ಅಂಕಣಗಳು

ಆ ರಕ್ತದ ಗುರುತುಗಳನ್ನು ಅಳಿಸಿದ ರವಾಂಡಾ ಮೇಲೀಗ ಸ್ವಚ್ಛ ಹಸಿರು!

ರವಾಂಡಾದ ಕಾಡಿನ ವೈಭವ, ಗೊರಿಲ್ಲಾದಂಥ ವನ್ಯಜೀವಿಗಳನ್ನು ಆಕರ್ಷಣೆಯನ್ನಾಗಿಸಿ ...

Published On :

ರವಾಂಡಾದ ಕಾಡಿನ ವೈಭವ, ಗೊರಿಲ್ಲಾದಂಥ ವನ್ಯಜೀವಿಗಳನ್ನು ಆಕರ್ಷಣೆಯನ್ನಾಗಿಸಿ ಜಗತ್ತಿನ ಎದುರು ಮಾರ್ಕೆಟ್ ಮಾಡಿಕೊಳ್ಳುತ್ತಿರುವ ರೀತಿ, ತನ್ನ ಹಸಿರು ಸಂಪತ್ತನ್ನು ಬಂಡವಾಳವನ್ನಾಗಿಸಿಕೊಂಡು ಪ್ರವಾಸೋದ್ಯಮದಲ್ಲಿ ಎದ್ದು ನಿಲ್ಲುವುದಕ್ಕೆ ಆ ದೇಶ ತೋರಿಸುತ್ತಿರುವ ಉಮೇದು ಇವೆಲ್ಲ ನನ್ನಲ್ಲಿ ಪುಳಕವೊಂದನ್ನು ಹುಟ್ಟುಹಾಕಿವೆ. ಅದನ್ನೇ 'ರವಾಂಡಾ ಡೈರಿ'ಯಲ್ಲಿ ಬಿಚ್ಚಿಡುತ್ತಿದ್ದಂತೆ ಆ ಪುಳಕ ಓದುಗರಲ್ಲೂ ಹರಡಿಕೊಳ್ಳುತ್ತಿದೆ ಎಂಬುದಕ್ಕೆ ನನ್ನ ಮೇಲ್‌ಬಾಕ್ಸ್‌ನಲ್ಲಿ ಅಚ್ಚರಿಯ ಮುಖಭಾವ ಹೊತ್ತುಕೊಂಡು ಬಂದಿರುವ ಪ್ರತಿಕ್ರಿಯೆಗಳು ಸಾಕ್ಷಿ ಹೇಳುತ್ತಿವೆ.
ಪರದೇಶಕ್ಕೆ ಭೇಟಿಗೆ ಹೋಗುವ ಯಾರೇ ಆದರೂ ಮೊದಲಿಗೆ ತಾನು ಹೋಗುತ್ತಿರುವ ದೇಶದ ಬಗ್ಗೆ ಮಾಹಿತಿಗಳನ್ನು ಕಲೆಹಾಕುತ್ತಾರೆ. ರವಾಂಡಾಕ್ಕೆ ಹೊರಡುವ ಮೊದಲು ನಾನೂ ಆ ದೇಶದ ಐತಿಹ್ಯ, ಸಂಸ್ಕೃತಿ, ವಿಶೇಷಗಳ ಬಗ್ಗೆ ಸಿಗುವ ಮಾಹಿತಿ- ಲೇಖನಗಳನ್ನು ಓದಿಕೊಂಡಿದ್ದೆ. ರವಾಂಡಾದ ಬಗ್ಗೆ ಮಾಹಿತಿ ಕಲೆಹಾಕುವುದಕ್ಕೆ ಮುಂದಾಗುವ ಎಲ್ಲರೆದುರೂ ಈ ದೇಶದ ಭಯಾನಕ ಅಧ್ಯಾಯವೊಂದು ತೆರೆದುಕೊಳ್ಳದೆ ಹೋಗುವುದಿಲ್ಲ. ಅದೆಂದರೆ 1994ರಲ್ಲಿ ರವಾಂಡಾದಲ್ಲಾದ ಜನಾಂಗೀಯ ಸಂಘರ್ಷ. ಅದು ಅಂತಿಂಥ ರಕ್ತಚರಿತೆಯಲ್ಲ. ಸರ್ಕಾರಿ ದಾಖಲೆಗಳನ್ನೆ ನಂಬುವುದಾದರೂ ಐದು ಲಕ್ಷ ಮಂದಿಯನ್ನು ಅತ್ಯಂತ ಹಿಂಸಾತ್ಮಕವಾಗಿ ಆಹುತಿ ತೆಗೆದುಕೊಂಡ ಸಮರವದು. ಅಂತರ್ಜಾಲ ಮತ್ತು ಲೇಖನಗಳಲ್ಲಿ ಓದಿದ ಸಂಘರ್ಷದ ಕತೆಗಳನ್ನು ಕಣ್ಮುಂದೆ ತಂದುಕೊಂಡರೆ ನಾನೀಗ ಅದೇ ದೇಶದ ಹಸಿರು ಹೊದ್ದ ಕಾಡುಗಳಲ್ಲಿ ನಡೆಯುತ್ತಿರುವುದು ಹೌದಾ ಎಂಬ ಅನುಮಾನ ಕಾಡುತ್ತದೆ! ಜತೆಗೆ, ಗತದ ನೆತ್ತರ ಕಲೆಗಳನ್ನು ಅಳಿಸಿ ಜಾಗತಿಕ ಭೂಪಟದಲ್ಲಿ ಹೊಸ ಚಹರೆಯನ್ನು ದಾಖಲಿಸುವ ನಿಟ್ಟಿನಲ್ಲಿ ಬೆಳೆಯುತ್ತಿರುವ ರವಾಂಡಾದ ಬಗ್ಗೆ ಅಭಿಮಾನವೂ ಉಕ್ಕುತ್ತದೆ.  
ರವಾಂಡಾದ ಹುಟು ಮತ್ತು ತುಟ್ಸಿ ಸಮುದಾಯಗಳ ನಡುವೆ ನಡೆದ ಶಸ್ತ್ರ ಸಂಘರ್ಷವದು. ತುಟ್ಸಿಗಳು ನೂರು ವರ್ಷಗಳ ಕಾಲ ಅಧಿಕಾರದಲ್ಲಿದ್ದವರು. ಆದರೆ 1960ರ ಬಂಡಾಯದಲ್ಲಿ ಅಧಿಕಾರಸೂತ್ರ ಹುಟು ಜನಾಂಗದವರ ಪಾಲಾಯಿತು. 1990ರಲ್ಲಿ ತುಟ್ಸಿ ನಿರಾಶ್ರಿತರು ಸೇರಿ ರಚಿಸಿಕೊಂಡ ಸೇನೆ ರವಾಂಡಾದ ಉತ್ತರ ಭಾಗದ ಮೇಲೆ ದಾಳಿಗೆ ಯತ್ನಿಸಿತು. ಅಲ್ಲಿಂದಲೇ ತುಟ್ಸಿ ಮತ್ತು ಹುಟುಗಳು ಎದುರುಬದುರಾಗಿ ಕತ್ತಿಮಸೆಯತೊಡಗಿದರು. ಸಾಮಾನ್ಯರೂ ಶಸ್ತ್ರ ಕೈಗೆತ್ತಿಕೊಂಡು ನೋಡನೋಡುತ್ತಲೆ ಬೀದಿ ಬೀದಿಗಳಲ್ಲಿ ಹತ್ಯಾಕಾಂಡವೊಂದು ತೆರೆದುಕೊಂಡಿತು. 1994ರ ಏಪ್ರಿಲ್6ರಿಂದ ನೂರುದಿನಗಳ ಕಾಲ ನಡೆದ ಹತ್ಯಾಕಾಂಡದಲ್ಲಿ ಪ್ರಮುಖವಾಗಿ ತುಟ್ಸಿಗಳು ಹಾಗೂ ಶಾಂತಿ ಪ್ರತಿಪಾದಿಸಿದ್ದ ಹುಟುಗಳ ಒಂದು ವರ್ಗ ಸಮಾಧಿಯಾಗಿ ಹೋಯಿತು.
ಆ ಕಾಲಘಟ್ಟದ ತಲ್ಲಣಗಳನ್ನು ಎದೆಗಿಳಿಸಿಕೊಳ್ಳಬೇಕೆಂದರೆ ನೀವು 'ಹೊಟೇಲ್ ರವಾಂಡಾ' ಎಂಬ ಹಾಲಿವುಡ್ ಚಿತ್ರವನ್ನು ವೀಕ್ಷಿಸಬೇಕು. ಕಿಗಾಲಿಯ ಹೊಟೇಲ್ ಮ್ಯಾನೇಜರ್ ಒಬ್ಬ, ರಕ್ತಪಾತಕ್ಕೆ ಇಳಿದಿದ್ದ ಬಂಡುಕೋರರಿಂದ ತನ್ನ ಕುಟುಂಬವನ್ನು ಮತ್ತು ತನ್ನ ಹೊಟೇಲ್‌ನಲ್ಲಿದ್ದ ಸಾವಿರದಿನ್ನೂರು ಮಂದಿಯನ್ನು ಕಾಪಾಡಿಕೊಳ್ಳುವುದಕ್ಕೆ ಒದ್ದಾಡುವ ಆರ್ದ್ರ ಕತೆ.
ಈ ಸಂಘರ್ಷದಲ್ಲಿ ಬದುಕುಳಿದ ಮಹಿಳೆಯೊಬ್ಬಳು ಗಾರ್ಡಿಯನ್ ಪತ್ರಿಕೆಗೆ ಬರೆದಿದ್ದ ಲೇಖನವೊಂದನ್ನು ಇಲ್ಲಿ ಸಂಗ್ರಹಿಸಿ ನೀಡುತ್ತಿದ್ದೇನೆ. 'ರವಾಂಡಾ ಡೈರಿ'ಯಲ್ಲಿ ಈ ದೇಶದ ಹಸಿರು ಮತ್ತು ಸಿರಿವಂತಿಕೆಯ ಮುಖವನ್ನು ಪರಿಚಯಿಸುತ್ತ ಬಂದಿದ್ದೇನೆ. ಇಂತಿಪ್ಪ ದೇಶದ ಒಡಲಲ್ಲಿ ಅಡಗಿರುವ ಗತದ ನೆತ್ತರಿನ ಕತೆಯೂ ಓದುಗರಿಗೆ ತಿಳಿದಿರಲಿ ಎಂಬ ಆಶಯ.
ಅದು 1994ರ ಸಮಯ. ರವಾಂಡಾದ ಜನರ ನಡುವಿದ್ದ ಕೋಮು ದ್ವೇಷ ಹತ್ಯಾಕಾಂಡದ ರೂಪ ತಾಳಿತ್ತು. ಆ ಘೋರ ಸಮಯದಲ್ಲೇ 'ಇಲ್ಲುಮಿನಿ ಗನೇಮರಿಯಾಳ' ಮದುವೆಯಾಗಿ ಕೇವಲ ಒಂದು ತಿಂಗಳಾಗಿತ್ತು. ಮದುವೆಗೆ ಬಂದು ಹಾರೈಸಿದವರೇ ತನ್ನ ಗಂಡನನ್ನು ಎಳೆದುಕೊಂಡು ಹೋಗಿ ಕತ್ತರಿಸಿಹಾಕಿದ್ದನ್ನು ಆಕೆ ನೋಡಿದ್ದಳು. ಈಗ ಆಕೆಗೆ 44 ವರ್ಷ ವಯಸ್ಸು. ತನ್ನ ಸ್ಮೃತಿ ಪಟಲದಲ್ಲಿ ಹಚ್ಚೆ ಹಾಕಿದಂತೆ ಶಾಶ್ವತವಾಗಿ ಉಳಿದಿರುವ ಘೋರ ನೆನಪುಗಳನ್ನೆಲ್ಲ 'ಮಿರಾಕಲ್ ಇನ್ ಕಿಗಾಲೆ-ದಿ ರವಾಂಡಾನ್ ಜೀನೋಸೈಡ್‌' ಎನ್ನುವ ಪುಸ್ತಕದಲ್ಲಿದಾಖಲಿಸಿದ್ದಾಳೆ. ಈ ಬಗ್ಗೆ ಹೆನ್ರಿ ಗ್ರೀನ್ ಎನ್ನುವ ಪತ್ರಕರ್ತನೊಂದಿಗೆ ಮಾತನಾಡುತ್ತಾ ಆಕೆ...
'ನಾನು ನೆಮ್ಮದಿಯಿಂದ ಇದ್ದೇನೆ, ಆದರೆ ಅದರರ್ಥ ಸಂತೋಷವಾಗಿದ್ದೇನೆ ಎಂದಲ್ಲ. ಹಿಂದಾದ ಘಟನೆಗಳನ್ನೆಲ್ಲ ನೆನಪಿಸಿಕೊಳ್ಳದೇ ಇರುವುದಕ್ಕೆ ಸಾಧ್ಯವಿಲ್ಲ, ಏಕೆಂದರೆ ಅಂದು ನಡೆದ ಘಟನೆಯೇ ಇಂದು ನನ್ನನ್ನು ಇಲ್ಲಿಗೆ ಕರೆತಂದಿದೆ. ಆ ಹತ್ಯಾಕಾಂಡ ನಡೆಯದಿದ್ದರೆ, ನಾನು ನನ್ನ ಮನೆಯಲ್ಲೇ ಇರುತ್ತಿದ್ದೆ, ರವಾಂಡಾದಲ್ಲಿ.
1998ರಲ್ಲಿ ನಾನು ರವಾಡಾಂದಿಂದ ಇಂಗ್ಲೆಂಡಿಗೆ ಬಂದೆ. ಒಂದು ವರ್ಷದಲ್ಲೇ ಎಲ್ಲವನ್ನೂ ಮರೆತು ಬದುಕುತ್ತೇನೆ ಎನ್ನುವ ನಂಬಿಕೆಯಿತ್ತು. ಆದರೂ ನಾನು ಏಕಾಂಗಿಯಾಗಿದ್ದೆ, ಹೆದರಿದ್ದೆ, ಮಾನಸಿಕವಾಗಿ ಕುಗ್ಗಿಹೋಗಿದ್ದೆ.  
ನನಗೆ ಹೆಚ್‌ಐವಿ ಪಾಸಿಟಿವ್ ಆಗಿರಬಹುದೆಂಬ ಹೆದರಿಕೆಯಿತ್ತು. ಆದರೆ ಆ ವಿಷಯವನ್ನು ಯಾರ ಮುಂದೆಯೂ ಹೇಳಿರಲಿಲ್ಲ. ರವಾಂಡಾದಲ್ಲಿದ್ದಾಗ ನನ್ನ ತಂಗಿ ಮತ್ತು ಅಮ್ಮನಿಗೂ ಇದರ ಬಗ್ಗೆ ಬಾಯ್ಬಿಟ್ಟಿರಲಿಲ್ಲ. ಗೊತ್ತಾದರೂ ಅವರಿಂದ ಏನು ಮಾಡಲು ಸಾಧ್ಯವಿತ್ತು? ಅಲ್ಲದೆ, ಆ ಸಮಯದಲ್ಲಿ ರವಾಂಡಾದಲ್ಲಿ ಔಷಧಿಗಳು ಲಭ್ಯವಿರಲಿಲ್ಲ. ಇದ್ದರೂ ಕೂಡ ಅದಕ್ಕೆ ಪೂರಕವಾಗಬಲ್ಲ ಆಹಾರ ಸಿಗುತ್ತಿರಲಿಲ್ಲ.
ಇಂಗ್ಲೆಂಡಿಗೆ ಬಂದಾಗ ಹೊಸ ಜಗತ್ತೇ ಕಣ್ಣೆದುರಿಗೆ ಧೊಪ್ಪನೆ ಬಂದು ನಿಂತಿತು. ಎಲ್ಲರೂ ನನ್ನ ಬಗ್ಗೆ ಕಾಳಜಿವಹಿಸತೊಡಗಿದರು. ನಾನು ಹೆಚ್‌ಐವಿ ಪಾಸಿಟಿವ್ ಅಲ್ಲವೆಂದು ಗೊತ್ತಾಯಿತು. ಅಲ್ಲಿ ನನಗೊಬ್ಬ ಉತ್ತಮ ಚಿಕಿತ್ಸಕ ಸಿಕ್ಕ. ಅದಕ್ಕಿಂತ ಮೊದಲು ಯಾವುದೇ ಚಿಕಿತ್ಸೆಗೂ ನಾನು ಸರಿಯಾಗಿ ಸ್ಪಂದಿಸಿರಲಿಲ್ಲ. ಆತ ಬಂದ ನಂತರ ಎಲ್ಲವೂ ಬದಲಾಯಿತು. ನನಗೆ ಧೈರ್ಯ ತುಂಬಿದ. 'ನನ್ನಲ್ಲಿ ಜೀವವಿಲ್ಲ ಅನಿಸುತ್ತಿದೆ' ಎಂದು ನಾನು ನಿಟ್ಟುಸಿರಿಟ್ಟಾಗಲೆಲ್ಲ, ಆತ ನನ್ನ ಕೈ ಹಿಡಿದು ಹೇಳುತ್ತಿದ್ದ: 'ಇಲ್ಲುಮಿನಿ, ನೀನು ಜೀವಂತವಾಗಿದ್ದೀಯ. ಮುಂದೊಂದು ದಿನ ಅದು ನಿನ್ನ ಅರಿವಿಗೆ ಬರುತ್ತದೆ'.
ಬಹುತೇಕ ಬಾರಿ ನನಗೆ ಯಾರೊಂದಿಗೂ ಮಾತನಾಡುವ ಮನಸ್ಸಿರುತ್ತಿರಲಿಲ್ಲ. ಮನಸ್ಸಿಗೆ ತೋಚಿದ್ದನ್ನೆಲ್ಲ ಹಾಳೆಯೊಂದರಲ್ಲಿ ಬರೆಯುತ್ತಾ ಕುಳಿತುಬಿಡುತ್ತಿದ್ದೆ. ಇದನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದ ಆತ, 'ತಲೆಯಲ್ಲಿ ತುಂಬಾ ವಿಚಾರಗಳನ್ನು ತಂಬಿಕೊಂಡಿದೀಯ, ಅವನ್ನೆಲ್ಲ ಮೊದಲು ಹೊರಗೋಡಿಸು' ಎಂದು ಸಲಹೆ ನೀಡಿದ. ಹಾಗಾಗೆ ನಾನು ನನ್ನ ಹೊಸ ಮನೆಗೆ ಹಿಂದಿರುಗಿದೆ. ಬರೆದೆ. ಅತ್ತೆ.
ಪುಸ್ತಕವನ್ನು ಹೊರತರುವ ಮುನ್ನ ಏನು ಬರೆಯಬೇಕೆಂಬುದರ ಸ್ಪಷ್ಟ ಚಿತ್ರಣ ನನ್ನೆದೆಯಲ್ಲಿ ರೂಪುಗೊಂಡಿತ್ತು. ರವಾಂಡಾದ ಬಗೆಗಿನ ಬಹುತೇಕ ಪುಸ್ತಕಗಳು ಚಾಕು, ಕತ್ತಿ ಅಥವಾ ತಲೆ ಕತ್ತರಿಸುವ ಜನರ ಬಗ್ಗೆಯೇ ಇರುತ್ತವೆ. ಬರೆದವರು ರವಾಂಡಾದ ನಿಜ ಚಿತ್ರಣವನ್ನೇ ಅಕ್ಷರರೂಪಕ್ಕಳಿಸುತ್ತಾರಾದರೂ, ನನಗೆ ಹಾಗೆ ಮಾಡಲು ಇಷ್ಟವಿರಲಿಲ್ಲ. ನನ್ನ ಮನಸ್ಸಿನಲ್ಲಿರುವ ರವಾಂಡಾದ ಚಿತ್ರಗಳೇ ನನ್ನ ಮಗ ರೋಜರ್‌ನ ತಲೆಯಲ್ಲಿ ಜಾಗ ಪಡೆಯುವುದು ನನಗಿಷ್ಟವಿರಲಿಲ್ಲ.
2007ರಲ್ಲಿ ನನ್ನ ಪುಸ್ತಕ ಹೊರಬಂದಾಗ ನನಗೆ ಅಷ್ಟುದಿನದಿಂದ ಹೊತ್ತ ಭಾರವನ್ನೆಲ್ಲ ಹಡೆದು ಹಗುರಾದಂಥ ಭಾವ! ಪುಸ್ತಕದ ಬಿಡುಗಡೆಯಾಗುತ್ತಲೇ ನನಗೆ ಇನ್ನೊಂದು ಮಗುವನ್ನು ಹೆತ್ತಂತೆ ಆಯಿತು. ನನ್ನನ್ನು ಅಲ್ಲಿಯವರೆಗೂ ಕಾಡುತ್ತಿದ್ದ ವಿಷಯಗಳೆಲ್ಲ ಅದಾಗಲೇ ದೂರವಾಗಿದ್ದವು.
ನಾನು ನಾರ್ವಿಚ್‌ನಲ್ಲಿ ನೆಲೆಸಿ ಅದಾಗಲೇ 15 ವರ್ಷಗಳಾದವು. ಇನ್ನೊಂದು ಮದುವೆ ಮಾಡಿಕೊಂಡು ಎಲ್ಲವನ್ನೂ ಮರೆತು ಹೊಸ ಜೀವನ ಆರಂಭಿಸಬೇಕು ಎನ್ನುವ ಆಸೆ ಇತ್ತಾದರೂ ಅದು ಸಾಧ್ಯವಾಗಲಿಲ್ಲ. ಈಗ ನಾರ್ವಿಚ್ ಬದಲಾಗಿದೆ. ಇಲ್ಲಿ ಬಹಳಷ್ಟು ಕಾಂಗೋಲಿಯನ್‌ಗಳಿದ್ದಾರೆ. ಆದರೆ ಅವರಲ್ಲಿ ಬಹುತೇಕರು ರವಾಂಡಾದವರು ಎಂಬುದು ನನಗೆ ಗೊತ್ತು. ಅವರೊಂದಿಗೆ ನಾನು ಸ್ನೇಹ ಸಂಪಾದಿಸಲು ಬಯಸುತ್ತೇನಾದರೂ, ನಾನು ರವಾಂಡಾ ಸರ್ಕಾರಕ್ಕಾಗಿ ಕೆಲಸ ಮಾಡುವ ಏಜೆಂಟ್ ಎಂಬುದು ಅವರ ಅನುಮಾನ ಮತ್ತು ಭಯ. ಅದಕ್ಕೇ ನನ್ನಿಂದ ದೂರವೇ ಇರುತ್ತಾರೆ.ಹಾಗಾಗೇ ನನ್ನ ಬಹುತೇಕ ಸ್ನೇಹಿತರು ಬ್ರಿಟೀಷರೇ.
ನಾನಿಲ್ಲಿ ಬಂದಿರುವುದು ತಪ್ಪುಮಾಡಿದವರನ್ನು ಹುಡುಕುವುದಕ್ಕಲ್ಲ. ನಾನು ನನಗಾಗಿ, ನನ್ನ ಮಗನಿಗಾಗಿ ಬಂದಿದ್ದೇನೆ. ರವಾಂಡಾ ಎಲ್ಲರೂ ಅಂದುಕೊಳ್ಳುವಷ್ಟು ಕೆಟ್ಟ ದೇಶವಲ್ಲ ಎನ್ನುವುದನ್ನು ಹೇಳುವುದಕ್ಕೆ ನಾನಿಲ್ಲಿದ್ದೇನೆ. ನಾನು ಕ್ರಿಶ್ಚಿಯನ್ ಕುಂಟುಂಬದವಳು. ಧಾರ್ಮಿಕ ಸ್ವಭಾವದವಳಲ್ಲವಾದರೂ, ನನಗೆ ಪ್ರೀತಿಯಲ್ಲಿ ಮತ್ತು ಭಗವಂತನಲ್ಲಿ ನಂಬಿಕೆಯಿದೆ. ಆದರೂ ನಾನು ಚರ್ಚಗೆ ಹೋಗುವುದಿಲ್ಲ. ನನಗಾದ ಅನುಭವ ಅದಕ್ಕೆ ಕಾರಣ: ನನ್ನ ಚಿಕ್ಕಪ್ಪನನ್ನು ಚರ್ಚ್‌ನಲ್ಲೇ ಕೊಲ್ಲಲಾಯಿತು. ಸಾವಿರಾರು ಜನರನ್ನು ರವಾಂಡಾದ ಚರ್ಚ್‌ಗಳಲ್ಲಿ ಕತ್ತರಿಸಿಹಾಕಲಾಯಿತು. ಬದುಕುಳಿಯುವುದಕ್ಕಾಗಿ ನಾನು ಯಾವ ಪ್ರಯತ್ನವನ್ನೂ ಮಾಡಲಿಲ್ಲ. ಅದೆಲ್ಲ ಒಂದು ಮಾಯೆಯಂತೆ ನಡೆದುಹೋಯಿತು. ನನ್ನ ತಂಗಿ ಕಾಂಗೋದಲ್ಲಿ ಕಷ್ಟಪಟ್ಟು ಓದಿದಳು, ಟೀಚರ್ ಕೆಲಸ ಮಾಡುವುದಕ್ಕಾಗಿ ರವಾಂಡಾಗೆ ಬಂದಳು. ವಿದ್ಯಾರ್ಥಿಗಳಿಂದಲೇ ಆಕೆಯ ಕೊಲೆಯಾಯಿತು.
ನನ್ನ ಮಗನಿಗೀಗ 17 ವರ್ಷ. ಡಾಕ್ಯುಮೆಂಟರಿ ಫಿಲ್ಮೊಂದನ್ನು ಚಿತ್ರೀಕರಿಸುವಾಗ, ಆತನೆದುರು ರವಾಂಡಾದ ಕೊಲೆಗಡುಕನೊಬ್ಬನನ್ನು ತಂದು ನಿಲ್ಲಿಸಿ, 'ಆತನನ್ನು ಕ್ಷಮಿಸಿಬಿಡು' ಎಂದು ಕೇಳಿದರು. ಹಾಗೆ ನೋಡಿದರೆ ನನ್ನ ಮಗ ತನ್ನ ತಂದೆಯನ್ನು ನೋಡಿಯೇ ಇಲ್ಲ. ಆದರೆ ಒಂದು ವಿಷಯ ಎಲ್ಲರಿಗೂ ಅರ್ಥವಾಗಬೇಕು. ಕ್ಷಮಾಪಣೆಯೆನ್ನುವುದು ಕಲಿಸಿಕೊಡುವಂಥದ್ದಲ್ಲ, ಅದು ಒಳಗಿನಿಂದ ಬರಬೇಕು.
ಇದಕ್ಕೊಂದು ಉದಾಹರಣೆ ಕೊಡುತ್ತೇನೆ; ನನ್ನ ಪುಸ್ತಕ ಪ್ರಕಟವಾದ ನಂತರ, ನನ್ನಂತೆಯೇ ವಿಧವೆಯಾಗಿ ಈ ದೇಶದ ಆಶ್ರಯ ಪಡೆದ ಹೆಣ್ಣುಮಗಳೊಬ್ಬಳು, 'ಆ ಕೊಲೆಗಡುಕರನ್ನು ಕ್ಷಮಿಸಲು ನಿನಗೆಷ್ಟು ಧೈರ್ಯ?' ಎಂದು ನನ್ನೊಂದಿಗೆ ವಾದಕ್ಕಿಳಿದಳು. ತನ್ನ ಪತಿಯನ್ನು ಕೊಂದವರನ್ನು ಹಿಂಸಿಸುವುದಕ್ಕಾಗಿ ಆಕೆ ಪ್ರತಿದಿನವೂ ಜೈಲಿಗೆ ಹೋಗುತ್ತಿದ್ದಳಂತೆ! ಆದರೆ ನಾನು ಹಾಗೆ ಮಾಡಲಿಲ್ಲ. ಹಿಂದಾದದ್ದನ್ನೆಲ್ಲ ನೆನಪಿಸಿಕೊಳ್ಳುತ್ತಾ ಬದುಕಿದ್ದಿದ್ದರೆ, ನನ್ನ ಮಗನ ಗತಿಯೇನಾಗುತ್ತಿತ್ತು? ನನ್ನ ಗತಿಯೇನಾಗುತ್ತಿತ್ತು?
ನನಗೆ ಮಕ್ಕಳೆಂದರೆ ತುಂಬಾ ಪ್ರೀತಿ. ಹತ್ತಾರು ಮಕ್ಕಳನ್ನು ಹೆತ್ತು ಅವರೊಂದಿಗೆ ಆಟವಾಡುತ್ತಾ ಕುಳಿತುಕೊಳ್ಳಬೇಕೆಂಬ ಕನಸು ಕಾಣುತ್ತಿದ್ದೆ, ಆದರೆ ಅದು ಸಾಧ್ಯವಾಗಲಿಲ್ಲ. ಅದರೇನಂತೆ, ನನ್ನ ಮಗನಿದ್ದಾನಲ್ಲ? ಅವನು ಮದುವೆಯಾಗಿ ಸಾಕಷ್ಟು ಮೊಮ್ಮಕ್ಕಳನ್ನು ಕೊಡುತ್ತಾನೆ ಎನ್ನುವ ವಿಶ್ವಾಸವಿದೆ!  ನನ್ನ ಮಗ ಇಲ್ಲಿ ಸುಶಿಕ್ಷಿತನಾಗಿದ್ದಾನೆ. ರವಾಂಡಾದಲ್ಲೂ ಶಿಕ್ಷಣ ಕ್ರಾಂತಿಯಾಗಿ, ಮಕ್ಕಳಿಗೆ ಉಚಿತ ಶಿಕ್ಷಣ ದೊರೆಯುತ್ತಿದೆ ಎಂದು ಕೇಳಿ ಸಂತೋಷವಾಗಿದೆ. ಎಂದಾದರೊಂದು ದಿನ ರವಾಂಡಾಕ್ಕೆ ಭೇಟಿ ಕೊಡಬೇಕು ಎನ್ನುವ ಆಸೆ ನನಗಿದೆ, ಆದರೆ ಅಲ್ಲಿಯೇ ನೆಲಸಬೇಕೆಂದಲ್ಲ. ಈಗ ಆ ದೇಶ ಬದಲಾಗಿದೆ. ಆದರೆ 1994ರಲ್ಲಿ ಅಲ್ಲಿ ನಡೆದ ಘಟನೆಗಳೆಲ್ಲವೂ ನನ್ನಂಥವರ ಹೃದಯವನ್ನು ಛಿದ್ರಮಾಡಿಬಿಟ್ಟಿವೆ. ಇಲ್ಲಾದರೆ ಪ್ರತಿ ರಾತ್ರಿ ಕಿಟಕಿಗಳನ್ನು ತೆರೆದಿಟ್ಟು ನಾನು ಮಲಗಬಲ್ಲೆ. ಅಲ್ಲಿ ಹೋದರೆ ನೆನಪುಗಳೆಲ್ಲ ದುಃಸ್ವಪ್ನವಾಗಿ ಕಾಡತೊಡಗುತ್ತವೆ.' ಹೀಗೆಂದು ಆಕೆ ಕತೆ ಮುಗಿಸುತ್ತಾಳೆ.   
***
ರವಾಂಡಾದ ಮೈ ಯಾವತ್ತೂ ಹಸಿರಾಗಿರಲಿ. ಈ ಸೊಬಗಿನ ರಾಷ್ಟ್ರಕ್ಕೆ ಇನ್ನೆಂದೂ ಆಗದಿರಲಿ ರಕ್ತಸಿಂಚನ. ಹೊಸ ಮನ್ವಂತರದತ್ತ ಮುಖ ಮಾಡಿರುವ ಇವರಿಗೆ ಒಳಿತಾಗಲಿ. ರವಾಂಡಾದ ಕಾಡುಮೇಡು- ಗ್ರಾಮವೈಭವಗಳನ್ನು ಕಣ್ತುಂಬಿಸಿಕೊಳ್ಳುತ್ತ ಎದೆಯಲ್ಲಿ ಅರಳಿದ ಹಾರೈಕೆ ಇದು.

- ವಿಶ್ವೇಶ್ವರ ಭಟ್
vbhat@me.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.