ಅಂಕಣಗಳು

ರವಾಂಡಾ ಬಗ್ಗೆ ಎಷ್ಟು ಗೊತ್ತು?

ನೀವು ಯಾವುದೇ ದೇಶಕ್ಕೆ ಹೋಗಿ, ಅಲ್ಲಿ ಸ್ಥಳೀಯ ಜೋಕುಗಳಿರುತ್ತವೆ.

Published On :

ನೀವು ಯಾವುದೇ ದೇಶಕ್ಕೆ ಹೋಗಿ, ಅಲ್ಲಿ ಸ್ಥಳೀಯ ಜೋಕುಗಳಿರುತ್ತವೆ, ಅವನ್ನು ಬೇರೆಲ್ಲೂ ಕೇಳಿರೋಲ್ಲ, ಅಂಥ ಜೋಕುಗಳನ್ನು ಹೇಳುವಂತೆ ಅಲ್ಲಿನವರನ್ನು ಕೇಳಿ ಎಂದು ಓಶೋ ತಮ್ಮ ಪುಸ್ತಕದಲ್ಲಿ ಬರೆದುಕೊಂಡಿದ್ದಾರೆ.
ಬಹಳ ಮಂದಿಗೆ ರವಾಂಡಾ ಎಂಬ ದೇಶವೊಂದಿದೆ ಎಂಬುದು ಸಹ ಗೊತ್ತಿಲ್ಲ. ಅದು ಎಲ್ಲಿದೆ, ಯಾವ ಖಂಡದಲ್ಲಿದೆ, ಅದರ ರಾಜಧಾನಿ ಯಾವುದು ಎಂದೆಲ್ಲ ಕೇಳುತ್ತಾರೆ. ಅದರ ಹೆಸರು ಕೇಳಿ ಗೊತ್ತಿದ್ದವರು ಅದೆಂಥ ಸುಡುಗಾಡು ದೇಶವಪ್ಪಾ ಎಂದು ರಾಗ ಎಳೆಯುತ್ತಾರೆ. 1960ರವರೆಗೂ ರವಾಂಡಾಕ್ಕೆ ವಿದೇಶಿಯರು ಭೇಟಿ ನೀಡಲು ಹಿಂದೇಟು ಹಾಕುತ್ತಿದ್ದರು. 1994ರಲ್ಲಿ ನಡೆದ ನರಮೇಧದ ಬಳಿಕ ರವಾಂಡಾ ಮತ್ತಷ್ಟು ಕುಪ್ರಸಿದ್ಧವಾಯಿತು. ಆ ದುರ್ಘಟನೆಯಲ್ಲಿ ಸುಮಾರು ಹತ್ತುಲಕ್ಷ ಜನ ಹತರಾದರು ಇದು ಜಗತ್ತಿನಲ್ಲಿಯೇ ಅತ್ಯಂತ ಹೃದಯವಿದ್ರಾವಕ ಹತ್ಯಾಕಾಂಡ!
ರವಾಂಡಾದ ಜನರಿಗೂ ಇದರ ಅರಿವಿದೆ. ಬಹುತೇಕ ಮಂದಿಗೆ ತಮ್ಮ ದೇಶದ ಬಗ್ಗೆ ಗೊತ್ತಿಲ್ಲ, ತಮ್ಮ ದೇಶದ ಹೆಸರನ್ನೇ ಕೇಳದವರಿದ್ದಾರೆ ಎಂಬುದೂ ಗೊತ್ತಿದೆ. ಅದಕ್ಕಾಗಿ ಅವರಿಗೆ ಬೇಸರವಿಲ್ಲ. ಇದೇ ವಿಷಯದ ಬಗ್ಗೆ ನಾನು ಉಳಿದುಕೊಂಡ 'ಕಿಗಾಲಿ ಸೆರೆನಾ' ಎಂಬ (ಏಕಮಾತ್ರ ಪಂಚತಾರಾ) ಹೋಟೆಲ್‌ನ ಮ್ಯಾನೇಜರ್ ಜತೆ ಮಾತನಾಡುತ್ತಿದ್ದೆ. ಆತ ಹೇಳಿದ ಹಾಸ್ಯ ಪ್ರಸಂಗ ಕೇಳಿ ಬಿದ್ದು ಬಿದ್ದು ನಕ್ಕೆ.
ಆತ ಹೇಳಿದ್ದು- ಒಮ್ಮೆ ಅಮೆರಿಕ ಅಧ್ಯಕ್ಷರಾಗಿದ್ದ ಬಿಲ್ ಕ್ಲಿಂಟನ್‌ಗೆ ಪತ್ರಕರ್ತರು ಕೇಳಿದರಂತೆ- What's your relation with Rwanda? (ರವಾಂಡಾ ಜತೆ ನಿಮ್ಮ ಸಂಬಂಧ ಹೇಗಿದೆ?) ಅದಕ್ಕೆ ಕ್ಲಿಂಟನ್ ಹೇಳಿದ್ದು- I swear I never met her. (ನನ್ನ ಆಣೆ, ನಾನು ಆಕೆಯನ್ನು ಭೇಟಿ ಮಾಡಿಲ್ಲ.)
---
ನೀವು ಯಾವುದೇ ದೇಶಕ್ಕೆ ಹೋಗಿ, ಅಲ್ಲಿ ಸ್ಥಳೀಯ ಜೋಕುಗಳಿರುತ್ತವೆ, ಅವನ್ನು ಬೇರೆಲ್ಲೂ ಕೇಳಿರೋಲ್ಲ, ಅಂಥ ಜೋಕುಗಳನ್ನು ಹೇಳುವಂತೆ ಅಲ್ಲಿನವರನ್ನು ಕೇಳಿ ಎಂದು ಓಶೋ ತಮ್ಮ ಪುಸ್ತಕದಲ್ಲಿ ಬರೆದುಕೊಂಡಿದ್ದಾರೆ. ಅವರು ಯಾವುದೇ ದೇಶಕ್ಕೆ ಹೋದರೂ ಅಲ್ಲಿನ ಪ್ರಚಲಿತ ಜೋಕುಗಳನ್ನು ಕೇಳುತ್ತಿದ್ದರು. ಅವುಗಳನ್ನು ತಮ್ಮ ಭಾಷಣದಲ್ಲಿ ಪ್ರಸ್ತಾಪಿಸುತ್ತಿದ್ದರು.
ಇದನ್ನು ಕೇಳಿದ ಬಳಿಕ ನನಗೂ ಈ 'ಕಾಯಿಲೆ' ಅಂಟಿದೆ.
ಮೊನ್ನೆ ಕಿಗಾಲಿಯ ಸೆರಿನಾ ಹೋಟೆಲ್ ಮ್ಯಾನೇಜರ್ ಜತೆ ಹರಟೆಗೆ ಕುಳಿತಾಗ ರವಾಂಡಾ ಜನ ಹಾಗೂ ಗೊರಿಲ್ಲಾಗಳ ಬಗ್ಗೆ ಜೋಕ್ ಇವೆಯಾ ಅಂತ ಕೇಳಿದೆ. ಆತ ಜೋರಾಗಿ ನಕ್ಕು 'ಅದೇ ದೊಡ್ಡ ಜೋಕು' ಅಂದ.ಪುನಃ ಪುನಃ ಜೋರಾಗಿ ನಕ್ಕ. ನನಗೆ ಅರ್ಥವಾಗಲಿಲ್ಲ. 'ರವಾಂಡಾ ಜನ ಹಾಗೂ ಗೊರಿಲ್ಲಾ ಎಂದು ಬೇರೆ ಬೇರೆ ಪ್ರತ್ಯೇಕಿಸಿ ಯಾಕೆ ಹೇಳ್ತೀರಾ? ರವಾಂಡಾ ಜನ ಅಂದ್ರೆ ಸಾಕು. ಗೊರಿಲ್ಲಾ ಎಂದು ಮತ್ತೊಮ್ಮೆ ಹೇಳಬೇಕಿಲ್ಲ' ಎಂದ. ಟ್ಯೂಬ್‌ಲೈಟ್ ಹೊತ್ತಿಕೊಂಡಿತು. ಜೋರಾಗಿ ನಕ್ಕೆ.
ಆತ ಹೇಳಿದ ಒಂದು ಜೋಕು.
ಒಮ್ಮೆ ಕಾಡಿನಲ್ಲಿ ಗೊರಿಲ್ಲಾ ಗಾಂಭೀರ್ಯದಿಂದ ನಡೆದು ಹೋಗುತ್ತಿತ್ತು. ಜಿಂಕೆಯೊಂದು ಪಕ್ಕದಲ್ಲಿ ಹುಲ್ಲು ಮೇಯುತ್ತಿತ್ತು. ಅದರ ಹತ್ತಿರ ಹೋದ ಗೊರಿಲ್ಲಾ, 'ಈ ಕಾಡಿನ ಅಧಿಪತಿ ಯಾರು ಗೊತ್ತಾ?' ಎಂದು ಕೇಳಿತು...
'ಗೊರಿಲ್ಲಾ!' ಎಂದಿತು ಜಿಂಕೆ.
ಗೊರಿಲ್ಲಾಕ್ಕೆ ಖುಷಿಯೋ ಖುಷಿ.
ಮುಂದೆ ಹೋಗುತ್ತಿರುವಾಗ ಜೀಬ್ರಾ ಸಿಕ್ಕಿತು. ಗೊರಿಲ್ಲಾ ಅದರ ಬಳಿ ಹೋಗಿ, 'ನಿನಗೆ ಗೊತ್ತಾ ಕಾಡಿನ ರಾಜ ಯಾರು ಅಂತ?' ಎಂದು ಕೇಳಿತು.
ಅದಕ್ಕೆ ಜೀಬ್ರಾ, 'ಅದು ಎಲ್ಲರಿಗೂ ಗೊತ್ತಿರುವ ವಿಷಯ. ಗೊರಿಲ್ಲಾ ಕಾಡಿನ ರಾಜ' ಎಂದಿತು.
ಜಿರಾಫೆ, ಕಾಡೆಮ್ಮೆ, ಕೋತಿಯೂ ಇದೇ ಉತ್ತರವನ್ನು ಕೊಟ್ಟವು. ಗೊರಿಲ್ಲಾಕ್ಕೆ ಆನಂದವೋ ಆನಂದ. ಸ್ವರ್ಗಕ್ಕೆ ಮೂರೇ ಗೇಣು.
ಹಾರುತ್ತಾ, ಕುಣಿಯುತ್ತಾ, ರಾಜಗಾಂಭೀರ್ಯದಿಂದ ಹೋಗುತ್ತಿರುವಾಗ ಎದುರುಗಡೆಯಿಂದ ಆನೆ ಬರುತ್ತಿರುವುದು ಕಾಣಿಸಿತು. ಗೊರಿಲ್ಲಾ ಅದರ ಬಳಿ ಹೋಗಿ 'ಈ ಕಾಡಿನ ರಾಜ ಯಾರೆಂಬುದು ನಿನಗೆ ಗೊತ್ತಾ?' ಎಂದು ಕೇಳಿತು. ತನ್ನ ಹೆಸರನ್ನೇ ಆನೆ ಹೇಳಬಹುದೆಂದು ನಿರೀಕ್ಷಿಸಿದ್ದ ಗೊರಿಲ್ಲಾಕ್ಕೆ ಆಘಾತ ಕಾದಿತ್ತು. ಗೊರಿಲ್ಲಾವನ್ನು ತನ್ನ ಸೊಂಡಿಲಿನಿಂದ ಬೀಸಿ ಎಸೆದ ಹೊಡೆತಕ್ಕೆ ಅದು ಮರದ ಟೊಂಗೆ ಮೇಲೆ ಕುಳಿತುಕೊಂಡಿತು.
ಆನೆಯ ಅನಿರೀಕ್ಷಿತ ಪ್ರತಿಕ್ರಿಯೆಯಿಂದ ಕಕ್ಕಾಬಿಕ್ಕಿಯಾದರೂ, ಸಾವರಿಸಿಕೊಂಡ ಗೊರಿಲ್ಲಾ ಮೆಲ್ಲಗೆ ಹೇಳಿತು- 'ಸರಿ...ಸರಿ...  ಅಷ್ಟಕ್ಕೇ ಸಿಟ್ಟಾಗುವ ಅಗತ್ಯವಿತ್ತಾ? ನಿನಗೆ ಇಷ್ಟು ಸಣ್ಣ ಪ್ರಶ್ನೆಗೆ ಉತ್ತರ ಗೊತ್ತಿಲ್ಲ ಎಂದು ಹೇಳಬಾರದಿತ್ತಾ?'
ಎರಿಕ್ ಎಂಬ ಅಂಧನ ಅಸಾಮಾನ್ಯ ದೃಷ್ಟಿ!
ನಮ್ಮ ದೇಶದ ಉತ್ತರ ಭಾಗಕ್ಕೆ ಚಾಚಿಕೊಂಡಿರುವ ಹಿಮಾಲಯ ಎನ್ನುವುದು ನಿಜಾರ್ಥದಲ್ಲಿ ಉತ್ತರಗಳ ಭಂಡಾರ ಎಂದು ಕೆಲವೊಮ್ಮೆ ಅನ್ನಿಸುತ್ತದೆ. ತನ್ನ ನೆತ್ತಿಯವರೆಗೆ ನಡೆದು ಬಂದವರಿಗೆಲ್ಲ ಅದೊಂದು ಐಡೆಂಟಿಟಿಕೊಟ್ಟಿದೆ. ಬಹಳ ಮುಖ್ಯವಾಗಿ ಮಾನವನ ಛಲಕ್ಕೆ ರೂಪಕವೆಂಬಂತೆ ಅದು ಬಿಳಿನಗೆ ಬೀರುತ್ತ ನಿಂತಿದೆ. ತೀರ ಇತ್ತೀಚೆಗೆ ಕೃತಕ ಕಾಲುಗಳಲ್ಲಿ ಎವರೆಸ್ಟ್ ಏರಿದ ಅರುಣಿಮಾ ಸುದ್ದಿಯಾದರು. 2011ರಲ್ಲಿ ರೈಲು ಪ್ರಯಾಣದ ವೇಳೆ ದರೋಡೆ ಪ್ರಯತ್ನವೊಂದನ್ನು ವಿರೋಧಿಸುವಾಗ ಅವಳನ್ನು ದುಷ್ಟರು ಹೊರಗೆ ನೂಕಿದ್ದರು. ಆ ಸಂಘರ್ಷದಲ್ಲಿ ಕಾಲು ಕಳೆದುಕೊಂಡಿದ್ದ ಅರುಣಿಮಾ ಅದಾಗಿ ಎರಡು ವರ್ಷಗಳ ನಂತರ ಕೃತಕ ಕಾಲುಗಳಲ್ಲೆ ಎವರೆಸ್ಟ್ ಹತ್ತಿ ಸ್ಥೈರ್ಯದ ಪ್ರತೀಕವಾದಳು.
ಹಿಮಾಲಯದ ಜಾಯಮಾನವೇ ಅದು. ಏನೊ ಕಳೆದುಕೊಂಡೆವು ಎಂಬುವವರನ್ನು ಹತ್ತಿರ ಸೆಳೆದು ಎದೆಯೇರಿಸಿಕೊಂಡು ಬೆರಗಾಗಿಸುತ್ತದೆ. ಹಾಗೆಂದೇ, ಅರುಣಿಮಾ ಪರ್ವತ ಏರಿದ ಸಂದರ್ಭದಲ್ಲಿ ಎರಿಕ್ ವೆಯ್ನ್‌ಮೆಯರ್ ನೆನಪಾಗಿದ್ದ.
ಮೇ 25, 2001. ಅಂದು ಎರಿಕ್ ವೆಯ್ನ್‌ಮೆಯರ್ ಎಂಬ  ಅಂಧನೊಬ್ಬ ಪ್ರಪಂಚದ ಮಹೋತ್ತಮ ಶಿಖರವಾದ ಮೌಂಟ್ ಎವರೆಸ್ಟ್‌ನ ತುದಿಯನ್ನೇರಿದ್ದ. ಏಳು ಖಂಡಗಳಲ್ಲಿನ ಏಳೂ ಅತಿದೊಡ್ಡ ಪರ್ವತಗಳನ್ನೇರಬೇಕು ಎನ್ನುವ ಆತನ ಕನಸು ನಿಜವಾಗಿದ್ದು 2008ರಲ್ಲಿ, ಕ್ರಾಸ್ಟಾನ್‌ಜ್ ಪಿರಮಿಡ್ ಏರುವ ಮೂಲಕ. ಅಷ್ಟೇ ಅಲ್ಲದೆ 3,330 ಅಡಿಯ ಎಲ್ ಕ್ಯಾಪಿಟನ್ ಎನ್ನುವ ಗ್ರಾನೈಟ್ ಏಕಶಿಲೆಯನ್ನು, ಹಿಮಾಲಯಗಳಲ್ಲಿನ 3,000 ಅಡಿಯ ಐಸ್ ಹಿಮನದಿಯನ್ನು ಮತ್ತು ಸಮುದ್ರ ಮಟ್ಟದಿಂದ 17,000 ಅಡಿ ಎತ್ತರದಲ್ಲಿರುವ ಮೌಂಟ್ ಕೀನ್ಯಾದ ಕಠಿಣ ಬಂಡೆಗಲ್ಲುಗಳ ಸಂದಿಯನ್ನೇರುವಲ್ಲಿ ಎರಿಕ್ ಸಫಲವಾಗಿದ್ದಾನೆ.
ಸೆಪ್ಟೆಂಬರ್ 2003ರಂದು ಎರಿಕ್ ತನ್ನ ತಂಡದೊಂದಿಗೆ ಸೇರಿ ಪ್ರಪಂಚದ ಅತ್ಯಂತ ಕಠಿಣ ಅಡ್ವೆಂಚರ್ ರೇಸ್ ಎಂದು ಕರೆಸಿಕೊಳ್ಳುವ 457 ಮೈಲಿ ವಿಸ್ತೀರ್ಣದ' ಸಿಯೇರಾ ನೆವಾಡಾವನ್ನೂ' (ಕ್ಯಾಲಿಫೋರ್ನಿಯಾ ಮತ್ತು ನೆವಾಡಾ ನಡುವಿನ ಪರ್ವತ ಶ್ರೇಣಿಗಳು) ದಾಟಿದ. ಆ ಸ್ಫರ್ಧೆಯಲ್ಲಿ ಭಾಗವಹಿಸಿದ 80 ತಂಡಗಳಲ್ಲಿ, ಗುರಿ ಮುಟ್ಟಲು ಸಫಲವಾಗಿದ್ದು ಕೇವಲ 42 ತಂಡಗಳು ಮಾತ್ರ. ಅದರಲ್ಲಿ ಎರಿಕ್‌ನ ತಂಡ ಕೂಡ ಒಂದಾಗಿತ್ತು!
ಎರಿಕ್ ಮೌಂಟ್ ಎವರೆಸ್ಟ್ ಏರಿದ ಅದ್ಭುತ ಗಾಥೆಯಿಂದ ಸ್ಫೂರ್ತಿ ಪಡೆದ ಟಿಬೆಟ್‌ನ ಅಂಧರ ಶಾಲೆಯೊಂದು, ತಮ್ಮ ವಿದ್ಯಾರ್ಥಿಗಳಿಗೆ ಪರ್ವತಾರೋಹಣದ ಬಗ್ಗೆ ತರಬೇತಿ ನೀಡಬೇಕೆಂದು ಆತನನ್ನು ಕೇಳಿಕೊಂಡಿತು. ಈ ಹೊಸ ಸಾಹಸವೂ ನಡೆದುಹೋಗಲಿ ಎಂದು ಯೋಚಿಸಿದ ಎರಿಕ್ ಅಲ್ಲಿನ ಅಂಧ ವಿದ್ಯಾರ್ಥಿಗಳಿಗೆ ಮೇ 2004ರಂದು ತರಬೇತಿ ಶುರುಮಾಡಿಯೇ ಬಿಟ್ಟ. ನಿಮಗೆ ಆಶ್ಚರ್ಯವಾಗಬಹುದು- ಅಕ್ಟೋಬರ್ ಮಾಸಾಂತ್ಯಕ್ಕಾಗಲೇ ಮೌಂಟ್ ಎವರೆಸ್ಟ್‌ನ ಉತ್ತರ ಭಾಗದಲ್ಲಿರುವ ರೋಂಬುಕ್ ಹಿಮಾರಶಿಯ ಮೇಲೆ ಎರಿಕ್ ನೇತೃತ್ವದ 6 ಜನರ ಅಂಧರ ತಂಡ ಯಶಸ್ವಿಯಾಗಿ ಏರಿತು. ಅದೂ 21,500 ಅಡಿ ಎತ್ತರದ ಮೇಲೆ!
ಎರಿಕ್ ಎಂಬ ಹೆಸರು ಈಗಂತೂ 'ಸಾಹಸಕ್ಕೆ' ಪರ್ಯಾಯ ಪದವೆನಿಸಿಕೊಳ್ಳುತ್ತಿದೆ. 13 ವರ್ಷದವನಿದ್ದಾಗಲೇ ಎರಿಕ್‌ಗೆ ಅಂಧತ್ವ ಎದುರಾಯಿತಾದರೂ, ಜೀವನವನ್ನು ಕೆಚ್ಚೆದೆಯಿಂದ ಎದುರಿಸುವ ಆತನ ಧೈರ್ಯಕ್ಕೆ ಮಾತ್ರ ಎಂದಿಗೂ ಕತ್ತಲು ಕವಿಯಲಿಲ್ಲ. ಪರ್ವತಾರೋಹಣವಷ್ಟೇ ಅಲ್ಲದೆ ಬಾಕ್ಸಿಂಗ್, ಸ್ಕೀಯಿಂಗ್, ಪ್ಯಾರಾಗ್ಲೈಡಿಂಗ್‌ನಲ್ಲೂ ಎರಿಕ್‌ನದ್ದು ಎತ್ತಿದ ಕೈ.
ಇಷ್ಟು ಹೇಳಿ ಬಿಟ್ಟರೆ ಎರಿಕ್‌ನ ಕಥೆ ಮುಗಿದುಹೋಗುವುದಿಲ್ಲ. ಏಕೆಂದರೆ ಆತನ ಜೀವನ ಇಷ್ಟಕ್ಕೇ ಸೀಮಿತವಾಗಿಲ್ಲವಲ್ಲ? ಈಗಾತ ಎರಡು ಪುಸ್ತಕಗಳ ಲೇಖಕ. ಅಲ್ಲದೆ ಮೋಟಿವೇಷನಲ್ ಸ್ಪೀಕಿಂಗ್ ಮೂಲಕ (ಸ್ಫೂರ್ತಿದಾಯಕ ಮಾತುಗಾರ) ಲಕ್ಷ್ಮಾಂತರ ಜನರ ಬದುಕುಗಳಿಗೆ ಭರವಸೆಯ ಬೆಳಕೂ ಆಗಿದ್ದಾನೆ ಆತ. ಎರಿಕ್‌ನ ಜೀವನದ ಕುರಿತು ನಿರ್ಮಿಸಲಾದ ಚಿತ್ರಪಟ 'ಫರ್ದರ್ ದೆನ್ ಐ ಕ್ಯಾನ್ ಸೀ', 19 ಚಿತ್ರೋತ್ಸವಗಳಿಗೆ ಮತ್ತು ಎರಡು ಎಮಿ ಅವಾರ್ಡ್‌ಗಳಿಗೆ ಆಯ್ಕೆಯಾಗಿದೆ.  
ಒಂದೇ ಮಾತಿನಲ್ಲಿ ಹೇಳಬೇಕೆಂದರೆ ತನ್ನ ಕನಸುಗಳಿಗೆ ಅಂಧತ್ವವೆಂದಿಗೂ ಅಡ್ಡಿಯಾಗದಂತೆ ನೋಡಿಕೊಂಡ 'ಅದಮ್ಯ ಜೀವನೋತ್ಸಾಹದ ಚಿಲುಮೆ' ಎರಿಕ್. ಅಸಾಮಾನ್ಯ ದೃಷ್ಟಿ ಹೊಂದಲು ಕಣ್ಣುಗಳೇ ಅವಶ್ಯಕವಲ್ಲ ಎನ್ನುವುದು ಆತನ ಬದುಕ ಸಿದ್ಧಾಂತ. ತನ್ನ ಅಚ್ಚರಿಯ ವಿಕ್ರಮದ ನಂತರ ಪ್ರಪಂಚದ ಬಹುತೇಕ ರಾಷ್ಟ್ರಗಳಿಗೆ ತೆರಳಿ ಜನರಿಗೆ ಬದುಕಿನ ಬಗ್ಗೆ ಪಾಠ ಮಾಡಿಬಂದಿದ್ದಾನೆ ಆತ. ಅವನ್ನೆಲ್ಲ ಎದೆಗಿಳಿಸಿಕೊಳ್ಳುವುದೇ ಒಂದು ಸೊಬಗು. ಆ ಬಗ್ಗೆ ಇನ್ನೊಮ್ಮೆ ಓದುವಿರಂತೆ.

-ವಿಶ್ವೇಶ್ವರ ಭಟ್


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.