ಅಂಕಣಗಳು

ಅವನಾದ್ರೆ ಗಂಡ್ಸು ಕಣೇ ಎನ್ನುವವರಿಗೆ...

ನಾನೀಗ ಹೇಳಲಿರುವ ಸಂಗತಿಗೆ ಎಲ್ಲರೂ ಒಂದಲ್ಲ ಒಂದು ಸಂದರ್ಭದಲ್ಲಿ ಸಾಕ್ಷಿಯಾಗಿರುತ್ತಾರೆ

Published On :

ನಾನೀಗ ಹೇಳಲಿರುವ ಸಂಗತಿ ಅಥವಾ ಈ ಅನಿಸಿಕೆಯ ಆಚೀಚೆಯೇ ಇರುವಂಥ ಪ್ರಸಂಗಗಳಿಗೆ ಬಹುಪಾಲು ಎಲ್ಲರೂ ಒಂದಲ್ಲ ಒಂದು ಸಂದರ್ಭದಲ್ಲಿ ಸಾಕ್ಷಿಯಾಗಿರುತ್ತಾರೆ. ಅನ್ಯಾಯವೆಂಬುದು ಕಣ್ಮುಂದೆಯೇ ನಡೆಯುತ್ತಿದೆ ಎಂದು ಗೊತ್ತಿದ್ದರೂ, ಅದನ್ನು ಪ್ರತಿಭಟಿಸದೆ ಮೌನವಾಗಿ ಕೂತಿರುತ್ತಾರೆ. ಆ ಮೂಲಕ ಹೆಣ್ಣನ್ನು ಗೇಲಿ ಮಾಡುವ, ಶೋಷಿಸುವ ವ್ಯವಸ್ಥೆಯೊಂದು ಗಟ್ಟಿಯಾಗಲು ಪರೋಕ್ಷವಾಗಿ ಸಹಾಯ ಮಾಡುತ್ತಾರೆ.
'ಅದು, ಕಾಲೇಜು ವಿದ್ಯಾರ್ಥಿಯೊಬ್ಬ ತನ್ನ ಪರಿಚಯದ ಹುಡುಗಿಗೆ ಪ್ರೀತಿಸುವುದಾಗಿ ಹೇಳಿ ಮೋಸ ಮಾಡಿದ ಸಂಗತಿ ಇರಬಹುದು, ವಿವಾಹಿತನೊಬ್ಬ ಎರಡನೇ ಸಂಬಂಧ ಹೊಂದಿದ ಘಟನೆಯಾಗಿರಬಹುದು, ಸಾಲ ತೀರಿಸಲಿಕ್ಕೆ, ಕುಡಿತದ ಚಟಕ್ಕೆ ಪತಿರಾಯ ಅನ್ನಿಸಿಕೊಂಡಾತ ತಾಳಿಯನ್ನೋ, ಉಂಗುರವನ್ನೋ ಮಾರಿಕೊಂಡ ಪ್ರಸಂಗವಾಗಿರಬಹುದು... ಇಂಥ ಸಂದರ್ಭಗಳಲ್ಲೆಲ್ಲ ಹೆಣ್ಣು ಮಾನಸಿಕವಾಗಿ ನೊಂದಿರುತ್ತಾಳೆ. ಜೊತೆಗಿದ್ದವನ ಮೇಲೆ ನಂಬಿಕೆ ಕಳೆದುಕೊಂಡು ಕಂಗಾಲಾಗಿರುತ್ತಾಳೆ. ಧೈರ್ಯದ ಮಾತುಗಳಿಗಾಗಿ ಕಾದು ಕೂತಿರುತ್ತಾಳೆ. ಇಂಥ ಹೊತ್ತಿನಲ್ಲಿಯೇ ನ್ಯಾಯಾಧೀಶರ ಪೀಠದಲ್ಲಿ ಕುಳಿತವರು ಹೀಗೆ ಅಪ್ಪಣೆ ಕೊಡಿಸುತ್ತಾರೆ: 'ಅವನಾದ್ರೆ ಗಂಡ್ಸು ಕಣಮ್ಮಾ. ಅವನಿಗೆ ದಿನಕ್ಕೊಂದು ಕಷ್ಟಗಳು ಎದುರಾಗ್ತವೆ. ಮೈಮರೆವಿನಿಂದ ಅವನು ತಪ್ಪು ಮಾಡಿರಬಹುದು. ಅದನ್ನೇ ನೀನು ದೊಡ್ಡ ರಾಮಾಯಣ ಮಾಡ್ತಾ ಕೂತರೆ ಹೇಗೆ? ಕೆಟ್ಟ ಗಳಿಗೇಲಿ ಆಗಬಾರ್ದು ಆಗಿಹೋಯ್ತು ಅಂದ್ಕೋ. ಅನುಸರಿಸಿಕೊಂಡು ಬಾಳ್ವೆ ಮಾಡು. ಅವನ ತಪ್ಪಿಗೆ ಬೇಕಾದ್ರೆ ದಂಡ ಹಾಕೋಣ...'
ಅವನಾದ್ರೆ ಗಂಡ್ಸು ಕಣೇ. ಅವನು ಏನು ಮಾಡಿದ್ರೂ ನಡೆಯುತ್ತೆ. ಅವನ ಎಲ್ಲ ತಪ್ಪುಗಳಿಗೂ ಮಾಫಿ ಇರುತ್ತೆ ಎಂಬಂಥ ಮಾತುಗಳು ಹೆಣ್ಣು ಮಕ್ಕಳಿಗೆ ಬಾಲ್ಯದಿಂದಲೇ ಕಿವಿಗೆ ಬಿದ್ದಿರುತ್ತವೆ. ಎರಡು ಬಾರಿ ಎಚ್ಚರಿಸಿದ ನಂತರವೂ ಎದುರು ಮನೆಯ ಹುಡುಗ ಬೈಕ್‌ನಲ್ಲಿ ಹಿಂಬಾಲಿಸಿಕೊಂಡು ಬಂದು ಲವ್‌ಲೆಟರ್ ಕೊಟ್ಟ ಎಂದು ಎಸ್ಸೆಸ್ಸೆಲ್ಸಿ ಓದುವ ಹುಡುಗಿ ಹೇಳಿದರೆ, ಅಮ್ಮ ಅನ್ನಿಸಿಕೊಂಡಾಕೆ ತಕ್ಷಣವೇ ಹೇಳುತ್ತಾಳೆ: 'ಅವನಾದ್ರೆ ಗಂಡ್ಸು ಕಣೇ. ಇವತ್ತು ಏನೇ ತಪ್ಪು ಮಾಡಿದ್ರೂ ನಾಳೆ ದಿನ ಏನೂ ಆಗಲೇ ಇಲ್ಲ ಅಂದ್ಕೊಂಡು ಆರಾಮಾಗಿರ್ತಾನೆ. ಆದ್ರೆ ನಿನ್ನ ಕತೆ ಏನಾಗಬೇಡ ಹೇಳು. ಅವನಿಗೆ ಸಿಕ್ಕದ ಹಾಗೆ ಓಡಾಡು...'
ಹೆಣ್ಣು ಮಕ್ಕಳನ್ನು ಎಚ್ಚರಿಸಬೇಕು. ಅವರು ತಪ್ಪು ಮಾಡದಂತೆ ಅಥವಾ ಅವರು ತೊಂದರೆಗೆ ಸಿಕ್ಕಿಕೊಳ್ಳದಂತೆ ನೋಡಿಕೊಳ್ಳಬೇಕು ಎಂಬ ಸದಾಶಯದಿಂದಲೇ ಹೆತ್ತವರು ಅಥವಾ ಪಂಚಾಯ್ತಿ ಕಟ್ಟೆಯಲ್ಲಿ ನ್ಯಾಯಾಧೀಶರಾಗಿ ಕೂತವರು ಹೀಗೆಲ್ಲ ಮಾತಾಡಿರುತ್ತಾರೆ ನಿಜ. ಆದರೆ ಅವರು ಹೇಳುವ ರೀತಿ ಹಾಗೂ ಮಾತಿನ ಧಾಟಿ ಎರಡೂ ಸರಿ ಇರುವುದಿಲ್ಲ. ಹುಡುಗಿಯನ್ನು ಹಿಂಬಾಲಿಸುತ್ತಾ ಪೀಡಿಸುವವನು ಆಕೆಯ ಸ್ವಾತಂತ್ರ್ಯದ ಮೇಲೇ ಸವಾರಿ ಮಾಡಿರುತ್ತಾನೆ. ಪ್ರೀತಿಯ ಹೆಸರಲ್ಲಿ ಮೋಸ ಮಾಡಿದವನು ಒಂದು ಜೀವದ ಜೊತೆ ಚೆಲ್ಲಾಟ ಆಡಿರುತ್ತಾನೆ. ಎರಡನೇ ಸಂಬಂಧಕ್ಕೆ ಕೈ ಚಾಚುವ ಗಂಡಸು ಹೆಂಡತಿಯ ನಂಬಿಕೆಗೇ ಬೆಂಕಿ ಹಚ್ಚಿರುತ್ತಾನೆ. ಇಂಥ ಸಂದರ್ಭದಲ್ಲಿ ತಪ್ಪು ಮಾಡಿದವನ ಕೆನ್ನೆಗೆ ಎರಡೇಟು ಹಾಕಿ, ನೀನು ನೆಟ್ಟಗಿರಬೇಕು ಕಣೋ ಎಂದು ಎಚ್ಚರಿಸುವುದು ಎಲ್ಲರ ಕರ್ತವ್ಯ ಆಗಬೇಕು. ಆದರೆ ಅಂಥದೊಂದು ಕೆಲಸ ಆಗುತ್ತಿಲ್ಲ. ಪರಿಣಾಮ ಏನಾಗಿದೆಯೆಂದರೆ, ದಿನದಿನಕ್ಕೂ ಹೆಣ್ಣು ಒಗಟಾಗುತ್ತಿದ್ದಾಳೆ. ನಿಗೂಢವಾಗುತ್ತಿದ್ದಾಳೆ. ಈ ಮಾತಿಗೆ ಸಾಕ್ಷಿಯಾಗುವ ಒಂದು ಪ್ರಸಂಗ ಇಲ್ಲಿದೆ. ಓದಿಕೊಳ್ಳಿ:
ಅವರದ್ದು ಲವ್ ಕಮ್ ಅರೇಂಜ್ಡ್ ಮ್ಯಾರೇಜ್. ಹುಡುಗನಿಗೆ ಕವಿತೆ ಬರೆಯುವ ಹವ್ಯಾಸವಿತ್ತು. ಅವನಲ್ಲಿದ್ದ ಹಳೆಯ ಡೈರಿಗಳ ತುಂಬ, ಪ್ರೀತಿಯ ಸುತ್ತಲೇ ಗಿರಕಿ ಹೊಡೆಯುವ ಪದ್ಯಗಳಿದ್ದವು. ಒಂದೆರಡು ಕಡೆ ಹಸಿಬಿಸಿ ಭಾವನೆಯ ಪ್ರೇಮಪತ್ರಗಳಿದ್ದವು. ಹುಡುಗಿಗೆ ಕುತೂಹಲವಾಯಿತು. ಅದೊಂದು ಸಂಜೆ ಏಕಾಂತದಲ್ಲಿದ್ದಾಗ ಕೇಳಿದಳು: ರೀ, ಇವೆಲ್ಲಾ ಯಾರ ಬಗ್ಗೆ ಬರೆದಿರೋ ಪದ್ಯಗಳು? ನೀವು ಏನು ಹೇಳಿದ್ರೂ ನನಗೆ ಬೇಜಾರಿಲ್ಲ. ಪ್ಲೀಸ್ ಹೇಳ್ರೀ...' ಎಂದಳು.
ಒಂದು ತೆರನಾದ ಹುಮ್ಮಸ್ಸಿನಿಂದ ಆತ ಹೇಳಿದ: ಕಾಲೇಜಿನಲ್ಲಿದ್ದಾಗ ಜೂನಿಯರ್ ಹುಡುಗೀನ ಪ್ರೀತಿಸಿದ್ದೆ. ಅವಳನ್ನು ಮದುವೆ ಆಗಬೇಕು ಅಂತ ಆಸೆಪಟ್ಟಿದ್ದೆ. ಆ ಸಂದರ್ಭದಲ್ಲಿ ಬರೆದ ಪದ್ಯಗಳಿವು. ಬ್ಯಾಡ್‌ಲಕ್. ಅವಳ ಮನೇಲಿ ಮದುವೆಗೆ ಒಪ್ಪಲಿಲ್ಲ. ಈ ನೋವನ್ನು ಮರೆಯೋಕೆ ಅಂತ ನಮ್ಮ ಸಂಬಂಧಿಕರ ಹುಡುಗೀನ ಪ್ರೀತಿಸ್ದೆ. ಈ ಬಾರಿ ನಮ್ಮ ಮನೇಲಿ ಒಪ್ಪಲಿಲ್ಲ. ಮುಂದೆ ಮತ್ತೊಂದು ಹುಡುಗೀನ ಪ್ರೀತಿಸ್ದೆ ನಿಜ. ಆದರೆ ಆ ಸಂಬಂಧವೂ ಕೂಡಿ ಬರಲಿಲ್ಲ...' ಹೀಗೆಂದವನು, ಹೆಂಡತಿಯ ಮುಖವನ್ನು ಬೊಗಸೆಯಲ್ಲಿ ತುಂಬಿಕೊಂಡು ಕೇಳಿದ: 'ನಿನ್ನ ಕಥೆ ಹೇಗೆ? ಹೇಳಿದ್ರೆ ನಾನೂ ಖುಷಿಪಡ್ತೀನಿ...'
ಅವನ ಮಾತನ್ನು ನಂಬಿದ ಹುಡುಗಿ ಹೇಳಿ ಬಿಟ್ಟಳು: ನಾನೂ ಒಬ್ಬರನ್ನು ಇಷ್ಟಪಟ್ಟಿದ್ದೆ. ಆದ್ರೆ ಸಂಬಂಧ ಕೂಡಿ ಬರಲಿಲ್ಲ...' ಅಷ್ಟೆ: ಈ ಹುಡುಗ ಮರುದಿನದಿಂದಲೇ ಸಿಡಿಮಿಡಿರಾಯನಾದ. ಹೆಂಡತಿಯ ಪ್ರತಿ ಹೆಜ್ಜೆಯನ್ನೂ ಅನುಮಾನದಿಂದ ನೋಡಲು ನಿಂತ. ಅವಳು ಏನನ್ನೋ ಯೋಚಿಸುತ್ತ ಕೂತರೆ-ಹಳೆಯ ಹುಡುಗನ ನೆನಪಾಯ್ತಾ? ಎಂದು ಚುಚ್ಚಿ ಮಾತಾಡಿದ. ಹುಡುಗಿ ತಿರುಗಿ ಬಿದ್ದಳು. ಮಾತಿಗೆ ಮಾತು ಬೆಳೆಯಿತು. ಜಗಳ ಹತ್ತು ಮನೆಗೆ ಕೇಳಿಸಿತು. ಪಂಚಾಯ್ತಿ ಮಾಡಲೆಂದು ಬಂದ ಹಿರಿಯರು ಎಲ್ಲವನ್ನೂ ಕೇಳಿಸಿಕೊಂಡು ಹೇಳಿದರು: 'ಅವನಾದ್ರೆ ಗಂಡ್ಸು ಕಣಮ್ಮ. ಗೊತ್ತಿದ್ದೋ, ಗೊತ್ತಿಲ್ಲದೆಯೋ ತಪ್ಪು ಮಾಡ್ತಾನೆ. ಆದ್ರೆ ನೀನೂ ಗಂಡಸಿನ ಥರಾನೇ ನಡಕೊಂಡ್ರೆ ಹೇಗೆ?
ಇಂಥ ಮಾತುಗಳಿಂದ ಶಾಕ್ ಆದ ಹುಡುಗಿ, ಗಂಡನೂ ಸೇರಿದಂತೆ ಎಲ್ಲರೊಂದಿಗೂ ಮಾತು ನಿಲ್ಲಿಸಿದ್ದಾಳೆ. ಸುಮ್ಮನೆ ಅಳುತ್ತ, ಸುಮ್ಮನೇ ನಗುತ್ತ ಕೂತಿರುತ್ತಾಳೆ. ಅವಳನ್ನು ನಿಮ್ಹಾನ್ಸ್‌ಗೆ ಸೇರಿಸಿದರೆ ಹೇಗೆ ಎಂದು ಚರ್ಚೆ ಶುರುವಾಗಿದೆ! ಹೇಳಿ: ಇದು ನ್ಯಾಯವಾ?

-ನಾನು ಪ್ರಣತಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.