Hmmm... ಪಾಂಚ್..ಶಿವಾರ್ಜುನ್, ಸೈಕಲ್ ಚಿತ್ರದ ನಿರ್ದೇಶಕ
ಸೈಕಲ್' ಬದಲು ಅಟ್‌ಲೀಸ್ಟ್ 'ಸೈಕಲ್ ಚೈನ್' ಅಂತ ಹೆಸರಿಟ್ಟಿದ್ರೆ
-'ಸೈಕಲ್' ಬದಲು ಅಟ್‌ಲೀಸ್ಟ್ 'ಸೈಕಲ್ ಚೈನ್' ಅಂತ ಹೆಸರಿಟ್ಟಿದ್ರೆ 'ಶಿವಾ'ರ್ಜುನ್‌ಗಾಗಿ ಅಲ್ಲದಿದ್ರೂ ನಾಗಾರ್ಜುನ್ ಅವರ 'ಶಿವ' ಸಿನಿಮಾ ಥರ ಇರಬಹುದು ಅಂದ್ಕೊಂಡಾದ್ರೂ ಜನ ಬರ್ತಿದ್ರೇನೋ ಅಲ್ವಾ?
ನಮ್ ಹೀರೋಯಿನ್ ಕಣ್ಣು ಬೇರೆ ಸಣ್ಣದು, ಜನ ಅಪ್ಪಿ ತಪ್ಪಿ 'ಚೈನೀಸ್' ಸಿನಿಮಾ ಅಂದ್ಕೊಂಡ್ರೆ ಕಷ್ಟ ಅಂತ ಸುಮ್ಮನಾದೆ.
-ಸೈಕಲ್ ಅಂತ ಸಿನಿಮಾ ಮಾಡಿದೀರಲ್ಲ, ಇವತ್ತು ಆಟೋ ಓಡಿಸೋ ಮಕ್ಕಳೇ ಬದುಕೋದು ಕಷ್ಟ, ಇನ್ನು ಸೈಕಲ್ ಓಡಿಸೊ ಮಕ್ಕಳು ಬದುಕ್ತಾವಾ?
ತೀರಾ 'ಸೈಕ್ಲಿಂಗ್ ಸ್ಟಾರ್' ಅನ್ನಿಸಿಕೊಳ್ಳದಿದ್ರೂ ಒಂದು 'ಬ್ರೇಕ್' ಸಿಗಬಹುದು, ಚಿತ್ರರಂಗದಲ್ಲಿ 'ಸ್ಟ್ಯಾಂಡ್' ಆಗಬಹುದು ಅಂದ್ಕೊಂಡಿದೀನಿ.
-ನಿಮ್ ಹೀರೋಯಿನ್ ಹರ್ಷಿಕಾ ಪೂಣಚ್ಛ ಕಿರಿಕ್ ಬಗ್ಗೆ ಅಷ್ಟೊಂದ್ ತಲೆಕೆಡಿಸಿಕೊಂಡಿದ್ದೀರಲ್ಲ, ಈಗಿನ್ ಕಾಲದ ಹುಡುಗೀರು ಎಲ್ಲಾದ್ರೂ ಸೈಕಲ್ ಹತ್ತುತ್ತಾರಾ?
ನಾನು ಸಿನಿಮಾ ಶುರುಮಾಡಿದಾಗ, ಅವರಿನ್ನೂ ಚಿತ್ರರಂಗದಲ್ಲಿ 'ಸೈಕಲ್ ಹೊಡೀತಾ ಇದ್ರು'. ಹಾಗಾಗಿ, 'ಹ್ಯಾಂಡಲ್' ಮಾಡಬಹುದು ಅಂದ್ಕೊಂಡಿದ್ದೆ.
-ಅಂಥ 'ಸಣ್ಣ ಹುಡುಗಿ'ರನ್ನ ಹ್ಯಾಂಡಲ್ ಮಾಡೋದು ಕಷ್ಟವೇ. ನಿಮ್ ಸೈಕಲ್‌ಗೆ ಒಂದ್ ಬೇಬಿ ಸೀಟು ಹಾಕಿಸಿದ್ದಿದ್ರೆ ಸರಿಹೋಗುತ್ತಿತ್ತಾ ಅಂತ?
ಏನೋಪ್ಪ, ಕ್ಯಾರಿಯರ್‌ನಲ್ಲಿ ಕೂಡಿಸ್ಕೊಂಡು 'ಹೊರಟೆ, ಈಗ ಸೈಕಲ್ ಸೀಟು ಬಿಟ್ಟಾಕಿ, ಥಿಯೇಟರ್ ಸೀಟುಗಳು ತುಂಬಿದ್ರೆ ಸಾಕು ಅನ್ನಿಸ್ತಿದೆ.
-ಅದ್ಸರಿ, ನಿಮ್ಮ 'ಸೈಕಲ್' ಚಿತ್ರದ ಥೀಮ್ ಏನು?
'ಚಿತ್ರರಂಗದಲ್ಲಿ ಜನ ಯಾವಾಗ್ಲೂ ಇನ್ನೊಬ್ರನ್ನ 'ತುಳಿಯೋಕೇ' ನೋಡ್ತಾ ಇರ್ತಾರೆ' ಅನ್ನೋದು!
ಒಮ್ಮೆ ಭೇಟಿ ಕೊಡಿ
ಕೆಲವೊಂದು ಸಲಹೆಗಳನ್ನು ಎಲ್ಲರೂ ಆಗಾಗ ಹೇಳುತ್ತಲೇ ಇರುತ್ತಾರೆ ಆದರೆ ಅದನ್ನು ಗಂಭೀರವಾಗಿ ತೆಗೆದುಕೊಳ್ಳುವವರು ಕಡಿಮೆ. ಅಂಥ ವಿಷಯಗಳಲ್ಲಿ ಪೆಟ್ರೋಲ್ ಉಳಿಸಿ ಎಂಬುದೂ ಒಂದು. ಬಂಗಾರ ಮತ್ತು ಪೆಟ್ರೋಲ್ ರೇಟುಗಳು ಆಗಾಗ ಏರಿಳಿಯುತ್ತಲೇ ಇರುತ್ತವೆ. ಆದರೆ ಬಂಗಾರ ಪೆಟ್ರೋಲ್‌ನಂತೆ ಅನಿವಾರ್ಯವೇನಲ್ಲ ಬಿಡಿ. ಹಾಗಾಗಿ ಪೆಟ್ರೋಲ್ ಉಳಿಸುವ ಬಗ್ಗೆ ನಿಮಗೆ ವಿಶೇಷ ಆಸಕ್ತಿ ಇದ್ದರೆ ಇಲ್ಲಿ ಕೆಲವು ಟಿಪ್ಸ್‌ಗಳಿವೆ.
- bit.ly/IzBMDa n bit.ly/895vmo n bit.ly/SElRpL n bit.ly/16GzSfF n bit.ly/10rcqSE
ಹರಿ-ಕಥೆ
ಅರುಳು ಮರುಳು ಎಂಬಂಥ 85 ವರ್ಷ ವಯಸ್ಸಿನ ಮುದುಕಿಯೊಬ್ಬಳಿಗೆ ಆ ವಯಸ್ಸಿನಲ್ಲೂ ಮಗು ಬೇಕು ಎಂಬ ಆಸೆಯಾಯ್ತು. ಇಂದಿನ ವೈದ್ಯಕೀಯ ಜಗತ್ತಿನ ಎಲ್ಲ ಆಧುನಿಕ ಸೌಲಭ್ಯಗಳನ್ನೂ ಬಳಸಿಕೊಂಡು ಕೊನೆಗೂ ಆಕೆ ತಾಯಿ ಆಗಿಯೇಬಿಟ್ಟಳು. ಆಕೆಯ ಎಲ್ಲಾ ಸಂಬಂಧಿಕರಿಗೂ ಈ ವಿಷಯ ಕೇಳಿ, ಕುತೂಹಲವಾಯಿತು. ಆಕೆ ಆಸ್ಪತ್ರೆಯಿಂದ ಡಿಸ್‌ಚಾರ್ಜ್ ಆದ ಕೂಡಲೇ, ಮಗುವನ್ನು ನೋಡಲು ಎಲ್ಲರೂ ಆಕೆಯ ಮನೆಗೆ ಬಂದರು. ಎಲ್ಲರದ್ದೂ ಒಂದೇ ಪ್ರಶ್ನೆ 'ಮಗು ಎಲ್ಲಿ?' ಅಜ್ಜಿ ಮಾತ್ರ, ಮಗು ನೋಡಬೇಕು ಎಂದರೆ ಸ್ವಲ್ಪ ಹೊತ್ತು ಕಾಯಬೇಕು ಬನ್ನಿ ಎನ್ನುತ್ತಾ ಎಲ್ಲರಿಗೂ ಕಾಫಿ, ತಿಂಡಿ ಕೊಟ್ಟು ಕೂರಿಸಿದಳು. ಒಂದಷ್ಟು ಹೊತ್ತು ಕಳೆಯಿತು. ಸಂಬಂಧಿಕರೆಲ್ಲಾ ಮತ್ತೆ 'ಮಗು ಎಲ್ಲಿ?' ಎಂದರು. ಅಜ್ಜಿ ಮಾತ್ರ ಇನ್ನೂ ಸ್ವಲ್ಪ ಹೊತ್ತು ಕಾಯಬೇಕು, ಇರಿ ಎನ್ನುತ್ತಾ ಊಟದ ಸರಬರಾಜನ್ನೂ ಮಾಡಿದಳು. ಮತ್ತೆ ಅರ್ಧಗಂಟೆಯಾದರೂ ಮಗುವನ್ನೇ ತೋರಿಸುತ್ತಿಲ್ಲ ಅಜ್ಜಿ. ಎಲ್ಲರಿಗೂ ತಾಳ್ಮೆ ಮೀರುತ್ತಿತ್ತು. ಮೊದಲು ಮಗು ತೋರಿಸು, ಆಮೇಲೆ ಮುಂದಿನ ಮಾತು ಎಂದರು ಎಲ್ಲರೂ. ಅದಕ್ಕೆ ಅಜ್ಜಿ ಹೇಳಿದಳು ಮಗು ನೋಡಬೇಕು ಎಂದರೆ ನೀವೆಲ್ಲಾ ಅದು ಅಳೋವರೆಗೂ ಕಾಯಬೇಕು. ಮಗು ನೋಡೋಕೆ ಅದು ಅಳೋವರೆಗೂ ಯಾಕೆ ಕಾಯಬೇಕು ಎಂಬುದು ಎಲ್ಲರ ಪ್ರಶ್ನೆಯಾಯ್ತು. ಅದಕ್ಕೆ ಅಜ್ಜಿ ಹೇಳಿದಳು 'ಏನು ಮಾಡೋಕಾಗಲ್ಲ ಅದು ಅಳೋವರೆಗೂ ಕಾಯ್ಲೇಬೇಕು, ಯಾಕಂದ್ರೆ ಮಗೂನ ಮನೆಯಲ್ಲಿ ಎಲ್ಲೋ ಬಿಟ್‌ಬಿಟ್ಟಿದೀನಿ, ಹಾಳಾದ್ದು ಎಲ್ಲಿ ಅಂತ ನೆನಪೇ ಆಗ್ತಾ ಇಲ್ಲ'!
ಸ್ಯಾಂಡಲ್‌ವುಡ್
'ನಮ್ ದುನಿಯಾ ನಮ್ ಸ್ಟೈಲ್' ಚಿತ್ರದ ಕೊನೆಯಲ್ಲಿ 'ಎ ಫಿಲ್ಮ್ ಬೈ ಪ್ರೀತಮ್ ಗುಲಾಬಿ' ಎಂದು ತೋರಿಸುವುದು ಯಾಕೆ ಎಂಬುದು ಯಕ್ಷಪ್ರಶ್ನೆ ಏನೂ ಅಲ್ಲ ಬಿಡಿ. ಆದರೂ ಆ ಗುಲಾಬಿ ನಿರ್ಮಾಪಕರ ಕಿವಿಗಾ ಅಂದ್ರೆ ಈ ಚಿತ್ರಕ್ಕೆ ಪ್ರೀತಂ ಗುಬ್ಬಿಯೇ ನಿರ್ಮಾಪಕರು. ಆದರೆ ಚಿತ್ರದ ಫಸ್ಟ್ ಶೋ ನೋಡಿದ ಅಲ್ಪಸಂಖ್ಯಾತ ಪ್ರೇಕ್ಷಕರು ಮಾತ್ರ ಗುಬ್ಬಿ ಟಾಕೀಸಿಗೆ ಬಂದು ಮುಖ ಸಿಂಡರಿಸಿಕೊಂಡಿದ್ದಾರೆ. ಚಂದ್ರ ಸಿನಿಮಾದ ನಿರ್ಮಾಪಕರು 'ನೀವು ಒಂದುವಾರ ಮುಂದಕ್ಕೋದ್ರೆ ಇಬ್ಬರಿಗೂ ಲಾಭ' ಅಂದಿದ್ದಕ್ಕೆ 'ಅಯ್ಯೋ ಅವರ ಸಿನಿಮಾ ಗುರುವಾರ ಬಿಡುಗಡೆಯಾಗುತ್ತೆ. ಅವತ್ತೇ ಅವರ ಬಂಡವಾಳ ಗೊತ್ತಾಗುತ್ತೆ, ನಮ್‌ಗೇನೂ ತೊಂದ್ರೆ ಇಲ್ಲ ಎಂದಿದ್ದರಂತೆ ಪ್ರೀತಂ ಗುಬ್ಬಿ. ಆದರೆ ಈಗ ಫಸ್ಟ್ ಡೇ ಫಸ್ಟ್ ಶೋನಲ್ಲಿ ತ್ರಿವೇಣಿ ಥಿಯೇಟರ್‌ನ ಬಾಲ್ಕನಿನೂ ತುಂಬಲಿಲ್ಲ. ನಮ್ ದುನಿಯಾ ನಮ್ ಸ್ಟೈಲ್ ಎಂಬ ಹೆಸರಿನ ಕಾರಣಕ್ಕೋ ಏನೋ ಸಿನಿಮಾ ನೋಡಲು ಬಂದಿದ್ದವರಲ್ಲಿ 6 ಜನ ಹೀರೋ ಹೀರೋಯಿನ್ ಮತ್ತು ನಿರ್ದೇಶಕರ ಸಂಬಂಧಿಕರು, ಸ್ನೇಹಿತರೇ ಅರ್ಧಕ್ಕಿಂತ ಹೆಚ್ಚು. ಆದರೆ ಅದಕ್ಕಿಂತ ಕಹಿಸುದ್ದಿ ಎಂದರೆ ಬೆಂಗಳೂರಿನ ಚಿತ್ರಮಂದಿರವೊಂದರಲ್ಲಿ ಎರಡೇ ಆಟಕ್ಕೆ ಬೇಸರ ಮೂಡಿ ಗುಬ್ಬಿ ಆಟ ಮುಗಿಸಿರುವುದು. ಪ್ರೀತಂ ಗುಬ್ಬಿ, ಹೆಂಗಿದ್ರೂ ಹಿಂದಿ ಸಿನಿಮಾ ಸ್ಟೈಲ್‌ನಲ್ಲೇ ಸಿನಿಮಾ ಮಾಡೋದು ಅಂತನೋ ಏನೋ 'ನಮ್ ದುನಿಯಾ ನಮ್ ಸ್ಟೈಲ್' ಅನ್ನು ಎರಡೇ ಆಟಕ್ಕೆ ತೆಗೆದು ಹಿಂದಿ ಸಿನಿಮಾ ಹಾಕಲಾಗಿದೆಯಂತೆ. ಇದನ್ನು ಎದ್ದೇಳು ಮಂಜುನಾಥನ ಸ್ಟೈಲಲ್ಲಿ 'ಸೆಲ್ಫ್ ಸೂಸೈಡ್' ಎನ್ನಬಹುದೇ?
ಡಬ್ಕುಡಬಲ್ ತುದಾಂಡಲ್...
-ಕನ್ನಡ ಚಿತ್ರಗಳು 'ಓಡ್ತಾ ಇವೆ' ಅನ್ನೋದಕ್ಕೆ ಪುರಾವೆಗಳು
ಹೋದವಾರ ಆಟೋ, ಈ ವಾರ ಸೈಕಲ್ಲು!
-ಆದರೆ, ಓಡಿದಾಗ ಅಥವಾ ಓಡದೇ ಇದ್ದಾಗ, ಈ ವಾರ ಬಿಡುಗಡೆಯಾದ ನಾಲ್ಕು ಚಿತ್ರಗಳ ಚಿತ್ರತಂಡದಿಂದ ಯಾವ ರೀತಿಯ ರಿಯಾಕ್ಷನ್ ಬರಬಹುದು.
ಸೈಕಲ್
ಗೆದ್ದರೆ - ಅಂದು 'ಸಿಂಪಲ್ಲಾಗೊಂದ್ ಲವ್‌ಸ್ಟೋರಿ', ಇಂದು 'ಸೈಕಲ್ನಾಗೊಂದು ಲವ್‌ಸ್ಟೋರಿ'
ಸೋತರೆ - ಬೇರೆ ಚಿತ್ರಗಳಿಗಿಂತ 'ಹಿಂದೆ ಬಿದ್ದು' ಸಿನಿಮಾ ಸೋತಿದ್ದರೂ 'ನಮ್ಮದು ಸ್ಲೋ ಸೈಕಲ್ ರೇಸ್' ಅಂದ್ಕೊಂಡ್ರೆ ನಾವೇ ಗೆದ್ದಂಗೆ.
ಚಂದ್ರ
ಗೆದ್ದರೆ - ಮಾರ್ನಿಂಗ್ ಶೋ, ಮ್ಯಾಟ್ನಿಯಲ್ಲೂ ಚಂದ್ರನ ಕಾಣೋ ಭಾಗ್ಯ ನನ್ನದಾಗಿದೆ ಅಂತ ಪ್ರೇಕ್ಷಕ ಚಂದ್ರನತ್ತ ಕೈ ಚಾಚುತ್ತಿದ್ದಾನೆ.
ಸೋತರೆ - ಸಿನಿಮಾ ಹೆಸರು ಕೇಳಿ ಚಂದ್ರನ್ನ ನೋಡೋಕೆ ಜನ ಬರೀ ನೈಟ್ ಶೋಗೆ ಮಾತ್ರ ಬರ್ತಾ ಇದ್ರು. ಹಗಲಿನ ಮೂರು ಶೋ ಕಲೆಕ್ಷನ್ ಡಲ್ಲಾಯ್ತು.
ಬಿಡಲಾರೆ ಎಂದೂ ನಿನ್ನ
ಗೆದ್ದರೆ - ಕೊನೆಗೂ ಆ ದೆವ್ವ ನಮ್ ಕೈ ಬಿಡಲಿಲ್ಲ.
ಸೋತರೆ - ಥಿಯೇಟರ್‌ಗೆ ಬಂದಮೇಲೆ ಹೆದರಿಸೋಣ ಅಂತಿದ್ವಿ, ಆದ್ರೆ ಜನ ಥಿಯೇಟರ್‌ಗೆ ಬರೋಕೇ ಹೆದರಿಕೊಂಡ್‌ಬಿಟ್ರು. ಆ ಲೆಕ್ಕದಲ್ಲಾದ್ರೂ ನಮ್ಮದು ಒಳ್ಳೆಯ 'ಹಾರರ್ ಸಿನಿಮಾ' ಅಂತ ಪ್ರೂವ್ ಆಯ್ತಲ್ಲ ಸಾಕು ಬಿಡಿ.
ನಮ್ ದುನಿಯಾ ನಮ್ ಸ್ಟೈಲ್
ಸೋತರೆ - ಇದು ಅವ್ರ ದುನಿಯಾ, ಅವ್ರ ಸ್ಟೈಲ್ ವಿಷ್ಯ ಅಂತೆ, ಹೋಗ್ಲಿ ಬಿಡಿ, ಇನ್ನೊಬ್ರ ಪರ್ಸನಲ್ ವಿಷ್ಯ ನಮ್‌ಗ್ಯಾಕೆ ಅಂತ ಜನ ಥಿಯೇಟರ್ ಕಡೆ ತಲೆ ಹಾಕ್ಲಿಲ್ಲ.
ಗೆದ್ದರೆ - ಸದ್ಯಕ್ಕೆ ಯಾಕೋ ಆ ಲಕ್ಷಣಗಳೇ ಕಾಣ್ತಾ ಇಲ್ಲ ಬಿಡಿ.
-ಹರಿ
harikannadaprabha@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

