ಆ ಕಾಡಿನ ಕುವರ ಆಡಿದ ಮಾತು ಕಾಡುತ್ತಲೇ ಇದೆ...
ನಾನು ನಿಮಗೆ ಗೊರಿಲ್ಲಾ ವಿಸ್ಪರರ್ (Gorilla Whisperer) ಕುರಿತು ಹೇಳಲೇಬೇಕು.

ನಾನು ನಿಮಗೆ ಗೊರಿಲ್ಲಾ ವಿಸ್ಪರರ್ (Gorilla Whisperer) ಕುರಿತು ಹೇಳಲೇಬೇಕು. ಬಹಳ ಜನ ಓದುಗರು ಗೊರಿಲ್ಲಾಗಳ ಕುರಿತು ಸಾಮಾನ್ಯ ಪ್ರಶ್ನೆ ಕೇಳಿ ಉತ್ತರ ಬಯಸಿದ್ದಾರೆ. ಕಾಡಿನಲ್ಲಿರುವ ವೈಲ್ಡ್ ಗೊರಿಲ್ಲಾಗಳು ಮನುಷ್ಯರ ಮೇಲೆ ದಾಳಿ ಮಾಡುವುದಿಲ್ಲವಾ? ನಿಮ್ಮನ್ನು ಅಷ್ಟು ಹತ್ತಿರಕ್ಕೆ ಹೇಗೆ ಬಿಟ್ಟುಕೊಳ್ಳುತ್ತವೆ? ಅಷ್ಟು ಹತ್ತಿರಕ್ಕೆ ಹೇಗೆ ಹೋಗಲು ಸಾಧ್ಯ? ಅವು ಹಠಾತ್ ದಾಳಿ ಮಾಡಿದರೆ ಏನು ಕತೆ? ಇಲ್ಲಿ ತನಕ ಅವು ಯಾರ ಮೇಲೂ ದಾಳಿಮಾಡಿಲ್ಲವಾ? ಇವೇ ಮುಂತಾದ ಪ್ರಶ್ನೆಗಳನ್ನು ಹಲವಾರು ಓದುಗರು ಕೇಳಿದ್ದಾರೆ.
ನಾವು ಗೊರಿಲ್ಲಾ ದರ್ಶನಕ್ಕೆಂದು ಹೊರಟಾಗ ಈ ಎಲ್ಲಾ ಪ್ರಶ್ನೆಗಳು ಕೂಡ ನನ್ನವಾಗಿದ್ದವು. ನಮ್ಮ ಟೂರಿಸ್ಟ್ ಗೈಡ್ ಫ್ರಾಂಕೋಯಿಸ್ ಬಿಗಿರಿಮಾನನ್ನು ಕುಳ್ಳಿರಿಸಿಕೊಂಡು ನಾವೆಲ್ಲರೂ ಚಿಕ್ಕ ಮಗುವಿನಂತೆ ಪ್ರಶ್ನೆಗಳನ್ನು ಅವನಿಗೆ ಕೇಳಿದ್ದೆವು. ಬೇರೆ ಯಾರೇ ಉತ್ತರ ಹೇಳಿದರೂ ಅಷ್ಟು ಸಮಾಧಾನವಾಗುತ್ತಿರಲಿಲ್ಲವೇನೋ?
ಆದರೆ ಈ ಫ್ರಾಂಕೋಯಿಸ್ ಇದ್ದಾನಲ್ಲ, ಈತ ಮೂಲತಃ ಗೊರಿಲ್ಲಾ ವಿಸ್ಪರರ್. ಅಂದ್ರೆ ಗೊರಿಲ್ಲಾಗಳ ಜತೆ ಸಂಭಾಷಣೆ ನಡೆಸಬಲ್ಲ. ತನ್ನ ಹಾವಭಾವ, ಸಂಜ್ಞೆ, ಮೆಲುನುಡಿಯ ಮೂಲಕ ಅವುಗಳೊಂದಿಗೆ ಮಾತಾಡಬಲ್ಲ. ಅವುಗಳನ್ನು ನೋಡಿದ ತಕ್ಷಣ ಅವುಗಳ ಮೂಡು ಹೇಗಿದೆಯೆಂದು ನಿರ್ಧರಿಸಬಲ್ಲವ. ಅವುಗಳ ವರ್ತನೆ, ಚಡಪಡಿಕೆ ನೋಡಿ ಅವುಗಳ ಮನಸ್ಸಿನ ಹುಯ್ದಾಟವನ್ನು ಪತ್ತೆಹಚ್ಚಬಲ್ಲವ. ಆತನಿಗೆ ಗೊರಿಲ್ಲಾಗಳ ಭಾಷೆ ಗೊತ್ತು. ಅದೇ ಭಾಷೆ ಈತನಿಗೂ ಗೊತ್ತು. ಬೇರೆ ಬೇರೆ ಧ್ವನಿಗಳ ಮೂಲಕವೇ ಅವುಗಳೊಂದಿಗೆ ಸಂಭಾಷಣೆ ನಡೆಸಬಲ್ಲ. ಅಷ್ಟಕ್ಕೂ ಅವುಗಳ ಜತೆ ತುಟಿ ಬಿಚ್ಚದೇ, ಗಂಟಲಲ್ಲೇ ಧ್ವನಿಯನ್ನು ಹೊಮ್ಮಿಸಿ, ಸರಾಗವಾಗಿ ಮಾತಾಡಬಲ್ಲ.
ಈ ಕೆಲಸವನ್ನು ಆತ ಕಳೆದ ನಲವತ್ತು ವರ್ಷಗಳಿಂದ ಮಾಡಿಕೊಂಡು ಬಂದಿದ್ದಾನೆ. ತನ್ನೊಂದಿಗೆ ಸುಮಾರು ಇಪ್ಪತ್ತು ಜನರಿಗೂ ಈ ಭಾಷೆಯನ್ನು ಕಲಿಸಿ ತರಬೇತು ಮಾಡಿದ್ದಾನೆ. ಅವನೊಂದಿಗೆ ಏಳೆಂಟು ಗಂಟೆ ಇದ್ದ ನಮಗೂ ಆ ಭಾಷೆಯನ್ನು ಕಲಿಸುತ್ತಾನೆ. ತನ್ನೊಂದಿಗೆ ಅದೇ ಭಾಷೆಯಲ್ಲಿ ಮಾತಾಡಿ. ತಾನೂ ಹೆಚ್ಚು ಕಮ್ಮಿ ಗೊರಿಲ್ಲಾನೇ ಎಂದು ತಮಾಷೆ ಮಾಡುತ್ತಾನೆ.
ಗೊರಿಲ್ಲಾ ಅಧ್ಯಯನಕ್ಕೆಂದು ಯಾರೇ ಬರಲಿ, ಅವರಿಗೆ ಈ ಸಂಭಾಷಣೆಕಾರರು (ವಿಸ್ಪರರ್) ಬೇಕೇ ಬೇಕು. ಇವರಿಲ್ಲದೇ ಗೊರಿಲ್ಲಾಗಳನ್ನು ಕಾಡಿನಲ್ಲಿ ನೋಡುವುದು ಸಾಧ್ಯವಿಲ್ಲ. ಒಂದುವೇಳೆ ಇವರನ್ನಿಟ್ಟುಕೊಳ್ಳದೆ ಕಾಡಿಗಿಳಿದರೆ ಅಪಾಯ!
ನಲವತ್ತು ವರ್ಷಗಳ ಹಿಂದೆ ರವಾಂಡಾದ ಕಾಡಿನಲ್ಲಿ ಗೊರಿಲ್ಲಾ ಮರಿಯೊಂದನ್ನು ಫ್ರಾಂಕೋಯಿಸ್ ಜೀವದ ಹಂಗು ತೊರೆದು ಕಳ್ಳಸಾಗಣೆದಾರರ ಕಪಿಮುಷ್ಠಿಯಿಂದ ರಕ್ಷಿಸಿದ್ದ. ಅವನ 'ಸಾಹಸ'ವನ್ನು ಪ್ರಶಂಸಿಸಿ ಗೊರಿಲ್ಲಾ ಚಾರಣವನ್ನು ಸಂಘಟಿಸುವ ರವಾಂಡಾ ಡವಲಪ್‌ಮೆಂಟ್ ಬೋರ್ಡ್ ಆತನಿಗೆ ಟೂರಿಸ್ಟ್ ಗೈಡ್ ಕೆಲಸ ಕೊಟ್ಟಿತು. ಅಂದಿನಿಂದ ಇಲ್ಲಿತನಕ ಫ್ರಾಂಕೋಯಿಸ್ ಗೊರಿಲ್ಲಾಗಳ ಸಹವಾಸವನ್ನೇ ಕಾಯಕ ಮಾಡಿಕೊಂಡಿದ್ದಾನೆ.
ಅಂದು ಮೊದಲ ಬಾರಿಗೆ ಗೊರಿಲ್ಲಾ ಎದುರಾದಾಗ ಫ್ರಾಂಕೋಯಿಸ್ ಏಕಾಏಕಿ ಅವುಗಳ ಮೂಡನ್ನು ನಿರ್ಧರಿಸಿದವನೇ, ಮೆಲುದನಿಯಲ್ಲಿ 'ಬನ್ನಿ ಬನ್ನಿ ಹತ್ತಿರ ಹೋಗಿ, ಪರವಾಗಿಲ್ಲ. ಅವುಗಳಿಗೆ ಹೊಟ್ಟೆ ತುಂಬಿದೆ. ಮುಖದಲ್ಲಿ ಯಾವುದೇ ಬಳಲಿಕೆಯಿಲ್ಲ. ಮರಿಗಳ ಆರೋಗ್ಯವೂ ಚೆನ್ನಾಗಿದೆ. ಹೀಗಾಗಿ ತಲೆಬಿಸಿಯಿಲ್ಲ. ಅಷ್ಟು ದೂರ ನಿಂತಿದ್ದೀರಿ ಏಕೆ? ಬನ್ನಿ ಬನ್ನಿ ಇನ್ನೂ ಹತ್ತಿರ ಹೋಗಬಹುದು, ಏನೂ ಮಾಡೊಲ್ಲ' ಎಂದು ನಮ್ಮೆಲ್ಲರನ್ನು ಅಕ್ಷರಶಃ ಕೈಹಿಡಿದು ನಮ್ಮ 'ಪೂರ್ವಿಕರ' ಹತ್ತಿರಕ್ಕೆ ಎಳೆದುಬಿಟ್ಟ.
ಅಬ್ಬಾ! ಅಷ್ಟು ಹತ್ತಿರ!
'ನಾನು ನಿಮಗೆ ಹೇಳಿಕೊಟ್ಟಿದ್ದೇನಲ್ಲ, ಆ ನಿಯಮಗಳನ್ನೆಲ್ಲ ಚಾಚೂತಪ್ಪದೇ ಪಾಲಿಸಿ' ಎಂಬ ಕಿವಿಮಾತನ್ನೂ ನೆನಪಿಸಲು ಆತ ಮರೆಯಲಿಲ್ಲ.
ಗೊರಿಲ್ಲಾ ಚಾರಣಕ್ಕೆ ಹೊರಡುವ ಮುನ್ನ ಬೇಸ್‌ಕ್ಯಾಂಪ್‌ನಲ್ಲಿ ಫ್ರಾಂಕೋಯಿಸ್ ನಮ್ಮ ತಂಡದ ಸದಸ್ಯರನ್ನೆಲ್ಲ ಸುತ್ತ ಕುಳ್ಳಿರಿಸಿಕೊಂಡು, 'ನಾನು ಕೆಲವು ಹಿಕಮತ್ತುಗಳನ್ನು ಹೇಳಿಕೊಡುತ್ತೇನೆ. ನೀವು ಅವನ್ನು ಪಾಲಿಸಬೇಕು. ಯಾವುದೇ ಕಾರಣಕ್ಕೂ ಗೊರಿಲ್ಲಾಗಳನ್ನು ಕಂಡತಕ್ಷಣ ಕೂಗಿ ಅಬ್ಬರಿಸಬಾರದು. ಅವುಗಳನ್ನು ಅಣಕಿಸಬಾರದು. ಸಾಧ್ಯವಾದರೆ ಅವುಗಳ ಕಣ್ಣನ್ನು ದಿಟ್ಟಿಸಿ ನೋಡುವುದನ್ನು ತಪ್ಪಿಸಿ. ಅದು ನಿಮ್ಮನ್ನು ನೋಡುತ್ತಿದೆಯೆಂದರೆ ನೀವು ಅದಕ್ಕೆ ದೃಷ್ಟಿ ಕೊಡಬೇಡಿ. ಅವುಗಳನ್ನು ಕಂಡ ತಕ್ಷಣ ಕೆಮರಾದಿಂದ ಎಷ್ಟು ಬೇಕಾದರೂ ಫೋಟೋ ಕ್ಲಿಕ್ಕಿಸಬಹುದು. ಆದರೆ ಯಾವುದೇ ಕಾರಣಕ್ಕೂ ಫ್ಲ್ಯಾಷ್ ಬಳಸಬೇಡಿ. ನಾನು ಹೇಳಿಕೊಟ್ಟ ಸಂಜ್ಞೆಯನ್ನು ಒಬ್ಬರೇ ಏಕಕಾಲಕ್ಕೆ ಬಳಸಬಹುದು. ಒಂದೇ ಸಮಯದಲ್ಲಿ ಎಲ್ಲರೂ ಬೇರೆಬೇರೆ ದನಿಯಲ್ಲಿ ಮಾತಾಡಲು ಪ್ರಯತ್ನಿಸಿದರೆ ಗೊರಿಲ್ಲಾಗಳಿಗೆ ಗೊಂದಲವಾಗಿ ಅಪಾಯ ಎದುರಾಗಬಹುದು. ಆದ್ದರಿಂದ ಆ ಕೆಲಸವನ್ನು ನನಗೇ ಬಿಟ್ಟುಬಿಡಿ. ಗೊರಿಲ್ಲಾಗಳು ಎದೆ ಬಡಿದುಕೊಂಡರೆ, ಅಲ್ಲಿಂದ ಹಠಾತ್ತನೆ ನಿರ್ಗಮಿಸಬೇಕು. ಅವು ಯಾವ ಭಂಗಿಯಲ್ಲಿವೆಯೋ ಅದೇ ಭಂಗಿಯಲ್ಲಿ ಫೋಟೋ ತೆಗೆಯಿರಿ. ನಿಮಗಾಗಿ ಪೋಸು ಕೊಡುವಂತೆ ಒತ್ತಾಯಿಸಬೇಡಿ. ಅವುಗಳ ಲಕ್ಷ್ಯ ಸೆಳೆಯುವ ಪ್ರಯತ್ನ ಮಾಡಬೇಡಿ. ಒಂದು ಮುಖ್ಯ ಸಂಗತಿ ಗೊತ್ತಿರಲಿ, ಅವು ವೈಲ್ಡ್ ಗೊರಿಲ್ಲಾಗಳು. ತರಬೇತು ಗೊಳಿಸಿದವುಗಳಲ್ಲ, ಪಳಗಿಸಿದ ಪ್ರಾಣಿಯಲ್ಲ. ಅಷ್ಟಕ್ಕೂ ಅವುಗಳ ಭಾಷೆಯನ್ನು ನಾವು ಕಲಿತಿದ್ದೇವೆ ಅಥವಾ ಕಲಿಯಲು ಇನ್ನೂ ಪ್ರಯತ್ನಿಸುತ್ತಲೇ ಇದ್ದೇವೆ. ನಮ್ಮ ಭಾಷೆ ಅವುಗಳಿಗೆ ಎಷ್ಟು ಅರ್ಥವಾಗಿದೆ ಎಂಬುದು ನಮಗೆ ಗೊತ್ತಾಗುವುದಾದರೂ ಹೇಗೆ? ಹೀಗಾಗಿ ನಾವು ಅತಿಕಡಿಮೆ ಅಂದ್ರೆ ಹದಿನಾರು ಬೇರೆ ಬೇರೆ ಒಳದನಿಯ ಸಂಜ್ಞೆಗಳ ಮೂಲಕವೇ ವ್ಯವಹರಿಸಬೇಕು. ಅದಕ್ಕಿಂತ ಹೆಚ್ಚಿನ ಬೇರೆ ಬೇರೆ ಧ್ವನಿಗಳನ್ನು ಬಳಸಿದರೆ ಅವುಗಳಿಗೆ ಗೊಂದಲವಾಗಬಹುದು. ಎಲ್ಲ ಧ್ವನಿಗಳನ್ನು ಗ್ರಹಿಸಿಕೊಳ್ಳಲು ಅವುಗಳಿಗೆ ಸಾಧ್ಯವಾಗದಿರಬಹುದು. ಗೊರಿಲ್ಲಾ ನಿಮ್ಮ ಮೈಯನ್ನು ಸವರಿಕೊಂಡು ಹೋಗುತ್ತದೆ. ಹೆದರಬೇಕಿಲ್ಲ, ಆದರೆ ನಾನು ಅದನ್ನು encourage ಮಾಡುವುದಿಲ್ಲ. ಯಾಕೆಂದರೆ ನಿಮ್ಮಲ್ಲೇನಾದರೂ ಸೋಂಕು ರೋಗವಿದ್ದರೆ ಅವುಗಳಿಗೆ ತಟ್ಟನೆ ವರ್ಗವಾಗುವ ಸಾಧ್ಯತೆಯಿರುತ್ತದೆ. ಅಷ್ಟಾಗಿಯೂ ಅದು ಹತ್ತಿರ ಹಾದು ಹೋದರೆ ಹೋಗಲಿ, ನೀವು ಭಯದಿಂದ ಕಕ್ಕಾಬಿಕ್ಕಿಯಾದರೆ ಮಾತ್ರ ಅದೂ ಕಕ್ಕಾಬಿಕ್ಕಿಯಾಗಿ ಅಡ್ಡಾದಿಡ್ಡಿ ವರ್ತಿಸಬಹುದು. ಇಷ್ಟಾಗಿಯೂ ನನ್ನ ನಲವತ್ತು ವರ್ಷಗಳ ಅನುಭವದಲ್ಲಿ ನಾನು ಹೇಳಿದ್ದು ಗೊರಿಲ್ಲಾಗಳಿಗೆ ಅರ್ಥವಾಗಿದೆ. ಒಮ್ಮೊಮ್ಮೆ ಮನುಷ್ಯರಿಗೇ ಅರ್ಥವಾಗಿಲ್ಲ' ಎಂದು ತನ್ನ ಎದೆಯನ್ನು ಎರಡೂ ಕೈಗಳಿಂದ ಬಡಿದುಕೊಂಡು ಗೊರಿಲ್ಲಾದಂತೆ ಜೋರಾಗಿ ನಕ್ಕ.
ಕಾಡಿನಲ್ಲಿ ಗೊರಿಲ್ಲಾಗಳು ಇಂಥದೇ ಜಾಗದಲ್ಲಿ ಬೀಡುಬಿಟ್ಟಿವೆ ಎಂಬುದು ಫ್ರಾಂಕೋಯಿಸ್‌ಗೆ ಅದು ಹೇಗೆ ಗೊತ್ತಾಗುವುದೋ ಆ ದೇವನೇ ಬಲ್ಲ. ಯಾಕೆಂದರೆ ಗೊರಿಲ್ಲಾಗಳು ನಿನ್ನೆ ಇದ್ದ ಕಡೆ ಇವತ್ತು ಇರೊಲ್ಲ. ಅರ್ಧಗಂಟೆ ಒಂದೆಡೆ ಕುಳಿತಿರೊಲ್ಲ. ಮರದಿಂದ ಮರಕ್ಕೆ ಹಾರುತ್ತ, ನೆಲದ ಮೇಲೆ ನಡೆಯುತ್ತಾ ಚಲಿಸುತ್ತಲೇ ಇರುತ್ತವೆ. ಹೀಗಿರುವಾಗ ಆ ದುರ್ಗಮ, ಗೊಂಡಾರಣ್ಯದಲ್ಲಿ ಅವುಗಳನ್ನು ಹುಡುಕುವುದಾದರೂ ಹೇಗೆ? ಮನುಷ್ಯನೇ ದಿಕ್ಕುತಪ್ಪಿ ಕಳೆದುಹೋಗಬಹುದಾದ ಆ ಕಾಡಿನಲ್ಲಿ, ಗೊರಿಲ್ಲಾಗಳ ಜಾಡನ್ನು ಅರಸುವುದಾದರೂ ಹೇಗೆ?
ಈ ಪ್ರಶ್ನೆಯನ್ನು ಫ್ರಾಂಕೋಯಿಸ್‌ಗೆ ಕೇಳಿದಾಗ ಆತ ಬಹಳ ಸಮಂಜಸವಾಗಿ ವಿವರಿಸಿದ- 'ನನ್ನ ದೃಷ್ಟಿಯಲ್ಲಿ ಗೊರಿಲ್ಲಾಗಳಿಗೂ ಮನುಷ್ಯರಿಗೂ ವ್ಯತ್ಯಾಸವಿಲ್ಲ. ಶೇ.96ರಷ್ಟು ನಮಗೂ ಅವುಗಳಿಗೂ ಸಾಮ್ಯತೆಯಿದೆ. ಗೊರಿಲ್ಲಾಗಳ ಮಲ-ಮೂತ್ರ ಮನುಷ್ಯರ ಮಲ-ಮೂತ್ರದಂತೆ, ಇಲ್ಲವೇ ಇನ್ನಷ್ಟು ದುರ್ನಾತ ಬೀರುತ್ತದೆ. ಕಾಡಿಗಿಳಿದಾಗ ಮೊದಲು ಈ ವಾಸನೆಯ ಜಾಡು ಹಿಡಿಯಬೇಕು. ಗೊರಿಲ್ಲಾಗಳಿಗೊಂದು ಸ್ವಭಾವವಿದೆ. ಅದೇನೆಂದರೆ ಪ್ರತಿದಿನ ಅವು ಹದಿಮೂರು-ಹದಿನಾಲ್ಕು ತಾಸು ನಿದ್ದೆ ಮಾಡುತ್ತವೆ. ಸಾಯಂಕಾಲ ಐದಾರು ಗಂಟೆ ನಂತರ ಮಲಮೂತ್ರ ವಿಸರ್ಜನೆ ಮಾಡಿ ಮಲಗಿದವು ಅಂದ್ರೆ ಏಳೋದು ಮರುದಿನ ಬೆಳಗ್ಗೆ ಏಳೆಂಟು ಗಂಟೆಗೆ. ಅದಕ್ಕಾಗಿಯೇ ನಾವು ಅಷ್ಟು ಬೇಗ ಎಂಟು ಗಂಟೆಗೆ ಕಾಡಿನೊಳಗೆ ಕರೆದುಕೊಂಡು ಬಂದಿರೋದು. ವಾಸನೆ ಹೊಮ್ಮುವ ಆಸುಪಾಸಿನಲ್ಲೇ ಅವು ಇರುತ್ತವೆ. ನಾನು ಇಷ್ಟು ವರ್ಷಗಳ ನನ್ನ ಅನುಭವದಲ್ಲಿ ಒಮ್ಮೆಯೂ ಅವುಗಳನ್ನು ನೋಡದೇ ವಾಪಸ್ ಬಂದಿಲ್ಲ. ಯಾರಿಗೆ ಗೊತ್ತು ಅವುಗಳಿಗೂ ನನ್ನನ್ನು ನೋಡುವ ಆಸೆ ಇದ್ದಿರಬಹುದು'
ಫ್ರಾಂಕೋಯಿಸ್ ವಿಷಯದಲ್ಲಿ ಸುಳ್ಳಲ್ಲ. ಆತ ತನ್ನನ್ನು ಗೊರಿಲ್ಲಾ ಎಂದೇ ಭಾವಿಸಿದ್ದಾನೆ. ಹಾಗಂತ ಆತನೇ ಅತೀವ ಹೆಮ್ಮೆಯಿಂದ ಹೇಳಿಕೊಳ್ಳುತ್ತಾನೆ. ಆತನ ಚಹರೆ, ಹಾವಭಾವ, ನಡೆ-ನುಡಿಗಳೆಲ್ಲ ಥೇಟು ಗೊರಿಲ್ಲಾಗಳಂತೆ. 'ನನಗೆ ಗೊರಿಲ್ಲಾಗಳು ಹೇಳಿದ್ದು ಅರ್ಥವಾಗುತ್ತದೆ. ನಾನು ಹೇಳಿದ್ದು ಅವುಗಳಿಗೆ ಅರ್ಥವಾಗುತ್ತದೆ. ಒಂದು ದಿನವೂ ನಮ್ಮ ಮಧ್ಯೆ-ಕಮ್ಯುನಿಕೇಶನ್ ಗ್ಯಾಪ್ ಆಗಿಲ್ಲ. ನಮ್ಮಿಬ್ಬರ ಮಧ್ಯೆ ಅಪಾರ್ಥ, ಅನರ್ಥ ಮೂಡಿದ್ದಿಲ್ಲ. ನಮ್ಮ ನಡುವೆ ಅಂಥ ಅನ್ಯೋನ್ಯ ಸಂಬಂಧವಿದೆ. ಸಮಸ್ಯೆಯೇನಿದ್ದರೂ ಮನುಷ್ಯರೊಂದಿಗೆ ಮಾತ್ರ. ಮನುಷ್ಯರಿಗೆ ಮನುಷ್ಯರ ಭಾಷೆ ಇನ್ನೂ ಅರ್ಥವಾಗುತ್ತಿಲ್ಲ. ಅದಕ್ಕೇ ನಾವು ಪರಸ್ಪರ ಹೊಡೆದಾಡುತ್ತೇವೆ. ಅದೇ ಗೊರಿಲ್ಲಾಗಳು ಒಂದು ದಿನವಾದರೂ ನಮ್ಮ ಮೇಲೆ ದಾಳಿ ಮಾಡಿವೆಯಾ? ನಾವು ಅವು ವಾಸಿಸುವ ತಾಣಕ್ಕೆ ಹೋಗುತ್ತೇವೆ, ಅವುಗಳ ಮುಂದೆ ಹೋಗಿ ಫೋಟೋ ಕ್ಲಿಕ್ಕಿಸುತ್ತೇವೆ. ಅವುಗಳಿಗೆ disturb ಆಗುತ್ತದೆ. ಆದರೂ ಒಂದೇ ಒಂದು ಸಲ ತಮ್ಮ ಕೋಪ ಪ್ರದರ್ಶಿಸಿದ ನಿದರ್ಶನವೇ ಇಲ್ಲ. ಈಗ ಹೇಳಿ ಯಾರು ಮನುಷ್ಯರು? ಯಾರು ಗೊರಿಲ್ಲಾಗಳು? ಒಂದು ಸಂಗತಿ ಹೇಳ್ತೇನೆ, ಇದು ನಾನು ಕಂಡ ಜೀವನ ಸತ್ಯ. ಗೊರಿಲ್ಲಾದ ಮುಂದೆ ಗೊರಿಲ್ಲಾದಂತೆ ವರ್ತಿಸಿದರೆ ಅವು ಮನುಷ್ಯರಿಗೆ ಏನೂ ಮಾಡುವುದಿಲ್ಲ. ಮನುಷ್ಯರಂತೆ ವರ್ತಿಸಿದರೆ ಸಮಸ್ಯೆಯಾಗುತ್ತದೆ. ನಾನು ಕಾಡಿನಲ್ಲೂ ಗೊರಿಲ್ಲಾ, ನಾಡಿನಲ್ಲೂ ಗೊರಿಲ್ಲಾದಂತೆ ಇರುತ್ತೇನೆ, ನನಗೆ ಸಮಸ್ಯೆಯೇ ಇಲ್ಲ' ಎಂದ ಫ್ರಾಂಕೋಯಿಸ್ ತತ್ತ್ವಜ್ಞಾನಿಯಂತೆ ಮಾತಾಡುತ್ತಿದ್ದಾನೆ ಅನಿಸಿತು.
'ಮೊದಲು ನಾವು ಕಾಡನ್ನು ಉಳಿಸಬೇಕು. ಅದು ಉಳಿದರೆ ಮಾತ್ರ ಗೊರಿಲ್ಲಾಗಳು ಉಳಿಯಬಹುದು. ಗೊರಿಲ್ಲಾಗಳನ್ನು ಉಳಿಸುವುದೆಂದರೆ ಕಾಡನ್ನು ಉಳಿಸಿದಂತೆ, ಆ ಮೂಲಕ ನಾಡನ್ನು ಉಳಿಸಿದಂತೆ. ಆ ಮೂಲಕ ನಮ್ಮನ್ನು ನಾವು ಉಳಿಸಿಕೊಂಡಂತೆ. ಗೊರಿಲ್ಲಾಗಳಿಂದಾಗಿ, ಅವುಗಳ ಭಯದಿಂದಾಗಿ ರವಾಂಡಾ-ಕಾಂಗೋ ನಡುವಿನ ಕಾಡುಗಳು ಉಳಿದುಕೊಂಡಿದೆ' ಎಂದು ಹೇಳುತ್ತಾ ಆತ ಆರ್ದ್ರನಾದ.
'ನೋಡಿ ಈಗ ಬದುಕಿ ಉಳಿದಿರೋದು ಐನೂರು ಚಿಲ್ಲರೆ ಗೊರಿಲ್ಲಾಗಳು. ಒಂದು ಕಾಲದಲ್ಲಿ ಆಫ್ರಿಕಾದ ಎಲ್ಲ ಕಾಡುಗಳಲ್ಲೂ ಗೊರಿಲ್ಲಾಗಳು ಇದ್ದವಂತೆ. ಈಗ ರವಾಂಡಾ, ಕಾಂಗೋ ಹಾಗೂ ಉಗಾಂಡದಲ್ಲಿ ಮಾತ್ರ ಕೈಬೆರಳಿನಷ್ಟು ಗೊರಿಲ್ಲಾಗಳು ಬದುಕಿವೆ. ಇದರಿಂದ ಮನುಷ್ಯ ಎಂಥ ದುರಾತ್ಮ ಎಂಬುದು ಗೊತ್ತಾಗುತ್ತದೆ. ಈಗ ಈ ಗೊರಿಲ್ಲಾಗಳನ್ನು ಸಂರಕ್ಷಿಸುವ ಮಾತುಗಳನ್ನು ಆಡುತ್ತಿದ್ದಾರೆ. ಈಗ ನಮಗೆ ಬುದ್ಧಿ ಬಂದಿದೆ. ತಾವು ಬದುಕುವುದಕ್ಕಾಗಿ ಎಂಥವರನ್ನು ಬೇಕಾದರೂ ಬಲಿಕೊಡುತ್ತಾರೆ ಮನುಷ್ಯರು. ನಮಗಿಂತ ಗೊರಿಲ್ಲಾಗಳೇ ಸಾವಿರ ಪಾಲು ವಾಸಿ ಎಂಬುದು ನನಗೆ ದಿನದಿನವೂ ಮನವರಿಕೆಯಾಗುತ್ತಿದೆ' ಎಂದು ಫ್ರಾಂಕೋಯಿಸ್ ಜೋರಾಗಿ ಗೊರಿಲ್ಲಾದಂತೆ ಎರಡೂ ಕೈಗಳಿಂದ ಎದೆಯನ್ನು ಬಡಿದುಕೊಂಡ.
ಅದರಲ್ಲಿ ತಮಾಷೆ ಇರಲಿಲ್ಲ.
- ವಿಶ್ವೇಶ್ವರ ಭಟ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


