ್ನುವುದು ಅವರ ಮಹದಾಸೆ. ಇದಕ್ಕೆ ಯಡಿಯೂರಪ್ಪ ಅವರ ಸಹಾಯವೂ ಬೇಕಾಗುತ್ತದೆ. ಹಾಗಾಗಿ ಯಡಿಯೂರಪ್ಪ ಅವರನ್ನು ಪಕ್ಷಕ್ಕೆ ಕರೆತಂದರೆ ಅವರ ಜತೆಗೆ ಅವರಿಗೂ ಲಾಭವಾಗುತ್ತದೆ. ಇನ್ನೊಂದೆಡೆ ತಮಗೂ ಅನುಕೂಲವಾಗಬಹುದು ಎಂಬ ದೂರಾಲೋಚನೆ ಅವರದ್ದು. ಏಕೆಂದರೆ, ಪ್ರಸಕ್ತ ವಿಧಾನಸಭೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ತಲಾ 40 ಸ್ಥಾನಗಳನ್ನು ಪಡೆದುಕೊಂಡಿದ್ದರೂ ಅಧಿಕೃತ ಪ್ರತಿಪಕ್ಷ ಸ್ಥಾನ ಮಾತ್ರ ಬಿಜೆಪಿಗೆ ಸಿಗಲಿಲ್ಲ. ಗೆದ್ದ ಅಭ್ಯರ್ಥಿಗಳು ಪಡೆದ ಮತ ಆಧರಿಸಿ ಜೆಡಿಎಸ್ ಆ ಸ್ಥಾನವನ್ನು ಗಿಟ್ಟಿಸಿಕೊಂಡಿದೆ. ಒಂದು ವೇಳೆ ಯಡಿಯೂರಪ್ಪ ಅವರು ಬಿಜೆಪಿಗೆ ಬಂದರೆ ವಿಧಾನಸಭೆಯಲ್ಲಿ ಸಹಜವಾಗಿಯೇ ಬಿಜೆಪಿ ಪ್ರತಿಪಕ್ಷ ಸ್ಥಾನ ಹೊಂದುತ್ತದೆ. ಈ ಸಂದರ್ಭದಲ್ಲಿ ಯಡಿಯೂರಪ್ಪ ಅವರಿಗೆ ಪ್ರತಿಪಕ್ಷ ನಾಯಕನ ಸ್ಥಾನ ಕಟ್ಟಿದರೆ ಮುಂದೆ ರಾಜ್ಯಾಧ್ಯಕ್ಷ ಸ್ಥಾನ ತಾವು ಪಡೆದುಕೊಳ್ಳಬಹುದು ಎಂಬ ಮಹದಾಸೆ ಅವರದ್ದು. ಹೀಗಾಗಿ ಶತಾಯ-ಗತಾಯ ಯಡಿಯೂರಪ್ಪ ಅವರನ್ನು ಪಕ್ಷಕ್ಕೆ ಕರೆತರಲು ತುದಿಗಾಲಲ್ಲಿ ನಿಂತಿದ್ದಾರೆ.
ಹಾಗೆಂದು ಸದಾನಂದಗೌಡ ಅಂದುಕೊಂಡಂತೆ ಎಲ್ಲವೂ ನಡೆಯುತ್ತದೆ ಎನ್ನಲು ಸಾಧ್ಯವಿಲ್ಲ. ಏಕೆಂದರೆ, ಅವರ ತಂತ್ರಗಳಿಗೆ ಪ್ರತಿತಂತ್ರ ಹೆಣೆಯುವ ಕಾರ್ಯವನ್ನು ಜಗದೀಶ್ ಶೆಟ್ಟರ್ ಕೂಡ ಆರಂಭಿಸಿದ್ದಾರೆ. ಯಡಿಯೂರಪ್ಪ ಪಕ್ಷಕ್ಕೆ ಬರಲು ತಮ್ಮ ಬೆಂಬಲವೂ ಇದೆ ಎಂಬುದನ್ನು ಪ್ರತಿಬಿಂಬಿಸಲು ಹೊರಟಿದ್ದಾರೆ. ಮೊದಲಿನಿಂದಲೂ ಅನಂತಕುಮಾರ್ ಬಣದಲ್ಲಿರುವ ಜಗದೀಶ್ ಶೆಟ್ಟರ್ ಹಿಂದೆ ಸದಾನಂದಗೌಡರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸುವ ಸಂದರ್ಭದಲ್ಲಿ ಅಧಿಕಾರಕ್ಕಾಗಿ ಯಡಿಯೂರಪ್ಪ ಅವರ ಜತೆ ಸೇರಿಕೊಂಡರು. ಇದೀಗ ಮತ್ತೆ ಅದೇ ರೀತಿ ಮುಂದುವರಿದು ತಾವಾಗಿ ಯಡಿಯೂರಪ್ಪ ಅವರನ್ನು ಪಕ್ಷಕ್ಕೆ ಸ್ವಾಗತಿಸಿದರೆ ತಮ್ಮ ಸ್ಥಾನಕ್ಕೆ ಯಾವುದೇ ಧಕ್ಕೆಯಾಗುವುದಿಲ್ಲ. ಯಡಿಯೂರಪ್ಪ ಅವರನ್ನು ಪಕ್ಷಕ್ಕೆ ಕರೆತಂದು ಅವರಿಗೆ ರಾಜ್ಯಾಧ್ಯಕ್ಷ ಸ್ಥಾನ ನೀಡಿದರೆ ವಿಧಾನಸಭೆಯಲ್ಲಿ ಪ್ರತಿಪಕ್ಷ ನಾಯಕನ ಸ್ಥಾನ ತಮಗೆ ಉಳಿಯುತ್ತದೆ ಎಂಬ ಅಭೀಪ್ಸೆ ಶೆಟ್ಟರ್ ಅವರದ್ದು. ಅದಕ್ಕಾಗಿಯೇ ಅವರು ಮತ್ತೆ ಯಡಿಯೂರಪ್ಪ ಪರ ಬ್ಯಾಟಿಂಗ್ ಆರಂಭಿಸಿದ್ದಾರೆ.
ಇನ್ನು ಯಡಿಯೂರಪ್ಪ ಅವರ ಪರಿಸ್ಥಿತಿಯೂ ಅಂದುಕೊಂಡಷ್ಟು ಉತ್ತಮವಾಗಿಲ್ಲ. ಇಂದಲ್ಲ ನಾಳೆ ಬಿಜೆಪಿಗೆ ಬರುವುದು ಅವರಿಗೆ ಅನಿವಾರ್ಯ. ಏಕೆಂದರೆ, ಯಡಿಯೂರಪ್ಪ ಅವರ ಜತೆ ಬಿಜೆಪಿ ತೊರೆದು ಕೆಜೆಪಿ ಸೇರಿದವರೆಲ್ಲರೂ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸೋತು ಸುಣ್ಣವಾಗಿದ್ದಾರೆ. ಶೋಭಾ ಕರಂದ್ಲಾಜೆ, ಸಿ.ಎಂ. ಉದಾಸಿ, ಎಂ.ಪಿ. ರೇಣುಕಾಚಾರ್ಯ, ಸುನೀಲ್ ವಲ್ಯಾಪುರೆ, ಶಿವರಾಜ್ ಸಜ್ಜನ್, ಮೋಹನ್ ಲಿಂಬಿಕಾಯಿ, ನೆಹರೂ ಓಲೆಕಾರ್, ಎಂ. ಚಂದ್ರಪ್ಪ ಮೊದಲಾದವರು ಚುನಾವಣೆ ಬಳಿಕ ಮನೆ ಸೇರಿದ್ದಾರೆ. ತಮ್ಮನ್ನು ಹೊರತುಪಡಿಸಿ ಪಕ್ಷದಿಂದ ಗೆದ್ದಿರುವ ಬಿ.ಆರ್. ಪಾಟೀಲ್ ಸೇರಿದಂತೆ ಇತರೆ ಐದು ಮಂದಿ ತಮ್ಮ ಗುಂಪಿನಲ್ಲಿ ಹೊಸಬರು. ಹೀಗಾಗಿ ಅತ್ತ ಅಧಿಕಾರವೂ ಇಲ್ಲ, ಇತ್ತ ಯಾವುದೇ ಲಾಭವೂ ಇಲ್ಲ ಎಂದಾದರೆ ಅವರು ತಾನೇ ಎಷ್ಟು ಕಾಲ ಯಡಿಯೂರಪ್ಪ ಅವರ ಜತೆ ಇರಲು ಸಾಧ್ಯ? ಒಂದೊಮ್ಮೆ ಅವರೆಲ್ಲಾ ತಮ್ಮದೇ ದಾರಿ ಹುಡುಕಿಕೊಂಡರೆ ಯಡಿಯೂರಪ್ಪ ಅವರು ಏಕಾಂಗಿಯಾಗುತ್ತಾರೆ. ಹೀಗಾಗಿ ಮತ್ತೆ ಬಿಜೆಪಿಗೆ ಅರ್ಜಿ ಹಾಕಬೇಕಾದ ಅನಿವಾರ್ಯತೆಗೆ ಸಿಲುಕಿದ್ದಾರೆ. ಹಾಕದಿದ್ದರೆ ವಿಧಿ ಇಲ್ಲ.

ಲಗೋರಿ: ಒಣ ಪ್ರತಿಷ್ಠೆಯಿಂದ ಸೋಲನ್ನು ಮುಚ್ಚಿಕೊಳ್ಳುವುದಕ್ಕೆ ಸಾಧ್ಯವಿಲ್ಲ.

- ಪಿ. ತ್ಯಾಗರಾಜ್
thyagarjun@gmail.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.